Homeಕರ್ನಾಟಕಕಲಬುರಗಿ: 144 ಸೆಕ್ಷನ್‌ ಇದ್ದರೂ ಮೆರವಣಿಗೆ ನಡೆಸಿ ಗಲಭೆಗೆ ಪ್ರಚೋದಿಸಿದ ಕೇಂದ್ರ ಸಚಿವ ಮತ್ತು ಬಿಜೆಪಿ...

ಕಲಬುರಗಿ: 144 ಸೆಕ್ಷನ್‌ ಇದ್ದರೂ ಮೆರವಣಿಗೆ ನಡೆಸಿ ಗಲಭೆಗೆ ಪ್ರಚೋದಿಸಿದ ಕೇಂದ್ರ ಸಚಿವ ಮತ್ತು ಬಿಜೆಪಿ ಶಾಸಕರು!

ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ 72 ಮುಸ್ಲಿಮರ ಹೆಸರುಗಳಿದ್ದು, ಇದುವರೆಗೂ ಯಾವುದೇ ಸಂಘಪರಿವಾರದ ಕಾರ್ಯಕರ್ತರು ಅಥವಾ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಾಗಿಲ್ಲ

- Advertisement -
- Advertisement -

ಸೆಕ್ಷನ್‌ 144 ಜಾರಿಯಲ್ಲಿದ್ದರೂ ಕೇಂದ್ರ ಸಚಿವರು, ಆಡಳಿತಾರೂಢ ಬಿಜೆಪಿ ಶಾಸಕರು ಹಾಗೂ ಶ್ರೀರಾಮಸೇನೆ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಸಂಘಪರಿವಾರದ ಬೆಂಬಲಿಗರು ಕಲಬುರಗಿ ಜಿಲ್ಲೆಯ ಅಳಂದದಲ್ಲಿ ಮಾರ್ಚ್ 1 ರಂದು ಜಮಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಭುಗಿಲೆದ್ದ ಸಂಘರ್ಷದ ಹಿನ್ನೆಲೆಯಲ್ಲಿ ಪೊಲೀಸರು 72 ಮುಸ್ಲಿಮರ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ ಮೆರವಣಿಗೆಗೆ ನೇತೃತ್ವ ನೀಡಿದ ಬಿಜೆಪಿ ನಾಯಕರು ಅಥವಾ ಯಾವುದೆ ಸಂಘಪರಿವಾರದ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಾಗಿಲ್ಲ.

ಮೆರವಣಿಗೆಯ ನೇತೃತ್ವವನ್ನು ಒಕ್ಕೂಟ ಸರ್ಕಾರದ ಸಚಿವ ಭಗವಂತ್‌ ಖೂಬಾ, ಅಳಂದಾ ಶಾಸಕ ಸುಭಾಷ್‌ ಗುತ್ತೇದಾರ್‌, ಸೇಡಂ ಶಾಸಕ ರಾಜ್‌ಕುಮಾರ್‌ ಪಾಟಿಲ್, ಗುಲ್ಬರ್ಗಾ ಗ್ರಾಮಾಂತರ ಶಾಸಕ ಬಸವರಾಜ್ ಮಟ್ಟಿಮೋಡ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್‌ ವಹಿಸಿದ್ದರು ಎಂದು ಸ್ಥಳೀಯ ಪತ್ರಕರ್ತರು ನಾನುಗೌರಿ.ಕಾಂಗೆ ಹೇಳಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಗಲಭೆ: ತಮ್ಮದ್ದಲ್ಲದ ತಪ್ಪಿಗೆ ಬಲಿಪಶುವಾದ ಮುಸ್ಲಿಮರ ನೋವಿನ ಕಥೆಯಿದು

ಘಟನೆಯ ವಿವರ

ಅಳಂದಾದಲ್ಲಿರುವ ಲಾಡಲ್ ಮಶಾಕ್ ದರ್ಗಾದಲ್ಲಿ ಮಾರ್ಚ್‌ 1 ರಂದು ಸಂದಲ್ ಮೆರವಣಿಗೆ ಮತ್ತು ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಅದೇ ದಿನಂದು ಶ್ರೀರಾಮಸೇನೆ ಮತ್ತು ಇರತ ಸಂಘಪರಿವಾರದ ಸಂಘಟನೆಗಳು ಮಹಾಶಿವರಾತ್ರಿಯ ಸಂದರ್ಭದಲ್ಲಿ ದರ್ಗಾ ಆವರಣದಲ್ಲೆ ಇರುವ ಶಿವಲಿಂಗಕ್ಕೆ ‘ಶುದ್ಧೀಕರಣ ಪೂಜೆ’ ಸಲ್ಲಿಸುವುದಾಗಿ ಘೋಷಿಸಿತ್ತು. ಹೀಗಾಗಿ ಅಳಂದಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿಗೊಳಿಸಿದ್ದರು.

