Homeಅಂತರಾಷ್ಟ್ರೀಯಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ

ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ

- Advertisement -
- Advertisement -

ಜನನಿಬಿಢ ದೊಡ್ಡ ನಗರದಲ್ಲಿ ಸಾವಿರಾರು ಜನ ಭಯಭೀತರಾಗಿದ್ದಾರೆ; ಸಂಭವನೀಯ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಬಂಕರ್‌ಗಳಲ್ಲಿ ಮೆಟ್ರೋ ಅಂಡರ್‌ಗ್ರೌಂಡ್‌ನಲ್ಲಿ ರಕ್ಷಣೆ ಪಡೆದು ಕಲೆತು ಕೂತಿದ್ದಾರೆ; ಈಗಾಗಲೇ ಶೆಲ್ ದಾಳಿಯಿಂದ ನೂರಾರು ಜನರ ಹತ್ಯೆಯಾಗಿದೆ; ಸುಮಾರು ಐದು ಲಕ್ಷ ಜನ ತಮ್ಮ ದೇಶದ ಗಡಿಗಳನ್ನು ದಾಟಿ ಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ; ರೆಫ್ಯೂಜಿ ಬಿಕ್ಕಟ್ಟು ಎದುರಾಗುತ್ತಿದೆ; ಶಿಕ್ಷಣ ಹರಸಿ ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ಯುದ್ಧದ ಕರಿಛಾಯೆಯಲ್ಲಿ ಹೆದರಿ, ತಮ್ಮ ದೇಶಗಳಿಗೆ ಹಿಂದಿರುಗಲು ಅವಕಾಶ ಸಿಗದೆ ಜೀವ ಕೈಯ್ಯಲ್ಲಿ ಹಿಡಿದುಕೊಂಡು ಕಂಗೆಟ್ಟು ಕೂತಿದ್ದಾರೆ; ದಾಳಿ ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಲು ಮಾಲೊಟೋವ್ ಕಾಕ್‌ಟೇಲ್ (ಪೆಟ್ರೋಲ್‌ನಂತಹ ಸ್ಫೋಟಕ ದ್ರವವನ್ನು ಬಾಟೆಲ್‌ಗೆ ತುಂಬಿಸಿ ಮಾಡುವ ನಾಡಬಾಂಬ್) ತಯಾರಿಸಿ ಇಟ್ಟುಕೊಳ್ಳಿ, ಧೈರ್ಯವಾಗಿ ಹೋರಾಡಿ, ಎಂದು ನಾಗರಿಕರಿಗೆ ನೀಡುತ್ತಿರುವ ಕರೆಗಳು; ಇವೆಲ್ಲ ಮತ್ತೊಂದು ಮಹಾ ಮಾನವೀಯ ಬಿಕ್ಕಟ್ಟಿಗೆ ಜಗತ್ತು ಸಾಕ್ಷಿಯಾಗುತ್ತಿವೆ.

ಆಡಳಿತ ನಡೆಸುತ್ತಿದ್ದ ಸರ್ಕಾರವನ್ನು ಉರುಳಿಸಿ, ಅಮೆರಿಕ/ನ್ಯಾಟೋ ಸೇನೆಯ ಪಡೆಗಳು ರಾತ್ರೋರಾತ್ರಿ ದೇಶ ತೊರೆಯುವಂತೆ ಮಾಡಿ ತಾಲಿಬಾನಿ ಪಡೆಗಳು ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ನೆನಪು ಅಳಿಯುವ ಮೊದಲೇ ರಷ್ಯಾ ತನ್ನ ನೆರೆ ರಾಷ್ಟ್ರ ಉಕ್ರೇನ್ ಮೇಲೆ ನಡೆಸಿರುವ ಈ ಯುದ್ಧ ಮತ್ತೊಂದು ಮಾನವೀಯ ದುರಂತಕ್ಕೆ ಕಾರಣವಾಗಿದೆ. ವಿಶ್ವಯುದ್ಧದ ತರುವಾಯ ನಡೆದ ಹಲವು ಯುದ್ಧಗಳಲ್ಲಿ ಒಂದು ಪಕ್ಷದ ಪಡೆಯ ಜೊತೆಗೆ ಮಾತ್ರ ಅಣ್ವಸ್ತ್ರಗಳು ಇದ್ದವು. ಆದುದರಿಂದ ಅವುಗಳ ಬಳಕೆಯ ಅಪಾಯ ಎದ್ದಿರಲಿಲ್ಲ. ಆದರೆ ಈ ಯುದ್ಧ ಅಣ್ವಸ್ತ್ರಗಳ ಬಳಕೆಯ ಭೀತಿಯನ್ನು ಕೂಡ ಸೃಷ್ಟಿಸಿದೆ. ಉಕ್ರೇನ್ ಬಳಿ ನ್ಯೂಕ್ಲಿಯರ್ ವೆಪನ್‌ಗಳು ಇಲ್ಲದೆ ಹೋದರೂ, ಅದರ ಬೆಂಬಲಕ್ಕೆ ನಿಂತಿರುವ ನ್ಯಾಟೋ ಒಕ್ಕೂಟ (ಈ ಯುದ್ಧಕ್ಕೆ ಕಾರಣ ಎಂದು ಕೂಡ ಹೇಳಲಾಗುತ್ತಿರುವ) ಅಣ್ವಸ್ತ್ರಗಳನ್ನು ಹೊಂದಿದೆ.

