Homeಮುಖಪುಟಹಳತು-ವಿವೇಕ; 'ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?' ಚೆನ್ನವೀರ ಕಣವಿ ಅವರ ಸಂದರ್ಶನ

ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ

- Advertisement -
- Advertisement -

ಇದು ನವೆಂಬರ್ 11, 2002ರಲ್ಲಿ ಸಾಹಿತಿ-ವಿಮರ್ಶಕ ರಹಮತ್ ತರೀಕೆರೆ ಅವರು ಚೆನ್ನವೀರ ಕಣವಿ ಅವರ ಜೊತೆ ನಡೆಸಿದ ಮಾತುಕತೆ. ಈ ಸಂದರ್ಶನವನ್ನು ರಹಮತ್ ತರೀಕೆರೆ ಅವರು ಮಾಡಿರುವ ಸಂದರ್ಶನಗಳ ಸಂಕಲನ “ಲೋಕ ವಿರೋಧಿಗಳ ಜತೆಯಲ್ಲಿ” ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

ಪ್ರ: ನಿಮ್ಮ ಮೊದಲ ಕವಿತೆಗಳಲ್ಲಿ ಒಂದಾದ ’ಭಾವಜೀವಿ’ಯಲ್ಲಿ, ಹಳ್ಳಿಯ ಮಧುರ ನೆನಪುಗಳೆಲ್ಲ ಭಾವುಕವಾಗಿ  ಬರ್‍ತಾವೆ. ಅವು ಉಸಿರು ಕಟ್ಟುವಂತಹ ನಾಗರಿಕ ಸಮಾಜ ದೊಳಗೆ ಬದುಕುತ್ತಿರುವ ಭಾವುಕ ವ್ಯಕ್ತಿಯ ಹಳಹಳಿಕೆಗಳ ಹಾಗೆ ಕೂಡ ಕಾಣ್ತಾವೆ. ಹಳ್ಳಿಯ ನೆನಪುಗಳು ಯಾಕೆ ನಿಮಗೆ ಅಷ್ಟು ಮುಖ್ಯವಾದವು?

ಉ: ಇದು ಬಹಳ ಮಹತ್ವದ ಅಂಶ ನನ್ನ ಕಾವ್ಯದಲ್ಲಿ. ಯಾಕಂದರೆ ನಾನು ಬಾಲ್ಯವನ್ನು ಕಳೆದದ್ದು ಗದಗ ತಾಲೂಕಿನ ಚಿಕ್ಕ ಹಳ್ಳಿಗಳಲ್ಲಿ. ಹೊಂಬಳ ನನ್ನ ತಾಯಿ ತೌರುಮನೆ. ಶಾಸನಗಳಲ್ಲಿ ಪೊಂಬೊಳಲ್ ಅಂತ ಆದರ ಹೆಸರು. ಅಲ್ಲಿ ನಾನು ಹುಟ್ಟಿದ್ದಷ್ಟೆ. ಆಮೇಲೆ ನಾನು ಬೆಳೆದದ್ದು ಬಾಲ್ಯ ಕಳೆದದ್ದು ಶಿರುಂದ ಗ್ರಾಮದಲ್ಲಿ. ಅದು ಗದಗ ಮತ್ತೆ ಶಿರಹಟ್ಟಿ ನಡುವೆ ಇದೆ. ಅಲ್ಲಿ ನಮ್ಮ ತಂದೆಯವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ತಂದೆಯವರೇ ನನಗೆ ಶಿಕ್ಷಕರು. ಆವಾಗೆಲ್ಲ ಏಕೋಪಾಧ್ಯಾಯ ಶಾಲೆಗಳೆ. ಎಲ್ಲಾ ವರ್ಗಗಳಿಗೆ ಎಲ್ಲಾ ವಿಷಯಗಳನ್ನು  ಅವರೊಬ್ಬರೆ  ಹೇಳೋರು.  ತಂದೆಯವರ ಒಂದು ಸ್ವಭಾವ ಅಂದ್ರೆ ಬಹಳ ನಿಷ್ಟೆಯಿಂದ ತಮ್ಮ ಕರ್ತವ್ಯ ನೆರವೇರಿಸೋದು. ಮನೆಯಲ್ಲಿ ಹಿಂದಿನ ಕಾಲದ ಪುರಾಣಗಳನ್ನ, ನಿಜಗುಣ ಶಿವಯೋಗಿಗಳ, ಬಾಲಲೀಲಾ ಮಹಾಂತಯೋಗಿಗಳ ತತ್ವಪದಗಳನ್ನ ಓದ್ತಾ ಇದ್ದರು. ಅಲ್ಲೇ ಮುಳುಗುಂದ ಅಂತ ಹತ್ತಿರದ ಊರು. ನಯಸೇನನ ಊರದು. ಅಲ್ಲಿ ಇನ್ನೊಬ್ಬ ಶಿಕ್ಷಕರಿದ್ದರು. ಅವರಿಂದ ಗುರುದೀಕ್ಷೆ ತೆಗದುಕೊಂಡಿದ್ದರು. ಈಗ ನನಗೆ ಆಶ್ಚರ್ಯ ಆಗ್ತದೆ. ಆ ಕಾಲಕ್ಕೇನೆ ಅವರು ಇಷ್ಟಲಿಂಗದ ಪೂಜೆಯನ್ನು ಬಿಟ್ಟರೆ ಉಳಿದ ಯಾವ ದೇವರಿಗೂ ಹೋಗ್ತಿರಲಿಲ್ಲ. ಎರಡು ಹೊತ್ತು ಸ್ನಾನ ತಮ್ಮ ಪೂಜೆ. ಅಷ್ಟು ಮಾಡಕೊಂಡಿರೋರು.  ಇಡೀ ಊರಿಗೆ ಒಂದು ದೃಷ್ಟಿಯಿಂದ ಗುರುಗಳ ಹಾಗೆ ಇದ್ದರು. ಸಣ್ಣಹಳ್ಳಿ ಅದು. ನಮ್ಮ ಮನೆಯ ಎಡಕ ಬಲಕ ಒಕ್ಕಲುತನದ ಜನ. ನಮ್ಮ ಹಳ್ಳಿಯ ವೈಶಿಷ್ಟ್ಯ ಏನಂದರೆ, ಎಲ್ಲಾ ವೃತ್ತಿಯ ಜನ ಅಲ್ಲಿದ್ದರು. ಕಮ್ಮಾರರು, ಬಡಿಗೇರರು, ಅಕ್ಕಸಾಲಿಗರು, ಮಾದರು, ವಡ್ಡರು ಹೀಗೆ ಎಲ್ಲ ಜನ. ಅಮೇಲೆ ನಮ್ಮ ಊರಿಗೆ  ಬಹಳ ಸಮೀಪದಲ್ಲಿ  ಲಂಬಾಣಿ ತಾಂಡಾಗಳಿದ್ದವು.  ಅವರು ಪ್ರತಿ ದಿವಸಾನೂ ಬೆಳಿಗ್ಗೇನೆ ಕಟ್ಟಿಗೆ ಹೊರೆ ಹೊತ್ತುಕೊಂಡು ಬರೋದು, ಅಲ್ಲಿ ಮಾರೋದು, ಕುಣಿಯೋದು, ಮಾಡೋದು, ಇದೆಲ್ಲಾ ಇತ್ತು. ಏನು ಅಷ್ಟು ವರ್ಷಗಳವರೆಗೆ ನಾನು ಕಲಿತೆ, ಆ ಇಡೀ ಹಳ್ಳಿಯ ಜೀವನ ನನ್ನ ಮನಸ್ನಲ್ಲಿ ಗಾಢವಾಗಿ ಅಚ್ಚೊತ್ತಿದ ಹಾಗೆ, ನನ್ನ ಆನುಭವದೊಳಗೆ ಇಳಿದ ಹಾಗೆ, ಇದೆ. ಆಮೇಲೆ ಆ ಜಾತ್ರೇಲಿ ಕಂಡ ತೇರು ಈಗಲೂ ಕೂಡ ನನ್ನ ಕವಿತೇಲಿ ಬೇರೆಬೇರೆ ಪ್ರತೀಕವಾಗಿ ಬರ್‍ತದೆ. ಅದು ಒಂದು ಉತ್ಸಾಹದ ಪ್ರತೀಕವಾಗಿ, ಸಂತೋಷದ ಸಂಕೇತವಾಗಿ ಅಥವಾ ಜನಸಮುದಾಯದ ಒಂದು ಅಭಿವ್ಯಕ್ತಿಯಾಗಿ ಬರ್ತದೆ.

ಪ್ರ: ಇದೊಂದು ಹಳ್ಳಿಯ ರಮ್ಯ ಚಿತ್ರ. ಇದರಲ್ಲೆಲ್ಲ ಸೃಜನಶೀಲತೆಯ ದೃಷ್ಟಿಯಿಂದ ತುಂಬ ಮುಖ್ಯವಾದ ಸಂಗತಿ ಅಂದ್ರೆ ಯಾವುದು?

ಉ: ಈ ಕುತೂಹಲ, ಸೋಜಿಗ. ಎ ಸೆನ್ಸ್ ಅಫ್ ವಂಡರ್ ಆಂತೀವಲ್ಲ ಅದು. ಅದು ನನಗೆ ಬಾಲ್ಯದಿಂದಲೂ ಇರುವಂಥಾದ್ದು. ನಾನು ನಮ್ಮನೆ ಸಮೀಪದ  ಕಂಬಾರ ಸಾಲೆಗೆ  ಹೋಗಿ ಆದನ್ನ ನೋಡ್ಕೋತ ಕೂತುಬಿಡ್ತಿದ್ದೆ. ಆ ಕೆಂಡ ಕಾಯೋದು, ಅದನ್ನ ಬಡಿಯೋದು, ಕಿಡಿಹಾರೋದು,  ನೋಡನೋಡತಾನ ಸೊರ್ ಅಂತ ನೀರುಣಿಸೋದು ಇದನ್ನ ನೋಡ್ಕೋತ ನಿಂತುಬಿಡ್ತಿದ್ದೆ. ಕ್ರಿಯೇಟಿವ್ ಪ್ರಾಸೆಸ್ ಅಲ್ಲಿತ್ತು ಅಂತ ಕಾಣ್ಸುತ್ತೆ. ಅದೇ ರೀತೀಲಿ ಕುಂಬಾರರು. ಆರಲು ತುಳಿಯೋದು, ಅದನ್ನ ತಿಗರಿಗೆ ಹಚ್ಚೋದು, ನೋಡನೋಡಾಣ ಅದಕ್ಕೆ ಒಂದುರೂಪ ಕೊಟ್ಟು ಬಿಡೋದು. ಆಕಾರ ಸಣ್ಣದು ದೊಡ್ಡದು ತರತರತರದ್ದು ಇಟ್ಟುಬಿಡುವಂತಹ ಒಂದು ಕ್ರಿಯೆ.

ಪ್ರ: ’ಸೋಜಿಗ’ ಅಂತ ಶಬ್ದ ಬಳಸಿದಿರಿ. ಅದು ನಿಮ್ಮ ಕಾವ್ಯದ ಜೀವಾಳ ಅಂತ ಅನ್ಸುತ್ತೆ. ಆದರೆ ನೀವು ನಾಗರಿಕ ಜಗತ್ತನ್ನು ಮುಖಾಮುಖಿ ಮಾಡುವಾಗ ಈ ವಿಸ್ಮಯದ  ವಿರುದ್ಧ ದಿಕ್ಕಿನಲ್ಲಿ ಹೋಗ್ತೀರಿ? ವಿಷಾದ ಮತ್ತು ಆತಂಕಗಳನ್ನ ವ್ಯಕ್ತ ಮಾಡ್ತೀರಿ. ನಾಗರಿಕ ನಗರವು ಹುತ್ತ ಕಟ್ಟದ ಹಳ್ಳಿ ಅಂತ ಬರಿತೀರಿ. ನಿಜವಾಗಲೂ ನೀವಿದ್ದ ಧಾರವಾಡ ಅಂತಹ ಭಯಭೀತಗೊಳಿಸುವ ನಗರವಾಗಿತ್ತಾ?

ಉ: ಆಗಿನ ಕಾಲಕ್ಕ 50-60 ವರ್ಷಗಳ ಹಿಂದೆ, ನನಗೆ ಅದೇ ನಾಗರಿಕ. ಈಗ ಅಷ್ಟು ಅನಿಸೋಲ್ಲ. ಹಾಗ ನೋಡಿದರ  ಧಾರವಾಡ ದೊಡ್ಡ ಹಳ್ಳೀನೆ! ಧಾರವಾಡ ಆಮೇಲೆ ನನಗೆ ಪ್ರಿಯವಾಯ್ತು. ಅದೇ ನಮ್ಮೂರಿನ ಒಂದು ಹತ್ತುಪಟ್ಟು ದೊಡ್ಡ ಊರು ಅಂತ ಅನಿಸಿತು. ನಮ್ಮೂರಲ್ಲಿ ಇರೋವಾಗ ಜನರ ಮುಗ್ಧತೆ, ಕಷ್ಟ, ಬಡತನ, ಅದರಲ್ಲೂ ಒಂದು ಸಂತೋಷವಾಗಿ ಇರೋವಂಥಾದ್ದು ನೋಡ್ತಿದ್ದೆ ನಾನು. ಒಂದು ನಟ್ ಕಡೀಲಿಕ್ಕೆ ಮಟಾಮಟ ಮಧ್ಯಾಹ್ನದಲ್ಲಿ ಹೋಗಬೇಕು ಹಳ್ಳಿಜನ. ಎರಡಾಣೆ ಕೂಲಿ ಅವರಿಗೆ. ಆಮೇಲೆ ಹೆಣ್ಮಕ್ಕಳು ಹತ್ತಿ ಹೊಲಕ್ಕೆ ಹೋಗಿ ಹತ್ತಿ ಬಿಡಿಸ್ಕೊಂಡು ಬರೋದು. ನಮ್ಮೂರ ಹತ್ರ ಎಲಿಶಿರುಂದ ಅಂತ ಮತ್ತೊಂದು ಊರಿತ್ತು. ಅಲ್ಲಿ ಎಲಿತೋಟ ಇರ್ತಿತ್ತು. ಅದಕ್ಕ ಯಾತ ಹೊಡೀತಾರಲ್ಲ ಅದು ’ಗಿರ್ರುಕು ಗಿರ್ರುಕೂ’ ಅಂತ ಸಪ್ಪಳ ಮಾಡ್ತಾ ಇರೋದು. ಅ ನಾದಕ್ಕ ನನ್ನ ಲಕ್ಷ್ಯಯೆಲ್ಲ ಆಕಡೆ ಹೋಗದು.

ಪ್ರ: ನಿಮ್ಮ ಕಾವ್ಯದಲ್ಲಿ ಕಿವಿಯಿಂದ ಕೇಳೋ ನಾದಕ್ಕೆ ತುಂಬಾ ದೊಡ್ಡ ಪಾತ್ರ ಇದೆ…

ಉ: ಹೌದು. ನಮ್ಮ ಊರಿನ ಗೌಡರು ಲಕ್ಷ್ಮಣಗೌಡ್ರು ಅಂತ. ಅವರು ಕುರುಬರು. ಅವರು ಒಂದು ಗ್ರಾಮದೇವತೇನ ಪೂಜೆ ಮಾಡೋರು. ಅದು ನಮ್ಮನಿ ಎದುರಿಗೇನೇ  ಇತ್ತು. ಪ್ರತಿವಾರ ಅದರ ಪಲ್ಲಕ್ಕಿ ಸೇವೆ, ಡೊಳ್ಳು ಬಾರಿಸೋದು ಇದೆಲ್ಲ ನಡೀತಾ ಇತ್ತು. ಮತ್ತೆ ಡೊಳ್ಳಿನ ಹಾಡುಗಳು, ಈರಗಾರ ಪದ ಅಂತ ಕರೀತಿದ್ರು ಅವಕ್ಕೆ.  ನಮ್ಮ ಮನೆ ಎದುರಿಗೇನೇ ಒಂದು ಅರಳೆಮರ. ಆ ಮರದಲ್ಲಿ ಗಿಳಿಗಳು ಬಹಳ ಬಂದು ಇರ್‍ತಿದ್ದವು. ಆಮೇಲೆ ಊರ ಹೊರಗಿನ ತೋಟದೊಳಗೆ ನವಿಲು ಇರ್‍ತಿದ್ದವು. ನವಿಲುಗಳು ಬಂದು ಹೋದ ಮ್ಯಾಲೆ ಗರಿಗಳನ್ನ ಆರಿಸಿಕೊಂಡು ಬರೋದು, ತಂದು ನಮ್ಮ ಪುಸ್ತಕದಲ್ಲಿ ಇಡೋದು. ಇಂಥದೆಲ್ಲ ಮಾಡ್ತಾ ಇದ್ದೆ.

ಪ್ರ: ಆಧುನಿಕ ಕನ್ನಡ ಸಾಹಿತ್ಯದಲ್ಲಿ ತೇಜಸ್ವಿಯವರನ್ನ ಬಿಟ್ಟರೆ ಹಕ್ಕಿಗಳ ಮೇಲೆ ನಿಮ್ಮಷ್ಟು ಆಕರ್ಷಿತರಾದ ಲೇಖಕರೇ ಇಲ್ಲವೇನೊ. ನಿಮ್ಮ ಕಾವ್ಯದಲ್ಲಿ ಆಗಸ ಮತ್ತು ಹಕ್ಕಿಗಳು ತುಂಬ ಬರ್ತವೆ.

ಉ: ಈಗಲೂ ನೋಡಿ, ನಾನು ಎಷ್ಟೊತ್ತಿಗೆ ಮಲಗಿಕೊಂಡ್ರು ಕೂಡಾ ಬೆಳಿಗ್ಗೆ ಐದುವರಿ ಆರರೊಳಗೇನೆ ಎಚ್ಚರ ಆಗಿಬಿಡ್ತದೆ. ಆ ಎಚ್ಚರ ಆಗೋದೇನೆ ಹಕ್ಕಿಗಳ ಚಿಲಿಪಿಲಿಯಿಂದ.

ಪ್ರ: ನಮ್ಮ ರಮ್ಯ ಸಂಪ್ರದಾಯದ  ದೊಡ್ಡ ಲೇಖಕರೆಲ್ಲ ನಿಸರ್ಗದ ಮೇಲೆ ಬಹಳ ಪ್ರೀತಿಯುಳ್ಳವರು. ಇದರ ಜತೆಗೇನೆ ನಾಗರಿಕತೆಯನ್ನ ಆಧುನಿಕತೆಯನ್ನ ಒಂದು ಪಾಸಿಟಿವ್ ಶಕ್ತಿಯಾಗಿ ನೋಡ್ತಾರೆ. ಆದರೆ ನಿಮ್ಮಲ್ಲಿ ಮತ್ತು ಜಿಎಸ್‌ಎಸ್ ಅವರಲ್ಲಿ ಆಧುನಿಕ ನಾಗರಿಕತೆ ಬಗ್ಗೆ ಯಾಕೆ ಒಂದು ಕಟುವಾದ ನಿಷ್ಟುರವಾದ ನಿಲುವು ಕಾಣುತ್ತೆ.

ಉ: ನಾವು ಹಳ್ಳಿಗಳಲ್ಲಿ ಕಂಡಂಥಾ ಒಂದು ಪ್ರಾಮಾಣಿಕತೆ ಮುಗ್ಧತೆ ಸರಳತೆ ಏನಿರ್‍ತಿತ್ತು, ಅದಕ್ಕೆ ಬಹಳ ವಿರುದ್ಧವಾದಂಥಾ ಅಂಶಗಳನ್ನು ಈ ನಾಗರಿಕ ಜೀವನದಲ್ಲಿ  ಒಮ್ಮೆಲೆ ಬಂದಾಗ ಕಾಣ್ತಾ ಇದ್ದದ್ದೇ ಬಹುಶಃ ಇದಕ್ಕೆ ಕಾರಣ ಇರಬೇಕು.

ಪ್ರ: ಆದರೆ ಇದೆ ಹಳ್ಳಿಗಳಲ್ಲಿ ಈ ಜಾತಿ ಆಸ್ಪೃಶ್ಯತೆಯ ಕ್ರೌರ್ಯ ದಮನಗಳು ಇದ್ದವು.

