ಫೆಬ್ರವರಿ 24, 2022. ಉಕ್ರೇನಿನ ಹಲವು ನಗರಗಳ ಮೇಲೆ ರಷ್ಯಾ ದಾಳಿ ಆರಂಭಿಸಿತು. ಊಹಿಸಿಕೊಂಡಿದ್ದಕ್ಕಿಂತ ಹಲವು ಹೆಜ್ಜೆ ಮುಂದೆ ಹೋಗಿತ್ತು ರಷ್ಯಾ. ವ್ಲಾಡಿಮಿರ್ ಪುಟಿನ್ ರಷ್ಯಾದ ಜನರನ್ನು ಉದ್ದೇಶಿಸಿ ಮಾತನಾಡಿ, ಉಕ್ರೇನಿನ ಮೇಲಿನ ದಾಳಿಗೆ ನ್ಯಾಟೊದ ವಿಸ್ತರಣೆಯೇ ಕಾರಣ ಎಂದು ಹೇಳಿದ್ದರು. ಇರಾಕ್, ಸಿರಿಯಾ ಮತ್ತು ಯುಗೋಸ್ಲಾವಿಯಾದ ಮೇಲೆ ನ್ಯಾಟೊ ಆಕ್ರಮಣ ನಡೆಸಿತೆಂದು ಪುಟಿನ್ ಪಟ್ಟಿ ನೀಡಿದರು.
ಉಕ್ರೇನಿನ ಜನರು ರಷ್ಯಾದ ವಿರುದ್ಧ ತಿರುಗಿ ಹೋರಾಡುತ್ತಿದ್ದಾರೆ. ರಷ್ಯಾ ಸೇನಾ ತುಕಡಿಗಳನ್ನು ಹಿಮ್ಮೆಟ್ಟಿಸುವುದಕ್ಕೆ ಉಕ್ರೇನಿನ ಸರ್ಕಾರವೇ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ನೀಡಿತು ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸುವುದಕ್ಕೂ ಪ್ರೋತ್ಸಾಹಿಸಿತು. ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪಲಾಯನ ಮಾಡಿದ್ದಾರೆ ಎಂಬ ರಷ್ಯಾದ ಪ್ರತಿಪಾದನೆಯನ್ನು ನಿರಾಕರಿಸಿದರು.
ರಷ್ಯಾ ಮತ್ತು ಉಕ್ರೇನಿನ ನಡುವೆ ಶಾಂತಿ ಮಾತುಕತೆ ಆರಂಭವಾಗಿದೆ. ಇಲ್ಲಿಯವರೆಗೆ ಪಾಶ್ಚಿಮಾತ್ಯ ಶಕ್ತಿಗಳು, ರಷ್ಯಾದ ಮೇಲೆ ಕೆಲವು ನಿರ್ಬಂಧಗಳ ಹೇರುವ ಮೂಲಕ ಮತ್ತು ಉಕ್ರೇನಿಗೆ ಅಗತ್ಯ ಸೇನಾ ನೆರವು ನೀಡುವ ಮೂಲಕ ಸ್ಪಂದಿಸಿವೆ. ರಷ್ಯಾದ ಆರ್ಥಿಕತೆ, ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದ ದುಸ್ಥಿತಿಯಲ್ಲಿದ್ದು, ಇನ್ನಷ್ಟು ಬಿಗಡಾಯಿಸಿದ ಸ್ಥಿತಿಯಲ್ಲೇ ಮುಂದುವರೆದಿದೆ. ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವು ರಷ್ಯನ್ನರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ವಿಟ್ಜರ್‌ಲೆಂಡ್ ಸ್ಥಗಿತಗೊಳಿಸಿದೆ.
