ಇದೇ ಮೊದಲ ಬಾರಿಗೆ ತಾಲಿಬಾನ್ ಜೊತೆಗೆ ಭಾರತ ಅಧಿಕೃತ ಸಭೆಯನ್ನು ನಡೆಸಿದೆ. ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್ ಅವರು ಭೇಟಿಯಾಗಿದ್ದಾರೆ.
ಸಭೆಯು ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಮತ್ತು ದೋಹಾ ಮೂಲದ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್ ನಡುವೆ ನಡೆಸಲಾಯಿತು ಎಂದು ವರದಿಯಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪತ್ರಿಕಾ ಪ್ರಕಟಣೆಯಲ್ಲಿ ಈ ಸಭೆಯನ್ನು ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನಡೆಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಅಫ್ಘಾನ್ ತಾಲಿಬಾನ್ ಗೆಲುವು: ಒಂದು ಎಡಪಂಥೀಯ ನೋಟ
ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್, ಪಶ್ತೂನ್ ಜನಾಂಗದವರಾಗಿದ್ದು, ಶೀತಲ ಸಮರದ ಸಂದರ್ಭದಲ್ಲಿ ಅಫ್ಘಾನ್ ಸೈನ್ಯದ ಅಧಿಕಾರಿಯಾಗಿ ತರಬೇತಿ ಪಡೆದವರಾಗಿದ್ದಾರೆ. ಅವರು ಭಾರತದೊಂದಿಗೆ ಸಾಮಾನ್ಯ ವಾಣಿಜ್ಯ, ರಾಜತಾಂತ್ರಿಕ ಮತ್ತು ರಾಜಕೀಯ ಸಂಬಂಧವನ್ನು ಕೋರಿ ಮೂರು ದಿನಗಳ ಹಿಂದೆ ಒಂದು ಹೇಳಿಕೆಯನ್ನು ನೀಡಿದ್ದರು.
ಆದರೆ ಆರಂಭದಲ್ಲಿ ಮೌನವಾಗಿದ್ದ ಭಾರತ, ಅಮೆರಿಕಾವು ಕಾಬೂಲ್‌ನಿಂದ ತನ್ನ ಸೈನ್ಯವನ್ನು ಸ್ಥಳಾಂತರ ಮಾಡಿದ ಗಂಟೆಗಳ ನಂತರ ಸಭೆ ಈ ನಡೆಸಿದೆ. ಭಾರತವು “ಎಲ್ಲಾ ಪಾಲುದಾರರೊಂದಿಗೆ” ಸಂಪರ್ಕವನ್ನು ಉಳಿಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿತ್ತಾದರೂ, ಸಭೆ ನಡೆಸಿದ್ದೇವೆ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು.
ಎರಡು ದಶಕಗಳ ಯುದ್ಧದ ಬಳಿಕ ಅಮೆರಿಕಾವು ತನ್ನ ಸೈನ್ಯವನ್ನು ಹಿಂಪಡೆಯಲು ಶುರುಮಾಡಿದ ಎರಡು ವಾರಗಳ ನಂತರ, ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದೆ. ಅದು ದೇಶದ ಎಲ್ಲಾ ಪ್ರಮುಖ ನಗರಗಳನ್ನು ಕೆಲವೇ ದಿನಗಳಲ್ಲಿ ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್!


