(ಮಾರ್ಚ್ 16ರ ಸಂಚಿಕೆಯಲ್ಲಿ ಶಾಂತಿಗೀತೆಯ ಅನುವಾದದ ಪೂರ್ಣ ಪಠ್ಯ ಮತ್ತು ಮಾರ್ಚ್ 23ರ ಸಂಚಿಕೆಯಲ್ಲಿ ಶಾಂತಿಗೀತೆಗೊಂದು ಪ್ರವೇಶದ ಮೊದಲ ಭಾಗ ಪ್ರಕಟವಾಗಿತ್ತು… ಮುಂದುವರಿದಿದೆ..)
ಅಸಹನೀಯ ನೋವನ್ನು ನಿಭಾಯಿಸುವ ಪ್ರಯತ್ನ ಒಂಬತ್ತನೆಯ ಕವಿತೆಯಲ್ಲೂ ಮುಂದುವರೆದಿದೆ. ಏಳನೆಯ ಕವಿತೆಯಲ್ಲಿ ಸಂವೇದನೆಯನ್ನು ಕಳಕೊಳ್ಳುವುದು, ಎಂಟನೆಯ ಕವಿತೆಯಲ್ಲಿ ಸಾವು – ಈಗ ಸಂಪೂರ್ಣ ಮರೆವು ಬಿಡುಗಡೆಯ ದಾರಿಯಾಗಿ ಕಾಯುತ್ತದೆ. ಹಾಗಾಗಿ ಈ ಕವಿತೆಯ ಮೊದಲಿನಲ್ಲೇ ’ಹುಚ್ಚು ಚಾಚಿರುವ ರೆಕ್ಕೆಯ ನೆರಳು’, ಎಂಬ ಪ್ರತಿಮೆ ಬಂದಿದೆ. ’ಶಾಂತಿಗೀತೆ’ಯ ಸೂಕ್ತಿ ವಾಕ್ಯದಲ್ಲೂ ರೆಕ್ಕೆ ಅನ್ನುವುದು ರಕ್ಷಣೆಯ, ಆಸರೆಯ ಪ್ರತಿಮೆಯಾಗಿಯೇ ಬಳಕೆಯಾಗಿದೆ. ಈ ರೂಪಕ ಬೈಬಲಿನಿಂದ ಬಂದದ್ದು; ದೇವರ ರಕ್ಷಣೆಯನ್ನು ಹಕ್ಕಿಯ ರೆಕ್ಕೆಯ ರಕ್ಷಣೆ ಅನ್ನುವ ರೂಪಕದ ಮೂಲಕ ಬೈಬಲಿನಲ್ಲಿ ವರ್ಣಿಸಲಾಗಿದೆ. ಆದರೆ, ಇಲ್ಲಿ ರಕ್ಷಣೆಯಾಗಿ ತೋರುವ ಮರೆವಿನ ರೆಕ್ಕೆಯಲ್ಲಿ ಆರ್ಥಸಂಧಿಗ್ಧತೆ ಇದೆ; ಮರೆವು ಎಷ್ಟೇ ಆಕರ್ಷಕವಾಗಿ ಕಂಡರೂ ಅದು ತರುವ ಮರುಳು ಅಪಾಯಕಾರಿಯಾದದ್ದು. ನಿರೂಪಕಿ ತನಗೆ ಹುಚ್ಚು ಹಿಡಿದರೂ ಪರವಾಗಿಲ್ಲ. ನೋವಿನಿಂದ ಬಿಡುಗಡೆ ಬೇಕು ಎಂದು ಬಯಸುತ್ತಾಳೆ. ಆದರೆ ಆಕೆ ಮರೆಯಲು ಬಯಸುವ ನೋವಿನ ಭಾಗವಾಗಿ ಅವಳ ಮಗನ ನೆನಪೂ ಇದೆ. ನೆನಪು ಕಳೆದುಕೊಳ್ಳುವುದೆಂದರೆ ಮಗನ ನೆನಪನ್ನೂ ಕಳಕೊಳ್ಳುವುದೇ ಅಲ್ಲವೇ.
