Homeಕರ್ನಾಟಕಮಾನವತಾವಾದಿ ಕವಿಯ ಕಣ್ಮರೆ

ಮಾನವತಾವಾದಿ ಕವಿಯ ಕಣ್ಮರೆ

- Advertisement -
- Advertisement -

ನಾನು ಎಂ.ಎ. ಕಲಿಯುವಾಗ ಗುರುಗಳಾದ ಜಿ.ಎಚ್. ನಾಯಕರು ತರಗತಿಗಳಲ್ಲಿ ಬೇಂದ್ರೆ ಮತ್ತು ಅಡಿಗರನ್ನು ವಿಶೇಷವಾಗಿ ಚರ್ಚಿಸುತ್ತಿದ್ದರು. ಕಣವಿ-ನರಸಿಂಹಸ್ವಾಮಿ ಮುಂತಾದವರನ್ನು ಪ್ರಸ್ತಾಪಿಸಿದರೂ ಅವರನ್ನು ಮೈನರ್ ಕವಿಗಳೆಂದು ಕರೆಯುತ್ತಿದ್ದರು. ಅದೊಂದು ಬಗೆಯಲ್ಲಿ ಗಂಭೀರ ಚರ್ಚೆಗೆ ಅರ್ಹರಲ್ಲ ಎಂಬ ಉಪೇಕ್ಷಿತ ದನಿಯನ್ನು ಒಳಗೊಂಡಿತ್ತು. ಅಡಿಗರು ರೂಪಿಸಿದ ಈ ಕ್ಲಾಸಿಕಲ್ ಕಾವ್ಯಧೋರಣೆಯು ನವ್ಯವಿಮರ್ಶೆಯ ಬಹುತೇಕ ನಿಲುವಾಗಿತ್ತು. ಇದು ತರುಣರಾದ ನಮಗ ಗಾಢವಾಗಿ ಆವರಿಸಿಕೊಂಡಿತ್ತು. ಹೀಗಿರುತ್ತ ಕಣವಿಯವರ ‘ಜೀವಧ್ವನಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿತು. ಶಿವಮೊಗ್ಗೆಯಲ್ಲಿ ಒಂದು ವಿಚಾರಸಂಕಿರಣ (1988) ಏರ್ಪಟ್ಟಿತು. ಆಗ ಸಾಹಿತ್ಯ ವಿಮರ್ಶೆಯ ಹತ್ಯಾರಗಳನ್ನು ಮಸೆಯುತ್ತ ತಿರುಗುತ್ತಿದ್ದ ಮತ್ತು ಆ ಕ್ಷೇತ್ರಕ್ಕೆ ಹೊಸಬನಾಗಿದ್ದ ನಾನು, ಪ್ರಬಂಧ ಮಂಡನೆ ಮಾಡಲೆಂದು ಕಣವಿಯವರ ಕಾವ್ಯವನ್ನು ಮೊದಲ ಸಲಕ್ಕೆ ಓದಿದೆ. ನವ್ಯವಿಮರ್ಶೆಯು ಹೇಗೆ ನಮ್ಮ ಕಾವ್ಯದ ಬಹುತ್ವವನ್ನು ಕಾಣಲು ಕಣ್ಣಿಗೆ ಪೊರೆಯನ್ನು ಕವಿಸಿದೆ ಎಂದು ಅರಿವಾಯಿತು.