ಈ ಸಮಯದಲ್ಲಿ ವಿಶ್ವದಾದ್ಯಂತ ಈ ಯುದ್ಧವನ್ನು ಬೇರೆಬೇರೆ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಯಿಂದಾಗಿ ಮತ್ತು ಆ ದೇಶ ವಿಶ್ವದ ಹಲವೆಡೆ ನಡೆಸಿದ ದೌರ್ಜನ್ಯಗಳಿಗೆ ಎಲ್ಲೆಯೇ ಇಲ್ಲದಂತಾಗಿ, ಈಗ ನ್ಯಾಟೋ ರೂಪ ಧರಿಸಿ ರಷ್ಯಾ ಬಾಗಿಲ ಬಳಿ ಬಂದು ನಿಂತಿದೆ. ರಷ್ಯಾಗೆ ಈಗ ಯುದ್ಧ ಮಾಡದೆ ಬೇರೆ ಏನು ಮಾರ್ಗವಿತ್ತು, ಇದು ಅಮೆರಿಕಕ್ಕೆ ಕಲಿಸಲೇಬೇಕಾದ ಪಾಠ ಎಂಬ ವಾದವನ್ನೂ ಕೆಲವರು ಹೂಡುತ್ತಿದ್ದಾರೆ. ಈ ವಾದದಲ್ಲಿ ಉಕ್ರೇನ್ ಒಂದು ಸಾರ್ವಭೌಮ ರಾಷ್ಟ್ರ ಎಂಬ ಅಂಶ ಪಕ್ಕಕ್ಕೆ ಸರಿಸಲ್ಪಡುತ್ತದೆ. ಅಮೆರಿಕದ ಪವರ್‌ಅನ್ನು ನಿಯಂತ್ರಿಸಲು ಉಕ್ರೇನ್ ಮೇಲಿನ ದಾಳಿಯನ್ನು ಸಮರ್ಥಿಸಲಾಗುತ್ತಿದೆ. ಉಕ್ರೇನ್ ರಷ್ಯಾ ಷರತ್ತುಗಳಿಗೆ ತಲೆಬಾಗಿ, ಸಾವುನೋವುಗಳು ಬೇಗ ಕೊನೆಯಾಗಲಿ ಎಂಬ ಸಮಾಧಾನವನ್ನು ಈ ವಾದದಲ್ಲಿ ’ಊಟಕ್ಕೆ ಉಪ್ಪಿನಕಾಯಿ’ಯ ರೀತಿಯಲ್ಲಿ ಹೇಳಲಾಗುತ್ತಿದ್ದರೂ, ರಷ್ಯಾ ಕೂಡ ಹಲವು ಕಾಲಘಟ್ಟಗಳಲ್ಲಿ ಸಾಮ್ರಾಜ್ಯಶಾಹಿಯೇ ಆಗಿತ್ತು ಹಾಗೂ ಚೆಚೆನ್ಯ ಸೇರಿದಂತೆ ಹಲವು ಕಡೆಗಳಲ್ಲಿ ರಷ್ಯಾ ನಡೆಸಿರುವ ಆಕ್ರಮಣಗಳನ್ನು ಮರೆಮಾಚಲಾಗುತ್ತಿದೆ ಅಥವಾ ಅಂತಹ ವಾದ ಹೂಡುತ್ತಿರುವವರ ನೆನಪಿನಿಂದ ಅವು ಮರೆಯಾಗಿವೆ. ಅಮೆರಿಕದ ಶೋಷಣೆಯನ್ನು ವಿರೋಧಿಸಲು ರಷ್ಯಾ ದಾಳಿಯನ್ನು ವಿರೋಧಿಸದೆ ಅದನ್ನು ಟೂಲ್ ಆಗಿ ಬಳಸಿಕೊಳ್ಳುತ್ತಿರುವುದು ಬಹಳ ದುಃಖದ ಸಂಗತಿಯಾಗಿದೆ.

ಉಕ್ರೇನ್ ನ್ಯಾಟೋದ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯನಾಗಲು ಅರ್ಜಿ ಸಲ್ಲಿಸಿರುವುದು ವಿವಾದದ ಕೇಂದ್ರ ಎಂದು ಎಲ್ಲೆಡೆ ವರದಿಯಾಗುತ್ತಿದೆ. ಎರಡನೇ ವಿಶ್ವಯುದ್ಧದ ನಂತರ ನಾಝಿ ಜರ್ಮನಿಯ ಸೋಲಿಗೆ ಮುಖ್ಯ ಕಾರಣವಾಗಿದ್ದ ರಷ್ಯಾ ಪೂರ್ವ ಯುರೋಪಿನ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಿತ್ತು. ಹಲವು ರಾಷ್ಟ್ರಗಳು ಸೋವಿಯತ್ ರಷ್ಯಾ ಒಕ್ಕೂಟದೊಂದಿಗೆ ಸೇರಿದ್ದರೆ, ಮತ್ತೊಂದಷ್ಟು ಪೂರ್ವ ಯೂರೋಪಿಯನ್ ರಾಷ್ಟ್ರಗಳು ಸೋವಿಯತ್ ಒಕ್ಕೂಟದ ಜೊತೆ ನಿಕಟ ಸಂಬಂಧ ಹೊಂದಿದ್ದವು. ಇಂತಹ ಸಮಯದಲ್ಲಿ ಕೆಲವು ಪಶ್ಚಿಮ ಯುರೋಪಿನ ದೇಶಗಳು ಸಾಧಿಸಿದ ಬದಲಿ ಮಿಲಿಟರಿ ಒಕ್ಕೂಟ ನ್ಯಾಟೋಗೆ ಅಮೆರಿಕ ಮುಖ್ಯ ಭಾಗಿದಾರನಾಯಿತು. ನ್ಯಾಟೋದ ಆರ್ಟಿಕಲ್ 5ರ ಪ್ರಕಾರ ಈ ಒಕ್ಕೂಟದ ಯಾವುದೇ ದೇಶದ ಮೇಲೆ ದಾಳಿಯಾದರೆ, ಉಳಿದ ಸದಸ್ಯರು ಬೆಂಬಲಕ್ಕೆ ನಿಲ್ಲಬೇಕೆಂಬ ಕರಾರಾಯಿತು. ನ್ಯಾಟೋ ಮತ್ತು ಸೋವಿಯತ್ ರಷ್ಯಾ ಎರಡೂ ಬಣಗಳು ಬೇಕಾಬಿಟ್ಟಿಯಾಗಿ ಅಣ್ವಸ್ತ್ರಗಳನ್ನು ವೃದ್ಧಿಸಿಕೊಂಡವು. ಈ ಅಣ್ವಸ್ತ್ರಗಳು ಒಡ್ಡುವ ವಿನಾಶದ ಭಯದಿಂದ ಕೆಲವು ವರ್ಷಗಳ ಕಾಲ ಸಾಂಪ್ರದಾಯಿಕ ಯುದ್ಧಗಳಿಲ್ಲದ ’ಶಾಂತಿ’ ನೆಲೆಸಲು ಕಾರಣವಾಯಿತು.

