Homeಮುಖಪುಟಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-1

ಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-1

- Advertisement -
- Advertisement -

’ಶಾಂತಿ ಗೀತೆ’ ದಾರುಣವಾದ ಖಾಸಗಿ ಅನುಭವದ ಹಾಡು-ಪ್ರಿಯರಾದವರು ಸೆರೆಯಲ್ಲಿರುವಾಗ, ಸಾವಿನ ಆತಂಕ ಮನಸ್ಸು ಕವಿದಿರುವಾಗ ಬರೆದದ್ದು. ಹಾಗೆಯೇ ವೈಯಕ್ತಿಕ ಭಾವಗೀತೆಯಂಥ ಈ ಹಾಡಿಗೆ ಮಹಾಕಾವ್ಯದಂಥ ಸಾರ್ವಜನಿಕ ಆಯಾಮವೂ ಇದೆ. ಈ ಗೀತೆ ನಿರೂಪಿಸುತ್ತಿರುವುದು ತಾಯಿಯ ಅಳಲು ಮಾತ್ರವಲ್ಲ ಇಡೀ ದೇಶದ ದುಃಖ ವ್ಯಕ್ತವಾಗಿರುವ ರೀತಿಯೂ ಹೌದು.

ಈ ಕವಿತೆಯಲ್ಲಿ ಭಾವಗೀತೆ ಮತ್ತು ಮಹಾಕಾವ್ಯದ ಸಮತೋಲದ ಸಾಧನೆ ಗಮನ ಸೆಳೆಯುವ ಅಂಶ. ಕ್ರಮಸಂಖ್ಯೆ ಇರುವ ಬಿಡಿ ಸ್ಟಾಂಜಾಗಳಲ್ಲಿ ಖಾಸಗಿತನಕ್ಕೆ ಪ್ರಾಮುಖ್ಯವಿದೆ, ಅವು ಒಂದೊಂದನ್ನೂ ಪ್ರತ್ಯೇಕ ಕವಿತೆಯಾಗಿ ಬೇರೆ ಬೇರೆ ಕಾಲದಲ್ಲಿ ರಚಿಸಿದ್ದಳು ಅನ್ನಾ ಅಖ್ಮತೋವಾ. ಸಾರ್ವಜನಿಕ ಆಯಾಮವೇ ಮುಖ್ಯವಾಗಿರುವ ’ಅರ್ಪಣೆ’ ಮತ್ತು ’ಸಮಾರೋಪ’ ಎಂಬ ಭಾಗಗಳನ್ನು 1940ರಲ್ಲಿ ಬರೆದು ಈ ಕವಿತೆಗಳಿಗೆ ಸೇರಿಸಿದಾಗ ಭಾವಗೀತೆಗಳ ಗೊಂಚಲಿಗೆ ವಿಶಾಲ ವ್ಯಾಪ್ತಿಯ ಚೌಕಟ್ಟು ದೊರೆಯಿತು. ಈ ಚೌಕಟ್ಟಿನೊಳಗೆ 5 ಮತ್ತು 6 ಸಂಖ್ಯೆಯ ಸ್ಟಾಂಜಾಗಳು ಒಟ್ಟು ರಚನೆಯ ಮಧ್ಯಬಿಂದುವಾಗುತ್ತವೆ. ಈ ಸ್ಟಾಂಜಾಗಳಲ್ಲಿ ಮಾತ್ರವೇ ಸೆರೆಯಲ್ಲಿದ್ದು ಸಾವನ್ನು ಎದುರು ನೋಡುತ್ತಿರುವ ಮಗನಿಗೆ ನಿರೂಪಕಿ ತಾಯಿ ನೇರವಾಗಿ ಹೇಳುವ ಮಾತುಗಳಾಗಿವೆ. 2, 3, ಮತ್ತು 4 ನೆಯ ಸ್ಟಾಂಜಾಗಳು ಭಾವನಾತ್ಮಕವಾಗಿ ಚದರಿಹೋಗಿರುವ ನಿರೂಪಕಿಯ
ಮಾತುಗಳಾಗಿವೆ; ಮಾತು ಆಡುತ್ತಿರುವುದು ’ನಾನು’ ಮತ್ತು ’ನಾನಲ್ಲ’ ಎಂಬ ಭಾವಗಳಿವೆ. ಈ ಸ್ಟಾಂಜಾಗಳಿಗೆ ಸಂವಾದಿಯಾಗಿ 7, 8, 9ನೆಯ ಸ್ಟಾಂಜಾಗಳಿವೆ. ಇಲ್ಲಿ ನಿರೂಪಕಿ ತನ್ನ ವ್ಯಕ್ತಿತ್ವ ಯಂತ್ರದಂತಾಗಬೇಕು (ಸ್ಟಾಂಜಾ 7), ತಾನು ಸಾಯಬೇಕು (ಸ್ಟಾಂಜಾ 8) ತನಗೆ ಹುಚ್ಚು ಹಿಡಿಯಬೇಕು (ಸ್ಟಾಂಜಾ 9) ಎಂಬ ಭಾವಗಳಿವೆ.

ಕವಿತೆಯ ಮೊದಲಿನಲ್ಲಿರುವ ನಾಲ್ಕು ಸಾಲುಗಳ ಸೂಕ್ತಿ ಮತ್ತು ’ಪ್ರಸ್ತಾವನೆಯ ಬದಲಾಗಿ’ ಇವೆರಡೂ ಶುದ್ಧೀಕರಣ ಯುಗದ ಬಿರುಸು ಕರಗಿದ ಮೇಲೆ ರಚನೆಗೊಂಡು ಸೇರ್ಪಡೆಯಾದ ಭಾಗಗಳು; ವೈಯಕ್ತಿಕ ಮತ್ತು ಸಾರ್ವಜನಿಕಗಳ ಸಂಬಂಧ ಈ ಎರಡೂ ಭಾಗಗಳ ಮುಖ್ಯ ಸಂಗತಿ. ಈ ಕವಿತೆಯ ಕಾಲದ ನಂತರ ಬರುವ ಓದುಗರಿಗೆ ಕವಿತೆಯ ಮಹತ್ವ ಅರ್ಥವಾಗಲು ನೆರವಾದೀತೆಂಬ ಉದ್ದೇಶಕ್ಕೆ ಸೇರ್ಪಡೆಗೊಂಡವು ಇವು.

