ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕ ತಾಣಗಳ ಮೇಲೆ ಭಾರತೀಯ ವಾಯುಪಡೆ (IAF)ಯು 2025ರ ಮೇ 7ರ ರಾತ್ರಿ ನಡೆಸಿದ ದಾಳಿಯ ವೇಳೆ ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿತು. ಈ ನಷ್ಟಕ್ಕೆ “ರಾಜಕೀಯ ನಾಯಕತ್ವದಿಂದ ವಿಧಿಸಲಾದ ನಿರ್ಬಂಧಗಳೇ” ಕಾರಣ ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ನೌಕಾಪಡೆಯ ಅಧಿಕಾರಿ ಶಿವ್ ಕುಮಾರ್ ಕಳೆದ ತಿಂಗಳು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಮಿಲಿಟರಿ ನೆಲೆಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡದಂತೆ IAF ಗೆ ಸೂಚಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಜೂನ್ 10ರಂದು ಇಂಡೋನೇಷ್ಯಾದಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಕ್ಯಾಪ್ಟನ್ ಶಿವ್ ಕುಮಾರ್ ಈ ಕುರಿತು ಮಾತನಾಡಿದರು. ತಮ್ಮ 35 ನಿಮಿಷಗಳ ಪ್ರಸ್ತುತಿಯಲ್ಲಿ, ಭಾರತವು ಕೆಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬುದನ್ನು ಅವರು ಒಪ್ಪಿಕೊಂಡರು.
ಪಾಕಿಸ್ತಾನಿ ಸೇನೆಯು ರಫೇಲ್‌ಗಳು ಸೇರಿದಂತೆ ಆರು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡಿದೆ. ಆದರೆ, ಭಾರತೀಯ ವಾಯುಪಡೆ (IAF) ಆರಂಭಿಕ ವೈಮಾನಿಕ ಸಂಘರ್ಷದಲ್ಲಿ ನಷ್ಟ ಅನುಭವಿಸಿದ್ದನ್ನು ದೃಢಪಡಿಸಿದೆ. ಆದರೆ ಕಳೆದುಕೊಂಡ ವಿಮಾನಗಳ ನಿಖರ ಸಂಖ್ಯೆಯನ್ನು ಸ್ಪಷ್ಟಪಡಿಸಲಿಲ್ಲ.
ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ, ಸಿಂಗಾಪುರದಲ್ಲಿ ಮಾತನಾಡಿದ ರಕ್ಷಣಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾನ್, “ಜೆಟ್‌ಗಳು ಕೆಳಗೆ ಬಿದ್ದಿರುವುದಕ್ಕಿಂತ, ಅವು ಏಕೆ ಕೆಳಗೆ ಬಿದ್ದವು ಎಂಬುದು ಮುಖ್ಯ” ಎಂದು ಒತ್ತಿ ಹೇಳಿದರು.
ಈ ಯುದ್ಧ ವಿಮಾನಗಳ ನಷ್ಟದ ನಂತರ, ಭಾರತೀಯ ವಾಯುಪಡೆ (IAF) ತನ್ನ ತಂತ್ರಗಳನ್ನು ಬದಲಾಯಿಸಿತು ಎಂದು ಕ್ಯಾಪ್ಟನ್ ಶಿವ್ ಕುಮಾರ್ ವಿವರಿಸಿದರು. IAF ಪಾಕ್ ಮಿಲಿಟರಿ ನೆಲೆಗಳತ್ತ ಗಮನಹರಿಸಿತು ಮತ್ತು ಮೊದಲಿಗೆ ಶತ್ರು ವಾಯುರಕ್ಷಣೆಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಯಿತು. ಇದರಿಂದ, 2025ರ ಮೇ 10ರಂದು ನಡೆದ ದಾಳಿಗಳಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿಕೊಂಡು ಎಲ್ಲಾ ಪಾಕ್ ದಾಳಿಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಯಿತು ಎಂದರು.
ನೌಕಾಪಡೆಯ ಅಧಿಕಾರಿಯ ಈ ಹೇಳಿಕೆಯು, ಮೋದಿ ಸರ್ಕಾರವು IAF ಗೆ ವಿಧಿಸಿದ್ದ ಕಟ್ಟುನಿಟ್ಟಾದ ರಾಜಕೀಯ ಆದೇಶಗಳನ್ನು ಎತ್ತಿ ತೋರಿಸುತ್ತದೆ. ಈ ಆದೇಶದ ಪ್ರಕಾರ, ಪಾಕಿಸ್ತಾನಿ ಮಿಲಿಟರಿ ನೆಲೆಗಳು ಅಥವಾ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಬಾರದಾಗಿತ್ತು. ಪರಮಾಣು ಯುದ್ಧದ ಉಲ್ಬಣವನ್ನು ತಡೆಯುವ ಉದ್ದೇಶದಿಂದ ಸರ್ಕಾರವು ಈ ಸ್ವಯಂ-ನಿರ್ಬಂಧವನ್ನು ಹೇರಿತ್ತು. ಭಾರತವು ಪಾಕಿಸ್ತಾನದ ಯಾವುದೇ ಮಿಲಿಟರಿ ಗುರಿಗಳನ್ನು ಹೊಡೆಯದಿದ್ದಾಗ, ಪಾಕಿಸ್ತಾನಿ ಸೇನೆಯು ಭಾರತೀಯ ವಾಯುಪ್ರದೇಶದಲ್ಲಿ ಹಾರುವ ಭಾರತೀಯ ವಿಮಾನಗಳನ್ನು ಗುರಿಯಾಗಿಸುವುದಿಲ್ಲ ಎಂಬ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ.
