ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಪಡೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೇ ಅದ್ಭುತ, ಅಮೋಘ ಸಾಧನೆ ಎಂಬಂತೆ ಮೀಡಿಯಾಗಳು ಬಿಂಬಿಸುತ್ತಿವೆ. ಮೀಡಿಯಾಗಳಲ್ಲಿ ಬರುತ್ತಿರುವ ಮಸಾಲೆ ಮೋದಿ ಸುದ್ದಿಗಳು ಪ್ರಧಾನಿ ಅಂದರೆ ಹೀಗೆ ಬ್ಯುಸಿಯಾಗಿರಬೇಕು ಎಂದು ಜನ ನಂಬುವಂತಾಗಿದೆ. ಒಂದೊಂದು ಕ್ಷಣಕ್ಕೂ ಒಂದೊಂದು ಬಣ್ಣ ಬದಲಿಸುವ ಊಸರವಳ್ಳಿ ಹಾಗೆ ಪ್ರಧಾನಿ ನಮೋ ಕೂಡ ಬಣ್ಣಬಣ್ಣದ ಸೂಟ್ ಬೂಟ್ ಧರಿಸುತ್ತಿರುವುದು ಎದ್ದು ಕಾಣುತ್ತಿದೆ. ಅಂದರೆ ಎಲ್ಲವನ್ನೂ ನಾನೇ ನಿಭಾಯಿಸುತ್ತಿದ್ದೇನೆ. ಇನ್ನ್ಯಾರೂ ಸಮಸ್ಯೆಗಳ ಬಗ್ಗೆ ತಲೆಕಡಿಕೊಳ್ಳುತ್ತಿಲ್ಲ ಎಂಬ ವರ್ತನೆ ಅದು.
ಹೌದು.. ಮೋದಿ ದೇಶ ಸುತ್ತುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲೇ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಪ್ರಧಾನಿ ಹುದ್ದೆ ಸಿಕ್ಕಿರುವುದು ಅಂತಾರಾಷ್ಟ್ರೀಯ ಮಟ್ಟದ ನಾಯಕರನ್ನು ಭೇಟಿ ಮಾಡಲು, ಅವರೊಂದಿಗೆ ಮಾತನಾಡುವುದು, ತಬ್ಬಿಕೊಳ್ಳುವುದು, ಜನರತ್ತ ಕೈಬೀಸಲು ಎಂದು ಭಾವಿಸಿದಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂದರೆ ಅಚ್ಚುಮೆಚ್ಚು. ಮುಸ್ಲಿಂ ಬಾಹುಳ್ಯ ದೇಶಗಳಿಗೂ ಭೇಟಿ ಕೊಡುತ್ತಾರೆ. ನಾಜಿವಾದಿಗಳನ್ನೂ ಅಪ್ಪಿಕೊಳ್ಳುತ್ತಾರೆ. ಇತ್ತ ಚೀನಾವನ್ನೂ ಓಲೈಸುತ್ತಾರೆ. ರಷ್ಯಾವನ್ನೂ ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಒಟ್ಟಿನಲ್ಲಿ ‘ಅಂದರಿಕಿ ಮಂಚಿವಾಡು ಅನಂತಯ್ಯ’ ಎಂಬಂತೆ ಎಲ್ಲರಿಗೂ ಒಳ್ಳೆಯವರಾಗಲು ಬಯಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಭಾಷಣ ಬಿಗಿಯುತ್ತಿರುವ ಮೋದಿಗೆ ದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾತ್ರ ಜಾಣಕುರುಡು, ಜಾಣಮರೆವು.
