Homeಕರ್ನಾಟಕಶಿವಮೊಗ್ಗ ಗಲಭೆ: ತಮ್ಮದ್ದಲ್ಲದ ತಪ್ಪಿಗೆ ಬಲಿಪಶುವಾದ ಮುಸ್ಲಿಮರ ನೋವಿನ ಕಥೆಯಿದು...

ಶಿವಮೊಗ್ಗ ಗಲಭೆ: ತಮ್ಮದ್ದಲ್ಲದ ತಪ್ಪಿಗೆ ಬಲಿಪಶುವಾದ ಮುಸ್ಲಿಮರ ನೋವಿನ ಕಥೆಯಿದು…

ಶಿವಮೊಗ್ಗದಲ್ಲಿ ಪೊಲೀಸರ ಎದುರಲ್ಲೇ ಆದ ಈ ಕ್ರೌರ್ಯದ ಕುರಿತು ‘ದಿ ನ್ಯೂಸ್‌ ಮಿನಿಟ್‌’ ವಿಸ್ತೃತವಾಗಿ ವರದಿ ಮಾಡಿದೆ. ತಮಗಾದ ನೋವು, ನಷ್ಟವನ್ನು ಹಲವು ಮುಸ್ಲಿಮರು ಹಂಚಿಕೊಂಡಿದ್ದಾರೆ.

- Advertisement -
- Advertisement -

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ಶಿವಮೊಗ್ಗ ನಗರ ಅಶಾಂತಿಗೆ ಕಾರಣವಾಯಿತು. ಇಡೀ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರಗಳು ನಡೆದವು. ಪೊಲೀಸರು ಎದುರಲ್ಲೇ ಆದ ಈ ಕ್ರೌರ್ಯದ ಕುರಿತು ‘ದಿ ನ್ಯೂಸ್‌ ಮಿನಿಟ್‌’ ವಿಸ್ತೃತವಾಗಿ ವರದಿ ಮಾಡಿದೆ. ತಮಗಾದ ನೋವು, ನಷ್ಟವನ್ನು ಮುಸ್ಲಿಮರು ಹಂಚಿಕೊಂಡಿದ್ದು, ವರದಿಯ ಆಯ್ದ ಅಂಶಗಳು ಇಲ್ಲಿವೆ.

ಫೆ.21ರ ಸೋಮವಾರದಂದು ಸುಮಾರು ಒಂದು ಗಂಟೆ 20 ನಿಮಿಷಗಳ ಕಾಲ ಶಿವಮೊಗ್ಗದ ಆಜಾದ್ ನಗರ, ಓಟಿ ರಸ್ತೆ, ಗಾಂಧಿ ಬಜಾರ್, ಸೀಗೆಹಟ್ಟಿ, ಸಿದ್ದಯ್ಯ ನಗರ, ಉರ್ದು ಬಜಾರ್ ಮತ್ತು ಕ್ಲಾರ್ಕ್ ಪೇಟೆಯಂತಹ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳ ನಿವಾಸಿಗಳು ಭಯಭೀತರಾಗಿದ್ದರು. ವಿದ್ವಂಸಕ ಗುಂಪುಗಳು ಬೆಂಕಿ ಹಚ್ಚಿದವು, ಹಿಂಸಾತ್ಮಕವಾಗಿ ವರ್ತಿಸಿದವು. ಫೆಬ್ರವರಿ 20ರ ರಾತ್ರಿ ಕೊಲ್ಲಲ್ಪಟ್ಟ 26 ವರ್ಷದ ಹಿಂದುತ್ವ ಕಾರ್ಯಕರ್ತ ಹರ್ಷನ ಶವ ಮೆರವಣಿಗೆಯ ವೇಳೆ ಗುಂಪುಗಳು ಇಲ್ಲಿನ ನಿವಾಸಿಗಳನ್ನು ಗುರಿಯಾಗಿಸಿಕೊಂಡಿದ್ದವು.