ಉ: ನಾವಿದ್ದಾಗ ಇದು ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಈಗ ನೋಡಿ, ನನಗೆ 75 ವರ್ಷ. ಸುಮಾರು 65 ವರ್ಷದ ಹಿಂದೆ ನಾನು ಅಲ್ಲಿದ್ದೆ. ಆ ಕಾಲಕ್ಕೆ ನಮ್ಮ ಊರಲ್ಲಿ ತಮ್ಮತಮ್ಮೊಳಗೆ ಬಡಿದಾಟ ಎಲ್ಲಾ ಇದ್ದವು. ಆದರೆ ಈ ಜಾತಿ ಮತ್ತೊಂದು ಜಾತಿಯ ವಿರುದ್ಧ ಅಂತ ಇರ್ತಿರಲಿಲ್ಲ. ಆಮೇಲೆ ನಮ್ಮೂರಲ್ಲಿ ಎರಡು ಮೂರು ಪಿಂಜಾರ ಮನೆಗಳಿದ್ದವು. ಅಲ್ಲಿ ಒಂದು ಸಣ್ಣ ಮಸೀದಿ ಇತ್ತು. ನಾವು  ವರ್ಷಾ ಹಬ್ಬ ಮಾಡ್ತಿದ್ದೆವು,  ’ಆಲೆಹಬ್ಬ’ ಅಂತ. ಆ ಹಬ್ಬದ ದಿವಸ ನಮ್ಮ ಮನೇಲಿ ಚವಂಗೆ ಮಾಡ್ತಾ ಇದ್ದಿವಿ.  ಪ್ರತಿಯೊಂದು ಮನೆಯಲ್ಲೂ ಮಾಡ್ತಾ ಇದ್ದರು. ಯಾವ ಕಾಸ್ಟು ಅಂತಿರಲಿಲ್ಲ. ಆಮೇಲೆ ಮೂರು ಮೈಲಿ ದೂರದ ಶಿರಹಟ್ಟಿ ಫಕೀರಸ್ವಾಮಿಗಳ ಜಾತ್ರೆಗೆ ಪ್ರತಿ ವರುಷ ಹೋಗ್ತಿದ್ದೆವು. ಅದು ನನ್ನ ಮೇಲೆ ಬಹಳ ಪರಿಣಾಮ ಬೀರಿತು. ಬಹಳ ದೊಡ್ಡ ಪ್ರಮಾಣದಲ್ಲಿ ನಡೀತಿತ್ತು ಆ ಜಾತ್ರೆ. ಹೋದವರೆಲ್ಲ ಮಠಕ್ಕೆ ಹೋಗಿ ಕಾಯಿ ಒಡಸ್ತಾ ಇದ್ದಿವಿ. ನಗಾರಖಾನೆಗೆ ಹೋಗಿ ಸಕ್ಕರೆ ಓದಿಸ್ತಾ ಇದ್ದಿವಿ. ಇದನ್ನ ಯಾರೂ ತಪ್ಪಿಸ್ತಾ ಇರಲಿಲ್ಲ.

ಪ್ರ: ಸಾರ್, ನೀವು  ಕೊಡ್ತಾ ಇರೋ ಈ ಸಾಮರಸ್ಯದ ಹಳ್ಳಿಗಳ ಚಿತ್ರ ಕ್ರಿಟಿಕಲ್ಲಾಗಿಲ್ಲ. ಇದಕ್ಕೆ ನೀವು ಕವಿಗಳಾಗಿರುವುದೂ ಒಂದು ಕಾರಣ ಇರಬೇಕು. ಗದ್ಯದ ಬರವಣಿಗೆ ಸಮಾಜವನ್ನು ವೈಚಾರಿಕವಾಗಿ ಗ್ರಹಿಸಲು ಹೆಚ್ಚು ಆಸ್ಪದ ಕೊಡುವಂಥಾ ಒಂದು ಪ್ರಕಾರ. ಇದೇ ಕಾಲದಲ್ಲಿ ನಮ್ಮ ಗ್ರಾಮೀಣ ಲೋಕವನ್ನು ತುಂಬ ಕ್ರಿಟಿಕಲ್ಲಾಗಿ ಕನ್ನಡದ ಕಾದಂಬರಿ ಕತೆ ಇವು ಚಿತ್ರಿಸಿದವು. ಕವಿತೆ ಹೆಚ್ಚು ವೈಯಕ್ತಿಕವಾದ ಹಾಗೂ ಭಾವಾನಾತ್ಮಕವಾದ ಜಿಗಿತಗಳನ್ನು ಮಾಡುತ್ತೆ. ವಿಮರ್ಶಾತ್ಮಕ ನೋಟವನ್ನು ಕೊಡಲಿಕ್ಕೆ ಪ್ರಕಾರವೂ ಒಂದು ತೊಡಕಾಗಿರಬಹುದು ಅನಿಸುತ್ತಲ್ಲವಾ?

ಉ: ಕತೆಯಾಗಲೀ ಕಾದಂಬರಿಯಾಗಲೀ ಬರೆಯುವಾಗ ಬಹಳ ವಾಸ್ತವ ಪ್ರಪಂಚವನ್ನು ಚಿತ್ರಿಸಬೇಕಾಗುತ್ತೆ. ಕವಿತೆಯಲ್ಲಿ ವಾಸ್ತವ ಮತ್ತು ಕಲ್ಪನೆ ಎರಡೂ ಕೂಡಿರ್‍ತವೆ. ನನ್ನ ಪದ್ಯದಲ್ಲಿ ಬರ್‍ತದೆ. ಕೆರವ ಹೊಲಿಯುವ ಮಾದರ ದುರುಗಾ ಮುಟ್ಟ ಬೇಡಿರಿ ತಂದೆ ಎಂಬ ನುಡಿ, ನನ್ನೆದೆಯ ಕಸಿವಿಸಿಯ ಹೇಳತೀರದು ಆಗ. ಬಾಲಕರಿಗೆಲ್ಲಿಯದು  ಮಡಿ ಮೈಲಿಗೆ. ನಮ್ಮ ಶಾಲೆಯ ಎದುರಿಗೆ ನೀರು ಸೇದೋ ಬಾವಿ ಇತ್ತು. ಅದರ ಸುತ್ತಲೂ ಅವರು ಗಡಿಗೆಗಳನ್ನ ಇಟ್ಟುಕೊಂಡು ಪ್ರತಿಯೊಬ್ಬರಿಗೂ ’ನೀರು ಹಾಕ್ರಿ ನೀರು ಹಾಕ್ರಿ’ ಅಂತ ಕೇಳೋರು. ಇವರು ತಿಳಿದಾಗ ಒಂದೊಂದು ಕೊಡ ನೀರು ಸುರುವಿ ಹೋಗೋರು. ಇದು ನನಗೆ ಮನಸಿಗೆ ಬಹಳಾ ಡಿಸ್ಟ್ರಬ್ ಆಗ್ತಾ ಇತ್ತು.

ಪ್ರ: ಆಮೇಲಿನ ನಿಮ್ಮ ಕವಿತೆಯಲ್ಲಿ ಬರುವ ಲೋಕವೆಲ್ಲ ಧಾರವಾಡದ್ದು. ಆ ಹೊತ್ತಿನ ಸ್ವಾತಂತ್ರ್ಯ ಚಳುವಳಿ ನಿಮಗೆ ಹೇಗೆ ಕಾಣಿಸ್ತಾ ಇತ್ತು?

ಉ: ಊರು ಬಿಟ್ಟ ಮೇಲೆ ನಾನು  ಕಲ್ತಿದ್ದು ಇಲ್ಲೇ ಧಾರವಾಡದ ಇನ್ನೊಂದು ಹಳ್ಳೀಲಿ, ಗರಗ ಅಂತ. ಆ ಹಳ್ಳೀಲಿ ಆ ಹೊತ್ತಿಗಾಗಲೇ ಸ್ವಾತಂತ್ರ್ಯದ ಚಳುವಳಿ ಪ್ರಾರಂಭವಾಗಿತ್ತು. 1938-39ನೇ ಇಸವಿ. ಆ ಊರಿನ ಭಾಳ ಜನ ಖಾದಿ ತೊಡ್ತಾ ಇದ್ದರು. ನನ್ನ ಜೊತಿಗೆ ಸಾಲಿಗೆ ಬರೋವಂಥ ಹುಡುಗರೂ ಖಾದಿ ತೊಡ್ತಾ ಇದ್ದರು. ಮತ್ತೆ ಈ ಧಾರವಾಡಕ್ಕೆ ಯಾರ್‍ಯಾರು ಬರ್‍ತಾ ಇದ್ರಲ್ಲ ನಾಯಕರು, ಅವರೆಲ್ಲರೂ ಈ ಹಳ್ಳಿಗೆ ಬಂದು ಈ ಕಾರ್ಯಕ್ರಮ ನಡೆಸಿಕೊಡೋರು. ಪ್ರಭಾತ್‌ಫೇರಿ ಹೊತ್ನಲ್ಲಿ ನಾನೇ ಹಾಡ್ತಿದ್ದೆ. ಎಂಥಾ ಶ್ಯಾಣಾ ಮಹಾತ್ಮ ಗಾಂದಿs, ಹಿಂದೂಸ್ತಾನಕ ಅವನಾ ತಂದಿ ಆಗಲೇ ಪ್ರಸಿದ್ಧ ಆಗಿರುವಂಥಾ ಹಾಡು; ಆಮೇಲೆ  ಕರುನಾಡು ನಮ್ಮ ನಾಡು ಇಂಥ ನಾಡಗೀತೆಗಳು. ಆಮೇಲೆ ಅಲ್ಲಿ ಒಳ್ಳೇ ಕಾರ್ಯಕರ್ತರು ಇದ್ದರು. ಅಲ್ಲೆ ಗರಗದಲ್ಲಿ ಡೋರರ ಕೇರಿ ಇತ್ತು. ಅಲ್ಲಿ ಮಾಂಸದ ಮಾರಾಟ ಇತ್ತು. ಅದು ನನಗೆ ನೋಡ್ಲಿಕ್ಕೆ ಸ್ವಲ್ಪ ಅಗ್ತಿದ್ದಿಲ್ಲ. ಅದರೆ ಈ ನಾಯಕರು ಅಲ್ಲಿ ಹೋಗಿ ಅ ಸಣ್ಸಣ್ಣ ಮಕ್ಕಳಿಗೆಲ್ಲಾ ಸ್ನಾನ ಮಾಡಿಸೋದು, ಬಟ್ಟೆ ಹಾಕಿಸೋದು ಈ ಕೆಲಸವನ್ನ ಕೂಡ  ಮಾಡ್ತಾ ಇದ್ದರು.

ಚನ್ನವೀರ ಕಣವಿ

ಪ್ರ: ನಿಮಗೆ ಕವಿತೆ ಬರೆಯಲು ಪ್ರೇರಕವಾದ ಆಗಿನ ಧಾರವಾಡದ ಪರಿಸರದ ಬಗ್ಗೆ ತಿಳಿಯುವ ಕುತೂಹಲದಿಂದ ಕೇಳ್ತಾ ಇದೇನೆ..

ಉ: ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ಧಾರವಾಡದ ಮುರುಘಾಮಠದ ಪ್ರಸಾದ ನಿಲಯದಲ್ಲಿ ಇದ್ದೆ. ಮನಸ್ಸಿನ ಮೇಲೆ ತುಂಬಾ ದೊಡ್ಡ ಪರಿಣಾಮ ಬೀರಿದ್ದು ಮೃತ್ಯುಂಜಯ ಸ್ವಾಮಿಗಳ ವಿರಕ್ತ ಜೀವನ. ಹೈಸ್ಕೂಲ್‌ನಲ್ಲಿದ್ದಾಗ ನಮ್ಮದು ಸಣ್ಣದೊಂದು ಲೈಬ್ರರಿ ಇತ್ತು. ಶಂಕರಭಟ್ಟರ ’ನಲ್ಮೆ’ ಸೇರಿಸಿ ಹಲವು ಪುಸ್ತಕಗಳು ಅಲ್ಲಿದ್ದವು. ಇವನ್ನೆಲ್ಲ ಓದುವಾಗ ನನಗೆ ಮಧುರಚೆನ್ನರ ’ನನ್ನನಲ್ಲ’ ಬಹಳ ಹಿಡಿಸಿಬಿಟ್ಟಿತು. ”ನಿಲ್ಲುನಿಲ್ಲೆಲೆ ನವಿಲೆ ನಿನ್ನ ಕಣ್ಣಗಳೇಸು” ಇಂತಹ ಎಷ್ಟೋ ಭಾಗ ನನಗೆ ಬಾಯಿಪಾಠ ಅಗಿಬಿಟ್ಟಿತ್ತು. ಬೇಂದ್ರೆಯವರನ್ನ ಧಾರವಾಡದಲ್ಲಿ ನೋಡ್ತಾ ಇದ್ದೆ. ಅವರ ಕಾವ್ಯವಾಚನ ಕೇಳ್ತಾ ಇದ್ದೆ. ಅಷ್ಟೊತ್ತಿಗೆ ಅವರು ಸೊಲ್ಲಾಪುರಕ್ಕೆ  ಅಧ್ಯಾಪಕರಾಗಿ ಹೋದರು. ಹಿರೇಮಲ್ಲೂರ  ಈಶ್ವರನ್ ಅವರು ನನ್ನ ’ಕಾವ್ಯಾಕ್ಷಿ’ ಪುಸ್ತಕವನ್ನು ಹಾಕಿದರು. ಅದಕ್ಕೆ ಬೇಂದ್ರೆಯವರು ಮುನ್ನುಡಿ ಬರೆದರು. ನಾನು  ಅವರಿಗೆ ಪತ್ರ ಬರೆದಾಗ, ಅವರು ಏನು 10-12 ದಿವಸದಲ್ಲಿ ಮುನ್ನುಡಿ ಬರೆದು ಕಳಿಸಿಬಿಟ್ಟರು. ನನಗೆ ಬಹಳ ಆಶ್ಚರ್ಯ ಆಯಿತು. ಪರಿಚಯ ಇಲ್ಲೇ ಇಲ್ಲ. ಮುಂದೆ  ನಮ್ಮ ರೂಮಿನಲ್ಲಿ ನಮ್ಮ ಕೀರ್ತಿನಾಥ ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ, ಶಿವೇಶ್ವರ ದೊಡ್ಡಮನಿ, ವಸಂತ ಕವಲಿ ಈ ಸ್ನೇಹಿತರೆಲ್ಲಾ ಕೂಡ್ಕೊಂಡು ಕಾವ್ಯಾನುಭವ ಮಂಟಪ ಅಂತ ಮಾಡಿಕೊಂಡಿವಿ. ವಾರಕ್ಕೊಮ್ಮೆ ಕೂಡಿಕೊಂಡು, ಕವಿತೆ ಓದೋದು, ವಿಮರ್ಶೆ ಮಾಡೋದು, ಚಹಾ ಕುಡಿಯೋದು ಇಂಥದೆಲ್ಲ ಇತ್ತು. ನಮ್ಮ ರೂಮಿನ ಹತ್ರ ಸ್ಟೇಷನ್ ದಾರೀಲಿ ಎನ್ಕೆ ದೀಕ್ಷಿತ ಅಂತ ವಕೀಲರು ಇದ್ದರು. ಅಲ್ಲಿ ಗೋಕಾಕ್ ಮತ್ತು ಬೇಂದ್ರೆ ಬಂದಾಗ ಕೂಡೋರು. ಗೋಕಾಕ್ ಇವರು ಕೊಲ್ಲಾಪುರದ ರಾಜಾರಾಮ್ ಕಾಲೇಜಲ್ಲಿ ಪ್ರಿನ್ಸಿಪಾಲರಾಗಿದ್ದರು. ನಾವು ಅವರನ್ನ ನಮ್ಮ ಕಾವ್ಯಮಂಟಪಕ್ಕೆ ಕರಿಸಿದಿವಿ. ಅದೇ ಮೊದಲನೇ ಪರಿಚಯ ಬೇಂದ್ರೆಯವರ ಜೊತೆಗೆ ಆದದ್ದು. ಅವರೂ ಕವಿತೆ ಓದಿದರು. ಮುಂದೆ ನಾನು ಬಿಎ ಫೈನಲ್‌ನಲ್ಲಿದ್ದಾಗ ನನ್ನ ’ಭಾವಜೀವಿ’ಗೆ ಗೋಕಾಕರು ಮುನ್ನುಡಿ ಬರೆದರು.

ಪ್ರ: ’ಭಾವಜೀವಿ’ಯನ್ನ ಮಧುರಚೆನ್ನರಿಗೆ ಅರ್ಪಣೆ ಮಾಡಿದಿರಿ.

ಉ: (ನಗುತ್ತಾ) ಆವಾಗ ನನಗೆ ಅರ್ಪಣೆ ಮಾಡಬೇಕೆಂದರೆ ಅವರನ್ನ ಕೇಳಬೇಕು ಅಂತ ಗೊತ್ತಿರಲಿಲ್ಲ. ’ಹಲಸಂಗಿಯ ಕಾವ್ಯರ್ಷಿ ಮಧುರಚೆನ್ನರಿಗೆ’ ಅಂತ ಬರೆದಿದ್ದೆ. ಅದು  ಮುಟ್ಟಿದಾಗ  ಮಧುರಚೆನ್ನರು ನೋಡಿ ಎಲ್ಲಾ ಚೆನ್ನಾಗಿದೆ. ಆದರೆ ಈ ಕಾವ್ಯರ್ಷಿ ಅನ್ನೋ ಪದಾನ ಅವರು ಬಿಡಬೇಕಾಗಿತ್ತು ಅಂತ ಅಂದರಂತೆ. ಅಲ್ಲಿದ್ದ ಗುರುಲಿಂಗ ಕಾಪಸೆ ಅವರು ಹೇಳಿದ್ದು ಇದು.

ಪ್ರ: ಮಧುರಚೆನ್ನರ ಮೇಲಿನ ನಿಮ್ಮ ಆಕರ್ಷಣೆಯೇ  ನಿಮ್ಮ ಕಾವ್ಯದಲ್ಲಿ  ಗ್ರಾಮೀಣ ಲೋಕವನ್ನು ಮಧುರವಾಗಿ ಹಿಡಿದುಕೊಡುವ ಗುಣಕ್ಕೆ ಕಾರಣವಾಗಿರಬೇಕು. ಅವರ ಭೇಟಿ ಯಾವಾಗ ಆಯಿತು? 

ಉ: ಸಿದ್ಧಬಸಪ್ಪ ಗಿಡ್ಡನವರ ಅಂತ ನಮ್ಮ ಮಾವನವರು ಬಿಜಾಪುರಕ್ಕೆ ಇದ್ದರು.  ಮಧುರಚೆನ್ನರಿಗೂ ನಮ್ಮ ಮಾವನವರಿಗೂ ಬಹಳ ಸಂಬಂಧವಿತ್ತು. ಅಕಸ್ಮಾತ್ತಾಗಿ ಗಿಡ್ಡನವರ ಮಗಳು ನಮ್ಮ ಮನೆಯವರಾದರು(ನಗು). ಮಧುರಚೆನ್ನರನ್ನ ನನ್ನ ಲಗ್ನದ ನಿಶ್ಚಯ ಕಾಲಕ್ಕೇನೆ ನಾನು ಮೊಟ್ಟ ಮೊದಲು ನೋಡಿದ್ದು. ತೆಳ್ಳಗೆ ಇದ್ದರು. ವಿನಯದ ವ್ಯಕ್ತಿ ಅವರು. ಎಷ್ಟು ಅಂದರೆ,  ನಾವು ನಮಸ್ಕಾರ ಮಾಡಿದ್ದೆಂದರೆ ತಾವೂ ಕೈಮುಗಿದು ಹೀಗೆ ಆಕಾಶಕೆತ್ತಿ ತಾಯಿಗೆ ಅರ್ಪಣ ಮಾಡೋರು.

ಪ್ರ: ಮಧುರಚೆನ್ನರನ್ನ ಆವರಿಸಿಕೊಂಡಿದ್ದ ಅರವಿಂದ ದರ್ಶನ ನಿಮ್ಮ ಕಾವ್ಯದ ಮೇಲೆ ಹೆಚ್ಚು ಕವಿಯಲಿಲ್ಲ.