ಆರ್ಥಿಕವಾಗಿ ರಷ್ಯಾವು ಉಳಿದ ಯುರೋಪ ರಾಷ್ಟ್ರಗಳಿಗೆ ಅಗತ್ಯ. ಯುರೋಪಿನಲ್ಲಿ ಬಳಕೆಯಾಗುವ ಮೂರನೇ ಒಂದರಷ್ಟು ನೈಸರ್ಗಿಕ ಅನಿಲ ಪೂರೈಕೆಯಾಗುವುದೇ ರಷ್ಯಾದಿಂದ. ಈ ಕಾರಣಕ್ಕೆ ರಷ್ಯಾವನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿಸುವ ಬಗ್ಗೆ ಯುರೋಪಿಯನ್ ರಾಷ್ಟ್ರಗಳು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿವೆ. ಯುರೋಪಿನ ಇಂಧನ ವಲಯದಲ್ಲಿ ಅಣ್ವಸ್ತ್ರ ಬಳಕೆಯನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ, ಇಡೀ ಯುರೋಪಿಗೆ ರಷ್ಯಾ ಇಂಧನ ಪ್ರಮುಖ ಮೂಲವಾಗಿದೆ.
ರಷ್ಯಾದ ಈ ಆಕ್ರಮಣಕ್ಕೆ ಸಂಬಂಧಿಸಿದಂತೆ ನ್ಯಾಟೊ ಪಡೆಯುವುದೇನು?
ನ್ಯಾಟೋಕ್ಕೆ ಸೇರುವಂತೆ ಉಕ್ರೇನ್‌ಗೆ ಇರುವ “ಮುಕ್ತ” ಆಹ್ವಾನ ಸಂಕೀರ್ಣವಾದದ್ದು. ಫ್ರಾನ್ಸ್ ಮತ್ತು ಜರ್ಮನಿಯ ವಿರೋಧದ ಹಿನ್ನೆಲೆಯಲ್ಲಿ ಉಕ್ರೇನ್‌ನ ನ್ಯಾಟೋ ಪ್ರವೇಶವನ್ನು ಮೂಲದಲ್ಲಿ ನಿರಾಕರಿಸಿತ್ತು. ಆದರೆ ಯುರೋಪಿನ ಶಕ್ತಿಶಾಲಿ ರಾಷ್ಟ್ರಗಳು ರಷ್ಯಾದೊಂದಿಗೆ ತೊಡಗಿಸಿಕೊಳ್ಳುವ ಭರವಸೆ ಹೊಂದಿದ್ದರು. ಆದರೆ ನ್ಯಾಟೊದ ವಿಸ್ತರಣೆ ರಷ್ಯಾದೊಂದಿಗಿನ ಈ ಸಂಬಂಧವನ್ನು ಅಪಾಯಕ್ಕೆ ತಳ್ಳಿತು.
ನ್ಯಾಟೋ ಸೇರುವುದಕ್ಕೆ ಉಕ್ರೇನ್ ತನ್ನೆಲ್ಲಾ ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಆದರೆ ಕ್ರಿಮಿಯನ್ ಯುದ್ಧ ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿ ವಿವಾದವನ್ನು ಇನ್ನೆಂದು ಬಗೆಹರಿಸಿಕೊಳ್ಳಲಾರದ ಸ್ಥಿತಿಗೆ ತಂದುನಿಲ್ಲಿಸಿದೆ. ಒಂದು ವೇಳೆ ಗಡಿ ವಿವಾದಗಳನ್ನು ಸ್ಪಷ್ಟವಾಗಿ ಬಗೆಹರಿಸಿಕೊಳ್ಳದೇ ಹೋದರೆ ಈ ಆಕ್ರಮಣ ಅಂತ್ಯಗೊಂಡ ನಂತರವೂ ಉಕ್ರೇನ್ ಎಂದಿಗೂ ನ್ಯಾಟೊದಲ್ಲಿ ಪ್ರವೇಶ ಪಡೆದುಕೊಳ್ಳಲಾಗದೇ ಹೋಗಬಹುದು. ಅಮೆರಿಕ ಸಂಯುಕ್ತ ಸಂಸ್ಥಾನವು ನ್ಯಾಟೋವನ್ನು ಧಿಕ್ಕರಿಸಿ ಮುಂದೆ ಹೋಗಬಹುದು. ಅಮೆರಿಕವು ಉಕ್ರೇನ್‌ನೊಂದಿಗೆ ಔಪಚಾರಿಕ ಮೈತ್ರಿಯನ್ನು ಸಾಧಿಸುವುದಕ್ಕೆ ಬಯಸುತ್ತಿದೆ. ಆದಾಗ್ಯೂ, ಈ ಬೆಳವಣಿಗೆಯಿಂದಾಗಿ ಸರಳವಾದ ಸಂಗತಿ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವ ಸ್ಥಿತಿ ಉಂಟಾಗುತ್ತಿದೆ ಮತ್ತು ಇದರಿಂದಾಗಿ ಅಮೆರಿಕ ಮತ್ತು ರಷ್ಯಾದ ಯುದ್ಧವು ಅನಿರ್ದಿಷ್ಟಾವಧಿಯ ಸಾಧ್ಯತೆಯಾಗಿ ಬಿಡಬಹುದು.
ನ್ಯಾಟೊದ ಸದಸ್ಯ ರಾಷ್ಟ್ರವಾದ ಟರ್ಕಿ, ಕಪ್ಪು ಸಮುದ್ರದ ಕೊಲ್ಲಿ ಭಾಗದಿಂದ ರಷ್ಯಾದ ಹಡಗುಗಳನ್ನು ಸಾಗದಂತೆ ನಿರ್ಬಂಧ ಹೇರಿದೆ. ರಷ್ಯಾ, ಉಕ್ರೇನ್ ಮತ್ತು ಟರ್ಕಿ ದೇಶಗಳನ್ನು ಬೆಸೆಯುವ ಕಪ್ಪು ಸಮುದ್ರ ಬಹಳ ಮುಖ್ಯವಾದ ಗಡಿ ಭಾಗ. ಹಡಗುಗಳು ಯಾವುದೇ ರೀತಿಯಲ್ಲಿ ಸಾಗದಂತೆ ನಡೆಯಲು ಟರ್ಕಿಯು ಜಲಂತರ್ಗಾಮಿಗಳನ್ನು ನಿಯೋಜಿಸಿದೆ. ಇಲ್ಲಿ ಸಮರ ಶುರುವಾದರೆ ನ್ಯಾಟೋ ಕೂಡ ಯುದ್ಧದಲ್ಲಿ ಭಾಗಿಯಾಗಬಹುದು.
ವಿಶ್ವ ಬಲದ ಸಮತೋಲನ
ಇಂದಿನ ಸ್ಥಿತಿಯು ವಿಶ್ವದ ಮೊದಲ ಮಹಾಯುದ್ಧವನ್ನು ಹೋಲುತ್ತಿದೆ. ಮೊದಲ ಮಹಾಯುದ್ಧಕ್ಕೂ ಮೊದಲು ಯುರೋಪಿನ ಶಕ್ತಿಗಳು ವಿಶ್ವದ ವಿವಿಧ ಭಾಗಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದವು ಮತ್ತು ಹಲವು ಸಣ್ಣಪುಟ್ಟ ಯುದ್ಧಗಳನ್ನು ಮಾಡಿದ್ದವು. ಯುರೋಪ್ ಮೈತ್ರಿಕೂಟ ರಚಿಸಿಕೊಂಡು, ಹಲವು ದೇಶಗಳನ್ನು ಮತ್ತು ವಸಾಹತು ರಾಷ್ಟ್ರಗಳನ್ನು ಈ ಮಹಾಯುದ್ಧಕ್ಕೆ ಎಳೆದುತಂದವು. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು, ಜಗತ್ತಿನ ಬಹುಪಾಲು ದೇಶಗಳನ್ನು ನಿಯಂತ್ರಿಸುತ್ತಿದ್ದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮೈತ್ರಿಕೂಟ ರಚಿಸಿತು. ಜರ್ಮನಿಯು ಯುರೋಪಿನ ಹೊಸ ರಾಷ್ಟ್ರಗಳೊಂದಿಗೆ ಮೈತ್ರಿ ರಚಿಸಿತು. ಆಗ ಇಡೀ ಜಗತ್ತು ಈ ಎರಡು ಮೈತ್ರಿಕೂಟಗಳಿಂದ ಆವರಿಸಿಕೊಂಡಿತ್ತು.
