Homeಮುಖಪುಟಕರ್ನಾಟಕ ಸರ್ಕಾರ ಎಪಿಎಂಸಿ-ಭೂ ಸುಧಾರಣೆ-ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ

ಕರ್ನಾಟಕ ಸರ್ಕಾರ ಎಪಿಎಂಸಿ-ಭೂ ಸುಧಾರಣೆ-ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ

- Advertisement -

ಜಿ.ಸಿ.ಬಯ್ಯಾರೆಡ್ಡಿ ಅವರು ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕರು, ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷರು. ಚಾರಿತ್ರಿಕ ರೈತ ಹೋರಾಟ ಮೇಲುಗೈ ಸಾಧಿಸಿದ ಈ ಸಂದರ್ಭದಲ್ಲಿ ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿದ್ದಾರೆ.

ಪ್ರಶ್ನೆ: ಪ್ರಧಾನಿ ನರೇಂದ್ರ ಮೋದಿಯವರು ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯ ಪರವಾದ ಕಾನೂನುಗಳನ್ನು ಮಾಡಿ ಸರ್ಕಾರ ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಮಯದಲ್ಲಿ ರೈತ ಸಮುದಾಯದ ಮುಂದಿನ ನಡೆಗಳೇನು?

ಜಿ.ಸಿ.ಬಯ್ಯಾರೆಡ್ಡಿ: ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆದಿದ್ದು, ನವೆಂಬರ್ 29ರಿಂದ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂಪಡೆಯುವ ಸಾಂವಿಧಾನಿಕ ಪ್ರಕ್ರಿಯೆ ಆರಂಭವಾದರೆ ಪ್ರಧಾನಿಯವರ ಹೇಳಿಕೆ ವಾಸ್ತವಾಗುತ್ತದೆ. ’ಕನಿಷ್ಠ ಬೆಂಬಲ ಬೆಲೆ’ ಜಾರಿ ಬೇಡಿಕೆಯು ರೈತ ಹೋರಾಟದ ಭಾಗವಾಗಿದೆ. ಇದರ ಜೊತೆಗೆ ವಿದ್ಯುಚ್ಚಕ್ತಿ ಮಸೂದೆ ಹಿಂಪಡೆಯಬೇಕೆಂಬುದು ನಮ್ಮ ಆಗ್ರಹವಾಗಿದೆ. ಇವೆರಡರ ಕುರಿತು ಪ್ರಧಾನಿಯವರು ಮಾತನಾಡಿಲ್ಲ. ದೆಹಲಿಯ ರೈತ ಹೋರಾಟಕ್ಕೆ ಭಾಗಶಃ ವಿಜಯ ದೊರೆತಿದೆ. ಉಳಿದ ಎರಡು ಬೇಡಿಕೆಗಳ ಕುರಿತೂ ಸರ್ಕಾರ ನಿರ್ಣಯಕ್ಕೆ ಬಂದರೆ ಹೋರಾಟವನ್ನು ವಾಪಸ್ ಪಡೆಯುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ.

ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಕಾರ್ಪೊರೆಟ್ ಕಂಪೆನಿಗಳ ಪರವಾಗಿ ಅತಿ ವೇಗವಾಗಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಕರಾಳ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳುವ ಘೋಷಣೆ ಮಾಡುವಾಗಲೂ ಮೋದಿ ತಮ್ಮ ನಿಲುವನ್ನು ಸೂಚ್ಯವಾಗಿ ತಿಳಿಸಿದ್ದಾರೆ. “ದೇಶಕ್ಕೆ ಒಳಿತು ಮಾಡುವ ಕಾಯ್ದೆಗಳನ್ನು ನಾವು ಜಾರಿಗೊಳಿಸಿದ್ದೆವು. ಆದರೆ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ. ಈ ನೋವಿನಲ್ಲೇ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದೇವೆ” ಎಂದು ಪ್ರಧಾನಿ ವ್ಯಥೆಪಟ್ಟಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಇತರ ಹಲವು ರಾಜ್ಯಗಳ ಚುನಾವಣೆಗಳು ಬರುತ್ತಿವೆ. ಇಲ್ಲಿ ಅಧಿಕಾರ ಕಳೆದುಕೊಂಡರೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತೇವೆ ಎಂಬ ಭಯ ಸರ್ಕಾರದ ನಿರ್ಧಾರದಲ್ಲಿ ಎದ್ದು ಕಾಣುತ್ತಿದೆ. ಆದರೆ ಇವರು ಎಂದಿಗೂ ಕಾರ್ಪೊರೆಟ್ ಕಂಪೆನಿಗಳ ಪರವಾಗಿದ್ದಾರೆ. ಕಾರ್ಪೊರೆಟ್ ಕಂಪೆನಿಗಳ ಒಡನಾಟದಿಂದ ಅವರು ಹಿಂದೆ ಸರಿಯುವ ಮುನ್ಸೂಚನೆ ಕಂಡುಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತಾರೆ ಎಂಬುದರಲ್ಲಿ ಅನುಮಾನಗಳು ಇಲ್ಲ. ಈ ಎಚ್ಚರ ರೈತ ಸಮುದಾಯಕ್ಕಿದೆ.

ಪ್ರಶ್ನೆ: ವಿದ್ಯುಚ್ಚಕ್ತಿ ಮಸೂದೆ ಹಿಂಪಡೆಯುವುದು ಹಾಗೂ ಎಂಎಸ್‌ಪಿ ಜಾರಿಗೊಳಿಸುವುದು- ಈ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುತ್ತಿರುವುದೇಕೆ?

ಬಯ್ಯಾರೆಡ್ಡಿ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ಸಾಂಸ್ಥಿಕ ವ್ಯವಸ್ಥೆಯನ್ನು ನಾವು ಮಾಡಿಕೊಳ್ಳಲಿಲ್ಲ. ಭಾರತದಲ್ಲಿ ಅರ್ಧ ಗಂಟೆಗೊಮ್ಮೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎನ್ನುತ್ತವೆ ಅಂಕಿಅಂಶಗಳು. ಈ ಆತಂಕಕಾರಿ ಬೆಳವಣಿಗೆ ದಶಕದ ಹಿಂದೆ ಆರಂಭವಾಯಿತು. ಎಡಪಕ್ಷಗಳ ಬೆಂಬಲದಿಂದ ಅಧಿಕಾರದಲ್ಲಿದ್ದ ಯುಪಿಎ ಮೊದಲ ಅವಧಿಯಲ್ಲಿ ಎಂ.ಎಸ್.ಸ್ವಾಮಿನಾಥನ್ ಸಮಿತಿ ರಚನೆಯಾಯಿತು. ಸಮಿತಿಯು ಸಮಗ್ರವಾಗಿ ಅಧ್ಯಯನ ಮಾಡಿ, ರೈತ ಬೆಳೆಯುತ್ತಿರುವ ಬೆಳೆಗಳಿಗೆ ನಿಗದಿತವಾಗಿ ಮೌಲ್ಯ ಸಿಗದೇ ಇರುವುದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಿತು. ವೈಜ್ಞಾನಿಕವಾಗಿ ಉತ್ಪಾದನಾ ವೆಚ್ಚವನ್ನು ಲೆಕ್ಕ ಹಾಕಿ, ಅದರ ಮೇಲೆ ಶೇ. 50ರಷ್ಟು ಹಣವನ್ನು ಲಾಭವಾಗಿ ಸೇರಿಸಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಎಂಬ ಸೂತ್ರವನ್ನು ಸಮಿತಿ ನೀಡಿತು. “ಯುಪಿಎ ಸರ್ಕಾರ ಸ್ವಾಮಿನಾಥನ್ ವರದಿಯನ್ನು ಜಾರಿಮಾಡಲಿಲ್ಲ. ಹೀಗಾಗಿಯೇ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಮ್ಮನ್ನು ಅಧಿಕಾರಕ್ಕೆ ತಂದರೆ ನಾವು ವರದಿ ಜಾರಿಗೊಳಿಸುತ್ತೇವೆ” ಎಂದು ಬಿಜೆಪಿ ನಾಯಕರು ಹೇಳಿದರು. ಮೋದಿಯವರು ಎಂಎಸ್‌ಪಿ ಪರವಾಗಿ ಭಾಷಣಗಳನ್ನು ಮಾಡಿದ್ದಾರೆ, ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ರೈತರು ಪ್ರಕರಣ ದಾಖಲಿಸಿದಾಗ, ’ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಲು ಆಗಲ್ಲ. ಈ ಶಿಫಾರಸುಗಳನ್ನು ಕಾನೂನು ಮಾಡಿದರೆ ಮಾರುಕಟ್ಟೆಯಲ್ಲಿ ಏರುಪೇರು ಉಂಟಾಗುತ್ತದೆ’ ಎಂದು ಕೋರ್ಟ್‌ಗೆ ಬಿಜೆಪಿ ಸರ್ಕಾರ ಅಫಿಡವಿಟ್ಟು ಸಲ್ಲಿಸಿದೆ.