ಉ: ಇಲ್ಲ. ಅರವಿಂದ ಆಶ್ರಮಕ್ಕೆ ಒಮ್ಮೆ ಹೋಗಿ ಬಂದಿದೀನಿ. ಮದರ್ ಅವರು ಇದ್ದಾಗ. ಯಾಕೊ ನನಗೆ ಹೆಚ್ಚು ಅವರ ತಾತ್ವಿಕವಾದಂಥ ಜಿಜ್ಞಾಸೆ ಅಷ್ಟು ಪ್ರವೇಶ ಕೊಡಲಿಲ್ಲ. ಬಹುಶ ಇನ್ನೊಂದು ಕಾರಣ ನಮ್ಮ ಶಿವಶರಣ ಅನುಭಾವದ ಮಾರ್ಗ ಅದರ ಒಂದು ಸರಳತೆ, ರೀತಿ, ಭಾಷೆ ಅದು ನನಗೆ ಮನಸ್ಸಿಗೆ ಹೆಚ್ಚು, ಹಿಡಿಸಿತ್ತು. ಇದಕ್ಕಿಂತ ಹೆಚ್ಚಿನದನ್ನು ನಾನು ಹುಡುಕಾಡುತ್ತಾ ಇರ್‍ತಿದ್ದೆ. ಅದು ನನಗೆ ಕಂಡುಬರ್‍ತಿರಲಿಲ್ಲ. ಸ್ವಲ್ಪ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಪಡ್ತಿದ್ದೆ. ಮುಂದೆ ಮಧುರಚೆನ್ನರ ಜೊತೆ ಹೆಚ್ಚು ಮಾತಾಡಬೇಕು ಅಂತ ಆಸೆ ಇಟ್ಕೊಂಡಿದ್ದೆ. ಆದರೆ ಅವರು 1953ರಲ್ಲಿ ತೀರಕೊಂಡು ಬಿಟ್ರು.

ಪ್ರ: ಮಧುರಚೆನ್ನರು ತಮ್ಮ ಮೊದಲ ಘಟ್ಟದಲ್ಲಿ ವಚನಕಾರರ ಬಗ್ಗೆ ಆಕರ್ಷಿತರಾಗಿದ್ರು. ಅರವಿಂದಾಶ್ರಮದ ಸಂಪರ್ಕ ಬಂದ ಬಳಿಕ ಅದನ್ನು ಬಿಟ್ಟುಕೊಟ್ರು. ಇದೊಂದು ಮಾರ್ಮಿಕವಾದ ವಿಚಾರ. ಕನ್ನಡದಲ್ಲಿ ಸಾಮಾಜಿಕ ಬದಲಾವಣೆಯನ್ನು ಸಂಘರ್ಷ ರೂಪದಲ್ಲಿ ಗ್ರಹಿಸುವ ಲೇಖಕರಿಗೂ ವಚನಕಾರರ ಪ್ರಭಾವಕ್ಕೂ ಒಂದು ತಾತ್ವಿಕವಾದ ಒಳಸಂಬಂಧವಿದೆ.

ಉ: ಅರವಿಂದರಲ್ಲಿಗೆ ಹೋಗಿ ಬಂದ ಮೇಲೂ ವಚನಕಾರರ  ಪ್ರಭಾವ ಇಟ್ಕೊಂಡಿದ್ದರು. ’ನನ್ನ ನಲ್ಲ’ ಆರಂಭ ಮಾಡುವಾಗಲೂನೂ ಅವರು ವಚನ ಕೋಟ್ ಮಾಡ್ತಾರ. ”ಎಲ್ಲರ ಪರಿಯಂತಲ್ಲ ನೋಡವ್ವ ನನ್ನ ಗಂಡ; ಸುಳಿಯಲಿಲ್ಲ ಸುಳಿದು ಸಿಂಗಾರವ ಮಾಡಲಿಲ್ಲ” ಅಂತ. ಅರವಿಂದರಲ್ಲಿ ಮತ್ತು ಮಾತೆಯರಲ್ಲಿ ಯಾವುದೋ ಒಂದು ವಿಶೇಷತೆ ಅವರು ಕಂಡಿರಬೇಕು. ಆದರೆ ಅವರು ಶರಣರನ್ನ ಬಿಡ್ಲಿಲ್ಲ. ಅಂದರೆ ಅನುಭಾವದ ದೃಷ್ಟಿಯಿಂದ ಶರಣರನ್ನ ಮೈಗೂಡಿಸಿಕೊಂಡಿದ್ದರು. ಅರವಿಂದ ದರ್ಶನ ಹಾಗೂ ಶರಣರ ಅನುಭಾವ ಹ್ಯಾಗೆ ಎರಡೂ ಒಂದೆ ಇದೆ ಅಂತ ಲೇಖನವನ್ನೂ ಬರದರು. ಈ ರೀತಿ ಹೊಂದಿಸಲಿಕ್ಕೆ ಪ್ರಯತ್ನ ಅವರು ಪಡತಾ ಇದ್ದರು.

ಪ್ರ: ಅರವಿಂದ ದರ್ಶನ ಹೆಚ್ಚು ಅಮೂರ್ತವಾದ ಆದರ್ಶವಾದಿ ಮಾನವತೆ ಕಡೆಗೆ ಹೋಗ್ತದೆ.  ಕರ್ನಾಟಕದ ವರ್ತಮಾನವನ್ನು ಮುಖಾಮುಖಿ ಮಾಡೋಕೆ  ವಚನಕಾರರು  ಹೆಚ್ಚು ರೆಲವಂಟ್ ಆಗ್ತಾರೆ.

ಉ: ಎಲ್ಲಾ ದೃಷ್ಟಿಯಿಂದ. ಭಾಷೆ ದೃಷ್ಟಿಯಿಂದಾತು, ತತ್ವ, ಅನುಭಾವ ದೃಷ್ಟಿಯಿಂದಾತು. ನಡೆ ನುಡಿಯಿಂದಾತು. ಜನಸಮುದಾಯವನ್ನು ಕಟ್ಟಿಕೊಂಡು ಹೋಗೋ ದೃಷ್ಟಿಯಿಂದಾತು. ಒಟ್ಟಾರೆಯಾಗಿ ನೋಡಿದಾಗ ಅವರು ಹೆಚ್ಚು ನಮಗೆ ಹತ್ತಿರದವರು ಅನ್ಸಿದೆ.

ಪ್ರ: ವಚನ ಸಾಹಿತ್ಯ ಕವಿಯಾಗಿ ನಿಮಗೆ ಹೆಚ್ಚು ಪ್ರೇರಣೆ ನೀಡಿದೆ. ಅದರಲ್ಲೂ ಬಸವಣ್ಣನವರನ್ನ ಹೆಚ್ಚು ನೀವು ಸ್ವೀಕರಿಸಿದಂತಿದೆ. ಏನು ಕಾರಣ?

ಉ: ಇಡೀ ಶರಣರ ಸಮೂಹದಲ್ಲಿ ಬಸವಣ್ಣನವರ ವ್ಯಕ್ತಿತ್ವ ಎಲ್ಲಾ ದೃಷ್ಟಿಯಿಂದಲೂ ದೊಡ್ಡದು. ಅವರು ಸಂಸಾರಿಯಾಗಿದ್ದರು. ಅವರ ನಡೆ ನುಡಿ, ಅನುಭವ ಮಂಟಪದಲ್ಲಿ ಅವರು ಇರತಕ್ಕಂಥಾ ರೀತಿ, ಅಲ್ಲಮಪ್ರಭುವಿನ ಜೊತೆಗೆ ನಡಕೊಳ್ತಕ್ಕಂತಹ ರೀತಿ, ಅವರ ವಿನಯ, ಆ ಭಕ್ತಿ, ಬಿಜ್ಜಳನ ಜೊತೆಗೆ ಇರುವಂಥಾ ರೀತಿ, ಭಕ್ತಿ ಅಂದರೆ ವೀಕ್‌ನೆಸ್ ಅಂತಲ್ಲ. ಅದಕ್ಕೊಂದು ವಚನದಲ್ಲಿ ಬರ್ತದೆ, ’ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿಪ್ಪ ನಮ್ಮ ಶರಣ’ ಅಂತ. ಅಂದರೆ ಬೆಳೀಬೇಕು ಮೊದಲು. ಅದು ಗೊನೆ ಆದಾಗ ಬಾಗುತ್ತೆ ತಾನಾಗಿ. ಈ ರೀತಿ ಸಹಜವಾದ ವಿನಯ.

ಪ್ರ: ಬಸವಣ್ಣನವರ ಭಕ್ತಿ ವಿನಯ ನಿಮ್ಮಲ್ಲೂ ಇದೆ. ಆದರೂ  ಅವರ ಅಧಿಕಾರಸ್ಥ ಫಿಲಾಸಫಿಗಳ ವಿರುದ್ಧದ  ನಿಷ್ಠುರ ನಿಲುವು ಇದೆಯಲ್ಲ, ಅದು ನಿಮ್ಮ ಕಾವ್ಯದಲ್ಲಿ ಹೆಚ್ಚು ಕೆಲಸ ಮಾಡಿದ ಹಾಗೆ ಇಲ್ಲ.

ಉ: ಬಹುಶಃ ವ್ಯಕ್ತಿಯಲ್ಲಿ ನೋಡಿದಾಗ ಅಲ್ಲಿರುವಂಥ ಒಳ್ಳೆಯ ಗುಣ ನನಗೆ ಮೊದಲು ಕಾಣಿಸ್ತದ. ಅದು ನಾನು ಸ್ವೀಕಾರ ಮಾಡ್ಕೋಬೇಕು ಅನ್ನುವಂಥದ್ದು. ಆದರೆ ಯಾವುದೇ ವ್ಯಕ್ತಿಯಲ್ಲಿ ಸಂಪೂರ್ಣ ಒಳ್ಳೆಯದು ಇರುವುದಿಲ್ಲ. ಅಂದಾಗ ಯಾವುದೋ ಒಂದು ಕೆಟ್ಟ ಅಂಶದ ಸಲುವಾಗಿ ಆ ಇಡೀ ವ್ಯಕ್ತೀನ ದೂಷಿಸುವದು ಒಳ್ಳೆಯದಲ್ಲ. ಹೀಗಾಗಿ ನನಗೆ ಪೋಷಕವಾಗೋ ರೀತಿಯಲ್ಲಿ ಆ ಒಳ್ಳೇದನ್ನು ಸ್ವೀಕಾರ ಮಾಡ್ತಿದ್ದೆ. ಅಂದರೆ ಅ ಕೆಟ್ಟದ್ದನ್ನು ನಾನು ಗಮನಿಸುವುದೇ ಇಲ್ಲ ಅಂತಲ್ಲ. ಜಗತ್ತಲ್ಲಿ ಒಳ್ಳೇದು ಹಾಗೂ ಒಳ್ಳೇದಲ್ಲದ್ದು ಅಂತ ಎರಡೇ ಇರೋದು ಅಂತ ಹೇಳ್ತಾರೆ (ನಗು).

ಪ್ರ: 20ನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ನೀವು ಹಾಗೂ ಮಾಸ್ತಿಯರು ಒಂದು ವಿಷಯದಲ್ಲಿ ಸಮಾನ ಮನೋಭಾವದವರು. ಅದೆಂದರೆ ನಮ್ಮ ಬದುಕಿನ ಕರಾಳಮುಖಗಳನ್ನ ಇಣುಕಿ ನೋಡೋಕೆ ಹಿಂಜರಿಕೆ ತೋರುವವರು. ಭೀಭತ್ಸವನ್ನ ಗ್ರಹಿಸೋಕೆ ಹಿಂಜರಿಕೆ ತೋರುವ ಈ ಗುಣ, ಅದನ್ನು ಮುಖಾಮುಖಿಗೆ ಕೂಡ ಪ್ರೇರಿಸದೆ ಹೋಗ್ತದೆ. ಇದು ಬರವಣಿಗೆಗೇನೆ ಒಂದು  ಮಿತಿಯನ್ನು ತಂದುಕೊಟ್ಟಿತಾ ಅಂತಾ?

ಉ: ಇರಬಹುದು. ಬಹುಶಃ ವಿಮರ್ಶಕರಾದ ನೀವೇ ಹೇಳಬೇಕು ಅದನ್ನ. ನನ್ನ ದೃಷ್ಟಿ ಏನು ಆನ್ನೋದನ್ನ ಹೇಳಿದೆನಲ್ಲ. ಮಾಸ್ತಿಯವರ ಸಣ್ಣಕತೆಗಳನ್ನ ನಾನು  ಹೈಸ್ಕೂಲ್‌ನಲ್ಲಿದ್ದಾಗ ಓದಿದೆ. ’ಕರ್ನಾಟಕದ ಜನತೆಯ ಸಂಸ್ಕೃತಿ’ ಓದಿದೆ. ಆಗ ಮಾಸ್ತಿ ನನಗೆ ಹೆಚ್ಚು ಸಮೀಪ ಅನಿಸ್ತಿತ್ತು. ಜನತೆಯ ಸಂಸ್ಕೃತಿಯಲ್ಲಿ ಒಂದು ಘಟನೆಯನ್ನ ನಿರೂಪಣೆ ಮಾಡ್ತಾರೆ ಮಾಸ್ತಿಯವರು. ಅವರು ಕಮೀಶನರಿದ್ದಾಗ ಒಂದು ಹಳ್ಳಿಗೆ ಹೋಗ್ತಾರೆ. ಚೆನ್ನೇಗೌಡರ ಅಂತ ಅವರನ್ನ ನೋಡೋಕೆ ಮನೆಗೆ ಹೋದಾಗ, ’ಚೆನ್ನೇಗೌಡರು ಇದಾರಾ ?’ ಅಂತ ಕೇಳಿದರೆ ಆ ಮನೆಯ ಹೆಣ್ಮಗಳು ಹೊರಗೆ ಬಂದು ಶಿವಪುರಿಗೆ ಹೋಗಿದಾರೆ ಅಂತಾಳೆ. ಇವರು ಆ ’ಶಿವಪುರಿ ಸಮೀಪ ಇದೆಯೊ, ದೂರಿದೆಯೊ?’ ಅಂತ ಕೇಳದಾಗ, ಅವರ ಹತ್ರ ಇದ್ದೋರು ’ಇಲ್ಲ ಅವರು ತೀರ್‍ಕೊಂಡಿದ್ದಾರೆ ಅಂತ ಹೇಳ್ತಾರೆ. ನಾನು ಅಂಥಾ ಜನಾನ ಬಾಲ್ಯದಲ್ಲಿ ನೋಡಿದ್ದೆ ನನ್ನ ಹಳ್ಳಿಯಲ್ಲಿ.

ಪ್ರ: ವಚನಕಾರರ ಸಾಮಾಜಿಕ ಸಂಘರ್ಷದ ಗುಣದ ಆವಾಹನೆಯ ಪ್ರಶ್ನೆಯನ್ನ ಮತ್ತೆ ಕೇಳತಾ ಇದೇನೆ…

ಉ: ಇಲ್ಲ, ನಾನು ವಿಡಂಬನೆ ರೀತಿಯಲ್ಲಿ ಅದನ್ನ ಮಾಡಿದ್ದೇನೆ. ಹಂಗ ನೋಡಿದರೆ ವಿಡಂಬನೆಯ ಅಂಶಗಳು ಜಾತಿಗಳ ಬಗ್ಗೆಯಾಗಲೇ ಇವೆ. ಅದನ್ನ ಸೂಕ್ಷ್ಮವಾದಂಥ ವ್ಯಂಗ್ಯ ರೀತಿಯಲ್ಲಿ ನಾನು ಉಪಯೋಗ ಮಾಡಿಕೊಂಡಿದ್ದೇನೆ. ಈಗ ಅಂಥಾ ಒಂದು ಹಿಂಸೆಯನ್ನು ಪ್ರತಿಭಟನೆ ಮಾಡುವಂತಿದ್ದರೂ ಸಹಿತ ಬಸವಣ್ಣನೋರು ಹೇಳ್ತಾರಲ್ಲ ’ವೇದವನ್ನೋದಿದವರ ಮುಂದೆ ಅಳು ಕಂಡೆಯಾ ಎಲೆ ಹೋತೆ, ಶಾಸ್ತ್ರಗಳನ್ನೋದಿದವರ ಮುಂದೆ ಅಳು ಕಂಡ್ಯಾ ಎಲೆ ಹೋತೆ, ನೀನು  ಅತ್ತುದಕ್ಕೆ ತಕ್ಕುದ ಮಾಡುವ ನಮ್ಮ ಕೂಡಲಸಂಗಮದೇವಾ’ ಈ ಹೇಳೋ ರೀತಿಯಿದೆಯಲ್ಲ, ಇದು ನನಗೆ ಪ್ರಿಯ. ಹಿಂಸೆಯ ವಿರುದ್ಧದ ಪ್ರತಿಭಟನೆ ಎಷ್ಟು ಅಹಿಂಸಾತ್ಮಕವಾದ ರೀತಿ ಬಸವಣ್ಣನವರೋದು ಇತ್ತು,  ಅದು ನನಗೆ ಭಾಳ ಪ್ರಿಯವಾದದ್ದು. ಭಾಷೆ ತತ್ತ್ವ ಶೈಲಿ ಎಲ್ಲಾ ಕೂಡಿಕೊಂಡು ಸಮರಸವಾಗಿ ಬರುವಂತಹ ರೀತಿಯದು. ಅಷ್ಟು ಉಳಿದವರಲ್ಲಿ ಇದೆ ಅನಿಸೋದಿಲ್ಲ. ಈಗ ’ಮನೆಯೊಳಗೆ ಮನೆಯೊಡೆಯ ಇದ್ದಾನೋ, ಇಲ್ಲವೋ’ ಅನ್ನುವ ಸರಳವಾದ ಒಂದು ಮಾತಾತು. ಆಮೇಲೆ ಇನ್ನೊಂದು ಕಡೆ ಬರ್ತದೆ. ’ಕರುವನಗಲಿಸಿ ತಾಯಮರುಗಿಸಿ ಮೊಲೆವಾಲ ಕರೆದುಣಬೇಡವೋ’ ಏನು ಆರ್ತತೆ  ಕರುಣೆಯಿದೆ ನೋಡಿ, ಈ ಇಡೀ ವಾಕ್ಯದಲ್ಲಿ ಒಂದು ಒತ್ತಕ್ಷರಾನೂ ಇಲ್ಲ. ಅಂದರೆ ಭಾಷೆಯಲ್ಲೂ ಕೂಡಾ ಎಷ್ಟು ಅಹಿಂಸಾತ್ಮಕ ಇದೆ ಅಂದರೆ, ನಮ್ಮ ಮನಸ್ಸಿನಲ್ಲಿ ಫೀಲಿಂಗು ಯಾವ ಭಾಷೆಯನ್ನ  ಹ್ಯಾಗೆ ಆರಿಸ್ಕೊಳ್ತದೆ ಅನ್ನೋದು ಬಸವಣ್ಣನವರ ವಚನದಲ್ಲಿ ನನಗೆ ಸೋಜಿಗ.

ಪ್ರ: ಕುತೂಹಲದ ಸಂಗತಿ ಅಂದರೆ ಈ ಭಾಗದಿಂದ ಬರುವ ಲೇಖಕರಾದ ನಿಮಗೆ  ಬಸವರಾಜ ಕಟ್ಟೀಮನಿಯವರಿಗೆ, ಚಂದ್ರಶೇಖರ ಪಾಟೀಲರಿಗೆ ಕೂಡ,  ಬೇಂದ್ರೆಯವರಿಗಿಂತ ಕುವೆಂಪು ಕಡೆ ಸೆಳೆತ ಹೆಚ್ಚು. ಕಾದಂಬರಿಕಾರರಾಗಿ ಕಟ್ಟಿಮನಿಯವರಿಗೆ ಕುವೆಂಪು ಸೆಳೆತವಾಗಿದ್ದು ಸಹಜ. ಕವಿಯಾಗಿ ನಿಮಗೂ ಕುವೆಂಪು ಸೆಳೆತವಾಗಿದ್ದು ಅರ್ಥವಾಗುವುದಿಲ್ಲ.