ಸೋವಿಯತ್ ರಷ್ಯ ಒಕ್ಕೂಟ ಒಂದಷ್ಟು ವರ್ಷಗಳ ನಂತರ ವಿಘಟನೆಯಾಗುತ್ತಾ ಬಂದಿತು. 1991ರಲ್ಲಿ ಬರ್ಲಿನ್ ಗೋಡೆ ಮುರಿದುಬಿದ್ದು ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾದಾಗ ಅದು ಸೋವಿಯತ್ ಒಕ್ಕೂಟದ ಅಧಿಕೃತ ಪತನದ ಸಂಕೇತವಾಯಿತು. ಆಗ ಪೂರ್ವ ಯುರೋಪಿನ ಹಲವು ದೇಶಗಳು ಪಶ್ಚಿಮ ದೇಶಗಳ ಜೊತೆಗಿನ ಬಾಂಧವ್ಯಕ್ಕೆ ಮುಂದಾದವು. ಯುರೋಪಿಯನ್ ಒಕ್ಕೂಟ ಬೆಳೆಯುವುದಕ್ಕೆ ಪ್ರಾರಂಭವಾಯಿತು. ಯುರೋಪಿಯನ್ ಒಕ್ಕೂಟ ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದ್ದು ಮಿಲಿಟರಿ ಒಕ್ಕೂಟವಾಗಿ ನ್ಯಾಟೋ ಪ್ರಭಾವ ಮುಂದುವರೆಯಿತು. ರಷ್ಯಾ ದೇಶದ ಪ್ರಭಾವ ಇಲ್ಲಿಂದ ಇಳಿಮುಖವಾಗುತ್ತಲೇ ಹೋಯಿತು.

ರಷ್ಯಾದ ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಯಾಗಿದ್ದ ವ್ಲಾಡಿಮಿರ್ ಪುಟಿನ್ ಸಕ್ರಿಯವಾಗಿ ರಾಜಕಾರಣದಲ್ಲಿ ಕಾಣಿಸಿಕೊಳ್ಳುವುದು ಸೋವಿಯತ್ ಒಕ್ಕೂಟ ವಿಘಟನೆಯ ನಂತರದಿಂದಲೇ. 1999ರಲ್ಲಿ ರಷ್ಯಾದ ಪ್ರಧಾನ ಮಂತ್ರಿ, ನಂತರ ಹಂಗಾಮಿ ಅಧ್ಯಕ್ಷ, ಪೂರ್ಣಾವಧಿ ಅಧ್ಯಕ್ಷ, ಮತ್ತೆ ಪ್ರಧಾನಿ ನಂತರ ಮತ್ತೆ ಅಧ್ಯಕ್ಷ ಹೀಗೆ ಅಧಿಕಾರದಿಂದ ಹಿಂತಿರುಗಿ ನೋಡಿದ್ದೇ ಇಲ್ಲ ಪುಟಿನ್. 2018ರಲ್ಲಿ ಅಲ್ಲಿನ ಸಂವಿಧಾನಕ್ಕೆ ಬದಲಾವಣೆ ತಂದು 2036ರವರೆಗೆ ತಾನೇ ಅಧ್ಯಕ್ಷನಾಗುವಂತೆ ತಿದ್ದುಪಡಿ ಮಾಡಿಕೊಂಡಿದ್ದು ಇದೇ ಪುಟಿನ್.

’ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ 2021ರಲ್ಲಿ ನೀಡಿದ ವರದಿಯಲ್ಲಿ ಪ್ರೆಸ್ ಫ್ರೀಡಂ
ಇಂಡೆಕ್ಸ್‌ನಲ್ಲಿ ರಷ್ಯಾ 180 ದೇಶಗಳಲ್ಲಿ 150ನೇ ಸ್ಥಾನಕ್ಕೆ ಕುಸಿದಿದೆ. 2021ರ ಫ್ರೀಡಂ ಹೌಸ್ ಸಂಸ್ಥೆಯ ವರದಿಯಲ್ಲಿ ದೇಶವೊಂದು ಎಷ್ಟು ಸ್ವತಂತ್ರವಾಗಿದೆ ಎಂಬ ಅಧ್ಯಯನದಲ್ಲಿ ರಷ್ಯಾಗೆ 100ಕ್ಕೆ 20 ಅಂಕ ನೀಡಿದ್ದು ’ನಾಟ್ ಫ್ರೀ’ ಸ್ಟೇಟಸ್ ನೀಡಿದೆ. ಪುಟಿನ್‌ನ ಸರ್ವಾಧಿಕಾರಿ ಆಡಳಿತದಲ್ಲಿ ಎಲ್ಲಾ ಸಂಸ್ಥೆಗಳು ಆತನ ಅಧೀನವಾಗಿರುವುದನ್ನು ವರದಿ ಬಿಚ್ಚಿಡುತ್ತದೆ.

ಈಗ ಇದೇ ಪುಟಿನ್, ನ್ಯಾಟೋದ ದೌರ್ಜನ್ಯ-ಶೋಷಣೆಯನ್ನು ಮುಂದುಮಾಡಿ ಉಕ್ರೇನ್ ನ್ಯಾಟೋ ಸದಸ್ಯನಾಗಲು ಬಯಸಿರುವುದನ್ನು ವಿರೋಧಿಸಿ, ಉಕ್ರೇನ್ ಸದಸ್ಯತ್ವವನ್ನು ನ್ಯಾಟೋ ತಿರಸ್ಕರಿಸಿ ವಚನ ನೀಡದಿದ್ದಕ್ಕೆ ಯುದ್ಧ ಪ್ರಾರಂಭಿಸಿದ್ದಾರೆ. ಇರಾಕ್ ಮೇಲೆ ಯುದ್ಧನಡೆಸಿ ಆ ದೇಶವನ್ನು ನಾಶಗೊಳಿಸಿದ ಅಮೆರಿಕವನ್ನು ಇದಕ್ಕೆ ದೂರಿದ್ದಾರೆ. ಯಾವುದೇ ಯುದ್ಧಕ್ಕೆ ಮತ್ತೊಬ್ಬರನ್ನು ದೂರುವುದು ವಾಡಿಕೆ. ನ್ಯಾಟೋ ಎಂಬ ಶೋಷಕ ಒಕ್ಕೂಟದ ನೆಪ ತೋರಿಸಿ ಪುಟಿನ್ ಯುದ್ಧಕ್ಕೆ ಅಡಿಯಿಟ್ಟಿದ್ದಾರೆ.

(ಅಚ್ಚರಿಯ ಸಂಗತಿಯೆಂದರೆ ಅಮೆರಿಕ ಆಫ್ಘಾನಿಸ್ಥಾನದ ಮೇಲೆ ಯುದ್ಧ ನಡೆಸಿದಾಗ ರಷ್ಯಾ ಅದನ್ನು ವಿರೋಧಿಸಿರಲಿಲ್ಲ. ನೋಮ್ ಚಾಮ್ಸ್ಕಿಯವರು ಒಂದು ಸಂದರ್ಶನದಲ್ಲಿ ಹೇಳುವಂತೆ ರಷ್ಯಾ ಚೆಚೆನ್ಯಾ ಮೇಲೆ ನಡೆಸಿದ ದುರಾಕ್ರಮಣವನ್ನು ಆ ಮೂಲಕ ಮುಚ್ಚಿಕೊಳ್ಳಲು ಪ್ರಯತ್ನಿಸಿತ್ತು.)

