ಪ್ರೊ. ಹನಿ ಬಾಬು ಅವರನ್ನು ಈಗಿಂದೀಗ ಬಿಡುಗಡೆಮಾಡಿ
ಭೀಮಾ ಕೋರೇಗಾಂವ್-ಎಲ್ಗಾರ್ ಪರಿಷತ್ ಮೊಕದ್ದಮೆ ಎಂದು ಹೆಸರಾದ ಮೊಕದ್ದಮೆಯಡಿಯಲ್ಲಿ ನಮ್ಮ ದೇಶದ ಹದಿನಾರು ಜನ ಧೀಮಂತಧೀಮಂತೆಯರು ದಸ್ತಗಿರಿಯಾಗಿ, ಸೆರೆಮನೆಯಲ್ಲಿದ್ದಾರೆ. ಬಿಕೆ-16 (ಭೀಮಾ ಕೋರೇಗಾಂವ್-16) ಎಂದು ಕರೆಯಲಾಗುವ ಆ ಧೀಮಂತರಲ್ಲಿ ಒಬ್ಬರಾದ ಪ್ರೊ. ಹನಿ ಬಾಬು ಅವರ ಕುಟುಂಬದವರು ನಾವು ಈಗ, ನಮ್ಮ ದೇಶಬಾಂಧವರನ್ನು ಉದ್ದೇಶಿಸಿ, ಈ ಪತ್ರ ಬರೆಯುತ್ತಿದ್ದೇವೆ.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಹ-ಪ್ರಾಧ್ಯಾಪಕರಾಗಿರುವ ಹನಿ ಬಾಬು ಎಂ. ಟಿ. ಅವರು ಭಾಷಾಶಾಸ್ತ್ರದ ವಿದ್ವಾಂಸರು; ಆ ವಿಷಯದಲ್ಲಿ ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶ ಭಾಷೆಗಳ ವಿಶ್ವವಿದ್ಯಾನಿಲಯ (ಇಎಫ್‍ಎಲ್‍ಯು) ಹಾಗೂ ಜರ್ಮನಿಯ ಕೋನ್‍ಸ್ಟಾನ್ಜ಼್ ವಿಶ್ವವಿದ್ಯಾನಿಲಯದಿಂದ ಸಂಶೋಧನ ಡಾಕ್ಟರೇಟ್ ಪಡೆದವರು. ನಿಷ್ಠಾವಂತ ಬೋಧಕರು ಅವರು; ತಾನೊಬ್ಬ ಅಂಬೇಡ್ಕರ್‍ವಾದಿ ಎನ್ನುವ ಸಾಮಾಜಿಕ ಕಾರ್ಯಕರ್ತರು; ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಿಟ್ಟವರು; ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟಗಳಲ್ಲಿ ತೊಡಗಿರುವವರು. ಹಾಗಾಗಿ, ಅವರು ಅನೇಕಾನೇಕ ವಿದ್ಯಾರ್ಥಿ ಮತ್ತು ವಿದ್ವಾಂಸ ಜನರ ಪ್ರೀತಿಗೌರವಗಳನ್ನು ಗಳಿಸಿರುವುದಾಗಲಿ, ‘ಪ್ರಜಾಪ್ರಭುತ್ತ್ವದಲ್ಲಿ ನಂಬಿಕೆ ಇಟ್ಟಿರುವ ಪ್ರಜ್ಞಾವಂತ; ಸ್ನೇಹಮಯೀ ಧೀಮಂತ; ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಹೃದಯವಂತ’ ಎಂದೆಲ್ಲ ಹೆಸರಾಗಿರುವುದಾಗಲಿ ಅಚ್ಚರಿಯ ವಿಷಯವೇನಲ್ಲ.