ಇದರ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಮತ್ತು ಶ್ರೀರಾಮಸೇನೆ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಸಂಘಪರಿವಾರ ಕಾರ್ಯಕರ್ತರು ಶಿವಲಿಂಗಕ್ಕೆ ಶುದ್ದೀಕರಣ ಪೂಜೆ ಮಾಡುವುದಾಗಿ ಮೆರವಣಿಗೆ ನಡೆಸಿ ದರ್ಗಾ ಆವರಣ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ಈ ಮೆರವಣಿಗೆಯ ನೇತೃತ್ವವನ್ನು ಒಕ್ಕೂಟ ಸರ್ಕಾರದ ಸಚಿವ ಭಗವಂತ್‌ ಖೂಬಾ, ಅಳಂದಾ ಬಿಜೆಪಿ ಶಾಸಕ ಸುಭಾಷ್‌ ಗುತ್ತೇದಾರ್‌, ಸೇಡಂ ಬಿಜೆಪಿ ಶಾಸಕ ರಾಜ್‌ಕುಮಾರ್‌ ಪಾಟಿಲ್ ತೇಲ್ಕೂರ್, ಗುಲ್ಬರ್ಗಾ ಗ್ರಾಮಾಂತರ ಬಿಜೆಪಿ ಶಾಸಕ ಬಸವರಾಜ್ ಮಟ್ಟಿಮೋಡ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್‌ ವಹಿಸಿದ್ದರು ಎಂದು ನಾನುಗೌರಿ.ಕಾಂಗೆ ಸ್ಥಳೀಯ ಪತ್ರಕರ್ತರು ತಿಳಿಸಿದ್ದಾರೆ.

ಈ ಮೆರವಣಿಗೆಯನ್ನು ನಿಭಾಯಿಸಲು ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಪರದಾಡಬೇಕಾಯಿತು ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

144 ಸೆಕ್ಷನ್ ಜಾರಿಯಲ್ಲಿದ್ದರೂ, ಆಳಂದ ಶಾಸಕ ಸುಭಾಷ್ ಗುತ್ತೇದಾರ್ ನಿವಾಸದಿಂದ ಹೊರಟ ಸಂಘಪರಿವಾರದ ಕಾರ್ಯಕರ್ತರ ಮೆರವಣಿಗೆ ದರ್ಗಾದತ್ತ ಸಾಗಿದೆ. ಆದರೆ ಪೊಲೀಸರು ಈ ಮೆರವಣಿಗೆಯನ್ನು ಬಸ್ ನಿಲ್ದಾಣದ ಬಳಿ ತಡೆದು ನಿಷೇಧಾಜ್ಞೆ ಜಾರಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಕ್ಷನ್ ಇರುವುದರಿಂದ ವಾಪಾಸು ಹೊರಟುಹೋಗುವಂತೆ ಪೊಲೀಸರು ಅವರಿಗೆ ಮನವಿ ಮಾಡಿದರೂ ಬಲಪಂಥೀಯ ಗುಂಪು ಜಗ್ಗಿರಲಿಲ್ಲ. ಕೊನೆಗೆ ಪೊಲೀಸರು ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೇವಲ 10 ಮಂದಿಗೆ ಮಾತ್ರ ಅವಕಾಶ ನೀಡಲು ಮುಂದಾಗಿದ್ದರು. ಆದರೆ, ಸಂಘಪರಿವಾರದ ಮುಖಂಡರು ಇದಕ್ಕೆ ಒಪ್ಪದೆ, ಇಡೀ ಗುಂಪನ್ನು ದರ್ಗಾ ಆವರಣದೊಳಗೆ ಬಿಡುವಂತೆ ಪಟ್ಟು ಹಿಡಿದು ಬಸ್ ನಿಲ್ದಾಣದ ಹೊರಗೆ ಧರಣಿ ಮಾಡಿದ್ದಾರೆ.

ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಮುಸ್ಲಿಮರು ದರ್ಗಾದ ಬಳಿ ಜಮಾಯಿಸಿ, ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದರು ಎಂದು ದಿ ಹಿಂದೂ ವರದಿ ಮಾಡಿದೆ. ಇಷ್ಟೆ ಅಲ್ಲದೆ, ‘ನಿಷೇಧಾಜ್ಞೆಗಳನ್ನು ಮುಸ್ಲಿಮರಿಗೆ ಮಾತ್ರ ಯಾಕೆ ಅನ್ವಯ ಮಾಡಿದ್ದೀರಿ, ಬಲಪಂಥೀಯ ಕಾರ್ಯಕರ್ತರಿಗೆ ಅದು ಅನ್ವಯ ಆಗುವುದಿಲ್ಲವೆ’ ಎಂದು  ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಸಂಘಪರಿವಾರ ಸಂಘಟನೆಗಳ 10 ಜನರಿಗೆ ದರ್ಗಾ ಆವರಣದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವ ಅಧಿಕಾರಿಗಳ ನಿರ್ಧಾರವನ್ನು ಅವರು ವಿರೋಧಿಸಿದ್ದಾರೆ.

ಇದನ್ನೂ ಓದಿ:  ದೆಹಲಿ ಗಲಭೆ ಪ್ರಕರಣ: ಅಪರಾಧಿ ದಿನೇಶ್ ಯಾದವ್‌ಗೆ ಐದು ವರ್ಷ ಜೈಲು ಶಿಕ್ಷೆ

ಈ ವೇಳೆ ನಡೆದ ಸಂಘರ್ಷದಿಂದ ಕೆಲವು ಕಡೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಹಾನಿಯಾದ ಘಟನೆಗಳು ವರದಿಯಾಗಿದ್ದು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಹಾಯಕ ಆಯುಕ್ತರ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಅಂತಿಮವಾಗಿ ಪೊಲೀಸರು ಮತ್ತು ಜಿಲ್ಲಾಡಳಿತದ ನಿರಂತರ ಮನವೊಲಿಕೆಯಿಂದಾಗಿ ದರ್ಗಾವನ್ನು ಪ್ರವೇಶಿಸಿ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲು ಉಭಯ ಕಡೆಯ ಒಟ್ಟು 20 ಸದಸ್ಯರಿಗೆ ಅವಕಾಶ ನೀಡಲಾಗಿ, ಸಂಜೆಯ ವೇಳೆಗೆ ಉದ್ವಿಗ್ನತೆ ತಣ್ಣಗಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ ಅವರು ಆಳಂದದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಐದು ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿದ್ದರು. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತು ಸಂಘಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಅವರನ್ನು ವಶಕ್ಕೆ ಪಡೆದು ವಾಪಾಸು ಕೂಡಾ ಕಳುಹಿಸಲಾಗಿತ್ತು.

ಈ ನಡುವೆ ಗಲಭೆಗೆ ಸಂಬಂಧಪಟ್ಟಂತೆ ದಾಖಲಾಗಿರುವ ಎಫ್‌ಐಆರ್‌ಗಳಲ್ಲಿ ಯಾವುದೇ ಸಂಘಪರಿವಾರದ ಸಂಘಟನೆಯ ಸದಸ್ಯರನ್ನು ಹೆಸರಿಸಲಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮತ್ತು ಅಳಂದ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್‌ ಮಂಜುನಾಥ್ ಎಸ್. ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

ಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಎಫ್‌ಐಆರ್‌ಗಳನ್ನು ಮುಸ್ಲಿಮರ ವಿರುದ್ದ ಪೊಲೀಸರು ದಾಖಲಿಸಿದ್ದು, 144 ಸೆಕ್ಷನ್‌‌ ಇದ್ದು ಕೂಡಾ ಮೆರವಣಿಗೆ ನಡೆಸಿ, ಗಲಭೆಗೆ ಪ್ರಚೋಧಿಸಿದ ಯಾವುದೆ ಬಿಜೆಪಿ ನಾಯಕರು ಮತ್ತು ಸಂಘಪರಿವಾರದ ಕಾರ್ಯಕರ್ತರನ್ನು ಇದರಲ್ಲಿ ಹೆಸರಿಸಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 167 ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮುರುಡೇಶ್ವರದ ಶಿವನ ವಿಗ್ರಹ ವಿರೂಪ: ಚುನಾವಣೆಗಾಗಿ ಐಸಿಸ್ ಹೆಸರಲ್ಲಿ ಕೋಮು ಗಲಭೆಗೆ ಹುನ್ನಾರ? 