ಅಮೆರಿಕ ಮತ್ತು ನ್ಯಾಟೋ ಮುಗ್ಧವೇನಲ್ಲ!

ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಯುದ್ಧವನ್ನು ಖಂಡಿಸುವಾಗ, ಈ ಬಿಕ್ಕಟ್ಟಿಗೆ ಅಮೆರಿಕ ಮುಖ್ಯವಾಗಿ ಮತ್ತು ನ್ಯಾಟೋ ಸಾಮಾನ್ಯವಾಗಿ ಕಾರಣ ಎಂಬುದನ್ನು ಕೂಡ ಗುರುತಿಸದೆ ಇರಲಾಗದು. ಸೋವಿಯತ್ ಒಕ್ಕೂಟ ಪತನವಾದ ನಂತರ ನ್ಯಾಟೋ ತನ್ನ ನೆಲೆಯನ್ನು ಯುರೋಪಿನಾದ್ಯಂತ ವಿಸ್ತರಿಸುವ ಯಾವ ಅವಶ್ಯಕತೆಯೂ ಇರಲಿಲ್ಲ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿರದ ಯಾವುದೇ ದೇಶವನ್ನು ಶತ್ರುದೇಶವನ್ನಾಗಿ ಕಾಣುವ ವಿಕೃತ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. 9/11 ಜೋಡಿ ಟವರ್‌ಗಳ ದಾಳಿಯ ನಂತರವಂತೂ ಇಸ್ಲಾಮಿಕ್ ಟೆರರಿಸಂನ ನೆಪ ಹೇಳಿ ಇರಾಕ್ ಮತ್ತು ಆಫ್ಘಾನಿಸ್ತಾನಗಳ ಮೇಲೆ ನಡೆಸಿದ ದಾಳಿ, ಅದಕ್ಕಾಗಿ ಮಾಧ್ಯಮಗಳನ್ನು ಬಳಸಿಕೊಂಡು ತನ್ನೆಲ್ಲ ಯುದ್ಧಗಳು ಲೆಜಿಟಿಮೇಟ್ ಎಂಬಂತೆ ಜನಸಮ್ಮತಿ ಉತ್ಪಾದಿಸಿದ್ದು- ಈ ಎಲ್ಲಾ ದಬ್ಬಾಳಿಕೆಗಳನ್ನು ವಿಶ್ವ ಕಂಡಿದೆ. ಮತ್ತು ಈ ಯುದ್ಧಗಳನ್ನು ಹೂಡಲು ಆರೋಪಿಸಲಾಗಿದ್ದ ಆರೋಪಗಳೆಲ್ಲವೂ ಬಹುತೇಕ ಸುಳ್ಳಾಗಿವೆ. ಎಷ್ಟೋ ನಾಗರಿಕರ ಸಾವು ನೋವಿಗೆ ಈ ಯುದ್ಧಗಳು ಕಾರಣವಾಗಿವೆ.

ಯುರೋಪಿನಲ್ಲಿಯೂ ಸೈಬೀರಿಯಾ ಮತ್ತು ಕೊಸೊವೋ ದೇಶಗಳಲ್ಲಿ ಬಾಂಬಿಂಗ್‌ಗೆ ನ್ಯಾಟೋ ಕಾರಣವಾಗಿದೆ. ಇಂತಹ ಸಮಯದಲ್ಲಿ ರಷ್ಯಾ ಎತ್ತಿದ್ದ ಆಕ್ಷೇಪವನ್ನು ಬಗೆಹರಿಸಲು, ವ್ಯಾಪಕ ಮಾತುಕತೆಗಳ ಮೂಲಕ ಉದ್ವಿಗ್ನತೆಯನ್ನು ತಗ್ಗಿಸಲು ನ್ಯಾಟೋ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಒಂದು ಮಟ್ಟದಲ್ಲಿ ಕೆಲಸ ಮಾಡಿದವಾದರೂ, ಅಮೆರಿಕ ತನ್ನ ದಬ್ಬಾಳಿಕೆಯ ಧೋರಣೆಯನ್ನು ತಗ್ಗಿಸಿಕೊಳ್ಳಲೇ ಇಲ್ಲ. ಕೊನೆಗೆ ಜರ್ಮನಿ ಮತ್ತು ಫ್ರಾನ್ಸ್ ಅಮೆರಿಕದ ವಾದವನ್ನೇ ಒಪ್ಪಿ ಮುಂದುವರೆದವು. ಆದರೆ ಇದು ಯಾವುದೂ ಉಕ್ರೇನ್ ಎಂಬ ಸಾರ್ವಭೌಮ ರಾಷ್ಟ್ರದ ಮೇಲಿನ ರಷ್ಯಾ ದಾಳಿಗೆ ಕಾರಣವಾಗಿರಬೇಕಿರಲಿಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಪಾಪ್ಯುಲಿಸ್ಟ್, ನ್ಯಾಷನಲಿಸ್ಟಿಕ್, ನಾಝಿ – ಯಾರು ಯಾರು ಯಾರ್‍ಯಾರು?

ಈ ಬಿಕ್ಕಟ್ಟು ಪ್ರಾರಂಭವಾದಾಗಿಲಿನಿಂದಲೂ ಒಂದು ಪಕ್ಷದವರು ಮತ್ತೊಬ್ಬರನ್ನು ಸರ್ವಾಧಿಕಾರಿ ಅಂತಲೋ, ನಾಝಿ ಅಂತಲೋ ಕರೆಯುವುದು ಸಾಮಾನ್ಯವಾಗಿಬಿಟ್ಟಿದೆ. ವಿಶ್ವದ ಹಲವು ದೇಶಗಳಲ್ಲಿ ತೀವ್ರ ಬಲಪಂಥೀಯ ಮತ್ತು ಪಾಪ್ಯುಲಿಸ್ಟ್ ಲೀಡರ್‌ಗಳು ತಲೆಎತ್ತುತ್ತಿರುವಾಗ ಯಾರು ನಾಝಿ ಯಾರು ನಾಝಿಯಲ್ಲ ಎಂಬುದನ್ನು ಪತ್ತೆಹಚ್ಚುವುದು ಅಷ್ಟು ಸುಲಭದ ಮಾತಲ್ಲ. ಬಹುತೇಕ ಎಲ್ಲರ ಮಾತುಗಳೂ ತಮ್ಮ ದೇಶದ ರಾಷ್ಟ್ರೀಯ ಹೆಮ್ಮೆಯಲ್ಲಿ ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತವೆ. ಪುಟಿನ್ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿಯನ್ನು ನಾಝಿ ಎಂದು ಕರೆಯುತ್ತಿದ್ದಾರೆ. ಆದರೆ ಪುಟಿನ್ ಅವರ ಅಧಿಕಾರದ ರೀತಿಯೇ ನಾಝಿಗಳನ್ನು ಮೀರಿಸುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಉಕ್ರೇನ್‌ನ ರಾಜಕೀಯ ಕೂಡ ತೀವ್ರ ನ್ಯಾಶನಲಿಸಂಅನ್ನು ಉದ್ದೀಪಿಸುವಂತಹದ್ದೇ. ಆದರೆ ಫ್ರೀಡಂ ಹೌಸ್‌ನ ಪ್ರಕಾರ ರಷ್ಯಾ ’ನಾಟ್ ಫ್ರೀ’ ಆದರೆ ಉಕ್ರೇನ್ ಕನಿಷ್ಠ ’ಪಾರ್ಟ್ಲಿ ಫ್ರೀ’ ಸ್ಟೇಟಸ್‌ನಲ್ಲಿದೆ.