ಉ: ಧಾರವಾಡದಲ್ಲಿ ನನಗ ಬೇಂದ್ರೆಯವರು ಬಹಳ ಸಮೀಪ ಇದ್ದರು. ಆದರೆ ನಾನು ಧಾರವಾಡದಲ್ಲಿ ಇದ್ದುಕೊಂಡು ಕೂಡ ಮೊದಲು ಓದಿದ್ದು ಕುವೆಂಪುರವರನ್ನು. ಕಾವ್ಯ ಅಂದ ಕೂಡ್ಲೆ, ಒಂದು ಮೆಜೆಸ್ಟಿಕ್ ಸ್ಟ್ಯೆಲ್ ಇರಬೇಕು. ಒಂದು ಗಂಭೀರವಾದದ್ದಿರಬೇಕು. ಭಾಷೆ ಒಳ್ಳೇದಿರಬೇಕು ಅನ್ನೋದು ಸಾಮಾನ್ಯವಾಗಿ ಇರೋವಂಥದ್ದು. ಹೀಗಾಗಿ ಅವರ ಕವಿತೆಗಳನ್ನು ಓದಿದಾಗ ಬರ್‍ತಕ್ಕಂಥಾ ಭಾಷೆ, ಶೈಲಿ ರೀತಿ ಇದೆಲ್ಲ ಇದೆ ಅನಿಸಿತು. ಮತ್ತೆ ನನ್ನ ಸುತ್ತಮುತ್ತಲ ಜನ ಧಾರವಾಡದಲ್ಲಿ ಇದ್ದುಕೊಂಡೇನೇ ಆಡಿಕೊಳ್ತಿದ್ದು ಕೇಳಸ್ತಿತ್ತು. ಏನು ಬೇಂದ್ರೇನಾ? ಲಾವಣಿ ಬರೀತಾನೆ ಆ ಕವಿ ಹೌದಿಲ್ಲೊ? ಅಂತಿದ್ದರು. ಅದು  ಸ್ವಲ್ಪ ಮನಸ್ಸಿಗೆ ಪರಿಣಾಮ ಬೀರಿರಬೇಕು.

ಪ್ರ: ಬೇಂದ್ರೆಯವರು ಬೀದಿಯ ಭಾಷೆಯನ್ನ, ಜನಪದ ಲೋಕವನ್ನ ಇಟ್ಟುಕೊಂಡು ಮಾಡ್ತಾ ಇದ್ದ ಪ್ರಯೋಗಗಳು ಮಹತ್ವದವು ಅಂತ ಇಲ್ಲಿನ ಜನರಿಗೆ ಅನಿಸ್ತಿರಲಿಲ್ಲವಾ?

ಉ: ಇಲ್ಲ. ಇಲ್ಲಿನ ಜನಕ್ಕೆ ಅನಿಸಿರಿಲಿಲ್ಲ ಆ ಹೊತ್ತಿಗೆ. ಏನು ನಮ್ಮ ಲಾಂಗ್ವೇಜನ್ನೇ ಹಾಕ್ತಾಇದಾನೆ ಅನಿಸ್ತಿತ್ತು. ’ಹಕ್ಕಿ ಹಾರುತಿದೆ ನೋಡಿದಿರಾ?’ ಅಂದರೆ ಏನು? ಗುಬ್ಬಿ ಹಾರುತ್ತಿದೆ ನೋಡಿದಿರಾ ಅಂದ್ರೆ ಏನು? ಇದರಲ್ಲಿ ಕಾವ್ಯ ಏನು ಬಂತು?  ಆದರೆ ಅದೇ ಕುವೆಂಪುರವರ ನಾಡಿನ ಪುಣ್ಯದ ಪೂರ್ವ ದಿಗಂತದಿ ನವ ಅರುಣೋದಯ ಹೊಮ್ಮುತ್ತಿದೆ ಅನ್ನುವಂಥಾ ಸಾಲುಗಳು ಕಾವ್ಯದ ಬಗ್ಗೆ ಭಿನ್ನ ಅನಿಸ್ತಿದ್ದವು. ಕಟ್ಟಿಮನಿ ಇವನ್ನೆಲ್ಲ ಭಾಳ ಚೆನ್ನಾಗಿ ಓದ್ತಿದ್ದರು.

ಪ್ರ: ಕುವೆಂಪುರವರ ಕಾವ್ಯದ ಭಾಷೆಗೆ ಕವಿಯಾದ ನೀವು ಸಹಜ ಆಕರ್ಷಿತರಾದಿರಿ. ಅದರ ಸಂಸ್ಕೃತಮಯ ಶೈಲಿ ತೊಡಕು ಅನಿಸಲಿಲ್ಲವಾ?

ಉ: ಕುವೆಂಪುರವರದು ಪೂರ್ತಿ ಸಂಸ್ಕೃತ ಅನಿಸೋಲ್ಲ. ಸಂಸ್ಕೃತ-ಕನ್ನಡ ಎರಡರ ಲಲಿತ ಮಿಶ್ರಣ ಅವರು ತರ್‍ತಾರೆ. ಅವರ ಅನೇಕ ಕವಿತೆಗಳಲ್ಲಿ ಅರ್ಧಭಾಗ ಸಂಸ್ಕೃತದ್ದು ಇದ್ರೆ, ಮುಂದಿನ ಭಾಗ  ಕನ್ನಡದ್ದು ಬಂದ್‌ಬಿಡ್ತದೆ. ’ಆಕ್ರಮಿಸು ಬಂದೆನ್ನ  ಅಲ್ಪತ್ವವಂ  ಓ ಅನಂತ’ ಎಂಬ ಒಂದು ಕವಿತೆ ಇದೆ. ಅದರ ಎರಡನೇ ಸಾಲ್ನಲ್ಲಿ ಶಿವನ ವರ್ಣನೆ ಮಾಡ್ತಾರೆ. ಅವೆಲ್ಲವಕ್ಕೂ ಕನ್ನಡದ ಹೆಸರು ಕೊಟ್ಟುಬಿಡ್ತಾರೆ.  ”ಪಾವುಡುಗೆ, ಬೆಂಕಿಗಣ್ ಗಂಗೆಮುಡಿ ಓ ಬಾರಾ ವ್ಯೋಮಕೇಶ”. ನೋಡಿ, ಫಾಲನೇತ್ರಕ್ಕೆ ಬದಲಾಗಿ ಬೆಂಕಿಗಣ್ಣು. ನಾಗಭೂಷಣಕ್ಕೆ ಬದಲಾಗಿ ಪಾವುಡುಗೆ. ಬೇಂದ್ರೆ ಕೂಡ ಬಹಳ ಸೆಳೆದರು ಅನ್ಸುತ್ತೆ. ಪೂರ್ತಿ ಜಾನಪದ ಇರದೇನೆ ಪೂರ್ತಿ ಗ್ರಾಂಥಿಕವಾಗಿ ಇರದೇನೇ ಇವೆರಡರ ನಡುವಿನ ಭಾಷೆಯನ್ನು ನಾನು ಕಲೀಲಿಕ್ಕೆ ಆರಂಭಮಾಡಿದೆ ಅನಿಸುತ್ತೆ. ಆದರೆ ಕವಿತೆ ನಮ್ಮ ಮಾತಾಡಿದ ಹಾಗಿರಬೇಕು. ಏನು ಬಾನು ಎನಿತೊ ದೂರವಿದ್ದಂತಿಹುದು, ನಮಗೂ ಅದಕ್ಕೂ ಮಾತುಕತೆಯೇ ಇಲ್ಲ ಅಂತ ’ನಿಯಮೋಲ್ಲಂಘನ’ ಪದ್ಯದಲ್ಲಿ.. ಬರ್ತದೆ.

ಪ್ರ: ಬೇಂದ್ರೆಯವರ ಭಾಷೆ ಕುವೆಂಪು ಅವರ ಭಾಷೆಯಂತೆ ನಿಮಗೆ ಪ್ರಭಾವ ಬೀರದೆ ಇರಲು ಅದು ತುಂಬಾ ಪರಿಚಿತವಾದದ್ದು ಅನ್ನೋಕ್ಕಿಂತಲೂ ಬೇರೆ ಕಾರಣಗಳು ಇರಬಹುದು?

ಉ: ಅಂದರೆ ಅವರ ಮೊದಲಿನ ಪದ್ಯಗಳು ಅಥವಾ ಈ ಪ್ರೀತಿಯ ಬಗ್ಗೆ ಬರಿಯೋವಂಥ ಪದ್ಯಗಳು, ನಿಸರ್ಗದ ಪದ್ಯಗಳು,ಶ್ರಾವಣದ ಪದ್ಯಗಳು, ಇವನ್ನೆಲ್ಲಾ ನೋಡ್ತಿದ್ದಾಗ ನಾನೂ ಧಾರವಾಡದಲ್ಲಿ ಇದ್ದುದರಿಂದ, ಧಾರವಾಡದ ಯಾವ್ಯಾವ ಪ್ರೇರಣೆಗಳು ಅವರಿಗಿದ್ದವು,  ಅವೆಲ್ಲವನ್ನ ನನ್ನ ಕಣ್ಣೆದುರಿಗೇ ಕಾಣ್ತಾ ಇದ್ದೆ. ಅದೇ ಶ್ರಾವಣ, ಇಲ್ಲಿ ಮಳೆಯ ವೈಭವ ಇದೆಲ್ಲ. ಅವರು ಮುಂದೆ ನನ್ನ ’ನೆಲಮುಗಿಲು’ ಕವನ ಸಂಕಲನಕ್ಕೆ ಮುನ್ನುಡಿ ಬರೆಯೋವಾಗ ಆ ಮಾತನ್ನ ಹೇಳ್ತಾರೆ. ನನಗೆ ಯಾವ ಯಾವ ಪ್ರೇರಣೆಗಳು ಧಾರವಾಡದಲ್ಲಿ ಇದ್ದವೋ, ಅವೇ ಪ್ರೇರಣೆಗಳು ಚೆನ್ನವೀರನಿಗೂ ಇವೆ ಅಂತ. ಬಹಳ ಅದ್ಭುತವಾದಂಥ ಮುನ್ನುಡಿ ಅದು. ಇದನ್ನು ಬರೆದಾಗ, ಏನು ಬೇಂದ್ರೆಯವರು, ಎಷ್ಟು ಮುಕ್ತವಾಗಿ ಬರ್ದಿದಾರೆ. ಅವರು ಯಾರಿಗೂ ಹಿಂಗ ಬರೆದಿಲ್ಲ ಅನ್ನೋವಂಥ ಒಂದು ಮಾತು ಬಂತು. ಆದರೆ ಕುವೆಂಪು ಅವರು ಕಾಣೋ ನಿಸರ್ಗ ಆಗಲೀ, ಬೇಂದ್ರೆಯವರು ಕಾಣೋವಂಥ ನಿಸರ್ಗ ಆಗಲೀ ಇವರಕ್ಕಿಂತ ಭಿನ್ನವಾಗಿ ನಾನು ಕಂಡೆ ಅಂತ ಅನ್ಸುತ್ತೆ. ನಿಸರ್ಗದ ಆರಾಧನೆ ಅಂತಲ್ಲ. ಅದು ನನ್ನ ಜೀವನದ ಭಾಗ ಅಂತ ಅನ್ಸುತ್ತೆ.

ಪ್ರ: ಟಾಗೂರ್ ಕಾವ್ಯ ಅನುವಾದ ಮಾಡಿದಿರಿ. ಯಾಕೆ ನಿಮಗೆ ಅದು ಆಪ್ತವೆನಿಸಿತು? ಅದರ ಆದರ್ಶವಾದ?

ಉ: ಇಲ್ಲ. ಟ್ಯಾಗೂರ್ ನಾನು ಓದಿದ್ದೆ. ಅವರ ಪ್ರಭಾವ ನನಗೆ ಸ್ಪಲ್ಪ ಮಟ್ಟಿಗಿತ್ತು. ಅವರ ’ಗೀತಾಂಜಲಿ’ ಪ್ರಸಿದ್ಧವಾಗಿತ್ತಲ್ಲ ಆ ಕಾಲಕ್ಕೆ. ಆದರೂ ಅವರ ಆದರ್ಶವಾದ ಅಷ್ಟು ಮುಖ್ಯ ಅನಿಸಲಿಲ್ಲ. ಅಲ್ಲಿ ಅವರ ಮಿಸ್ಟಿಕ್ ಎಲಿಮೆಂಟ್ ಇರ್‍ತಿತ್ತು. ’ಹಿ ಕಮ್ಸ್ ಹಿ ಕಮ್ಸ್, ಹಿ ಎವರ್‌ಕಮ್ಸ್’ ಅಂತ. ಈ ಭಾವನೆ ಅದು ನನಗೆ ಶರಣರ ಅಥವಾ ಆನುಭಾವಿಗಳ ಸಮ ಸಮೀಪ ಅನಿಸಿಬಿಡ್ತಿತ್ತು. ಈಗ ಜಾನಪದ ಕಾವ್ಯ ಏನಿತ್ತು, ಅದು ನಾನು ಹಳ್ಳಿಯಲ್ಲಿದ್ದಾಗಲೇ ಕೇಳ್ತಿದ್ದೆ. ಇವೆಲ್ಲ ಹಾಡು ಕಿವಿ ತುಂಬಿ ಬರ್‍ತಿತ್ತು. ಅದಕ್ಕಾಗೇ ನನಗೆ ನರಸಿಂಹಸ್ವಾಮಿ ಪದ್ಯಗಳು ಸೆಳೀತಿದ್ದವು. ಹೈಸ್ಕೂಲ್‌ನಲ್ಲಿದ್ದಾಗ ಯಾವುದೇ ಒಂದು ಕಾರ್ಯಕ್ರಮ ಮಾಡಿದಾಗ ಅವರ ಭಾವಗೀತೆಗಳನ್ನ ಹಾಡ್ತಿದ್ದರು. ಆವಾಗ ಕುವೆಂಪುರವರ ’ತೇನೆಹಕ್ಕಿ’ ಬಹಳ ಚೆನ್ನಾಗಿ ಹಾಡ್ತಾ ಇದ್ದರು.  ಜ್ಯೋತ್ಸ್ನೆ ತುಂಬಿತುಳುಕಿ ಹರಿಯೆ ಸ್ನಿಗ್ಧ ಶರತ್ಕಾಲದಿ ಅದರ ಒಂದು ವಾತಾವರಣಾನೇ ನನಗೆ ರೋಮಾಂಚನ ಮಾಡ್ತಿತ್ತು.

ಪ್ರ: ನಿಮ್ಮ ಕವಿತೆಯಲ್ಲಿ ಜಾನಪದ ಲೋಕ ನೆನಪಿನ ಚಿತ್ರಗಳಾಗಿ ಬರ್‍ತದೆ ಹೊರತು ಬೇಂದ್ರೆಯವರಲ್ಲಿ ಬರುವ ಹಾಗೆ ಕಾವ್ಯ ಭಾಷೆಯಲ್ಲಿ ಅಂತರ್ಗತವಾಗಿ ಬ್ಲೆಂಡ್ ಆಗೋದಿಲ್ಲ.

ಉ: ಯಾಕೆಂದರೆ ಜನಪದರು ಆಡೋ ಮಾತು ಬೇಂದ್ರೆಯವರು ಬಳಸಿದ ರೀತಿಯಲ್ಲಿ ನಾನು ಬಳಸಲೇ ಇಲ್ಲ. ಹಂಗ ಮಾಡಿದ್ದರೆ ಬೇಂದ್ರೆಯವರ ಅನುಕರಣೆ ಅಂತಾಗಿ ಬಿಡ್ತಿತ್ತು. ಧಾರಡಾಡದ ಗೆಳೆಯರ ಗುಂಪಿನ ಬಹಳ ಜನ ಕವಿಗಳು ಯಾಕೆ ಹೆಸರು ಮಾಡ್ಲಿಲ್ಲ, ಮುಂದೆ ಬರ್‍ಲಿಲ್ಲ ಅಂತಂದರೆ, ಅವರೆಲ್ಲ ಅದೇ ರೀತಿ ಬರೀಲಿಕ್ಕೆ ಹೋಗ್ತಿದ್ದರು. ಉದಾಹರಣೆಗೆ ದೇಸಾಯಿ ದತ್ತಮೂರ್ತಿ; ನರೇಗಲ್ಲ ಪ್ರಹ್ಲಾದರಾಯರು. ಇಂಥದೆಲ್ಲ ನೋಡಿದಾಗ ’ಏನು ಬೇಂದ್ರೇನೆ ಇದ್ದಾರಲ್ಲ, ಇವಾರ್‍ಯಾಕೆ’ ಅನಿಸ್ತಿತ್ತು.

ಪ್ರ: ಒಬ್ಬ ಪ್ರಭಾಶಾಲಿ ಕವಿಯ ಜತೆಯಲ್ಲಿರುವುದು ಒಂದು ವರವೂ ಹೌದು, ಪ್ರಭಾವದಿಂದ ತಪ್ಪಿಸಿಕೊಂಡು ಬರೆಯೋ ಸವಾಲೂ ಹೌದು.

ನನ್ನ ದೃಷ್ಟಿಯಿಂದ ಪ್ರಭಾವ ಬೇರೆ ಪ್ರೇರಣೆ ಬೇರೆ. ಪ್ರಭಾವಕ್ಕೆ ಒಳಗಾಗಿದ್ದಾರೆ ಅಂದರೆ ಕೆಲವು ಅಂಶಗಳು ಶಬ್ದರೂಪದಲ್ಲೊ, ಶೈಲಿ ರೂಪದಲ್ಲೊ, ರೂಪಕದಲ್ಲೋ ಬಂದು ಸೇರಿಬಿಡ್ತದೆ. ಪ್ರೇರಣೆ ಅಂತಂದರೆ ’ಓ ಇಂಥಾದ್ದು ಬರೆದರಲ್ಲಾ ಅವರು! ನನಗೆ ಮತ್ತೊಂದು ಅಂಥಾ ಪದ್ಯ ಬರೀಲಿಕ್ಕೆ ಸ್ಫೂರ್ತಿ ಕೊಡೋವಂಥಾದ್ದು’. ಈಗೊಂದು ಉದಾಹರಣೆ ಕೊಡ್ತೇನೆ. ಬೇಂದ್ರೆಯವರು ’ಪಾತರಗಿತ್ತಿ ಪಕ್ಕ, ನೋಡಿದೇನೆ ಅಕ್ಕ’ ಅಂತ ಬರೆದರು. ಅವು ಎರಡೂ ಸಾಲು ಅವರವಲ್ಲ. ನಾನು ಸಣ್ಣ ಹುಡುಗನಿದ್ದಾಗ ಕೇಳಿದವು. ಹಳ್ಳಿಯಲ್ಲಿ ಹುಡುಗರು ಎಲ್ಲರೂ ಇದನ್ನು ಅಂತಿದ್ದರು. ಆ ಎರಡು ಸಾಲನ್ನೆ ಎತ್ತಿಕೊಂಡು ಬಹಳ ಅದ್ಭುತವಾದಂತಹ ಪದ್ಯವನ್ನ  ಬರೆದರು. ಆಮೇಲೆ ನಾನು ಗಿರಿಗಿರಿ ಗಿಂಡಿ ಈಬತ್ತಿ ಉಂಡಿ ಅಂತ ಪದ್ಯ ಬರೆದೆ. ಅದನ್ನ ಬರೀಲಿಕ್ಕೆ, ಬಹುಶಃ ಧೈರ್ಯ ಪ್ರೇರಣೆ ಒದಗಿದ್ದು ಪಾತರಗಿತ್ತಿ ಪಕ್ಕದಿಂದ. ಇದು ಪ್ರಭಾವ ಅಲ್ಲ, ಪ್ರೇರಣೆ. ಅದರ ಭಾವ, ರೀತಿ, ಲಯಾನೇ  ಬೇರೆ. ಇದೇ ಬೇರೆ. ಹಿಂಗ ಮಾಡಿದ್ದರಿಂದ ನನ್ನಲ್ಲಿ ಬೇರೆ ಬೆಳವಣಿಗೆಗೆ ಸಹಾಯವಾಯಿತು.

ಪ್ರ: ’ರಾಮಾಯಣ ದರ್ಶನಂ’ ಓದಿ ಮೆಚ್ಚಿ ಒಂದು ಪದ್ಯ ಬರೀತೀರಿ. ಅದರೆ ಕವಿಯಾಗಿ ನಿಮಗೆ  ಮಹಾಕಾವ್ಯ ರಚನೆ ಮಾಡಬೇಕು ಅನಿಸಲಿಲ್ಲ, ಯಾಕೆ?

ಉ: ಅದೂ.. (ಚಿಂತಿಸುತ್ತಾ) ಒಂದು ದೃಷ್ಟಿಯಿಂದ ಈ ಕಥನ ಕಡಿಮೆ ನನ್ನಲ್ಲಿ. ಎರಡು ಮೂರು  ಪದ್ಯಗಳನ್ನ ರೇರಾಗಿ ಬರೆದಿರಬಹುದು. ಅದಕ್ಕೆ ಸ್ವಲ್ಪ ನೆರೇಟೀವ್ ಶಕ್ತಿ ಬೇಕು ನೋಡಿ ಆ ರೀತಿ ಬರೀಲಿಕ್ಕೆ.  ಭಾವಪ್ರಧಾನ ಕಾವ್ಯದಲ್ಲೆ ನನ್ನ ಮನಸ್ಸು…..