ಆದರೆ, ಪಾಕಿಸ್ತಾನ ಅಂತಹ ಯಾವುದೇ ನಿರ್ಬಂಧಗಳನ್ನು ಒಪ್ಪಿಕೊಳ್ಳಲಿಲ್ಲ. ಪಾಕಿಸ್ತಾನದ ಉಪ ಮುಖ್ಯಸ್ಥರು ಹೇಳಿದಂತೆ, IAF ತನ್ನ ಅಸ್ತ್ರಗಳನ್ನು ಪಾಕಿಸ್ತಾನಿ ಭಯೋತ್ಪಾದಕ ತಾಣಗಳಿಗೆ ಕಳುಹಿಸಿದ ನಂತರ, ಪಾಕಿಸ್ತಾನ ವಾಯುಪಡೆಯು ತನ್ನ ಆದೇಶಗಳನ್ನು “ತಡೆಯುವಿಕೆಯಿಂದ ಸದೆಬಡಿಯುವತ್ತ” ಎಂದು ಬದಲಾಯಿಸಿತು. ಭಾರತದ ಈ ರಾಜಕೀಯ ನಿರ್ಧಾರಗಳಿಂದಾಗಿ, IAF ತನ್ನ ಕಾರ್ಯಾಚರಣೆಗಳಲ್ಲಿ ಅತ್ಯಂತ ಅಪಾಯಕಾರಿಯಾದ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡದೆ ಬಿಡಬೇಕಾಯಿತು. ಇದೇ ಕಾರಣಕ್ಕೆ IAF ಯುದ್ಧ ವಿಮಾನಗಳನ್ನು ಕಳೆದುಕೊಂಡಿತು ಎಂದು ಶಿವಕುಮಾರ್ ಹೇಳಿದರು.
ಆದರೆ, ಈ ತಂತ್ರಗಾರಿಕೆಯ ನ್ಯೂನತೆಯನ್ನು ಕೂಡಲೇ ಸರಿಹೊಂದಿಸಲಾಯಿತು. ಇದರಿಂದಾಗಿ, 2025ರ ಮೇ 10ರ ಕಾರ್ಯಾಚರಣೆಗಳಲ್ಲಿ ಬ್ರಹ್ಮೋಸ್ ಮತ್ತು ಇತರ ಕ್ಷಿಪಣಿಗಳನ್ನು ದೂರದಿಂದಲೇ ಪಾಕಿಸ್ತಾನಿ ಗುರಿಗಳನ್ನು ನಿಖರವಾಗಿ ಹೊಡೆಯಲು IAF ಬಳಸಿತು ಎಂದು ಅವರು ತಿಳಿಸಿದರು.
ಈ ಘಟನೆಗಳ ನಡುವೆ, ಇಂಡೋನೇಷ್ಯಾದ ಜಕಾರ್ತಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕ್ಯಾಪ್ಟನ್ ಕುಮಾರ್ ಅವರ ಹೇಳಿಕೆಗಳನ್ನು “ತಪ್ಪಾಗಿ ನಿರೂಪಿಸಲಾಗಿದೆ” ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ವಿಚಾರಸಂಕೀರಣದಲ್ಲಿ ನೌಕಾಪಡೆ ಅಧಿಕಾರಿ ಮಾಡಿದ ಪ್ರಸ್ತುತಿಯ ಬಗ್ಗೆ ಮಾಧ್ಯಮ ವರದಿಗಳನ್ನು ನಾವು ಗಮನಿಸಿದ್ದೇವೆ. ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಈ ವರದಿಗಳು ಭಾಷಣಕಾರರ ಪ್ರಸ್ತುತಿಯ ನಿಜವಾದ ಉದ್ದೇಶ ಹಾಗೂ ಒತ್ತುಕೊಟ್ಟಿದ್ದನ್ನು ಸರಿಯಾಗಿ ಬಿಂಬಿಸಿಲ್ಲ. ನಮ್ಮ ನೆರೆಹೊರೆಯ ಕೆಲವು ದೇಶಗಳಂತೆ ಅಲ್ಲದೆ, ಭಾರತೀಯ ಸಶಸ್ತ್ರ ಪಡೆಗಳು ನಾಗರಿಕ ರಾಜಕೀಯ ನಾಯಕತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಪ್ರಸ್ತುತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಆಪರೇಷನ್ ಸಿಂಧೂರ್‌ನ ಮುಖ್ಯ ಉದ್ದೇಶವು ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸುವುದು ಮತ್ತು ಭಾರತದ ಪ್ರತಿಕ್ರಿಯೆ ಯಾವುದೇ ಉಲ್ಬಣಕ್ಕೆ ಕಾರಣವಾಗದಿರುವುದು ಎಂದು ಸಹ ವಿವರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಅತ್ಯಾಚಾರ ಸಂತ್ರಸ್ತೆ ಕುರಿತು ವಿವಾದಾತ್ಮಕ ಹೇಳಿಕೆ: ಶಾಸಕನಿಗೆ ಶೋಕಾಸ್ ನೋಟಿಸ್ ಕೊಟ್ಟ ಟಿಎಂಸಿ