‘ಕುಸುಮಾದಪಿ ಮೃದೂನಿ ವಜ್ರಾದಪಿ ಕಠೋರಾಣಿ’ ಎಂಬ ಮಾತಿದೆ. ವಜ್ರ ಮತ್ತು ಹೂವುಗಳ ಮೃದುತ್ವ ಮತ್ತು ಕಾಠಿಣ್ಯಗಳನ್ನು ಮಾನವ ಸ್ವಭಾವದ ಎರಡು ಅತ್ಯಂತಿಕ ರೂಪಕಗಳಾಗಿ ನೋಡುವ ಮಾತಿದು. ಈ ಅರ್ಥದಲ್ಲಿ ನರಸಿಂಹಸ್ವಾಮಿ, ಚೆನ್ನವೀರ ಕಣವಿ, ಹೂಮನಸ್ಸಿನ ಕವಿಗಳು. ಕಣವಿ ಕಾವ್ಯದಲ್ಲಿರುವ ಸಾರ್ವಜನಿಕರನ್ನು ಕುರಿತ ವ್ಯಕ್ತಿಚಿತ್ರಗಳು, ಸಮಾಜದ ಕೇಡುಗಳಿಗೆ ಮಾಡಿದ ಪ್ರತಿಕ್ರಿಯೆಗಳು, ನಿಸರ್ಗದ ವರ್ಣನೆಗಳು, ಸಾವಿನ ಧ್ಯಾನಗಳು ಎಲ್ಲವೂ ಅವರ ಸೌಮ್ಯತನದ ಗುಣವನ್ನು ಕಾಣಿಸುತ್ತವೆ. ತಾವು ಕೇಡೆಂದು ಪರಿಭಾವಿಸಿದ್ದನ್ನು ಆಕ್ರೋಶದಿಂದ ಮುಖಾಮುಖಿ ಮಾಡುವ ಕುವೆಂಪು-ಅಡಿಗ-ಲಂಕೇಶರಿಗೆ ಹೋಲಿಸಿದರೆ, ಕಣವಿ ಅವರದು ನವಿರಾದ ವಿಡಂಬನೆ. ಉದಾಹರಣೆಗೆ ಶಿಲಾವಿಗ್ರಹಗಳಿಗೆ ಕ್ಷೀರಾಭಿಷೇಕ ಮಾಡುವ ಆಚರಣೆಯನ್ನು ಮೌಢ್ಯವೆಂದು ಆರ್ಭಟಿಸಿ ಖಂಡಿಸುವುದಿಲ್ಲ. ಬದಲಿಗೆ “ಒಂದು ಹಾನಿಯೂ ಚೆಲ್ಲದಂತೆ ಬಯಲ ಬೊಗಸೆಯಲ್ಲಿ ಹಿಡಿದು ದೂರದೂರದ ಕಪ್ಪುಮಕ್ಕಳನೆಲ್ಲ ಕರೆದು ಬೆಳ್ಳಗೆ ಕುಡಿಸಿದಂತೆ ನಾನೊಂದು ಕನಸುಕಂಡೆ” ಎಂದು ಬರೆದು, ಅದನ್ನು ನೋಡುವ ಇನ್ನೊಂದು ನೋಟವನ್ನು ಕೊಟ್ಟುಬಿಡುತ್ತಾರೆ. ಇಲ್ಲಿ ‘ನಾನೊಂದು’ ಎನ್ನುವಲ್ಲಿ ನೊಂದ ಭಾವವೂ ಇರುವುದು ಗಮನಾರ್ಹ. ಈ ಸೌಮ್ಯತನ ಅವರ ಕಾವ್ಯವನ್ನು ಮತ್ತೊಂದು ಎತ್ತರಕ್ಕೆ ಹೋಗದಂತೆ ತಡೆದ ತೊಡಕೂ ಆಯಿತು. ಬಾಳನ್ನು ಲೋಕವನ್ನು ಒಂದು ಕೇಡಿನ ಭಾವವಿಲ್ಲದೆ, ಅದರೊಳಗಿನ ಸಮೃದ್ಧಿಯ ಮೂಲಕ ಬದುಕಬೇಕೆಂದು ಸದಾ ಹಂಬಲಿಸಿದವರು ಅವರು. ಹೀಗಾಗಿಯೇ ಅವರಲ್ಲಿ ನಿಸರ್ಗ ಕವಿತೆಗಳು ಪ್ರಕೃತಿವರ್ಣನೆಗೆ ಸೀಮಿತವಾಗುವುದಿಲ್ಲ. ಅವು ಬದುಕಿನ ರಹಸ್ಯವನ್ನು ಹೇಳುವ ಪ್ರತೀಕಗಳಾಗುತ್ತವೆ:

