Homeಮುಖಪುಟಇಮೇಜಿಗೆ, ಸ್ಟಾರ್ ಪಟ್ಟಕ್ಕೆ ಜೋತುಬೀಳದೆ ಕೈಕುಸುರಿಯಂತೆ ನಟಿಸುತ್ತಿದ್ದ ಇರ್ಫಾನ್: ಯದುನಂದನ್ ಕೀಲಾರ ಬರಹ

ಇಮೇಜಿಗೆ, ಸ್ಟಾರ್ ಪಟ್ಟಕ್ಕೆ ಜೋತುಬೀಳದೆ ಕೈಕುಸುರಿಯಂತೆ ನಟಿಸುತ್ತಿದ್ದ ಇರ್ಫಾನ್: ಯದುನಂದನ್ ಕೀಲಾರ ಬರಹ

- Advertisement -
- Advertisement -

ಸಿನಿಮಾ ನಟನೆ ಅಂದ್ರೆ ಏನು ಮತ್ತು ಅದು ಯಾವುದು ಎಂಬ ವಿಷಯ ಒಬ್ಬ ಸಾಮಾನ್ಯ ಸಿನಿಮಾ ಪ್ರೇಕ್ಷಕನಾಗಿ ನನಗೆ ಸದಾ ಕಾಡಿದೆ. ಈ ಕುರಿತ ತಿಳಿವಳಿಕೆ ನನ್ನ ಮೂರೂವರೆ  ದಶಕಗಳ ಸಿನಿಮಾ ವೀಕ್ಷಣೆಯಲ್ಲಿ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಬೇರೆ ಬೇರೆ ದೇಶಗಳ ಮತ್ತು ಭಾಷೆಗಳ ಸಿನಿಮಾಗಳನ್ನು ನೋಡುವಾಗಲಂತೂ ನಟನೆ ಕುರಿತ ನನ್ನ ಮೊದಲಿನ ಅಭಿಪ್ರಾಯಗಳು ತಲೆಕೆಳಗಾಗಿ ಗೊಂದಲಗಳನ್ನು ಸೃಷ್ಟಿಸಿವೆ.

ಭಾರತದ ಬಹುಪಾಲು ಪ್ರಧಾನಧಾರೆ ಸಿನಿಮಾಗಳು ನಾಯಕ ಪ್ರಧಾನವಾಗಿರುವಂತಹವು. ಆ ನಾಯಕ, ಸಾಮಾನ್ಯರಿಗೆ ನಿಲುಕದ ಅಸಾಧಾರಣ ಸಾಮರ್ಥ್ಯವುಳ್ಳವನಾಗಿದ್ದು, ಸಿನಿಮಾದ ಪ್ರತಿಯೊಂದು ದೃಶ್ಯದಲ್ಲೂ ವಿಜೃಂಭಿಸುತ್ತಾನೆ. ನಮ್ಮಲ್ಲಿ ಸಾಮಾನ್ಯ ವಸ್ತುವಿಗಾಗಿ ಸೂಕ್ತ ನಟನ ಆಯ್ಕೆಗಿಂತ ನಾಯಕ ನಟನಿಗಾಗಿಯೇ ವಸ್ತುವನ್ನು ಹೆಣಿಯುವುದೇ ಹೆಚ್ಚು.  ಹಾಗಾಗಿಯೇ ಸಿನಿಮಾ ವಸ್ತು, ಅದರ ನಿರ್ದೇಶಕ ಮತ್ತವನ ಅಲೋಚನೆ ಹೇಗೆ  ಪ್ರೆಸೆಂಟ್ ಆಗಿದೆ ಅನ್ನೊದಕ್ಕಿಂತ ಮಿಗಿಲಾಗಿ, ನಾವು ನಾಯಕ ನಟನ ಅಭಿನಯದ ಬಗ್ಗೆ ಚರ್ಚೆಮಾಡುತ್ತೇವೆ, ಅವರಿಗೆ ಸ್ಟಾರ್ ಪಟ್ಟ ಕೊಡುತ್ತೇವೆ, ಆರಾಧಿಸುತ್ತೇವೆ ಮತ್ತು ಒಂದು ಹಂತದಲ್ಲಿ ಆ ನಟರು ನಮ್ಮ ರೋಲ್ ಮಾಡೆಲ್ ಕೂಡ ಆಗುತ್ತಾರೆ. ನಮ್ಮಲ್ಲಿ ಅದ್ಭುತ ನಟನಾ ಕೌಶಲವುಳ್ಳ ಅಸಂಖ್ಯಾತ ಪೋಷಕ ನಟರು ‘ಮಾನ್ಯತೆ, ಹಣ, ಸ್ಟಾರ್‍ಡಮ್, ಆರಾಧಿಸುವ ಅಭಿಮಾನಿಗಳು’ ಇದ್ಯಾವುವೂ ಇಲ್ಲದೆ ಆಗಿಹೋಗಿದ್ದಾರೆ. ಅವರ ನೆನಪು ನಮ್ಮಲ್ಲಿ ಸಂದರ್ಭೋಚಿತವಾಗಿರುತ್ತದೆ ಅಷ್ಟೇ. ಈಗಲೂ ಅಂತಹ ಪೋಷಕ ನಟರು ನಮ್ಮ ನಡುವೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ ಅನಿಸಿದರೂ ಅದು ಗಣನೀಯವಾಗೇನಿಲ್ಲ. ಭಾರತದ ಚಿತ್ರ ಜಗತ್ತಿನ ಈ ರೀತಿಯ ವಿಚಿತ್ರ ಸನ್ನಿವೇಶದೊಳಗೆ ಒಬ್ಬ ಪೋಷಕ ನಟ  ಸ್ಟಾರ್ ಆಗಿ ಬೆಳೆದು ಪ್ರಶಸ್ತಿ, ಹಣ, ಕೀರ್ತಿ, ಆರಾಧಿಸುವ ಅಭಿಮಾನಿಗಳು, ಇವುಗಳೆಲ್ಲವನ್ನು ಸಂಪಾದಿಸುವುದು ಬಹಳ ಅಪರೂಪ ಮಾತ್ರವಲ್ಲ ಅದೊಂದು ಸಾಹಸಗಾಥೆಯೇ ಸರಿ. ಇಂತಹ ಬೆರಳೆಣಿಕೆ ಸಾಹಸಿಗಳಲ್ಲಿ ಇರ್ಫಾನ್ ಖಾನ್ ಕೂಡ ಒಬ್ಬ.

