Homeಮುಖಪುಟಸುಚಿತ್ರ ಫಿಲ್ಮ್‌ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ: ಕಾನೂನು ಸಮರಕ್ಕೆ ನಿರ್ಧಾರ

ಸುಚಿತ್ರ ಫಿಲ್ಮ್‌ ಸೊಸೈಟಿ ಉಳಿವಿಗಾಗಿ ಮೌನಪ್ರತಿಭಟನೆ: ಕಾನೂನು ಸಮರಕ್ಕೆ ನಿರ್ಧಾರ

- Advertisement -
- Advertisement -

ಭಾರತದ ಪ್ರತಿಷ್ಟಿತ ಫಿಲ್ಮ್‌ ಸೊಸೈಟಿಗಳಲ್ಲಿ ಒಂದಾದ ಇದೇ ವರ್ಷ ಸುವರ್ಣ ಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವ ಸುಚಿತ್ರ ಫಿಲ್ಮ್‌ ಸೊಸೈಟಿಯ ಉಳಿವಿಗಾಗಿ ಚಲನಚಿತ್ರ ಕ್ಷೇತ್ರದ ಗಣ್ಯರು, ಸಾಹಿತಿಗಳು, ಕಲಾವಿದರು ಬೆಂಗಳೂರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಸುಚಿತ್ರ ಸಿನಿಮಾ ಮತ್ತು ಕಲ್ಚರಲ್‌ ಅಕಾಡೆಮಿ, ಫಿಲ್ಮ್‌ ಸೊಸೈಟಿ ಎದುರು ಸೇರಿದ ಚಿತ್ರಕರ್ಮಿಗಳು, ಸೋನೆ ಮಳೆಯ ನಡುವೆಯೇ ಪ್ರತಿಭಟನೆ ನಡೆಸಿದರು. ಸುಚಿತ್ರ ಫಿಲ್ಮ್‌‌ ಸೊಸೈಟಿಯನ್ನು ಹೊರದೂಡಲು ಸುಚಿತ್ರ ಟ್ರಸ್ಟ್‌ ಯತ್ನಿಸುತ್ತಿರುವುದನ್ನು ಖಂಡಿಸಿದರು.

ಫಿಲ್ಮ್‌ ಸೊಸೈಟಿಯ ಅಧ್ಯಕ್ಷರು ಟ್ರಸ್ಟ್ ಶಾಶ್ವತ ಸದಸ್ಯರಾಗಿಯೇ ಮುಂದುವರಿಯಬೇಕು. ಸುಚಿತ್ರ ಪ್ರಾಂಗಣದಲ್ಲಿ ನಡೆಸಲಾಗುವ ಚಟುವಟಿಕೆಗಳಲ್ಲಿ ಫಿಲ್ಮ್‌‌ ಸೊಸೈಟಿಗೆ ಪ್ರಾತಿನಿಧ್ಯ ಇರಬೇಕು. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಾರ್ಯಕಾರಿ ಸದಸ್ಯರುಗಳೊಂದಿಗೆ ಸೇರಿ ಸಭೆ ನಡೆಸಿ ಬಾಡಿಗೆ ದರ ವಿಧಿಸುವುದರ ಬಗ್ಗೆ ಚರ್ಚೆ ನಡೆಸಬೇಕು. ಟ್ರಸ್ಟ್‌‌ ಹುಟ್ಟಿಗೆ ಕಾರಣವಾದ ಸುಚಿತ್ರ ಫಿಲ್ಮ್‌‌ ಸೊಸೈಟಿಯು ಯಾವುದೇ ಅಡೆ ತಡೆ ಇಲ್ಲದೇ ಸುಚಿತ್ರ ಪ್ರಾಂಗಣದಲ್ಲಿ ಚಟುವಟಿಕೆಗಳನ್ನು ನಡೆಸುವಂತಾಗಬೇಕು ಎಂದು ಆಗ್ರಹಿಸಲಾಯಿತು.

ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸುರೇಶ್ ಹೆಬ್ಳಿಕರ್‌, ಡಾ.ವಿಜಯಮ್ಮ, ವಿವೇಕ್‌ ಶ್ಯಾನ್‌ಭಾಗ್‌, ಸಿರಿಮನೆ ನಾಗರಾಜ್‌, ರವೀಂದ್ರನಾಥ್‌ ಗುರು, ಕೃಷ್ಣಮೂರ್ತಿ ಸಿ.ಆರ್‌., ದೀಪಾ ಗಣೇಶ್‌, ಬಿ.ಎಸ್‌.ಮನೋಹರ್‌, ಗಣೇಶ್‌ ಶೆಣೈ, ಮುರಳಿ ಪಿ.ಬಿ., ರಮೇಶ್‌ ಶಿವಮೊಗ್ಗ, ಸಿ.ಎಸ್.ಕೃಷ್ಣಪ್ರಸಾದ್‌, ಸುರೇಂದ್ರ, ವಿಮಲಾ, ವೀರಸಂಗಯ್ಯ ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಹಾಜರಿದ್ದು, ಹೋರಾಟವನ್ನು ಬೆಂಬಲಿಸಿದರು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ಯತ್ನಿಸಿರುವ ಘಟನೆಯೂ ನಡೆಯಿತು.

