ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ನಡುವೆ ತೆರಿಗೆ ಹಂಚಿಕೆ ಕಿತ್ತಾಟ ತಾರಕಕ್ಕೇರಿದೆ. ಹಣಕಾಸು ಆಯೋಗದ ಶಿಫಾರಸ್ಸಿನಂತೆ ನಮಗೆ ಬರ ಬೇಕಿರುವ ತೆರಿಗೆ ಪಾಲು ಮತ್ತು ನಾವು ಮನವಿ ಮಾಡಿದಂತೆ ಎನ್‌ಡಿಆರ್‌ಎಫ್ ನಿಧಿಯ ಬರ ಪರಿಹಾರ ಬಂದಿಲ್ಲ ಎಂದು ಕರ್ನಾಟಕ ಸರ್ಕಾರ ಆರೋಪಿಸಿದೆ.
ತೆರಿಗೆ ಪಾಲು ಕೊಡುವಂತೆ ಆಗ್ರಹಿಸಿ ಮತ್ತು ಅನುದಾನ ಹಂಚಿಕೆಯ ತಾರತಮ್ಯ ಖಂಡಿಸಿ ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಬರ ಪರಿಹಾರ ಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ, ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಆದರೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, “ಕೇಂದ್ರದಿಂದ ಕರ್ನಾಟಕಕ್ಕೆ ಕೊಡಬೇಕಿದ್ದ ಒಂದೊಂದು ಪೈಸೆಯನ್ನೂ ಸರಿಯಾದ ಸಮಯಕ್ಕೆ ಕೊಟ್ಟಿದ್ದೇವೆ” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾರ್ಚ್ 24ರಂದು ಆಯೋಜಿಸಿದ್ದ ಕಾರ್ಯಕ್ರವೊಂದರಲ್ಲಿ ಮಾತನಾಡಿದ್ದ ಅವರು, “ತೆರಿಗೆ ಹಂಚಿಕೆಯು 2014 ರಿಂದ 2024 ರ ನಡುವೆ ಶೇ. 258ರಷ್ಟು ಹೆಚ್ಚಾಗಿದೆ. ಇದು ಯುಪಿಎ ಅವಧಿಯ 10 ವರ್ಷಗಳಿಗೆ ಹೋಲಿಸಿದರೆ 3.5 ಪಟ್ಟು ಹೆಚ್ಚು. ರಾಜ್ಯಗಳಿಗೆ ಕೇಂದ್ರದಿಂದ ನೀಡುವ ಅನುದಾನ ಶೇ. 273ರಷ್ಟು ಹೆಚ್ಚಳವಾಗಿದೆ. ಇದು ಯುಪಿಎ ಸರ್ಕಾರ ನೀಡಿದ್ದಕ್ಕಿಂತ 3.7 ಪಟ್ಟು ಹೆಚ್ಚು. 2004-2014 ರ ನಡುವೆ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ರೂಪದಲ್ಲಿ ವರ್ಷಕ್ಕೆ ನೀಡಲಾದ ಹಣ 81,795 ಕೋಟಿ ರೂ. 2014-2024 ರ ನಡುವೆ, ರಾಜ್ಯಕ್ಕೆ ಪಾವತಿಸಿದ ತೆರಿಗೆ ಹಂಚಿಕೆ ಸುಮಾರು 2.93 ಲಕ್ಷ ಕೋಟಿಗಳು” ಎಂದಿದ್ದಾರೆ.
#WATCH | Bengaluru: Union Finance Minister Nirmala Sitharaman says, "… Every penny by the Central government that is due to Karnataka is given and given on time to the state government… Tax devolution has increased from 2014 to 2024 by 258% which is 3.5 times more compared to… pic.twitter.com/Qe1tIl5j5q
— ANI (@ANI) March 24, 2024
ಅಲ್ಲದೆ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ ಎಂದಿರುವ ನಿರ್ಮಲಾ ಸೀತಾರಾಮನ್, ಆ ಬಿಟ್ಟಿ ಭಾಗ್ಯಗಳಿಗೆ ಕೇಂದ್ರ ಹಣ ನೀಡಲ್ಲ ಎಂದಿದ್ದಾರೆ.