ಇನ್ನು ಅಮೆರಿಕದಲ್ಲಿ ಟ್ರಂಪ್ ಎಂಬ ತೀವ್ರ ಬಲಪಂಥೀಯ ಪಾಪ್ಯುಲಿಸ್ಟ್ ನಾಯಕ ಪುಟಿನ್‌ಗೆ ಹತ್ತಿರವಿದ್ದದ್ದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಅಮೆರಿಕದಲ್ಲಿ ಈಗ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಆ ದೇಶವಾಸಿಗಳ ಪಾಲಿಗೆ ಸುಧಾರಿತ ನಾಯಕನಂತೆ ಕಂಡರೂ, ಅಮೆರಿಕದ ಯಾವುದೇ ಅಧ್ಯಕ್ಷ ತನ್ನ ಮೈತ್ರಿ ರಾಷ್ಟ್ರಗಳಲ್ಲದ ದೇಶಗಳಿಗೆ ಸಾಮಾನ್ಯವಾಗಿ ನಾಝಿಯಂತೆಯೇ ವರ್ತಿಸುವುದು!

ಉಕ್ರೇನಿನ ರಾಜಕೀಯ

ಸೋವಿಯತ್ ರಷ್ಯಾ ಒಕ್ಕೂಟದ ಪತನದ ನಂತರ ಹಲವು ಸರ್ಕಾರಗಳು ಬಂದು ಹೋದರೂ, 2010ರಿಂದ 2014ರ ನಡುವೆ ಅಧ್ಯಕ್ಷರಾಗಿದ್ದ ವಿಕ್ಟರ್ ಯನುಕೋವಿಕ್ ಕಾಲದಲ್ಲಿ ರಾಜಕೀಯ ಚಟುವಟಿಕೆಗಳ ತೀವ್ರತೆ ಕಾಡಿತ್ತು. ರಷ್ಯಾ ಪರವಾಗಿದ್ದ ಯನುಕೋವಿಕ್ ಉಕ್ರೇನ್-ಯುರೋಪಿಯನ್ ಅಸೋಸಿಯೇಷನ್ ಒಪ್ಪಂದವನ್ನು ತಿರಸ್ಕರಿಸಿದ ಮೇಲೆ, 2014ರಲ್ಲಿ ನಡೆದ ಉಕ್ರೇನ್ ’ಘನತೆಯ ಕ್ರಾಂತಿ’ಯಿಂದ ಸರ್ಕಾರ ಪತನಗೊಂಡಿತು. ಇದರಲ್ಲಿ ಅಮೆರಿಕ ಮತ್ತು ನ್ಯಾಟೋದ ಕೈವಾಡ ಇದೆ ಎಂದು ದೂರಲಾಗುತ್ತದೆ. ಅವಧಿಗೂ ಮುಂಚೆ ಯನುಕೋವಿಕ್‌ನನ್ನು (ಅವರು ನಂತರ ರಷ್ಯಾದಲ್ಲಿ ನೆಲೆ ಪಡೆಯುತ್ತಾರೆ) ರಾಜೀನಾಮೆ ನೀಡುವಂತೆ ಮಾಡಿ ನಡೆಸಿದ ಚುನಾವಣೆಯಲ್ಲಿ ಪೆಟ್ರೊ ಪೊರೊಶೆನ್ಕೋ ಗೆಲ್ಲುತ್ತಾರೆ. ಯುರೋಪಿಯನ್ ಒಕ್ಕೂಟದ ಜೊತೆ ಸೇರುವ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಇದು ರಷ್ಯಾದಿಂದ ವಿಮುಖವಾದ ಸರ್ಕಾರವಾಗುತ್ತದೆ.

2019ರಲ್ಲಿ ಅಧ್ಯಕ್ಷ ಸ್ಥಾನದ ಮರು ಆಯ್ಕೆಗೆ ಸ್ಪರ್ಧಿಸಿ ಸೋಲುತ್ತಾರೆ. ಹಾಸ್ಯ ನಟನಾಗಿ ಹೆಸರು ಮಾಡಿದ್ದ, ’ಸರ್ವೆಂಟ್ಸ್ ಆಫ್ ಪೀಪಲ್’ ಎಂಬ ಹಾಸ್ಯ ಧಾರಾವಾಹಿಯ ಮೂಲಕ ಜನಪ್ರಿಯರಾಗಿದ್ದ ವೊಲೋಡಿಮಿರ ಝೆಲೆನ್ಸ್ಕಿ ಅದೇ ಹೆಸರಿನ ಪಕ್ಷದ ಮೂಲಕ ಸ್ಪರ್ಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ವಿಕ್ಟರ್ ಮೆಡ್ವಚುಕ್ ಅವರ ’ಆಪೊಸಿಷನ್ ಪ್ಲಾಟ್‌ಫಾರ್ಮ್- ಫಾರ ಲೈಫ್’ ಪಕ್ಷ ದೊಡ್ಡ ವಿರೋಧಪಕ್ಷವಾಗಿ ಹೊರಹೊಮ್ಮುತ್ತದೆ. ಪುಟಿನ್ ಅವರ ನಿಕಟ ಗೆಳೆಯರಾಗಿರುವ ಮೆಡ್ವಚುಕ್ ಉಕ್ರೇನಿನ ದೊಡ್ಡ ಆಲಿಗಾರ್ಕ್ ಅಥವಾ ದೈತ್ಯ ಬ್ಯುಸಿನೆಸ್‌ಮ್ಯಾನ್. ಝೆಲೆನ್ಸ್ಕಿ ಸಂಪೂರ್ಣ ಪಶ್ಚಿಮ ಯುರೋಪ್ ಮತ್ತು ಅಮೆರಿಕ ಕಡೆಗೆ ವಾಲಿದರೆ, ಮೆಡ್ವಚುಕ್ ಪುಟಿನ್ ನಿಷ್ಠ. ಎಷ್ಟು ನಿಷ್ಠನೆಂದರೆ ಮೆಡ್ವಚುಕ್ ಮಗಳಿಗೆ ಪುಟಿನ್ ಗಾಡ್‌ಫಾದರ್. ಚಾನೆಲ್ 112 ಮತ್ತು ನ್ಯೂಸ್‌ಒನ್ ಎಂಬ ದೊಡ್ಡ ಸುದ್ದಿ ಟಿವಿ ನೆಟ್‌ವರ್ಕ್‌ಗಳ ಒಡೆಯನಾದ ಮೆಡ್ವಚುಕ್, ಝೆಲೆನ್ಸ್ಕಿ ವಿರುದ್ಧ ಪರ್ಸೆಪ್ಷನ್ ಯುದ್ಧ ಸಾರುತ್ತಾರೆ.