ಆ ತಥಾಕಥಿತ ಬಿಕೆ-16 ಜನರ ಮೇಲೆ, ಅವರು ಹತ್ಯೆಯೊಂದನ್ನು ಮಾಡಲು ಸಂಚು ರೂಪಿಸಿದರು ಎಂಬ ಆರೋಪವಿದೆ. ಹಾಗೆ ಶುರುವಾದ ಆ ಪ್ರಕರಣ ಈಗ ಆ ಆರೋಪಿಗಳ ಕಂಪ್ಯೂಟರುಗಳಲ್ಲಿ ಕೆಲವು ಪತ್ರಗಳು ಕಂಡುಬಂದಿವೆ ಎಂಬಷ್ಟಕ್ಕೆ ಮಾತ್ರ ಬಂದು ನಿಂತಿದೆ. ಆದರೆ ಆ ಅಷ್ಟು ಪತ್ರಗಳಲ್ಲಿ ಯಾವೊಂದರಲ್ಲಿಯೂ ಯಾರ ಸಹಿಯೂ ಇಲ್ಲ. ಅಪರಾಧ ತನಿಖೆಯ ಸಂಸ್ಥೆಗಳಿಗೆ, ಆ ಪತ್ರಗಳು ಸಾಚಾ ಎಂದು ಸಾಬೀತು ಮಾಡಲು ಕೂಡ ಆಗಿಲ್ಲ. ಅಲ್ಲದೆ, ಆ ಆ ಪತ್ರಗಳನ್ನು ಆ ಆರೋಪಿಗಳ ಕಂಪ್ಯೂಟರುಗಳಲ್ಲಿ, ಅವರಿಗೆ ಗೊತ್ತಾಗದಂತೆ, ದೂರ ಕುಳಿತ ಕೇಡಿಗರು ಯಾರೋ ಬೇಕೆಂದೇ ಸೇರಿಸಿದ್ದಾರೆ ಎಂಬ ವಿಷಯ ಈಗ ಜಾಹೀರಾಗಿದೆ.
ಹಾಗಾಗಿ, 2018ರಿಂದ ಮೊದಲುಗೊಂಡು, ಭೀಮಾ ಕೋರೇಗಾಂವ್–ಎಲ್ಗಾರ್ ಪರಿಷತ್ ಪ್ರಕರಣ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಒಟ್ಟು ಕಾರ್ಯಕಲಾಪವೇ ಒಂದು ದೊಡ್ಡ ಸುಳ್ಳು ಎಂದೂ, ಆ ಪ್ರಕರಣದ ಸಂಚುಗಾರರಲ್ಲಿ ಒಬ್ಬರೆಂದು ಹನಿ ಬಾಬು ಅವರನ್ನು ಹೆಸರಿಸಿರುವುದು ಘೋರವಾದ ಅನ್ಯಾಯವೆಂದೂ, ದೇಶದ ಪ್ರಭುತ್ತ್ವವೇ ನ್ಯಾಯದ ನಡೆಗೆ ತಾನು ಅಡ್ಡಿಯಾಗಿ ನಿಂತಿದೆ ಎಂದೂ ನಾವು ಹೇಳಬೇಕಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್ಐಎ) ಬಾಬು ಅವರನ್ನು ಮುಂಬೈಗೆ ಕರೆಸಿಕೊಂಡು, ಸತತ ಐದು ದಿನಗಳ ಕಾಲ, ಗೊತ್ತುಗುರಿಯಿಲ್ಲದ ವಿಚಾರಣೆ ನಡೆಸಿತು. ಆಮೇಲೆ, 28 ಜುಲೈ 2020ರಂದು, ಅವರನ್ನು ಬಂಧಿಸಿತು.