ಸೂಕ್ತಿಯಲ್ಲಿ ಬರುವ ನಾನು ಎಂಬ ನಿರೂಪಕಿ ದೇಶವನ್ನು ಬಿಟ್ಟು ಎಲ್ಲಿಯಾದರೂ ಇರಬಹುದಾಗಿತ್ತು ಆದರೂ ನನ್ನ ದೇಶ ಇದ್ದಲ್ಲೇ ನನ್ನವರೊಡನೆ ಇದ್ದು ಅವರ ಕಷ್ಟ ಹಂಚಿಕೊಂಡೆ ಎನ್ನುತ್ತಾಳೆ. ’ಪ್ರಸ್ತಾವನೆಯ ಬದಲಾಗಿ’ ಎಂಬ ಭಾಗದಲ್ಲಿ ನಿರೂಪಕಿ ಸೆರೆಮನೆಯ ಹೊರಗೆ ಸರತಿ ಸಾಲಿನಲ್ಲಿದ್ದಾಳೆ, ಚಳಿಗೆ ಸಿಕ್ಕಿ ತುಟಿಯೆಲ್ಲ ನೀಲಿ ತಿರುಗಿದ್ದವಳು ಇದನ್ನೆಲ್ಲ ಹೇಳುವುದಕ್ಕಾಗುತ್ತದಾ ಎಂದು ಪಿಸುದನಿಯಲ್ಲಿ ಕೇಳುತ್ತಾಳೆ. ಇದು ಸವಾಲು ಮಾತ್ರವಲ್ಲ, ಯಾಚನೆಯೂ ಹೌದು, ನಮಗೆ ಆದದ್ದನ್ನೆಲ್ಲ ನೀನೂ ಅನುಭವಿಸಿದ್ದೀಯ, ನಮ್ಮ ನೋವು ನರಳಾಟ ಹೀಗೆ ಕಣ್ಮರೆಯಾಗದಿರಲಿ ಅನ್ನುವ ಯಾಚನೆ. ನಿರೂಪಕಿ ಕವಿ ಒಪ್ಪಿದಾಗ ಆ ಹೆಂಗಸಿನ ಮುಖದ ಹಾಗೆ ಕಾಣುತಿದ್ದುದರಲ್ಲಿ ನಗುವಿನಂಥದು ಏನೋ ತೇಲುತ್ತದೆ. ಪ್ರಶ್ನೆ ಕೇಳಿದ ಹೆಂಗಸು ಎಷ್ಟು ಕಂಗಾಲಾಗಿ ನಾಶವಾಗಿದ್ದಾಳೆಂದರೆ ಅವಳ ಮುಖ, ಅವಳ ವೈಯಕ್ತಿಕ ಮನುಷ್ಯತ್ವ ಅಸಾಧ್ಯವೆನಿಸುವಷ್ಟು ಹುಡಿಗುಟ್ಟಿ ಹೋಗಿದೆ. ಆ ಹೆಂಗಸು ಕವಿಯಲ್ಲವಾದ್ದರಿಂದ ತನ್ನದೇ ದುಃಖಕ್ಕೂ ಮಾತಿನ ರೂಪ ಕೊಡಲಾರದವಳು. ನಿರೂಪಕಿ ಕವಿ ತನ್ನನ್ನು ಪ್ರಶ್ನೆ ಕೇಳಿದವಳಂಥವರ ಬದುಕಿನ ತೆಳು ನೆರಳನ್ನಾದರೂ ಕವಿತೆಯಲ್ಲಿ ಮೂಡಿಸಲು ಯತ್ನಿಸುತ್ತಾಳೆ.

’ಪ್ರಸ್ತಾವನೆಯ ಬದಲಾಗಿ’ ಭಾಗದಲ್ಲಿ ಸೂಚಿತವಾಗಿರುವ ವೇದನೆ, ನರಳಾಟಗಳು ’ಅರ್ಪಣೆ’ ಭಾಗದಲ್ಲಿ ತೀರ ಸ್ಪಷ್ಟವಾಗುತ್ತವೆ. ಸೆರೆಯಾಳು ಬಂಧುಗಳ ವೇದನೆ ನಿಸರ್ಗದ ಶಕ್ತಿಗಳಿಗಿಂತ ಮಿಗಿಲಾದುದು: ’ಈ ದುಃಖದೆದುರು ಬಂಡೆ ಬೆಟ್ಟವೂ ನಾಚಿ ತಲೆಬಾಗುವುದು/ಉಕ್ಕಿ ಹರಿಯುವ ನದಿಯೂ ಬತ್ತುವುದು’. ತಮ್ಮ ವೇದನೆಗೆ ಸಂಬಂಧಪಡದ ಏನನ್ನೂ ಅವರು ಕಾಣಲೂ ಆರರು. ಎಳೆ ಬಿಸಿಲು, ತಂಗಾಳಿ ಇವು ಅವರ ಪಾಲಿಗಿಲ್ಲ. ಇರುವುದು ಕಲ್ಲಿನ ಗೋಡೆ, ಜಗ್ಗದ ಬಾಗಿಲು ಮಾತ್ರ. ರಶಿಯದ ಸಂಪ್ರದಾಯಸ್ಥರ ಪಾಲಿಗೆ ಬೆಳಗಿನ ಸಾಮೂಹಿಕ ಪ್ರಾರ್ಥನೆಗೆ ಪ್ರಾಮುಖ್ಯವಿತ್ತು. ಈಗ ಅವರ ಬದುಕು ತಲೆಕೆಳಗಾಗಿ ಅವರು ಪ್ರಾರ್ಥನೆಯ ಹೊತ್ತಿಗೆ ಧರ್ಮ, ಸಂಸ್ಕೃತಿಗಳ ಕೇಂದ್ರವಾದ ಚರ್ಚೆಗೆ ಹೋಗುವ ಬದಲಾಗಿ ಬರ್ಬರ ಸೆರೆಮನೆಯ ಮುಂದೆ ಬಂದು ನಿಂತಿದ್ದಾರೆ. ಧರ್ಮದ ಬದಲಾಗಿ ದುಃಖ ಅವರನ್ನೆಲ್ಲ ಒಗ್ಗೂಡಿಸುವ ಸಂಗತಿಯಾಗಿದೆ. ಸರದಿ ಸಾಲಿನಲ್ಲಿ ನಿಂತ ಹೆಂಗಸರು ಜೀವಂತವಾಗಿದ್ದರೂ ಹೆಣಗಳಾಗಿದ್ದಾರೆ. ಹೊರಬೀಳುವ ಫರ್ಮಾನಿಗೆ ಕಗ್ಗೊಲೆಯಂಥ, ಅತ್ಯಾಚಾರದಂಥ ಪ್ರಭಾವಬೀರುತ್ತದೆ.