21ನೇ ಶತಮಾನದಲ್ಲಿ ಅಮೆರಿಕದ ವಿಸ್ತರಣೆಯು ಮುಂದುವರೆದಿತ್ತು, ಆದರೆ ರಷ್ಯಾದಂತಹ ದೊಡ್ಡ ರಾಷ್ಟ್ರಗಳಿಂದಾಗಿ ತೊಡಕುಗಳನ್ನು ಎದುರಿಸಿತು. ಈ ರಾಷ್ಟ್ರಗಳು ಸೇನಾಬಲದಲ್ಲಿ ಅಮೆರಿಕದಷ್ಟು ಬಲಶಾಲಿಯಲ್ಲದ್ದಿದರೂ ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಭಾವಿಯಾಗಿ ಉಳಿದಿದ್ದವು. ರಷ್ಯಾ, ಮಧ್ಯ ಏಷ್ಯಾದಲ್ಲಿ ಬಲಿಷ್ಠವಾಗಿತ್ತು. ಆಫ್ಘಾನಿಸ್ತಾನ ಮತ್ತು ಮಧ್ಯ ಪ್ರಾಚ್ಯದಲ್ಲಿ ಅಮೆರಿಕ/ನ್ಯಾಟೋ ಸೇನಾ ಚಟುವಟಿಕೆಗಳು ಮತ್ತು ಮಧ್ಯ ಪ್ರಾಚ್ಯ ಮತ್ತು ಪೂರ್ವ ಯುರೋಪಿನಲ್ಲಿ ಬೆಳೆಯುತ್ತಿದ್ದ ಸೇನಾ ಮೈತ್ರಿಗಳಿಂದಾಗಿ ರಷ್ಯಾ ಯಾವುದೇ ದಿಕ್ಕಿನಲ್ಲೂ ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಷ್ಯಾ ಜಗತ್ತಿನಲ್ಲೇ ಅತಿ ದೊಡ್ಡ ಸೇನಾಬಲವನ್ನು ಹೊಂದಿದೆ. ಒಂದು ವೇಳೆ ಅದು ಯುದ್ಧಕ್ಕೆ ನಿಂತರೆ ಊಹಿಸಲಾಗದಷ್ಟು ಹಾನಿ ಉಂಟುಮಾಡಬಹುದು. ಸಿರಿಯಾ ನಾಗರಿಕ ಯುದ್ಧದಿಂದ ಹಿಡಿದು, ರಷ್ಯಾ ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ಗುದ್ದಾಡುತ್ತಲೇ ಇದೆ. ಈ ಮೂಲಕ ಜಗತ್ತಿನ ಅತಿ ದೊಡ್ಡ ಸೇನಾ ಶಕ್ತಿಯನ್ನು ಸಂಘರ್ಷಕ್ಕೆ ಇಳಿಸುತ್ತಲೇ ಬಂದಿದೆ.
21ನೇ ಶತಮಾನದಲ್ಲಿ ಯುದ್ಧವಿರೋಧಿ ಆಂದೋಲನಗಳ ಪಾತ್ರವೇನು?