ನಮ್ಮ ದೇಶದಲ್ಲಿ ಲಕ್ಷಾಂತರ ಕೋಟಿ ರೂ. ವ್ಯವಹಾರ ಕೃಷಿ ವಲಯದಲ್ಲಿ ನಡೆಯುತ್ತಿದೆ. ಈ ವ್ಯವಹಾರವನ್ನು ಸಂಪೂರ್ಣವಾಗಿ ಕಾರ್ಪೊರೆಟ್‌ಗೆ ಒಪ್ಪಿಸಬೇಕೆಂದು ಈ ಸರ್ಕಾರ ತೀರ್ಮಾನಿಸಿದೆ. ’ಲೆಸ್ ಗವರ್ನಮೆಂಟ್ ಅಂಡ್ ನೋ ಗವರ್ನಮೆಂಟ್’ ಎಂಬುದು ಬಂಡವಾಳಶಾಹಿಗಳ ಜಾಗತಿಕ ಸ್ಲೋಗನ್. ಕೃಷಿ ಕ್ಷೇತ್ರದಲ್ಲಿ, ಕೃಷಿ ಮಾರುಕಟ್ಟೆಯಲ್ಲಿ ಸರ್ಕಾರ ಇರಬಾರದು. ಇದ್ದರೂ ಸ್ವಲ್ಪ ಇರಬೇಕು, ಕಾಲಾನಂತರದಲ್ಲಿ ಸರ್ಕಾರ ಸಂಪೂರ್ಣವಾಗಿ ಹೊರಬರಬೇಕು ಎಂಬುದು ಜಾಗತೀಕರಣದ ಮೂಲಮಂತ್ರ. ಹೀಗಾಗಿ ಸರ್ಕಾರ ಮಾರ್ಕೆಟ್‌ನಿಂದ ಹೊರಗೆ ಹೋಗಬೇಕು ಎಂದು ಬಹುರಾಷ್ಟ್ರೀಯ ಕಂಪನಿಗಳು ಹೇಳುವಾಗ, ಅವುಗಳ ವಿರುದ್ಧ ಕಾನೂನು ಮಾಡುವುದು ಕಾರ್ಪೊರೆಟ್ ಕಂಪನಿಗಳ ಹಿತಕ್ಕೆ ವಿರುದ್ಧವಾಗುತ್ತದೆ. ಮಾರ್ಕೆಟ್ ನಿಯಂತ್ರಣವನ್ನು ಸರ್ಕಾರ ತೆಗೆದುಕೊಂಡರೆ ಕಂಪನಿಗಳಿಗೆ ಕಷ್ಟವಾಗುತ್ತದೆ. ಹೀಗಾಗಿ ಸ್ವಾಮಿನಾಥನ್ ವರದಿ ಜಾರಿ ಕಷ್ಟವೆಂದು ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಅಮೆರಿಕ, ಕೆನಡಾ ದೇಶಗಳಲ್ಲಿರುವಂತೆಯೇ ಕೃಷಿ ಮಾರುಕಟ್ಟೆ ಕಾರ್ಪೊರೆಟ್‌ಗಳ ಹಿಡಿತದಲ್ಲೇ ಇರಬೇಕು ಎಂದು ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಎಂಎಸ್‌ಪಿ ಕಾನೂನು ಮಾಡದಿರುವುದು ಮತ್ತು ಅಧಿಕಾರವನ್ನು ಕಳೆದುಕೊಳ್ಳುವುದರ ನಡುವಿನ ಪ್ರಶ್ನೆ ಬಂದಾಗ ಅಧಿಕಾರವನ್ನು ಉಳಿಸಿಕೊಳ್ಳಲು ಏನಾದರೂ ಮಾಡಬಹುದು ಎಂಬ ನಿರೀಕ್ಷೆಗಳಿವೆ. ಈ ನಿಟ್ಟಿನಲ್ಲಿ ಎಸ್‌ಕೆಎಂ ಗಟ್ಟಿ ನಿಲುವು ತಾಳಿದೆ. ಎಂಎಸ್‌ಪಿ ಜಾರಿಯಾಗದೆ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಕುಳಿತಿದೆ.

ವಿದ್ಯುಚ್ಛಕ್ತಿ ಸಂಬಂಧ ಹೇಳುವುದಾದರೆ, ಸಾರ್ವಜನಿಕ ಒಡೆತನದಲ್ಲಿ ವಿದ್ಯುತ್ ಉತ್ಪಾದನೆ, ವಿದ್ಯುತ್ ಸರಬರಾಜು, ವಿತರಣೆ ನಡೆಯುತ್ತಿದೆ. ಲೆಕ್ಕ ಹಾಕಿದರೆ ಲಕ್ಷಲಕ್ಷ ಕೋಟಿ ರೂ.ಗಳ ಆಸ್ತಿ ಈ ವಿದ್ಯುತ್ ಕ್ಷೇತ್ರಕ್ಕಿದೆ. ಕಾರ್ಪೊರೆಟ್‌ಗಳ ಕಣ್ಣು ಇದರ ಮೇಲೆ ಬಿದ್ದಿದೆ. ಕಾಲಕಾಲಕ್ಕೆ ವಿದ್ಯುತ್ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ಆದರೆ ಇತ್ತೀಚೆಗೆ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇರಿಸಿದೆ. “ತಮ್ಮ ಅಧಿಕಾರ ವ್ಯಾಪ್ತಿಯಲ್ಲಿದ್ದರೂ ರಾಜ್ಯ ಸರ್ಕಾರಗಳು ಈ ವಲಯವನ್ನು ಖಾಗಿಕರಣ ಮಾಡುತ್ತಿಲ್ಲ. ಬಡವರಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಖಾಸಗೀಕರಣಕ್ಕೆ ಅಡ್ಡಿಯಾಗುತ್ತಿದೆ” ಎಂದು ಕೇಂದ್ರ ಸರ್ಕಾರ ತಿಳಿದುಕೊಂಡಿತು. ಹಾಗಾಗಿ ರಾಜ್ಯ ಸರ್ಕಾರದ ಅಧಿಕಾರವನ್ನು ಅತಿಕ್ರಮಣ ಮಾಡಿ, ವಿದ್ಯುತ್ ಖಾಸಗೀಕರಣಕ್ಕಾಗಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಈ ಮಸೂದೆಯನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ವಿರೋಧಿಸಿವೆ. ರಾಜ್ಯ ಸರ್ಕಾರಗಳ ಅಧಿಕಾರವನ್ನು ಅತಿಕ್ರಮಣ ಮಾಡಿರುವುದರ ಉದ್ದೇಶ, ’ವಿದ್ಯುತ್ ಕ್ಷೇತ್ರವು ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ’. ಹೀಗಾಗಿ ಈ ವಲಯವನ್ನು ಅಂಬಾನಿ, ಅದಾನಿ ಮುಂತಾದ ಕ್ರೋನಿಗಳಿಗೆ ಮಾರಬೇಕೆಂದು ಹೊರಟಿದ್ದಾರೆ. ಮಸೂದೆಯನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗದು. ಅಧಿಕಾರವೇ ಮುಖ್ಯವಾದಾಗ ಹಿಂತೆಗೆದುಕೊಳ್ಳಲೇಬೇಕಾಗುತ್ತದೆ.