ರಶಿಯನ್ ಮೂಲದ ಕವಿತೆಯಲ್ಲಿ ’ಅರ್ಪಣೆ’ಯ ಮೊದಲ ಸಾಲಿನಲ್ಲಿ ಅನುಪ್ರಾಸವಿದೆ ಎನ್ನುತ್ತಾರೆ. ’ಈ ದುಃಖದೆದುರು ಬಂಡೆ ಬೆಟ್ಟವೂ ನಾಚಿ ತಲೆಬಾಗುವುದು’ ಎಂದು ಅನುವಾದಿಸುವಾಗ ದ, ಖ, ಬ, ಡ, ಟ ಧ್ವನಿಗಳ ವಿನ್ಯಾಸ ತರಲು ಪ್ರಯತ್ನಿಸಿದ್ದೇನೆ. ಇದೇ ಭಾಗದಲ್ಲಿ ಬರುವ ’ಬಂದಿ-ಕುಳಿ’ ಅನ್ನುವುದು ರಶಿಯನ್ ಬಲ್ಲ ಓದುಗರಿಗೆ ಪುಷ್ಕಿನ್‌ನ ’ಸೈಬೀರಿಯದ ಗಣಿಯಾಳದಲ್ಲಿ’ ಎಂಬ ಕವಿತೆಯ ಕನ್ವಿಕ್ಟ್ ಹೋಲ್ ನುಡಿಗಟ್ಟನ್ನು ನೆನಪಿಗೆ ತರುತ್ತದೆ ಅನ್ನುತ್ತಾರೆ. ಕನ್ನಡದಲ್ಲಿ ಅದನ್ನು ’ಬಂದಿ-ಕುಳಿ’ ಎಂದು ಸೂಚಿಸುವ ಪ್ರಯತ್ನ ಮಾಡಿದ್ದೇನೆ. ಪುಷ್ಕಿನ್ ಕವಿತೆಯಲ್ಲಿ ಗಣಿಯಾಳದಲ್ಲಿ ಸಿಕ್ಕಿಬಿದ್ದವರಿಗೆ ಹೊರಗಿನ ಧನಿ ಕೇಳಿಸಿ ಬಿಡುಗಡೆಯ ಆಸೆ ಹುಟ್ಟುತ್ತದೆ; ಆದರೆ ಸೆರೆಮನೆಯ ಹೊರಗೆ ಕಾದಿರುವ ಹೆಂಗಸರ ಆಳಲು ಬಂದೀಖಾನೆಯೊಳಗಿರುವವರಿಗೆ ಕೇಳುವುದೇ ಇಲ್ಲ. ಈ ಹತಾಶೆಗೆ ಹೊಂದಿಕೊಳ್ಳುವ ಹಾಗೆ ಅಖ್ಮತೋವ ’ಅರ್ಪಣೆ’ ಭಾಗದಲ್ಲಿ ತೀರ ಅಪರೂಪವಾದ ಐದು ಸಾಲುಗಳ ಸ್ಟಾಂಜಾ ಬಳಸಿದ್ದಾಳೆ. ಇಡೀ ಕವಿತೆಯಲ್ಲಿ ನಾಲ್ಕು ಸಾಲುಗಳ ಸ್ಟಾಂಜಾ ಪ್ರಮುಖವಾಗಿರುವಾಗ ಈ ಭಾಗದ ಐದು ಸಾಲುಗಳ ಘಟಕ ಭಾವನೆಗಳ ಭಾರಕ್ಕೆ ಜಗ್ಗಿ ಇನ್ನೊಂದು ಸಾಲಿಗೆ ಹಿಗ್ಗಿಕೊಂಡ ಭಾವನೆ ನೀಡುತ್ತದೆ ಎನ್ನುತ್ತಾರೆ. ಅನುವಾದದಲ್ಲಿ ಆ ಭಾವ ಮೂಡುತ್ತದೋ ಹೇಗೆ ಅನ್ನುವುದನ್ನು ಓದುಗರೇ ಹೇಳಬೇಕು. ಈ ಭಾಗದ ಕೊನೆಯ ಸಾಲುಗಳಲ್ಲಿ ಭೂತಕಾಲ ವರ್ತಮಾನಕಾಲ ಸೂಚಕ ಕ್ರಿಯಾಪದಗಳು ಗೊತ್ತೇ ಆಗದಂತೆ ಬೆರೆತು ನಿರಂತರವಾದ ವೇದನೆಯಲ್ಲಿ ಕಾಲಕ್ಕೆ ಅರ್ಥವೇ ಇಲ್ಲ ಅನ್ನುವುದರ ಸೂಚನೆ ಇದು ಇದ್ದಹಾಗಿದೆ. ’ಅರ್ಪಣೆ’ಯ ಭಾಗದ ಕೊನೆಯ ಸ್ಟಾಂಜಾದಲ್ಲಿ ಸಾಕ್ಷಿಪ್ರಜ್ಞೆಯ ಸೂಚನೆ ಇದೆ. ಸರತಿಯ ಸಾಲಿನಲ್ಲಿ ತನ್ನ ಜೊತೆಗೆ ಇದ್ದವರೆಲ್ಲ ಅಕಸ್ಮಾತ್ತಾಗಿ ಜೊತೆಗಿದ್ದವರು ಅಷ್ಟೇ, ತಮ್ಮತಮ್ಮ ದುಃಖದಲ್ಲೇ ಮುಳುಗಿದ್ದ ಅವರು ಯಾರೂ ಯಾರಿಗೂ ಮಾನಸಿಕ ಆಸರೆಯಾಗುವುದು ಸಾಧ್ಯವೇ ಇಲ್ಲ. ದೇಶ ತೊರೆದು ಹೋದವರಿಗೆ ಹೊಂಬಿಸಿಲು ತಂಗಾಳಿ ಸಿಕ್ಕಿರಬಹುದು, ಸರದಿ ಸಾಲಿನಲ್ಲಿ ನಿಂತವರಿಗೆ ಯಾರ ದುಃಖವೂ
ಅರ್ಥವಾಗದಿರಬಹುದು, ಆದರೆ ಕವಿ ನಿರೂಪಕಿ ಮಾತ್ರ ತನ್ನ ಸ್ವಂತದ ನೋವಿನೊಡನೆ ಇತರರ ದುಃಖದ ಅರಿವನ್ನೂ ಒಳಗೊಳ್ಳುವ ಸಾಮರ್ಥ್ಯ ಇರುವವಳು.