ಅದಾಗುವುದಕ್ಕೆ ಸಾಕಷ್ಟು ಮುಂಚೆ, 2019ರ ಸೆಪ್ಟೆಂಬರ್ ತಿಂಗಳಲ್ಲಿ, ಪೊಲೀಸರು ನಮ್ಮ ಮನೆಯ ಮೇಲೊಂದು ದಾಳಿ ನಡೆಸಿದ್ದರು. ಬಾಬು ಅವರ ಬಂಧನದನಂತರ, 2020ರ ಆಗಸ್ಟ್ ತಿಂಗಳಲ್ಲಿ, ಇನ್ನೊಮ್ಮೆ ದಾಳಿಮಾಡಿ, ಸುದೀರ್ಘ ಶೋಧ ನಡೆಸಿ, ನಮ್ಮನ್ನು ಹೆದರಿಸಿ ಬೆದರಿಸಿದರು. ಸರಿಯಾದ ಸರ್ಚ್ ವಾರೆಂಟ್ ಇಲ್ಲದೆ, ಸಾಕ್ಷ್ಯಗಳನ್ನು ಕಲೆಹಾಕಲು ಪಾಲಿಸಲೇಬೇಕಾದ ಪ್ರಾಥಮಿಕ ಕಾರ್ಯವಿಧಾನ ಮತ್ತು ನಿಯಮಗಳಲ್ಲಿ ಒಂದನ್ನೂ ಪಾಲಿಸದೆ, ನಡೆಸಿದ ತಮ್ಮ ಆ ಶೋಧದನಂತರ ಪೊಲೀಸಿನವರು ಹನಿ ಬಾಬು ಅವರ ಪುಸ್ತಕ, ಕಾಗದಪತ್ರ ಮತ್ತು ವಿದ್ಯುನ್ಮಾನ ಸಾಧನಗಳನ್ನು ಹೊತ್ತೊಯ್ದರು. ತಾವು ಹೊತ್ತೊಯ್ದ ಆ ಸಾಧನ ಮತ್ತು ವಸ್ತುಗಳನ್ನು ಅವರು ಕೆಡಿಸದೆ, ಜೋಪಾನ ಮಾಡುತ್ತಾರೆ ಎಂಬ ಭರವಸೆ ನಮಗಿಲ್ಲ. ಅವರು ಅವುಗಳಲ್ಲಿ ಯಾವುದಕ್ಕೂ ಸಾಕ್ಷ್ಯತ್ತ್ವದ ಸಂಖ್ಯೆಗಳನ್ನು ಒದಗಿಸಿಲ್ಲ. ಅರ್ಥಾತ್, ಅವರಿಗೆ ಆ ಸಾಧನಗಳಲ್ಲಿನ ಮಾಹಿತಿಗೆ ಕೈಹಾಕಿ ಅದನ್ನು ತಮಗೆ ಬೇಕಾದಂತೆ ತಿರಿಚುವ ಅವಕಾಶ ದೊರಕಿದೆ. ಅದರಿಂದ ಅವುಗಳ ಸಾಕ್ಷ್ಯತ್ತ್ವದ ಮೌಲ್ಯಕ್ಕೆ ಕುಂದುಂಟಾಗಿದೆ.
ಎನ್ಐಎ ಸಂಸ್ಥೆಯು ತಮ್ಮಿಂದ ಜಪ್ತಿಮಾಡಿಕೊಂಡಿರುವ ವಿದ್ಯುನ್ಮಾನ ಸಾಧನಗಳ ಕ್ಲೋನ್ ಪ್ರತಿಗಳನ್ನು ತಮಗೆ ಒದಗಿಸಬೇಕು ಎಂದು ಬಾಬು ಅವರೂ ಸೇರಿದಂತೆ ತಥಾಕಥಿತ ಬಿಕೆ-16 ಎಂಬವರೆಲ್ಲರೂ ಅಧಿಕೃತವಾಗಿ, ತಮ್ಮ ಸಂವಿಧಾನದತ್ತ ಹಕ್ಕಿನ ಭಾಗವಾಗಿ ಕೇಳಿಕೊಂಡಿದ್ದರೂ ಎನ್‍ಐಎ ಸಂಸ್ಥೆಯು ಅವರ ಆ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಅದರಿಂದಾಗಿ ತಾವು ನಿರಪರಾಧಿಗಳು ಎಂದು ಸಾಬೀತು ಮಾಡುವುದು ಅವರಿಗೆ ದುಸ್ಸಾಧ್ಯವಾಗಿದೆ. ಇಂಥಲ್ಲಿ, ಬೇಕೆಂದೇ ತಡಮಾಡುವುದೆಂದರೆ ‘ಕೊಡುವುದಿಲ್ಲ, ಹೋಗಯ್ಯ’ ಎಂದು ಹೇಳಿದಂತೆಯೆ ಅಲ್ಲವೆ?
