ನಮ್ಮ 30 ವರ್ಷಗಳ ಹೋರಾಟದ ಫಲವಾಗಿ ಇಂದು ಒಂದು ಹಣ್ಣು ಸಿಗುತ್ತಿದೆ, ಅದನ್ನು ನಾವು ಕಳೆದುಕೊಳ್ಳಬಾರದು. ಒಳ ಮೀಸಲಾತಿ ಸಂಬಂಧ ಜಸ್ಟೀಸ್ ನಾಗಮೋಹನ್ ದಾಸ್ ನೀಡಿರುವ ವರದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಕೊಂಡು ಜಾರಿಗಾಗಿ ಆಗ್ರಹಿಸಬೇಕು ಎಂದು ಹಿರಿಯ ಕಲಾವಿದರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರಾದ ಪಿಚ್ಚಳ್ಳಿ ಶ್ರೀನಿವಾಸ್ ಸಲಹೆ ನೀಡಿದರು.
ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಇದೇ ಮಳೆಗಾಲ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಪ್ರೀಢಂ ಪಾರ್ಕಿನಲ್ಲಿ ನಡೆಯುತ್ತಿರುವ ಅಹೋರಾತ್ರಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಒಳಮೀಸಲಾತಿಗೆ ಸಂಬಂಧಿಸಿದ ಜಸ್ಟೀಸ್ ನಾಗಮೋಹನ ದಾಸ್ ನೀಡಿರುವ ವರದಿಯ ಸಾಧಕ-ಬಾಧಕಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅಧಿಕೃತವಲ್ಲ. ವರದಿಯಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವೆಲ್ಲವನ್ನೂ ಕೂಡ ಹೊಲೆಯ-ಮಾದಿಗ ಸೇರಿದಂತೆ ಅಸ್ಪೃಶ್ಯ ಕುಲಗಳೆಲ್ಲಾ ಒಟ್ಟಿಗೆ ಕೂರು ಮಾತನಾಡಿಕೊಳ್ಳಬೇಕು. ನಮಗೆಲ್ಲಾ ಒಪ್ಪಿತ ವರದಿಯನ್ನು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಬೇಕಿದೆ” ಎಂದು ಕಿವಿಮಾತು ಹೇಳಿದರು.
“ಒಳ ಮೀಸಲಾತಿ ಜಾರಿಗಾಗಿ ಆರಂಭವಾಗಿರುವ ಈ ಧರಣಿಯಯನ್ನು ನಾವು ಮುಂದುವರಿಸಬೇಕಿದೆ. ಹಾಗಾಗಿ, ಎಲ್ಲಿವರೆಗೂ ಮುಂದುವರಿಉಯುತ್ತದೆಯೋ ಅಲ್ಲಿವರೆಗೂ ನಾವು ನಮ್ಮ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಈ ಹೋರಾಟದಲ್ಲಿ ಕಾರ್ಯಕರ್ತರಾಗಿ ತನು, ಮನ, ಧನವನ್ನು ಸಲ್ಲಿಸಬೇಕಾಗಿದೆ” ಎಂದರು.
“ನಾನು ಕಲಾವಿದನಾಗಿ ಇಡೀ ರಾಜ್ಯದ ಹಳ್ಳಿಗಳಲ್ಲಿ ದಸಂಸ ವಿಚಾರಗಳನ್ನು ಮನೆಮನಗಳನ್ನು ಮುಟ್ಟಿಸಿದ್ದೇನೆ. ಈ ತರಹದ ಸಾಮಾಜಿಕ ಜವಾಬ್ದಾರಿಯನ್ನು ನಾವು ಸಂಘಟನೆ ಮುಖಾಂತರವೇ ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ವಿಶೇಷವಾಗಿ, 30 ವರ್ಷಗಳ ಫಲವಾಗಿ ಇಂದು ಒಂದು ಹಣ್ಣು ಸಿಗುವ ಸಂದರ್ಭದಲ್ಲಿ ನಾವು ಕಳೆದುಕೊಳ್ಳಬಾರದು. ನಮ್ಮ ಹಕ್ಕು ಪಡೆದುಕೊಳ್ಳುವ ಸಲುವಾಗಿ, ಸಣ್ಣಪುಟ್ಟ ಮನಸ್ಥಾಪಗಳನ್ನು ಪಕ್ಕಕ್ಕೆ ಇಡಬೇಕಾಗಿದೆ. ನಾನು ಈ ಹೋರಾಟದಲ್ಲಿ ಪೂರ್ಣಪ್ರಮಾಣದಲ್ಲಿ ಭಾಗವಹಿಸುತ್ತೇನೆ” ಎಂದು ಅವರು ಘೋಷಿಸಿದರು.


