‘ಜೈ ಭೀಮ್‌’ ಚಿತ್ರದ ನಾಯಕ ನಟ ಸೂರ್ಯ ಹಾಗೂ ನಿರ್ದೇಶಕ ಟಿ.ಜೆ.ಜ್ಞಾನವೇಲ್‌ ಅವರಿಗೆ ವನ್ನಿಯಾರ್‌ ಸಂಘದ ಅಧ್ಯಕ್ಷ ಲೀಗಲ್‌ ನೋಟೀಸ್ ಕಳುಹಿಸಿದ್ದು, ‘ಜೈ ಭೀಮ್‌’ ಸಿನಿಮಾದಲ್ಲಿ ವನ್ನಿಯಾರ್‌ ಸಮುದಾಯವನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.

“ವಣ್ಣಿಯಾರ್‌ ಸಮುದಾಯವನ್ನು ಅಪಮಾನಿಸಿರುವ ದೃಶ್ಯವನ್ನು ಚಿತ್ರದಿಂದ ತೆಗೆಯಬೇಕು, ಜೊತೆಗೆ ಐದು ಕೋಟಿ ರೂ. ಪರಿಹಾರವನ್ನು ಒದಗಿಸಬೇಕು” ಎಂದು ವಣ್ಣಿಯಾರ್‌ ಸಂಘಟನೆ ಆಗ್ರಹಿಸಿದೆ ಎಂದು ನ್ಯೂಸ್ ಮಿನಿಟ್‌ ವರದಿ ಮಾಡಿದೆ.

ಜೈ ಭೀಮ್‌ ಸಿನಿಮಾ ನಿಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಇರುಳಿಗ ಸಮುದಾಯದ ವ್ಯಕ್ತಿ ರಾಜಾಕಣ್ಣು ಪೊಲೀಸ್‌ ಬಂಧನದಲ್ಲಿದ್ದಾಗ ಕೊಲೆಯಾಗಿದ್ದರ ಕುರಿತು ಚಿತ್ರಿಸಲಾಗಿದ್ದು, ವಿಶ್ಯಾದ್ಯಾಂತ ಅಪಾರ ಜನಮನ್ನಣೆಗೆ ‘ಜೈಭೀಮ್‌’ ಪಾತ್ರವಾಗಿದೆ. ಜಸ್ಟೀಸ್‌ ಕೆ.ಚಂದ್ರು ಅವರು 1993ರಲ್ಲಿ ವಕೀಲರಾಗಿದ್ದಾಗ ಹೋರಾಡಿದ ಕಥನವನ್ನು ಈ ಸಿನಿಮಾ ತೆರೆದಿಟ್ಟಿದೆ.

ಚಿತ್ರವು ನೈಜ ಕಥೆಯನ್ನು ಆಧರಿಸಿದ್ದರೂ ಕೊಲೆಯಾದ ವ್ಯಕ್ತಿ ರಾಜಾಕಣ್ಣುಗೆ ಚಿತ್ರಹಿಂಸೆ ನೀಡುವ ಪೊಲೀಸ್ ಪಾತ್ರವನ್ನು ಉದ್ದೇಶಪೂರ್ವಕವಾಗಿ ವನ್ನಿಯಾರ್ ಜಾತಿಗೆ ಸೇರಿದವನೆಂದು ಚಿತ್ರಿಸಲಾಗಿದೆ ಎಂದು ವನ್ನಿಯಾರ್ ಸಂಘಮ್‌ ಅಧ್ಯಕ್ಷ ಪು.ತಾ.ಅರುಲ್ಮೋಳಿ ದೂರಿದ್ದಾರೆ.

