Homeಮುಖಪುಟಗುಜರಾತ್‌: ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ; ಬಿಜೆಪಿ ನಾಯಕರಲ್ಲಿ ಭಿನ್ನಮತ

ಗುಜರಾತ್‌: ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ; ಬಿಜೆಪಿ ನಾಯಕರಲ್ಲಿ ಭಿನ್ನಮತ

- Advertisement -
- Advertisement -

ಗುಜರಾತ್ ರಾಜ್ಯದಲ್ಲಿನ ಕೆಲವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ ಹೇರುವ ಸುದ್ದಿ ಹೊರಬಿದ್ದ ಬಳಿಕ, ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ಗುಜರಾತ್‌ನಲ್ಲಿ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಮಾಂಸಾಹಾರ ಮಳಿಗೆಗಳಿಗೆ ನಿರ್ಬಂಧ ಹೇರಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿದ್ದಾರೆಂಬ ಸುದ್ದಿಗಳು ಹೊರಬಿದ್ದಿದ್ದವು.

ಬಿಜೆಪಿಯ ರಾಜ್ಯ ಮುಖ್ಯಸ್ಥ ಸಿ.ಆರ್.ಪಾಟೀಲ್ ಅವರು, “ವೈಯಕ್ತಿಕ ನಂಬಿಕೆಗಳ” ಆಧಾರದ ಮೇಲೆ ಪ್ರಕಟಣೆಗಳನ್ನು ಬದಿಗಿರಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಆದರೆ ವಡೋದರಾ, ರಾಜ್‌ಕೋಟ್ ಮತ್ತು ಭಾವನಗರ ಸ್ಥಳೀಯ ಸಂಸ್ಥೆಗಳು ಬೀದಿಬದಿ ತೆರೆದಿಟ್ಟು ಮಾಂಸಾಹಾರ ಮಾರುವಂತಿಲ್ಲ ಎಂದಿವೆ. ಇದೇ ರೀತಿಯ ನಿರ್ಧಾರವನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ರಾಜಕೀಯ ಕಾರ್ಯಕಾರಿಯೊಬ್ಬರು ಕೈಗೊಂಡಿದ್ದಾರೆ.

ವಡೋದರಾ ನಾಗರಿಕ ಸಂಸ್ಥೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಗುರುವಾರ, ಮಾಂಸಾಹಾರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಲ್ಲಿಸಲು ಆಹಾರ ಮಳಿಗೆಳಿಗೆ 15 ದಿನಗಳ ಗಡುವನ್ನು ನಿಗದಿಪಡಿಸಿದ್ದರು. ರಾಜ್‌ಕೋಟ್ ನಗರದ ಮೇಯರ್ ಇದೇ ರೀತಿಯ ಘೋಷಣೆ ಮಾಡಿದ ಒಂದು ದಿನದ ನಂತರ ಪಟೇಲ್‌ರ “ಮೌಖಿಕ ಸೂಚನೆ” ಹೊರಬಿದ್ದಿತ್ತು. “ಟ್ರಾಫಿಕ್ ದಟ್ಟಣೆ”, “ಧಾರ್ಮಿಕ ಭಾವನೆಗಳಿಗೆ ಧಕ್ಕೆ” ಆಧಾರದಲ್ಲಿ ಈ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಜರುಗಿಸಲು ಮುಂದಾಗಿವೆ ಎನ್ನಲಾಗಿದೆ.

ಇದನ್ನೂ ಓದಿರಿ: ವಡೋದರಾ: ಮಾಂಸಾಹಾರವನ್ನು ಬೀದಿಯಲ್ಲಿ ಪ್ರದರ್ಶಿಸದಂತೆ ಸೂಚನೆ!

