ದೇಶದಲ್ಲೇ ಅತಿ ದೊಡ್ಡದು ಎನ್ನಲಾಗಿರುವ ವೈದ್ಯಕೀಯ ಕಾಲೇಜುಗಳ ಹಗರಣವೊಂದನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಯಲು ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಕರ್ನಾಟಕದ ಇಬ್ಬರು ವೈದ್ಯರು ಸಹಿತ 35 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ| ಸಿ.ಎನ್.ಮಂಜಪ್ಪ, ಬೆಂಗಳೂರಿನಲ್ಲಿರುವ ಅವರ ಆಪ್ತ ವೈದ್ಯ ಡಾ| ಸತೀಶ್ ವಿರುದ್ಧ ಆರೋಪಗಳು ಕೇಳಿಬಂದಿವೆ. ವೈದ್ಯಕೀಯ ಕಾಲೇಜುಗಳಿಗೆ ಅನುಕೂಲಕರ ವರದಿ ನೀಡಲು ಆ ಕಾಲೇಜುಗಳಿಂದ ತಲಾ 55 ಲಕ್ಷ ರೂಪಾಯಿ ಲಂಚ ಪಡೆಯಲಾಗುತ್ತಿತ್ತು ಎಂಬುವುದು ಪ್ರಕರಣದ ಆರೋಪವಾಗಿದೆ.
ಛತ್ತೀಸ್‌ಗಢದ ಸ್ವಘೋಷಿತ ದೇವಮಾನವ ರಾವತುರ ಸರ್ಕಾರ್, ಯುಜಿಸಿ ಮಾಜಿ ಅಧ್ಯಕ್ಷ ಹಾಗೂ ಟಿಐಎಸ್‌ಎಸ್ ಹಾಲಿ ಕುಲಪತಿ ಡಿ.ಪಿ ಸಿಂಗ್ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಮಾಜಿ ಅಧ್ಯಕ್ಷ ಸಂಜಯ್ ಶುಕ್ಲಾ, ಇಂದೋರ್‌ನ ಇಂಡೆಕ್ಸ್ ವೈದ್ಯಕೀಯ ಕಾಲೇಜಿನ ಸುರೇಶ್ ಸಿಂಗ್ ಭಡೋರಿಯಾ ಸೇರಿದಂತೆ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಕರ್ನಾಟಕ, ಆಂಧ್ರ ಪ್ರದೇಶದ ಹಿರಿಯ ಆಧಿಕಾರಿಗಳು, ಮಧ್ಯವರ್ತಿಗಳು, ಉನ್ನತ ಶಿಕ್ಷಣ ತಜ್ಞರು ಸಹಿತ 35 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಅಕ್ರಮ ಮಾನ್ಯತೆ ಪಡೆದಿರಬಹುದು ಎಂದು ಶಂಕಿಸಲಾಗಿದೆ. ಅಚ್ಚರಿಯೆಂದರೆ ಈ ಹಗರಣದಲ್ಲಿ ಆರೋಗ್ಯ ಸಚಿವಾಲಯದ ಕೆಲವು ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳಪೆ ಮಟ್ಟದ ವೈದ್ಯಕೀಯ ಕಾಲೇಜುಗಳಿಗೆ ಅಕ್ರಮ ಅನುಮೋದನೆಗಳನ್ನು ಪಡೆಯಲು ನಕಲಿ ಅಧ್ಯಾಪಕರು, ಸುಳ್ಳು ತನಿಖೆಗಳು ಮತ್ತು ಗೌಪ್ಯ ಸೂಕ್ಷ್ಮ ಮಾಹಿತಿಗಳ ಸೋರಿಕೆ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಹವಾಲಾ ಮತ್ತು ಬ್ಯಾಂಕಿಂಗ್ ಮಾರ್ಗಗಳ ಮೂಲಕ ವಿನಿಮಯ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಯ್ಪುರದ ವೈದ್ಯಕೀಯ ಸಂಸ್ಥೆಯಲ್ಲಿ 55 ಲಕ್ಷ ರೂಪಾಯಿ ಲಂಚ ಪ್ರಕರಣದಿಂದ ಆರಂಭವಾದ ತನಿಖೆ, ಈಗ ರಾಷ್ಟ್ರಮಟ್ಟದ ಹಗರಣವನ್ನು ಬಯಲಿಗೆಳೆದಿದೆ.
ಛತ್ತೀಸ್‌ಗಢದ ಶ್ರೀರಾಮಪುರ ಸರ್ಕಾರ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಗೆ ನಿಯೋಜಿಸಲಾದ ಎನ್‌ಎಂಪಿ ತಪಾಸಣೆ ತಂಡದಲ್ಲಿ ಮಂಡ್ಯದ ಡಾ. ಮಂಜಪ್ಪ ಅವರಿದ್ದರು. ಈ ಸಂಸ್ಥೆಯ ಪರವಾಗಿ ವರದಿ ನೀಡಲು ತಂಡವು 55 ಲಕ್ಷ ರೂ. ಲಂಚ ಪಡೆದಿತ್ತು. ಮಂಜಪ್ಪ ಅವರು ಈ ಹಣವನ್ನು ಪಡೆಯುವಂತೆ ಬೆಂಗಳೂರಿನ ಸತೀಶ್‌ಗೆ ತಿಳಿಸಿದ್ದರು. ಬೆಂಗಳೂರಿನಲ್ಲಿ ಲಂಚದ ಹಣ ಸ್ವೀಕರಿಸುವ ಸಮಯದಲ್ಲೇ ಸಿಬಿಐ ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ.
ಬಡತನಕ್ಕೆ ತಳ್ಳಿದವರ ಬಗ್ಗೆಯೂ ನಿತಿನ್ ಗಡ್ಕರಿ ಮಾತನಾಡಲಿ: ಬಿ.ಕೆ ಹರಿಪ್ರಸಾದ್