ಪ್ರ: ಸಾರ್, ನಿಮ್ಮ ಇಡೀ ಕವಿತೆಯಲ್ಲಿ ನನ್ನ ಪ್ರಕಾರ ಆಕಾಶ ಬಹಳ ಮುಖ್ಯವಾದ ವಸ್ತು. ಯಾಕೆ ಅದು ಅಷ್ಟು ಕಾಡಿದೆ?

ಉ: ಹಳ್ಳಿಗಳಲ್ಲಿ ಮಣ್ಣಿನ ಮನೆಗಳು. ಹೊರಗೆ ಕಟ್ಟೆ ಇರ್‍ತಿತ್ತು. ನಾವು ಸಾಧಾರಣ ಮಾಳಿಗೆ ಮೇಲೆ ಮಲಗ್ತಾ ಇದ್ದಿವಿ. ಸೆಖೆ ಇರ್‍ತಿತ್ತಲ್ಲ. ಬೇಸಗೆ ಬಂದಾಗ ಹೆಚ್ಚಾಗಿ ಮಾಳಿಗೆ ಉಪಯೋಗ ಮಾಡ್ತಿದ್ದೆವು. ಸಾಲಿಂದ ಬಂದ ಕೂಡ್ಲೆ ರೊಟ್ಟಿ ಹಚ್ಚಿಕೊಂಡು ಮಾಳಿಗೆ ಮೇಲೆ ಹೋಗಿ ತಿನ್ನೋದು. ರಾತ್ರೀನೂ ಅಲ್ಲೆ ಮಲಕ್ಕೊಳ್ಳೋದು. ಮಲ್ಕೊಂಡಾಗ ಆ ಇಡೀ ಆಕಾಶ ಎದುರಿಗೆ ಕಟ್ಟಿದಂಗಾಗೋದು. ಆ ಚುಕ್ಕಿಗಳು, ಚಂದ್ರ. ಯಾವುದೋ ಒಂದು ನಿಗೂಢವಾದಂಥ ಶಕ್ತಿ. ಅದಕ್ಕೂ ನಮಗೂ ಏನಪಾ ಭಾಳ ಸಂಬಂಧ ಅದೆ. ಈಗ ಮಳೆ. ಆಕಾಶಕ್ಕೂ  ಭೂಮಿಗೂ ಜೋಡಿಸುವಂತಹ ಒಂದೇ ಒಂದು ಸೇತುವೆ ಮಳೆ. ಇದು ಕಣ್ಣೆದುರಿಗೆ ನೇದು ಕೂಡಿಸ್ತದಲ್ಲ. ಮಳೆ ಬಗ್ಗೂ ಬಹಳ ಆಕರ್ಷಣೆ ನನಗೆ. ಒಟ್ಟು ಆಕಾಶದಲ್ಲಿ ಏನು ವಿದ್ಯಮಾನಗಳು ನಡೀತವೆ, ಅವೆಲ್ಲವೂ ನನ್ನ ಮನಸಿಗೆ ತುಂಬ್ಕೊಳ್ಳೋವು.  ಗುಡುಗು ಮಿಂಚು ಮೋಡ. ಮೋಡಗಳ ಬಗ್ಗೆಯಂತೂ ಸುಮ್ನೆ ನೋಡ್ಕೊತಾ ಇದ್ದು ಬಿಡತಿದ್ದೆ.  ’ಮೇಘೂಪಾಸನೆ’ ಅಂತ ನನ್ನ ಪದ್ಯ ಇದೆಯಲ್ಲ ’ಕಾವ್ಯಾಕ್ಷಿ’ಯಲ್ಲಿ. ನೋಡುನೋಡುತಿರೆ…….

ಪ್ರ: ನಿಮ್ಮ ಕಾವ್ಯದೊಳಗಿನ ಆದರ್ಶವಾದದ ಸೆಳೆತಕ್ಕೂ ಮುಗಿಲಿನ ಸೆಳೆತಕ್ಕೂ ಪರಸ್ಪರ ಸಂಬಂಧ ಇದ್ದಂಗೆ ಕಾಣ್ತದೆ.

ಉ: ಇರಬಹುದು. ಈಗ ಮೋಡ ಅಂತಂದಾಗಲೂ ಕೂಡಾ, ಅಲ್ಲೆ ಒಮ್ಮೆಲೆ ಹುಟ್ಟಿದ್ದು ಅಂತ ಅನಿಸಬಹುದು. ಆದರೆ ಅದೂ ಭೂಮಿ ಮೇಲಿನ ನೀರು ಆವಿಯಾಗಿ ಹೋಗಿ ಆ ಆಕಾರವನ್ನು ಪಡಿದಿರುವಂಥದ್ದು. ಯಾವಾಗ ಅದು ತನ್ನಲ್ಲಿನ ಸತ್ವವನ್ನು ಭೂಮಿಗೆ ಕೊಡುಗೆಯಾಗಿ ಕೊಡ್ತು. ಆಕಾರ ಇತ್ತು ಅದಕ್ಕೆ ಮೊದಲು. ಆದರೆ ನಿರಾಕಾರ ಆಗಿ ಬಿಡ್ತು. ಆಕಾರ ತಳಿಯೋದು, ಮತ್ತೆ ನಿರಾಕಾರವಾಗಿಬಿಡೋದು ಈವೆರಡೂ ನನಗೆ ಯಾವತ್ತೂ ಸೋಜಿಗ.

ಪ್ರ: ನಿಮ್ಮ ಕವಿತೆಯ ಎರಡನೆಯ ಬಹಳ ಮುಖ್ಯ ವಸ್ತು ಕಾಲ ಅಥವಾ ಸಾವು.  ಇವು ನಿಮ್ಮ ಕಾವ್ಯದ ಜೀವನ ದರ್ಶನ ರೂಪಿಸುವಂತೆ ಹಿನ್ನೆಲೆಯಾಗಿ ಕೂಡ ಬರ್ತವೆ. ನಿಮಗೆ ಇವು ಯಾಕಿಷ್ಟು ಕಾಡ್ತವೆ?

ಉ: ನಾನು ಸಣ್ಣವ ಇದ್ದಾಗಿನಿಂದಲೂ ಬಹಳ ಸಾವುಗಳನ್ನ ನೋಡಿದೇನೆ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಎರಡು ಸಲ ದೊಡ್ಡ ಪ್ರಮಾಣದಿಂದ ನಮ್ಮೂರಿಗೆ ಪ್ಲೇಗು ಬಂತು. ಪಟಪಟಪಟ ಇವತ್ತು ಇದ್ದೋರು ನಾಳೆಗೆ ಇರ್‍ತಿರ್‍ಲಿಲ್ಲ. ಆ ಸಾವು ಒಂದು ರೀತಿಯಲ್ಲಿ ಮನಸ್ಸಿಗೆ ಘಾಸಿಮಾಡಿತು. ಆಮೇಲೆ ನಮ್ಮ ಮನೆಯಲ್ಲೇನೆ ಆದಂತಹ ಕೆಲವು ಸಾವು. ಸಣ್ಣ ವಯಸ್ಸಿನಲ್ಲಿಯೇ ನಮ್ಮಕ್ಕ ಯಾವುದೊ ಒಂದು ಜಡ್ಡಿನಿಂದ ತೀರ್‍ಕೊಂಡ ರೀತಿ. ಇದನ್ನ ನೋಡ್ತಿದ್ದಾಗ ’ಏನಿದು ಮೃತ್ಯು? ಯಾಕೆ ಹೀಗೆ ಅಕಾಲಿಕವಾಗಿ ಬರ್ತಿದೆ? ಆಮೇಲೆ ನಮ್ಮ ತಂದೆಯವರು ಪ್ರತಿವರ್ಷ ಮುಳುಗುಂದಕ್ಕೆ ಹೋಗಿ, ಅವರ ಗುರುಗಳ ಮನೇಲಿ ಒಂದು ದಿವಸ ಇದ್ದು ಬರೋವಂಥ ಒಂದು ಪದ್ಧತಿಯಿತ್ತು. ಅವರ ಗುರುಗಳ ಹೆಸರು ಚೆನ್ನವೀರಯ್ಯನವರು ಅಂತ. ನನಗೆ ಅವರ ಹೆಸರನ್ನೇ ಇಟ್ಟಿದ್ದಾರೆ. ಒಂದ್ಸಲ ಹೋದಾಗ ಇಳಿಸಿ ಕೈಹಿಡಿದುಕೊಂಡು ಹೋಗ್ತಾ ಇದ್ದೆ.  ಹೊಸ್ತಲಲ್ಲೆ ನಿತ್ಕೊಂಡು ಕಣ್ಣುಮುಚ್ಚಿ ’ಗುರುವೇ ಗುರುವೇ’ ಅಂತ ಧ್ಯಾನ ಮಾಡಿದರು. ಆಮೇಲೆ ಹಂಗೇ ನಿಂತಬಿಟ್ರು. ನಿಲ್ಲೋಣ, ಆಯಾಸ ಆಗಿರಬೇಕು ಅಂತಿಳಕೊಂಡು ಅಲ್ಲೇ  ಕಟ್ಟಿ ಇತ್ತು. ಸ್ವಲ್ಪಹೊತ್ತ ಕೂಡ್ರೋಣ ಅಂತ ಹಿಡಕೊಂಡೆ. ಅವರು ಅಲ್ಲೇ ತೀರ್‍ಕೊಂಡುಬಿಟ್ಟರು.

ಪ್ರ: ನಿಮ್ಮ ಕವಿತೆಯಲ್ಲಿ ಜೀವನವನ್ನು ಅರ್ಥಪೂರ್ಣವಾಗಿ ಬದುಕುವ  ಒತ್ತಾಯಗಳನ್ನು ಸಾವಿನ ಸಾನಿಧ್ಯದಲ್ಲೇ ಹುಟ್ಟಿಸುವ ಆಶಯಗಳಿವೆ.

ಉ: ಅಷ್ಟೇ ಅಲ್ಲ, ಸಾವಿನ ಸಾನಿಧ್ಯದಿಂದ ಜೀವನದ ಘನತೆ ಕೂಡ ಗೊತ್ತಾಗುತ್ತೆ. ಜೀವನ ಬೆಲೆಯುಳ್ಳದ್ದು ಅನ್ನೋ ಕಲ್ಪನೆ ಉಂಟಾಗ್ತದೆ. ಆಮೇಲೆ ಹಿರಿಯರು  ಮನೇ ಒಳಗೆ  ಅದಾರ ಅಂತಂದ್ರೆ, ಮನೆ  ತುಂಬ್ಕೊಂಡಿರ್ತದೆ. ಸಣ್ಣ ಒಂದು ಕೋಣೆಯಲ್ಲಿ ಇದ್ದುಕೊಂಡು ಕೂಡ,  ತಮ್ಮ ಕಣ್ಣಿಂದಾನೇ ಇಡೀ ಮನೆಗೆಲ್ಲ ಒಂದು ಬೆಳಕು ಕೊಡೋಹಾಗೆ, ಎಲ್ಲಾನೂ ಅಬ್ಸರ್ವ್ ಮಾಡ್ತಿದ್ದಾರೆ ಅನಿಸೋ ಹಾಗೆ ಇರ್ತದೆ.

ಪ್ರ: ನಿಮ್ಮ ಕಾವ್ಯದಲ್ಲಿ ಶಿಶುಮುಗ್ಧತೆ ಅಂಶ ಹೆಚ್ಚು. ನಿಸರ್ಗದ ಮುಂದೆ ಸೋಜಿಗ ಪಡುವಾಗ ನೀವು ಇನ್ನೂ ದೊಡ್ಡವರೇ ಆಗಿಲ್ಲ ಅನಿಸುವಂತಹ ಸರಳ ಮುಗ್ಧತೆ ಅನ್ನೋದಿದೆ.

ಉ: ನೀವು ಭಾಳ ಒಳ್ಳೇ ಅಂಶ ಕಂಡುಹಿಡಿದಿರಿ. ಈಗ್ಲೂಕೂಡ ನನಗೆ ನಾನು ದೊಡ್ಡಂವಾಗಿದೀನಿ ಅಂತ ಅನಿಸೋದೆ ಇಲ್ಲ. ನಾನು ಬಹಳ ಸಣ್ಣವನೇ ಅಂತ ಅನ್ಸುತ್ತೆ. ನನ್ನ ಕವಿತೆ ಓದಿ ಮೆಚ್ಕೊಂಡವರು ಬರ್ತಾರಲ್ಲ, ಅವರು ಹಿಂಗ ಬಗ್ಗಿ ನಮಸ್ಕಾರ ಮಾಡ್ಲಿಕ್ಕೆ ಬರ್‍ತಾರೆ. ನನಗೆ ಬಹಳ ಮುಜುಗರ ಆಗಿಬಿಡ್ತದೆ. ’ಅಯ್ಯೋ ನಾನು ಸಣ್ಣವನು. ಮಾವಿನ ಕಾಯೊಳು ಎಕ್ಕೆಯ ಕಾಯಿ ನಾನು. ಯಾಕೆ ಹಿಂಗೆ ಮಾಡ್ತಾರಲ್ಲಪ್ಪಾ’ ಅನಿಸಬಿಡ್ತದೆ.

ಪ್ರ: ನಿಮ್ಮ ಇಡೀ ಕವಿತೆಗಳಲ್ಲಿ ಸಾನೆಟ್ಟಿನದು ಒಂದು ಮುಖ್ಯ ಪ್ರಯೋಗ. ಅದರ ವಸ್ತು ಸಾಮಾನ್ಯವಾಗಿ ಹೀರಿಕರನ್ನು ಕುರಿತದ್ದು. ಕಿರಿಯ ತಲೆಮಾರಿಗೆ ಕಿರಿಯ ತಲೆಮಾರಿನವರು ಆರಾಧನೆ ಮಾಡುವಂಥ ನಿಲುವು ನಿಮ್ಮಲ್ಲಿ ತುಂಬಾ ಆಳವಾಗಿದೆ. ಆ ಕಾರಣಕ್ಕಾಗಿ ಎರಡು ಕೊರತೆಗಳು ಕಂಡು ಬರ್ತವೆ. ಇದನ್ನು ಪರಂಪರೆ ಅಥವಾ ಚರಿತ್ರೆಯ ಅವಾಹನೆ ಅನ್ನೋದಾದರೆ, ಅದರ ಜೊತೆಗೆ ನೀವು ವಿಮರ್ಶಾತ್ಮಕವಾಗಿ ಒಡನಾಡೋದಕ್ಕೆ ಅಷ್ಟು ಸಾಧ್ಯವಾಗಲ್ಲಿಲ್ಲ ಅಂತ ಅನ್ಸುತ್ತೆ. ಅಂದರೆ ಪರಂಪರೆ ಜತೆ ವರ್ತಮಾನದ ಜತೆ  ವಿಮರ್ಶಾತ್ಮಕವಾದ ಗುದ್ದಾಟಗಳಿಗೆ ನಿಮ್ಮ ಈ ಮಗುಮುಗ್ಧತೆಯೆ ಬಿಡಲಿಲ್ಲವಾ?

ಉ: ಇಲ್ಲ, ಅದನ್ನ ಪೂರ್ಣ ನಾನು ಒಪ್ಪೋದಿಲ್ಲ. ವ್ಯಕ್ತಿಗಳ ಬಗ್ಗೆ ಬರೆದ ಬಹಳಷ್ಟು ಸುನೀತಗಳನ್ನು ನೋಡದಾಗ ಆ ವ್ಯಕ್ತಿತ್ವ, ಅವರ ಕೊಡುಗೆ, ಜೀವನ, ಎಲ್ಲಾ ಕಣ್ಮಂದೆ ತುಂಬಿ ಬರೋಹಂಗೆ  ನಾಲ್ಕು ಸಾಲಲ್ಲಿ  ಕೊಡೋದು. ಸಾನೆಟ್ ಬರೀವಾಗ ನಾನು ಬಹಳ  ಕಷ್ಟಪಡ್ತೀನಿ. ನನ್ನ ಮನಸಿಗೆ ಸಂಪೂರ್ಣ ತೃಪ್ತಿಯಾಗೊ ಹಂಗೆ, ಯಾವುದೋ ಒಂದು ಶಬ್ದ ಕೂಡ ಸರಿಯಾದ ರೀತಿ ಬರಬೇಕು. ಅರ್ಥಪೂರ್ಣವಾಗಿರಬೇಕು ಅನ್ನೋವಂಗೆ ಬರೀಲಿಕ್ಕೆ ಪ್ರಯತ್ನಪಡ್ತೀನಿ. ಹಾಗೆ ಬರೀವಾಗ ನನಗೆ ಗೊತ್ತಿಲ್ಲದ ಹಾಗೇನೆ, ಬಹುಶಃ ಜೀವನದಲ್ಲಿ ನಾನು ಯಾವ ಮೌಲ್ಯಗಳಿಗೆ ಮಹತ್ವ ಕೊಡ್ತೀನಿ, ಆ ಮೌಲ್ಯಗಳನ್ನ ಅಲ್ಲಿ ಗುರ್ತಿಸ್ತೀನಿ. ಅದಕಾಗಿ ನನಗೆ ಆ ವ್ಯಕ್ತಿ ಹೆಚ್ಚು ಮಹತ್ವದ್ದು ಅನಿಸ್ತದೆ.  ಕರ್ಕಿಯವರ ಮೇಲೆ ಬರೆದಾಗ, ಬೇಂದ್ರೆಯವರ ಮೇಲೆ ಬರೆದಾಗ, ಅಲ್ಲಿ ನಾನು ಮೆಚ್ಕೊಂಡ ಗುಣಗಳನ್ನ ಗುರ್ತಿಸ್ತೀನಿ. ಬೇಂದ್ರೆಯವರ ಬಗ್ಗೆ ಬರೀವಾಗ ಸೈತ ಅವರ ಸ್ವಭಾವ ಬರ್ತದೆ. ಹಣ್ಣಾದ ಕೇದಿಗೆಯ ಹೊಡೆ, ಚೂಪಾದ ಗರಿ, ಹುಷಾರಿ ಅಂತನ್ನೊ ಮಾತು ಬರ್‍ತದೆ.

ಪ್ರ: ಅಡಿಗರು ಚರಿತ್ರೆ  ವರ್ತಮಾನಗಳ ಜತೆ ಮಾಡೋ ಗುದ್ದಾಟ ನೋಡುವಾಗ, ನೀವು ಮಾಡೋ ಗುದ್ದಾಟದಲ್ಲಿ ಗುಣಗ್ರಾಹಿತನ ಹೆಚ್ಚು ಕೆಲಸ ಮಾಡ್ತದೆ. ಇದೇ ಒಂದು ಮಿತಿ ಕೂಡ ಆಗ್ತದೆ ಅಂತನ್ನೋದು ನನ್ನ ಅಭಿಪ್ರಾಯ. ನನ್ನ ಇನ್ನೊಂದು ಪ್ರಶ್ನೆ ಅಂದ್ರೆ, ಸಾನೆಟ್ ಯಾಕೆ ವ್ಯಕ್ತಿಚಿತ್ರಕ್ಕೆ ಬಹಳ ಹೊಂದಿಕೊಳ್ಳೊ ಪ್ರಕಾರವಾಗಿದೆ ಅಂತ.

ನಾನು ಬರೆದ ಸಾನೆಟ್‌ಗಳಲ್ಲಿ ಮೂರು ವಸ್ತುಗಳಿವೆ. ವ್ಯಕ್ತಿಚಿತ್ರಗಳು. ನಿಸರ್ಗ ಸ್ಪಂದನ. ಇನ್ನೊಂದು ಜಿಜ್ಞಾಸೆ. ಈಚೆಗಂತೂ ಹೆಚ್ಚಾಗಿ ಜಿಜ್ಞಾಸೆ ಬರ್‍ತಾ ಇದೆ. ಇದರ ಜತೆಗೇನೆ ಶಿವರುದ್ರಪ್ಪನವರು ಅಂತ ಕಾಣತದೆ,  ಏನು ನೀವು ಸಾನೆಟ್ಟುಗಳ ಮೂಲಕ ಸಾಹಿತ್ಯ ಚರಿತ್ರೇನೆ ಕಟ್ಟಿಬಿಟ್ಟಿದ್ದೀರಾ ಅಂತ ಹೇಳಿದರು. ನನಗೂ ಆಶ್ಚರ್ಯ ಅನಿಸಿತು. ಯಾಕಂದರೆ ನಾನು ಹಳಕಟ್ಟಿಯವರ ಬಗ್ಗೆ ಬರ್ದೀದೀನಿ, ಮುದ್ದಣ, ಆಲೂರು ವೆಂಕಟರಾಯರು, ಗೋಕಾಕರು, ಬೇಂದ್ರೆಯವರು, ಕರ್ಕಿಯವರು, ಈ ರೀತಿಯಾಗಿ.