ಇದನ್ನೂ ಓದಿರಿ: ಬಹುಜನ ಭಾರತ; ಅವಸಾನಗೊಂಡ ಆತ್ಮಸಾಕ್ಷಿಗಳು ಮತ್ತು ’ಜೈಭೀಮ್’ ಸಿನೆಮಾ

ಬೆಳಿಗ್ಗೆ 10.20ಕ್ಕೆ ಮೌನಪ್ರತಿಭಟನೆ ಆರಂಭವಾಯಿತು. 11.40 ಮಳೆ ಬರಲು ಶುರುವಾಯಿತು. ಆ ಸಂದರ್ಭದಲ್ಲಿ ಮಾತನಾಡಿದ ಫಿಲ್ಮ್‌ ಸೊಸೈಟಿಯ ಅಧ್ಯಕ್ಷರಾದ ಬಿ.ಸುರೇಶ್ ಅವರು, ಸುಚಿತ್ರ ಟ್ರಸ್ಟ್‌ ಮಾಡಿರುವ ಅನ್ಯಾಯವನ್ನು ಪ್ರಸ್ತಾಪಿಸಿದರು. ಟ್ರಸ್ಟ್‌ನ ಯಾವುದೇ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಲಿಲ್ಲ. ಕಾನೂನು ಸಮರ ನಡೆಸುವುದಾಗಿ ಬಿ.ಸುರೇಶ್ ತಿಳಿಸಿದರು.

ಬೆಂಗಳೂರಿನ ಚಾಮರಾಜಪೇಟೆಯ ಚಿಕ್ಕಕೋಣೆಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯು 1971ರಲ್ಲಿ ಕೆಲವು ಸಿನೆಮಾ ಆಸಕ್ತರು ಸೇರಿ ಆರಂಭಿಸಿದರು. ಸಿನೆಮಾ ಪ್ರದರ್ಶನಕ್ಕಾಗಿ ವಿವಿಧ ಚಿತ್ರಮಂದಿರಗಳನ್ನು ಹುಡುಕಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾಗ ಕರ್ನಾಟಕ ಸರ್ಕಾರವು ಬನಶಂಕರಿಯಲ್ಲಿ ಸುಚಿತ್ರ ಫಿಲ್ಮ್‌ ಸೊಸೈಟಿಯ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಒಂದು ಸ್ವಂತ ಚಿತ್ರಮಂದಿರವನ್ನು ಕಟ್ಟಿಕೊಳ್ಳಲು ಒಂದು ಸಿಎ ನಿವೇಶನವನ್ನು ಬಿಡಿಎ ಮುಖಾಂತರ ಗುತ್ತಿಗೆ ಆಧಾರದಲ್ಲಿ ಕೊಡಿಸಿತು. ನಿವೇಶನವನ್ನು ನೋಡಿಕೊಳ್ಳಲು ಒಂದು ಟ್ರಸ್ಟ್‌ ಮಾಡಿಕೊಳ್ಳಬೇಕೆಂದು ಸರ್ಕಾರ ಸೂಚಿಸಿತು. ಅದಕ್ಕನುಸಾರವಾಗಿ ಸುಚಿತ್ರ ಫಿಲ್ಮ್‌‌ ಸೊಸೈಟಿಯು 1979ರಲ್ಲಿ ಸುಚಿತ್ರ ಸಿನೆಮಾ ಅಕಾಡೆಮಿ ಎಂಬ ಟ್ರಸ್ಟ್ ಒಂದನ್ನು ಸ್ಥಾಪಿಸಿತು.

