ವಾಲ್ಮೀಕಿ ಜಯಂತಿಯು ಈ ಮೊದಲು ಬೇಡ, ವಾಲ್ಮೀಕಿ, ನಾಯಕ ಸಮುದಾಯಗಳ ಆಚರಣೆಯಾಗಿತ್ತು. ಆದರೆ ಈಗ ಈ ಸಮುದಾಯಗಳ ಜೊತೆಗೆ 50 ಬುಡಕಟ್ಟು ಸಮುದಾಯಗಳು ಸೇರ್ಪಡೆಯಾಗಿ ಎಲ್ಲಾ ಸಮುದಾಯಗಳ ಆಚರಣೆಯಾಗುತ್ತಿದೆ. ಇದರಲ್ಲಿಯೂ ಮುಂಚೂಣಿ ಪ್ರಬಲ ಜಾತಿಗಳಿಗೆ ಸೀಮಿತವಾದ ಮೀಸಲಾತಿ ಅರಣ್ಯವಾಸಿ, ಆದಿವಾಸಿ ಬುಡಕಟ್ಟು ಸಮುದಾಯಗಳಿಗೂ ಹಂಚಿಕೆಯಾಗಬೇಕು. ಆಗ ಈ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ಮಂಡಲಗೇರಾ ಹೇಳಿದ್ದಾರೆ.
ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಾಲ್ಮೀಕಿ ಸಮುದಾಯ ಪ್ರಸ್ತುತ ಶೇಕಡ 7ರಷ್ಟು ಮೀಸಲಾತಿ ಪಡೆಯುತ್ತಿವೆ. ಪರಿಶಿಷ್ಠ ಪಂಗಡದಲ್ಲಿರುವ ಇನ್ನಿತರ ಕಾಡು ಮೇಡುಗಳಲ್ಲಿ ವಾಸಿಸುವ ಅರಣ್ಯವಾಸಿ, ಆದಿವಾಸಿ ಬುಡಕಟ್ಟು ಸಮುದಾಯಗಳು ಮೀಸಲಾತಿ ಸಿಗದೆ ವಂಚಿತವಾಗಿವೆ. ಈಗಿರುವ 7 ಶೇಕಡ ಮೀಸಲಾತಿಯಲ್ಲಿ ಮತ್ತೆ ಕುರುಬ ಸಮುದಾಯವನ್ನು ಸೇರಿದರೆ ಅಲ್ಲಿರುವ ಆದಿವಾಸಿ, ಅಲೆಮಾರಿ, ಬುಡಕಟ್ಟು ಸಮುದಾಯಗಳು ಮೀಸಲಾತಿಯಿಂದ ಮತ್ತಷ್ಟು ಸಂಪೂರ್ಣ ವಂಚಿತವಾಗುವ ಸಾಧ್ಯತೆಯಿದೆ. ಈಗಿರುವ ಮೀಸಲಾತಿ ಆ ಸಮುದಾಯಗಳಿಗೆ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ಈಗ ಮತ್ತೆ ಬಲಿಷ್ಠ ಜಾತಿಗಳನ್ನು ಸೇರಿಸುವುದರಿಂದ ಮತ್ತಷ್ಟು ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ ಸಿಎಂ ಸಿದ್ಧರಾಮಯ್ಯ ಅವರು ಸ್ವಜಾತಿ ಪ್ರೇಮ ಬಿಟ್ಟು ಸಾಮಾಜಿಕ ನ್ಯಾಯದ ಬಗ್ಗೆ ಯೋಚಿಸಬೇಕಿದೆ ಎಂದಿದ್ದಾರೆ.
ಸಾಮಾಜಿಕ ಹರಿಕಾರ, ಅಹಿಂದ ನಾಯಕ ಎಂದು ಹೇಳುವ ಸಿದ್ದರಾಮಯ್ಯನವರೇ, ಈಗಾಗಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಯಲ್ಲಿ ನೀವು ಮಾಡಿರುವ ಮೋಸ ಯಾರೂ ಮರೆಯುವ ಹಾಗಿಲ್ಲ. ಬಸವಣ್ಣನ ಮಾರ್ಗ ಅನುಸರಿಸುತ್ತೇನೆಂದು ಹೇಳುವ ನೀವು, ಪ್ರಬಲ ಜಾತಿಗಳ ಸಚಿವರಿಗೆ ಮಂಡಿಯೂರಿ ಅಲೆಮಾರಿಗಳಿಗೆ ಸಿಗಬೇಕಾದ 1 ಶೇಕಡ ಮೀಸಲಾತಿ ಕಿತ್ತುಕೊಂಡಿದ್ದೀರಿ. ಈ ಮೂಲಕ ಅ ಸಮುದಾಯಗಳು ಮೀಸಲಾತಿಯಿಂದ ಮುಂದೆಯೂ ವಂಚಿತರಾಗಲು ದಾರಿ ಮಾಡಿಕೊಟ್ಟಿದ್ದಿರಿ. ಅಲೆಮಾರಿಗಳನ್ನು ಬೀದಿಗೆ ತಳ್ಳಿ, ಅವರಿಗೆ ತಮಗೆ ಸಿಗಬೇಕಾದ 1 ಶೇಕಡ ಮೀಸಲಾತಿಗಾಗಿ ದೆಹಲಿ ತನಕ ಹೋಗುವಂತೆ ಮಾಡಿದ್ದೀರಿ. ಈಗ ಪರಿಶಿಷ್ಟ ಪಂಗಡಗಳ ಮೀಸಲಾತಿಯ ವಿಚಾರದಲ್ಲೂ ಹಾಗೆ ಮಾಡದೇ ಎಚ್ಚರ ವಹಿಸಿರಿ, ಜಾತಿ ಪ್ರೇಮ ಬಿಟ್ಟು ಹೊರ ಬನ್ನಿ ಎಂದು ಲಕ್ಷ್ಮಣ ಮಂಡಲಗೇರಾ ಒತ್ತಾಯಿಸಿದ್ದಾರೆ.
