ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಚೀನಾ ಕಾರಣವೆಂದು ಅಮೆರಿಕಾ ಪ್ರಾರಂಭಿಸಿದ ಅಭಿಯಾನದಿಂದ ಭಾರತ ದೂರವಿರಬೇಕು ಎಂದು ಚೀನಾ ಬಯಸಿದೆ. ಪೂರ್ವ ಲಡಾಕ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಗಡಿ ಉದ್ವಿಗ್ನತೆ ತಗ್ಗಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿರುವಾಗಲೂ, ಚೀನಾ ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಭಾರತಕ್ಕೆ ತಿಳಿಸಿದೆ.
ಭಾರತ ಮತ್ತು ಚೀನಾದ ಹಿರಿಯ ರಾಜತಾಂತ್ರಿಕರು ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವಾಗ ಕೊರೊನಾ ಸಾಂಕ್ರಾಮಿಕ ವಿಷಯ ಕೂಡಾ ಚರ್ಚೆಗೆ ಬಂದಿದೆ. ಈ ವಿಡಿಯೋ-ಕಾನ್ಪರೆನ್ಸ್ ಭಾರತೀಯ ಸೇನೆಯ ಕಮಾಂಡರ್‌ಗಳು ಮತ್ತು ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿಯ ಜೊತೆಗೆ ಮಾತುಕತೆಯ ಚೌಕಟ್ಟನ್ನು ನಿಗದಿಪಡಿಸಿತು.
“ಭಾರತ ಮತ್ತು ಚೀನಾದ ಹಿರಿಯ ರಾಜತಾಂತ್ರಿಕರು, ಚೀನಾ ಮತ್ತು ಭಾರತವು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಹಕಾರವನ್ನು ಇನ್ನಷ್ಟು ಹೆಚ್ಚಿಸಬೇಕು, ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ, ಬಹುಪಕ್ಷೀಯತೆಯನ್ನು ದೃಡವಾಗಿ ಎತ್ತಿಹಿಡಿದು ಹಾಗೂ ಉತ್ತೇಜಿಸಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಮಾನ್ಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡರು” ಎಂದು ಭಾರತದ ಚೀನಾ ರಾಯಭಾರಿ ಸನ್ ವೀಡಾಂಗ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
They also agreed that #China & #India should deepen cooperation on fight against #COVID19 epidemic, support the #WHO, resolutely uphold and promote multilateralism & safeguard common interests of developing countries. (3/3) pic.twitter.com/EXeZBVjfeU
— Sun Weidong (@China_Amb_India) June 5, 2020
ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಭಾರತವನ್ನು ಪ್ರತಿನಿಧಿಸಿದರೆ. ವೂ ಜಿಯಾಂಗ್‌ಹಾವೊ, ಚೀನಾ ಸರ್ಕಾರದ ನಿಯೋಗವನ್ನು ಮುನ್ನಡೆಸಿದರು.
“ಕೊರೊನಾ ಸಾಂಕ್ರಾಮಿಕ ಮತ್ತು ವಿವಿಧ ಬಹುಪಕ್ಷೀಯ ವೇದಿಕೆಗಳಲ್ಲಿ ಎದುರಿಸುತ್ತಿರುವ ಸವಾಲಿನ ಬಗ್ಗೆ ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು” ಎಂದು ವಿದೇಶಾಂಗ ಸಚಿವಾಲಯ ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ, ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬೀಜಿಂಗ್‌ನಲ್ಲಿ ಬಿಡುಗಡೆ ಮಾಡಿದ ಪ್ರತ್ಯೇಕ ಪತ್ರಿಕಾ ಪ್ರಕಟಣೆಯಲ್ಲಿ ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಎರಡೂ ದೇಶಗಳು ಸಹಾಕಾರ ಮಾಡುವುದಾಗಿ ಹಾಗೂ ಸಾಂಕ್ರಾಮಿಕ ಪರಿಸ್ಥಿತಿಯ ರಾಜಕೀಯೀಕರಣವನ್ನು ವಿರೋಧಿಸಲು ಒಪ್ಪಿಕೊಂಡಿದೆ ಎಂದು ಹೇಳಿದೆ.
ಅಮೆರಿಕಾ ಕೊರೊನಾ ಸಾಂಕ್ರಮಿಕಕ್ಕೆ ಚೀನಾ ಕಾರಣವೆಂದು ಪದೇ ಪದೇ ಹೇಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿ ಇದೆ ಎಂದು ಆರೋಪಿಸಿದ್ದರು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಗೆ ಧನ ಸಹಯ ಮಾಡುವುದನ್ನು ಕೂಡಾ ಅಮೆರಿಕಾ ನಿಲ್ಲಿಸಿದೆ. ಆದರೆ ಕೊರೊನಾ ಕಾರಣಕ್ಕಾಗಿ ಚೀನಾವನ್ನು ದೂರುವ ಕಾರ್ಯದಿಂದ ಭಾರತ ಅಂತರ ಕಾಯ್ದುಕೊಂಡಿತ್ತು.
ಆದಾಗ್ಯೂ, ಯುರೋಪಿಯನ್ ಒಕ್ಕೂಟ ಮತ್ತು ಇತರ ಹಲವಾರು ರಾಷ್ಟ್ರಗಳು ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಪ್ರಾಯೋಜಿಸಿದ ವೈರಸ್‌ನ ಮೂಲವನ್ನು ಪತ್ತೆ ಹಚ್ಚುವ ನಿರ್ಣಯದೊಂದಿಗೆ ಭಾರತ ನಿಂತು ಕೊಂಡಿದೆ.
ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆಯ ಬಗ್ಗೆಯೂ ಚರ್ಚಿಸಿದ್ದರು.
ಓದಿ: ಭಾರತ-ಚೀನಾ ಗಡಿ ವಿವಾದ-ವಿಶ್ವದ ಬಲಶಾಲಿ ದೇಶಗಳು ಭಾರತದ ಪರ ನಿಂತಿವೆಯೇ? ಫೋಸ್ಟ್ ಕಾರ್ಡ್ ಹರಡಿದ ಸುಳ್ಳುಗಳೇನು ?