ಹುಚ್ಚನ್ನು ಹೀಗೆ ಆಕರ್ಷಕವಾಗಿಯೂ ಅಸಹ್ಯವಾಗಿಯೂ ಕಾಣುವ ವಿರೋಧಾಭಾಸ ಇಲ್ಲಿದೆ. ನಾನು ಮರವೆಗೆ ಸಂದಿದ್ದೇನೆ ಎಂದು ಹೇಳುತಿದ್ದ ಹಾಗೇ ಆಕೆಗೆ ತನ್ನದೇ ಮಾತು ಬಡಬಡಿಕೆಯ ಹಾಗೆ ಕೇಳುತ್ತದೆ; ಆದರೂ
ನಿರೂಪಕಿಯ ನೆನಪು ಸ್ಥಿರವಾಗಿದೆ; ಆಕೆ ಹುಚ್ಚಿಯಾಗಿದ್ದಿದ್ದರೆ ನೆನಪಿಟ್ಟುಕೊಳ್ಳಲು ಸಾಧ್ಯವೇ ಇರದಿದ್ದ ಸಂಗತಿಗಳೆಲ್ಲ, ಅವಳ ಅರಿವಿನಲ್ಲಿವೆ. ಈ ಕವಿತೆಯ ಮೊದಲ ಸ್ಟಾಂಜಾದಲ್ಲಿ ಭಾವತೀವ್ರತೆಯ ಪ್ರತಿಮೆಗಳಿದ್ದರೆ ಕೊನೆಯಲ್ಲಿ ಅಸ್ತವ್ಯಸ್ತ ಮನಸ್ಸಿಗೆ ಹೊಳೆಯಲು ಸಾಧ್ಯವೇ ಇರದ ಪ್ರತಿಮೆಗಳಿವೆ. ಈ ಭಾಗದ ತಣ್ಣನೆಯ ದನಿ ಗಮನಾರ್ಹವಾಗಿದೆ. ಎರಡು, ಮೂರು, ನಾಲ್ಕನೆಯ ಕವಿತೆಗಳಲ್ಲಿ ಹೇಳಿದ ಹಾಗೆ ತನ್ನಿಂದ ತಾನು ಬೇರೆಯಾಗುವುದಲ್ಲ, ಏಳು ಮತ್ತು ಎಂಟನೆಯ ಕವಿತೆಗಳಲ್ಲಿ ಹೇಳಿದ ಹಾಗೆ ಪ್ರಜ್ಞೆಯನ್ನು ಒರೆಸಿಹಾಕುವುದರಲ್ಲೂ ಅಲ್ಲ, ನೋವಿನ ಮೂಲದಲ್ಲಿರುವ, ಹಿಂಸೆ ಪಡುತ್ತಿರುವ ತನ್ನ ಪ್ರಿಯ ವ್ಯಕ್ತಿಯನ್ನು ಕುರಿತ ಪ್ರೀತಿಯನ್ನು ನಿಷ್ಠೆಯ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವ ಬಯಕೆ, ನೋವುಣ್ಣುತ್ತಿರುವವನ ಪಕ್ಕದಲ್ಲೆ ಇರುವ, ಅವನಿಗೆ ಆಸರೆಯಾಗುವ, ಅದು ಸಾಧ್ಯವಾಗದಿದ್ದರೆ ಅವನನ್ನು ಸದಾ ನೆನೆಯುವ ಹಂಬಲ ಇಲ್ಲಿ ಮೂಡಿದೆ. ನೋವಿನಿಂದ ದೂರ ಓಡಿಹೋಗಬೇಕೆಂಬ ಅತ್ಯಂತ ಸಹಜವಾದ ಪ್ರವೃತ್ತಿಯ ಮೇಲೆ ಗೆಲುವು ಸಾಧಿಸಿದಾಗ ನಿರೂಪಕಿಯು ಸಹನೆಯ ಆಧ್ಯಾತ್ಮದ ಅನುಭವಕ್ಕೆ ಸಿದ್ಧಳಾಗುತ್ತಾಳೆ. ’ಪೀಠಿಕೆಯ ಬದಲಾಗಿ’ ಎಂಬ ಭಾಗದಲ್ಲಿ ಕಾಣಿಸಿದ ನೀಲಿತುಟಿಯ ಅಪಾರವೇದನೆಯ ಮಹಿಳೆಯ ಹಾಗಲ್ಲ ಈ ನಿರೂಪಕಿ. ಈಕೆ ಸಾಕ್ಷಿ ಪ್ರಜ್ಞೆಯಾಗುವಷ್ಟು ಬೆಳೆದುಬಿಟ್ಟಿದ್ದಾಳೆ.
