Homeಮುಖಪುಟಡ್ರಗ್ಸ್‌ ಹಬ್‌ ಆಗುತ್ತಿದೆಯೇ ಗುಜರಾತ್‌?; ಮತ್ತೆ 600 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ಡ್ರಗ್ಸ್‌ ಹಬ್‌ ಆಗುತ್ತಿದೆಯೇ ಗುಜರಾತ್‌?; ಮತ್ತೆ 600 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

- Advertisement -

ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ರಾಜ್ಯದ ಮೊರ್ಬಿ ಜಿಲ್ಲೆಯಲ್ಲಿ 600 ಕೋಟಿ ರೂ. ಮೌಲ್ಯದ 120 ಕೆ.ಜಿ. ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ತಾರ್ ಹುಸೇನ್ ಅಲಿಯಾಸ್ ಜಬ್ಬಾರ್ ಜೊಡಿಯಾ, ಶಂಸುದ್ದೀನ್ ಹುಸೇನ್ ಸೈಯ್ಯದ್ ಮತ್ತು ಗುಲಾಮ್ ಹುಸೇನ್ ಉಮರ್ ಭಾಗದ್ ಆರೋಪಿಗಳಾಗಿದ್ದು, ಪಾಕಿಸ್ತಾನ್‌ ಮೂಲದಿಂದ ಡ್ರಗ್‌ ಬಂದಿದೆ ಎನ್ನಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಎಟಿಎಸ್ ಕಾರ್ಯಾಚರಣೆ ನಡೆಸಿದೆ.

“ಪಾಕಿಸ್ತಾನದ ದೋಣಿಯಿಂದ ಬಂದ ಡ್ರಗ್‌ಅನ್ನು ಮುಖ್ತಾರ್ ಹುಸೇನ್ ಮತ್ತು ಗುಲಾಮ್ ಭಾಗದ್ ಅವರು ಸ್ವೀಕರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಎಟಿಎಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

“2019ರಲ್ಲಿ 227 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪಾಕಿಸ್ತಾನದ ನಿವಾಸಿ ಜಾಹಿದ್ ಬಶೀರ್ ಬಲೋಚ್ ಅವರು ಈ ಮಾದಕ ದ್ರವ್ಯವನ್ನು ರವಾನಿಸಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ತಾರ್ ಹುಸೇನ್ ಅಲಿಯಾಸ್ ಜಬ್ಬಾರ್ ಜೊಡಿಯ ಅವರು ಜಾಹಿದ್ ಬಶೀರ್ ಬಲೋಚ್ ಅವರೊಂದಿಗೆ ಸಂಪರ್ಕದಲ್ಲಿದ್ದು ಡ್ರಗ್ಸ್ ಇರಿಸಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಎಟಿಎಸ್ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ವಶಕ್ಕೆ ಪಡೆದಿರುವ ಹೆರಾಯಿನ್‌ಅನ್ನು ಆರಂಭದಲ್ಲಿ ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯ ಸಲಾಯಾ ಬಳಿಯ ಕರಾವಳಿ ಪ್ರದೇಶದಲ್ಲಿ ಮುಚ್ಚಿಡಲಾಗಿತ್ತು. ಮೊರ್ಬಿಯ ಜಿಂಜುಡಾ ಗ್ರಾಮಕ್ಕೆ ಸ್ಥಳಾಂತರಿಸುವ ಮೊದಲು ಅದನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಶಿಶ್ ಭಾಟಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ಭಾನುವಾರ ಗುಪ್ತಚರ ಮಾಹಿತಿಯ ಮೇರೆಗೆ ಗುಜರಾತ್ ಎಟಿಎಸ್ ದಾಳಿ ನಡೆಸಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 600 ಕೋಟಿ ಬೆಲೆ ಬಾಳುವ 120 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ” ಎಂದು ಡಿಜಿಪಿ ತಿಳಿಸಿದ್ದಾರೆ. ಇದನ್ನು ಆಫ್ರಿಕನ್ ದೇಶಕ್ಕೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿರಿ: ಗುಜರಾತ್‌: ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ; ಬಿಜೆಪಿ ನಾಯಕರಲ್ಲಿ ಭಿನ್ನಮತ