ಮೆಕ್‌ಗಾನ್ ಆಸ್ಪತ್ರೆಯ ಶವಾಗಾರದಿಂದ ಹರ್ಷನ ಮನೆಯವರೆಗೆ, ಅಲ್ಲಿಂದ ರೋಟರಿ ಸ್ಮಶಾನದವರೆಗೆ ಶವದ ಮೆರವಣಿಗೆಯನ್ನು ಸೆಕ್ಷನ್ 144 ಜಾರಿಯ ನಡುವೆಯೇ ನಡೆಸಲಾಯಿತು. ಸುಮಾರು 600 ಜನರು ಮೆರವಣಿಗೆಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು, ಪೊಲೀಸ್ ಮೂಲಗಳು ಹೇಳುತ್ತವೆ.

ಐತಿಹಾಸಿಕವಾಗಿ ಕೋಮು ಘರ್ಷಣೆಗೆ ಸಾಕ್ಷಿಯಾಗಿರುವ ಹಳೆ ತೀರ್ಥಹಳ್ಳಿ ರಸ್ತೆಯ ಸ್ವಲ್ಪ ದೂರದಲ್ಲಿರುವ ಸೀಗೆಹಟ್ಟಿಯಲ್ಲಿ ಹರ್ಷ ಅವರ ನಿವಾಸವಿದೆ. ಹತ್ತಿರದಲ್ಲಿ ಎರಡು ಮಸೀದಿಗಳು, ಹಲವಾರು ಮುಸ್ಲಿಮರ ಮನೆಗಳು, ವಾಣಿಜ್ಯ ಸಂಸ್ಥೆಗಳಿವೆ.

ಭಾನುವಾರ ರಾತ್ರಿ ಹರ್ಷನ ಹತ್ಯೆಯ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳ ನಂತರ, “ಮುಸ್ಲಿಮರೇ ಅವನನ್ನು ಕೊಂದಿದ್ದಾರೆ” ಎಂಬ ಆರೋಪ ಕೇಳಿಬಂದಾಗ ಪ್ರದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪೊಲೀಸರು ಎಚ್ಚೆತ್ತುಕೊಂಡು ರಸ್ತೆಗಳಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಿದರು. ಆದರೆ ಹರ್ಷ ಅವರ ಪಾರ್ಥಿವ ಶರೀರವಿದ್ದ ಮೆಕ್‌ಗಾನ್ ಆಸ್ಪತ್ರೆಯ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಘೋಷಣೆಗಳನ್ನು ಕೂಗುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: BJP ಮತ್ತು ಅದರ ನಾಯಕರನ್ನು ಟೀಕಿಸುತ್ತಿರುವ ಈ ವ್ಯಕ್ತಿ ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ‘ಹರ್ಷ’ ಅಲ್ಲ

ಮಾರನೇ ದಿನ…

ಮೆರವಣಿಗೆಗೆ ಅವಕಾಶ ನೀಡಿದರೆ ಹಿಂಸಾಚಾರ ಭುಗಿಲೇಳುತ್ತದೆ ಎಂಬುದನ್ನು ಪೊಲೀಸರು ಬಲ್ಲವರಾಗಿದ್ದರೂ ಶವದ ಮೆರವಣಿಗೆಗೆ ಅವಕಾಶ ನೀಡಲಾಯಿತು. ನೂರಾರು ಜನರು ಶವದ ವಾಹನವನ್ನು ಹಿಂಬಾಲಿಸಿದರು. ನಗರದ ಬೀದಿಗಳಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು ಪ್ರತಿಧ್ವನಿಸಿದವು. ಮೆರವಣಿಗೆಯ ನೇತೃತ್ವವನ್ನು ಬಿಜೆಪಿಯ ನಾಯರಾದ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹಿರಿಯ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ವಹಿಸಿದ್ದರು.