ಇದರ ನೇರ ಪರಿಣಾಮವಾಗಿ ಝೆಲೆನ್ಸ್ಕಿ ಜನಪ್ರಿಯತೆ ತೀವ್ರವಾಗಿ ಕುಸಿಯುತ್ತದೆ. ಇದರಿಂದ ಎಚ್ಚೆತ್ತುಕೊಳ್ಳುವ ಝೆಲೆಸ್ಸ್ಕಿ ಮೆಡ್ವಚುಕ್ ಮೇಲೆ ಹಲವು ಆರೋಪ ಹೊರಿಸಿ ತನಿಖೆಗೆ ಆದೇಶಿಸುತ್ತಾರೆ. ಈ ತಿಕ್ಕಾಟ ತಾರಕಕ್ಕೇರುವುದು ಕೊರೊನಾ ಲಸಿಕೆ ರಾಯಭಾರದ ಸಂದರ್ಭದಲ್ಲಿ. ರಷ್ಯಾ ಲಸಿಕೆ ಅಭಿವೃದ್ಧಿಪಡಿಸಿದ ಮೇಲೆ ಮೆಡ್ವಚುಕ್ ಪುಟಿನ್ ಅವರನ್ನು ಭೇಟಿ ಮಾಡಿ, ಉಕ್ರೇನ್‌ಗೆ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಒಪ್ಪಿಸಿರುವುದಾಗಿ ಘೋಷಿಸುತ್ತಾರೆ. ಇದನ್ನು ಲಸಿಕೆ ರಾಜಕಾರಣ ಎಂದು ಅಮೆರಿಕ ಟೀಕಿಸಿದ ಬೆನ್ನಲ್ಲೇ ಝೆಲೆನ್ಸ್ಕಿ ರಷ್ಯಾದ ಲಸಿಕೆಯನ್ನು ನಿರಾಕರಿಸುತ್ತಾರೆ. ಕೋವಿಡ್ ಸಾವುನೋವು ಹೆಚ್ಚುತ್ತಿರುವ ಸಂದರ್ಭದಲ್ಲಿನ ಈ ನಡೆಯಿಂದ ಝೆಲೆನ್ಸ್ಕಿ ಜನಪ್ರಿಯತೆಯನ್ನು ಕುಗ್ಗಿಸಲು ಮೆಡ್ವಚುಕ್ ಟಿವಿ ನೆಟ್‌ವರ್ಕ್ ಕೆಲಸ ಮಾಡುತ್ತದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮೆಡ್ವಚುಕ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗುತ್ತದೆ. ಮೆಡ್ವಚುಕ್‌ನ ಟಿವಿ ಚಾನೆಲ್‌ಗಳನ್ನು ನಿರ್ಬಂಧಿಸಲಾಗುತ್ತದೆ.

2014ರ ಸರ್ಕಾರ ಬದಲಾದ ಸಮಯದಲ್ಲಿ ರಷ್ಯಾ ಉಕ್ರೇನಿನ ಮೇಲೆ ದಾಳಿ ನಡೆಸಿ ಉಕ್ರೇನ್ ಪೂರ್ವದಲ್ಲಿರುವ ರಷ್ಯಾದ ಗಡಿಯಲ್ಲಿ ಕ್ರಿಮೆರಾವನ್ನು ಆಕ್ರಮಿಸಿಕೊಳ್ಳುತ್ತದೆ. ಡಾನ್‌ಬಾಸ್ (ಡಾನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳು) ಎಂದು ಕರೆಯಲಾಗುವ ಎರಡು ಪ್ರದೇಶಗಳಲ್ಲಿ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಬೆಂಬಲ ನೀಡಿರುತ್ತದೆ. 2019ರ ಚುನಾವಣೆಗಳಲ್ಲಿ ಕ್ರಿಮೆರಾದಲ್ಲಿ ಚುನಾವಣೆ ನಡೆಯಲೇ ಇಲ್ಲ ಹಾಗೂ ಡಾನ್‌ಬಾಸ್ ಪ್ರಾಂತ್ಯದಲ್ಲಿ ಚುನಾವಣ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು.

ಎಷ್ಟೋ ಯುದ್ಧಗಳು ಪ್ರಾರಂಭವಾಗುವುದೇ ಸಣ್ಣ ಕಾರಣಗಳಿಗಾಗಿಯೇ. ಈ ಬೇಡದ ಯುದ್ಧಕ್ಕೂ ನ್ಯಾಟೋ ಸದಸ್ಯತ್ವ ಪ್ರಕ್ರಿಯೆ ನೆಪವಾಗಿದ್ದರೂ, ರಷ್ಯಾದ ಅಧ್ಯಕ್ಷನ ಸರ್ವಾಧಿಕಾರದ ದುರ್ವರ್ತನೆ ಇದಕ್ಕೆ ಮುಖ್ಯ ಕಾರಣವಾಗಿದೆ. ಉಕ್ರೇನ್ ರಷ್ಯಾದ ಭಾಗ ಎಂಬಂತೆ ಪುನರುಚ್ಚರಿಸುವುದನ್ನು ಅವರು ಆಗಾಗ್ಗೆ ಮಾಡಿದ್ದಾರೆ. ಈಗ ನ್ಯಾಟೋ ದೇಶಗಳು ರಷ್ಯಾದ ಮೇಲೆ, ಅದರ ವ್ಯವಹಾರಗಳ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹಾಕಿದ್ದರೂ, ಆರ್ಥಿಕವಾಗಿ ಇದು ರಷ್ಯಾಗೆ ಸಮಸ್ಯೆ ಉಂಟುಮಾಡಬಹುದಾದರೂ ಸರ್ವಾಧಿಕಾರಿಗಳು ಇಂತಹವುದಕ್ಕೆ ಹೆದರಿದ, ಅದರಿಂದ ಹಿಮ್ಮೆಟ್ಟಿದ ಉದಾಹರಣೆಗಳು ಕಡಿಮೆ. ಒಟ್ಟಿನಲ್ಲಿ ಶಾಂತಿಗಾಗಿ ವಿಶ್ವ ಮಾಡುತ್ತಿರುವ ಪ್ರಾರ್ಥನೆಗೆ ಪುಟಿನ್ ಓಗೊಡುವ ಲಕ್ಷಣಗಳು ಸುಲಭಕ್ಕೆ ಕಾಣುತ್ತಿಲ್ಲ.