ಯುದ್ಧವನ್ನು ವ್ಯಕ್ತಿತ್ವಗಳ ಮತ್ತು ಧೋರಣೆಗಳ ನಡುವಿನ ಘರ್ಷಣೆ ಎಂಬಂತೆ ಮಾಧ್ಯಮಗಳ ವರದಿಗಳು ಪ್ರಸ್ತುತಪಡಿಸುತ್ತಿವೆ. ಪುಟಿನ್, ನ್ಯಾಟೋ, ರಷ್ಯಾ, ಉಕ್ರೇನ್ ಅಥವಾ ಅಮೆರಿಕದ ಬೆಂಬಲಕ್ಕೆ ನಿಲ್ಲುವ ಬಗೆಗಿನ ಪ್ರಶ್ನೆಗಳು ಯುದ್ಧವನ್ನು ಕ್ರೀಡಾ ಪಂದ್ಯದಂತೆ ಕಾಣುವ ಅಪಾಯವನ್ನೊಡ್ಡುತ್ತವೆ; ಇಲ್ಲಿ ತಮ್ಮ ಇಷ್ಟದ ಆಟಗಾರರ ಬೆಂಬಲದಲ್ಲಿ ಪಂದ್ಯಗಳನ್ನು ವೀಕ್ಷಿಸಲಾಗುತ್ತದೆ. ಆ ದೇಶಗಳಲ್ಲಿ ಬದುಕದೆ ಇರುವ ಜನರು ದೂರದಿಂದ ನಿಂತು ನೋಡುವ ಮುಗ್ಧ ವೀಕ್ಷಕರಾಗಿ, ತಾವಾಡದ ಪಂದ್ಯದ ಬಗ್ಗೆ ತೀರ್ಪುಗಳನ್ನು ನೀಡುವವರಂತೆ ವರ್ತಿಸುತ್ತಾರೆ.

ಭಾರತದ ಸ್ವಾತಂತ್ರ್ಯದ ಮೊದಲ ಕೆಲವು ದಶಕಗಳಲ್ಲಿ ಅಲಿಪ್ತ ಚಳವಳಿ ವಿಶ್ವದಾದ್ಯಂತ ಪ್ರಮುಖವಾದ ಚಳವಳಿಯಾಗಿತ್ತು. ಶೀತಲ ಸಮರದ ಪರಿಣಾಮವನ್ನು-ಉದ್ವಿಗ್ನತೆಯನ್ನು ತಗ್ಗಿಸಲು ವಿಶ್ವನಾಯಕನ ಐತಿಹಾಸಿಕ ಪಟ್ಟವನ್ನು ಭಾರತ ಅಲಂಕರಿಸಿತ್ತು. ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದುಕೊಂಡ ಹೊಸ ಸ್ವತಂತ್ರ ದೇಶಗಳನ್ನು ತಮ್ಮ ಮಿತ್ರದೇಶವನ್ನಾಗಿಸಿಕೊಳ್ಳಲು ಸೋವಿಯತ್ ರಷ್ಯಾ ಮತ್ತು ಅಮೆರಿಕ ತೀವ್ರ ಪೈಪೋಟಿಯಲ್ಲಿದ್ದಾಗ ಇದು ಬಹಳ ಮುಖ್ಯವಾದ ನಿಲುವಾಗಿತ್ತು.
ಆದರೆ 21ನೇ ಶತಮಾನದಲ್ಲಿ, ವಿಶ್ವದ ಎಲ್ಲ ಮೂಲೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ವಿಶ್ವದ ಶಸ್ತ್ರಾಸ್ತ್ರ ಉದ್ದಿಮೆಗಳು ಕೂಡ ಬೆಸೆದುಕೊಂಡಿವೆ.