ಸೆಕ್ಷನ್ 144 ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆಯಾದರೂ, ಪೊಲೀಸರು ಹಿರಿಯ ಬಿಜೆಪಿ ನಾಯಕರಿಗೆ ಭದ್ರತೆಯನ್ನು ಒದಗಿಸುತ್ತಿರುವುದು, ಜನನಿಬಿಡ ಬೀದಿಗಳಲ್ಲಿ ಮೆರವಣಿಗೆಗೆ ಅವಕಾಶ ನೀಡುತ್ತಿರುವುದು ಕಂಡುಬಂದಿದೆ. ಕೋಮು ಘರ್ಷಣೆಗಳಿಗೆ ಸಾಕ್ಷಿಯಾಗುವ ಪ್ರದೇಶಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

PC: The News Minute

ಮೆರವಣಿಗೆಯಲ್ಲಿದ್ದವರು ಮುಸ್ಲಿಮರ ಬೀದಿಗಳಿಗೆ ಪ್ರವೇಶಿಸುವುದನ್ನು, ಹಿಂಸೆ ನಡೆಸುವುದನ್ನು ತಡೆಯಲು ಪೊಲೀಸರಿಂದ ಸಾಧ್ಯವಾಗಲಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಗಲಭೆಕೋರರ ವಿರುದ್ಧ ಮಿತಿಮೀರಿದ ಬಲವನ್ನು ಪ್ರಯೋಗಿಸದಂತೆ, ತೀವ್ರ ಕ್ರಮಗಳನ್ನು ತೆಗೆದುಕೊಳ್ಳದಂತೆ ಸೂಚನೆಗಳಿದ್ದವು ಎಂಬುದಾಗಿ ಕಾನ್‌ಸ್ಟೆಬಲ್ ಒಬ್ಬರು ‘ದಿ ನ್ಯೂಸ್‌ ಮಿನಿಟ್‌’ಗೆ ತಿಳಿಸಿದ್ದಾರೆ.

“ಮೆರವಣಿಗೆಯಲ್ಲಿ ಯಾರೆಲ್ಲ ಇದ್ದರು ಎಂಬುದು ನಿಮಗೆ ತಿಳಿದಿದೆ. ನಾವು ಅವರ ವಿರುದ್ಧ ಏಕೆ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ನೀವು ಊಹಿಸಬಹುದು. ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಶಿವಮೊಗ್ಗ ಹಿಂಸಾಚಾರ ನಷ್ಟವನ್ನು ಈಶ್ವರಪ್ಪನವರಿಂದ ವಸೂಲಿ ಮಾಡಿ- ಹರಿಪ್ರಸಾದ್

ಹಿಂಸಾಚಾರದ ದಿನ ಕರ್ತವ್ಯದಲ್ಲಿದ್ದ ಸುಮಾರು ಜನ ಪೊಲೀಸ್ ಸಿಬ್ಬಂದಿಯೊಂದಿಗೆ ನ್ಯೂಸ್‌ ಮಿನಿಟ್‌ ಮಾತನಾಡಿದೆ. ಅನೇಕರು ಮಾಧ್ಯಮಗಳೊಂದಿಗೆ ಮಾತನಾಡುವಷ್ಟು ಅಧಿಕಾರ ಹೊಂದಿಲ್ಲ. ಆದರೆ ಹಿಂಸಾಚಾರವು ಅನಿರೀಕ್ಷಿತವಾಗಿರಲಿಲ್ಲ ಎಂದು ಆ ಪೊಲೀಸರು ತಿಳಿಸಿದ್ದಾರೆ.