ಎನ್‍ಐಎ ಅವರು ನಮಗೆ ಆ ಕ್ಲೋನ್ ಪ್ರತಿಗಳನ್ನು ಕೊಡದೆ ಸತಾಯಿಸುತ್ತಿರುವುದು ಯಾಕಿರಬಹುದು? ಆ ಪ್ರಶ್ನೆಗೆ ಉತ್ತರ, ಬಹುಶಃ, ಅಮೆರಿಕೆಯ ಮ್ಯಾಸ್ಸಚುಸೆಟ್ಸ್ ರಾಜ್ಯದಲ್ಲಿರುವ ಆರ್ಸೆನಲ್ ಕನ್ಸಲ್ಟಿಂಗ್ ಎಂಬ ಹೆಸರಿನ ಡಿಜಿಟಲ್ ವಿಧಿವೈಜ್ಞಾನಿಕ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಶೋಧದಲ್ಲಿದೆ. ಹ್ಯಾಕರ್ ಒಬ್ಬನು, ಕೇಡುಮಾಡಲೆಂದೇ ತಯಾರಿಸಿದ ಸಾಫ್ಟ್‍ವೇರನ್ನು ಬಳಸಿ, ತಥಾಕಥಿತ ಬಿಕೆ-16 ಜನರಲ್ಲಿ ಒಬ್ಬರಾದ ರೋನಾ ವಿಲ್ಸನ್ ಅವರ ಲ್ಯಾಪ್‍ಟಾಪಿನಲ್ಲಿ ಕೆಲವು ಕಡತಗಳನ್ನು ತುಂಬಿದನೆಂದೂ ಆ ಕಡತಗಳು ಅಲ್ಲಿಂದ ರೋನಾ ಅವರ ಗೆಳೆಯರ ಲ್ಯಾಪ್‍ಟಾಪ್‍ಗಳಿಗೂ ಹರಡಿಕೊಂಡವು ಎಂದೂ ಆ ಶೋಧವು ಹೇಳುತ್ತದೆ. ಈ ಹದಿನಾರು ಜನರು ಮಾವೋವಾದಿಗಳೊಂದಿಗೆ ಪತ್ರವ್ಯವಹಾರ ನಡೆಸಿದ್ದರು ಎಂದು ಎನ್‍ಐಎ ಮಾಡಿದ ಆರೋಪದ ಬೆಂಬಲಕ್ಕಿರುವ ಒಂದೇ ಸಾಕ್ಷ್ಯವೆಂದರೆ ಸುಳ್ಳಿನ ಆ ಕಡತಗಳು, ಅಷ್ಟೆ. ಆದರೆ ಈಗ, ಆರ್ಸೆನಲ್ ಕನ್ಸಲ್ಟಿಂಗ್ ಅವರ ಶೋಧದಿಂದಾಗಿ, ಆ ಆರೋಪದಲ್ಲಿ ಚೂರೂ ಹುರುಳಿಲ್ಲ ಎನ್ನುವುದು ಬಯಲಾಗಿದೆ.
ಇಷ್ಟಾದರೂ, ನ್ಯಾಯಾಲಯವು ತಾನು ಸ್ವಯಂಪ್ರೇರಿತವಾಗಿ ಇದು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ; ಮೊಕದ್ದಮೆಯ ‘ಸಾಕ್ಷ್ಯ’ಗಳು ಎಂದು ಪ್ರಭುತ್ತ್ವವು ಮುಂದಿಟ್ಟಿರುವ ಮಾಹಿತಿಯ ಸಮಗ್ರ, ಸ್ವತಂತ್ರ ತನಿಖೆಗೆ ಆಗಲಿ, ವಿಧಿವೈಜ್ಞಾನಿಕ ವಿಶ್ಲೇಷಣೆಗೆ ಆಗಲಿ ಆದೇಶ ನೀಡಿಲ್ಲ. ಇದೀಗ ಮಹಾಸೋಜಿಗದ ಸಂಗತಿ. ಪ್ರಜಾಪ್ರಭುತ್ತ್ವವಿರುವ ಯಾವುದೇ ದೇಶದಲ್ಲಿ, ಸತ್ಯಾಸತ್ಯ ವಿವೇಚನೆಯ ಅಂಥ ಕೆಲಸ ತತ್ ಕ್ಷಣವೇ ನಡೆದುಬಿಡುತ್ತದೆ. ಆದರೆ ನಮ್ಮಲ್ಲಿ ಮಾತ್ರ ನ್ಯಾಯಾನ್ಯಾಯ ವಿವೇಚನೆಯ ಕೆಲಸಕ್ಕೆ ಅಡ್ಡಗಾಲುಹಾಕುವ ವಿಳಂಬತಂತ್ರದ ಮೇಲಾಟವೇ ನಡೆಯುತ್ತಿದೆ.
