Homeಅಂತರಾಷ್ಟ್ರೀಯಅಫ್ಘಾನ್ ತಾಲಿಬಾನ್ ಗೆಲುವು: ಒಂದು ಎಡಪಂಥೀಯ ನೋಟ

ಅಫ್ಘಾನ್ ತಾಲಿಬಾನ್ ಗೆಲುವು: ಒಂದು ಎಡಪಂಥೀಯ ನೋಟ

- Advertisement -
- Advertisement -

20 ವರ್ಷಗಳ ಆಕ್ರಮಣ ಹಾಗೂ ಎರಡು ಲಕ್ಷ ಕೋಟಿ ಡಾಲರ್‌ಗಳಷ್ಟು ಹಣ ಸುರಿದ ಬಳಿಕವೂ ಅಫ್ಘಾನಿಸ್ತಾನವು ಇದೆಲ್ಲ ಶುರುವಾದಾಗಿದ್ದ ಪರಿಸ್ಥಿತಿಗೇ ಮತ್ತೆ ಮರಳಿದೆ, ತಾಲಿಬಾನಿಗಳ ವಶವಾಗಿದೆ. ಹಿಂದಿನ ಸಂದರ್ಭದಲ್ಲಿ ಇಡೀ ಅಫ್ಘಾನಿಸ್ತಾನವೇ ತಾಲಿಬಾನಿನ ಹಿಡಿತಕ್ಕೆ ಒಳಪಟ್ಟಿರಲಿಲ್ಲ. ಆದರೆ ಈ ಸಲ, ಬಡಗಣ ಮೈತ್ರಿಕೂಟ (ನದರನ್ ಅಲಯನ್ಸ್) ಪ್ರಬಲವಾಗಿದ್ದ ಪ್ರದೇಶಗಳನ್ನೂ ತಾಲಿಬಾನ್ ಕೈವಶ ಮಾಡಿಕೊಂಡಿದೆ. ಅಮೆರಿಕ ಬೀಡುಬಿಟ್ಟಿದ್ದನ್ನು ಬೆಂಬಲಿಸಿ, ಅದರ ಜೊತೆಗಿದ್ದದ್ದೇ ಆ ಮೈತ್ರಿಕೂಟದ ಶಕ್ತಿ ಕುಂದಲು, ಎರಡು ದಶಕಗಳ ಹಿಂದೆ ಇದ್ದ ಶಕ್ತಿಗಿಂತಲೂ ಕಡಿಮೆಯಾಗಲು ಕಾರಣವಾಗಿದೆ.

ಆಕ್ರಮಣದ ಉದ್ದೇಶವು 9/11 ಸಂಚುಕೋರರನ್ನು ಹಿಡಿದು, ಮಟ್ಟಹಾಕುವುದೇ ಆಗಿದ್ದಿದ್ದರೆ, 2011ರಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಮೆರಿಕ ಸೈನ್ಯವು ಬಲಿಹಾಕಿದಾಗಲೇ ಅವರು ಅಫ್ಘಾನಿಸ್ತಾನದಿಂದ ಗಂಟುಮೂಟೆ ಕಟ್ಟಿ ಹೊರಡಬೇಕಿತ್ತು. ಹೀಗಾಗದೆ, ಮುಂದಿನ ಹತ್ತು ವರ್ಷಗಳವರೆಗೂ ಆಕ್ರಮಣ ಮುಂದುವರಿದಿರುವುದಕ್ಕೆ ಕಾರಣ ಭೂ-ರಾಜಕಾರಣದ ತಂತ್ರಗಾರಿಕೆ ಎನ್ನುವ ಮಾತೂ ಮುನ್ನೆಲೆಗೆ ಬರುತ್ತದೆ.