ನೆಲಕುದುರಿ ಬಿದ್ದ ಹಣ್ಣೆಲೆಯ ಮಣ್ಣುಗೊಬ್ಬರ ಮಾಡಿ
ತನ್ನೊಳಗೆ ರುಬ್ಬುವುದು
ಹೂವು-ಹಣ್ಣು ಗಿಡದ ಎಡೆಬಿಡದ ಕಾಣಿಕೆ
ಸಾವು-ನೋವು ನಮ್ಮ ದಿನದ ಹೊಂದಾಣಿಕೆ

ಇಲ್ಲಿ ಅಡಗಿರುವ ಜೀವನ ದರ್ಶನ ಗಮನಿಸಬೇಕು. ಈ ಲೋಕದ ಯಾವ ವಸ್ತುವೂ, ಕ್ರಿಯೆಯೂ ವ್ಯರ್ಥವಲ್ಲ. ಅವುಗಳಲ್ಲಿ ಬದುಕು ಚಲಿಸುವ ಯಾವುದೊ ಅರ್ಥಪೂರ್ಣವಾದ ಒಂದು ಸತ್ಯವಿರುತ್ತದೆ. ಹೀಗಾಗಿ ಎಲ್ಲವನ್ನು ಸೂಕ್ಷ್ಮವಾಗಿ ನಿರುಕಿಸುವ ಸಂವೇದನೆಯನ್ನು ಅವರ ಕಾವ್ಯ ಓದುಗರಿಗೆ ದಾಟಿಸುತ್ತದೆ. ಮರವು ಮಾಗಿದ ಫಲವನ್ನು ಬಿಡಲು ಕಾಯುವಂತೆ, ಹೆಪ್ಪುಂಡ ಹಾಲು ತುಪ್ಪವಾಗಲು ಕಾಯುವಂತೆ, ಕಾಯುವಿಕೆಯಲ್ಲಿ ಜೀವನದ ಅರ್ಥವಿದೆ ಎಂದು ಕಾಣಿಸುತ್ತದೆ. ಕಣವಿಯವರಷ್ಟು ನೆಲಮುಗಿಲುಗಳ ಸಂಬಂಧವನ್ನು ಶೋಧಿಸಿದವರು ಬೇರೆಯಿಲ್ಲ. ಮಗು ದುಂಬಿಯಂತೆ ಗುಂಜನ ಮಾಡುವಂತೆ ಆಡುವುದನ್ನು ಸಂಭ್ರಮದಿಂದಲೂ, ನಿರ್ದಯವಾದ ಮೃತ್ಯು ಜೀವವನ್ನು ಸೆಳೆದುಕೊಂಡು ಹೋಗಬಲ್ಲ ಕಟುತ್ವವನ್ನು ಅಸಹಾಯಕ ವಿಷಾದದಿಂದಲೂ ಏಕಕಾಲಕ್ಕೆ ಅವರ ಕಾವ್ಯ ಹೇಳಬಲ್ಲದಾಗಿತ್ತು.