*******
ಈ ಸಾಕ್ಷಿಯಾಗುವುದು, ಈ ಸಹನೆ ಇವೇ ಹತ್ತನೆಯ ಕವಿತೆ ’ಶಿಲುಬೆ’ಯ ಕೇಂದ್ರದಲ್ಲಿರುವ ಸಂಗತಿಗಳು. ಇಲ್ಲಿ ಅಖ್ಮತೋವಾ ಶಿಲುಬೆಗೇರಿದ ಯೇಸುವಿನ ಮುಂದೆ ನಿಂತಿರುವ ತಾಯಿ ಮೇರಿಯ ಚಿತ್ರವನ್ನು ಮೂಡಿಸಿದ್ದಾಳೆ. ಮಾತೆ/ಸಾಕ್ಷಿ ಪ್ರಜ್ಞೆಯ ಪರಮ ನಿದರ್ಶನವಾಗಿದ್ದಾಳೆ ಮೇರಿ. ಭೀತಿಯ ಯುಗದಲ್ಲಿ ಪ್ರಾಣ ತೆತ್ತ ಎಲ್ಲ ಮಕ್ಕಳ ತಾಯಂದಿರೊಡನೆ ಮೇರಿಯನ್ನು ಸಮೀಕರಿಸುವುದಕ್ಕೆ ರಶಿಯನ್ ಆರ್ಥಡಾಕ್ಸ್ ಚರ್ಚ್‌ನ ಉಲ್ಲೇಖ ಒದಗಿ ಬಂದಿದೆ. ’ನನ್ನನ್ನು ಗೋರಿಯಲ್ಲಿ ಕಂಡಾಗ ಅಳಬೇಡ ಅಮ್ಮಾ’ ಎನ್ನುವುದು ಈ ಉಕ್ತಿಯ ಸರಿಯಾದ ರೂಪ. ಆದರೆ ಗುಲಾಗ್ ಯಾತನಾಶಿಬಿರಗಳಲ್ಲಿ ಪ್ರಾಣ ಕಳೆದುಕೊಂಡವರ ಗೋರಿ ಎಲ್ಲಿರುತ್ತಿತ್ತೋ ಯಾರಿಗೂ ಗೊತ್ತಾಗುತ್ತಿರಲಿಲ್ಲ, ತಾಯಂದಿರು ಮಕ್ಕಳ ಗೋರಿಯ ಹತ್ತಿರ ಹೋಗಿ ಅಳುವುದು ಸಾಧ್ಯವೂ ಇರಲಿಲ್ಲ. ಹಾಗಾಗಿ ಕವಿ ಅರ್ಥಡಾಕ್ಸ್ ಚರ್ಚ್‌ನ ಪಠ್ಯದ ಮಾತನ್ನು ’ಮಣ್ಣಿಗಿಟ್ಟಿರುವ ನನಗಾಗಿ ಅಳಬೇಡ, ಅಮ್ಮಾ’ ಎಂದು ಬದಲಿಸಿಕೊಂಡಿದ್ದಾಳೆ.