ಪ್ರಶ್ನೆ: ಕೇಂದ್ರ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ರಾಜ್ಯ ಸರ್ಕಾರದ ಅಧಿಕಾರವನ್ನು ಅತಿಕ್ರಮಣ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೈತರು ಯಾವ ಎಚ್ಚರವನ್ನು ವಹಿಸಬೇಕು? ಆ ನಿಟ್ಟಿನಲ್ಲಿ ರೈತ ಸಂಘಟನೆಗಳ ಮುಂದಿನ ನಡೆ ಏನು?

ಬಯ್ಯಾರೆಡ್ಡಿ: ಕೇಂದ್ರ ಸರ್ಕಾರ ತನ್ನ ಗಡಿಗಳನ್ನು ದಾಟಿ ರಾಜ್ಯ ಸರ್ಕಾರದ ಪಟ್ಟಿಯ ವಿಷಗಳಲ್ಲಿ ಹಸ್ತಕ್ಷೇಪ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರಗಳು ಇದರ ವಿರುದ್ಧ ಸಿಡಿದೆದ್ದು ನಿಲ್ಲಬೇಕು. ದುರದೃಷ್ಟವಶಾತ್ ಪ್ರಶ್ನಿಸುವ ದನಿ ಗಟ್ಟಿಯಾಗಿಲ್ಲ. ಆದರೂ ಕೆಲವು ರಾಜ್ಯಗಳು ಮಾತನಾಡುತ್ತಿವೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು ಕೇಂದ್ರದ ಧೋರಣೆಯನ್ನು ಪ್ರಶ್ನಿಸುತ್ತಿವೆ. ಎಲ್ಲ ರಾಜ್ಯ ಸರ್ಕಾರಗಳು ಕೇಂದ್ರದ ವಿರುದ್ಧ ಸಿಡಿದು ನಿಲ್ಲಬೇಕು. ಎಲ್ಲ ಚಳವಳಿಗಳೂ ರಾಜ್ಯ ಸರ್ಕಾರದ ಪರ ನಿಲ್ಲಬೇಕು.

ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದ ಬಳಿಕ, ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಮೂರು ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ- ಈ ಮೂರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಕ್ಷಣ ವಾಪಸ್ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಈ ಕರಾಳ ಕಾಯ್ದೆಗಳ ಜಾರಿಯಲ್ಲಿ ಮೋದಿ ಸರ್ಕಾರಕ್ಕಿಂತಲೂ ಹೆಚ್ಚಿನ ಉತ್ಸಾಹದಲ್ಲಿದೆ. ಎನ್‌ಇಪಿ ಜಾರಿ, ಕೃಷಿ ಕಾಯ್ದೆಗಳ ತಿದ್ದುಪಡಿ ಜಾರಿ ಸೇರಿದಂತೆ ಇನ್ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಇವುಗಳ ಭಾಗೀದಾರರ ಜೊತೆ ಕನಿಷ್ಠ ಚರ್ಚೆ ಮಾಡುವುದನ್ನೂ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಸುಗ್ರೀವಾಜ್ಞೆಗಳ ಮೂಲಕ ಕಾನೂನುಗಳನ್ನು ಜಾರಿ ಮಾಡಿತು. ಇಂತಹ ಧೋರಣೆಗಳನ್ನು ಖಂಡಿಸಿ ಜನವರಿ 26ರಂದು ದನ, ಕರುಗಳೊಂದಿಗೆ ಹೊರಟು ಹತ್ತಾರು ಕಡೆ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸುಮಾರು ಎಂಟರಿಂದ ಹತ್ತು ಮಹಾಪಂಚಾಯತ್‌ಗಳನ್ನು ರಾಜ್ಯದಲ್ಲಿ ಸಂಘಟಿಸಲು ಹೊರಟಿದ್ದೇವೆ. ಬಜೆಟ್ ಪೂರ್ವದಲ್ಲಿ ಪೀಪಲ್ ಅಸೆಂಬ್ಲಿ ನಡೆಸಲು ನಿರ್ಧರಿಸಿದ್ದೇವೆ. ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಮೂರು ಕಾಯ್ದೆಗಳ ರದ್ದು ನಮ್ಮ ಹೋರಾಟದ ಭಾಗವಾಗಿದೆ. ಸಂಯುಕ್ತ ಹೋರಾಟ ಕರ್ನಾಟಕದಲ್ಲಿರುವ ಎಲ್ಲ ಭಾಗೀದಾರ ಸಂಘಟನೆಗಳಿಗೆ ಈ ಸ್ಪಷ್ಟತೆ ಇದೆ.

ಪ್ರಶ್ನೆ: ರೈತ ಮತ್ತು ಕಾರ್ಮಿಕ, ಹಿಂದೂ-ಮುಸ್ಲಿಂ ಐಕ್ಯತೆಗೆ ಚಾರಿತ್ರಿಕ ರೈತ ಹೋರಾಟ ಸಾಕ್ಷಿಯಾಯಿತು. ಇದನ್ನು ಒಡೆದು ಹಾಕುವ ಪ್ರಯತ್ನಗಳನ್ನು ಫ್ಯಾಸಿಸ್ಟ್ ಧೋರಣೆಯ ಶಕ್ತಿಗಳು ಮಾಡುತ್ತಲೇ ಇರುತ್ತವೆ. ಈ ಸಂದರ್ಭದಲ್ಲಿ ಚಳವಳಿಗಾರರ ನಡೆ ಹೇಗಿರಬೇಕು?

ಬಯ್ಯಾರೆಡ್ಡಿ: ಕರ್ನಾಟಕದ ಇತಿಹಾಸವನ್ನು ಮೆಲುಕುಹಾಕಿ ಹೇಳುವುದಾದರೆ, ಎಂಬತ್ತರ ದಶಕದಲ್ಲಿ ರಾಜಕೀಯ ಚರಿತ್ರೆ ಬದಲಿಸಿದ ನರಗುಂದ, ನವಲಗುಂದ ರೈತ ಹೋರಾಟ ನಡೆಯಿತು. ಈ ಹೋರಾಟಕ್ಕೆ ಬೆಂಗಳೂರಿನ ಕಾರ್ಮಿಕ ವರ್ಗ ಜೊತೆಯಾಯಿತು. ಕಾರ್ಮಿಕ, ರೈತರ ಸಮ್ಮಿಲನದಿಂದಾಗಿ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಯಿತು. ಅದನ್ನು ಬಿಟ್ಟರೆ ಅಂಥದ್ದೊಂದು ಮಹಾಮಿಲನ ದುಡಿಯುವ ವರ್ಗದಲ್ಲಿ ನಡೆಯಲಿಲ್ಲ. ನಡೆದರೂ ಆ ದೊಡ್ಡ ಮಟ್ಟದಲ್ಲಿ ಆಗಲಿಲ್ಲ. ಸ್ವಾತಂತ್ರ್ಯ ಹೋರಾಟದ ಬಳಿಕ ದೊಡ್ಡ ಮಟ್ಟದಲ್ಲಿ ರೈತ ಹೋರಾಟ ದೆಹಲಿಯಲ್ಲಿ ಈಗ ನಡೆದಿದೆ. ಎಲ್ಲ ಜಾತಿಯ, ಎಲ್ಲ ಭಾಷೆ, ಪ್ರದೇಶದ ಜನರು, ಕಾರ್ಮಿಕರು, ಚಿಂತಕರು ಜೊತೆಯಾಗಿದ್ದಾರೆ. ಈ ಕಾರ್ಪೊರೆಟ್ ನೀತಿಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಇರುವುದು ರೈತ ಮತ್ತು ಕಾರ್ಮಿಕ ವರ್ಗಕ್ಕೆ ಮಾತ್ರ. ಏಕೆಂದರೆ ಸಂಪತ್ತನ್ನು ಸೃಷ್ಟಿ ಮಾಡುವ ವರ್ಗವಿದು ಎಂಬುದು ಬಹುತೇಕರಿಗೆ ಅರಿವಾಗಿದೆ. ಹೀಗಾಗಿಯೇ ಕರ್ನಾಟಕದಲ್ಲಿ ರೈತರು ಮಾತ್ರ ಒಂದುಗೂಡದೆ, ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳೆ ಎಲ್ಲರನ್ನೂ ಒಳಗೊಂಡು ಸಂಯುಕ್ತ ಹೋರಾಟ ಕರ್ನಾಟಕ ಎಂದು ಮಾಡಿಕೊಂಡಿದ್ದೇವೆ. ಒಂದೇ ದಿನದಲ್ಲಿ ಎಲ್ಲ ಜನರೂ ಒಂದು ಕಡೆ ಬರುತ್ತಾರೆಂದು ನಾವು ಭಾವಿಸಿಲ್ಲ. ಆದರೆ ಆ ಪ್ರಕ್ರಿಯೆ ಉತ್ತಮ ರೀತಿಯಲ್ಲಿ ನಡೆದಿದೆ. ಎಲ್ಲ ದುಡಿಯುವ ವರ್ಗವನ್ನು ಒಂದುಗೂಡಿಸುವ ಕೆಲಸ ನಡೆಯುತ್ತಿದೆ.