ಇರ್ಫಾನ್ ಖಾನ್ ನೆನಪಿನ ಮೂಲಕ್ಕೆ ಹೋದರೆ, ನನಗೆ ಈಗ ಸ್ವಲ್ಪ ವಿಚಿತ್ರವೆನಿಸುತ್ತದೆ. ಕಾರಣ ಇಷ್ಟೇ. ನಾನು ನೋಡಿದ ಆತನ ಮೊದಲ ಸಿನಿಮಾ, 2006ರಲ್ಲಿ ತೆರೆಕಂಡ ತೆಲುಗು ಭಾಷೆಯ ‘ಸೈನಿಕುಡು’. ಇರ್ಫಾನ್ ತನ್ನ ವೃತ್ತಿ ಬದುಕಿನ ಪಯಣದಲ್ಲಿ  ಪ್ರಧಾನವಾಗಿ ಆಯ್ಕೆಮಾಡಿಕೊಂಡ ಸಿನಿಮಾಗಳಿಗೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ನನಗೆ ಮಾತ್ರ ಈ ಸಿನಿಮಾದಲ್ಲಿ ‘ಪಪ್ಪು ಯಾದವ್’ ಎಂಬ ಚರ್ವಿತಚವರ್ಣ ಖಳನಾಯಕ ಪಾತ್ರದಲ್ಲಿಯೂ ಕೂಡ ಇರ್ಫಾನ್ ನಟನೆ ಮತ್ತು ಅವನ ಕಣ್ಣುಗಳು ಬಹಳ ಆಕರ್ಷಿಸಿದ್ದವು. ಇಷ್ಟರಲ್ಲಾಗಲೆ ಇವನ ನಟನಾ ಸಾಮರ್ಥ್ಯ ಹಿಂದಿ ಚಿತ್ರರಂಗಕ್ಕೆ ಪರಿಚಯವಾಗಿತ್ತು. 2003ರಲ್ಲಿ ತೆರೆಕಂಡ ‘ಹಾಸಿಲ್’ ಮತ್ತು ‘ಮಕ್ಬೂಲ್’. ಈ ಎರಡು ಸಿನಿಮಾಗಳಲ್ಲಿನ ಇರ್ಫಾನ್‍ನ ನಟನೆ ಪ್ರೇಕ್ಷಕರಾದಿಯಾಗಿ ವಿಮರ್ಶಕರಿಂದಲೂ ಬಹಳ ಮೆಚ್ಚುಗೆಯನ್ನು ಪಡೆದಿದ್ದವು.