’ಶಿಲುಬೆ’ ಎಂಬ ಈ ಕವಿತೆಯಲ್ಲಿ ಅಭಿನೀತವಾಗುವುದು ಮನುಷ್ಯ ಬದುಕಿನ ನಾಟಕವೇ ಹೊರತು ಧಾರ್ಮಿಕ, ತಾತ್ವಿಕ ಸಂಗತಿಗಳಲ್ಲ. ಯೇಸುವಿನ ’ತಂದೆಯೇ, ನನ್ನನ್ನೇಕೆ ತೊರೆದೆ?’ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ; ಇಲ್ಲಿ, ಸಾಯುತ್ತಿರುವ ಮಗ ಬಯಸುವುದು ಪವಾಡವನ್ನಲ್ಲ, ಶಕುನವನ್ನಲ್ಲ, ಮನುಷ್ಯ ಸಂಪರ್ಕದ ಸರಳ ನೆಮ್ಮದಿಯನ್ನು, ಹಾಗಾಗಿ ತಾಯಿಯತ್ತ ತಿರುಗಿ ಅಳಬೇಡಮ್ಮಾ ಎನ್ನುತ್ತಾನೆ. ಒಂಬತ್ತನೆಯ ಕವಿತೆಯಲ್ಲಿಯ ಹಾಗೆಯೇ ಇಲ್ಲಿಯೂ ನಿರೂಪಕಿ ತನ್ನ ಮಗನ ಮಾತುಗಳ ನೆನಪನ್ನು ಗಟ್ಟಿಯಾಗಿ ಹಿಡಿದಿದ್ದಾಳೆ. ಯೇಸುವು ಮೇರಿಗೆ ನೇರವಾಗಿ ಹೇಳುವ ಮಾತು, ಆಕೆ ತನ್ನ ಆಸರೆಯೂ ಹೌದು, ಸಾಕ್ಷಿಯೂ ಹೌದು ಅನ್ನುವುದನ್ನು ಸೂಚಿಸುತ್ತದೆ. ಅಳುವ ಮೇರಿ ಮ್ಯಾಗ್ದಲೀನಳ ಚೀರಾಟ ಮೊದಲನೆಯ ಕವಿತೆಯಲ್ಲಿ ಕ್ರೆಮ್ಲಿನ್ ಗೋಡೆಯ ಬಳಿ ಹೆಂಗಸರ ಅಳುವಿನ ಪ್ರಸ್ತಾಪವಾಗಿತ್ತಲ್ಲ ಅದನ್ನು ನೆನಪಿಗೆ ತರುತ್ತದೆ. ಜಾನ್ ದುಃಖದಲ್ಲಿ ಕಲ್ಲಾದ ಎಂಬ ಮಾತು ಏಳನೆಯ ಕವಿತೆಯಲ್ಲಿ ನಿರೂಪಕಿ ತನ್ನ ಹೃದಯ ಕಲ್ಲಾಗಲಿ ಎಂದು ಕೋರಿದ್ದನ್ನು ನೆನಪಿಗೆ ತರುತ್ತದೆ. ಮೇರಿ ಮ್ಯಾಗ್ದಲೀನ್ ಮತ್ತು ಜಾನ್ ಇಬ್ಬರೂ ಅಂತಿಮ ವೇದನೆಯನ್ನು ನೋಡಲಾಗದೆ ಎದುರಿಸಲಾಗದೆ ಒಳಸರಿದುಕೊಳ್ಳುವವರು. ಅಳುವ ತಾಯಿಯನ್ನು ನೋಡಲಾರರು ಅವರು. ಆದರೂ ಅವರು ನೋಡಲಾಗದ್ದನ್ನೂ ಸಹಿಸುವ ಗಟ್ಟಿಗಿತ್ತಿ ತಾಯಿ.
******
ಸಾಕ್ಷಿಯಾಗಿರುವ ನಿರೂಪಕಿ ನೋವಿನಿಂದ ಬಿಡುಗಡೆ ಪಡೆಯುವುದಿಲ್ಲ. ಆದರೆ ಆ ನೋವಿನಲ್ಲಿ ಬದುಕಿನ ಉದ್ದೇಶ, ಸ್ಥಿರತೆಗಳನ್ನು ಕಂಡುಕೊಳ್ಳುತ್ತಾಳೆ. ’ಸಮಾರೋಪ’ ಕವಿತೆಯ ಮೊದಲ ಭಾಗದಲ್ಲಿ ಈ ನೋವು ಸಮೀಪದ್ದೂ ಹೌದು ದೂರದ್ದೂ ಹೌದು. ಅತ್ಯಂತ ಚಿತ್ರವತ್ತಾದ ಈ ಸಾಲುಗಳು ವೇದನೆಯನ್ನಲ್ಲ ವೇದನೆಯ ಪರಿಣಾಮಗಳನ್ನು ಖಚಿತವಾದ ವಿವರಗಳಲ್ಲಿ ನೀಡುತ್ತವೆ. ಕುಗ್ಗಿ, ಹಳ್ಳ ಬಿದ್ದು, ಮೂಳೆ ಕಾಣುವ ಮುಖ, ನೋವಿನ ಅಕ್ಷರಗಳ ಸಹಿ ಬಿದ್ದಿರುವ ಕೆನ್ನೆ ಹಾಳೆ, ಒಂದೇ ರಾತ್ರಿಯಲ್ಲಿ ನೆರೆತ ಕೂದಲು, ಶುಷ್ಕ ನಗು ಇವೆಲ್ಲವೂ ದಾರುಣ ಅನುಭವ ಉಳಿಸಿ ಹೋಗಿರುವ ಗುರುತುಗಳು. ನೋವು ಕಳೆದಿದೆ, ನಿಜ; ಆದರೂ ನೋವು ಇದ್ದೇ ಇದೆ. ಯಾಕೆಂದರೆ ಆ ನೋವಿನಿಂದಾದ ಪರಿಣಾಮ ಶಾಶ್ವತವಾದದ್ದು.