ಗುಜರಾತ್‌ನಲ್ಲಿ ಹೆಚ್ಚುತ್ತಿವೆ ಹೆರಾಯಿನ್‌ ಪ್ರಕರಣ

ಇತ್ತೀಚಿನ ದಿನಗಳಲ್ಲಿ ಗುಜರಾತ್‌ ರಾಜ್ಯ ಡ್ರಗ್‌ ಹಬ್ ಆಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಅದಾನಿಯವರಿಗೆ ಸೇರಿದ ಮುಂದ್ರಾ ಬಂದರಿನಲ್ಲಿ ಸುಮಾರು 20,000 ಕೋಟಿ ರೂ. ಮೌಲ್ಯದ ಹೆರಾಯಿನ್‌ ಪತ್ತೆಯಾಗಿತ್ತು. ದುರಾದೃಷ್ಟವಶಾತ್‌ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಷ್ಟಾಗಿ ಚರ್ಚೆಯಾಗಲಿಲ್ಲ.

ಕಳೆದ ಸೆಪ್ಟೆಂಬರ್ 15 ರಂದು ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಅಫ್ಘಾನಿಸ್ತಾನದಿಂದ ಬಂದಿದ್ದ ಎರಡು ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದು, ಸುಮಾರು ಮೂರು ಟನ್‌ಗಳ 20 ಸಾವಿರ ಕೋಟಿ ರೂ. ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಂದರಿನ ಅಧಿಕಾರಿಗಳು ಹೇಳಿದ್ದರು.

ಅಷ್ಟೇ ಅಲ್ಲದೆ ಇತ್ತೀಚೆಗೆ ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಮೂವರು ವ್ಯಕ್ತಿಗಳಿಂದ 313.25 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ (methamphetamine) ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ವಶಪಡಿಸಿಕೊಂಡ ಮಾದಕ ದ್ರವ್ಯಗಳು ಪಾಕಿಸ್ತಾನದಿಂದ ಬಂದಿದ್ದು, ಸಮುದ್ರ ಮಾರ್ಗದ ಮೂಲಕ ಗುಜರಾತ್‌ಗೆ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಪ್ರಾಥಮಿಕ ತನಿಖೆ ಹೇಳಿತ್ತು. ಬುಧವಾರ (ನ.10) ನಡೆದ ದಾಳಿಯ ವೇಳೆ ಇಬ್ಬರಿಂದ ವಶಪಡಿಸಿಕೊಂಡ 47 ಪ್ಯಾಕೆಟ್‌ಗಳಲ್ಲಿ 225 ಕೋಟಿ ರೂಪಾಯಿ ಮೌಲ್ಯದ 45 ಕೆಜಿ ಹೆರಾಯಿನ್ ಇತ್ತು ಎಂದು ವಿಧಿವಿಜ್ಞಾನ ವರದಿಯು ದೃಢಪಡಿಸಿದೆ ಎಂದು ಅಧಿಕಾರಿಗಳು ಹೇಳಿದ್ದರು.

ಇದಕ್ಕೂ ಮುನ್ನ, ಮಂಗಳವಾರ (ನ.9) ಪೊಲೀಸರು ಖಚಿತ ಮಾಹಿತಿ ಮೇರೆಗೆ ಖಂಬಾಲಿಯಾ ಪಟ್ಟಣದ ಅತಿಥಿ ಗೃಹದಿಂದ ಮಹಾರಾಷ್ಟ್ರದ ಥಾಣೆ ನಿವಾಸಿ ಸಜ್ಜದ್ ಘೋಸಿ ಎಂಬಾತನನ್ನು ಬಂಧಿಸಿದ್ದರು. ಆತನಿಂದ ಒಟ್ಟು 88.25 ಕೋಟಿ ಮೌಲ್ಯದ 11.483 ಕೆಜಿ ಹೆರಾಯಿನ್ ಮತ್ತು 6.168 ಕೆಜಿ ಮೆಥಾಂಫೆಟಮೈನ್ ಒಳಗೊಂಡ 19 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.


ಇದನ್ನೂ ಓದಿರಿ: ಅದಾನಿ ಮಾಲಿಕತ್ವದ ಬಂದರಿನಲ್ಲಿ 20 ಸಾವಿರ ಕೋಟಿ ರೂ.ಗಳ ಹೆರಾಯಿನ್ ವಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial