ಬಹು ನಿರೀಕ್ಷಿತ ಆಸ್ಕರ್ 2025ರ ಪಶಸ್ತಿ ರೇಸ್‌ನಿಂದ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ‘ಲಾಪತಾ ಲೇಡೀಸ್’ ಸಿನಿಮಾ ಹೊರ ಬಿದ್ದಿದೆ.
97ನೇ ಅಕಾಡೆಮಿ ಅವಾರ್ಡ್ಸ್‌ನ ‘ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್’ ವಿಭಾಗದಲ್ಲಿ ಲಾಪತಾ ಲೇಡೀಸ್ ಸ್ಪರ್ಧಿಸಿತ್ತು. ಮಂಗಳವಾರ (ಡಿ.17) ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ (ಎಎಂಪಿಎಸ್) ಶಾರ್ಟ್ ಲಿಸ್ಟ್ ಮಾಡುವಾಗ ಹೊರಗುಳಿದಿದೆ.
ಬಾಲಿವುಡ್ ನಟ ಅಮೀರ್ ಖಾನ್ ನಿರ್ಮಿಸಿದ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶಿಸಿದ ಹಿಂದಿ ಚಿತ್ರ ಲಾಪತಾ ಲೇಡೀಸ್, ಇಬ್ಬರು ನವ ವಿವಾಹಿತ ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಗೆ ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಸ್ಥಳಗಳನ್ನು ಬದಲಾಯಿಸುವ ಕಥೆಯೊಂದಿಗೆ ಸಾಗುತ್ತದೆ.
ಈ ಚಿತ್ರದಲ್ಲಿ ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ ಮತ್ತು ನಿತಾಂಶಿ ಗೋಯೆಲ್ ನಟಿಸಿದ್ದಾರೆ. ಇದು ಭಾರತದಲ್ಲಿ 1 ಮಾರ್ಚ್ 2024 ರಂದು ಬಿಡುಗಡೆಯಾಯಿತು ಮತ್ತು ಏಪ್ರಿಲ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಯಿತು.
ಲಾಪತಾ ಲೇಡೀಸ್ ಚಿತ್ರ ಆಸ್ಕರ್ ಪ್ರಶಸ್ತಿಯ ಅಂತಿಮ 15ರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆ್ಯಂಡ್ ಸೈನ್ಸ್ ತಿಳಿಸಿದೆ.
ಆದರೆ, ಬ್ರಿಟನ್-ಭಾರತ ಮೂಲದ ನಿರ್ಮಾಪಕಿ ಸಂಧ್ಯಾ ಸೂರಿ ಅವರ’ ಸಂತೋಷ್’ ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿದೆ. ಬ್ರಿಟನ್ ದೇಶವನ್ನು ಪ್ರತಿನಿಧಿಸುವ ಈ ಹಿಂದಿ ಚಿತ್ರದಲ್ಲಿ ಭಾರತೀಯರಾದ ಶಹಾನಾ ಗೋಸ್ವಾಮಿ ಮತ್ತು ಸುನೀತಾ ರಾಜ್‌ವರ್ ನಟಿಸಿದ್ದಾರೆ.
ಆಸ್ಕರ್ ಪ್ರಶಸ್ತಿಗಾಗಿ 85 ದೇಶಗಳು ತಮ್ಮ ಚಿತ್ರಗಳನ್ನು ಅಧಿಕೃತ ನಾಮನಿರ್ದೇಶನ ಮಾಡಿತ್ತು. ಈ ಪೈಕಿ ನೀಕ್ಯಾಪ್ (ಐರ್ಲೆಂಡ್), ಐ ಐ ಆ್ಯಮ್ ಸ್ಟಿಲ್ ಹಿಯರ್ (ಬ್ರೆಝಿಲ್), ಹೌ ಟು ಮೇಕ್ ಮಿಲಿಯನ್ಸ್ ಬಿಫೋರ್ ಗ್ರಾಂಡ್‌ಮ ಡೈಸ್ (ಥೈಲ್ಯಾಂಡ್), ಯೂನಿವರ್ಸಲ್ ಲಾಂಗ್ವೆಜ್ (ಕೆನಡಾ), ಅರ್ಮಂಡ್ (ನಾರ್ವೆ), ಟಚ್ (ಐಸ್‌ಲ್ಯಾಂಡ್), ದಿ ಗರ್ಲ್ ವಿಥ್ ದಿ ನೀಡ್ಲ್ (ಡೆನ್ಮಾರ್ಕ್), ದಹೋಮಿ (ಸೆನೆಗಲ್), ದಿ ಸೀಡ್ ಆಫ್ ಸೇಕ್ರೆಡ್ ಪಿಗ್ (ಜರ್ಮನಿ), ವೇವ್ಸ್ (ಜೆಕ್ ಗಣರಾಜ್ಯ), ಫ್ಲೋ (ಲಾಟ್ವಿಯಾ), ಫ್ರಂ ಗ್ರೌಂಡ್ ಝೀರೋ (ಪ್ಯಾಲೆಸ್ಟೈನ್), ಸಂತೋಷ್ (ಯುಕೆ) ಮತ್ತು ವೆರ್ಮಿಲಿಯೋ (ಇಟಲಿ) ಟಾಪ್ 15 ರಲ್ಲಿ ಸ್ಥಾನ ಪಡೆದಿವೆ ಎಂದು ಎಎಂಪಿಎಸ್ ತಿಳಿಸಿದೆ.

‘ಲಾಪತಾ ಲೇಡೀಸ್’ ಈ ವರ್ಷ ಆಸ್ಕರ್ ರೇಸ್‌ನಿಂದ ಹೊರಬಿದ್ದರೂ, ‘ಬೆಸ್ಟ್ ಲೈವ್-ಆಕ್ಷನ್ ಶಾರ್ಟ್ ಮೂವಿ’ ವಿಭಾಗಕ್ಕೆ ನಾಮನಿರ್ದೇಶನಗೊಂಡ ಗುನೀತ್ ಮೊಂಗಾ ಅವರ ಚಲನಚಿತ್ರ ‘ಅನುಜಾ’ ಮುಂದಿನ ಸುತ್ತಿಗೆ ಶಾರ್ಟ್ ಲಿಸ್ಟ್ ಅಗಿದೆ. ಅನುಜಾ ಭಾರತದಲ್ಲಿ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುವ ಮಕ್ಕಳ ಜೀವನದ ಸುತ್ತ ಸುತ್ತುತ್ತದೆ.

ಗುನೀತ್ ಮೊಂಗಾ ಅವರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಭಾಗದಲ್ಲಿ 2023ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವುದನ್ನು ಗಮನಾರ್ಹ.
ಇದನ್ನೂ ಓದಿ : Explainer | ಒಂದು ದೇಶ, ಒಂದು ಚುನಾವಣೆ : ಕೇಂದ್ರದ ಮಸೂದೆಯಲ್ಲಿ ಏನಿದೆ?