ಕವಿ-ಸಾಕ್ಷಿ ಈಗ ತನ್ನದೇ ನೋವಿಗೆ ಶರಣಾದವಳಲ್ಲ, ಆ ನೋವಿನಿಂದ ಕುರುಡಾದವಳೂ ಅಲ್ಲ. ಈಗ ಆಕೆ ತನ್ನ ಸುತ್ತಲೂ ಇರುವ ಇತರ ಹೆಂಗಸರ ನೋವು ದುಃಖಗಳ ಬಗ್ಗೆ ಸಂವೇದನೆ ಬೆಳೆಸಿಕೊಂಡವಳು. ತನ್ನ ಮಗನ ನೆನಪನ್ನು ಸ್ಥಿರಗೊಳಿಸಿಕೊಂಡ ಹಾಗೆಯೇ ಅಕಸ್ಮಾತ್ ಗೆಳೆಯರಾದರಲ್ಲ ಅವರ ಬಗ್ಗೆಯೂ ಕವಿ-ಸಾಕ್ಷಿಯ ನಿಷ್ಠೆ ದೃಢವಾಗುತ್ತದೆ. ಕೇವಲ ತನ್ನ ಪ್ರೀತಿಪಾತ್ರರ ಬಗ್ಗೆ ಮಾತ್ರ ಕಾಳಜಿ, ದುಃಖ ಇರುವ ಒಬ್ಬೊಬ್ಬರೂ ಕವಿ-ಸಾಕ್ಷಿಯ ಮೂಲಕ ಸಮುದಾಯವಾಗುತ್ತಾರೆ. ಎರಡನೆಯ ಭಾಗದಲ್ಲಿ ಬರುವ ’ನೆನೆಯುವ ಹೊತ್ತು’ ಎಂಬ ನುಡಿಯು ದಿವಂಗತರ ಆತ್ಮಗಳಿಗೆ ಸಲ್ಲಿಸಲಾಗುತ್ತಿದ್ದ ಸಾಂಪ್ರದಾಯಿಕ ಪ್ರಾರ್ಥನೆಯನ್ನು ಸೂಚಿಸುತ್ತದೆ. ತೀರಿಕೊಂಡ ಒಬ್ಬೊಬ್ಬರ ಹೆಸರನ್ನೂ ಪ್ರಾರ್ಥನೆಯ ಹೊತ್ತಿನಲ್ಲಿ ಹೇಳುವ ಪದ್ಧತಿಗೆ ಈಗ ಅವಕಾಶವಿಲ್ಲ; ಸತ್ತವರ ಹೆಸರ ಪಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಒಬ್ಬೊಬ್ಬರ ವೈಯಕ್ತಿಕ ನೆನಪೂ ಅಸಾಧ್ಯವಾಗಿ ಕವಿಯು ನೆನಪಿನಲ್ಲುಳಿದ ಮಾತು ಬಳಸಿ ಶಬ್ಬಗಳ ಹೆಣಬಟ್ಟೆ ನೇಯ್ದಿದ್ದಾಳೆ. ರಶಿಯನ್ ಭಾಷೆಯ ಪೊಕ್ರೊವ್ ಎಂಬ ಮಾತಿಗೆ ಸೆರಗು, ಹೊದಿಕೆ ಎಂಬರ್ಥ ಮಾತ್ರವಲ್ಲದೆ ರಶಿಯನ್ ಅರ್ಥಡಾಕ್ಸ್ ಚರ್ಚಿನ ಉತ್ಸವದ ಸಮಯದಲ್ಲಿ ಕನ್ಯೆ ಮೇರಿಗೆ ಹೊದಿಸುತಿದ್ದ ಹೊಳಪಿನ ಚಾದರ ಎಂಬರ್ಥವೂ ಇದೆಯಂತೆ. ಅದು ಭಕ್ತರೆಲ್ಲರನ್ನು ರಕ್ಷಿಸುವ ಚಾದರ. ಹಾಗೆಯೇ ಕವಿಯ ಶಬ್ದ ಚಾದರ ದುಃಖಾರ್ತರಾದ ಇಡೀ ಸ್ತ್ರೀ ಸಮೂಹ ಹೊದೆಯಬಹುದಾದ ರಕ್ಷಣೆಯೂ ಹೌದು, ಸತ್ತವರಿಗಾಗಿ ಅಳುವವರ ನೆನಪೂ ಹೌದು.