ಆದರೆ ಸಿ.ಆರ್‌.ಪಾಟೀಲ್ ಅವರು ಸಂಡೇ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯಿಸಿ, “ನಾನು ವಡೋದರಾ ಮತ್ತು ರಾಜ್‌ಕೋಟ್ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಾಂಸಾಹಾರದ ಗಾಡಿಗಳನ್ನು ಬೀದಿಗಳಿಂದ ತೆಗೆಯದಂತೆ ಅವರಿಗೆ ಹೇಳಿದ್ದೇನೆ. ಇದು ಮುಖಂಡರೊಬ್ಬರ ವೈಯಕ್ತಿಕ ಅಭಿಪ್ರಾಯವಾಗಿದ್ದು, ರಾಜ್ಯ ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಇದನ್ನು ರಾಜ್ಯಾದ್ಯಂತ ಜಾರಿಗೆ ತರುವುದಿಲ್ಲ” ಎಂದಿದ್ದಾರೆ. ರಾಜ್ಯದ ಎಲ್ಲಾ ಎಂಟು ಮುನ್ಸಿಪಲ್ ಕಾರ್ಪೊರೇಷನ್‌ಗಳು ಬಿಜೆಪಿಯ ಆಡಳಿತದಲ್ಲಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ರಸ್ತೆಗಳಲ್ಲಿ ಮಾಂಸಾಹಾರ ಮಾರಾಟವನ್ನು ನಿಷೇಧಿಸುವಂತೆ ಎಎಂಸಿ ಕಂದಾಯ ಸಮಿತಿ ಅಧ್ಯಕ್ಷ ಜೈನಿಕ್ ವಕೀಲ್ ಅವರು ಶನಿವಾರ ಪಾಲಿಕೆ ಆಯುಕ್ತರು ಮತ್ತು ಸ್ಥಾಯಿ ಸಮಿತಿಗೆ ಪತ್ರ ಬರೆದಿದ್ದಾರೆ.

“ಗುಜರಾತ್‌ನ ಗುರುತು ಮತ್ತು ಕರ್ಣಾವತಿ (ಅಹಮದಾಬಾದ್) ನಗರದ ಸಾಂಸ್ಕೃತಿಕ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು, ಮಾಂಸಾಹಾರವನ್ನು ನಗರದ ಸಾರ್ವಜನಿಕ ರಸ್ತೆಗಳು, ಧಾರ್ಮಿಕ ಮತ್ತು ಶೈಕ್ಷಣಿಕ ಸ್ಥಳಗಳಲ್ಲಿ ಇಡದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ರಸ್ತೆಗಳಲ್ಲಿ ಸಂಚರಿಸದಂತಾಗಿದೆ. ಇದರ ಜತೆಗೆ ಇಲ್ಲಿನ ನಿವಾಸಿಗಳ ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಿದೆ. ಈ ನಿರ್ಬಂಧವು ಸ್ವಚ್ಛತೆ, ಜೀವನ ಮತ್ತು ನಮ್ಮ ಸಂಸ್ಕೃತಿಯ ಅನುಸರಣೆಯನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ” ಎಂದು ಪತ್ರದಲ್ಲಿ ಹೇಳಿದ್ದಾರೆ.

ಪಕ್ಷದಲ್ಲಿ ಈ ವಿಚಾರಕ್ಕೆ ಒಮ್ಮತವಿಲ್ಲ. ಮಗುವನ್ನು ಜಿಗುಟುವ ಹಾಗೂ ತೊಟ್ಟಿಲನ್ನು ತೂಗುವ ಕೆಲಸವನ್ನು ಬಿಜೆಪಿ ನಾಯಕರೇ ಮಾಡುತ್ತಿದ್ದಾರೆಂದು ಭಾಸವಾಗುತ್ತದೆ. ಆಹಾರ ಸ್ವತಂತ್ರವನ್ನು ಕೆಲವು ಬಿಜೆಪಿಯ ಜನಪ್ರತಿನಿಧಿಗಳು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಆಹಾರ ಸ್ವತಂತ್ರದ ಪರ ಮಾತನಾಡುತ್ತಿದ್ದಾರೆ.