ಕೆಳ ಮಧ್ಯಮ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಇರ್ಫಾನ್‍ಗೆ ಸಿನಿಮಾದಲ್ಲಿ ನಟಿಸಬೇಕೆಂಬುದಾಗಲಿ ಅಥವಾ ಒಬ್ಬ ಸ್ಟಾರ್ ನಟನಾಗಬೇಕೆಂಬುದಾಗಲಿ ಅವನ ಬಾಲ್ಯದ ಕನಸೇನಲ್ಲ. ಆತ ಬಯಸಿದ್ದು ಒಬ್ಬ ಕ್ರಿಕೆಟ್ ಪ್ಲೇಯರ್ ಆಗಬೇಕೆಂದು. ರಾಜ್ಯಮಟ್ಟದ ಯೋಗ್ಯತೆ ಇರುವ ಒಂದು ತಂಡವನ್ನು ಪ್ರತಿನಿಧಿಸಿಯೂ ಇದ್ದ. ವೈಯಕ್ತಿಕ ಕಾರಣಗಳಿಂದಾಗಿ ಅದನ್ನು ಮುಂದುವರೆಸಲು ಆತನಿಗೆ ಸಾಧ್ಯವಾಗಲಿಲ್ಲ. ನಂತರ ಅವನು ಹಿಡಿದದ್ದು ವ್ಯಾಪಾರ. ಅದು ಕೂಡ ಕೈ ಹಿಡಿಯಲಿಲ್ಲ. ನಾಸಿರುದ್ದಿನ್ ಶಾ, ಓಂಪುರಿ ಮುಂತಾದ ನಟರ ಪ್ರಭಾವಕ್ಕೆ ಒಳಗಾಗಿ, ತನ್ನ 23ನೇ ವಯಸ್ಸಿಗೆ ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ದಲ್ಲಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆಯತ್ತಾನೆ. ಇಲ್ಲಿರುವಾಗಲೇ ಅವನ ಪ್ರತಿಭೆ ಅಂತರರಾಷ್ಟ್ರೀಯ ಖ್ಯಾತಿಯ ಸಿನಿಮಾ ನಿರ್ದೇಶಕಿ ಮೀರಾ ನಾಯರ್ ಅವರ ಕಣ್ಣಿಗೆ ಬೀಳುತ್ತದೆ. ತನ್ನ ‘ಸಲಾಂ ಬಾಂಬೆ’(1988) ಸಿನಿಮಾದ ಒಂದು ಸಣ್ಣ ಪಾತ್ರದಲ್ಲಿ ನಟಿಸಲು ಅವಕಾಶ ನೀಡುತ್ತಾರೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯುತ್ತದೆ. ಇರ್ಫಾನ್ ನಟನಾ ವೃತ್ತಿಯ ಪ್ರಾರಂಭದ ಬಿಂದು ಇಲ್ಲಿಂದ ಶುರುವಾಗುತ್ತದೆ.

ಎಲ್ಲಾ ಕ್ಷೇತ್ರದಲ್ಲಿರುವ ಹಾಗೆ ಸಿನಿಮಾ ಕ್ಷೇತ್ರವೂ ಕೂಡ, ಕೆಲವೇ ವರ್ಗದ, ಜಾತಿಯ, ಕುಟುಂಬದ ಮತ್ತು ಆರ್ಥಿಕ ಬಲಾಡ್ಯರ ಹಿಡಿತದಲ್ಲಿರುವ ಸಂಗತಿ ಅತಿ ಸಹಜ ಅನ್ನುವಷ್ಟು ನಮಗೆ ಅಭ್ಯಾಸವಾಗಿ ಹೋಗಿದೆ. ಕೆಲವೇ ಮಂದಿಯ ಜಹಗೀರು ಆಗಿರುವ ಈ ಸಮುದ್ರದಲ್ಲಿ ಈಜಿ ತಾನೊಬ್ಬ ನಟ, ತನ್ನಲ್ಲೂ ನಟನಾ ಕೌಶಲವಿದೆ ಎಂದು ಗುರುತಿಸಿಕೊಳ್ಳುವಷ್ಟರಲ್ಲಿ ಆತ ತನ್ನ ನಡುವಯಸ್ಸಿಗೆ ಬಂದು ನಿಂತಿರುತ್ತಾನೆ. ಇದು ಇರ್ಫಾನ್, ನವಾಜುದ್ದಿನ್ ಸಿದ್ಧಿಕಿ ಹೀಗೆ ಇನ್ನೂ ಅಸಂಖ್ಯಾತ, ಯಾವುದೇ ಪ್ರಭಾವದ ಹಿನ್ನಲೆ ಇರದ  ಅದ್ಭುತ ಪ್ರತಿಭೆಗಳ ವಿಷಯದಲ್ಲಿ ಆಗಿರುವುದೇ. 1988ರ ‘ಸಲಾಂ ಬಾಂಬೆ’ ಸಿನಿಮಾದಲ್ಲಿ ಮೊದಲು ನಟಿಸಿದ ಇರ್ಫಾನ್ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದು ಮಾತ್ರ ಬರೋಬ್ಬರಿ ಒಂದೂವರೆ ದಶಕಗಳ ನಂತರ. ಅದು 2003ರ ‘ಹಾಸಿಲ್’ ಮತ್ತು ‘ಮಕ್ಬೂಲ್’ ಸಿನಿಮಾಗಳ ಮುಖಾಂತರ. ಹಾಸಿಲ್‍ನ ಖಳನಾಯಕನ ಪಾತ್ರ ಮತ್ತು ಮಕ್ಬೂಲ್‍ನ ಮಕ್ಬೂಲ್‍ನದೇ ಪಾತ್ರಕ್ಕೆ ವಿಮರ್ಶಕರಿಂದ ಅದ್ಭುತವಾದ ಪ್ರತಿಕ್ರಿಯೆ, ಪ್ರಶಂಸೆಗಳು ಸಿಕ್ಕಿದರೂ ಕೂಡ, ಇರ್ಫಾನ್‍ಗೆ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಈ ಸಂದರ್ಭದಲ್ಲಿ ಮತ್ತೆ ಅವಕಾಶ ನೀಡಿದ್ದು, ಅದೇ ಮೀರಾ ನಾಯರ್. ತನ್ನದೇ ನಿರ್ಮಾಣ ಮತ್ತು ನಿರ್ದೇಶನದ ‘ನೇಮ್‍ಸೇಕ್’(2007) ಸಿನಿಮಾದಲ್ಲಿ. ಇದರ ‘ಅಶೋಕ್ ಗಂಗೂಲಿ’ ಎಂಬ ಪ್ರಧಾನ ಪಾತ್ರದಲ್ಲಿನ ನಟನೆ ಇರ್ಫಾನ್‍ಗೆ ಅಂತರರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟಿತು. ಪ್ರತಿಷ್ಠಿತ ‘ಇಂಡಿಪೆಂಡೆಂಟ್ ಸ್ಪಿರಿಟ್ ಅವಾರ್ಡ್’ ದೊರೆತದ್ದು ಮಾತ್ರವಲ್ಲ ನಂತರದ ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಅವಕಾಶಗಳು ಸಿಗಲು ಈ ಸಿನಿಮಾದಲ್ಲಿನ ನಟನೆ ನೆರವಾಗಿದ್ದೂ ಹೌದು. ಇರ್ಫಾನ್ ಎಲ್ಲಾ ವರ್ಗದ ಸಿನಿ ಪ್ರೇಕ್ಷಕರನ್ನು ಸೂರೆಗೊಂಡಿದ್ದು 2007ರಲ್ಲಿ ಬಂದ ಅನುರಾಗ್ ಬಸು ನಿರ್ದೇಶನದ ‘ಲೈಫ್ ಇನ್ ಎ.. ಮೆಟ್ರೊ’ ಸಿನಿಮಾದಲ್ಲಿನ ‘ಮಾಂಟಿ’ ಪಾತ್ರದ ಅಭಿನಯದ ಮೂಲಕ. ಇರ್ಫಾನ್ ಈ ರೀತಿಯೂ ನಟಿಸಬಲ್ಲ ಅವನೊಳಗೊಬ್ಬ ಅದ್ಭುತವಾದ ಮತ್ತು ಅಷ್ಟೇ ವೈವಿಧ್ಯಮಯವಾದ ಕಲಾವಿದನಿದ್ದಾನೆ ಎಂದು ಸಾಮಾನ್ಯ ಪ್ರೇಕ್ಷನಿಗೂ ಗೊತ್ತಾಗಿದ್ದು ಮಾತ್ರ ಇಲ್ಲಿಯೇ. ಈ ಸಿನಿಮಾದ ನಂತರ ಅವಕಾಶಗಳ ಸಂಖ್ಯೆ ಕೂಡ ಹೆಚ್ಚಾಯ್ತು. ಪೋಷಕ ಪಾತ್ರದಿಂದ ಮುಖ್ಯ ಪಾತ್ರಗಳಿಗೆ ನಂತರ, ಪ್ರಧಾನ ಪಾತ್ರಗಳಿಗೆ ಇರ್ಫಾನ್ ಬಡ್ತಿ ಹೊಂದುತ್ತಾ ಹೋದ.

ಒಮ್ಮೆ ಗಿರೀಶ್ ಕಾಸರವಳ್ಳಿಯವರು, ಸಿನಿಮಾದಲ್ಲಿ ನಟನಾ ವರ್ಗದ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ‘ನಟ/ನಟಿಯರು ವಾಲ್ಯೂಮ್ ಮಾತ್ರ, ನಿರ್ದೇಶಕ ಏನನ್ನು ಪ್ರಸ್ತುತ ಪಡಿಸಲು ಬಯಸುತ್ತಾನೋ ಅದಕ್ಕೆ ಪೂರಕವಾಗಿ ಎಷ್ಟು ಬೇಕು ಅಷ್ಟು ನಟಿಸುವುದಷ್ಟೆ ಅವರ ಕೆಲಸ. ಸಿನಿಮಾದ ನಿಜವಾದ ಸಾರಥಿ ನಿರ್ದೇಶಕ’ ಎಂದಿದ್ದಾರೆ.  