ಭಾರತದ ಶಸ್ತ್ರಾಸ್ತ್ರಗಳ ಅರ್ಧದಷ್ಟು ಆಮದಿಗೆ ರಷ್ಯಾ ಮೂಲವಾಗಿದೆ. ರಷ್ಯಾ ವಿಶ್ವದ ಎರಡನೇ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತುದಾರ. ಇದರರ್ಥ, ಭಾರತ ವಿಶ್ವದ ಅತಿ ದೊಡ್ಡ ಆಮದುದಾರರಲ್ಲಿ ಒಂದಾಗಿ, ರಷ್ಯಾ ವಿಶ್ವದ ಅತಿ ದೊಡ್ಡ ರಫ್ತುದಾರರಲ್ಲಿ ಒಂದಾಗಿ, ರಷ್ಯಾದ ರಕ್ಷಣಾ ಉದ್ದಿಮೆಯಲ್ಲಿ ಭಾರತದ ಪ್ರಭಾವ ಪರಿಣಾಮಕಾರಿಯದ್ದಾಗಿದೆ. ರಷ್ಯಾದ ಅತಿ ದೊಡ್ಡ ಶಸ್ತ್ರಾಸ್ತ್ರ ಉತ್ಪಾದಕ ಕಂಪನಿಗಳಾದ ಅಲ್ಮಾಝ್-ಆಂಟೆ, ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೋರೇಷನ್ ಮತ್ತು ಇತರ ಸಂಸ್ಥೆಗಳು ಭಾರತದ ಸರ್ಕಾರದ ಜೊತೆಗೆ ಗಮನಾರ್ಹವಾದ ವ್ಯವಹಾರ ಹೊಂದಿರುವಂತವು.
ಅಮೆರಿಕದ ರಕ್ಷಣಾ ಉದ್ದಿಮೆಯ ಪ್ರಶ್ನೆ ಮತ್ತೊಂದು ರೀತಿಯದ್ದು. ಅಮೆರಿಕ ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತುದಾರನಾಗಿದ್ದು, ರಷ್ಯಾಗಿಂತ ಸುಮಾರು ಎರಟು ಪಟ್ಟು ಹೆಚ್ಚು ಶಸ್ತ್ರಾಸ್ತ್ರಗಳನ್ನು ಅದು ರಫ್ತು ಮಾಡುತ್ತದೆ. ಭಾರತದ ಮಟ್ಟಿಗೆ ಅಮೆರಿಕ ಮೂರನೇ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ. ಆದುದರಿಂದ ಅಮೆರಿಕ ಶಸ್ತ್ರಾಸ್ತ್ರ ಮಾರಾಟಕ್ಕೆ ಭಾರತ ಗಣನೀಯ ಮಾರುಕಟ್ಟೆಯೇನಲ್ಲ. ಆದರೂ ಯುದ್ಧದಿಂದ ಲಾಭ ಪಡೆಯುವ ಅಲ್ಲಿನ ಕಾರ್ಪೊರೆಟ್ ಸಂಸ್ಥೆಗಳು ಭಾರತದಲ್ಲಿ ಶಾಖೆಗಳನ್ನು ಹೊಂದಿದ್ದು, ಹಲವು ವಲಯಗಳಲ್ಲಿ ಭಾರಿ ಹೂಡಿಕೆಯನ್ನು ಮಾಡಿವೆ. ಉಕ್ರೇನಿನ ಯುದ್ಧದಿಂದ ಅಮೆರಿಕದ ಯುದ್ಧ ಶಸ್ತ್ರಾಸ್ತ್ರ ಉದ್ದಿಮೆ, ಅದರಲ್ಲೂ ಅದರ ಖಾಸಗಿ ವಲಯ ಭಾರಿ ಲಾಭ ಗಳಿಸುತ್ತಿದೆ. ದೊಡ್ಡ ಸಂಸ್ಥೆಗಳಾದ ಲಾಕ್‌ಹೀಡ್ ಮಾರ್ಟಿನ್, ಬೊಯಿಂಗ್, ರೇಯ್ಥಿಯಾನ್ ಮುಂತಾದವು ಭಾರತದಲ್ಲಿ ಕಚೇರಿಯನ್ನು ಹೊಂದಿವೆ. ಭಾರತದ ಜೊತೆಗೆ ವಹಿವಾಟು ನಡೆಸುವುದಕ್ಕಿಂತಲೂ, ’ಮೇಕ್ ಇನ್ ಇಂಡಿಯಾ’ದ ಬದಲಾವಣೆ ಪರ್ವದಲ್ಲಿ ಅವು ಭಾಗವಹಿಸಿ ಭಾರತದಲ್ಲಿ ಶಾಖೆಗಳನ್ನು ಹೊಂದಿವೆ. ಇದು ಪರೋಕ್ಷವಾದ ಮಾರಾಟವಾದರೂ, ಅದರ ಇರುವಿಕೆಯನ್ನು ಅಲ್ಲಗಳೆಯುವಂತಿಲ್ಲ.