ಖೇಡಾ ಜಿಲ್ಲೆಯ ಬಿಜೆಪಿ ಐಟಿ ಸೆಲ್ ಮಾಜಿ ಅಧ್ಯಕ್ಷೆ ನಂದಿತಾ ಠಾಕೂರ್ ಅವರು ಟ್ವೀಟ್ ಮಾಡಿ, “ಮೀನು ಮಾರಾಟ ಮಾಡುವ ಅನೇಕರು ನಮ್ಮವರೇ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿರುವ ನರೇಂದ್ರ ಮೋದಿ ಸಾಹೇಬ್ ಅವರು ಮಾಂಸಾಹಾರಿ ಆಹಾರದ ವ್ಯಾಪಾರದಲ್ಲಿ ತೊಡಗಿರುವವರಿಗೆ ಎಂದಿಗೂ ನಿರ್ಬಂಧಗಳನ್ನು ವಿಧಿಸಲಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಡೋದರಾದ ಬಿಜೆಪಿಯ ಹಿರಿಯ ಚುನಾಯಿತ ಪ್ರತಿನಿಧಿಯೊಬ್ಬರು, “ನಾನು ಸಸ್ಯಾಹಾರಿ ಆದರೆ ನಾನು ನಿರ್ಧಾರವನ್ನು ಒಪ್ಪುವುದಿಲ್ಲ. ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಮಳಿಗೆಗಳು ಕೆಲವು ಕುಟುಂಬಗಳಿಗೆ ಜೀವನಾಧಾರವಾಗಿದೆ. ನೈರ್ಮಲ್ಯ ಕಾಪಾಡದಿರುವುದನ್ನು ಯಾರೂ ಒಪ್ಪುವುದಿಲ್ಲ, ಆದರೆ ಅದು ಗ್ರಾಹಕ ಕೇಂದ್ರಿತವಾಗುತ್ತದೆ” ಎಂದು ತಿಳಿಸಿದ್ದಾರೆ.

ಪಾಟೀಲ್ ನೀಡಿದ ಸೂಚನೆಯನ್ನು ಬಿಜೆಪಿ ಆಡಳಿತದ ವಿಎಂಸಿ ಸ್ವೀಕರಿಸಿದೆ ಎಂದು ವಡೋದರಾ ಮೇಯರ್ ಕೆಯೂರ್ ರೊಕಾಡಿಯಾ ಹೇಳಿದ್ದಾರೆ. ಜೊತೆಗೆ ಮೇಯರ್‌‌, “ನಾವು ಬೀದಿಗಳಿಂದ ಯಾವುದೇ ಮಳಿಗೆಗಳನ್ನು ತೆಗೆದುಹಾಕಲು ಅಥವಾ ನಿರ್ದಿಷ್ಟ ರೀತಿಯ ಆಹಾರವನ್ನು ಮಾರಾಟ ಮಾಡುವುದನ್ನು ನಿರಂಕುಶವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಮಾಂಸಾಹಾರವನ್ನು ಮುಚ್ಚಿಡುವುದರಿಂದ ಖಂಡಿತವಾಗಿಯೂ ಯಾವುದೇ ಹಾನಿ ಇಲ್ಲ…” ಎಂದಿದ್ದಾರೆ. ಮಾಂಸಾಹಾರದ ಅನೇಕ ಪದಾರ್ಥಗಳನ್ನು ಪ್ರದರ್ಶಿಸಿಯೇ ಮಾರಾಟ ಮಾಡಬೇಕು. ಬಿಜೆಪಿ ಮುಖಂಡರ ಪ್ರತಿಪಾದನೆಯನ್ನು ಜಾರಿಗೊಳಿಸುವುದು ಹೇಗೆ ಎಂಬುದು ಬಡ ವ್ಯಾಪಾರಿಗಳ ಯಕ್ಷ ಪ್ರಶ್ನೆಯಾಗಿದೆ.


ಇದನ್ನು ಓದಿರಿ: ಸಗಣಿ ಮತ್ತು ಗೋಮೂತ್ರ ದೇಶದ ಆರ್ಥಿಕತೆಯನ್ನು ಸಬಲಗೊಳಿಸುತ್ತದೆ: ಮಧ್ಯ ಪ್ರದೇಶ ಸಿಎಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...