“ನೀವು ಶಿವಮೊಗ್ಗದಲ್ಲಿನ ಕೋಮುಗಲಭೆಯ ಜಾಡು ಹಿಡಿದಿದ್ದರೆ, ಅಂತಹ ಪರಿಸ್ಥಿತಿಯನ್ನು ನೀವು ನಿರೀಕ್ಷಿಸಬಹುದು. ಆದರೆ ನಾವು ಆದೇಶಗಳನ್ನು ಅನುಸರಿಸುತ್ತಿದ್ದೇವೆ. ಅಂತಹ ಸ್ಥಳಗಳಲ್ಲಿ (ಸೂಕ್ಷ್ಮ ಪ್ರದೇಶಗಳು) ನಿಯೋಜಿಸಲಾದ ನಾವು ನಮ್ಮ ಕೈಲಾದಷ್ಟು ಮಾಡಿದ್ದೇವೆ… ” ಎಂದಿದ್ದಾರೆ ಮತ್ತೊಬ್ಬರು ಪೊಲೀಸರು.

ಗೂಂಡಾಗಳು ಘೋಷಣೆಗಳನ್ನು ಕೂಗುವುದನ್ನು, ಕಲ್ಲು ತೂರಾಟ ಮಾಡುವುದನ್ನು, ವಾಹನಗಳನ್ನು ಉರುಳಿಸುವುದನ್ನು ಉರ್ದು ಬಜಾರ್‌ನಲ್ಲಿ ಸೆರೆಯಾಗಿರುವ ವೀಡಿಯೊಗಳಲ್ಲಿ ಕಾಣಬಹುದು. ಲಾಠಿಗಳಿಂದ ಶಸ್ತ್ರಸಜ್ಜಿತರಾದ ಪೊಲೀಸ್ ಸಿಬ್ಬಂದಿಗಳು ಮೌಖಿಕವಾಗಿ ಆದೇಶಿಸುವುದನ್ನು ಕಾಣಬಹುದು.

ನೋವುಂಡವರ ಮಾತುಗಳು…

ಗಾಯಗೊಂಡ ನಿವಾಸಿಗಳಲ್ಲಿ ಒಬ್ಬರು 36 ವರ್ಷದ ಸಬ್ರೀನ್. ಅವರು ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಇಬ್ಬರು ಚಿಕ್ಕ ಮಕ್ಕಳು ಅವರಿಗಾಗಿ ಕಾಯುತ್ತಿದ್ದವು. ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಟಿದ್ದ ಸಬ್ರೀನ್ ಅವರು ಒಟಿ ರಸ್ತೆಯ ಕಿರಿದಾದ ಹಾದಿಯಲ್ಲಿ ಜನರ ಗುಂಪೊಂದು ಪ್ರವೇಶಿಸುವುದನ್ನು ನೋಡಿದರು. ಒಂದು ಕಲ್ಲು ಅವರ ತಲೆಗೆ ಬಡಿಯಿತು. ತನ್ನನ್ನು ರಕ್ಷಿಸಿಕೊಳ್ಳಲು ತಿರುಗಿದಾಗ ಇನ್ನೊಂದು ಕಲ್ಲು ಅವರ ಬೆನ್ನಿಗೆ ಬಡಿಯಿತು ಎಂಬುದನ್ನು ಅವರು ತಿಳಿಸಿದ್ದಾರೆ. “200 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಮೂವರು ಪೊಲೀಸರು ಇದ್ದರು” ಎಂದು ಅವರು ಆರೋಪಿಸಿದ್ದಾರೆ.

ಸಬ್ರೀನ್ ಗಾಯಗೊಂಡ ಪ್ರದೇಶದಲ್ಲಿ ಮದ್ರಸಾ ಸೇರಿದಂತೆ ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ. ಗಾಜಿನ ಕಿಟಕಿಗಳು ಒಡೆದು ಹೋಗಿವೆ. ಗಲಭೆಕೋರರು ಮದರಸಾವನ್ನು ಗುರಿಯಾಗಿಸಿಕೊಂಡಿದ್ದರು. ಒಳಗಿದ್ದ ಸುಮಾರು 20 ಮಕ್ಕಳು ಕಲ್ಲುಗಳು ಮತ್ತು ಇಟ್ಟಿಗೆಗಳ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪಟ್ಟ ಪಾಡನ್ನು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಗಾಜುಗಳನ್ನು ಒಡೆದುಹಾಕಿದ್ದು, ನಿಲ್ಲಿಸಿದ್ದ ವಾಹನಗಳು ಪಲ್ಟಿಯಾದದ್ದು, ಕೆಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಸದ್ದು ಕೇಳಿ ಮನೆಯಿಂದ ಹೊರ ಬಂದೆವು ಎನ್ನುತ್ತಾರೆ ಮದರಸಾದ ಸಮೀಪ ನಿವಾಸಿಗಳು.