ಕೋಮುವಾದದ ಹೆಸರಲ್ಲಿ ರಾಜಕೀಯ ಮಾಡುವ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬೇಕಾದರೆ- ಎರಡು ವಿಧದಲ್ಲಿ ಹೋರಾಟ ಏಕಕಾಲದಲ್ಲಿ ನಡೆಯಬೇಕು. ಮೊದಲನೆಯದ್ದು: ಸಾಮಾನ್ಯ ಜನರ ಬದುಕಿನ ಪ್ರಶ್ನೆಗಳನ್ನು ಇಟ್ಟುಕೊಂಡು ದೊಡ್ಡ ಹೋರಾಟವನ್ನು ನಾವು ಕಟ್ಟಬೇಕು. ಜನಸಾಮಾನ್ಯರ ಕನಿಷ್ಠ ಬೇಡಿಕೆಗಳನ್ನಾದರೂ ಈಡೇರಿಸಿ ಅವರು ಬದುಕಲು ಅವಕಾಶ ನೀಡಬೇಕು. ಯಾವತ್ತೇ ಆಗಲಿ ಹಸಿವು, ಬಡತನ, ನಿರುದ್ಯೋಗ ಸ್ಥಿತಿಯು ಸರ್ವಾಧಿಕಾರಿಗಳು ಹುಟ್ಟಲು ಭೂಮಿಕೆಯಾಗಿರುತ್ತದೆ. ಜನರ ಅತೃಪ್ತಿಯೇ ಸರ್ವಾಧಿಕಾರಿ ಶಕ್ತಿಗಳು, ಫ್ಯಾಸಿಸ್ಟ್ ಶಕ್ತಿಗಳು ಬೆಳೆಯಲು ಫಲವತ್ತಾದ ಭೂಮಿ. ಹೀಗಾಗಿ ಆರ್ಥಿಕ ಸುಧಾರಣೆ, ಬದುಕಿನ ಪ್ರಶ್ನೆಗಳ ಮೇಲೆ ನಿರ್ಣಾಯಕ ಹೋರಾಟವನ್ನು ಕಟ್ಟಬೇಕು. ಆ ಮೂಲಕ ಅಸಂಘಟಿತ ಜನಸಮೂಹವು ಕೋಮುವಾದಿ ಶಕ್ತಿಗಳ ಜೊತೆ ಹೋಗುವುದನ್ನು ತಪ್ಪಿಸಲು ಪ್ರಾಥಮಿಕ ಜಾಗೃತಿ ಅಗತ್ಯ. ಎರಡನೆಯದ್ದು: ಆರ್ಥಿಕ ಮತ್ತು ಬದುಕಿನ ಹೋರಾಟದಿಂದ ಮಾತ್ರವೇ ಫ್ಯಾಸಿಸ್ಟ್‌ಗಳನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಸಾಂಸ್ಕೃತಿಕವಾಗಿಯೂ ರಾಜಕೀಯವಾಗಿಯೂ ಸೈದ್ಧಾಂತಿಕವಾಗಿಯೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಬೇಕು. ಆ ಜನರನ್ನು ಎಜುಕೇಟ್ ಮಾಡುವ ಕೆಲಸವೂ ಆಗಬೇಕು. ಸಂಯುಕ್ತ ಹೋರಾಟ ಕರ್ನಾಟಕದಲ್ಲಿ ಇರುವವರಿಗೆಲ್ಲರಿಗೂ ಈ ವಿಚಾರವಾಗಿ ಒಂದೇ ತಿಳಿವಳಿಕೆ ಇದೆ ಎಂದು ನಾನು ಭಾವಿಸಿಲ್ಲ. ಆದರೆ ಯಾರೂ ಇಂತಹ ಚಿಂತನೆಗೆ ವಿರುದ್ಧವಿಲ್ಲ ಎಂಬುದು ಮುಖ್ಯ. ಈ ರೀತಿಯ ಹೋರಾಟದ ಗಂಭೀರತೆ ಎಲ್ಲರಿಗೂ ಸಮಾನವಾಗಿ ಅರ್ಥವಾಗದಿದ್ದರೂ ಎಲ್ಲರೂ ಇದಕ್ಕೆ ಬೆಂಬಲವನ್ನೂ ನೀಡುತ್ತಿದ್ದಾರೆ.


ಇದನ್ನೂ ಓದಿ: ಸರ್ವಾಧಿಕಾರದ ಅಹಂ ಮುರಿದ ಸಮರ ಸತ್ಯಾಗ್ರಹ: ನೂರ್ ಶ್ರೀಧರ್

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕೂಟ ಸರ್ಕಾರ ತಿರಸ್ಕರಿಸಿದ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಕೊಲ್ಕತ್ತಾದಲ್ಲಿ ಪ್ರದರ್ಶನ: ಬಂಗಾಳ ಸರ್ಕಾರ

0
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ವಿವಾದದ ನಡುವೆ, ಕೋಲ್ಕತ್ತಾದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ಧಚಿತ್ರ ಪ್ರದರ್ಶಿಸಲು ರಾಜ್ಯ ಸರ್ಕಾರ...
Wordpress Social Share Plugin powered by Ultimatelysocial