ಇದನ್ನೂ ಓದಿ: ಅಫ್ಘಾನ್‌ನ ಹೊಸ ನಾಯಕರಾಗಲಿರುವ ತಾಲಿಬಾನ್‌‌ ಮುಖಂಡರಿವರು

ಚೀನ ಮತ್ತು ರಷ್ಯಾದ ಬೊಜ್ಜಿನ ನೆರಳಿನಲ್ಲಿರುವ ಈ ಭೂಪ್ರದೇಶವನ್ನು ನಿಯಂತ್ರಿಸಲು ಈ ತಂತ್ರಗಾರಿಕೆ ಅಗತ್ಯವಾಗಿತ್ತೆಂದು ಹೇಳಲಾಗುತ್ತದೆ. ಆದರೆ, ಇದೇ ನಿಜವಾದ ಗುರಿಯಾಗಿದ್ದ ಪಕ್ಷದಲ್ಲಿ, ಈಗ ಅಮೆರಿಕವು ಇಷ್ಟು ಅವಸರಪಟ್ಟು ಅಲ್ಲಿಂದ ಕಾಲುಕಿತ್ತಿದ್ದಾದರೂ ಏಕೆ? ಅಚ್ಚರಿಯ ವಿಷಯವೆಂದರೆ, ಯಾರು ಎಷ್ಟೇ ಪ್ರಯತ್ನಪಟ್ಟರೂ ಅಮೆರಿಕದ ಆಕ್ರಮಣಕ್ಕೆ ಸರಿಯಾದ, ತರ್ಕಬದ್ಧವಾದ ವಿವರಣೆಯನ್ನೂ, ಸಮರ್ಥನೆಯನ್ನೂ ನೀಡಲಾಗುತ್ತಿಲ್ಲ! ಇದು ಆಧುನಿಕ ಬಂಡವಾಳಶಾಹಿ ಸಾಮ್ರಾಜ್ಯವಾದದ ವಿನಾಶಕಾರಿ ಸ್ವರೂಪಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಷ್ಟೇ ನಾವು ಹೇಳಬಲ್ಲೆವು.

ತಾಲಿಬಾನ್ ಒಂದು ಬಗೆಯಲ್ಲಿ ಸಾಮ್ರಾಜ್ಯಶಾಹಿ ವಿರೋಧಿಯಾದ ರಾಷ್ಟ್ರೀಯ ವಿಮೋಚನಾ ಚಳವಳಿಯನ್ನು ಪ್ರತಿನಿಧಿಸುತ್ತದೆ ಎಂದು ಯಾರಾದರೂ ಪಶ್ಚಿಮದಲ್ಲಿ ನಂಬಿದ್ದರೆ ಅದು ಅಂಥವರು ಎಸಗುತ್ತಿರುವ ಬಹಳ ದೊಡ್ಡ ಪ್ರಮಾದವಾಗುತ್ತದೆ. ವಸ್ತುಸ್ಥಿತಿಯನ್ನು ಅವರು ತಪ್ಪುತಪ್ಪಾಗಿ ಗ್ರಹಿಸಿದ್ದಾರೆಂದೇ ಅರ್ಥ. ಸೌರ್ ಕ್ರಾಂತಿಯ ವಿರುದ್ಧ ಯಾವೆಲ್ಲ ಕ್ರಾಂತಿವಿರೋಧಿ, ಪ್ರತಿಗಾಮಿ ಬಣಗಳು ಒಗ್ಗೂಡಿದ್ದವೋ ಅವೇ ಬಣಗಳಿಂದ ತಾಲಿಬಾನ್ ರೂಪುಗೊಂಡಿದೆ.