ಉಮರ್ ಫಾರೂಕ್ ಉರ್ದು ಬಜಾರ್ ರಸ್ತೆಯಲ್ಲಿ ವಾಸಿಸುವ ಉದ್ಯಮಿ. ಈ ಹಿಂದೆ ನಗರದಲ್ಲಿ ಕೋಮು ಸೂಕ್ಷ್ಮ ಮೆರವಣಿಗೆಗಳು ನಡೆದಾಗ ತಮ್ಮ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿತ್ತು ಎಂದು ಅವರು ಹೇಳುತ್ತಾರೆ. ಆದರೆ ಈ ಬಾರಿ ಶವಯಾತ್ರೆ ಸಾಗುವಾಗ ಆರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಶವಯಾತ್ರೆ: ಈಶ್ವರಪ್ಪ, ರಾಘವೇಂದ್ರ ವಿರುದ್ಧ ದೂರು ದಾಖಲು

“ಮೆರವಣಿಗೆಯು ಬೇರೆ ಮಾರ್ಗದಲ್ಲಿ ಸಾಗಬೇಕಿತ್ತು. ಆದರೆ ಗಾಂಧಿ ಬಜಾರ್‌ಗೆ ತಿರುಗಿತು. ಈ ವೃತ್ತ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು, ಈ ಹಿಂದೆಲ್ಲ ಇಂತಹ ಸಮಯದಲ್ಲಿ ಪೊಲೀಸ್ ವ್ಯಾನ್ ನಿಲ್ಲುತ್ತಿತ್ತು. ಆದರೆ ಈ ಬಾರಿ ಇಲ್ಲಿ ಪೊಲೀಸರು ಕಾಣಲಿಲ್ಲ. ಕೇಸರಿ ಬಣ್ಣದ ಗೂಂಡಾಗಳು ಘೋಷಣೆಗಳನ್ನು ಕೂಗುವುದನ್ನು ಮತ್ತು ಒಳಗೆ ನುಗ್ಗುವುದನ್ನು ನಾವು ನೋಡಿದೆವು. ನಾವು ಅಸಹಾಯಕರಾಗಿದ್ದೆವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಿಫಲರಾದರು. ನಾನು ನಿರಂತರವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್‌ಗೆ ಕರೆ ಮಾಡುತ್ತಲೇ ಇದ್ದೆ. ಆದರೆ ಅವರು ನನ್ನ ಕರೆಗಳನ್ನು ಸ್ವೀಕರಿಸಲಿಲ್ಲ. ನಾನು ಅಪರಾಧ ವಿಭಾಗದ (CCB) ಸಿಬ್ಬಂದಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಅವರೂ ಸ್ವೀಕರಿಸಲಿಲ್ಲ” ಎಂದು ಉಮರ್ ನೆನಪಿಸಿಕೊಳ್ಳುತ್ತಾರೆ.