ಇಡೀ ’ಶಾಂತಿಗೀತೆ’ಯಲ್ಲಿ ’ಪೀಠಿಕೆ’ ಭಾಗ ಮಾತ್ರ ಕನಿಷ್ಠ ಪ್ರಮಾಣದಲ್ಲಿ ಖಾಸಗಿತನವನ್ನು ಒಳಗೊಂಡಿದೆ. ವ್ಯಕ್ತವಾಗಿಯಾಗಲೀ, ಸೂಚ್ಯವಾಗಿಯಾಗಲೀ ’ನಾನು’ ಎಂಬುದರ ಸೂಚನೆಯೇ ಇಲ್ಲಿಲ್ಲ. ಈ ಪೀಠಿಕೆ ಸ್ಟಾಂಜಾದ ವಸ್ತು ರಶಿಯಾ. ಮೂಲ ಕವಿತೆಯಲ್ಲಿ ಅಧಿಕೃತ ಹೆಸರು ರೊಸ್ಸಿಯಾ ಎಂಬುದರ ಬದಲಾಗಿ ಭಾವತುಂಬಿದ ಆಡುನುಡಿಯ ’ರೂಸ್’ ಎಂಬ ಪದ ಬಳಕೆಯಾಗಿದೆ. ರಶಿಯದ ರಾಜಕೀಯ ಮಿಥ್‌ನಲ್ಲಿ ’ನಾವು’ ಮತ್ತು ’ಅವರು’ ಸ್ಪಷ್ಟವಾಗಿ ಬೇರೆ ಬೇರೆಯವರಾಗಿ ಕಾಣುತ್ತಾರಂತೆ. ’ನಾವು’ ಎಂದರೆ ಆಳಿಸಿಕೊಳ್ಳುವವರು, ’ಅವರು’ ಆಳುವವರು; ಅವರು ಕೆಡುಕಿನ ಪ್ರತಿರೂಪ, ನಮ್ಮ ಬದುಕಿನ ಸಂಕಷ್ಟಗಳಿಗೆ ಕಾರಣರಾದವರು.
ನಾವು ಒಳ್ಳೆಯವರಾದರೂ ಅವರನ್ನು ತಡೆಯಲಾಗದವರು, ನಾವು ಇಡೀ ದೇಶ, ಅವರು ಒಂದು ಹಿಡಿಯಷ್ಟಿರುವ ಜನ; ಇದರಲ್ಲಿ ಸತ್ಯವಿದ್ದರೂ ಸರಳೀಕರಣ ಅನ್ನುವುದನ್ನು ಮರೆಯಬಾರದು. ಆದರೆ, ಅನ್ನಾ ಅಖ್ಮತೋವಾಳಿಗೆ 1930ರ ದಶಕದ ರಶಿಯಾ ’ಬಲಿ’ಯಾದವರ ನಾಡು, ಸೆರೆಮನೆಗಳ ನಾಡು, ಬಂಧಿಗಳಾದವರಿಗಾಗಿ ಆಳುತ್ತಿರುವವರ ನಾಡು, ’ಸತ್ತವರು ಮಾತ್ರ ನಗುತ್ತ’ ಸುಖವಾಗಿರಬಹುದಾದ ನಾಡು. ಇದು ಅತಿ ಸರಳೀಕರಣವೇ ಅನ್ನುವ ಪ್ರಶ್ನೆಯನ್ನು ವಿಮರ್ಶಕರು ಪರಿಶೀಲಿಸಿದ್ದಾರೆ. ಸುಮಾರು ನೂರ ಎಪ್ಪತ್ತು ಮಿಲಿಯನ್ ಜನಸಂಖ್ಯೆಯ ದೇಶದಲ್ಲಿ ಕೆಲವು ’ಲಕ್ಷ’ಜನ ಮಾತ್ರ ಬಂಧನಕ್ಕೆ ಗುರಿಯಾದರು, ಸತ್ತರು ಅನ್ನುವುದು ಆ ಕಾಲದ ಭೀತಿಯ ವಾಸ್ತವಕ್ಕೆ ಕುರುಡಾದಂತೆ ಅಲ್ಲವೇ? ಅನ್ನಾ ಅಖ್ಮತೋವಾಳಿಗಿಂತ ಕೆಲವು ವರ್ಷಗಳ ಮೊದಲು ರಚನೆಗೊಂಡ ದಾಸ್ತಯೇವ್ಸ್‌ಕಿಯ ಕಾದಂಬರಿಯಲ್ಲಿ ಇವಾನ್ ಕರಮಝೋವ್ ಒಂದು ಪ್ರಶ್ನೆ ಕೇಳುತ್ತಾನೆ: ಒಂದೇ ಒಂದು ಮಗು ಕೊನೆಯಿಲ್ಲದ ಯಾತನೆಯ ಬೆಲೆ ತೆರುತ್ತಿರುವಾಗ ಇಡೀ ವಿಶ್ವ ಸಂತೋಷವಾಗಿದೆ ಅನ್ನುವುದಕ್ಕೆ ಅರ್ಥವೇನು ಅನ್ನುವ ಪ್ರಶ್ನೆ ಅದು. ಇಂಥ ನಿಷ್ಠುರ ನೈತಿಕತೆಯ ದೃಷ್ಟಿಗೆ ಸೋವಿಯತ್ ಯುಗದ ಆರ್ಥಿಕ ಪ್ರಗತಿ ಎಷ್ಟೇ ದೊಡ್ಡದಾಗಿದ್ದರೂ ಅದಕ್ಕಾಗಿ ಮನುಷ್ಯರು ತೆತ್ತಬೆಲೆ ಸಮರ್ಥನೀಯವಲ್ಲ.

ಆನಂತರ ಆರಂಭವಾಗುವ ಅಂಕಿಗಳಿರುವ ಸ್ಟಾಂಜಾ ಭಾಗದಲ್ಲಿ 1ನೆಯ ಸ್ಟಾಂಜಾ ರಚನೆಗೊಳ್ಳುವುದಕ್ಕೆ ಕಾರಣವೇನೆಂದರೆ 1935ರಲ್ಲಿ ಅನ್ನಾ ಅಖ್ಮತೋವಾಳ (ಆಕೆ ತನ್ನ ಮೊದಲ ಪತಿ ಗ್ಯಮಿಲ್ಯೋವ್‌ನಿಂದ ಪಡೆದ) ಮಗ ಲೆವ್ ಗ್ಯಮಿಲ್ಯೋವ್ ಹಾಗೂ (ಅಖ್ಮತೋವಾಳ ಬಾಲ್ಯದ ಗೆಳೆಯ ಮತ್ತು 1920-30ರ ದಶಕದಲ್ಲಿ ಅವಳೊಡನೆ ಸಹಬಾಳುವೆ ನಡೆಸಿದ ವಿದ್ವಾಂಸ ನಿಕೊಲಾಯ್ ಪುನಿನ್ ಬಂಧನಕ್ಕೆ ಒಳಗಾದದ್ದು.) ’ಕರಕೊಂಡು ಹೋದರು’ ಅನ್ನುವ ನುಡಿಗಟ್ಟು ಸ್ಟಾಲಿನ್ ಕಾಲದ ರಶಿಯಾದಲ್ಲಿ ’ಬಂಧನಕ್ಕೆ ಒಳಗಾದ’ ಅನ್ನುವುದಕ್ಕೆ ಬದಲಾಗಿ ಬಳಕೆಯಾಗುತ್ತಿದ್ದ ಸೌಮ್ಯೋಕ್ತಿ ಎನ್ನುತ್ತಾರೆ. ಹೆಣವನ್ನು ಸ್ಮಶಾನಕ್ಕೆ ಒಯ್ಯುವ ಭಾವವೂ ಆ ಮಾತಿನಲ್ಲಿ ಇದೆಯಂತೆ. ಕನ್ನಡದಲ್ಲಿ ಅರೆಗತ್ತಲುಕೋಣೆ ಎಂದಿರುವ ಮಾತಿಗೆ ರಶಿಯನ್ ಭಾಷೆಯಲ್ಲಿ ಪೂಜಾಗೃಹ ಎಂಬರ್ಥದ ಬಳಕೆ ತಪ್ಪಿರುವ ಪ್ರಾಚೀನಪದದ ಬಳಕೆಯಾಗಿದೆ. ಮನೆಯಲ್ಲಿರುವ ದೇವತಾ ವಿಗ್ರಹದ ತಣ್ಣನೆಯ ಮುತ್ತು ಸತ್ತ ವ್ಯಕ್ತಿಯ ತುಟಿಗಳ ಮೇಲಿದೆ.