ದೇಶದ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸಮಸ್ಯೆಗಳಿವೆ. ರೈತರು ಅತಿವೃಷ್ಟಿ-ಅನಾವೃಷ್ಟಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸಾಲಸೋಲ ಮಾಡಿಕೊಂಡು, ಮಳೆ, ನೆರೆಯಿಂದ ಫಸಲು ಕೈ ಸೇರದೆ ಜರ್ಜರಿತರಾಗಿದ್ದಾರೆ. ಅನ್ನದಾತನ ಅಳಲು, ಗೋಳು, ಸಂಕಷ್ಟವನ್ನು ಆಲಿಸುವವರೇ ಇಲ್ಲ. ಇತ್ತ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಮ್ಮರವಾಗುತ್ತಿದೆ. ದೇಶದ ಬಹುತೇಕ ಉದ್ದಿಮೆಗಳು ಬಾಗಿಲು ಮುಚ್ಚುತ್ತಿವೆ. ಉತ್ಪಾದನೆಯನ್ನು ಕಡಿತಗೊಳಿಸುವ ಪ್ರಕ್ರಿಯೆ ಕಳೆದ ಆರೇಳು ತಿಂಗಳಿಂದ ಜಾರಿಯಲ್ಲಿದ್ದು, ಲಕ್ಷಾಂತರ ಮಂದಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕಟ್ಟಡ ನಿರ್ಮಾಣ, ಜವಳಿ, ಉಕ್ಕು ಮತ್ತು ಕಬ್ಬಿಣ, ಆಟೋಮೊಬೈಲ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸವಿಲ್ಲ. ಕೆಲಸ ಕಳೆದುಕೊಂಡು, ಕಾರ್ಮಿಕರು ದಿಕ್ಕು ತೋಚದೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕೆಲಸ ಅರಸಿ, ನಗರಗಳಲ್ಲಿ ಬಂದು ನೆಲೆಸಿದ್ದ ಕುಟುಂಬಗಳು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿವೆ. ಕಟ್ಟಡ ನಿರ್ಮಾಣ ಕೆಲಸ ಸಂಪೂರ್ಣ ಕುಸಿದು ಹೋಗಿದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ದಿನದ ದುಡಿಮೆಯಲ್ಲೇ ಬದುಕು ಸಾಗಿಸುತ್ತಿದ್ದ ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡೋದು ಹೇಗೆ ಎಂದು ಚಿಂತಿತರಾಗಿದ್ದಾರೆ. ಉದ್ದಿಮೆ, ಕಂಪನಿಗಳ ಬಾಗಿಲು ಮುಚ್ಚುತ್ತಿರುವ ಮಾಲೀಕರು, ಕಾರ್ಮಿಕರಿಗೆ ನೀಡಬೇಕಿದ್ದ ಬಾಕಿ ಮತ್ತು ಪಿಎಫ್ ಹಣ ನೀಡದಿರುವ ಪ್ರಕರಣಗಳು ನಡೆಯುತ್ತಿವೆ.
ದೇಶದಲ್ಲಿ ಶ್ರೇಷ್ಟತೆಯ ಕಾರಣಕ್ಕಾಗಿ ದಲಿತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಶಸ್ತ್ರಾಸ್ತ್ರ, ಮಾರಕಾಸ್ತ್ರ ಹಿಡಿದು ಬೀದಿಯಲ್ಲಿ ತಿರುಗಬಾರದು ಎಂದು ಸಂವಿಧಾನದಲ್ಲಿ ಹೇಳಲಾಗಿದ್ದರೂ ಸಹ ಇದು ನಮಗಲ್ಲ ಎಂಬ ಧೋರಣೆ ಬೆಳೆಸಿಕೊಂಡಿರುವ ಕೆಲ ಮೇಲ್ವರ್ಗದ ಜನತೆ ದೊಣ್ಣೆ, ಮಚ್ಚುಗಳಿಂದ ಅಮಾಯಕ ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಬಯಲು ಶೌಚಕ್ಕೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯುವಂತಹ ಹೀನ ಪ್ರಕರಣಗಳೂ ನಡೆಯುತ್ತಿವೆ. ಹಾಡಹಗಲೇ ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸುವ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ.