ಆದಾಗ್ಯೂ, ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರು, ಸೆಕ್ಷನ್ 188 ರ ಅಡಿಯಲ್ಲಿ ಮುಸ್ಲಿಂ ಸಮುದಾಯ ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರ್ಟ್‌ಗೆ ವರದಿಗಳನ್ನು ಸಲ್ಲಿಸಿರುವುದಾಗಿ ನಾನುಗೌರಿ.ಕಾಂಗೆ ಹೇಳಿದ್ದಾರೆ. “ಪ್ರತಿಭಟನೆ ಆಯೋಜಿಸಿರುವ ಪ್ರಮುಖ ವ್ಯಕ್ತಿಗಳ ಮೇಲೆ ದೂರು ನೀಡಿದ್ದೇನೆ. ನಾಲ್ಕೈದು ಹೆಸರು ಬರೆದು ‘ಇತರೆ’ ಎಂದು ನಮೂದಿಸಿ ದೂರು ನೀಡಿದ್ದೇನೆ” ಎಂದು ತಿಳಿಸಿದ ಅವರು, ಅವರ ಹೆಸರು ಹೇಳಲು ನಿರಾಕರಿಸಿದ್ದಾರೆ.

ಈ ವೇಳೆ ನಾನುಗೌರಿ.ಕಾಂ ಬಿಜೆಪಿಯ ಸಚಿವರ, ಶಾಸಕರು ಮತ್ತು ನಾಯಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ತಹಸಿಲ್ದಾರ್‌ ಅವರಿಗೆ ಸೂಚಿದಾಗ, “ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ದೂರು ನೀಡಿದ್ದೇವೆ. ಅದರಲ್ಲಿ ಭಾಗವಹಿಸಿರುವ ‘ಇವರುಗಳು’, ‘ಇತರೆ’ಯಲ್ಲಿ ಬರುತ್ತಾರೆ” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಫೆಬ್ರವರಿ 28 ರಂದು ಪೊಲೀಸರು ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಚೈತನ್ಯ ಶಿವಲಿಂಗವನ್ನು ಅಪವಿತ್ರ ಮಾಡಿದ್ದಕ್ಕೆ ಎಫ್‌ಐಆರ್ ದಾಖಲಿಸಿದ್ದರು.

ಇದೀಗ ಮತ್ತಷ್ಟು ಉದ್ವಿಗ್ನತೆಯನ್ನು ತಡೆಯಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆಳಂದದಲ್ಲಿ ಮಾರ್ಚ್ 5 ರವರೆಗೆ ಸೆಕ್ಷನ್ 144 ರ ಅಡಿಯಲ್ಲಿ ಹೊಸ ನಿಷೇಧಾಜ್ಞೆ ಆದೇಶಗಳನ್ನು ಹೊರಡಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿಯಾಗಿದೆ.

ಸ್ಥಳೀಯರೊಬ್ಬರು ಹೇಳುವಂತೆ “ಅಳಂದಾದಲ್ಲಿರುವ ಲಾಡಲ್ ಮಶಾಕ್ ದರ್ಗಾವು ಭಾವೈಕ್ಯತೆಯ ಕೇಂದ್ರವಾಗಿದೆ. ಒಂದೇ ಆವರಣದಲ್ಲಿ ಶಿವಲಿಂಗ ಮತ್ತು ದರ್ಗಾವಿದೆ. ನೂರಾರು ವರ್ಷಗಳಿಂದ ಹಿಂದೂ ಮುಸ್ಲಿಮರು ಇಲ್ಲಿ ತಮ್ಮ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರನ್ನು ಧ್ರುವೀಕರಣ ಮಾಡಲು ಬೇಕಾಗಿ ಈ ಅಹಿತಕರ ಘಟನೆಗಳನ್ನು ನಡೆಸಲಾಗುತ್ತಿದೆ”ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...