ಅಂದರೆ ಈ ಸಾಲುಗಳಲ್ಲಿ ಕವಿ ಪ್ರಾಚೀನ ರಶಿಯನ್ ಸಂಪ್ರದಾಯ ಮತ್ತು ಸಮಕಾಲೀನ ರಾಜಕೀಯ ಬಂಧನಗಳನ್ನು ಒಟ್ಟಿಗೆ ಬೆಸೆದಿದ್ದಾಳೆ ಎಂದು ವಿಮರ್ಶಕರು ಗುರುತಿಸುತ್ತಾರೆ. ಈ ಸ್ಟಾಂಜಾದ ಕೊನೆಯ ಸಾಲುಗಳಲ್ಲಿ ಬರುವ ಆಳುವ ಹೆಂಗಸರ ಚಿತ್ರಣವು ಕ್ರೆಮ್ಲಿನ್ ಅರಮನೆಯ ಸೈನಿಕರು ದಂಗೆ ಎದ್ದು, ಚಕ್ರವರ್ತಿ ಅವರನ್ನೆಲ್ಲ ಕೊಂದದ್ದು. ಆ ಕ್ರೌರ್ಯ ರಶಿಯದ ಚಾರಿತ್ರಿಕ ಪ್ರಜ್ಞೆಯ ಹೆಗ್ಗುರುತಾಗಿ ಉಳಿದ ನೆನಪನ್ನು ಉದ್ದೀಪಿಸುತ್ತದೆ ಎನ್ನುತ್ತಾರೆ. ಇದು ನಡೆದದ್ದು 1682ರಲ್ಲಿ. ಆ ಘಟನೆಯನ್ನು ಕುರಿತು ಪುಷ್ಕಿನ್ ಕೂಡ ಕವಿತೆ ಬರೆದಿದ್ದಾನೆ. ಅಧಿಕಾರಕ್ಕಾಗಿ ಕ್ರೌರ್ಯವನ್ನು ತೋರಿದ ಕಥೆಗೆ ಸಮಕಾಲೀನ ಸ್ಪರ್ಶವೂ ಇದೆ. ಆ ಘಟನೆ ನಡೆದ ಸ್ಥಳದಲ್ಲೇ ಬೋಲೆಶೆವಿಕ್ಕರು 1918ರಲ್ಲಿ ಸರ್ಕಾರವನ್ನು ಸ್ಥಾಪಿಸಿದರು; ಅದೇ ಕ್ರೆಮ್ಲಿನ್ ಅರಮನೆಗೆ ಅನ್ನಾ ಅಖ್ಮತೋವ 1935ರಲ್ಲಿ ತನ್ನ ಗಂಡ ಮತ್ತು ಮಗನನನ್ನು ಉಳಿಸುವಂತೆ ಮನವಿ ಸಲ್ಲಿಸಲು ಹೋಗಿದ್ದಳು. ಅಧಿಕಾರದ ಅನ್ಯಾಯ ಮತ್ತು ಅಸಹಾಯಕ ಜನರ ವೇದನೆಗಳ ಈ ಚಾರಿತ್ರಿಕ ಪ್ರತಿಮೆ ’ಅರ್ಪಣೆ’ ಮತ್ತು ’ಪೀಠಿಕೆ’ಯ ಭಾಗಗಳೊಡನೆ ಬೆರೆತು ರಶಿಯನ್ ಇತಿಹಾಸದ ವಿಸ್ತಾರವನ್ನು ಸೂಚಿಸುತ್ತದೆ.

*****

ಒಂದನೆಯ ಸ್ಟಾಂಜಾದಲ್ಲಿ ಕಾಲದ ವಿಸ್ತರಣೆ ಇದ್ದರೆ ಎರಡನೆಯ ಸ್ಟಾಂಜಾದಲ್ಲಿ ದೇಶದ ವಿಸ್ತರಣೆ ಇದೆ. ಲೆನಿನ್‌ಗ್ರಾದ್ ಮತ್ತು ಮಾಸ್ಕೋದಿಂದ ಕವಿತೆ ಡಾನ್ ನದಿಯ ದಡಕ್ಕೆ ಚಲಿಸುತ್ತದೆ. ಸೊಟ್ಟ ಟೊಪ್ಪಿಗೆಯ ಮನುಷ್ಯ ಎಂದು ಚಂದ್ರನನ್ನು ವರ್ಣಿಸುವ ಕೊಸಾಕ್‌ಗಳ ಜಾನಪದ ನುಡಿಗಟ್ಟಿನ ಬಳಕೆಯೂ ಇಲ್ಲಿದೆ. ಈ ಭಾಗದಲ್ಲಿ ರಶಿಯದ ಜಾನಪದ ಲಯ, ಛಂದಸ್ಸನ್ನು ಕವಿ ಬಳಸಿದ್ದಾಳೆ ಎಂದು ವಿಮರ್ಶಕರು ಗುರುತಿಸುತ್ತಾರೆ. ಅದನ್ನು ಅನುವಾದದಲ್ಲಿ ತರುವುದು ಅಸಾಧ್ಯ ಅನ್ನಿಸಿದೆ. ಈ ಸ್ಟಾಂಜಾದ ಮೊದಲ ಸಾಲುಗಳು ಪ್ರಶಾಂತ ಜಾನಪದ ಬದುಕನ್ನು ಚಿತ್ರಿಸಿದರೆ ’ಇಗೋ ಇಲ್ಲಿ ಕಂಡಿದ್ದಾಳೆ’ ಎನ್ನುತ್ತ ಅನಿರೀಕ್ಷಿತವಾಗಿ ಆಘಾತವನ್ನು ತರುತ್ತದೆ. ತನ್ನ ತಪ್ಪಿಲ್ಲದೆ ಸೆರೆಗೆ ಹೋದವನ ಕಥೆಯನ್ನು ಹೇಳುವ ಪುಷ್ಕಿನ್ ಕವಿತೆಯೊಂದರ ಪ್ರತಿಧ್ವನಿ ಇಲ್ಲಿದೆ ಎನ್ನುತ್ತಾರೆ ವಿಮರ್ಶಕರು. ಆ ಹೆಂಗಸಿನ ದುಃಖವನ್ನು ’ಗಂಡ ಜೈಲು ಸೇರಿದ್ದಾನೆ, ಮಗ ಜೈಲಿನಲ್ಲಿದ್ದಾನೆ’ ಎಂದು ಸಂಕ್ಷಿಪ್ತವಾಗಿ, ತೀವ್ರವಾಗಿ ಹೇಳಿರುವುದನ್ನು ಗಮನಿಸಿ. ಸೆರೆ ಮತ್ತು ಸಾವು ಎಂಬ ಎರಡು ವಿಷಯಗಳು ಇಡೀ ಶಾಂತಿಗೀತೆಯ ಮುಖ್ಯ ವಿಷಯಗಳೇ ಆಗಿವೆ. ಪ್ರಶಾಂತ ಬದುಕಿನ ಚಿತ್ರಣದೊಡನೆ ಬರುವ ಈ ಆಘಾತಕಾರಿ ಚಿತ್ರ ಕೊನೆಯಲ್ಲಿ ಮತ್ತೊಂದು ತಿರುವು ಪಡೆಯುತ್ತದೆ: ಗೋಳಾಡುವ ಅನಾಮಧೇಯ ಹೆಂಗಸು ಯಾವ ಸೂಚನೆಯೂ ಇಲ್ಲದೆ ’ನಾನು’ ಎಂದು ಉತ್ತಮ ಪುರುಷದಲ್ಲಿ ಓದುಗರೊಡನೆ ಮಾತನಾಡುವ ನಿರೂಪಕಿಯಾಗಿಬಿಡುತ್ತಾಳೆ.