ದನದ ಮಾಂಸ ಇಟ್ಟುಕೊಂಡಿದ್ದ, ದನದ ಮಾಂಸ ತಿಂದ, ದನದ ಸಾಗಾಟ ಮಾಡಿದ ಎಂಬ ಕಾರಣಕ್ಕೆ ಹತ್ಯೆಗೈಯಲಾಗುತ್ತದೆ. ಆಹಾರದ ಹೆಸರಲ್ಲಿ ಹಲ್ಲೆ-ಕೊಲೆಗಳು ನಡೆಯುತ್ತಿವೆ. ದೇಶದಲ್ಲಿ ಒಂದು ಧರ್ಮದವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅವರೇ ಈ ದೇಶದ ಎಲ್ಲಾ ಅನಿಷ್ಟಗಳಿಗೆ ಕಾರಣ ಎಂಬಂತೆ ಬಿಂಬಿಸುವ ಕೆಲಸವೂ ನಡೆಯುತ್ತಿದೆ. ಇದಷ್ಟೇ ಅಲ್ಲ, ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ, ಅನ್ಯ ಧರ್ಮೀಯ ಯುವತಿಯನ್ನು ಮಾತನಾಡಿಸಿದ ಎಂಬ ಕಾರಣಕ್ಕಾಗಿ ಗಲಭೆಗಳೂ ನಡೆಯುತ್ತಿವೆ.
ಅಂತಾರಾಜ್ಯ ಜಲ ವಿವಾದಗಳು ಬಾಕಿ ಇವೆ. ಮೀನುಗಾರರ ಸಮಸ್ಯೆಗಳು ಹಾಗೇ ಉಳಿದಿವೆ. ಕರಾವಳಿ ತೀರ ಪ್ರದೇಶಗಳು ಕೊಚ್ಚಿ ಹೋಗುತ್ತಿವೆ. ದ್ವೇಷ, ಅಸಹನೆ ವ್ಯಾಪಕವಾಗಿದೆ. ಮನೆ, ಭೂಮಿಯಿಲ್ಲದೆ ಅದೆಷ್ಟೋ ಮಂದಿ ನಲುಗುತ್ತಿದ್ದಾರೆ. ಭೂಮಿ ಹಕ್ಕುಗಳ ಸಮಿತಿ ಕಟ್ಟಿಕೊಂಡು ಮನೆ-ಭೂಮಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದಿವಾಸಿಗಳು ಅರಣ್ಯದಲ್ಲಿ ಜೀವಿಸುವುದು ಕಷ್ಟವಾಗಿದ್ದು, ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿದ್ದಾರೆ.
ಎಲ್ಲಾ ರೀತಿಯ ಕಾನೂನುಗಳು ಇವೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಸರ್ಕಾರಿ ಸೇವಕರು ಪಕ್ಷಪಾತ ಮಾಡ್ತಿದ್ದಾರೆ. ನ್ಯಾಯ ಶ್ರೀಮಂತರ ಪಾಲಾಗುತ್ತಿದೆ. ನ್ಯಾಯಾಲಯಗಳ ಸ್ವಾತಂತ್ರ್ಯಕ್ಕೆ ಕತ್ತರಿ ಪ್ರಯೋಗವಾಗ್ತಿದೆ. ಕೊಲಿಜಿಯಂ ಮಾಡಿದ್ದ ಶಿಫಾರಸುಗಳನ್ನು ತಿರಸ್ಕರಿಸಲಾಗಿದೆ. ಸಾಹಿತಿಗಳು, ಕಲಾವಿದರು, ಹೋರಾಟಗಾರರು ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಉಳಿಸಿಕೊಳ್ಳಲು ಹೆಣಗುವಂತಾಗಿದೆ. ಜನರ ಸಮಸ್ಯೆ ಆಲಿಸಬೇಕಾದ ಪ್ರಧಾನಿ ಕೇವಲ ವಿದೇಶ ಪ್ರವಾಸ, ಭಾಷಣದಲ್ಲಿ ಕಾಲ ಕಳೆದರೆ ದೇಶದ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಸಿಗೋದು ಯಾವಾಗ..? ದೇಶದ ಕೋಶ ಓದಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾದ ನೀವೇ ಹೀಗಾದರೆ ಜನತೆಯ ಪಾಡೇನು..?