ಹಾಗಾಗಿ, ಈ ದಸ್ತಗಿರಿಗಳೆಲ್ಲವೂ ಒಂದು ಷಡ್ಯಂತ್ರದನುಸಾರ ನಡೆದಿವೆ ಎನ್ನಬೇಕಿದೆ. ಈವರೆಗೆ, ದಸ್ತಗಿರಿಯಾದ ಯಾರೊಬ್ಬರ ವಿರುದ್ಧವೂ ಯಾವುದೇ ನ್ಯಾಯಾಲಯದಲ್ಲಿಯೂ ಆರೋಪಪಟ್ಟಿಯ ಸಲ್ಲಿಕೆಯಾಗಿಲ್ಲ. ಪ್ರತಿಸಲವೂ, ‘ಹೊಸದಾಗಿ ಬಂಧನಕ್ಕೊಳಗಾದವರ ವಿಚಾರಣೆ ನಡೆಯಬೇಕಿದೆ. ಹಾಗೂ ಹೊಸ ಸಾಕ್ಷ್ಯಗಳನ್ನು ಪರೀಕ್ಷಿಸಬೇಕಿದೆ’ ಎಂಬ ನೆವವೊಡ್ಡುತ್ತಲೇ ಆರೋಪಪಟ್ಟಿಯ ಸಲ್ಲಿಕೆಯನ್ನು ಅನಂತಕಾಲ ಮುಂದೂಡುವ ಹುನ್ನಾರ ನಡೆದಿದೆ. ಪ್ರಭುತ್ತ್ವವು ಹೇಳುತ್ತಿರುವ ಸುಳ್ಳುಗಳ ಪರದೆಯ ಹಿಂದಿನ ಸತ್ಯವೆಂದರೆ, ಇದುವೆ.
ಮೇಲಾಗಿ, ಪೊಲೀಸರ ಕೇಸಿನ ಪರವಾಗಿ ತಾವು ಸಾಕ್ಷಿಯಾಗಬೇಕೆಂದು, ಮತ್ತು ಸದರಿ ಮೊಕದ್ದಮೆಯಡಿ ಸೆರೆಯಾದ ಉಳಿದವರಲ್ಲಿ ಕೆಲವರನ್ನು ಕುರಿತು (ಕನಿಷ್ಠ ಪಕ್ಷ ಒಬ್ಬರನ್ನು ಕುರಿತಾದರೂ) ಸುಳ್ಳು ಸಾಕ್ಷ್ಯ ನೀಡಬೇಕೆಂದು ಎನ್‍ಐಎ ಅವರು ತಮ್ಮಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದ್ದನ್ನು ಬಾಬು ಅವರು ನಮ್ಮಲ್ಲಿ ಹೇಳಿಕೊಂಡಿದ್ದಾರೆ. ದಬ್ಬಾಳಿಕೆಯ ಆ ಪ್ರಯತ್ನ ಈ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಉಳಿದವರ ಮೇಲೂ ನಡೆದಿದೆ. ಆದರೆ ಬಾಬು ಅವರಾಗಲಿ, ತಥಾಕಥಿತ ಬಿಕೆ-16 ಗುಂಪಿನ ಉಳಿದವರು ಯಾರೇ ಆಗಲಿ, ಒಬ್ಬರು ಇನ್ನೊಬ್ಬರನ್ನು ಸುಳ್ಳುಸುಳ್ಳೇ ಸಿಕ್ಕುಹಾಕಿಸಲು ಒಪ್ಪದೆ, ನಿಜವಾದ ಋಜುತ್ವವನ್ನು ತೋರಿದ್ದಾರೆ. ಯಾಕೆಂದರೆ, ನಿಜಕ್ಕೂ, ಅವರು ಯಾರೂ ಯಾವ ಅಪರಾಧವನ್ನೂ ಮಾಡದವರು, ನಿಜವಾದ ದೇಶಪ್ರೇಮಿಗಳು.
