ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದಾರೆ. ಕೊರಳಿಗೆ ಲಿಂಗಧಾರಣೆ ಮಾಡಿಕೊಂಡು ವಿಭೂತಿ ಧರಿಸಿದ್ದಾರೆ.
ಮುರುಘಾ ಮಠದಲ್ಲಿ ಬುಧವಾರ ನಡೆದ ಮಾಠಾಧೀಶರೊಂದಿಗಿನ ಸಭೆಯಲ್ಲಿ ಅವರು ಬಸವತತ್ವ ಪರಿಪಾಲನೆಯ ವಾಗ್ದಾನಾ ನೀಡಿದ್ದಾರೆ. ಲಿಂಗಪೂಜೆಯ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಮಠದ ಪ್ರತಿನಿಧಿಯೊಬ್ಬರನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ರಾಹುಲ್ ಗಾಂಧಿ ಕೋರಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, “ಮಠ ಹಾಗೂ ಇಲ್ಲಿನ ಗುರು ಪರಂಪರೆಯ ಬಗ್ಗೆ ರಾಹುಲ್ ಗಾಂಧಿ ಕೇಳಿದರು. ಬಸವತತ್ವ ಹಾಗೂ ಕಾಯಕ ಪ್ರಜ್ಞೆ ಬಗ್ಗೆ ವಿವರಿಸಿದ್ದೇವೆ. ಲಿಂಗದೀಕ್ಷೆಯ ಕುರಿತು ಮಾಹಿತಿ ನೀಡಿ, ಅಂಗೈನಲ್ಲಿ ಇಷ್ಟಲಿಂಗ ಇಟ್ಟುಕೊಂಡು ಪ್ರಾತ್ಯಕ್ಷಿಕೆ ತೋರಿಸಿದೆವು. ಇದರಿಂದ ಪ್ರೇರಣೆಗೊಂಡ ಅವರು ಲಿಂಗದೀಕ್ಷೆ ಪಡೆಯುವ ಇಚ್ಛೆ ವ್ಯಕ್ತಪಡಿಸಿದರು” ಎಂದು ತಿಳಿಸಿದ್ದಾರೆ.
“ಲಿಂಗಪೂಜೆಯ ಮೂರು ಹಂತಗಳನ್ನು ವಿವರಿಸಿದೆವು. ಲಿಂಗವನ್ನು ದೇಹಕ್ಕೆ ಧಾರಣೆ ಮಾಡಿಕೊಂಡು ವಿಭೂತಿ ಧರಿಸಿದರು. ಬಸವತತ್ವ ಪರಿಪಾಲನೆ ಮಾಡುವುದಾಗಿ ಸ್ವಯಂಪ್ರೇರಣೆಯಿಂದ ವಾಗ್ದಾನ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಷಡಾಕ್ಷರಮುನಿ ಸ್ವಾಮೀಜಿ, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ ಸೇರಿದಂತೆ ಮೊದಲಾದವರು ಹಾಜರಿದ್ದರು.
ರಾಹುಲ್ ಗಾಂಧಿಯವರು ಇಷ್ಟಲಿಂಗ ದೀಕ್ಷೆ ಪಡೆದ ಕಾರ್ಯಕ್ರಮದ ಫೋಟೋಗಳು