ಪ್ರ: ಸಾನೆಟ್‌ಗಳ ಜತೆಗೇನೆ ನೀವು  ಚೌಪದಿಗಳನ್ನು ಪ್ರಯೋಗಿಸಿದಿರಿ, ಅದರಲ್ಲೂ ಕಥನದಲ್ಲಿ. ಇದಕ್ಕೆ ನೀವು ಎಲ್ಲಿಂದ ಪ್ರೇರಣೆ ಪಡಕೊಂಡಿರಿ. ಇಂಗ್ಲಿಷ್ ಗೀತಗಳಿಂದ?

ಉ: ಇಲ್ಲ. ಕನ್ನಡ ಛಂದಸ್ಸಿಗೆ ಚೌಪದಿ ಬಹಳ ಸ್ವಾಭಾವಿಕವಾದಂತಹ ರೀತೀಲಿ ಬರ್ತದೆ.  5 ಮಾತ್ರೆಯ ಗಣ ಅಂತೂ ಅದರಿಂದ ಪಾರಾಗೋದಿಕ್ಕೇ ಆಗೋದಿಲ್ಲ. ಬಿಎಂಶ್ರೀಯವರ ’ಇಂಗ್ಲಿಷ್ ಗೀತಗಳು’ ಕಾವ್ಯದ ಬಗ್ಗೆ ಆಸಕ್ತಿ ಮೂಡಿಸಲಿಕ್ಕೆ ಕಾರಣ ಆಯಿತು. ಆದರೆ ಅಷ್ಟು ಪ್ರಭಾವ ನನಗೆ ಆಗ್ಲಿಲ್ಲ. ನಿಜವಾಗಿಯೂ ಹೆಚ್ಚು ಪ್ರಭಾವಿಸಿದ್ದು ಶ್ರೀಯವರು ಸಂಪಾದನೆ ಮಾಡಿದ ’ಕನ್ನಡ ಬಾವುಟ’. ನಾನು ಹೈಸ್ಕೂಲ್‌ನಲ್ಲಿದ್ದಾಗ ಅದು ನನಗೆ ಬಹುಮಾನವಾಗಿ ಬಂತು. ನೋಡಿ, ನಮ್ಮ ಇಡೀ ಕನ್ನಡ ಕಾವ್ಯ ಪರಂಪರೆಯ ಸಂಗ್ರಹ ಅದುವರೆಗೂ ಬಂದಿರಲಿಲ್ಲ. ಶಾಸನಗಳನ್ನು ಹಿಡಿದುಕೊಂಡು, ಹಿಂದಿನ ಕವಿಗಳ ಭಾಗಗಳನ್ನೊಳಗೊಂಡು ಹೊಸಗನ್ನಡದ ಕವಿತೆಯಲ್ಲಿ ಪ್ರಮುಖರಾದವರಲ್ಲಿ ಎಲ್ಲರವೂ ಅಲ್ಲಿದೆ. ಬೇಂದ್ರೆ, ಕುವೆಂಪು, ವಿಸೀ, ಮಧುರಚೆನ್ನ ಎಲ್ಲರದೂ ತೆಗೆದುಕೊಂಡು ಬಂದಿದ್ದಾರೆ. ಕನ್ನಡ ಕಾವ್ಯದ ಬಗ್ಗೆ ಒಂದು ಇಡೀ ಕಲ್ಪನೆ ಕಣ್ಣಿದರಿಗೆ ಬರ್ತದೆ. ಇದರಲ್ಲಿ ಹೊಸ ರೀತಿ ಇತ್ತು. ಆ ಹೊತ್ತಿಗೆ ಗೋವಿಂದ ಪೈ ಸಾನೆಟ್ ಬರೆದಿದ್ದರು. ಮಾಸ್ತಿಯವರ ’ಮಲಾರ’ ಇತ್ತು. ಬೇಂದ್ರೆಯವರ  ’ಉಯ್ಯಾಲೆ’ ಬಂದಿತ್ತು. ಗೋಕಾಕ್, ಪುತಿನ ಬರೆದಿದ್ದರು. ಆಮೇಲೆ ಕುವೆಂಪುರವರ ’ಕೃತ್ತಿಕೆ’  ಇತ್ತು. ಇದೆಲ್ಲಾ ನೋಡ್ಕೊಂಡಾಗ ನನಗೆ ಕುವೆಂಪುರವರ ’ಕೃತ್ತಿಕೆ’ ಬೇಂದ್ರೆಯವರ ’ಉಯ್ಯಾಲೆ’ ಇವು ನನ್ನ ಮನಸ್ಸಿಗೆ ಬಂದವು. ’ಕೃತ್ತಿಕೆ’ಯಲ್ಲಿ ಸಾನೆಟ್ಟಿನ ಕಟ್ಟುನಿಟ್ಟುಗಳು ಏನಿವೆಯಲ್ಲ, ಅವನ್ನೆಲ್ಲ ಕುವೆಂಪು ಬಹಳ ಪಾಲಿಸಿಕೊಂಡಿದಾರೆ. ಬೇಂದ್ರೆಯವರು ಸ್ವಾತಂತ್ರ್ಯ ವಹಿಸ್ತಾರೆ. 8+6 ಸಾಲುಗಳಿಟ್ಟು ಬೇಂದ್ರೆಯವರು ’ಅಷ್ಟಷಟ್ಪದಿ’ ಅಂದರು. ಇಂಗ್ಲೀಷಲ್ಲೂ ನಾನು ವರ್ಡ್ಸ್‌ವರ್ತ್‌ನ ಸಾನೆಟ್ಟುಗಳನ್ನ ನೋಡಿದ್ದೆ. ಮೊದಲಿನಿಂದಲೂ ನಾನು ಏನು ಪ್ರಯತ್ನ ಮಾಡ್ತಿದ್ದೆ ಅಂದ್ರೆ, ಈ ಭಾವಗೀತೆಗಳ ಭಾವೋದ್ವೇಗಕ್ಕೆ ಒಳಗಾಗಬಾರದು, ಕಂಟ್ರೋಲ್ ಮಾಡಬೇಕು ಅಂತ ಇತ್ತು. ಯಾವಾಗ ಸಾನೆಟ್ ಬರೀಲಿಕ್ಕೆ ಪ್ರಾರಂಭ ಮಾಡಿದೆ, ಇದು ತಾನೇತಾನಾಗಿ ಕಂಟ್ರೋಲ್ ಮಾಡಲಿಕ್ಕೆ ಹತ್ತಿಬಿಟ್ಟಿತು. ಭಾವ ಮತ್ತು ಬುದ್ಧಿಯ ಒಂದು ಸಮನ್ವಯವಾಗಿ,  ಹೇಳಬೇಕಾದ್ದನ್ನು ಸಂಕ್ಷಿಪ್ತವಾಗಿ ಸಾರವಾಗಿ ಸಮಗ್ರವಾಗಿ ಹೇಳಬೇಕು. ಇನ್ನೊಂದೇನಾತು ಈ ಕ್ರಾಫ್ಟ್‌ಮನ್‌ಶಿಪ್‌ಗೆ, ಕಾವ್ಯದ ಕಸಬುದಾರಿಕೆಗೆ ಉಳಿದ ಯಾವುದೇ ಕವಿತೆಯ ಪ್ರಕಾರಕ್ಕಿಂತಲೂ ಸಾನೆಟ್‌ನಲ್ಲಿ ಹೆಚ್ಚು ಅವಕಾಶವಿದೆ.

ಪ್ರ: ನವ್ಯದವರೂ ಕಲೆಗಾರಿಕೆಯ ಬಗ್ಗೆ ಹೇಳ್ತಿದ್ದರು. ಅವರಿಂದ ಬಂದ ಒತ್ತಡವಾ ಇದು?

ಉ: ಇಲ್ಲಿಲ್ಲ. ಸಾನೆಟ್ಟಂತೂ ನಾನು ಮೊದಲನೆ ಸಂಗ್ರಹದಿಂದಾನೇ ಶುರುಮಾಡಿದ್ದೆ. ಬಹುಶಃ ನವ್ಯದವರು ಏನು ಸಂಕ್ಷಿಪ್ತವಾಗಿ ಹೇಳಬೇಕು, ಭಟ್ಟಿ ಇಳಿಸಬೇಕು ಅನ್ನೋವಂಥ ಮಾತು ಬಳಸ್ತಿದ್ದರಲ್ಲಾ, ಅದು ನನಗೆ ಪೋಷಕವಾಗಿರಬೇಕು. ಅದು ಇನ್ನಷ್ಟು ರೂಪ ತೆಗೆದುಕೊಳ್ಳಲಿಕ್ಕೆ ಗಟ್ಟಿಯಾಗಲಿಕ್ಕೆ ಈ ಅಂಶ ಕಾರಣವಾಗಿರಬೇಕು. ಈಗಲೂ ಕೂಡ ನನಗೆ ಅದರ ಕಟ್ಟುನಿಟ್ಟು, ಪ್ರಾಸಗಳ ಬಂಧ ಅದನ್ನ ಮೀರಬೇಕು  ಅಂತ ಅನಿಸೋದಿಲ್ಲ. ಓದಿದಾಗ ಇವೆಲ್ಲ ಬಂಧನಾ ಅಂತನಿಸಿರಬಾರದು. ಸಹಜವಾಗಿ ಬಂದಿದೆ ಅಂತನಿಸಿರಬೇಕು.

ಪ್ರ: ನೀವು ನವೋದಯ ಪರಂಪರೆಯಲ್ಲಿ ಹುಟ್ಟಿ ಬೆಳೆದ ಕವಿ. ನಿಮಗೆ ನವ್ಯದ ಎರಡು ದಶಕಗಳು ಯಾವ ಬಗೆಯ ಒತ್ತಡ ತಂದವು? ಎಂಥಾ ಬದಲಾವಣೆಯನ್ನು ಉಂಟು ಮಾಡಿದವು. ಇದರ ಬಗ್ಗೆ ಕುತೂಹಲವಿದೆ. ಆ ಎರಡು ದಶಕಗಳಲ್ಲಿ ಕವಿಯಾಗಿ ನಿಮ್ಮ ಅನುಭವ ಹೇಳಿ ಸಾರ್.

ಉ: ನನಗೆ ನಾನು ಬರೀತಿದ್ದಾಗಲೇ ಅಡಿಗರು ಪರಿಚಯವಾಗಿದ್ದರು, ಪತ್ರದ ಮೂಲಕ. ಆ ಹೊತ್ತಿಗೆ ಅಡಿಗರ ’ಭಾವತರಂಗ’ ಬಂದಿತ್ತು. ಅವರಿಗೆ ನನ್ನ ಕವನ ಸಂಕಲನ ’ಭಾವಜೀವಿ’ಯನ್ನ ಕಳಿಸಿದ್ದೆ. ಅದಕ್ಕೆ ಅವರು ಮೆಚ್ಕೊಂಡು ಪತ್ರ ಬರೆದರು. ಆಗ ಕುಮಟಾ ಕಾಲೇಜಿನಲ್ಲಿ ಅವರು ಅಧ್ಯಾಪಕರಾಗಿದ್ದರು. ಆಗಾಗ್ಗ ಪತ್ರಾನೂ ಬರೀತಿದ್ದರು.

ಪ್ರ: ಅಡಿಗರು ರಮ್ಯಕಾವ್ಯ ಸಂಪ್ರದಾಯವನ್ನು ತೀವ್ರವಾಗಿ ವಿರೋಧಿಸ್ತಿದ್ದ ಕವಿಯಾಗಿದ್ದರು. ಅವರ ಜತೆ ನಿಮ್ಮ ಸಾಹಿತ್ಯಕ ಸಂಬಂಧ ಯಾವ ಸ್ವರೂಪದಲ್ಲಿತ್ತೋ?

ಉ: ಅಡಿಗರು ’ಭಾವತರಂಗ’ ಬರೆಯೋವಾಗ ನವ್ಯದವರೇನಾಗಿರಲಿಲ್ಲ. ನನ್ನ ಮಾತಲ್ಲೇ ನನ್ನತನವನ್ನು ಕಾಯ್ಕೋಬೇಕು. ಅಲ್ಲೀವರೆಗೂ ’ನನ್ನ ಬಾಳಿದು ನರಕ’ ಅಂತ ಹೇಳ್ಕೊಂಡಿದ್ದರಲ್ಲ. ಅಂದರೆ ನಮ್ಮ ಕಾವ್ಯದ ರೀತಿ ಬದಲಾಗಬೇಕು ಅನ್ನೊ  ಅವರ ಈ ವಿಚಾರಧಾರೆಯನ್ನು ಫಾಲೊ ಮಾಡಿದೀನಿ ಅಷ್ಟೆ. ಅಷ್ಟರಾಗೆ 1953ರಲ್ಲಿ ಗೋಕಾಕರು ಕೊಲ್ಲಾಪುರದಿಂದ ಕರ್ನಾಟಕದ ಕಾಲೇಜಿಗೆ ಬಂದರು. ಆಗಾಗಲೇ ಗೋಕಾಕರು ಮುಂಬೈ ಸಾಹಿತ್ಯ ಸಮ್ಮೇಳನದೊಳಗೆ  ಮೊಟ್ಟ ಮೊದಲಿಗೆ ನವ್ಯತೆ ಬಗ್ಗೆ ಮಾತನಾಡಿದ್ದರು, ’ಸಾಹಿತ್ಯದಲ್ಲಿ ನವ್ಯತೆ’ ಅಂತ.  ಆವಾಗೆಲ್ಲ ಹೊಸಹೊಸ ರೀತಿಯಲ್ಲಿ ಪ್ರಯೋಗಗಳು ನಡೀತಿದ್ದವು. ಆದರೆ ಮುಂದೆ ಈ ರೀತಿ ಹೊಸದಾಗಿ ಬರೀತಿರೋರದೆಲ್ಲ ಒಂದು ಸಂಗ್ರಹ ಮಾಡಬೇಕು ಅಂದಾಗ, ಆಯಿತು ಆಂದರು. ಆದರೆ ಅಡಿಗರು ಯಾವುದನ್ನು ನವ್ಯ ಅಂತ  ಅಂತಿದ್ದರೊ ಅದಕ್ಕೆ ಗೋಕಾರದು  ಸ್ವಲ್ಪ ಭಿನ್ನವಾಗಿರುತ್ತಿತ್ತು. ಅದಕ್ಕಾಗಿ ಸಾಮಾನ್ಯವಾಗಿ ಯಾರ್‍ಯಾರು ಬೇರೆ ರೀತಿಯಿಂದ ಬರೀತಿದಾರೆ ಅಂತ  ಗುರುತಿಸಿಕೊಂಡು ಒಂದು ಕವನ ಸಂಕಲನವನ್ನ  ಮಾಡಿದಿವಿ. ಅದಕ್ಕೆ ಪ್ರಸ್ತಾವನೆ ಗೋಕಾಕರದು. ಹಾಗೆ ನೋಡಿದರೆ ಅಡಿಗರ ’ಭೂಮಿಗೀತ’ ಪದ್ಯ ಮೊಟ್ಟ ಮೊದಲು ಬಂದಿದ್ದೆ ನಮ್ಮ ’ನವ್ಯಧ್ವನಿ’  ಸಂಕಲನದಲ್ಲಿ. ಆಮೇಲೆ ಅಡಿಗರು ನನಗೊಂದು ಪತ್ರ ಬರೆದರು. ’ಇಲ್ಲ, ನೀನು ಕೇಳಿದೆ ಅಂತ ಕವಿತೆ ಕೊಟ್ಟೆ. ಆಯಿತು, ಆದರೆ ಈ ಸಂಕಲನ ನನಗೆ ಒಪ್ಪಿಗೆ ಇಲ್ಲ’ ಅನ್ನೋ ಮಾತನ್ನ ಅದರಾಗೆ ತಿಳಿಸಿದರು. ಆಮೇಲೆ ತಮ್ಮ ನವ್ಯತೆಯ ರೀತಿ ಯಾವುದು ಅಂತ ಲೇಖನಾನೂ ಬರೆದರು.  ಆ ರೀತಿಯಲ್ಲಿ ಅವರದ್ದೊಂದು ಗ್ರೂಪ್ ಆಯಿತು. ಈಗ ಯಾವ ಕವಿಗಳ ಬಗ್ಗೆ, ಅವರ ಕಾವ್ಯದ ಬಗ್ಗೆ ನಮಗೆ ಗೌರವ ಇತ್ತೊ, ಕುವೆಂಪುರವರ ಬಗ್ಗೆ ಆಗಲೀ, ಬೇಂದ್ರೆಯವರ ಬಗ್ಗೆ ಆಗಲೀ, ಅದರ ಬಗ್ಗೆ ಅಡಿಗರು ಬೇರೆ ರೀತಿ ಮಾತಾಡ್ತಾ ಇದ್ದರು. ಇದು ನಮ್ಮ ಮನಸಿಗೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ನನ್ನ ಕಾವ್ಯ ಈ ರೀತಿ ಇರ್ತದೆ ಅಂತ ಹೇಳೋದು ಬೇರೆ. ಅಂದರೆ ನವೋದಯ ಕಾವ್ಯ ಅಂತ ಬಂದಾಗಲೂ ಕೂಡ, ನಮ್ಮ ಹಿಂದಿನ ಕಾವ್ಯಕ್ಕೆ  ಪ್ರತಿಭಟನೆ ಅಂತ ಮಾಡಿದ್ದಲ್ಲ. ನವೋದಯ ಕವಿಗಳೂ ಒಂದು ಕೈಯಲ್ಲಿ ಧ್ವಜ ಹಿಡಕೊಂಡೆ ಹೊರಟವರು. ಅವರು ಕೈಯಲ್ಲಿ ಹಿಡಿದ ಧ್ವಜ ಯಾವುದೂ ಅಂದರೆ ’ಕನ್ನಡದ ಬಾವುಟ’. ಇವರಿಗೆಲ್ಲ ಕನ್ನಡ ಬೆಳಸಬೇಕು ಅಂತನ್ನೋದು ಇತ್ತೇ ಹೊರತು, ಒಮ್ಮೆಲೇ ಹಿಂದಿನ ಕಾವ್ಯ ವಿರೋಧ ಮಾಡಬೇಕು ಅಂತಿರಲಿಲ್ಲ.

ಪ್ರ: ಅಡಿಗರು 60ರ ದಶಕದಲ್ಲಿ ನವೋದಯದ ಮೇಲೆ ಬಂಡಾಯ ಸಾರಿದಾಗ, ಆ ಕಾವ್ಯ ಸಂಪ್ರದಾಯವು ಕ್ರೈಸಿಸ್‌ಗೆ ಒಳಗಾಗಿತ್ತಲ್ವ?