ಯುರೋಪಿನ ಪ್ರತಿಕ್ರಿಯೆ

ಅಮೆರಿಕದ 9/11 ದಾಳಿಯ ನಂತರ ಅಮೆರಿಕದ ಯುದ್ಧಗಳಿಗೆ ಹಲವು ನ್ಯಾಟೋ ಸದಸ್ಯರು ಕೈಜೋಡಿಸಿದ್ದರು. ಆಗಿನಿಂದಲೂ ಇಂತಹ ಅಪವಿತ್ರ ಮೈತ್ರಿಯ ಬಗ್ಗೆ ಅಸಮಧಾನ ಕೇಳಿಬರುತ್ತಲೇ ಇದೆ. ಈ ಬಾರಿ ರಷ್ಯಾವನ್ನು ಸಮಾಧಾನಗೊಳಿಸುವುದಕ್ಕೆ ಫ್ರಾನ್ಸ್ ಮತ್ತು ಜರ್ಮನಿ ಒಂದು ಮಟ್ಟಕ್ಕೆ ಪ್ರಯತ್ನಿಸಿದವಾದರೂ (ಅದು ಮಾನವೀಯ ಕಾರಣಗಳಿಗಿಂತಲೂ, ರಷ್ಯಾ ಜೊತೆಗಿನ ಗ್ಯಾಸ್ ಇತ್ಯಾದಿ ವ್ಯವಹಾರದ ಕಾರಣಗಳೇ ಪ್ರಮುಖವಾಗಿ) ಕೊನೆಗೆ ಅಮೆರಿಕದ ತಾಳಕ್ಕೇ ಕುಣಿಯುವಂತಾದವು. ವಿಶ್ವದ ಪವರ್ ಸಮತೋಲನದ ಕಾರಣಕ್ಕಾದರೂ ಈ ನ್ಯಾಟೋ ಮಿಲಿಟರಿ ಟ್ರೀಟಿ ಕೂಡ ವಿಘಟನೆಯಾಗುವುದು ಇಂದು ಮುಖ್ಯವಾಗಿದೆ. ಆದರೆ ಆ ನಿಟ್ಟಿನಲ್ಲಿ ಪಶ್ಚಿಮದ ಮಾಧ್ಯಮಗಳು ಭಾರತದ ತುತ್ತೂರಿ ಮಾಧ್ಯಮಗಳಿಗಿಂತ ಭಿನ್ನವಾಗೇನಿಲ್ಲ. ನ್ಯಾಟೋ ದೌರ್ಜನ್ಯಗಳನ್ನು ಅಲ್ಲಿನ ಮುಖ್ಯವಾಹಿನಿ ಮಾಧ್ಯಮಗಳು ನೆಪಮಾತ್ರಕ್ಕೂ ಖಂಡಿಸುವುದಿಲ್ಲ. ಈಗ ಜರ್ಮನಿಯ ಚಾನ್ಸೆಲರ್ ಆಗಿ ಸೋಶಿಯಲಿಸ್ಟ್ ಹಿನ್ನೆಲೆಯ ಓಲಾಫ್ ಶೋಲ್ಸ್ ಬಂದಿದ್ದರೂ ಅವರು ಅಮೆರಿಕದ ಶೋಷಣೆಯನ್ನು ವಿರೋಧಿಸುವ ಲಕ್ಷಣಗಳ್ಯಾವುವೂ ಕಾಣುತ್ತಿಲ್ಲ. ಎರಡನೇ ವಿಶ್ವಯುದ್ಧದಲ್ಲಿ ರಿಸೀವಿಂಗ್ ತುದಿಯಲ್ಲಿ ಇದ್ದ ದೇಶಗಳು ಇಂದು ಅದರಿಂದ ಪಾಠ ಕಲಿತಿಲ್ಲ ಅನ್ನುವುದೂ ಖೇದದ ಸಂಗತಿ.

ತೋಳ ಕುರಿ ಕಥೆ ಆಗದಿರಲಿ; ಶಾಂತಿ ಪ್ರಕ್ರಿಯೆಗೆ ರಷ್ಯಾ ಪ್ರಾಮಾಣಿಕವಾಗಿ ಸ್ಪಂದಿಸಲಿ..

ಫೆಬ್ರವರಿ 24ರಿಂದ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿದ ರಷ್ಯಾ, ಉಕ್ರೇನ್ ರಾಜಧಾನಿ ಕೀವ್ ಮತ್ತಿತರ ಪ್ರದೇಶಗಳಲ್ಲಿ ತೀವ್ರ ದಾಳಿ ನಡೆಸಿದೆ. ನೂರಾರು ನಾಗರಿಕರು ಮೃತರಾಗಿದ್ದಾರೆ. ಮಿಲಿಟರಿ ಸೌಕರ್ಯಗಳಲ್ಲದ ಎಷ್ಟೋ ನಾಗರಿಕ ಮತ್ತು ಸರ್ಕಾರಿ ಸಮುಚ್ಚಯಗಳ ಮೇಲೆ ರಷ್ಯಾ ದಾಳಿ ಮಾಡುತ್ತಿರುವುದು ವರದಿಯಾಗಿದೆ. ಹಾರ್ಕಿವ್ ನಗರದಲ್ಲಿ ರಷ್ಯಾ ಮಿಲಿಟರಿ ಪಡೆಗಳ ಶೆಲ್ ದಾಳಿಗೆ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಅಣ್ವಸ್ತ್ರಗಳನ್ನು ಉಪಯೋಗಿಸುವ ಮಾತನ್ನೂ ಪುಟಿನ್ ಆಡಿದ್ದಾರೆ. ಉಕ್ರೇನ್ ಕದನವಿರಾಮಕ್ಕೆ ಮನವಿ ಮಾಡಿ, ಉಕ್ರೇನ್-ರಷ್ಯಾ-ಬೆಲಾರಸ್ ಗಡಿಯಲ್ಲಿ ಮಾತುಕತೆಗೆ ಆಹ್ವಾನಿಸಿದೆ. ಮೊದಲ ಸುತ್ತಿನ ಮಾತುಕತೆ ಫಲಪ್ರದವಾಗದೆ ರಷ್ಯಾ ಯುದ್ಧ ಮುಂದುವರೆಸಿದೆ. ಯಾವುದೇ ಅಗ್ರೆಸರ್ ತೋಳ-ಕುರಿಯ ಕಥೆಯ ತೋಳದಂತೆ ವರ್ತಿಸುವುದನ್ನು ಜಗತ್ತು ಕಂಡಿದೆ.