ಈ ಬಣಗಳನ್ನು ಒಟ್ಟಾರೆಯಾಗಿ ಮುಜಾಹಿದೀನ್ ಎಂದು ಕರೆಯಲಾಗುತ್ತದೆಯಾದರೂ ಇವುಗಳು ಎಂದಿಗೂ ಒಂದು ಸಂಘಟಿತ ಗುಂಪಿನಂತೆ ವ್ಯವಹರಿಸಿಲ್ಲ. ಮುಜಾಹಿದೀನ್ ಎನ್ನುವುದು ಏಳು ಪ್ರತ್ಯೇಕ ಜಿಹಾದಿ ಸಂಘಟನೆಗಳನ್ನು ಒಟ್ಟಂದಿನಲ್ಲಿ ಗುರುತಿಸಲು ನೀಡಲಾದ ಹೆಸರು ಅಷ್ಟೇ. ಈ ಸಂಘಟನೆಗಳ ನಡುವೆ ಧಾರ್ಮಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರುವುದಷ್ಟೇ ಅಲ್ಲ, ಇವರ ಹಣಕಾಸಿನ ಮೂಲವೂ, ನೆಂಟಸ್ತನ ಬೆಳೆಸಿದ ದೇಶಗಳೂ ಬೇರೆಬೇರೆ. ಡಾ. ನಜೀಬ್ ಅವರ ಸರಕಾರ ಪತನವಾದ ನಂತರ ಅಫ್ಘಾನಿಸ್ತಾನದಲ್ಲಿ ಆಂತರಿಕ ಯುದ್ಧ ಸಂಭವಿಸಲೂ ಇದೇ ಕಾರಣವಾಗಿತ್ತು.

ಇದನ್ನೂ ಓದಿ: ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌’ಗಳ ನಡುವೆ ಬದುಕುತ್ತಿರುವ ನಾವು!

ಹಾಗಾಗಿ, ತಾಲಿಬಾನಿಗಳು ಹಾಗೂ ಬಡಗಣ ಮೈತ್ರಿಕೂಟದ ನಡುವಿನ ಸಂಘರ್ಷವೇನಿದೆ, ಅದನ್ನು ರಾಷ್ಟ್ರೀಯ ವಿಮೋಚನೆ ವರ್ಸಸ್ ಸಾಮ್ರಾಜ್ಯಶಾಹಿ ಕದನವೆಂದಾಗಲಿ, ಪುರೋಗಾಮಿ ವರ್ಸಸ್ ಪ್ರತಿಗಾಮಿ ಶಕ್ತಿಗಳ ನಡುವಿನ ತಿಕ್ಕಾಟವೆಂದಾಗಲಿ ನೋಡುವಹಾಗಿಲ್ಲ. ಇವರೆಲ್ಲರೂ ಒಂದೇ ಬಟ್ಟೆಯಿಂದ ಕತ್ತರಿಸಲ್ಪಟ್ಟವರು. ದೋಹಾ ಒಪ್ಪಂದದಲ್ಲಿ ಅಮೆರಿಕ ಮತ್ತು ತಾಲಿಬಾನ್ ಒಂದು ಒಡಂಬಡಿಕೆ ಮಾಡಿಕೊಂಡಿತ್ತು. ಇದರ ಪ್ರಕಾರ, ಅಮೆರಿಕ ಅಫ್ಘಾನಿಸ್ತಾನವನ್ನು ತೊರೆಯಬೇಕೆಂದರೆ, ಅಮೆರಿಕದ ಹಿತಾಸಕ್ತಿ ಅಲ್ಲಿ ಯಾವೆಲ್ಲ ಸ್ಥಳಗಳ ಮೇಲೆ ಇವೆಯೋ ಅವ್ಯಾವುದರ ಮೇಲೂ ತಾಲಿಬಾನಿಗಳು ದಾಳಿ ಮಾಡಬಾರದು. ಇನ್ನು, ದೇಶವನ್ನು ಕೈವಶಮಾಡಿಕೊಂಡ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಾಲಿಬಾನ್ ಹೊರದೇಶಗಳ, ಅದರಲ್ಲೂ ಅಮೆರಿಕದ ಬಂಡವಾಳ ಹೂಡಿಕೆಯನ್ನು ತಾವು ಸ್ವಾಗತಿಸುವುದಾಗಿ ಹೇಳಿದೆ.

ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ಪಡೆದಿರುವುದರಲ್ಲಿ ಪಾಕಿಸ್ತಾನದ ಪಾತ್ರವೂ ಮಹತ್ವದ್ದಾಗಿದೆ. ಇದು ಪಾಕಿಸ್ತಾನಿ ಸೈನ್ಯವು ತನ್ನ ದೇಶದ ಭದ್ರತೆಯ ಸವಾಲನ್ನು ಹೇಗೆ ಗ್ರಹಿಸುತ್ತದೆ ಎನ್ನುವುದಕ್ಕೆ ಸಂಬಂಧಿಸಿದ್ದು. ನೆರೆರಾಷ್ಟ್ರ ಭಾರತವೊಂದೇ ತನ್ನ ದೇಶದ ಭದ್ರತೆ ಮತ್ತು ಅಸ್ತಿತ್ವಕ್ಕೆ ಅತ್ಯಂತ ಗಂಭೀರ ಸ್ವರೂಪದಲ್ಲಿ ಧಕ್ಕೆ ಮಾಡಲು ಸಾಧ್ಯವೆಂದು ಪಾಕಿಸ್ತಾನಿ ಸೈನ್ಯ ನಂಬುತ್ತಲೇ ಬಂದಿದೆ.

1971ರಂದು ಮೂಡಣ ಪಾಕಿಸ್ತಾನವು ಬಾಂಗ್ಲಾದೇಶ ಆದಂದಿನಿಂದಲೂ ಈ ನಂಬಿಕೆಯು ಅವರಲ್ಲಿ ಬಲಗೊಳ್ಳುತ್ತಲೇ ಇದೆ. ಹಾಗಾಗಿ, ಪಾಕಿಸ್ತಾನವೆಂಬ ರಾಷ್ಟ್ರ ಹುಟ್ಟಿದಾಗಿಂದಲೂ, ವಿಶೇಷವಾಗಿ 1971ರ ನಂತರವಂತೂ ಅದರ ಸೈನ್ಯವು ತನ್ನ ದೇಶದ ಗಡಿಗಳ ರಕ್ಷಣೆಯ ಹೊಣೆಯನ್ನಷ್ಟೇ ಹೊತ್ತಿಲ್ಲ, ತನ್ನ ಸೈದ್ಧಾಂತಿಕ ಗಡಿಗಳ ರಕ್ಷಣೆಯ ಹೊಣೆಯನ್ನು ಕೂಡ ಹೊತ್ತಿದೆ. ಮಿಕ್ಕೆಲ್ಲ ವಿಚಾರಗಳನ್ನೂ ಬದಿಗೆ ಸರಿಸುವಷ್ಟು ಅನಿವಾರ್ಯವೆನಿಸಿರುವ ಈ ನಿಲುವಿನಿಂದಾಗಿ ಪಾಕಿಸ್ತಾನವು, ಅಲ್ಲಿನ ಪ್ರಗತಿಪರರು ಗುರುತಿಸಿರುವಂತೆ ಒಂದು ’ರಕ್ಷಣೆ ಕೇಂದ್ರಿತ ಪ್ರಭುತ್ವ’ ಅಥವಾ ’ಸೈನ್ಯಾಡಳಿತ ಪ್ರಭುತ್ವ’ (ಸೆಕ್ಯುರಿಟಿ ಸ್ಟೇಟ್) ಆಗಿ ಮಾರ್ಪಟ್ಟಿದೆ. ಇನ್ನು, ಪಾಕಿಸ್ತಾನಿ ಸೈನ್ಯವು ಅಫ್ಘಾನಿಸ್ತಾನವನ್ನು ಯಾವತ್ತಿಗೂ ವ್ಯೂಹಾತ್ಮಕ ದೃಷ್ಟಿಯಿಂದಲೇ ಕಂಡಿದೆ. ತನ್ನೊಂದಿಗೆ ’ಗೆಳೆತನದ ನಂಟು’ ಹೊಂದಿರುವ ಸರಕಾರವನ್ನು ಕೂರಿಸುವ ಉದ್ದೇಶದಿಂದಲೇ ಅಫ್ಘಾನಿಸ್ತಾನದ ಆಂತರಿಕ ರಾಜಕೀಯದಲ್ಲಿ ೭೦ರ ದಶಕದಿಂದಲೂ ಮೂಗುತೂರಿಸುತ್ತಲೇ ಬಂದಿದೆ.