ಉರ್ದು ಬಜಾರ್‌ನಿಂದ 2 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಆಜಾದ್ ನಗರದ ಬಳಿಯೂ ಇದೇ ರೀತಿಯ ಹಲ್ಲೆಗಳಾದವು ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಹರ್ಷ ಹತ್ಯೆಯಲ್ಲಿ ಬಂಧಿತರಾದ ಇಬ್ಬರು ಆರೋಪಿಗಳು ಈ ಕಾಲೋನಿಗಳಲ್ಲಿ ವಾಸವಿದ್ದ ಕಾರಣ ಈ ಪ್ರದೇಶಗಳು ಗುರಿಯಾಗಿದ್ದವು. ಹೀಗಾಗಿ ಇಲ್ಲಿನ ನೂರಾರು ಜನರು ಸಮಸ್ಯೆಯನ್ನು ಎದುರಿಸಿದರು. ಗಲಭೆಕೋರರು ಮಸೀದಿಯನ್ನು ಧ್ವಂಸಗೊಳಿಸಿದರು, ಎಂದಿನಂತೆ ಜೀವನ ನಡೆಸುತ್ತಿದ್ದ ಜನರ ಮೇಲೆ  ಕಲ್ಲುಗಳನ್ನು ಎಸೆದರು.

“ಯಾರೂ ಯಾರಿಗೂ ಒಂದು ಮಾತನ್ನೂ ಹೇಳಲಿಲ್ಲ. ಅವರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ಅವರೆಲ್ಲರೂ ತಮ್ಮ ಮುಖವನ್ನು ಮಾಸ್ಕ್ ಮತ್ತು ಕರವಸ್ತ್ರದಿಂದ ಮುಚ್ಚಿಕೊಂಡಿದ್ದರು. ಅವರೆಲ್ಲರೂ ಶವಯಾತ್ರೆಯ ಭಾಗವಾಗಿದ್ದರು. ಪೊಲೀಸರಿಗೆ ಮೂಕಪ್ರೇಕ್ಷಕರಾಗಿದ್ದರು” ಎಂದು ನಿವಾಸಿಗಳು ಹೇಳುತ್ತಾರೆ.

“ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ತಲೆಗೆ ಐದು ಹೊಲಿಗೆ ಹಾಕಿಸಿಕೊಳ್ಳಲಾಗಿದೆ” ಎಂದು ಕರೀಂ ಹೇಳುತ್ತಾರೆ. “ನಾವು ಎಚ್ಚರವಾಗಿರುತ್ತೇವೆ. ರಾತ್ರಿಯಲ್ಲಿ ನಿಗಾ ಇಡುತ್ತೇವೆ, ಹಗಲಿನಲ್ಲಿ ಸ್ವಲ್ಪ ನಿದ್ರೆ ಮಾಡಲು ಪ್ರಯತ್ನಿಸುತ್ತೇವೆ. ನಾವು ಮತ್ತೆ ಆಕ್ರಮಣಕ್ಕೆ ಒಳಗಾಗುತ್ತೇವೆ ಎಂಬ ಭಯದಲ್ಲಿ ಬದುಕುತ್ತಿದ್ದೇವೆ” ಎಂದು ಅವರು ನೋವು ತೋಡಿಕೊಂಡಿದ್ದಾರೆ.

