ಕರ್ನಾಟಕ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದಷ್ಟೇ ತರಾತುರಿಯಲ್ಲಿ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನೂ ಮಾಡಿದೆ. ಆ ಮೂಲಕ ಭಾರತೀಯ ಸಂವಿಧಾನಕ್ಕೆ ನೇರ ಅಪಮಾನ ಮಾಡುತ್ತಿದೆ ಎಂದು ಸಂಶೋಧನಾರ್ಥಿಗಳ ಬಳಗ ಆಕ್ಷೇಪ ವ್ಯಕ್ತಪಡಿಸಿದೆ.
ಪಠ್ಯಪುಸ್ತಕ ಪುನರ್ ಪರಿಶೀಲನಾ ಸಮಿತಿಯು ತಮ್ಮ ದಿಕ್ಸೂಚಿ ಬರೆಹದಲ್ಲಿ “ಭಾಷಾಪಠ್ಯವಿರುವುದು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ” ಎಂದು ಹೇಳುವ ಮೂಲಕ ಸಂವಿಧಾನದ ಮೂಲಭೂತ ಆಶಯಗಳನ್ನೇ ವ್ಯಂಗ್ಯವಾಡಿದೆ ಎಂದು ದೂರಲಾಗಿದೆ.
ಯಾವುದೇ ಪಠ್ಯಪುಸ್ತಕದಲ್ಲಿ ಅಥವಾ ಯಾವುದೇ ಭಾರತೀಯರಲ್ಲಿ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯ ಆಶಯಗಳು ಒಂದು ಮೌಲ್ಯವಾಗಿ ಹುದುಗಿರಲೇಬೇಕು. ಅದು ಇದ್ದಲ್ಲಿ ಮಾತ್ರ ಆತ/ಆಕೆ ನಿಜವಾದ ಅರ್ಥದಲ್ಲಿ ಮನುಷ್ಯರಾಗುವುದಕ್ಕೆ ಸಾಧ್ಯ. ಭಾರತೀಯ ಸಂವಿಧಾನವೇ ಪ್ರತಿಪಾದಿಸಿರುವ ಈ ಪ್ರಧಾನ ಮೌಲ್ಯಗಳನ್ನು ಸದರಿ ಸಮಿತಿಯು ‘ತುರುಕುವುದು’ ಎಂದು ಹೇಳುವ ಮೂಲಕ ಅಪಮಾನ ಮಾಡುತ್ತಿದೆ ಎಂದು ಸಂಶೋಧನಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ಪ್ರಕರಣದಿಂದ ವ್ಯಾಪಕ ಜನಾಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಸರ್ಕಾರವು ಪಠ್ಯ ಪುನರ್ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆಗಳನ್ನು ನಿಯಮಿತವಾಗಿ ನೋಡಿಕೊಳ್ಳುವ ಒಂದು ಸ್ವಾಯತ್ತ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಈ ಪ್ರಾಧಿಕಾರದಲ್ಲಿ ಅಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾಗುವವರು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ಆಗಿರಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ.
ಈ ಪ್ರಕ್ರಿಯೆ ನಡೆದು ಪೂರ್ಣವಾಗುವವರೆಗೆ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದ ಪಠ್ಯಕ್ರಮವನ್ನೇ ಊರ್ಜಿತದಲ್ಲಿರಿಸಿಕೊಳ್ಳಬೇಕು ಎಂದು ಸಂಶೋಧನಾರ್ಥಿಗಳ ಪರವಾಗಿ ರಂಗಸ್ವಾಮಿ ಹೆಚ್, ಪ್ರಭುಕುಮಾರ್ ಪಿ, ಗೋವಿಂದರಾಜು ಎಂ ಕಲ್ಲೂರು, ಶ್ರೀಧರ ಆರ್ ವಿ,
ಅಮರ್ ಬಿ, ಶಶಾಂಕ್ ಎಸ್ ಆರ್ ಮತ್ತಿತರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪಠ್ಯ ತಿರುಚೀಕರಣ ವಿವಾದ: ‘ಅಂದು’ ಮತ್ತು ‘ಇಂದು’ ಏನಾಗಿದೆ ಎಂದು ನೋಡೋಣ ಬನ್ನಿ!