ಚನ್ನವೀರ ಕಣವಿ

ಕನ್ನಡದಲ್ಲಿ ಉತ್ತರ ಕರ್ನಾಟಕದ ಕೃಷಿಕ ಜನಪದ ಪರಂಪರೆಯ ಸತ್ವವನ್ನು ಚೆನ್ನಾಗಿ ದುಡಿಸಿಕೊಂಡ ಕವಿಗಳಲ್ಲಿ ಬೇಂದ್ರೆಯವರಂತೆ ಕಣವಿಯವರೂ ಬರುತ್ತಾರೆ. ತಮ್ಮದೇ ಪರಿಸರದಲ್ಲಿ ತಮ್ಮದೇ ಪ್ರಕಾರದಲ್ಲಿ ಪ್ರಭಾವಶಾಲಿಯಾಗಿದ್ದ ಬೇಂದ್ರೆಯವರ ಅನುಕರಣೆ ಆಗದಂತೆ, ತಮ್ಮದೇ ಹಾದಿಯನ್ನು ರೂಪಿಸಿಕೊಳ್ಳಲು ಮಾಡಿದ ಸೆಣಸಾಟವು ಅವರ ಕಾವ್ಯದ ಚಹರೆಯನ್ನು ರೂಪಿಸಿತು. ಇದಕ್ಕಾಗಿ ಅವರು ಭೌತಿಕವಾಗಿ ದೂರದ ಮೈಸೂರಲ್ಲಿದ್ದ ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಸ್ವೀಕರಿಸಿದರು. ಕಾಲದ ದೃಷ್ಟಿಯಿಂದ ದೂರದಲ್ಲಿದ್ದ ಶರಣರ ತತ್ವಗಳನ್ನು ತಮ್ಮ ಕಾವ್ಯದಲ್ಲಿ ಮರುಶೋಧ ಮಾಡಿದರು. ಮಹತ್ವಾಕಾಂಕ್ಷೆಯಿಲ್ಲದೆ, ತಾನು ಕಂಡ ಲೋಕವನ್ನು ಉಂಡ ಅನುಭವವನ್ನು ಸೂಕ್ಷ್ಮಸಂವೇದನೆಯ ಕಾವ್ಯವಾಗಿ ರೂಪಿಸಿದ ಕಣವಿಯವರ ಕವನಗಳು, ಸಾಗರದಲೆಗಳಲ್ಲ. ಕಾಡಿನಂಚಿನಲ್ಲಿ ಜುಳುಜುಳು ಹರಿವ ತಣ್ಣನೆಯ ತೊರೆಗಳು. ಕೈಮಗ್ಗದಲ್ಲಿ ನೇದ ಬಣ್ಣಬಣ್ಣದ ಕರವಸ್ತ್ರಗಳು. ಲೋಕವನ್ನು ಬಿಟ್ಟು ತೆರಳುವ ಎಲ್ಲ ದೊಡ್ಡಲೇಖಕರು, ಸಾಧಕರು, ಸಾಂಪ್ರದಾಯಿಕ ಶ್ರದ್ಧಾಂಜಲಿಯನ್ನು ಹೊಸತಲೆಮಾರಿನಿಂದ ಬಯಸುವುದಿಲ್ಲ. ತಮ್ಮ ಕಾವ್ಯವನ್ನು ಅಥವಾ ಕಾರ್ಯವನ್ನು ಹೊಸಗಣ್ಣಲ್ಲಿ ಓದುವ, ಅರ್ಥೈಸುವ, ಅವರ ಜೀವನತತ್ವವನ್ನು ಹೊಸ ಪರಿಭಾಷೆಯಲ್ಲಿ ಗ್ರಹಿಸುವ ಹೊಣೆಯನ್ನು ಹೊಸತಲೆಮಾರಿನ ಮುಂದಿಟ್ಟು ಹೋಗುತ್ತಾರೆ. ಕಣವಿಯವರಂತಹ ಮಾನವತಾವಾದಿ ಕವಿಯೂ ಈ ಸವಾಲನ್ನು ಮುಂದಿಟ್ಟು ನಿರ್ಗಮಿಸಿದ್ದಾರೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ಹಳತು-ವಿವೇಕ; ‘ಸಮನ್ವಯ ಮಾಡಿಕೊಳ್ಳದಿದ್ದರೆ ಕಾವ್ಯ ಹೇಗಾಗುತ್ತೆ?’ ಚೆನ್ನವೀರ ಕಣವಿ ಅವರ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...