PC: The News Minute

ಸೀಗೆಹಟ್ಟಿಯಲ್ಲಿರುವ ಹರ್ಷ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ಅಬ್ದುಲ್ ರಫಾ ಅಂಗಡಿ ನಡೆಸುತ್ತಿದ್ದಾರೆ. ಮಾರುಕಟ್ಟೆಯಿಂದ ಸರಕುಗಳನ್ನು ತರಲು ಬಳಸುವ ವಾಹನಗಳನ್ನು ಅಂದು ಮನೆಯ ಹೊರಗೆ ಅಬ್ದುಲ್‌ ರಫಾ ನಿಲ್ಲಿಸಿದ್ದರು. “ಆತಂಕ ಪಡುವ ಅಗತ್ಯವಿಲ್ಲ” ಎಂದು ಭದ್ರತಾ ಪಡೆಗಳು ಭರವಸೆ ನೀಡಿದವು. ಇದನ್ನು ನಂಬಿದ ಅವರು ವಾಹನಗಳನ್ನು ರಸ್ತೆಯಿಂದ ಆಚೆಗೆ ತೆಗೆಯಲಿಲ್ಲ. ಆದರೆ ಕೆಲವೇ ಗಂಟೆಗಳಲ್ಲಿ ಗುಂಪೊಂದು ಅವರ ವಾಹನಕ್ಕೆ ಬೆಂಕಿ ಹಚ್ಚಿತು. ಇಡೀ ಕುಟುಂಬ ಘಟನೆಯನ್ನು ಗಾಬರಿಯಿಂದ ನೋಡುತ್ತಾ ಕುಳಿತ್ತಿತ್ತು. “ಪೊಲೀಸರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಏನನ್ನೂ ಸುಡಬೇಡಿ ಎಂದು ಪೊಲೀಸರು ಜನಸಮೂಹಕ್ಕೆ ಹೇಳುತ್ತಲೇ ಇದ್ದರು, ಆದರೆ ತಡೆಯಲು ಯತ್ನಿಸಲಿಲ್ಲ” ಎನ್ನುತ್ತಾರೆ ಅಬ್ದುಲ್‌.

ಕುತೂಹಲಕಾರಿ ಅಂಶವೆಂದರೆ ಹಿಂದೂ ಮನೆಗಳು ಮುಸ್ಲಿಮರ ಮನೆಗಳಿಗೆ ಸಮೀಪದಲ್ಲಿ ಇದ್ದರೂ ಹಿಂದೂಗಳ ಮನೆಗಳಿಗೆ ಹಿಂಸಾಚಾರದ ತೀವ್ರತೆ ತಟ್ಟಲಿಲ್ಲ.

ಗಾಯಾಳುಗಳಾಗಿರುವ ನಿವಾಸಿಗಳು ಬಹುಸಂಖ್ಯಾತರ ಭಯದಲ್ಲಿ ಬದುಕುವಂತಾಗಿದೆ. ಈ ಜನರು ಆರೋಪಿಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದರೆ ಅವರು ಒಂದೇ ಧರ್ಮಕ್ಕೆ ಸೇರಿದವರು, ಬಹುಶಃ ಒಂದೇ ಪ್ರದೇಶದಲ್ಲಿ ವಾಸಿಸುವರೆಂಬ ಕಾರಣಕ್ಕೆ ಬಲಿಪಶುಗಳಾಗಿದ್ದಾರೆ.

“ಬೇರೆಯವರ ಅಪರಾಧಗಳ ಕಾರಣಕ್ಕೆ ನಾವು ಶಿಕ್ಷೆಗೆ ಒಳಗಾಗುತ್ತೇವೆ. ಇಷ್ಟು ವರ್ಷಗಳಿಂದ ಇಲ್ಲಿ ಕೋಮು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ” ಎನ್ನುತ್ತಾರೆ ಜರೀನಾ ಬೇಗಂ. ಕೆಲವು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಜರೀನಾ ಅವರಿದ್ದ ಕೊಠಡಿಯ ಕಿಟಕಿಗೆ ಹೊಡೆದ ಕಲ್ಲು ಇವರ ತಲೆಗೆ ಬಂದು ಬಿದ್ದಿತು. ಒಂದೆರಡು ದಿನಗಳ ಕಾಲ ಮೆಕ್‌ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ತಲೆಗೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ.

ವರದಿ ಕೃಪೆ: ದಿ ನ್ಯೂಸ್ ಮಿನಿಟ್‌ (The News Minute)


ಇದನ್ನೂ ಓದಿರಿ: ಶಿವಮೊಗ್ಗ: 7 ವರ್ಷಗಳ ಹಿಂದೆ ಕೊಲೆಯಾದ ಬಜರಂಗದಳ ಕಾರ್ಯಕರ್ತನ ತಾಯಿ ಬದುಕು ಬೀದಿಪಾಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...