ಅಕಾಡೆಮಿಯ ಪ್ರಾರಂಭದ ಟ್ರಸ್ಟಿಗಳು ಬಹುತೇಕ ಸುಚಿತ್ರ ಫಿಲ್ಮ್‌‌ ಸೊಸೈಟಿಯಿಂದ ಬಂದವರೇ ಆಗಿದ್ದರಿಂದ ಎರಡೂ ಸಂಸ್ಥೆಗಳು ಅಂದಿನಿಂದಲೂ ಪರಸ್ಪರ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತಾ ಬಂದಿದ್ದವು. ಸುಚಿತ್ರ ಟ್ರಸ್ಟ್‌ ಹಾಗೂ ಸೊಸೈಟಿ ಕಾಲಕಾಲಕ್ಕೆ ಬದಲಾವಣೆಗಳನ್ನೂ ಕಂಡಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸುಚಿತ್ರ ಟ್ರಸ್ಟ್‌, ಸೊಸೈಟಿಯನ್ನು ಹೊರಗೆ ಇಡುವ ಪ್ರಯತ್ನಗಳನ್ನು ಮಾಡುತ್ತಿರುವುದು ವಿವಾದಗಳಿಗೆ ಕಾರಣವಾಗಿದೆ. ಟ್ರಸ್ಟ್‌ ಹುಟ್ಟಿಗೆ ಕಾರಣವಾದ ಸೊಸೈಟಿಯನ್ನೇ ಹೊರದಬ್ಬಲು ಯತ್ನಿಸಲಾಗುತ್ತಿದೆ ಎಂದು ಸೊಸೈಟಿಯ ಸದಸ್ಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಸುರೇಶ್‌, “2015ರವರೆಗೆ ಸುಚಿತ್ರ ಟ್ರಸ್ಟ್‌‌ನ ಆಡಳಿತಾತ್ಮಕ ವೆಚ್ಚವನ್ನು ಸುಚಿತ್ರ ಫಿಲ್ಮ್‌‌ ಸೊಸೈಟಿಯೇ ಭಾಗಶಃ ಭರಿಸುತ್ತಿದ್ದುದರಿಂದ ಅಕಾಡೆಮಿಯು ಫಿಲ್ಮ್‌ ಸೊಸೈಟಿಗೆ ಚಿತ್ರಪ್ರದರ್ಶನಕ್ಕೆ ಸಭಾಂಗಣದ ಬಾಡಿಗೆ ಕೇಳುತ್ತಿರಲಿಲ್ಲ. ಸುಚಿತ್ರ ಅಕಾಡೆಮಿಯು 2015ರಲ್ಲಿ ಪುರವಂಕರ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು, ಆ ಸಂಸ್ಥೆಯಿಂದ ಸಿಎಸ್‌ಆರ್‌ ನಿಧಿ ಮೂಲಕ ದೇಣಿಗೆಯನ್ನು ಪಡೆದು ಕಟ್ಟಡವನ್ನು ನವೀಕರಣ ಮಾಡಿತು. ಆಗ ಸುಚಿತ್ರ ಸಿನೆಮಾ ಮತ್ತು ಕಲ್ಚರಲ್‌‌ ಅಕಾಡೆಮಿ ಎಂದಿದ್ದ ಟ್ರಸ್ಟ್ ಹೆಸರನ್ನು ಪುರವಂಕರ ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಎಂದು ಬದಲಾಯಿಸಲಾಯಿತು. ಆವರೆಗೆ ಟ್ರಸ್ಟ್‌‌ನ ಖಾಯಂ ಸದಸ್ಯತ್ವ ಇದ್ದ ಸುಚಿತ್ರ ಫಿಲ್ಮ್‌‌ ಸೊಸೈಟಿಯ ಅಧ್ಯಕ್ಷರನ್ನು ಆಹ್ವಾನಿತರು ಎಂದು ಬದಲಿಸಲಾಯಿತು. ಅಲ್ಲದೇ ಸೋಸೈಟಿಯ ಅಧ್ಯಕ್ಷರನ್ನು ಯಾವುದೇ ಸೂಚನೆ ಇಲ್ಲದೆ ಟ್ರಸ್ಟ್‌ನಿಂದ ಹೊರಹಾಕಲಾಯಿತು” ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬಿ.ಸುರೇಶ್‌‌ ಮಾತನಾಡಿದರು.

“ನಂತರದ ಬೆಳವಣಿಗೆಯಲ್ಲಿ ಸುಚಿತ್ರ ಟ್ರಸ್ಟ್ ಸಭಾಂಗಣಗಳ ಬಾಡಿಗೆ ದರ ಹೆಚ್ಚಳ ಮಾಡಿದೆ, ಸುಚಿತ್ರ ಫಿಲ್ಮ್‌‌ ಸೊಸೈಟಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಹಿಂಪಡೆದಿದೆ, ಇದರಿಂದಾಗಿ ಸಭಾಂಗಣದ ಬಾಡಿಗೆಯು ಮೂರು ಪಟ್ಟು ಹೆಚ್ಚಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಯ ಕಚೇರಿ ನಡೆಸಲು ಪ್ರತಿ ತಿಂಗಳು 50,000 ರೂ.ಗಳನ್ನು ದೇಣಿಗೆಯಾಗಿ ನೀಡಬೇಕೆಂದು ತಿಳಿಸಲಾಗಿದೆ. ಸದಸ್ಯತ್ವದ ಹಣದಲ್ಲಿಯೇ ನಡೆಯಬೇಕಾದ ಫಿಲ್ಮ್‌‌ ಸೊಸೈಟಿಗೆ ಈ ದುಬಾರೀ ದರ ಆಘಾತ ತಂದಿದೆ.  ಕಳೆದ 9 ತಿಂಗಳಿನಿಂದ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಪ್ರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲಾಗದಂತಾಗಿದೆ” ಎಂದು ಹೇಳಿದರು.