ಇನ್ನು ಇದು ಕೋವಿಡ್ ಪಿಡುಗಿನ ಕಾಲ. ನಮ್ಮ ಬಂದೀಖಾನೆಗಳಲ್ಲಿ ಪ್ರತಿದಿನವೂ ಹೊಸ ಕೋವಿಡ್ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುತ್ತಿವೆ. ಕೈದಿಗಳು ಸಾಯುತ್ತಿದ್ದಾರೆ ಎಂಬ ವರದಿಗಳಿವೆ. ಮಹಾರಾಷ್ಟ್ರದ ಸೆರೆಮನೆಗಳಲ್ಲಿ ಕೋವಿಡ್-19 ಮಹಾಮಾರಿಯು ಎಗ್ಗಿಲ್ಲದೆ ಹರಡುತ್ತಿರುವುದನ್ನು ಕುರಿತು ಮುಂಬೈನ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿಕೊಂಡಿದೆ. ಈ ಕೋವಿಡ್‍ಮಾರಿ ತಂದೊಡ್ಡಿರುವ ಮಹಾಸಂಕಟವನ್ನು ಲೆಕ್ಕಿಸಿ, ವಿಶ್ವದ ಹಲವು ರಾಷ್ಟ್ರಗಳು, ತಮ್ಮಲ್ಲಿನ ರಾಜಕೀಯ ಕೈದಿಗಳ ಬಿಡುಗಡೆಮಾಡುತ್ತಿವೆ.
ಆದರೆ ನಮ್ಮಲ್ಲಿ ಆಗುತ್ತಿರುವುದೇ ಬೇರೆ. ನಮ್ಮ, ತಥಾಕಥಿತ, ಬಿಕೆ-16 ಜನರು ಜಾಮೀನು ಬೇಡಿ ಮತ್ತೆಮತ್ತೆ ಅರ್ಜಿ ಸಲ್ಲಿಸುತ್ತಿದ್ದರೂ, ಅವೆಲ್ಲವೂ, ಆ ಧೀಮಂತರ ವಯಸ್ಸು ಹಾಗು ಆರೋಗ್ಯದ ಪರಿಸ್ಥಿತಿಯನ್ನು ಕೂಡ ಲೆಕ್ಕಿಸದೆ, ಮತ್ತೆಮತ್ತೆ ತಿರಸ್ಕಾರಗೊಳ್ಳುತ್ತಿವೆ. ಇದೆಲ್ಲ ಮಾನವ ಹಕ್ಕುಗಳ ಎಗ್ಗಿಲ್ಲದ ಉಲ್ಲಂಘನೆಯಲ್ಲದೆ ಮತ್ತೇನು? ವಿಪರ್ಯಾಸವೆಂದರೆ, ನಮ್ಮ ಸರ್ವೋಚ್ಚ ನ್ಯಾಯಾಲಯವು, ಈಚೆಗೆ, ‘ಅಪರಾಧ ಪ್ರಕರಣವು ಎಂಥದೇ ಇರಲಿ, ದಸ್ತಗಿರಿಯಾದವರು ಎಂಥವರೇ ಇರಲಿ, ಅವರ ನ್ಯಾಯಾಂಗ ವಿಚಾರಣೆಯು ತ್ವರಿತವಾಗಿ ನಡೆದು ಮುಗಿಯಬೇಕು. ಅದು ಹಾಗಾಗಬೇಕಾದದ್ದು ಅವರ ಮೂಲಭೂತ ಹಕ್ಕು. ಆ ಹಕ್ಕು ಯುಎಪಿಎ ಕಾಯಿದೆಯಡಿಯಲ್ಲಿ ಬಂಧಿತರಾದವರಿಗೂ ಇದೆ’ ಎಂದು ಬಹಳ ಸ್ಪಷ್ಟವಾಗಿ ಘೋಷಿಸಿದೆ.