******

ನರಳುತ್ತಿರುವ ಹೆಂಗಸು ’ನಾನು’ ಮತ್ತು ’ಅವಳು’ ಎಂದು ಎರಡಾಗಿರುವುದು ಮೂರು ಮತ್ತು ನಾಲ್ಕನೆಯ ಸ್ಟಾಂಜಾದಲ್ಲಿ ಮುಂದುವರೆದಿದೆ. ಇದಕ್ಕೆ ಸಂವಾದಿಯಾದ ಆಶಯ 8 ಮತ್ತು 9ನೆಯ ಸ್ಟಾಂಜಾಗಳಲ್ಲಿವೆ. ಸಹಿಸಲಾಗದಷ್ಟು ನೋವು ಕೊಡುವ ವಾಸ್ತವದಿಂದ ಪಾರಾಗಲು ನಿರೂಪಕಿ ತನ್ನನ್ನು ತಾನು ನಡೆದ ಘಟನೆಯಿಂದ ಬೇರ್ಪಡಿಸಿಕೊಳ್ಳುತ್ತಾಳೆ, ಇವೆಲ್ಲ ನಡೆದದ್ದು ತನ್ನ ಬದುಕಿನಲ್ಲಲ್ಲ ಅನ್ನುತ್ತಾಳೆ, ನಡೆದದ್ದು ಕಣ್ಣಿಗೆ ಮರೆಯಾಗಬೇಕೆಂದು ಬಯಸುತ್ತಾಳೆ.

ನಿರೂಪಕಿಯ ಪ್ರಜ್ಞೆಯ ವಿಚ್ಛೇದ ನಾಲ್ಕನೆಯ ಸ್ಟಾಂಜಾದಲ್ಲಿ ಸ್ಪಷ್ಟವಾಗುತ್ತದೆ. ಕ್ರಾಂತಿಪೂರ್ವದ ತನ್ನನ್ನು ಕಲ್ಪಿಸಿಕೊಂಡು ಆ ವ್ಯಕ್ತಿತ್ವಕ್ಕೆ ವರ್ತಮಾನದ ಅವರ್ಣನೀಯ ವೇದನೆ ಹೇಗೆ ಕಾಣುತ್ತದೆ ಅನ್ನುವ ವಿವರ ಇಲ್ಲಿದೆ. ಇಡೀ ಕವಿತೆಯಲ್ಲಿ ಮೂರನೆಯ ಸ್ಟಾಂಜಾದಲ್ಲಿ ಮಾತ್ರ ಮುಕ್ತಛಂದದ ಬಳಕೆಯಾಗಿದೆ. ಸಾಲುಗಳು ಒಂದಕ್ಕಿಂತ ಇನ್ನೊಂದು ಕಿರಿದಾಗುತ್ತ ಕವಿತೆ ಕತ್ತಲಿಗೆ, ಮೌನಕ್ಕೆ ’ಬೀಳುತ್ತಿದೆ’ ಅನ್ನುವ ಭಾವವನ್ನು ಹುಟ್ಟಿಸುತ್ತದೆ. ನಾಲ್ಕನೆಯ ಸ್ಟಾಂಜಾದಲ್ಲಿ ಹನ್ನೊಂದು ಸಾಲು ಇವೆ. ನಾಲ್ಕು ಸಾಲುಗಳ ಎರಡು ಭಾಗ ಮತ್ತು ಅಪೂರ್ಣವಾಗಿ ಉಳಿದಿರುವ ಮೂರು ಸಾಲುಗಳು, ’ಸದ್ದಿರದ ನಿಶ್ಯಬ್ದದಲ್ಲಿ/ ಕೊನೆಗಾಣುತ್ತಿರುವ ನಿಷ್ಪಾಪಿ ಜನರ ಬದುಕು..’ ಎಂಬ ಭಾಗ ಅಪೂರ್ಣವಾಗಿ ಉಳಿದು ಓದುಗರ ನಿರೀಕ್ಷೆ ತಟ್ಟನೆ ಕಡಿದುಹೋಗುವ ಹಾಗಿದೆ.

*****

ಐದು ಮತ್ತು ಆರನೆಯ ಸ್ಟಾಂಜಾಗಳಲ್ಲಿ ನಿರೂಪಕಿಗೆ ಸ್ಪಷ್ಟವಾದ ಚಹರೆ ಮೂಡಿದೆ. ಅದು ಸೆರೆಯಾಗಿರುವ ಮಗನ ತಾಯಿಯ ಚಹರೆ. ಚಹರೆ ಸ್ಪಷ್ಟವಾಗಿದೆ, ಆದರೆ ಸುತ್ತಲ ವಾಸ್ತವ ಛಿದ್ರವಾಗಿದೆ, ಅಸ್ಥಿರವಾಗಿದೆ. ’ಹದಿನೇಳು ತಿಂಗಳೂ’ ಎಂಬ ಸ್ಪಷ್ಟತೆಯೊಡನೆ ’ವಾರ, ವಾರ ಉರುಳಿ ಸಾಗಿವೆ’ ಎಂಬ ಅಸ್ಪಷ್ಟತೆಯೂ ಬೆರೆತಿದೆ. ಈ ನಿಷ್ಕರುಣ ಜಗತ್ತಿನಲ್ಲಿ ಮನುಷ್ಯ-ಮೃಗ ಎರಡೂ ಒಂದೇ ಆಗಿವೆ. ಈ ಜಗತ್ತಿನಲ್ಲಿ ಖಚಿತವಾಗಿರುವ ಲಕ್ಷಣವೆಂದರೆ ಸಾವು ಮಾತ್ರವೇ, ಮರಣದ ಧೂಳು ಹಿಡಿದ ಹೂವು, ಗಾಳಿಯಲ್ಲಿ ಕರಗುವ ಚರ್ಚಿನ ಮೆರವಣಿಗೆಯ ಧೂಪದ ಹೊಗೆ, ಕಣ್ಣಲ್ಲಿ ಮಿನುಗುವ ಮೃತ್ಯು ನಕ್ಷತ್ರದ ಹೊಳಪು ಈ ರೂಪಕಗಳು ಸಾವನ್ನು ಕಂಡರಿಸಿವೆ. ಧೂಪದ ಹೊಗೆ ಅನ್ನುವ ಚಿತ್ರ ಮೊದಲ ಸ್ಟಾಂಜಾದ ’ಕರಕೊಂಡು ಹೋದರು’, ಜೊತೆ ಓದುಗರ ಮನಸ್ಸಿನಲ್ಲಿ ಲಗತ್ತಾಗುತ್ತದೆ. ಈ ಭಾಗದಲ್ಲಿ ಬರುವ ಧಗಧಗ ಮೃತ್ಯು ನಕ್ಷತ್ರ ಪೀಠಿಕೆಯಲ್ಲಿ ಕಂಡ ಮೃತ್ಯು ನಕ್ಷತ್ರವನ್ನು ನೆನಪಿಗೆ ತರುತ್ತದೆ. ಹಾಗೆಯೇ ಆರನೆಯ ಸ್ಟಾಂಜಾದಲ್ಲಿ ಸೆರೆಯಾಳಿನ ಕೋಣೆಯಲ್ಲಿ ಇಣುಕುವ ’ಬೇಸಗೆಯ ರಾತ್ರಿ ಎರಡನೆಯ ಸ್ಟಾಂಜಾದಲ್ಲಿ ಗುಡಿಸಿನೊಳಗೆ ಇಣುಕುವ ಚಂದ್ರನನ್ನು ನೆನಪಿಸುತ್ತದೆ. ಅಲ್ಲಿ ಚಂದ್ರನು ಹೆಣ್ಣಿನ ಒಬ್ಬಂಟಿತನದ ಕತ್ತಲನ್ನು ಬೆಳಗಿದರೆ ಇಲ್ಲಿನ ಬೇಸಗೆಯ ಬಿಳಿಯ ರಾತ್ರಿಗಳು ಹೆದರಿಸುವಂತಿವೆ, ಮನುಷ್ಯಮೃಗಗಳು ಮಾತ್ರವಲ್ಲ ನಿಸರ್ಗವೂ ಶತ್ರುಪಕ್ಷಕ್ಕೆ ಸೇರಿದೆ ಅನ್ನಿಸುತ್ತದೆ.