ಇದನ್ನೂ ಓದಿರಿ: ಸುಚಿತ್ರ ಫಿಲ್ಮ್‌ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ: ಕಾನೂನು ಸಮರಕ್ಕೆ ನಿರ್ಧಾರ

“ನೈಜ ಘಟನೆಯಲ್ಲಿನ ನಿಜವಾದ ಹೆಸರುಗಳನ್ನೇ ಉಳಿಸಿಕೊಂಡಿರುವುದಾಗಿ ಹೇಳಲಾಗುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಸಬ್ ಇನ್‌ಸ್ಪೆಕ್ಟರ್ ಹೆಸರನ್ನು ಬದಲಾಯಿಸಲಾಗಿದೆ. ನೈಜ ಕಥೆಯಲ್ಲಿ ರಾಜಾಕಣ್ಣು ಸಾವಿಗೆ ಕಾರಣವಾಗುವ ಸಬ್-ಇನ್‌ಸ್ಪೆಕ್ಟರ್ ಹೆಸರು ಆಂಥೋನಿಸಾಮಿ ಎಂಬುದಾಗಿದೆ. ಆದರೆ ಇಲ್ಲಿ ತಿರುಚಲಾಗಿದೆ” ಎಂದು ನೋಟೀಸ್ ಉಲ್ಲೇಖಿಸಿದೆ.

ಚಿತ್ರ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಜಾತಿಯನ್ನು ಉಲ್ಲೇಖಿಸಲು ಯತ್ನಿಸಿದ್ದಾರೆ. ವನ್ನಿಯಾರ್‌ ಸಮುದಾಯವನ್ನು ಪ್ರತಿನಿಧಿಸುವ “ಅಗ್ನಿ ಕುಡಮ್” ಚಿಹ್ನೆಯನ್ನು ಕ್ಯಾಲೆಂಡರ್‌ನೊಂದಿಗೆ ತೋರಿಸಲಾಗಿದೆ ಎಂದು ಸಂಗಮ್ ಅಧ್ಯಕ್ಷರು ಆರೋಪಿಸಿದ್ದಾರೆ.

ಪೊಲೀಸ್ ಪಾತ್ರವನ್ನು ವನ್ನಿಯಾರ್ ಸಮುದಾಯದ ಸದಸ್ಯ ಎಂದು ಬಿಂಬಿಸಲು ಇದನ್ನು ಮಾಡಲಾಗಿದೆ ಎಂದು ನೋಟಿಸ್ ಹೇಳಿಕೊಂಡಿದೆ. ಚಲನಚಿತ್ರ ನಿರ್ಮಾಪಕರು, “ವನ್ನಿಯಾರ್ ಸಂಗಮ್‌ನ ಸದಸ್ಯರನ್ನು ದೂಷಿಸುವ ಮತ್ತು ಇಡೀ ವನ್ನಿಯಾರ್ ಸಮುದಾಯದ ಇಮೇಜ್, ಪ್ರತಿಷ್ಠೆಗೆ ಹಾನಿ ಮಾಡುವ ದುರುದ್ದೇಶದಿಂದ ವರ್ತಿಸಿದ್ದಾರೆ” ಎಂದು ಅಧ್ಯಕ್ಷರು ದೂರಿದ್ದಾರೆ.

