ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ತಿಂಗಳೊಳಗೆ ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಾಧ್ಯಮಗಳ ಮೇಲಿನ ಬೆದರಿಕೆ ಸಲ್ಲದು ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತಾಕೀತು ಮಾಡಿದೆ.
ಸರ್ಕಾರದ ನೀತಿಗಳನ್ನು ಟೀಕಿಸುವ, ಆಡಳಿತವನ್ನು ಪ್ರಶ್ನಿಸುವ ಮಾಧ್ಯಮ ಸಂಸ್ಥೆಗಳನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಳ್ಳುವ ಪ್ರವೃತ್ತಿಯ ಮುಂದುವರಿಕೆಯಾಗಿ ಐಟಿ ಇಲಾಖೆಯ ‘ಸಮೀಕ್ಷೆಗಳು’ ನಡೆಯುತ್ತಿವೆ ಎಂದು ಗಿಲ್ಡ್ ಹೇಳಿಕೆಯಲ್ಲಿ ತಿಳಿಸಿದೆ.
EGI is deeply concerned about the IT “surveys” being carried out at the offices of BBC India. Is distressed by the continuing trend of government agencies being used to intimidate and harass news organisations that are critical of ruling establishment. pic.twitter.com/hM7ZkrdOiq
— Editors Guild of India (@IndEditorsGuild) February 14, 2023
“ಸರ್ವೆ” ಎಂದು ಕರೆಯಲ್ಪಡುವ ಈ ದಾಳಿಗಳು ಸರ್ಕಾರಿ ಏಜೆನ್ಸಿಗಳ ದುರುಪಯೋಗದ ಮೂಲಕ ಬೆದರಿಸುವ ಕ್ರಿಯೆಯೇ ಹೊರತು ಬೇರೇನೂ ಅಲ್ಲ” ಎಂದು ಬಿಬಿಸಿ ದೆಹಲಿಯ ಮಾಜಿ ಡೆಪ್ಯೂಟಿ ಚೀಫ್ ಆಫ್ ಬ್ಯೂರೋ ಪತ್ರಕರ್ತ ಸತೀಶ್ ಜಾಕೋಬ್ ತಿಳಿಸಿದ್ದಾರೆ.
2002ರ ಗುಜರಾತ್ ಗಲಭೆ ಮತ್ತು ಮೋದಿಯ ಆಡಳಿತದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿಯ ಕುರಿತು ಬಿಬಿಸಿಯು 2 ಕಂತುಗಳು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದೆ. ಆದರೆ ಅವು ದುರುದ್ದೇಶದಿಂದ ಕೂಡಿವೆ ಎಂದು ಕೇಂದ್ರ ಸರ್ಕಾರ ಭಾರತದಲ್ಲಿ ಅವುಗಳ ಪ್ರಸಾರವನ್ನು ತಡೆಹಿಡಿದಿತ್ತು. ಇದೇ ಸಂದರ್ಭದಲ್ಲಿ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿರುವುದು ಆತಂಕಕಾರಿ ಬೆಳೆವಣಿಗೆ ಎಂದು ಗಿಲ್ಡ್ ಹೇಳಿದೆ.
2021ರಲ್ಲಿ ನ್ಯೂಸ್‌ಕ್ಲಿಕ್, ನ್ಯೂಸ್‌ಲಾಂಡ್ರಿ, ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಮಾಧ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಅವುಗಳು ಸರ್ಕಾರದ ನೀತಿಗಳ ವಿರುದ್ಧ ವಿಮರ್ಶಾತ್ಮಕ ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೆ ದಾಳಿಗಳು ನಡೆದಿದ್ದವು. ಈಗ ಅದೇ ಮಾದರಿಯಲ್ಲಿ ಬಿಬಿಸಿ ಮೇಲೆ ದಾಳಿ ನಡೆಸಲಾಗಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರವೃತ್ತಿಯಾಗಿದೆ ಗಿಲ್ಡ್ ಕಿಡಿಕಾರಿದೆ.
ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಹಕ್ಕುಗಳನ್ನು ದುರ್ಬಲಗೊಳಿಸದಂತೆ ಇಂತಹ ಎಲ್ಲಾ ತನಿಖೆಗಳಲ್ಲಿ ಹೆಚ್ಚಿನ ಕಾಳಜಿ ಮತ್ತು ಸೂಕ್ಷ್ಮತೆಯನ್ನು ತೋರಿಸಬೇಕು. ಅಂತಹ ತನಿಖೆಗಳನ್ನು ನಿಗದಿತ ನಿಯಮಗಳೊಳಗೆ ನಡೆಸಲಾಗುವುದು ಮತ್ತು ಸ್ವತಂತ್ರ ಮಾಧ್ಯಮವನ್ನು ಬೆದರಿಸುವ ಕಿರುಕುಳದ ಸಾಧನಗಳಾಗಿ ಅವು ಬಳಕೆಯಾಗುವುದಿಲ್ಲ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಗಿಲ್ಡ್ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಇದನ್ನೂ ಓದಿ: ಭಾರತದ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ: ಅದಾನಿ ವಿರುದ್ಧ ಈ ಕ್ರಮ ಯಾಕೆ ಇಲ್ಲ? ಎಂದ ಮೊಯಿತ್ರಾ