ಇಲ್ಲಿ ನಟನ ಪ್ರಾಮುಖ್ಯತೆಯನ್ನ ಅಲ್ಲಗಳೆದಂತಾಯ್ತು. ಆದರೆ ಭಾರತದ ಪ್ರಧಾನಧಾರೆ ಸಿನಿಮಾಗಳು ಗಿರೀಶ್ ಕಾಸರವಳ್ಳಿಯವರ ಅಭಿಪ್ರಾಯಕ್ಕೆ ವಿರುದ್ಧ ದಿಕ್ಕಿನಲ್ಲಿವೆ. ನಮ್ಮ ಸಿನಿಮಾಗಳು ಒಂದು ಆಲೋಚನೆಯನ್ನ ಉದ್ದೀಪಿಸುವುದಕ್ಕಿಂತ ಪ್ರೇಕ್ಷಕನ ಭಾವನೆಗಳನ್ನು ಉದ್ದೀಪಿಸುವುದೇ ಮಖ್ಯ ಗುರಿಯಾಗಿರುವದರಿಂದ, ನಮ್ಮಲ್ಲಿ ವಾಚ್ಯವಾಗಿ ಒಂದು ರೀತಿಯ ಮೆಲೋಡ್ರಾಮವೇ ನಟನೆ ಎನಿಸಿಕೊಂಡಿದೆ. ಇರ್ಫಾನ್ ಖಾನ್ ನಟನೆ ಮೆಲೋಡ್ರಾಮವೂ ಅಲ್ಲದ ಕಾಸರವಳ್ಳಿ ಹೇಳುವ ಹಾಗೆ ಕೇವಲ ‘ವಾಲ್ಯೂಮ್’ ಮಾತ್ರವೇ ಆಗಿರದ ಇವೆರಡರ ನಡುವಿನದ್ದು ಅನಿಸುತ್ತದೆ. ಹಿಂದಿ ಸಿನಿಮಾಗೆ ಸೀಮಿತವಾಗಿ ಹೇಳುವುದಾದರೆ ಈ ರೀತಿಯ ನಟನೆಯನ್ನು ನಾಸಿರುದ್ದೀನ್ ಶಾ, ಓಂಪುರಿ, ಶಬಾನ ಅಜ್ಮಿ, ಸ್ಮಿತಾ ಪಾಟೀಲ್, ಅಮೋಲ್ ಪಾಲೇಕರ್, ನವಾಜುದ್ದಿನ್ ಸಿದ್ಧಿಕಿ, ಕೆ ಕೆ ಮೆನನ್, ಇವರಲ್ಲಿಯೂ ನೋಡಬಹುದು. ಮನುಷ್ಯನ ಸಹಜ ವರ್ತನೆ, ಭಾವನೆಗಳನ್ನು ಅಷ್ಟೇ ಸಹಜವಾಗಿ ಅಭಿವ್ಯಕ್ತಿಸುವ ಕಲೆಯನ್ನು ಕರಗತ ಮಾಡಿಕೊಂಡವರು. ಇವರನ್ನೆಲ್ಲಾ ತೆರೆಯ ಮೇಲೆ ನೋಡುತ್ತಿದ್ದರೆ, ನಮ್ಮ ಪರಿಸರದಲ್ಲಿ ನಮ್ಮ ನಡುವೆ ಬದುಕುತ್ತಿರುವ ಯಾರಾದರೂ ನೆನಪಿಗೆ ಬರುತ್ತಾರೆ. ಇರ್ಫಾನ್‍ನ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಈ ತರಹದ ನಟನೆಯನ್ನ ಕಾಣಬಹುದು. ತಜ್ಞರು ಇದನ್ನ ‘ಮೆಥೆಡ್ ಆಕ್ಟಿಂಗ್’ ಎಂದೂ ಕರೆಯುತ್ತಾರೆ. ಎನ್.ಎಸ್.ಡಿ.ಯಂತಹ ನಾಟಕ ಶಾಲೆಯಲ್ಲಿ ಕಲಿತ ಇರ್ಫಾನ್‍ಗೆ ನಟನೆಯ ಹೊಸ ಸಾಧ್ಯತೆಗಳ ಅನುಭವ ಆಗಿರಲಿಕ್ಕೂ ಹೌದು.  ‘ಲೈಫ್ ಇನ್ ಎ.. ಮೆಟ್ರೋ’ ಸಿನಿಮಾದಲ್ಲಿ ನಡುವಯಸ್ಸು ದಾಟಿದ್ದರೂ ಇನ್ನೂ ಮದುವೆಗೆ ಹುಡುಗಿ ಸಿಗದ ‘ಫ್ರಸ್ಟ್ರೇಷನ್’ನ ಅಭಿವ್ಯಕ್ತಿ. ‘ಮುಂಬೈ ಮೆರಿ ಜಾನ್’ನಲ್ಲಿ ಟೀ ಮಾರುವವನು ಶಾಫಿಂಗ್ ಕಾಂಪ್ಲೆಕ್ಸ್ ಒಂದರಲ್ಲಿ ಅನುಭವಿಸುವ ಕೀಳಿರಿಮೆ ಅವಮಾನಗಳ ಅಭಿವ್ಯಕ್ತಿ. ‘ಲಂಚ್ ಬಾಕ್ಸ್’ನಲ್ಲಿ ಅಪರಿಚಿತ ಮಹಿಳೆಯ ಪತ್ರಗಳನ್ನು ಓದುವಾಗ ಕನ್ನಡಕದೊಳಗಿಂದ ನೋಡುವ ಅವನ ಆ ನೋಟಗಳು.  ‘ತಲ್ವಾರ್’ ಚಿತ್ರದಲ್ಲಿ ಇನ್ವೆಷ್ಟಿಗೇಟಿಂಗ್ ಪೋಲಿಸ್ ಅಧಿಕಾರಿಯ ಪಾತ್ರ. ‘ಹೈದರ್’ನಲ್ಲಿ ಮಿಲಿಟರಿ ಪಡೆಯಿಂದ ಹಿಂಸೆಗೆ ಒಳಗಾದ ಒಬ್ಬ ಕಾಶ್ಮೀರಿ ಮುಸ್ಲಿಂ ಪಾತ್ರ. ‘ಪೀಕು’ವಿನಲ್ಲಿ ಮಲಬದ್ಧತೆ ಇರುವವರು ಯಾಕೆ ಇಂಡಿಯನ್ ಕ್ಲಾಸೆಟ್ ಬಳಸಬೇಕು ಎಂದು ಕೊಡುವ ವಿವರಣೆಯ ನಟನೆ. ಹೀಗೆ,  ಅವನ ‘ಪಾನ್ ಸಿಂಗ್ ತೋಮರ್’, ‘ಕಾರಾವಾನ್’, ‘ಮದಾರಿ’,  ‘ಹಿಂದಿ ಮೀಡಿಯಮ್’   ಒಂದೊಂದು ಸಿನಿಮಾದಲ್ಲೂ ಒಂದೊಂದು ವ್ಯಕ್ತಿತ್ವ. ಇರ್ಫಾನ್ ನಟನಾಗಿ ಎಲ್ಲೂ ಕಾಣೋದೇ ಇಲ್ಲ. ಪಾತ್ರವೇ ಅವನಾಗಿಬಿಡುವ ಪ್ರತಿಭೆ.  ಯಾವುದೇ ಇಮೇಜಿಗೆ ಕಟ್ಟುಬೀಳದೆ ತನ್ನ ವಯಸ್ಸಿಗೆ ಮೀರಿದ ಪಾತ್ರಗಳನ್ನೂ ಒಳಗೊಂಡು, ಆ ಪಾತ್ರ ಚಿಕ್ಕದಾ, ದೊಡ್ಡದಾ, ಎಷ್ಟು ಅವಧಿಯದು, ಇದ್ಯಾವುದನ್ನು ಪರಿಗಣಿಸದೇ ಅವನ ಎಲ್ಲಾ ಪಾತ್ರಗಳೂ ಪ್ರೇಕ್ಷಕನ ಸ್ಮೃತಿಯಲ್ಲಿ ದೀರ್ಘಕಾಲ ಉಳಿದುಬಿಡುವಂತೆ ನಟಿಸಿದ.

ಇರ್ಫಾನ್ ಯಾಕೆ ಇಷ್ಟು ಮುಖ್ಯವಾಗುತ್ತಾನೆ? ಅವನು ನಟಿಸಿದ ಸಿನಿಮಾಗಳ ಸಂಖ್ಯೆ ದೊಡ್ಡದೇನಲ್ಲ. ಬಹಳಷ್ಟು ಪೋಷಕ ಪಾತ್ರಗಳು, ಆದರೂ ಇರ್ಫಾನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹೇಗೆ ಸಾಧ್ಯವಾಯಿತು! ಟಾಮ್ ಹಾಂಕ್ಸ್, ನಟಾಲಿ ಫೋರ್ಟ್‍ಮನ್ ಅಂತಹ ಹಾಲಿವುಡ್ ದಿಗ್ಗಜರೊಂದಿಗೆ ಸರಿಸಾಟಿಯಾಗಿ ನಟಿಸುವ ಅವಕಾಶ ದಕ್ಕಿದ್ದಾದರೂ ಹೇಗೆ!  ಸಿನಿಮಾಗಳ ಆಯ್ಕೆ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ತನ್ನ ಪ್ರತಿಭೆಗೆ ಸವಾಲಾದ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡ. ಅವು ನಮ್ಮದೇ ಸಮಾಜದ ಸಾಮಾನ್ಯನೊಬ್ಬನ ಬದುಕಿನ ಬವಣೆಗಳನ್ನು ಪ್ರತಿನಿಧಿಸುತ್ತಿದ್ದವು. ಕಥಾನಯಕನ ಪಾತ್ರದಲ್ಲಿ ನಟಿಸಿ, ಮುಂದಿನ ಸಿನಿಮಾದಲ್ಲಿ ಒಂದು ಪೋಷಕ ಪಾತ್ರಕ್ಕೆ ಮರಳುವ ಧೈರ್ಯ ಅವನಲ್ಲಿತ್ತು. ಸ್ಟಾರ್ ಒಬ್ಬ ತನ್ನ ಇಮೇಜಿಗೆ ವ್ಯತಿರಿಕ್ತವಾದ ಅಥವಾ ಹಿರೋಯಿಸಂ ಇಲ್ಲದ ಸಾಧಾರಣವಾದ ಪಾತ್ರಗಳನ್ನು ನಿರ್ವಹಿಸಿದ್ದು ಬಹಳ ಅಪರೂಪ. ಹಿಂದಿ, ಬೆಂಗಾಲಿ ಚಿತ್ರರಂಗದಲ್ಲಿ  ಒಂದಷ್ಟು ಕಲಾವಿದರು ಇದ್ದಾರೆ. ಆದರೆ, ದಕ್ಷಿಣದಲ್ಲಿ ಮಾತ್ರ ಬಹಳ ಅಪರೂಪ. ಮಲೆಯಾಳಂನಲ್ಲಿ ಕೆಲವರನ್ನು ಕಾಣಬಹುದು. ಮಮ್ಮಟ್ಟಿ, ಅಡೂರರ ‘ವಿಧೇಯನ್’ನಲ್ಲಿ, ಮೋಹನ್ ಲಾಲ್, ಷಾಜಿ ಕರಣ್‍ರ ‘ವಾನ ಪ್ರಸ್ಥಂ’ನಲ್ಲಿ ತಮ್ಮ ಇಮೇಜಿಗೆ ವ್ಯತಿರಿಕ್ತವಾದ ತಮ್ಮ ನಟನಾ ಕೌಶಲ್ಯಕ್ಕೆ ಸವಾಲಾದಂಥ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದುಂಟು. ಫಹಾದ್ ಫಾಸಿಲ್ ಮತ್ತು ಇತರ ಯುವ ನಟರ ಮೂಲಕ ಅಲ್ಲಿ ಈ ಪರಂಪರೆ ಮುಂದುವರೆದಿದೆ. ಇರ್ಫಾನ್ ಮಾತಲ್ಲೆ ಹೆಳುವುದಾದರೆ ‘ಒಂದು ಉತ್ತಮ ಸಿನಿಮಾಗೆ ಹಣ, ಸ್ಟಾರ್ ಯಾವುದೂ ಬೇಡ. ಒಳ್ಳೆಯ ಮನಸ್ಸಿದ್ದರೆ ಸಾಕು’. ಈ ಒಳ್ಳೆಯ ಮನಸ್ಸು ಇರ್ಫಾನ್‍ನಲ್ಲಿ ಅವನು ಆಯ್ಕೆ ಮಾಡಿಕೊಂಡ ಪಾತ್ರದ ಮುಖಾಂತರ ನಮಗೆ ಕಾಣುತ್ತದೆ.

ನಾನು ಸಿನಿಮಾ ಕಲಾವಿದರ ಬಗ್ಗೆ ಯೋಚಿಸುವಾಗ ಮೂರು ವರ್ಗಗಳಾಗಿ ವಿಂಗಡಿಸಿಕೊಳ್ಳುತ್ತೇನೆ. ಒಂದನೇ ವರ್ಗದ ಕಲಾವಿದರು: ಇವರು ಯಾವಾಗಲು ತೆರೆಯಮೇಲೆ ಅಸಾಮಾನ್ಯರಾಗಿ, ಅಪ್ರತಿಮ ಸಾಹಸಿಗರಾಗಿ, ಜನಾನುರಾಗಿಗಳಾಗಿ ಪ್ರತಿ ದೃಶ್ಯದಲ್ಲೂ ವಿಜೃಂಭಿಸುತ್ತಾರೆ. ಕೆಲವರು ನಿಜ ಜೀವನದಲ್ಲೂ ಅದೇ ಭ್ರಮೆಯಲ್ಲಿ ಬದುಕಿಬಿಡುತ್ತಾರೆ.  ನಾವು ಸಿನಿಮಾ ಮೂಲಕ ಯಾವ ಅಲೋಚನೆಯನ್ನ ಪ್ರೇಕ್ಷಕರಿಗೆ ದಾಟಿಸುತ್ತಿದ್ದೇವೆ, ಸಮಕಾಲೀನ ಸಮಾಜವನ್ನ ಅದು ಅಭಿವ್ಯಕ್ತಿಸುತ್ತಿದೆಯೇ, ಸಿನಿಮಾಕ್ಕೂ ನಮ್ಮ ಸುತ್ತಲಿನ ಬದುಕಿಗೂ ಏನಾದರೂ ಸಂಬಂಧ ಇದೆಯೇ, ಸಿನಿಮಾ ಮುಖಾಂತರ ನಾವು ಯಾವ ವರ್ಗ ಮತ್ತು ಮೌಲ್ಯಗಳನ್ನ ಪ್ರತಿನಿಧಿಸುತ್ತಿದ್ದೇವೆ, ಈ ಯಾವ ಸಂಗತಿಗಳು ಇಂತಹ ಕಲಾವಿದರಿಗೆ ಮುಖ್ಯವಾಗುವುದಿಲ್ಲ. ಇವರ ಆತ್ಯಂತಿಕ ಗುರಿ ಪ್ರೇಕ್ಷಕರನ್ನು ರಂಜಿಸುವುದು ಮಾತ್ರ. ಆ ಮೂಲಕ ಅವರು ಹಣ, ಕೀರ್ತಿ, ಸ್ಟಾರ್ ಪಟ್ಟ, ಅಭಿಮಾನಿಗಳನ್ನು ಹೊಂದುವುದು, ಆ ಸ್ಟಾರಡಮ್ ಬಳಸಿಕೊಂಡು ಹಲವಾರು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವುದು, ಯಾವುದಾದರು ಸರ್ಕಾರದ ಅಧಿಕಾರ ಕೇಂದ್ರದ ಒಳಗೆ ನುಗ್ಗಲು ಯತ್ನಿಸುವುದು, ಸ್ವಲ್ಪ ವಯಸ್ಸಿನ ತರುವಾಯ ರಾತ್ರೋರಾತ್ರಿ ಸಮಾಜದ ಬಗ್ಗೆ ಅತಿಯಾದ ಕಾಳಜಿ ಬಂದು ರಾಜಕೀಯ ಪ್ರವೇಶ ಮಾಡಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಾರೆ. ಎರಡನೇ ವರ್ಗದ ಕಲಾವಿದರು: ಇವರು ಕಲೆಯ ಬಗ್ಗೆ ಸೂಕ್ಷ್ಮವಾದ ಜ್ಞಾನ ಉಳ್ಳವರು, ನಾನು ಮಾಡುವ ಪಾತ್ರ ಸಮಾಜವನ್ನು ಹೇಗೆ ಪ್ರಭಾವಿಸುತ್ತದೆ, ನಾನು ನನ್ನ ಪಾತ್ರದ ಮುಖಾಂತರ ಯಾರನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಅರಿವನ್ನು ಹೊಂದಿದವರು. ಯಾವುದೇ ಇಮೇಜಿಗೆ, ಸ್ಟಾರ್ ಪಟ್ಟಕ್ಕೆ, ಹಣಕ್ಕೆ ತಮ್ಮ ಪ್ರತಿಭೆಯನ್ನು ಮಾರಿಕೊಳ್ಳದೆ, ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ಕಲಾವಿದರಾಗಿಯೇ ಉಳಿದುಬಿಡುವವರು. ಮೂರನೇ ವರ್ಗದ ಕಲಾವಿದರು: ಎರಡನೇ ವರ್ಗದ ಎಲ್ಲಾ ಗುಣ ಲಕ್ಷಣಗಳ ಜೊತೆ. ಕಲಾವಿದ ಒಬ್ಬ ಸೋಷಿಯಲ್ ಆಕ್ಟಿವಿಸ್ಟ್ ಕೂಡ ಆಗಿಬಿಡುವುದು. ಸಿನಿಮಾದಿಂದ ತಮಗೆ  ಸಿಕ್ಕ  ಮನ್ನಣೆಯನ್ನು, ಅದೊಂದು ಸಾಮಾಜಿಕ ಜವಬ್ದಾರಿ ಎಂದು ಪರಿಗಣಿಸಿ ಸಮಕಾಲೀನ ತಲ್ಲಣಗಳಿಗೆ ಕಿವಿಗೊಡುವ, ಅನ್ಯಾಯಕ್ಕೆ ಒಳಗದಾವರ ಪರವಾಗಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ, ತಮ್ಮ ಸೌಖ್ಯದ ನೆಲೆಯ ಬಗ್ಗೆ ಚಿಂತಿಸದ ಕಲಾವಿದರು. ಇರ್ಫಾನ್ ಖಾನ್ ಈ ಮೇಲಿನ ಯಾವ ವರ್ಗಕ್ಕೆ ಸೇರುತ್ತಾನೆ? ಇರ್ಫಾನ್‍ಗೆ ನಿಸ್ಸಂಶಯವಾಗಿ ಎರಡನೇ ವರ್ಗದ ಎಲ್ಲಾ ಗುಣ ಲಕ್ಷಣಗಳು ಇದ್ದವು. ಮೂರನೇ ವರ್ಗದ ಗುಣಲಕ್ಷಣಗಳು ಅವರಲ್ಲಿ ಇದ್ದವು ಎಂಬುದಕ್ಕೆ ಬಿಡಿಯಾಗಿ ಅಲ್ಲೊಂದು ಇಲ್ಲೊಂದು ಕೆಲವು ಸಂಗತಿಗಳು ಸಿಕ್ಕುತ್ತವೆಯಾದರು.., ಬಹುಶ: ಅವರು ಬದುಕಿದ್ದರೆ ಆ ತರಹದ ಒಂದು ಸ್ಥಿತ್ಯಂತರವನ್ನು ಕಾಣಬಹುದಿತ್ತೇನೋ… ಆ ಒಂದು ಸೂಕ್ಷ್ಮ ಮನಸ್ಸು ಅವರಲ್ಲಿ ಇದ್ದದ್ದು ಖಂಡಿತ ಹೌದು. ಇರ್ಫಾನ್ ಕರ್ನಾಟಕದ ‘ಬದನವಾಳು ಸತ್ಯಾಗ್ರಹ’ದಲ್ಲಿ ಭಾಗವಹಿಸಿದಾಗ ಆಡಿದ ಮಾತುಗಳು ಹೀಗಿವೆ.

“I am an actor. The product I make is as much handmade as what an artisan makes. I act by using my own hands, feet, emotions and speech. In this sense, people who make things out of their hands are my brothers and sisters,”

ಮನಸ್ಸು ಭಾರವಾಗಿದೆ ಇರ್ಫಾನ್, ಆದರೂ….. ಪ್ರೀತಿಯ ವಿದಾಯ.

  • ಯದುನಂದನ್ ಕೀಲಾರ, ಸರ್ಕಾರಿ ಕೆಲಸದ ಜೊತೆಗೆ ಸಿನೆಮಾಗಳ ಬಗ್ಗೆ ಧ್ಯಾನಿಸುವ ಯದುನಂದನ್, ಸಿನೆಮಾ ಶಿಕ್ಷಣದ ಹಲವು ಚಳವಳಿಗಳಲ್ಲಿ ಭಾಗಿಯಾಗಿದ್ದಾರೆ.   
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...