ವಾಲ್ಮೀಕಿ ಜಯಂತಿ ಬರೀ ವಾಲ್ಮೀಕಿ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಗಳ ಜಯಂತಿಯಾಗಬೇಕು. ಮಹರ್ಷಿ ವಾಲ್ಮೀಕಿ ಒಬ್ಬ ಮಹಾನ್ ಆದಿ ಕವಿ. ರಾಮಾಯಣ ಮೂಲಕ ರಾಮನನ್ನು ಸೃಷ್ಟಿಸಿದ್ದು ಇದೇ ಕವಿ. ಆದರೆ, ಇವತ್ತು ಅದೇ ರಾಮನ ಹೆಸರು ಹೇಳಿಕೊಂಡು ಅಧಿಕಾರ ಹಿಡಿದವರು ಸಮುದಾಯವನ್ನು ಎಲ್ಲಿ ಇಟ್ಟಿದ್ದಾರೆ ಎನ್ನುವುದನ್ನು ಸಮುದಾಯದ ಯುವಕರು, ಮುಖಂಡರು, ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರ ಇದ್ದರೂ, ಸಮುದಾಯಗಳು ಅಭಿವೃದ್ಧಿ ಕಾಣದೆ ಇರುವುದು ದುರಂತ. ಸಮುದಾಯ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ನೂರಾರು ಕೋಟಿ ಹಗರಣ ನಡೆದರೂ ತುಟಿ ಬಿಚ್ಚದ ಸಮಾಜದ ಮುಖಂಡರು, ಸಚಿವರು, ಶಾಸಕರು ಮೀಸಲಾತಿ ಹೆಸರಿನಲ್ಲಿ ಅಧಿಕಾರ ಹಿಡಿದವರು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದನ್ನು ಸಮುದಾಯದ ಯುವಕರು ಪ್ರಶ್ನಿಸುವಂತಾಗಬೇಕು. ಶಿಕ್ಷಣ, ಸಂಘಟನೆಯಲ್ಲಿ ಮುಂದೆ ಬರಬೇಕು ಎಂದು ಹೇಳಿದ್ದಾರೆ.
ನಕಲಿ ಜಾತಿಪ್ರಮಾಣ ಪತ್ರಗಳು ಹಿಡಿದು ಸಮುದಾಯಗಳನ್ನು ತುಳಿಯುವ ಕೆಲಸ ನಡೆಯುತ್ತಿದೆ. ಆದರೆ, ಇದರ ಬಗ್ಗೆ ಯಾರೂ ಮಾತಾಡಲು ತಯಾರಿಲ್ಲ. ಸಮಾಜದ ಯುವಕರು ಕೇಸರಿ ಭಯೋತ್ಪಾದಕರಿಂದ ಅಂತರ ಕಾಯ್ದುಕೊಂಡು ರಾಮನ ಜಪ ಬಿಟ್ಟು, ಇಂಥ ವಿಷಯಗಳ ಬಗ್ಗೆ ಜಾಗೃತಿ ಮಾಡಿಸುವ ಕೆಲಸಕ್ಕೆ ಮುಂದಾಗಬೇಕು. ಆರ್‌ಎಸ್ಎಸ್, ಬಿಜೆಪಿಗಳಂತಹ ದೇಶದ್ರೋಹಿ ಸಂಘಟನೆಗಳ ಕಾಲಾಳುಗಳಾಗಿ ಬದುಕನ್ನು ಹಾಳು ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು ಎಂದಿದ್ದಾರೆ.
ಯುವಜನರು ಅತಿ ಹೆಚ್ಚು ಈ ಸಮುದಾಯದಿಂದ ಹಿಂದೆ ಸರಿಯುತ್ತಿರುವುದರ ಬಗ್ಗೆ ಸಂಬಂಧಪಟ್ಟವರು ಅಧ್ಯಯನ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಸಮಾಜದ ಯುವಕರು ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗಕ್ಕೆ ಮುಂದಾಗಬೇಕು. ಆಗ ಮಾತ್ರ ಬುಡಕಟ್ಟು ಸಮುದಾಯಗಳು, ದಮನಿತ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಲಕ್ಷ್ಮಣ ಮಂಡಲಗೇರಾ ಅಭಿಪ್ರಾಯಪಟ್ಟಿದ್ದಾರೆ.
‘ಯಾರ ಅನ್ನದ ತಟ್ಟೆಗೂ ಕೈ ಹಾಕಬಾರದು..’; ಕುರುಬ ಸಮುದಾಯದ ಎಸ್‌ಟಿ ಬೇಡಿಕೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