ಇದನ್ನೂ ಓದಿ: ಕಾಬೂಲ್‌: ಗುರುದ್ವಾರಕ್ಕೆ ಭೇಟಿ ನೀಡಿ ಸಿಖ್ಖರು, ಹಿಂದೂಗಳೊಂದಿಗೆ ಮಾತನಾಡಿದ ತಾಲಿಬಾನಿಗಳು

ಹೀಗೆ, ಒಂದುವೇಳೆ ಭಾರತದೊಡನೆ ಯುದ್ಧವಾದಲ್ಲಿ ಹಿಂದಕ್ಕೆ ಸರಿದು ತನ್ನ ರಣನೀತಿಯನ್ನು, ತಂತ್ರಗಾರಿಕೆಯನ್ನು ಮರುರೂಪಿಸಲು ಸ್ಥಳಾವಕಾಶ ಸಿಕ್ಕಂತಾಗುತ್ತದೆ ಎನ್ನುವುದು ಪಾಕಿಸ್ತಾನಿ ಸೈನ್ಯದ ಆಲೋಚನೆ. ಈ ಕಾರಣಕ್ಕಾಗಿಯೇ ಅಫ್ಘಾನಿಸ್ತಾನದ ಇಸ್ಲಾಮಿಕ್ ತೀವ್ರಗಾಮಿಗಳನ್ನು ಪಾಕಿಸ್ತಾನ ಸರಕಾರವು, ಸೌರ್ ಕ್ರಾಂತಿಗಿಂತ ಬಹಳ ಮುಂಚಿನಿಂದಲೂ ಪೊರೆಯುತ್ತ, ಬೆಂಬಲಿಸುತ್ತ ಬಂದಿದೆ. ಪಾಕಿಸ್ತಾನಿ ಸೈನ್ಯ ಹಾಗೂ ಇಸ್ಲಾಮಿಕ್ ತೀವ್ರಗಾಮಿಗಳ ನಡುವಿನ ನಂಟು ಅರ್ಧ ಶತಮಾನದಷ್ಟು ಹಳೆಯದು. ಹಾಗಾಗಿ, ತಾಲಿಬಾನಿಗಳ ಇಂದಿನ ಗೆಲುವು ಪಾಕಿಸ್ತಾನ ಸರಕಾರದ ಕಣ್ಣಲ್ಲಿ ಪಾಕಿಸ್ತಾನ-ಪರ ಶಕ್ತಿಗಳ ಗೆಲುವಾಗಿದೆ. ಅಂದರೆ, ಭಾರತ-ಪರವಾಗಿರುವ ಬಡಗಣ ಮೈತ್ರಿಕೂಟ ಸೋತಿದೆ ಹಾಗೂ ಪಾಕಿಸ್ತಾನ-ಪರವಾಗಿರುವ ತಾಲಿಬಾನಿಗಳು ಗೆದ್ದಿದ್ದಾರೆ. ಅಥವಾ, ಹಾಗಂತ ನಮಗೆ ಹೇಳಲಾಗಿದೆ, ನಂಬಿಸಲಾಗಿದೆ.

ಅಫ್ಘಾನ್ ಪತನ: ಕಾಬೂಲ್‌ನಿಂ‌ದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ
PC: Getty Images

