ಉತ್ತರ ಭಾರತ ವಾಯುಮಾಲಿನ್ಯದಿಂದ ತತ್ತರಿಸಿದೆ. ಮೃತ್ಯುಕೂಪಕ್ಕೆ ತಳ್ಳುತ್ತಿರುವ, ಸಾರ್ವಜನಿಕರ ಉಸಿರಾಟಕ್ಕೆ ವಾಯು ಮರಣ ಶಾಸನ ಬರೆದಂತಿದೆ. ಒಂದು ವಾರದಿಂದ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನತೆ ವಾಯುಮಾಲಿನ್ಯದಿಂದ ಹೈರಾಣಾಗಿದ್ದಾರೆ. ವಿಷಕಾರಿ ದಟ್ಟ ಹೊಗೆ ಎಲ್ಲೆಡೆ ಆವರಿಸಿದೆ.
ಹೆಚ್ಚಿದ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಹೇಗಪ್ಪಾ ಅಂತಾ ಸರ್ಕಾರಗಳು ತಲೆಕೆಡಿಸಿಕೊಂಡಿವೆ. ಈ ಮಧ್ಯೆ ಆಗ್ರಾದಲ್ಲಿ ಎರಡು ವಾಯು ಶುದ್ಧೀಕರಣ ಯಂತ್ರಗಳನ್ನು ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ಎದುರು ಇರಿಸಲಾಗಿದೆ. ಆಗ್ರಾ ಸುತ್ತಮುತ್ತ ವಾಯು ಹೆಚ್ಚು ಮಲಿನವಾಗಿದ್ದು, ಉಸಿರಾಟಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಮಾಲಿನ್ಯದಿಂದ ವಾಸಕ್ಕೆ ಯೋಗ್ಯವಲ್ಲದಷ್ಟು ಹದಗೆಟ್ಟ ದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಛೀಮಾರಿ…
ಆಗ್ರಾ ಮುನಿಸಿಪಲ್ ಕಾರ್ಪೋರೇಷನ್ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಕೆ.ರತಿ ಮಾತನಾಡಿ, ವಾಯು ಶುದ್ಧೀಕರಣ ಯಂತ್ರಗಳನ್ನು ತಾಜ್ ಮಹಲ್ ನ ಗೇಟ್ ಬಳಿ ಅಳವಡಿಸುವಂತೆ ಏಜೆನ್ಸಿಗೆ ನಿರ್ದೇಶಿಸಲಾಗಿದೆ. ಪ್ರತಿನಿತ್ಯ ತಾಜ್ ಮಹಲ್ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಆರೋಗ್ಯ ಮತ್ತು ಉಸಿರಾಟಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇನ್ನು ವಾರದಿಂದ ವಾಯುಮಾಲಿನ್ಯದಿಂದ ಉತ್ತರ ಭಾರತ ನಲುಗುತ್ತಿದೆ. ವಿಷಗಾಳಿ ಸೇವನೆ, ಜನರನ್ನು ತಲ್ಲಣಗೊಳಿಸಿದೆ. ದಟ್ಟ ಹೊಗೆ ಆವರಿಸಿದ್ದು, ಮನೆ ಒಳಗೆ ಮತ್ತು ಹೊರಗೆ ಜನರ ಓಡಾಟ ದುಸ್ತರವಾಗಿದೆ.
ಇಂತಹ ಪ್ರತಿಕೂಲ ಸ್ಥಿತಿಯಲ್ಲಿ ಮಾಲಿನ್ಯ ನಿಯಂತ್ರಕ ಯಂತ್ರಗಳಿಗೆ ಬಹುಬೇಡಿಕೆ ಬಂದಿರುವುದು ಅಚ್ಚರಿ ಹುಟ್ಟಿಸಿದೆ.