ಇತ್ತು, ಅದರ ಸತ್ವ ತೀರತಾ ಬಂದಿತ್ತು. ಅನುಕರಣೆ ಭಾಳ ಬೆಳೀತಾ ಇತ್ತು. ಎಲ್ಲ ನಿಜಾನೆ. ಆದರೆ  ಅವರು  ಒಮ್ಮೆಲೆ ’ಹಿಮಗಿರಿಯ ಕಂದರ’ ಬರೆದರು. ಅಡಿಗರ ’ಚಂಡಮದ್ದಳೆ’ ಪ್ರಕಟವಾಗಿತ್ತು. ವಿಸೀಯವರ ಅಧ್ಯಕ್ಷತೆಯಲ್ಲಿ ಕುಮಟಾದಲ್ಲಿ ಸಾಹಿತ್ಯ ಸಮ್ಮೇಳನ ಆದಾಗ, ಬೇಂದ್ರೆಯವರ ಕವಿಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಸ್ವಲ್ಪ ತಿಕ್ಕಾಟ ಆಯಿತು. ನನಗಿನ್ನೂ ನೆನಪಿದೆ. ಅಂದರೆ ’ತಾನು ಹರೆಯಕ್ಕೆ ಬಂದಿದೀನಿ ಅಂತ ತಿಳ್ಕೋಬೇಕಾದರೆ, ಹಗಲೆಲ್ಲ ಮೀಸಿ ತಿಕ್ಕೊಂಡು ತಿಕ್ಕೊಂಡು  ನೋಡಬೇಕಾಗಿಲ್ಲ’ ಅಂತ ಬೇಂದ್ರೆ ಕಾಮೆಂಟ್ ಮಾಡಿದರಂತೆ. ಆದರೂ ಅಡಿಗರ  ಆಡುಮಾತಿನ ಲಯ ನನಗೆ ಸೆರತಿತ್ತು. ಯಾಕಂದರೆ ನಾವು ಆಗಲೇ ಅದನ್ನ ಉಪಯೋಗ ಮಾಡ್ತಿದ್ದೆವು. ಅಂದರೆ ಒಂದು ದೃಷ್ಟಿಯಿಂದ ಅಡಿಗರು ನನ್ನ ಕವಿತೆಗಳ ಮೇಲೆ ಕಾಮೆಂಟ್ ಮಾಡ್ತಾ ಇದ್ದರು. ಮಾಸ್ತಿಯವರ ’ಜೀವನ’ದಲ್ಲಿ ನನ್ನ ಪದ್ಯಗಳು ಬರ್‍ತಿದ್ದವು. ’ಪ್ರಾರ್ಥನೆ’ ಅಂತ ಪದ್ಯ ಬಂದ ಮೇಲೆ ಅಡಿಗರು ನನಗೆ ಒಂದು ಪತ್ರ ಬರೆದರು. ನಿಮ್ಮ ಹೊಸ ಕವಿತೆಗಳನ್ನ ನೋಡ್ತಾ ಇದೀನಿ. ಆದರೆ ಈಗ ’ಜೀವನ’ದಲ್ಲಿ ನೋಡಿದ ಮೇಲೆ ಬಹಳ ನಿರಾಸೆಯಾಯಿತು ಅಂತ. ಅದು ನನ್ನ ಹಳೇ ಪದ್ಯ. ಅವರಿಗೆ ಗೊತ್ತಿರಲಿಲ್ಲ.

ಪ್ರ: ಅಡಿಗರ ಈ ಬಗೆಯ ನೇರನುಡಿ, ಕಾಮೆಂಟ್ ಮಾಡುವ ಗುಣ, ಸಾಹಿತ್ಯಕ ಪರಿಸರದಲ್ಲಿ ಒಂದು ಬಗೆಯ ಕ್ರಿಟಿಕಲ್ ಆಟಿಟ್ಯೂಡ್ ಬೆಳೆಯಲು, ಹೊಸ ಕವಿಗಳಿಗೆ ಉದ್ದೀಪ್ತ ಮಾಡಲು ಕಾರಣವಾಗ್ತಿತ್ತಲ್ವಾ?

ಉ: ಅಲ್ಲ, ಉದ್ದೀಪನಕ್ಕಿಂತ ಬೇರೊಂದು ರೀತಿಯ ಬೆಳವಣಿಗೆ ಕಾರಣವಾಯಿತು ಅಂತ ಅನ್ಸುತ್ತೆ. ಅದು ಡಿಸ್ಟ್ರಬ್ ಮಾಡ್ತಿತ್ತು. ಆಗ ಯಾವುದೋ ಒಂದು ಸಂದರ್ಶದಲ್ಲಿ ಓದಿದ್ದೆ. ’ಕುವೆಂಪುರವರು ಕವೀನೇ ಅಲ್ಲ’ ಅಂತನ್ನೊ ಮಾತನ್ನ ಅಡಿಗರು ಅಲ್ಲಿ ಆಡ್ಯಾರ.  ಪ್ರಜಾವಾಣಿಯಲ್ಲಿ ಬಂದಿತ್ತು. ದಾಖಲೆ ಆಗಿರಬೇಕು ಅದು. ಒಮ್ಮೆಲೆ ನಮಗೆ ಶಾಕ್ ಆಯಿತು. ಆಮೇಲೆ ಗೋಕಾಕರ ಬಗ್ಗೆ ಹೇಳ್ತಿರುವಾಗ ’ಗೋಕಾಕರದು ನವ್ಯಕಾವ್ಯವಾದರೆ ನಂದಲ್ಲ. ನನ್ನದು ನವ್ಯಕಾವ್ಯ ಅಂತನ್ನೋದಾದರೆ ಗೋಕಾಕರದಲ್ಲ’. ಈ ರೀತಿಯ ಕೆಲವು ಸ್ಟೇಟ್‌ಮೆಂಟ್ಸ್ ನಮಗೆ ಇಷ್ಟವಾಗಲಿಲ್ಲ. ಆದರೆ ಅಡಿಗರು ನಿಜವಾದ ನವ್ಯಕವಿ. ಅದನ್ನ ನಾನು ಒಪ್ಕೋತೀನಿ.

ಪ್ರ: ಪರಂಪರೆಯ ಜೊತೆಗೆ ಗುದ್ದಾಟ ಮಾಡುವ ಕವಿಗಳಲ್ಲಿ ಅಡಿಗರು ಒಂದು ತುದಿಯಾದರೆ, ಪರಂಪರೆಯಿಂದ ಶಕ್ತಿ ಚೈತನ್ಯ ಪಡೆಯುವಲ್ಲಿ ಬಹಳ ವಿನಯ ತೋರಿಸುವ ನೀವು ಇನ್ನೊಂದು ತುದಿ.

ಉ: ಆದರೆ ಪರಂಪರೆಯನ್ನು ಅಡಿಗರು ಬಿಟ್ಟಿದ್ದರು ಅಂತ ಅನಿಸ್ತಿರಲಿಲ್ಲ. ಪರಂಪರೆಯ ಸಾರವನ್ನು ಅವರು ಚೆನ್ನಾಗಿ ಗ್ರಹಿಸಿದ್ದರು. ಅದನ್ನ ಹೀರಿಕೊಂಡೆ ಅವರು ಬೆಳೆದವರು. ಇಲ್ಲದಿದ್ದರೆ ಆ ರೀತಿಯಾಗಿ ಶಕ್ತಿ ಬರ್‍ತಿರ್‍ಲಿಲ್ಲ. ಧೋರಣೆ ರೀತಿ ಮಾತ್ರ ಬದಲಾಯಿತು. ಆದರೆ ಹಿರಿಯ ಲೇಖಕರ ಬಗ್ಗೆ ಅವರ ಟೀಕೆ ಪರ್ಸನಲ್ ಆಗಿರ್ತಿತ್ತು. ಆಮೇಲೆ ಸ್ವಲ್ಪ ಮೆಲು ಆದರು. ಅಥವಾ ಆಮೇಲೆ ಅವರಿಗೂ ಅನಿಸಿರಬೇಕು ’ನಾನು ಹಂಗ ಅನ್ನಬಾರದಾಗಿತ್ತು’ ಅಂತ. ಇದನ್ನ ಅವರು ಎಕ್ಸ್‌ಪ್ರೆಸ್ ಮಾಡಿದರು ಅಂತ ಕಾಣ್ಸುತ್ತೆ.

ಪ್ರ: ಸಾರ್, ನೀವು ನವೋದಯದಿಂದಲೂ ಕಲಿತಿರಿ. ನವ್ಯದಿಂದಲೂ ಬಹಳ ಕಲಿತೆ ಅಂತಂದಿರಿ. ಆದರೆ ನಿಮಗೆ ’ಸಮನ್ವಯ ಕವಿ’ ಅಂತಂದರೆ ಯಾಕೆ ಬೇಸರ ಆಗ್ತದೆ?

ಉ: ’ಸಮನ್ವಯ ಕವಿ’ ಅನ್ನೋ ಶಬ್ದದ ಬಗ್ಗೆ ಅಲ್ಲ. ಆದರೆ ಅದರ ಹಿಂದಿನ ಧೋರಣೆಯ ಬಗ್ಗೆ. ನವ್ಯಕವಿಗಳು ಈ ಒಂದು ಬ್ರಾಂಡ್ ಮಾಡುವಾಗ ಆ ಮಾತಿನ ಹಿಂದೆ ಅವರ ಐಡಿಯಾ ಏನಿತ್ತು, ಅದು ಅಷ್ಟು ಸಮಂಜಸವಾದದ್ದಲ್ಲ. ಈಗ ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ? ಈಗ ಪಂಪನ ಹಿಡಕೊಂಡು ಮಾರ್ಗ ದೇಶಿ ಸಮನ್ವಯ ಅಂತೀವಿ. ಪೂರ್ವ-ಪಶ್ಚಿಮದ ಸಮನ್ವಯ ಅಂತಿದೀವಿ. ಬುದ್ಧಿ- ಭಾವದ ಸಮನ್ವಯ ಅಂತೀವಿ. ಇಡೀ ನಮ್ಮ ಕಾವ್ಯ ಪರಂಪರೆಯೆ ಆ ರೀತಿಯಾಗಿ ಬಂದದ್ದಲ್ಲವಾ? ಆದರೆ ನವ್ಯರು ’ಸಮನ್ವಯ’ ಅನ್ನುವ ಹೊತ್ತಿನಲ್ಲಿ, ’ಹೆಚ್ಚು ಗಣಿಸಬೇಕಾದಂಥ ಕವಿಗಳಲ್ಲ’ ಅನ್ನೋ ಅರ್ಥ ಇತ್ತು. ಆದರೆ ಇವರನ್ನ ಬಿಟ್ಟುಬಿಡ್ಲಿಕ್ಕೂ ಆಗೋಲ್ಲ. ನರಸಿಂಹಸ್ವಾಮಿ, ಕಣವಿ, ಶಿವರುದ್ರಪ್ಪ ಮುಂತಾದ ಸಮನ್ವಯ ಕವಿಗಳು ಇದ್ದರು” ಅಂತ ಎರಡು ವಾಕ್ಯದಲ್ಲಿ ಮುಗಿಸಿಬಿಟ್ಟು, ಅವರ ವಿಮರ್ಶೆ ಬೇರೆಕಡೆ ಹೊರಳಿ ಬಿಡ್ತಿತ್ತು.

ಪ್ರ: ಸೃಷ್ಟಿಶೀಲ ಪ್ರಕ್ರಿಯೆಯಲ್ಲಿ ಈ ಸಮನ್ವಯ ಅನ್ನೋದು ಬಹಳ ಅರ್ಥಪೂರ್ಣ ಕ್ರಿಯೆ ಅಂತ ನೀವು ಪರಿಭಾವಿಸ್ತೀರಾ?

ಉ: ಹೌದು. ಈಗ ನಿಮಗೆ ನಿಮ್ಮದೇ ಆದಂಥ ವೈಶಿಷ್ಟ್ಯ ಇರ್‍ತದೆ. ನನಗೆ ನನ್ನದೇ ಆದಂತಹ ಕಾವ್ಯದ ಸ್ವಂತಿಕೆ ಇರ್ತದೆ. ಇದನ್ನು ನಾನು ಬರವಣಿಗೆ ಮಾಡಬೇಕಾದರೆ, ಇದಕ್ಕ ಪೋಷಕವಾಗುವಂಥ ಅಂಶಗಳನ್ನ, ಅವು ಎಲ್ಲಿಂದಲೇ ಇರಲಿ ಹೀರಿಕೊಂಡು ಬೆಳೀಬೇಕು. ಅವರಿಗೆ ಎಲಿಯಟ್ ಇರಲಿಲ್ಲವೋ ಆ ರೀತಿಯಾಗಿ. ಪಂಪನಿಂದ ಬೇಂದ್ರೆಯವರಿಗೂ ಈ ಸಮನ್ವಯ ಕೆಲಸ ಮಾಡಿದೆ. ಈಗ ಬೇಂದ್ರೆಯವರನ್ನ ಒಬ್ಬರನ್ನೆ  ಓದಿದರೆ, ನಮ್ಮ ಇಡೀ ಕಾವ್ಯದ ಪರಂಪರೆಯನ್ನು ಅಲ್ಲಿ ನೋಡ್ತೀವಿ. ಪಂಪ ಕಾಣಿಸ್ತಾನ. ಕುಮಾರವ್ಯಾಸ ಕಾಣಿಸ್ತಾನ. ದಾಸರದಾರ, ವಚನಕಾರರದಾರ. ಅಲ್ಲಮ ಇದ್ದಾನ. ನಿಜಗುಣರು ಇದ್ದಾರ. ಎಲ್ಲ ಅಲ್ಲಿ ಇದ್ದಾರ. ಈ ಸಾವಿರಾರು ವರ್ಷದಿಂದ ಕನ್ನಡ ಕಾವ್ಯಕ್ಕೆ  ಭಾಷೆಗೆ ಈ ಶಕ್ತಿ ತೇಜಸ್ಸು ಸತ್ವ ತಂದುಕೊಟ್ಟವರೇ ಅವರಲ್ಲ? ಮತ್ತೆ ಆ ಪರಂಪರೆಯನ್ನು ನಾವು ತಿಳಿದುಕೊಳ್ಳದೇ ಇದ್ದರೆ ಹೆಂಗೆ ಬೆಳವಣಿಗೆ ಸಾಧ್ಯವಾಗ್ತದೆ? ಇವತ್ತಿನ ಸಮಕಾಲೀನತೆ ಅನ್ನೋವಂಥ ಅಂಶ ಇದ್ದರೂ ಕೂಡಾ, ನಮ್ಮ ಹಿಂದಿನ ಕವಿಗಳನ್ನೂ ನಾವು ಸಮಕಾಲೀನಗೊಳಿಸತಾನೇ ಹೋಗಬೇಕಾಗ್ತದ. ಪಂಪನನ್ನೂ ನಾವು ಇವತ್ತಿನ ಸಮಕಾಲೀನ ಕವಿಯನ್ನಾಗಿ ನೋಡ್ತಾ ಹೋಗ್ತಿದೀವಿ. ವಚನಕಾರರು  ನಮಗಿಂತಲೂ ಎಷ್ಟೋ ಸಲ ಸಮಕಾಲೀನರಾಗಿ ಕಾಣ್ತಾರೆ.

ಪ್ರ: ಪರಂಪರೆ ಜೊತೆಗೆ ಅರ್ಥಪೂರ್ಣವಾದ ಗುದ್ದಾಟ ಮತ್ತು ಸ್ವೀಕಾರವನ್ನ  ’ಸಮನ್ವಯ’ ಅನ್ನೋದಾದರೆ ಅದು ಕ್ರಿಯೆಟಿವ್ ಪ್ರಾಸೆಸ್..

ಉ: ಅದು ಬಹಳ ಅಗತ್ಯ. ಆದರೆ ನವ್ಯರು ಈ ಪದವನ್ನ ನಮ್ಮನ್ನ ಒಂದು ಕಡೆ ಸರಿಸಿಡಲಿಕ್ಕೆ ಬಳಸಿದರು.

ಪ್ರ: ನಮ್ಮ ಹಿರಿಯ ಲೇಖಕರಲ್ಲಿ ಮಾಸ್ತಿ, ಕುವೆಂಪು,  ಬೇಂದ್ರೆಯವರು ನಿಮಗೆ ಸವಾಲಾಗಿ ಪ್ರೇರಕರಾಗಿ ಪ್ರಭಾವಿಗಾರರಾಗಿ, ಪ್ರಭಾವ ತಪ್ಪಿಸಿಕೊಳ್ಳೋದಿಕ್ಕೆ ಕಾರಣರಾಗಿ ಬೇರೆಬೇರೆ ಬಗೆಯಲ್ಲಿ ಮುಖ್ಯವಾಗಿದಾರೆ. ಆದರೆ ಕಾರಂತರ ಬಗ್ಗೆ ಹೇಳಲೆ ಇಲ್ಲ. ಕಾರಂತರ ಮೇಲಿನ ನಿಮ್ಮ ರೀಡಿಂಗ್ ತಿಳಿಯೋ ಕುತೂಹಲವಿದೆ. ಕಾರಂತರು ನಮ್ಮ ಈ ಪರಂಪರೆ ಅನ್ನೋದರ ಜೊತೆಗೆ ಬಹಳ ಭಿನ್ನವಾದ ಗುದ್ದಾಟ ಮಾಡಿದೋರು. ಅವರ ನಾಸ್ತಿಕವಾದಿ ವೈಚಾರಿಕತೆ, ಆಮೇಲೆ  ಸಂವಾದ ಮಾಡೋಕೆ ಆಗೋಲ್ಲ ಅನ್ನೋ ಸಿಡುಕು, ಎಲ್ಲವೂ ನಿಮಗೆ ವಿಪರೀತ ಅನ್ನೋ ತರಹದ್ದು…

ಉ: ಇಲ್ಲಿಲ್ಲ. ಆ ಮನುಷ್ಯನಲ್ಲಿ ಒಂದು ರೀತಿಯ ಪ್ರೀತಿಯಿತ್ತು. ನಿಮ್ಮೆದುರಿಗೆ ನಿಷ್ಟುರವಾಗಿ ಏನೋ ಮಾತಾಡಿಬಿಡಬಹುದು. ಆದರೆ ಒಳಗೆ ಕರುಳಿನ ಗುಣ ಭಾಳ ಇತ್ತು. ಅವರಿಗೆ ಪಂಪ ಪ್ರಶಸ್ತಿ ಬಂತಲ್ಲ. ಇನ್‌ಫ್ಯಾಕ್ಟ್  ಆ ವರ್ಷದ ಆಯ್ಕೆ ಸಮಿತಿಯಲ್ಲಿ ನಾನೂ ಇದ್ದೆ. ಅವರ ’ಮೈಮನಗಳ ಸುಳಿಯಲ್ಲಿ’ ಕಾದಂಬರಿಗೆ ಪ್ರಶಸ್ತಿ ಬಂದಾಗ, ಅವರು ಎಲ್ಲೋ ಒಂದು ಸಭೆಯಲ್ಲಿ ತಮ್ಮ ಮಾತಲ್ಲಿ ಹೇಳಿದರಂತೆ. ’ನಾನು ಪಂಪನನ್ನೇ ಓದಿಲ್ಲ. ನನಗೆ ಪಂಪ ಪ್ರಶಸ್ತಿ ಬಂದಿದೆ’ ಅಂತ. ಕಾರಂತರು ಹಿಂಗೆ ಅಂದರಲ್ಲ ಅಂತ ಯೋಚಿಸಿದೆ. ಅವರು ಹಾಗೆ ಅಂದಿದ್ದರೂ ಕೂಡ, ಪಂಪನನ್ನು ಓದಿಲ್ಲದೆ ಇದ್ದರೂ ಕೂಡ,  ಪಂಪನ ಪ್ರಭಾವ ಅವರ ಮೇಲೆ ಇದೆ ಅಂತ ನಾನು ಹೇಳಿದೆ. ಪಂಪನಂಥ ಕವಿಗಳು ಏನು ಇದಾರಲ್ಲ, ಅವರನ್ನು ಓದಿಯೇ ಪ್ರಭಾವ ಆಗಬೇಕಾಗಿಲ್ಲ. ಒಬ್ಬ ದೊಡ್ಡ ವ್ಯಕ್ತಿಯ ವಿಚಾರಗಳು ಅವರ ಕಾವ್ಯಗಳು ಸ್ವತಃ ಓದದೇ ಇದ್ದರೂ,  ಉಳಿದವರನ್ನ ಓದುವಾಗ ಆಗಲೀ ಮಾತಾಡುವಾಗ ಆಗಲೀ ನಮ್ಮಕಿವಿ ಮೇಲೆ ಬೀಳ್ತಿರ್‍ತವೆ. ಈಗಲೂ ಕೂಡಾ ವೈಜ್ಞಾನಿಕವಾಗಿ ನೋಡಿದಾಗ ಒಂದು ಸಭೆಯಲ್ಲಿ ಮಾತನಾಡಿದೀವಿ ಅಂದರೆ, ನಮ್ಮ ಮಾತುಗಳು ವಿಚಾರ ತರಂಗಗಳು ಅವು ಸಭಿಕರಿಗಷ್ಟೇ ಅಲ್ಲ, ಇನ್ನೂ ದೂರ ಹೋಗ್ತವೆ. ಹಾಗಿದ್ದಾಗ ಪಂಪನ ’ಮನುಷ್ಯ ಜಾತಿ ತಾನೊಂದೆ ವಲಂ’ ಅನ್ನೋ ಮಾತು ಕಾರಂತರ ಜೀವನದೃಷ್ಟಿಗೆ ಒಪ್ತದೆಯೋ ಇಲ್ಲವೋ? ಇವೆಲ್ಲ ಪರ್ಯಾಯವಾಗಿ ಬರ್ತವೆ.