’ನೀನು ನೀರು ಕುಡಿದು ಅದನ್ನು ಬಗ್ಗಡ-ಎಂಜಲು ಮಾಡಿದ ನೀರನ್ನು ನಾನು ಕುಡಿಯಬೇಕೇ’ ಎಂಬ ತೋಳದ ಪ್ರಶ್ನೆಗೆ ಕುರಿ ಇಲ್ಲ ’ನೀನು ತೊರೆಯ ಮೇಲ್ಭಾಗದಲ್ಲಿ ನಿಂತಿದ್ದೀಯ, ನಾನು ಕೆಳಗಿದ್ದೇನೆ’ ಎನ್ನುತ್ತದೆ. ಅದಕ್ಕೆ ತೋಳ ’ಓ ಇರಬಹುದು, ಆದರೆ 10 ವರ್ಷಗಳ ಹಿಂದೆ ನೀನು ನನಗೆ ಅವಮಾನ ಮಾಡಿರಲಿಲ್ಲವೇ ಅನ್ನುತ್ತದೆ’. ಅದಕ್ಕೆ ಕುರಿ ’ಅಯ್ಯೋ 10 ವರ್ಷಗಳ ಮುಂಚೆ ನಾನು ಹುಟ್ಟೇ ಇರಲಿಲ್ಲ’ ಎನ್ನುತ್ತದೆ. ’ಹಾಗಿದ್ದರೆ ನಿಮ್ಮ ಅಪ್ಪ ಅವಮಾನ ಮಾಡಿದ್ದ’ ಎಂದು ಹೇಳುತ್ತಾ ಕುರಿಯ ಮೇಲೆರಗಿ ಅದನ್ನು ತಿನ್ನುತ್ತದೆ.

ರಷ್ಯಾ ಮತ್ತು ಪುಟಿನ್ ತೋಳವಾಗಬಾರದೆಂಬ ಆಶಯವನ್ನಷ್ಟೇ ನಾವು ಈಗ ವ್ಯಕ್ತಪಡಿಸಬಹುದು. ಯಾವುದೇ ಯುದ್ಧದಲ್ಲಿ ದಾಳಿ ನಡೆಸುವವನು ತರ್ಕದಿಂದ ವಿವೇಚನೆಯಿಂದ ದೂರವುಳಿದಿರುತ್ತಾನೆ. ಸಾವು ನೋವುಗಳಿಗೆ ಅವನ ಮನಸ್ಸು ಮತ್ತು ಹೃದಯ ಎಂದಿಗೂ ಮಿಡಿಯುವುದಿಲ್ಲ ಮತ್ತು ಕರಗುವುದಿಲ್ಲ. ಇಂತಹ ಕಠಿಣ ಹೃದಯದ ಮುಖಂಡರು ಜಗತ್ತಿನೆಲ್ಲೆಡೆ ವಿನಾಶಕ್ಕೆ ಹಾತೊರೆಯುತ್ತಿದ್ದಾರೆ. ಅಂತಹವರ ಸಾಲಿನಲ್ಲಿ ಪುಟಿನ್ ಮುಂಚೂಣಿಯಲ್ಲಿದ್ದಾರೆ.

21ನೇ ಶತಮಾನದಲ್ಲಿ ಯುದ್ಧ ಕ್ರಿಮಿನಲ್ ಅಪರಾಧ ಎಂಬುದಂತೂ ನಿರ್ವಿವಾದ. ವಿಶ್ವದ ಬಲಾಬಲಗಳ ಅಸಮತೋಲನದ ಕಾರಣವನ್ನು ಮುಂದೆಮಾಡಿ ಯುದ್ಧ ಹೂಡುವುದು ಯಾವುದೇ ನಿಟ್ಟಿನಲ್ಲಿಯೂ ಅಕ್ಷಮ್ಯ. ದೇಶಗಳೆಂದರೆ ನ್ಯಾಶನಲಿಸ್ಟ್ ಭಾವನೆಗಳನ್ನು ಉದ್ದೀಪಿಸಿ, ಸ್ಪರ್ಧಾತ್ಮಕ ಭಾವನೆಯಲ್ಲಿ ಅನ್ಯ ದೇಶಗಳನ್ನು ಶತ್ರುಗಳನ್ನಾಗಿಸುವ ಪಾಪ್ಯುಲಿಸ್ಟ್ ನಾಯಕರಷ್ಟೇ ಅಲ್ಲ. ಮನುಷ್ಯ ಪ್ರೀತಿಯನ್ನು ಹೊಂದಿರುವ, ನೆರೆಹೊರೆಯ ದೇಶಗಳ ಜನರನ್ನೂ ಮಾನವೀಯತೆಯಿಂದ ಕಾಣುವ ಲಕ್ಷಾಂತರ ಸಾಮಾನ್ಯರೂ ಇದ್ದಾರೆನ್ನುವುದಕ್ಕೆ ರಷ್ಯಾದಲ್ಲಿ ಯುದ್ಧವನ್ನು ವಿರೋಧಿಸಿ ಬಂಧನಕ್ಕೂ ಮುಂದಾಗುತ್ತಿರುವ ಸಾವಿರಾರು ಜನಗಳೇ ಸಾಕ್ಷಿ. ಈ ಭಾವನೆಯೇ ಇಂದು ಮನುಕುಲವನ್ನು ಉಳಿಸಬೇಕಿದೆ.


ಇದನ್ನೂ ಓದಿ: ಕೇಂದ್ರ ಸರ್ಕಾರ ಮತ್ತು ಗೋದಿ ಮಿಡಿಯಾಗಳಿಗೆ ಛೀಮಾರಿ ಹಾಕುತ್ತಿರುವ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...