ಯುದ್ಧ ವಿರೋಧಿ ಆಂದೋಲನ ಹೀರೋಗಳನ್ನು ಮತ್ತು ವಿಲನ್‌ಗಳನ್ನು ಗುರುತಿಸುವುದರಲ್ಲಿ ಕಳೆದುಹೋದರಷ್ಟೇ ಸಾಲದು, ಯುದ್ಧದ ಮೂಲಕ್ಕೇ ಗುರಿಯಿಟ್ಟು ಹೊಡೆಯಬೇಕಿದೆ. ಜಾಗತೀಕರಣಗೊಂಡ ಈ ಆರ್ಥಿಕ ವ್ಯವಸ್ಥೆಯಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ನಮ್ಮನ್ನೂ ಬೆಸೆಯುತ್ತದೆ ಮತ್ತು ನಮ್ಮ ಮೇಲೂ ತಪ್ಪುಹೊರಿಸುತ್ತದೆ. ಭಾರತದಿಂದ ಹುಟ್ಟುವ ಯುದ್ಧವಿರೋಧಿ ಆಂದೋಲನ, ಯುದ್ಧದ ಪ್ರಕ್ರಿಯೆಗಳಿಗೆ ಕುಮ್ಮಕ್ಕು ನೀಡುವ ಮತ್ತು ಅದರಿಂದ ಲಾಭ ಪಡೆಯುವ ಉದ್ದಿಮೆಯ ಎಲ್ಲಾ ರೆಂಬೆಕೊಂಬೆಗಳಿಗೂ ಸವಾಲು ಎಸೆಯಬೇಕಿದೆ. ಯುದ್ಧ ಯಂತ್ರಕ್ಕೆ ಆಗುವ ಹೂಡಿಕೆ ಗಮನೀಯವಾಗಿ ಇಳಿಯಬೇಕು ಮತ್ತು ಯುದ್ಧ ಮಾಡುವುದು ಹೆಚ್ಚು ನಷ್ಟದಾಯಕವಾಗಬೇಕು.
ಅಂತಾರಾಷ್ಟ್ರೀಯ ಯುದ್ಧ ಯಂತ್ರ ಕೇವಲ ಉಕ್ರೇನ್ ಜನರನ್ನು ಮಾತ್ರ ಪೀಡಿಸದೆ ವಿಶ್ವದ ಎಲ್ಲ ಜನರ ಮೇಲೆ ಪರಿಣಾಮ ಬೀರುತ್ತದೆ. ಅಣ್ವಸ್ತ್ರೋತ್ತರ ವಿಶ್ವದಲ್ಲಿ ಮೊದಲ ವಿಶ್ವ ಯುದ್ಧದ ಅಪಾಯಗಳು ಮತ್ತು ನಷ್ಟಗಳನ್ನು ಹಿಂದಿರುಗಿ ನೋಡಿದಾಗ ಇದು ಯುದ್ಧ ವಿರೋಧಿ ಆಂದೋಲನದ ತುರ್ತಿನ ಅವಶ್ಯಕತೆ ತಿಳಿಯುತ್ತದೆ.

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ


