ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದಡಿ ಮಹಾರಾಷ್ಟ್ರ ಮೂಲದ ಬಿಲ್ಡರ್ ಅವಿನಾಶ್ ಭೋಸಲೆ ಅವರ ಆಸ್ತಿಯಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವಶಪಡಿಸಿಕೊಂಡಿದೆ. ಇದಾಗಿ ಕೆಲವೇ ದಿನಗಳ ನಂತರ, ಜಾರಿ ನಿರ್ದೇಶನಾಲಯ ಬುಧವಾರ ಭಾರತದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಅವಿನಾಶ್ ಭೋಸಲೆ ಮತ್ತು ಮತ್ತೊಬ್ಬ ಬಿಲ್ಡರ್ ಸಂಜಯ್ ಛಾಬ್ರಿಯಾ ಅವರಿಂದ 415 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ 34,000 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟು ಮಾಡಿದ ಯೆಸ್ ಬ್ಯಾಂಕ್-ಡಿಎಚ್‌ಎಫ್‌ಎಲ್ (ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಪ್ರಕರಣದಲ್ಲಿ ರೇಡಿಯಸ್ ಡೆವಲಪರ್ಸ್‌ನ ಸಂಜಯ್ ಛಾಬ್ರಿಯಾ ಮತ್ತು ಎಬಿಐಎಲ್ ಇನ್‌ಫ್ರಾಸ್ಟ್ರಕ್ಚರ್‌ನ ಅವಿನಾಶ್ ಭೋಸಲೆ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಕಳೆದ ವಾರ ಪುಣೆಯ ಅವಿನಾಶ್ ಭೋಸಲೆ ಆಸ್ತಿಯಲ್ಲಿ ಹೆಲಿಕಾಪ್ಟರ್ ಅನ್ನು ಪತ್ತೆ ಮಾಡಿದ್ದರು.
ಇಂದು ಸಂಜಯ್ ಛಾಬ್ರಿಯಾ ಅವರ ಮುಂಬೈನ ಸಾಂತಾಕ್ರೂಜ್‌ನಲ್ಲಿರುವ 116.5 ಕೋಟಿ ರೂ. ಮೌಲ್ಯದ ಜಮೀನು, ಬೆಂಗಳೂರಿನಲ್ಲಿರುವ 115 ಕೋಟಿ ರೂ. ಮೌಲ್ಯದ ಲ್ಯಾಂಡ್ ಪಾರ್ಸೆಲ್‌ನಲ್ಲಿರುವ ಕಂಪನಿಯ 25% ಈಕ್ವಿಟಿ ಷೇರುಗಳು, 3 ಕೋಟಿ ರೂ. ಮೌಲ್ಯದ ಸಾಂತಾಕ್ರೂಜ್‌ನಲ್ಲಿರುವ ಮತ್ತೊಂದು ಫ್ಲಾಟ್, ದೆಹಲಿ ವಿಮಾನ ನಿಲ್ದಾಣದಲ್ಲಿ ಛಾಬ್ರಿಯಾ ಅವರಿಗೆ ಸೇರಿದ 13.67 ಕೋಟಿ ರೂ. ಮೌಲ್ಯದ ಹೋಟೆಲ್‌ನ ಲಾಭ ಮತ್ತು 3.10 ಕೋಟಿ ರೂ. ಮೌಲ್ಯದ ಸಂಜಯ್ ಛಾಬ್ರಿಯಾ ಅವರ ಮೂರು ಅತ್ಯಾಧುನಿಕ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ಕೇಜ್ರಿವಾಲ್ ಸಹಾಯಕ, ಜಾರಿ ನಿರ್ದೇಶನಾಲಯದ ಅಧಿಕಾರಿ ಮೇಲೂ ಗೂಢಚರ್ಯೆ
ಇದಲ್ಲದೆ, ಅವಿನಾಶ್ ಭೋಸಲೆ ಅವರ 102.8 ಕೋಟಿ ರೂ. ಮೌಲ್ಯದ ಮುಂಬೈನ ಡ್ಯೂಪ್ಲೆಕ್ಸ್ ಫ್ಲಾಟ್ ರೂಪದ ಆಸ್ತಿ, ಪುಣೆಯ 14.65 ಕೋಟಿ ರೂ. ಮೌಲ್ಯದ ಜಮೀನು, ಪುಣೆಯಲ್ಲೆ ಇರುವ 29.24 ಕೋಟಿ ರೂ. ಮೌಲ್ಯದ ಮತ್ತೊಂದು ಜಮೀನು, 15.52 ಕೋಟಿ ರೂ. ಮೌಲ್ಯದ ನಾಗ್ಪುರದ ಜಮೀನು ಮತ್ತು ನಾಗ್ಪುರದಲ್ಲೆ ಇರುವ 1.45 ಕೋಟಿ ರೂ. ಮೌಲ್ಯದ ಮತ್ತೊಂದು ಜಮೀನನ್ನು ಕೂಡಾ ಈ ಜಪ್ತಿಯಲ್ಲಿ ಲಗತ್ತಿಸಲಾಗಿದೆ ಎಂದು ಇಡಿ ಹೇಳಿಕೊಂಡಿದೆ.
ಇಬ್ಬರು ಆರೋಪಿಗಳ ವಿರುದ್ಧ 2002ರ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA) ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಎರಡು ತಾತ್ಕಾಲಿಕ ಜಪ್ತಿ ಆದೇಶಗಳನ್ನು ಹೊರಡಿಸಿದೆ. ಈ ಇತ್ತೀಚಿನ ಜಪ್ತಿಯಿಂದ ಒಟ್ಟು ಜಪ್ತಿಯಾದ ಆಸ್ತಿಯ ಮೌಲ್ಯ 1,827 ಕೋಟಿ ರೂ.ಗೆ ಏರಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಜಾರಿ ನಿರ್ದೇಶನಾಲಯ ಜೂನ್‌ನಲ್ಲಿ ಸಂಜಯ್ ಛಾಬ್ರಿಯಾ ಮತ್ತು ಅವಿನಾಶ್ ಭೋಸಲೆ ಅವರನ್ನು ಬಂಧಿಸಿತ್ತು. ಪ್ರಸ್ತುತ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.