ಈ ಒಂದು ಕಾರಣಕ್ಕಾಗಿಯೇ ತಾಲಿಬಾನಿಗಳ ಗೆಲುವು ಪ್ರಗತಿಪರ, ರಾಷ್ಟ್ರೀಯ ವಿಮೋಚನೆಗಾಗಿ ಹೋರಾಡಿದವರ ಗೆಲುವು ಎಂದು ನಾವಾಗಲಿ, ಬೇರೆ ದೇಶಗಳಾಗಲಿ ಭಾವಿಸಬಾರದು. ತಾಲಿಬಾನ್ ಮುಂದಾಳುತನದಲ್ಲಿ ಅಫ್ಘಾನಿಸ್ತಾನವು ತಾನು ತನ್ನೊಳಗೆ ಥಿಯಾಕ್ರೆಟಿಕ್ (ಪುರೋಹಿತರೋ, ಮುಲ್ಲಾಗಳೋ ದೇವರ ಹೆಸರಲ್ಲಿ ಆಳ್ವಿಕೆ ನಡೆಸುವ), ಪ್ರತಿಗಾಮಿ ಗುಣಗಳನ್ನು ಹೊಂದಿರುವ, ಹೊರಗೆ ಅಮೆರಿಕದ ಮಿತ್ರರಾಷ್ಟ್ರವಾಗಿರುವ ದೇಶಗಳಂತೆ ಆಗಬಹುದು, ಬಹುಶಃ ಆಗುತ್ತದೆ ಕೂಡ. ನಿದರ್ಶನಕ್ಕೆ ಸೌದಿ ಅರೇಬಿಯಾವನ್ನೇ ನೋಡಬಹುದು.

ತಾಲಿಬಾನಿಗಳ ಈ ಗೆಲುವಿನಿಂದಾಗಿ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಿ ಜನರ ಪ್ರಗತಿಪರ ಭವಿಷ್ಯಕ್ಕೆ ಇನ್ನೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಗೆಲುವು, ಮತೀಯ ರಾಜಕಾರಣದಲ್ಲಿ ತೊಡಗಿರುವ ಪಾಕಿಸ್ತಾನಿ ರಾಜಕೀಯ ಪಕ್ಷಗಳನ್ನು ಕೊಬ್ಬಿಸಿದೆಯಲ್ಲದೆ, ಒಂದು ದಶಕದಿಂದಲೂ ದೇಶದೊಳಗೆ, ಮುಖ್ಯವಾಗಿ ಬಡಗಣ ಭಾಗಗಳಲ್ಲಿ ವಿನಾಶಕಾರಿ ಸಂಘರ್ಷದಲ್ಲಿ ತೊಡಗಿರುವ, ಎಂಬತ್ತು ಸಾವಿರವನ್ನೂ ಮಿಕ್ಕುಮೀರಿದ ಜನರ ಸಾವಿಗೂ, ಲಕ್ಷಾಂತರ ಜನರು ನಿರಾಶ್ರಿತರಾಗುವುದಕ್ಕೂ ಕಾರಣವಾಗಿರುವ ತೆಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ್ ಸಂಘಟನೆಗೆ ಆಶಾಕಿರಣವಾಗಿದೆ.

ಎಂದಾದರೊಮ್ಮೆ ಈ ಪ್ರತಿಗಾಮಿ ಶಕ್ತಿಗಳನ್ನು ಸದೆಬಡೆಯಬಹುದು ಎಂದಾದರೆ ಅದು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನಿ ಪ್ರಗತಿಪರ ಶಕ್ತಿಗಳಿಂದ ಮಾತ್ರ ಸಾಧ್ಯ. ಮೇಲ್‌ಚಲನೆಗಾಗಿ ನಡೆಯುವ ಈ ಹೋರಾಟಕ್ಕೆ ಹೊರ ದೇಶಗಳ ದೇಣಿಗೆಯಾಗಲೀ, ನೆರವಾಗಲೀ, ಆಕ್ರಮಣವಾಗಲೀ ಎಂದಿಗೂ ಮಹತ್ವದ ಕೊಡುಗೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ. ಪ್ರತಿಯಾಗಿ ಅವು ಕೆಳಚಲನೆಯನ್ನೇ ಉಂಟುಮಾಡುತ್ತವೆ. ಇನ್ನು, ಮಹಿಳೆಯರನ್ನೂ, ಅಲ್ಪಸಂಖ್ಯಾತರನ್ನೂ ರಕ್ಷಿಸುವ ಸಲುವಾಗಿ ಅಫ್ಘಾನಿಸ್ತಾನವನ್ನು ಮತ್ತೆ ಆಕ್ರಮಿಸಬೇಕು ಎನ್ನುವ ಕೂಗೆಬ್ಬಿದೆ. ಇದು ಬೆಪ್ಪುತನದ, ತಪ್ಪುಗ್ರಹಿಕೆಯ ಬೇಡಿಕೆಯಷ್ಟೇ ಆಗಿಲ್ಲ, ಅತ್ಯಂತ ಹಾಸ್ಯಾಸ್ಪದವೂ ಆಗಿದೆ. ಮಾನವೀಯತೆಯ ಮುಖವಾಡ ತೊಟ್ಟ ಸಾಮ್ರಾಜ್ಯಶಾಹಿಯ ಇಂಥಾ ನಿರೂಪಣೆಗಳಿಂದ ಈಗಾಗಲೇ ಸಾಕಷ್ಟು ಕೆಡುಕುಂಟಾಗಿದೆ.