ತನ್ನ ಗಂಡನೋ ಮಗನೋ ಶಿಕ್ಷೆಗೆ ಗುರಿಯಾಗಿ ಗೋಳಾಡುವ ಹೆಂಗಸನ್ನು ’ಅರ್ಪಣೆ’ಯ ಭಾಗದಲ್ಲಿ ನಿರೂಪಕಿ ಕಂಡಿದ್ದಳು; ಈಗ ’ಶಿಕ್ಷೆ’ ಎಂಬ ಏಳನೆಯ ಕವಿತೆಯಲ್ಲಿ ಅಂಥ ನೋವನ್ನು ಸ್ವತಃ ಅನುಭವಿಸುತ್ತಿದ್ದಾಳೆ.
ಆದರೂ ಆಕೆ ಸೆರೆಮನೆಯ ಮುಂದೆ ಕಾದಿರುವ ಸರದಿ ಸಾಲಿನ ’ಸಭ್ಯತೆ’ ಬಲ್ಲವಳು; ದಿನನಿತ್ಯದ ಮಾಮೂಲೀ ಆಡುಮಾತು ಬಳಸಿಕೊಂಡು ಇದೆಲ್ಲ ಮಾಮೂಲು, ನನಗೆ ಗೊತ್ತಿತ್ತು, ಸಿದ್ಧವಾಗಿದೆ ಅನ್ನುತ್ತಾಳೆ. ಇಂಥ ವಿಸಂಗತಿ ಮುಂದಿನ ಸ್ಟಾಂಜಾದಲ್ಲೂ ಮುಂದುವರೆಯುತ್ತ ಮನಸ್ಸಿನ ಸಮತೋಲನ ಉಳಿಸಿಕೊಳ್ಳುವ ಯತ್ನದಲ್ಲಿ ತನ್ನ ನೆನಪು, ಭಾವನೆಗಳನ್ನೆಲ್ಲ ಇಲ್ಲವಾಗಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಹೇಳುತ್ತಾಳೆ. ಹೀಗೆ ಮರಳಿ ಬದುಕುವುದನ್ನು ಕಲಿಯಬೇಕೆನ್ನುತ್ತಾಳೆ. ಇಂಥ ಮರುಕಲಿಕೆಯ ಬದುಕು ಹೇಗಿರುತ್ತದೆ ಅನ್ನುವುದನ್ನು ಆಕೆ ಕಲ್ಪಿಸಿಕೊಳ್ಳಲೂ ಆಗಳು. ಭಾವನಾತ್ಮಕವಾಗಿ ಆಕೆ ಎಷ್ಟೇ ರಕ್ಷಣಾವ್ಯವಸ್ಥೆಗಳನ್ನು ಏರ್ಪಡಿಸಿಕೊಂಡಿದ್ದರೂ ಎಲ್ಲ ಕತ್ತಲು, ಚಂದ್ರ, ಮೃತ್ಯುನಕ್ಷತ್ರಗಳಿಗಿಂತ ಭಿನ್ನವಾದ ಹಗಲಿನ ಥಳಥಳ ಬೆಳಕಿನ ಕಿರಣ ಅವಳನ್ನು ತಬ್ಬಿಬ್ಬು ಮಾಡಿಬಿಡುತ್ತದೆ. ಆ ಸುಂದರ ಬೇಸಗೆಯ ದಿನ ಸೌಮ್ಯವಾದ ಲೋಕದ ಸಾಧ್ಯತೆಯನ್ನು ಒಳಗೊಂಡಿದ್ದು ಈಗ ನಿರೂಪಕಿ ಅನುಭವಿಸುತ್ತಿರುವ ದಾರುಣ ಬದುಕಿನಲ್ಲಿ ಅದು ಅಸಂಭವ ಅನ್ನುವ ಸತ್ಯವನ್ನೂ ಹೊಳೆಯಿಸುತ್ತದೆ.

’ಶಿಕ್ಷೆ’ ಎಂಬ ಈ ಭಾಗ ಸ್ವಲ್ಪ ಮಟ್ಟಿಗೆ ನಾಲ್ಕನೆಯ ಸ್ಟಾಂಜಾದ ಸ್ವರೂಪಕ್ಕೆ ಹತ್ತಿರದ್ದಾಗಿದೆ. ಎರಡೂ ನಿರೂಪಕಿ ತನಗೆ ತಾನೇ ಹೇಳಿಕೊಂಡಿರುವ ಮಾತುಗಳು. ಆದರೆ ನಾಲ್ಕನೆಯ ಸ್ಟಾಂಜಾದಲ್ಲಿ ನಿರೂಪಕಿ ಭೂತಕಾಲ ಮತ್ತು ವರ್ತಮಾನಕಾಲದ ತನ್ನೊಳಗಿನ ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೇಳಿಕೊಂಡರೆ ’ಶಿಕ್ಷೆಯ ಭಾಗದಲ್ಲಿ ತಾನು ಭಿನ್ನ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೆಂಬ ಹಂಬಲವಿದೆ. ಆದರೆ ನೋವು ಮಾತ್ರ ಹಾಗೇ ಉಳಿದಿದೆ.