ದೇಶದ ಅತ್ಯುನ್ನತ ನ್ಯಾಯಾಲಯವೇ ಹಾಗೆಂದು ಹೇಳಿರುವಾಗ, ಬಾಬು ಅಂಥವರು ಮತ್ತು ತಥಾಕಥಿತ ಬಿಕೆ-16 ಗುಂಪಿನ ಉಳಿದೆಲ್ಲ ಧೀಮಂತರು, ಭಾರತದ ಸಂವಿಧಾನವು ನಮ್ಮೆಲ್ಲರಿಗೆ ಕೊಟ್ಟಿರುವ ಪ್ರಜಾಪ್ರಭುತ್ತ್ವದ ಹಕ್ಕುಗಳಲ್ಲಿ ನಂಬಿಕೆಯಿಟ್ಟು ಅವುಗಳನ್ನು ಎತ್ತಿಹಿಡಿದ ಮಾತ್ರಕ್ಕೆಯೆ ಸೆರೆಯಾಗಿ, ನ್ಯಾಯಾಂಗ ವಿಚಾರಣೆಯ ಕಷ್ಟನಷ್ಟಗಳಿಗೆ ತುತ್ತಾಗಬೇಕಾದದ್ದು ನಮ್ಮ ಪಾಲಿನೊಂದು ಥರದ ಯಾತನೆಯಾದರೆ, ಆ ವಿಚಾರಣೆಯ ನೆವದಲ್ಲಿ ನ್ಯಾಯದೇವತೆಗೆ ಹೇಳತೀರದ ಅಪಚಾರವಾಗುವುದನ್ನು ಕಣ್ಣಾರೆ ಕಾಣುತ್ತ ನಾವೆಲ್ಲ ಕೊರಗಬೇಕಾದದ್ದು, ಬಲಿಯಾಗಬೇಕಾದದ್ದು ಮತ್ತೊಂದು ಥರದ ಯಾತನೆ.
ತಮ್ಮ ಕೇಸನ್ನು ಕುರಿತಂತೆ ನ್ಯಾಯಾಂಗ ವಿಚಾರಣೆಯ ಶುರುವು ಕೂಡ ಆಗದೆ, ಅದು ‘ಈಗ ಆಗಬಹುದು, ಆಗ ಆಗಬಹುದು’ ಎಂದು ಕಾಯುತ್ತ, ತಮ್ಮ ನೆಂಟರಿಷ್ಟರನ್ನು, ಕ್ಷಣ ಕೂಡ, ಕಾಣಲಾಗದೆ, ಅವರೊಡನೆ ಮಾತನಾಡಲಾಗದೆ, ಅವರಿಗೆ ಪತ್ರ ಬರೆಯಲಾಗದೆ, ದಿನದಿನದ ಬದುಕಿಗೆ ಬೇಕೇಬೇಕಾದ ಸರಳ ಸಾಮಾನ್ಯ ಸಲಕರಣೆಗಳಿಗಾಗಿ ಕೂಡ ಪ್ರಭುತ್ತ್ವದ ಅಧಿಕಾರಿಗಳಲ್ಲಿ, ಮತ್ತೆಮತ್ತೆ, ದೈನ್ಯತೆಯಿಂದ ಬೇಡಿಕೊಳ್ಳಬೇಕಾಗುತ್ತ, ಸೆರೆಮನೆಯಲ್ಲಿಯೆ ಕೊಳೆಯಬೇಕಾದ ಕೈದಿಗಳಿಗೆ ಆಗುವ ಮಾನಸಿಕ ಹಿಂಸೆ ಇದೆಯಲ್ಲ, ಅದು ಸೆರೆಮನೆಯ ಹೊರಗಿರುವ ನಮಗೆ ಆಗುವ ಹಿಂಸೆಗಿಂತ ಎಷ್ಟೋ ಪಟ್ಟು ಮಿಗಿಲು. ಬಣ್ಣಿಸಲು ಮಾತು ಸಾಲದು.