ಮುಕ್ತಾಯದ ಮಾತು: ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಹಂಬಲದಿಂದ ಅಫ್ಘಾನಿಸ್ತಾನದ ಜನರು ವಿಮಾನಗಳಿಗೆ ಅಂಟಿಕೊಂಡು, ಜೋತಾಡುವ ಚಿತ್ರಗಳು ಅಮೆರಿಕ ಆಕ್ರಮಣದ ಅಂತ್ಯವು ತಂದ ಅಧೋಗತಿಯನ್ನು ನೆನಪಿಸುವಂತೆ ಈ ಪ್ರದೇಶದ ಜನರ ಮನದಲ್ಲಿ ಅಚ್ಚಳಿಯದೆ ಉಳಿದಿರುತ್ತವೆ. ವಿಮಾನದಿಂದ ಕೆಳಕ್ಕೆ ಜನರು ಹಾರಿಬಿದ್ದ ರೀತಿಯು, ಬಂಡವಾಳಶಾಹಿ ಸಾಮ್ರಾಜ್ಯವಾದವು ಕಟ್ಟಿಕೊಡುವ ಆದರೆ ಕೊನೆಯಲ್ಲಿ ಕೈಬಿಡುವ ಹುಸಿ ಭರವಸೆಯ ಸಂಕೇತವಾಗಿದೆ. ಪಾಕಿಸ್ತಾನ ಹಾಗೂ ಅಘ್ಘಾನಿಸ್ತಾನದ ಭವಿಷ್ಯವನ್ನು ಆಯಾ ದೇಶಗಳ ಜನರಷ್ಟೇ ನಿರ್ಧರಿಸಬಲ್ಲರು. ಈ ಹೋರಾಟದ ಪರವಾಗಿ ನೀವೆಲ್ಲರು ಇರುತ್ತೀರೆಂದು ಆಶಿಸುತ್ತೇನೆ. ಆದರೆ, ಇದು ನಮ್ಮ ಹೋರಾಟ, ನಾವೇ ನಡೆಸಬೇಕಾದ ಹೋರಾಟ. ಇಲ್ಲಿ ಚರಿತ್ರೆಯು ನಮ್ಮ ಕಡೆಯಿದೆ, ಗೆಲುವು ನಿಸ್ಸಂಶಯವಾಗಿ ನಮ್ಮದೇ.

ವಂದನೆಗಳು.

– ಡಾ. ತೈಮುರ್ ರಹಮಾನ್
ಪ್ರಾಧ್ಯಾಪಕ, ರಾಜಕೀಯಶಾಸ್ತ್ರ ವಿಭಾಗ, ಲಾಹೋರ್ ವಿಶ್ವವಿದ್ಯಾಲಯ, ಲಾಹೋರ್, ಪಾಕಿಸ್ತಾನ
ಸೆಲೆ: https://youtu.be/PtP_agfRDmU

ಅಕ್ಷರ ರೂಪಕ್ಕೆ ಮತ್ತು ಕನ್ನಡಕ್ಕೆ: ಅಮರ್ ಹೊಳೆಗದ್ದೆ

ವಿಡಿಯೊ ಇಲ್ಲಿ ನೋಡಬಹುದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...