ಪ್ರ: ಕನ್ನಡದಲ್ಲಿ ಈಗ ಬರೀತಿರೋ ಅನೇಕ ಕವಿಗಳಲ್ಲಿ ಒಂದು ಬಗೆಯ ಚಡಪಡಿಕೆ ಕಾಣ್ತದೆ.  ಕಾವ್ಯಕ್ಕೆ ಓದುಗರಿಲ್ಲ, ಓದುಗರ ಬರ ಇದೆ ಅಂತನ್ನೋ ಆತಂಕ ಕೇಳ್ತಾ ಇದೆ. ಈ ಬಿಕ್ಕಟ್ಟು ನಿಜವಾ? ನಿಜವೇ ಆಗಿದ್ದರೆ ಇದಕ್ಕೆ ಏನು ಕಾರಣ?

ಉ: ಕವಿತೆಗೆ ಓದುಗರು ಈಗೇ ಇಲ್ಲ ಅಂತಲ್ಲ, ಮೊದಲಿನಿಂದಲೂ ಅಷ್ಟೆ. ಮೊದಲಿಗೆ ಓದುಗರು ಅನ್ನೋದಕ್ಕಿಂತ ಕೇಳುಗರು ಇದ್ದರು. ಗಮಕದಲ್ಲಿ ಕೂತುಕೊಂಡು ಕೇಳ್ತಾ ಇದ್ದರು. ಈ ಓದೋದು ಅನ್ನುವಂತಹದ್ದಾದ್ದು ಇದೆಯಲ್ಲ, ತಮಗೆ ಮೆಚ್ಚಿದ ಕವಿಗಳನ್ನು ಓದುವಂಥವರು ಇದ್ದೇ ಇರ್‍ತಾರೆ. ಅದರ ಬಗ್ಗೆ ಪ್ರೀತಿ ಇರ್‍ತದೆ. ಉಳಿದ ಯಾವ ಸಾಹಿತ್ಯ ಪ್ರಕಾರದಲ್ಲಿಯೂ ದೊರೆಯದೇ ಇರತಕ್ಕಂಥ ಯಾವುದೋ ಒಂದು ವಿಶೇಷ ಗುಣ ಕವಿತೆಯಲ್ಲಿ ಕಾಣಿಸ್ತದೆ. ಅವರು ಇಡೀ ಬೇಂದ್ರೇನ ಓದ್ದೇ ಇರಬಹುದು. ಯಾವುದೋ ಒಂದೆರಡು ಭಾವಗೀತೇನ ಕೇಳೀನೆ, ಅದರ ಸತ್ವ ಮೇಲ್ಮೆ ವಿಶೇಷವಾದಂತಹ ಗುಣವನ್ನು ಮೆಚ್ಕೊಂಡಿರ್‍ತಾರಲ್ಲ? ಈಗಂತೂ ವೇಗದ ಯುಗ. ಕೂತ್ಕೊಂಡು ಅಭ್ಯಾಸ ಮಾಡೋವಂಥ ರೀತಿ ಬಹಳ ಕಡಿಮೆ. ವಿದ್ಯಾರ್ಥಿಗಳಲ್ಲೇ ಕಡಿಮೆಯಾಗಿದೆ. ಬರಹಗಾರರಲ್ಲೂ ಕಡಿಮೆ ಆಗಿದೆ. ಈಗ ಉದಯೋನ್ಮುಖ ಕವಿಗಳು ಅಂತ ತೆಗೆದುಕೊಂಡಾಗ,  ಅನೇಕ ಜನ ಕವಿತೆ ತೋರಿಸಲಿಕ್ಕೆ ಬರ್ತಿರ್ತಾರ. ’ಮುನ್ನುಡಿ ಬರೀರಿ’ ಅಂತ ಬರ್ತಾರ. ಅವರಲ್ಲಿ ಕಂಡುಕೊಂಡ ಒಂದು ಸಂಗತಿ ಅಂದರೆ, ಅಭ್ಯಾಸದ ಪ್ರವೃತ್ತೀನೇ ಇಲ್ಲ. ನಾವೇನ್ಮಾಡ್ತಾ ಇದ್ದಿವಿ, ಬೇಂದ್ರೆಯವರ ಅಥವಾ ಕುವೆಂಪು ಅವರ  ಪುಸ್ತಕಗಳನ್ನ  ಓದ್ತಿದ್ದಿವಿ. ಮೇಲೆಮೇಲೆ ಓದೋದು. ಈಗ ಇಲ್ಲವೇ ಇಲ್ಲ. ’ಬೇಂದ್ರೆಯವರನ್ನ ಓದಿದಿರಾ ಅಥವಾ ಯಾವುದಾದರೂ ಒಳ್ಳೇ ಪುಸ್ತಕಾನ  ಓದಿದೀರಾ?’ ಕೇಳಿದರೆ, ಓದಿರೋದಿಲ್ಲ. ಯಾವುದೋ ಪತ್ರಿಕೆಯಲ್ಲಿ ಬಂದ ಕವಿತೆ ಓದಿದೀವಿ ಅಂತಾರೆ. ಬೇಂದ್ರೆಯವರ ’ಗರಿ’ ಕುವೆಂಪುರವರ ’ನವಿಲು’ ಹೀಗೆ ಒಬ್ಬೊಬ್ಬ ಕವಿಯ ಒಂದೊಂದು ಸಂಕಲನವನ್ನೆ ಸರಿಯಾಗಿ ಓದಿದರೂ ಸಾಕು ಆ ಕವಿಯ ಭಾಷೆ, ಲಯ, ಅವನ ಆಶಯ, ಆ ಧಾಟಿ ಧೋರಣೆ ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಅಭ್ಯಾಸ ಮಾಡುವ ಪ್ರವೃತ್ತಿ ಇಲ್ಲವೇ ಇಲ್ಲ.

ಪ್ರ: ಈಗ ಬರೀತಿರೋರಲ್ಲಿ ನಿಮಗೆ ಯಾರು ಪ್ರಾಮಿಸಿಂಗ್ ಕವಿ ಅಂತ ಅನಿಸ್ತದೆ.

ಉ: ಅಲ್ಲಲ್ಲಿ ಇದ್ದಾರೆ. ಕೆಲವರಾಗಲೇ ಹಿರಿಯ ಕವಿಗಳ ಲೈನಲ್ಲೇ ಬರ್‍ತಾರೆ.  ಶಿವಪ್ರಕಾಶ್ ಇದ್ದಾರೆ.  ಎಸ್ ಜಿ ಸಿದ್ಧರಾಮಯ್ಯ ಇದ್ದಾರೆ. ಆನಂದ ಝಂಜರವಾಡ ಇದ್ದಾರೆ.  ಎಸ್. ಮಂಜುನಾಥ, ಲಕ್ಷ್ಮೀಪತಿ ಕೋಲಾರ  ಇದ್ದಾರೆ. ನಿರಾಸೆ ಆಗುವಂಥ ಸ್ಥಿತಿ ಇಲ್ಲ. ಆದರೆ ಅದಕ್ಕೊಂದು ಪ್ರವಾಹದ ಗತಿ ಸಮಷ್ಟಿಯ ಗತಿ ಇಲ್ಲ. ನವೋದಯ ಕಾವ್ಯ, ನವ್ಯಕಾವ್ಯ ಅಂದರೆ ಹೆಂಗೆ ಒಂದು ಪ್ರವಾಹದ ಗತಿ ಕಾಣ್ತೀವಲ್ಲ, ಹಂಗೆ ಈಗ ಎಲ್ಲ ಕೂಡಿಸಿ ಯಾವುದನ್ನ ಗುರುತಿಸಲಿಕ್ಕೆ ಆಗ್ತಾ ಇಲ್ಲ. ಆದರೆ ಎಲ್ಲೆಲ್ಲಿ ಈ  ಹೊಸತನ ಕಂಡುಬರ್‍ತಾ ಇದೆ, ಅದನ್ನ ಅವಶ್ಯಕವಾಗಿ ಗುರುತಿಸಬೇಕು. ನಿಜವಾಗಿಯೂ ಒಳ್ಳೇ ಕವಿಗಳು ಬರೀತಾ ಇದಾರೆ. ಆದರೆ  ಯಾಕೋ ವಿಮರ್ಶಕರ ಲಕ್ಷ್ಯ ಇನ್ನೂ ಹೊರಳಿಲ್ಲ. ಈಗ ಶತಮಾನ ಬ್ಯಾರೆ ಮುಗದ ಬಿಟ್ಟದೆಯಲ್ಲ ಅವರೆಲ್ಲಾ ಈಗ ಶತಮಾನ ಸಮೀಕ್ಷೆಯಲ್ಲಿ ತೊಡಗಿಬಿಟ್ಟಾರ(ನಗು).

ಪ್ರ: ಬಹುಶಃ ಈಗಿನ ವಿಮರ್ಶೆ ಒಂದು ಕವಿತೆ ಮೇಲೆ ಅಥವಾ ಒಬ್ಬ ಕವಿಯ ಮೇಲೆ ಫೋಕಸ್ ಮಾಡ್ತಾ ಇಲ್ಲ. ಆದು ಹೋಗಿ, ಒಂದು ದೊಡ್ಡ ಕ್ಯಾನ್ವಾಸ್‌ನಲ್ಲಿ ಸಂಸ್ಕೃತಿ ವಿಮರ್ಶೆ ಅಂತಾಗಿ, ಸಾಹಿತ್ಯದ ಮೇಲೆಯೇ ಹೆಚ್ಚು ಗಮನ ಹರಿಸೋದು ಕಡಿಮೆಯಾಗಿದೆ. ಸಂಸ್ಕೃತಿ ಚಿಂತನೆಗೆ ಸಾಹಿತ್ಯವೂ ಒಂದು ಸಣ್ಣ ಅಂಶವಾದಂತಿದೆ.

ಉ: ಈಗ ಅಪ್ರಿಸಿಯೇಶನ್ ರಸವಿಮರ್ಶೆ ಅಂತ ಏನು ಕರೀತೇನೆ, ಬರಬರತಾ ಅದಕ್ಕೆ ವ್ಯಾಲ್ಯೂ ಕಡಿಮೆ ಅಂತನ್ನೋ ರೀತಿಯಲ್ಲಿ ಮಾಡಿದರು. ಆದರೆ ಈಗದು ಮತ್ತೆ ಬೇಕು ಅಂತ ಅನಿಸ್ತಾ ಇದೆ. ಕಾವ್ಯದ ಅಭಿರುಚಿಯನ್ನ ಓದುಗರಿಗೆ ಹುಟ್ಟಿಸಬೇಕು ಅಂತಂದರೆ, ಆ ಕಾವ್ಯದ ಬಗ್ಗೆ ರಸವಿಮರ್ಶೆ ಬೇಕು. ಈ ಸಾಂಸ್ಕೃತಿಕ ವಿಮರ್ಶೆನೂ ಇರಲಿ. ಆದರೆ ಮೊದಲು ಓದುಗನಲ್ಲಿ ಕವಿತೆಯಲ್ಲಿ ಆಸ್ಥೆಯನ್ನ ತನ್ಮಯತೆಯನ್ನ ಹುಟ್ಟಿಸಬೇಕು. ಆಮೇಲೆ ಕೈಹಿಡಿದು ಕರೆದುಕೊಂಡು ಹೋಗಿ, ವಿಶಾಲ ಜಗತ್ತನ್ನು ತೋರಿಸಿ ಕೊಡುವಂಥದ್ದು ಮಾಡಿ. ಆದರೆ ನೀವು ಒಮ್ಮೆಲೇನೇ ತೂರಿ ಆಕಾಶಕ್ಕೆ ಕರಕೊಂಡು ಹೋಗಿಬಿಟ್ಟರೆ ಹೇಗೆ?

ಪ್ರ: ಕೆಲವು ವಿಮರ್ಶಕರು ನಿಮ್ಮ ಕಾವ್ಯದ ಬಗ್ಗೆ ತುಂಬಾ ಕ್ರಿಟಿಕಲ್ ಆಗಿ ಬರದಿದಾರೆ. ಹೀಗೆ ನಿಷ್ಟುರವಾದ ಪ್ರತಿಕ್ರಿಯೆ ಬಂದಾಗ ಕವಿಯಾಗಿ ಹೆಂಗೆ ಸ್ವೀಕರಿಸ್ತೀರಿ?

ಉ: ಕೆಲವು ಅದರಲ್ಲಿ ಸರಿಯಾದ ಅಂಶಗಳು ಇರಬಹುದು. ಆದರೆ ಕೆಲವು ತಪು ಗ್ರಹಿಕೆಗಳಿಂದಾದವು ಅಂತ ಅನಿಸ್ತದೆ. ನಾನು  ಅದರ ಬಗ್ಗೆ ಮೌನವಾಗಿ ಬಿಡ್ತೇನೆ. ಈಗ ಬಿಳಿಮಲೆಯವರನ್ನೆ ತೆಗೆದುಕೊಳ್ಳೋಣ. ಅವರು ಬಹುಶಃ ನನ್ನ ಕಾವ್ಯದ ಕೆಲವು ಶಬ್ದಗಳ ಬಗ್ಗೆ, ಅದಕ್ಕೆ ಇರತಕ್ಕಂಥ  ಹಿನ್ನೆಲೆ, ಅದು ಕಟ್ಟಿಕೊಡೋವಂಥ ಪ್ರತಿಮೆ, ನಾವು ಯಾವ ರೀತಿಯಿಂದ ಭಾವಿಸಿ ಅಲ್ಲಿನ ಸನ್ನಿವೇಶಕ್ಕೆ ತಂದಿರ್‍ತೀನಿ, ಅದನ್ನ ವಿಮರ್ಶೆ ತಿಳ್ಕೊಳದಿದ್ದರೆ  ಏನ್ಮಾಡೋದು? ಈಗ ಮಧುರಚೆನ್ನರ ಬಗ್ಗೆ ಬರೆದ ಪದ್ಯದಲ್ಲಿ ಇದಿದೆ. ’ನಿಮ್ಮ ತನುವು ನಿಸದಿಗೆಗಲ್ಲು, ಮನವು ಮಾಸತಿ ಕಲ್ಲು, ನಿಮ್ಮ ಸಾಧನೆಯೊಂದು ವೀರಗಲ್ಲು’. ಕವಿತೆಗೆ ಅರ್ಥ ಕೊಡೋವಂತಹ ಇದರ ಹಿಂದಿನ ಭಾವಕೋಶ ಏನಿದೆ, ಆ ದೃಷ್ಟಿಯಿಂದ ನೋಡಬೇಕು. ಮಾಸತಿಕಲ್ಲು ಅಂತಕ್ಷಣ ಮಾಸ್ತಿ ಹೋಗೋದಕ್ಕೆ ನಾನು ಫಾರ್ ಅದೀನಿ ಅಂತನ್ನೋ ರೀತಿ ಅಲ್ಲ.

ಪ್ರ: ಕನ್ನಡದ ಸಾಹಿತ್ಯ ವಿಮರ್ಶೆ ಸಂಸ್ಕೃತಿ ಚಿಂತನೆಯಾಗಿ ಬದಲಾಗಲಿಕ್ಕೆ, ಲಿಟರೇಚರ್ ಮೇಲೆ ಅಭಿರುಚಿ ಹುಟ್ಟಿಸುವ ಕೆಲಸಕ್ಕಿಂತ ಹೆಚ್ಚಾಗಿ ಲೋಕವನ್ನು ಕುರಿತು ಮಾತಾಡ್ತಾ ಇರೋದಕ್ಕೆ,  ಕಾರಣ ಏನಿರಬಹುದು? ಜಾಗತೀಕರಣ ಮುಂತಾದ ಜಗತ್ತಿನ ಬಹಳ ಮುಖ್ಯವಾದ ವಿದ್ಯಮಾನಗಳು ಕ್ರೈಸಿಸ್‌ಗಳು ಹುಟ್ಟೋದಕ್ಕೂ ಸಾಹಿತ್ಯ ವಿಮರ್ಶೆಯ ಈ ರೂಪಾಂತರಕ್ಕೂ ಸಂಬಂಧ ಇರಬಹುದೋ ಏನೋ..

ಉ: ಇದಕ್ಕೂ ಮೊದಲೇನೇ ಆಗಿದೆ. ಗ್ಲೋಬಲೈಜೇಶನ್ ಇವುಗಳ ಅಬ್ಬರ ಇನ್ನೂ ಹೆಚ್ಚು ಕೇಳದೇ ಇರುವಾಗಲೇನೇ ನಮ್ಮ ಜೀವನದ ಸಂಸ್ಕೃತಿ ಬಗ್ಗೆ ಚಿಂತನೆ ಶುರುವಾಗಿತ್ತು. ಈಗ ನೋಡಿ, ಸಂಸ್ಕೃತಿ ಬಗ್ಗೇನೆ ಎಷ್ಟು ವಿವೇಚನೆ ನಡೀತು. ಸಂಸ್ಕೃತಿ ಅಂತಾತು. ಉಪಸಂಸ್ಕೃತಿ ಅಂತಾತು. ಬುಡಕಟ್ಟಿನ ಬಗ್ಗೆ ಅಭ್ಯಾಸ ನಡೀತಿರುವಂಥಾದ್ದು.  ಹೀಗೆ ಸಂಸ್ಕೃತಿಯ ವ್ಯಾಪ್ತಿ ವಿಸ್ತಾರವಾಗಿ ಬರ್‍ತಾ ಇದೆ.  ನಮ್ಮ ಮೊದಲಿನ ಭಾವನೆ ಏನಿದ್ದವು, ಭಾರತೀಯ ಸಂಸ್ಕೃತಿ ಇದೆಲ್ಲಾ ಒಂದು ಅಂತ, ಹಾಗಿರುವಾಗ ಸಾಹಿತ್ಯ ಕೃತಿಯ ಸಾಂಸ್ಕೃತಿಕ ವಿಶ್ಲೇಷಣೆ ಹೊಸ ದೃಷ್ಟಿಯನ್ನು ತಂದು ಕೊಡ್ತಾ ಇದೆ. ಆದರೆ ಇದು ಅತೀ ಅಗಿಬಿಡ್ತು ಅಂದರೆ, ಹೊಸದಾಗಿ  ಅಭಿರುಚಿ ಹುಟ್ಟಬೇಕಾದಂತಹವರಿಗೆ ಅದು ಒಮ್ಮೆಲೇ ನಿಲುಕದಾಗಬಹುದು ಅಥವಾ ಗೊಂದಲವನ್ನ ಉಂಟುಮಾಡಬಹುದು.

ಪ್ರ: ಗ್ಲೋಬಲೈಜೇಶನ್ ಅಬ್ಬರ ಆಂದಿರಿ. ಈ ಅರ್ಥಿಕ ರಾಜಕಾರಣದ ವಿದ್ಯಮಾನವನ್ನು ಕವಿಯಾಗಿ ನೀವು ಹೆಂಗೆ ಗ್ರಹಿಸ್ತೀರಿ?

ಇದು ರಾಷ್ಟ್ರದ ದೃಷ್ಟಿಯಿಂದ ರಾಜಕೀಯವಾಗಿ  ಬಹಳಾ ಪ್ರಭಾವ ಬೀರತಾ ಇದೆ. ಈಗ ನಮ್ಮನ್ನು ನಾವು ಉಳಸ್ಕೋಬೇಕು ಅಂತಂದ್ರೆ, ಸಾಂಸ್ಕೃತಿಕವಾಗಿ ನಾವು ಗಟ್ಟಿಯಾದ ನಿಲುವನ್ನು  ತಳೀಬೇಕಾಗ್ತದ. ಈಗ ’ವಿಶ್ವವೇ ಒಂದು ಹಳ್ಳಿ’ ಅನ್ನುವಾಗ, ಮೊದಲು ನನಗೆ ನನ್ನ ಹಳ್ಳಿ ನನ್ನದಾಗಬೇಕಲ್ಲ. ನನ್ನ ಜನ, ನನ್ನ ನಾಡು, ನಮ್ಮ ಸಂಸ್ಕೃತಿ ಇದು ನನ್ನದಾಗಬೇಕು. ಗ್ಲೋಬಲೈಜೇಶನ್ ಯಾವುದೋ ಒಂದು ಹದ್ದು ಎರಗಿದಂಗಾಗಬಾರದು. ತಾಯಿ ಮಗುವನ್ನ ಎತ್ಕೊಂಡು ಪೋಷಣೆ ಮಾಡೋದು ಬೇರೆ. ಹದ್ದು ಬಂದು ಕಚ್ಕೊಂಡು ಹೋಗೋದು ಬ್ಯಾರೆ.

  • ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...