ವೇದನೆ ಪಡುತ್ತಿರುವ ಹೆಂಗಸರು ವಿಸ್ಮೃತಿಗೆ ಗುರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕವಿ-ಸಾಕ್ಷಿಯದ್ದು. ಸುತ್ತಲ ಬದುಕು ಕಾಲಕ್ರಮದಲ್ಲಿ ಬದಲಾಗುವುದು, ದುಃಖಿತರ ನೆನಪನ್ನು ಒರೆಸಿಬಿಡುವುದು ಖಚಿತ; ಆದರೂ ಕವಿ-ಸಾಕ್ಷಿ ತಾನು ಮಾತ್ರ ಬದಲಾಗದೆ ಉಳಿಯಲು ಬಯಸುತ್ತಾಳೆ. ಅವಳ ಮಟ್ಟಿಗೆ ಕಾಲವೆನ್ನುವುದು ಸೆರೆಮನೆಯ ಮುಂದಿನ ಇಷ್ಟಗಲ ಜಾಗದಲ್ಲಿ ಸ್ಥಿರವಾಗಿ ನಿಂತುಬಿಟ್ಟಿದೆ. ಹಾಗಾಗಿ ಭೀತಿಯುಗದ ದುಃಖದ ನೆನಪಿನ ತೀವ್ರತೆ ಕಡಿಮೆಯಾಗುವುದೇ ಇಲ್ಲ. ಗತಕಾಲದಲ್ಲಿ ಅವಿತಿಟ್ಟುಕೊಂಡು ವರ್ತಮಾನದ ನೋವನ್ನು ಮರೆಯಲು ಆಗದು ನಿರೂಪಕಿಯ ಬಾಲ್ಯ ಕಾಲದ ಕಡಲ ದಂಡೆ, ಯೌವನ ಕಾಲದ ಅತೃಪ್ತ ಭೂತ ಅಲೆಯುವ ಅರಸರ ಉದ್ಯಾನ ಇವೆರಡೂ ಭಾವನಾತ್ಮಕವಾಗಿ ಬಲು ದೂರದ, ಕೈಗೆಂದೂ ಎಟುಕದ ಸಂಗತಿಗಳು. ತೆಗೆಯದ ಚಿಲುಕದ, ಜಗ್ಗದ ಬಾಗಿಲಿನ ವರ್ತಮಾನವೊಂದೇ ಅವಳ ನೋವನ್ನು ಕೊನೆಯಿರದ ಹಾಗೆ ಹಿಗ್ಗಿಸಿವೆ. ಹಿಂದೊಮ್ಮೆ ಅನಿಸಿದ್ದಂತೆ ಸಾವಿನಲ್ಲಿ ಬಿಡುಗಡೆ ಕಾಣಬಹುದಿತ್ತೋ ಏನೋ. ಈಗ ಆಕೆ ಪರಮತ್ಯಾಗವನ್ನು ಮರೆಯುತ್ತಾಳೆ. ಬಿಡುಗಡೆಯ ಎಲ್ಲ ದಾರಿಗಳನ್ನೂ ಧಿಕ್ಕರಿಸಿ ಇಲ್ಲೇ ಇದ್ದು, ಬದುಕಿನಾಚೆಗೆ ಸಾಗಿದವರನ್ನು ನೆನೆಯುವ ಗಟ್ಟಿಗಿತ್ತಿಯಾಗುತ್ತಾಳೆ ಎಂದೂ ಬದಲಾಗದ ಎಂದೂ ಚಲಿಸದ ಸ್ಥಿರ ವಿಗ್ರಹವಾಗುತ್ತಾಳೆ (ರಶಿಯನ್ ಭಾಷೆಯಲ್ಲಿ ವಿಗ್ರಹ ಅನ್ನುವುದಕ್ಕೆ ಪಮ್ಯಕ್-ನಿಕ್ ಎಂಬ ಶಬ್ದವಿದೆಯಂತೆ, ಅದರಲ್ಲಿ ಪಮ್ಯಕ್ ಅನ್ನುವುದು ಸ್ಮರಣೆಯನ್ನು ಸೂಚಿಸುತ್ತದಂತೆ). ಬಲಿಯಾದವರೆಲ್ಲರ ನೆನಪಾಗಿ ಆಕೆ ಉಳಿಯುತ್ತಾಳೆ. ನಿಸರ್ಗದ ಹೊಸ ಬದುಕು ತೊಡಗುವ ಪ್ರತಿ ಚೈತ್ರದಲ್ಲೂ ಅವಳ ಕಂಬನಿ ಹರಿದು ಎಂದೂ ಕರಗದ ದುಃಖದಂತಿರುವ ಹಿಮದೊಡನೆ ಸೇರುತ್ತದೆ. ಬದುಕು ಸಾಗುತ್ತಿರುತ್ತದೆ.
ಅಖ್ಮತೋವಾ ಕಾಯುತ್ತ ನಿಂತಿದ್ದ ಎಡೆಯಲ್ಲಿ ಕಂಚಿನ ವಿಗ್ರಹ ಇಲ್ಲ. ಆದರೆ ಪ್ರಾಚೀನ ಸಾಹಿತ್ಯವನ್ನು ಬಲ್ಲ ಅಖ್ಮತೋವಳಿಗೆ ಹೊರೇಸನೆಂಬ ಪ್ರಾಚೀನ ’ಕಂಚಿಗಿಂತ ಹೆಚ್ಚು ಕಾಲ ಉಳಿದಿರುವ ನುಡಿ ಸ್ಮಾರಕ ನಿರ್ಮಿಸಿದ್ದೇನೆ’ ಎಂದು ತನ್ನ ಕವಿತೆಯ ಬಗ್ಗೆಯೇ ಹೇಳಿಕೊಂಡ ಮಾತು ಗೊತ್ತಿತ್ತು. ’ಶಾಂತಿಗೀತೆ’ ಅಂಥದೊಂದು ನುಡಿ ಸ್ಮಾರಕ; ಸತ್ತವರನ್ನು ದುಃಖದಿಂದಲೂ ನಿಷ್ಠೆ ಪ್ರೀತಿಗಳಿಂದಲೂ ದಿಟ್ಟಿಸುತ್ತ ನಿಂತೇ ಇರುವ ಸ್ಮಾರಕ.
(ಇಲ್ಲಿಗೆ ಶಾಂತಿಗೀತೆಗೊಂದು ಪ್ರವೇಶ ಪ್ರಬಂಧ ಮುಕ್ತಾಯಗೊಂಡಿದೆ)

ಪ್ರೊ. ಓ ಎಲ್ ನಾಗಭೂಷಣಸ್ವಾಮಿ
ನಾಗಭೂಷಣಸ್ವಾಮಿ ಖ್ಯಾತ ಬರಹಗಾರರು. ’ನನ್ನ ಹಿಮಾಲಯ’, ’ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್), ನೆರೂಡ ನೆನಪುಗಳು (ಪಾಬ್ಲೋ ನೆರೂಡ ಆತ್ಮಕತೆ), ’ಬೆಂಕಿಗೆ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ (ಹ್ವಾನ್ ರುಲ್ಫೋನ ಕಥೆಗಳು ಮತ್ತು ಕಾದಂಬರಿ) ಅವರ ಪ್ರಕಟಿತ ಪುಸ್ತಗಳಲ್ಲಿ ಕೆಲವು. ’ಕ್ರೈಂ ಅಂಡ್ ಫನಿಶ್ಮೆಂಟ್’ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ.
ಇದನ್ನೂ ಓದಿ: ಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-1
ಇದನ್ನೂ ಓದಿ: ಹೊಸ ಅನುವಾದ; ಅನ್ನಾ ಅಖ್ಮತೋವಾರ ಶಾಂತಿಗೀತೆ