ನಟ ಸೂರ್ಯ ಅವರ ಪತ್ನಿ ನಟಿ ಜ್ಯೋತಿಕಾ ಅವರು ಚಲನಚಿತ್ರದ ನಿರ್ಮಾಪಕರಾಗಿದ್ದು, 2D ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ಸಿನಿಮಾವನ್ನು ನಿರ್ಮಿಸಿದೆ. ಈ ಸಂಸ್ಥೆಯನ್ನು ಸೂರ್ಯ ಮತ್ತು ಜ್ಯೋತಿಕಾ ನಡೆಸುತ್ತಿದ್ದಾರೆ. ಜೈ ಭೀಮ್‌ ಸಿನಿಮಾವು ಅಮೇಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಬರುವ ರಾಜಾಕಣ್ಣು, ವಕೀಲ ಚಂದ್ರು ಮತ್ತು ಪೊಲೀಸ್ ಅಧಿಕಾರಿ ಪೆರುಮಾಳ್‌ಸಾಮಿ ಅವರ ಹೆಸರುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ, ಲಾಕಪ್‌ ಡೆತ್‌ನಲ್ಲಿ ಭಾಗಿಯಾಗಿರುವ ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ನ ಹೆಸರನ್ನು ಉದ್ದೇಶಪೂರ್ವಕವಾಗಿ ಅಂತೋನಿಸಾಮಿಯ ಬದಲಾಗಿ ಗುರುಮೂರ್ತಿ ಎಂದು ಬದಲಾಯಿಸಲಾಗಿದೆ, ಅವರನ್ನು ಆಗಾಗ್ಗೆ ಗುರು ಕರೆಯಲಾಗುತ್ತದೆ. ಈ ಹೆಸರು ನಮ್ಮ ಸಮುದಾಯದ ಪ್ರಮುಖರೊಬ್ಬರನ್ನು ಪ್ರತಿನಿಧಿಸುತ್ತಿದೆ ಎಂದು ವನ್ನಿಯಾರ್‌ ಸಂಘಮ್‌ ಪ್ರತಿಪಾದಿಸಿದೆ.

ಇದನ್ನೂ ಓದಿರಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…

“ಸಿನಿಮಾ ಮತ್ತು ನಿಜ ಜೀವನದಲ್ಲಿ ಖಳನಾಗಿರುವ ಗುರುಮೂರ್ತಿ ಎಂಬುವವರು ವನ್ನಿಯಾರ್‌ ಸಮುದಾಯಕ್ಕೆ ಸೇರಿದವರು ಎಂದು ವಿವಿಧ ಸಂಕೇತಗಳ ಮೂಲಕ ಸಿನಿಮಾದಲ್ಲಿ ಬಿಂಬಿಸಲು ಹೊರಟಿದ್ದೀರಿ ಎಂದು ನಮ್ಮ ಕಕ್ಷಿದಾರರು ಪ್ರತಿಪಾದಿಸಿದ್ದಾರೆ. ಆದರೆ, ನೈಜವಾಗಿ ಆ ಸಬ್ ಇನ್ಸ್‌ಪೆಕ್ಟರ್ ವನ್ನಿಯಾರ್ ಸಮುದಾಯಕ್ಕೆ ಸೇರಿರಲಿಲ್ಲ” ಎಂದು ನೋಟಿಸ್‌ನಲ್ಲಿ ವಕೀಲರು ಹೇಳಿದ್ದಾರೆ.

‘ಚಲನಚಿತ್ರದಲ್ಲಿ ಆಗಿರುವ ಈ ತಪ್ಪು, ಸಾಂದರ್ಭಿಕ, ಅಜಾಗರೂಕ ಆಥವಾ ಅರಿಯದೇ ಆದದ್ದಲ್ಲ. ಸಮಾಜದಲ್ಲಿ ವನ್ನಿಯಾರ್ ಸಮುದಾಯದ ಜನರ ಬಗೆಗಿನ ಇಮೇಜ್‌ಅನ್ನು ಹಾಳು ಮಾಡುವ ಉದ್ದೇಶದಿಂದ ಮತ್ತು ಇಡೀ ಸಮುದಾಯವನ್ನು ದೂಷಿಸುವ ದೃಷ್ಟಿಯಿಂದ ಮಾತ್ರ ದೃಶ್ಯವನ್ನು ಸೇರಿಸಲಾಗಿದೆ’ ಎಂದು ವಾದಿಸಲಾಗಿದೆ.

ವನ್ನಿಯಾರ್ ಜಾತಿಯ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪಕ್ಷವಾದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ವನ್ನಿಯಾರ್‌ಗಳನ್ನು ಅವಮಾನಿಸಿದ ಆರೋಪ ಮಾಡಿ ಸೂರ್ಯ ಮೇಲೆ ದಾಳಿ ಮಾಡಿದೆ. ಪಿಎಂಕೆ ಮುಖ್ಯಸ್ಥ ಹಾಗೂ ಕೇಂದ್ರದ ಮಾಜಿ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಈ ಆರೋಪದ ರೂವಾರಿಯಾಗಿದ್ದಾರೆ.

ಸೂರ್ಯ ಪ್ರತಿಕ್ರಿಯೆ

ಮಾಜಿ ಸಚಿವ ರಾಮದಾಸ್‌ ಅವರಿಗೆ ನಟ ಸೂರ್ಯ ಪ್ರತಿಕ್ರಿಯೆ ನೀಡಿದ್ದು, “ಚಿತ್ರದ ಮೂಲಕ ಆಡಳಿತರೂಢರ ವಿರುದ್ಧ ದನಿ ಎತ್ತಲಾಗಿದೆ. ಇದನ್ನು ರಾಜಕೀಯಗೊಳಿಸಿ ವಿಷಯವನ್ನು ತಿರುಚಬಾರದು. ನಿವೃತ್ತ ನ್ಯಾಯಮೂರ್ತಿ ಚಂದ್ರು ಅವರು ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟವನ್ನು ಹೇಗೆ ನಡೆಸಿದರು ಎಂಬುದನ್ನು ಸಿನಿಮಾ ಹೇಳುತ್ತದೆ. ಸ್ಥಳೀಯ ಜನರು ತಮ್ಮ ದೈನಂದಿನ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಸಿನಿಮಾ ಪ್ರಯತ್ನಿಸಿದೆ” ಎಂದಿದ್ದಾರೆ.

“ನಿಮ್ಮ ಪತ್ರದಲ್ಲಿ ನೀವು ಉಲ್ಲೇಖಿಸಿರುವಂತೆ ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಅವಮಾನಿಸುವ ಯಾವುದೇ ಉದ್ದೇಶವನ್ನು ನನ್ನ ತಂಡವಾಗಲಿ ಅಥವಾ ನಾನಾಗಲೀ ಹೊಂದಿಲ್ಲ. ತಪ್ಪುಗಳನ್ನು ತೋರಿಸಿದ ತಕ್ಷಣ ತಿದ್ದುಪಡಿಗಳನ್ನು ಕೈಗೊಳ್ಳಲಾಗಿದೆ. ಇದು ನಿಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

“ಕೆಲವರು ತೋರಿಸಿದ ಸಣ್ಣ ದೋಷವನ್ನು ಸಹ ನಾವು ಸರಿಪಡಿಸಿದ್ದೇವೆ ಎಂದು ನೀವು ನೆನಪಿಸಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದಿರುವ ಸೂರ್ಯ, ಕ್ಯಾಲೆಂಡರ್‌ನಲ್ಲಿ “ಅಗ್ನಿ ಕುಡಮ್” ಚಿಹ್ನೆಯನ್ನು ಬದಲಾಯಿಸಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ.

“ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾವುದೇ ಸಮುದಾಯವನ್ನು ನೋಯಿಸುವ ಹಕ್ಕು ಯಾರಿಗೂ ಇಲ್ಲ ಎಂಬ ನಿಮ್ಮ ಪತ್ರದಲ್ಲಿನ ನಿಮ್ಮ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಅದೇ ರೀತಿಯಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ದಾಳಿಗೊಳಗಾದಂತೆ ಕಾಪಾಡಬೇಕೆಂಬುದನ್ನು ಎಂದು ನೀವು ಒಪ್ಪುತ್ತೀರಿ ಎಂದು ನಾನು ನಂಬುತ್ತೇನೆ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.


ಇದನ್ನೂ ಓದಿರಿ: ನ.19 ರಿಂದ ’ಸಲಗ’ದಲ್ಲಿ ಸಿದ್ಧಿ ಬುಡಕಟ್ಟಿನ ಟಿಣಿಂಗ ಮಿಣಿಂಗ ಟಿಶ್ಯಾ ಹಾಡು ಸೇರ್ಪಡೆ

LEAVE A REPLY

Please enter your comment!
Please enter your name here