*****

ಈ ನೋವೇ ’ಸಾವಿಗೆ’ ಎಂಬ ಎಂಟನೆಯ ಕವಿತೆಗೆ ಕಾರಣವಾಗಿದೆ. ’ಪ್ರಸ್ತಾವನೆ’ಯ ಭಾಗದಲ್ಲಿ ಸತ್ತವರು ಮಾತ್ರ ಸುಖವಾಗಿದ್ದಾರೆ ಎಂಬ ಮಾತು ಬಂದಿತ್ತು. ಅಂಥ ಸುಖ, ಶಾಂತಿ ತನಗೇ ಕರುಣಿಸಬೇಕೆಂದು ನಿರೂಪಕಿ ಕೋರುತಿದ್ದಾಳೆ. ವಿಷಾನಿಲ, ದರೋಡೆಕೋರನಿಂದ ಒಡೆದ ತಲೆಬುರುಡೆ, ರೋಗದ ಉಬ್ಬಸ ಇಂಥ ವಿಕಾರರೂಪಗಳಿದ್ದರೂ ಸಾವು ಸ್ವಾಗತಕ್ಕೆ ಅರ್ಹವಾಗಿ ಕಾಣುತ್ತದೆ. ಇವು ಸುಮ್ಮನೆ ಹಾಗೇ ನಮೂದಾಗಿರುವ ಚಿತ್ರಗಳಲ್ಲ, 1939ರ ಆಸುಪಾಸಿನಲ್ಲಿ ಇವೆಲ್ಲ ಸಾವಿನ ನಿಜರೂಪಗಳೇ ಆಗಿದ್ದವು. ಈ ಕವಿತೆಯನ್ನು ಆಗಸ್ಟ್ 1939ರಲ್ಲಿ ಬರೆದಾಗ ಮಹಾಯುದ್ಧದ ಸುಳಿವು ಆಗಲೇ ಸಿಕ್ಕಿತ್ತು. ಮೊದಲನೆಯ ಮಹಾಯುದ್ಧವನ್ನು ಕಂಡಿದ್ದ ಅಖ್ಮತೋವಾಳಂಥವರಿಗೆ ವಿಷಾನಿಲವು ನಾಗರಿಕರನ್ನು ಕೊಲ್ಲುವುದು ತೀರ ಸಂಭವನೀಯವಾಗಿ ಕಂಡಿರಬಹುದು. ಹಾಗೆಯೇ ಅದು ರಶಿಯದಲ್ಲಿ ಸೋಂಕು ರೋಗಗಳು ವ್ಯಾಪಕವಾಗಿದ್ದ ಕಾಲ. ನೆಲೆ ತಪ್ಪಿದ ಲಕ್ಷಾಂತರ ಜನ ಸೋಂಕು ರೋಗಕ್ಕೆ ಬಲಿಯಾಗಿದ್ದರು. ಆದರೆ ಸಾವಿನ ಇವೆಲ್ಲ ಚಿತ್ರಗಳಿಗಿಂತ ಯಾತನಾ ಶಿಬಿರದ ಸಾವು ತೀರ ಸಂಭವನೀಯವಾಗಿತ್ತು. ಅದನ್ನು ಬಾಯಿ ಬಿಟ್ಟು ಹೇಳುವ ಅಗತ್ಯವೇ ಇರಲಿಲ್ಲ; ಸ್ಟಾಂಜಾದಲ್ಲಿ ಬಂದ ಬಂಧನದ ಸೂಚನೆಯಷ್ಟೇ ಓದುಗರಿಗೆ ಸಾಕಾಗುತಿತ್ತು, ಈ ದೃಶ್ಯವೂ ಕನಿಷ್ಠ ವಿವರಗಳನ್ನಷ್ಟೇ ಒಳಗೊಂಡಿದೆ. ಮುಖವಿಲ್ಲದ ಸಮವಸ್ತ್ರ, ನೀಲಿ ಹ್ಯಾಟುಗಳನ್ನಷ್ಟೆ ಉಲ್ಲೇಖಗೊಂಡಿವೆ. ಸೆರೆಯಾಗಲಿರುವ ಮನುಷ್ಯನ ಮನಸ್ಸಿನಲ್ಲೂ ಸುಮ್ಮನೆ ನೋಡುತ್ತಿರುವವರಲ್ಲೂ ಭಯ ಹುಟ್ಟಿಸುವುದಕ್ಕೆ ಇದಷ್ಟೇ ಸಾಕಾಗಿತ್ತು. ಆದರೆ, ನಿರೂಪಕಿಗೆ ಸಾವಿನ ಶಾಂತಿಯ ಮೋಹ ಎಷ್ಟಿದೆಯೆಂದರೆ ಸಾವು ಯಾವ ರೂಪದಲ್ಲೂ ಬರಲಿ ಅನ್ನುತ್ತಾಳೆ. ಅವಳ ಕಲ್ಪನೆ, ಭಯ ಎಲ್ಲಕ್ಕೂ ಕೇಂದ್ರವಾಗಿ ಇರುವುದು ಯೆನಿಸೈ ನದಿಯ ದಡದಲ್ಲಿ ತನ್ನ ಪ್ರೀತಿ ಪಾತ್ರನು ಅನುಭವಿಸುವ ವೇದನೆ, ಹಿಂಸೆ, ಕೊರೆವ ಚಳಿ ಇವೇ.

(ಈ ಪ್ರಬಂಧದ ಉಳಿದ ಭಾಗ ಮುಂದಿನ ವಾರ ಪ್ರಕಟಗೊಳ್ಳಲಿದೆ)

ಪ್ರೊ. ಓ ಎಲ್ ನಾಗಭೂಷಣಸ್ವಾಮಿ

ಪ್ರೊ. ಓ ಎಲ್ ನಾಗಭೂಷಣಸ್ವಾಮಿ
ನಾಗಭೂಷಣಸ್ವಾಮಿ ಖ್ಯಾತ ಬರಹಗಾರರು. ’ನನ್ನ ಹಿಮಾಲಯ’, ’ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್), ನೆರೂಡ ನೆನಪುಗಳು (ಪಾಬ್ಲೋ ನೆರೂಡ ಆತ್ಮಕತೆ), ’ಬೆಂಕಿಗೆ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ (ಹ್ವಾನ್ ರುಲ್ಫೋನ ಕಥೆಗಳು ಮತ್ತು ಕಾದಂಬರಿ) ಅವರ ಪ್ರಕಟಿತ ಪುಸ್ತಗಳಲ್ಲಿ ಕೆಲವು. ’ಕ್ರೈಂ ಅಂಡ್ ಫನಿಶ್ಮೆಂಟ್’ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ಹೊಸ ಅನುವಾದ; ಅನ್ನಾ ಅಖ್ಮತೋವಾರ ಶಾಂತಿಗೀತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...