“2021ರ ಮಾರ್ಚ್ 24ರವರೆಗೆ ಹಳೆಯ ದರದಲ್ಲಿ ಬಾಡಿಗೆಯನ್ನು ಕೊಟ್ಟಿದ್ದರೂ, ಪರಿಷ್ಕೃತ ದರದಂತೆ ಬಾಡಿಗೆಯನ್ನು ನೀಡಲು ಮತ್ತು ಸುಚಿತ್ರ ಕಚೇರಿಯ ಬಳಕೆಗಾಗಿ ತಿಂಗಳಿಗೆ 50,000 ರೂ. ನಂತೆ ಜನವರಿ 21ರಿಂದ, ಒಟ್ಟು 7 ಲಕ್ಷ ರೂಪಾಯಿಗಳನ್ನು ಕೊಡಲು ಪತ್ರ ಮುಖೇನ ಒತ್ತಾಯಿಸಲಾಗುತ್ತಿದೆ. (ಇದರಲ್ಲಿ ಫಿಲ್ಮ್‌ ಸೊಸೈಟಿಯು ಈ ಹಿಂದೆ ಕೋವಿಡ್ ಸಂಕಷ್ಟದ ಕಾಲದಲ್ಲಿ ನೀಡಿದ 2 ಲಕ್ಷ ರೂ.ಗಳ ಮುಂಗಡ ಹಣವನ್ನು ಸಹ ಮುರಿದುಕೊಳ್ಳಲಾಗಿದೆ.) ಜೊತೆಗೆ ಎರಡು ಲಾಯರ್ ನೋಟೀಸ್ ಸಹ ಸುಚಿತ್ರ ಫಿಲ್ಮ್‌ ಸೊಸೈಟಿಗೆ ಸುಚಿತ್ರ ಟ್ರಸ್ಟ್ ಕಳುಹಿಸಿದೆ” ಎಂದು ಮಾಹಿತಿ ನೀಡಿದರು.

“ಸುಚಿತ್ರ ಫಿಲ್ಮ್‌ ಸೊಸೈಟಿಯನ್ನು ಟ್ರಸ್ಟ್‌ ಜಾಗದಲ್ಲಿ ನಡೆಸುತ್ತಿದ್ದೀರಿ. ತಿಂಗಳಿಗೆ 50,000 ರೂಪಾಯಿ ಕೊಡಬೇಕು ಎಂದು ಲಾಯರ್‌ ನೋಟೀಸ್ ಕಳುಹಿಸಲಾಗಿದೆ. ವರ್ಷಕ್ಕೆ 6,00,000 ರೂಪಾಯಿ ಬಾಡಿಗೆಯನ್ನು ಕಟ್ಟಬೇಕಾಗುತ್ತದೆ. ಸುಚಿತ್ರ ಫಿಲ್ಮ್‌ ಸೊಸೈಟಿಗೆ ವರ್ಷಕ್ಕೆ ಬರುವ ಆದಾಯವೇ ನಾಲ್ಕು ಲಕ್ಷ ಅಥವಾ ನಾಲ್ಕೂವರೆ ಲಕ್ಷ ರೂ. ದಾಟುವುದಿಲ್ಲ. ಬರುವ ಹಣವನ್ನೆಲ್ಲ ಬಾಡಿಗೆ ಕಟ್ಟಿದರೆ ಕಾರ್ಯಕ್ರಮಗಳನ್ನು ಮಾಡುವುದು ಹೇಗೆ?” ಎಂದು ಪ್ರಶ್ನಿಸಿದರು.


ಇದನ್ನೂ ಓದಿರಿ: ಅಪ್ಪು ಫೋಟೋ ಮುಂದೆ ಶಾಂಪೇನ್ ಸಂಭ್ರಮ: ಕ್ಷಮೆಯಾಚಿಸಿದ ನಿರ್ದೇಶಕ, ನಟ, ನಟಿಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...