ನ್ಯಾಯಾಂಗದ ಕಲಾಪವೇ ಶಿಕ್ಷೆಯಾಗುವುದು ಇನ್ನಾದರೂ ತಪ್ಪಲಿ ಎಂದು ಪ್ರಾರ್ಥಿಸುತ್ತ, ಹನಿ ಬಾಬು ಅವರ ಕುಟುಂಬದವರಾದ ನಾವು ಮಾಡುತ್ತಿರುವ ಮನವಿ ಇದು:
1) ಈ ಪ್ರಕರಣದ ಆರೋಪಿಗಳಿಗೆಲ್ಲರಿಗೂ, ಈಕೂಡಲೆ, ಮೇಲೆ ಹೇಳಿರುವ ಕ್ಲೋನ್ ಪ್ರತಿಗಳಂಥವು ಸೇರಿದಂತೆ, ಅವರು ಕೇಳುವ ಎಲ್ಲ ಸಾಕ್ಷ್ಯಗಳೂ ಸಿಗುವಂತಾಗಬೇಕು. ಆಗ ಆ ಪ್ರತಿವಾದಿ ಪಕ್ಷದವರಿಗೆ ಆ ಸಾಕ್ಷ್ಯಗಳ ಸತ್ಯಾಸತ್ಯದ ಸ್ವತಂತ್ರ ತನಿಖೆಗೆ ಅವಕಾಶ ಒದಗಿದಂತಾಗಿ, ವಿಚಾರಣೆಯ ಕಲಾಪವು ಆದಷ್ಟು ಬೇಗ ಶುರುವಾಗಲು ಅನುವಾಗುತ್ತದೆ.
2) ಆರೋಪಿಗಳೆಲ್ಲರಿಗೂ ಅವರವರ ವಿಚಾರಣೆ ಶುರುವಾಗುವವರೆಗೂ, ಕಾನೂನಿನ ನೀತಿನಿಯಮಗಳ ಅನುಸಾರವಾಗಿ, ತತ್ ಕ್ಷಣವೇ ಜಾಮೀನು ಸಿಕ್ಕಬೇಕು.
ಇಲ್ಲದಿದ್ದರೆ, ಅದು ಈಗಾಗಲೆ ಹಾಗೆ ಆಗಿಲ್ಲ ಎಂದಿಟ್ಟುಕೊಂಡರೂ, ನಮ್ಮ ನ್ಯಾಯಾಂಗ ವ್ಯವಸ್ಥೆಯು ತಾನೇ, ಮತ್ತು ಬೇಕೆಂದೇ, ನ್ಯಾಯದೇವತೆಯನ್ನು ಗಿರಗಿಟ್ಟಲೆ ತಿರುಗಿಸಿ, ದಿಕ್ಕೆಡಿಸುತ್ತಿದೆ ಎಂಬ ಅಪವಾದಕ್ಕೆ ಒಳಗಾಗಬೇಕಾಗುತ್ತದೆ.
05 ಮೇ 2021
ಸಹಿಮಾಡಿದವರು:
ಜೆನ್ನೀ (ಹೆಂಡತಿ)
ಫಾತಿಮಾ (ತಾಯಿ)
ಫರ್ಜಾ಼ನಾ (ಮಗಳು)
ಹ್ಯಾರಿಶ್, ಹಾಗೂ ಅನ್ಸಾರಿ (ಒಡಹುಟ್ಟಿದವರು)



ಬೀಮಾ ಕೋರೆಗಾವ್ ಪ್ರಕರಣದ ಎಲ್ಲಾ 16 ಬಂದಿತರಿಗೂ ಈ ಕೂಡಲೇ ಜಾಮೀನು ದೊರಕಬೇಕು.