ಫ್ಯಾಕ್ಟ್‌ಚೆಕ್: ಹಾಗಾದರೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ಕರ್ನಾಟಕಕ್ಕೆ ಕೇಂದ್ರದಿಂದ ಬರ ಬೇಕಿದ್ದ ಎಲ್ಲಾ ಹಣ ಬಂದಿದೆಯಾ? ರಾಜ್ಯ ಸರ್ಕಾರ ಹೇಳುತ್ತಿರುವುದೇನು ನೋಡೋಣ.
ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಸಂಬಂಧಪಟ್ಟಂತೆ ಮಾರ್ಚ್ 25ರಂದು ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿರುವ ಸಚಿವ ಕೃಷ್ಣಬೈರೇಗೌಡ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಮೊತ್ತ ಎಷ್ಟು? ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರ ಹಣ ನೀಡುತ್ತಿದೆಯಾ? ಇತ್ಯಾದಿ ಮಾಹಿತಿಗಳನ್ನು ಅಂಕಿ ಅಂಶ ಸಹಿತ ವಿವರಿಸಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಅವರು ಹೇಳಿದಂತೆ, “ಯಾವುದೇ ರಾಜ್ಯಕ್ಕೆ 2019-20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು 20-21ರಲ್ಲಿ ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21ರಲ್ಲಿ ರೂ. 5495 ಕೋಟಿ ಹಣ ಕಡಿಮೆ ಬಂದಿದೆ. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸ್ಸು ಮಾಡಿದರೂ, ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದಿದ್ದಾರೆ ಎಂದಿದ್ದಾರೆ.
ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಹಣಕಾಸು ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36,675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ರೂ.31,180 ಕೋಟಿಗೆ ಕುಸಿದಿದೆ. ಹೀಗಾಗಿ, ರಾಜ್ಯಕ್ಕೆ ಆಗಿರುವ ನಷ್ಟ ರೂ. 5,495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. ಇನ್ನು ಜಲಮೂಲಗಳ ಪುನರುಜ್ಜೀವನಕ್ಕೆ 3 ಸಾವಿರ ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ರೂ. ಸೇರಿ ಬೆಂಗಳೂರಿಗೆ ಒಟ್ಟು ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಹಳೆ ಬಾಕಿ ಸೇರಿ ಒಟ್ಟಾರೆ, ರೂ.11,495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ ಎಂದು ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿಗೆ ಕೇಂದ್ರ ಹಣ ನೀಡುತ್ತಿದೆಯಾ?
ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯಗಳಿಗೆ ಕೇಂದ್ರ ಹಣ ನೀಡಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೃಷ್ಣಬೈರೇಗೌಡರು, “ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ ಸೇರಿ ರೂ.11,200 ಕೋಟಿ ಹಣವನ್ನೂ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 550 ಕೋಟಿ ಮಾತ್ರ ಎಂದಿದ್ದಾರೆ.
ಸಚಿವರು ನೀಡಿರುವ ಅಂಕಿ ಅಂಶಗಳ ಪ್ರಕಾರ, ರಾಜ್ಯಕ್ಕೆ ಕೇಂದ್ರದಿಂದ ರಾಜ್ಯಕ್ಕೆ 2020-21ನೇ ಸಾಲಿನ ತೆರಿಗೆ ಬಾಕಿ ರೂ. 5,495 ಕೋಟಿ ಮತ್ತು 2021-26ನೇ ಸಾಲಿನಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ರೂ.6,000 ಕೋಟಿ ಸೇರಿ ಒಟ್ಟು ರೂ.11,495 ಕೋಟಿ ಬರಬೇಕಿದೆ.
ಐದು ಗ್ಯಾರಂಟಿ ಯೋಜನೆಗಳಿಗೆ 2024-25 ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ 52 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಈ ಪೈಕಿ ಗೃಹಜ್ಯೋತಿ ಯೋಜನೆಗೆ 9,657 ಕೋಟಿ ರೂ., ಅನ್ನಭಾಗ್ಯ ಯೋಜನೆಗೆ 8,079 ಕೋಟಿ ರೂ., ಶಕ್ತಿ ಯೋಜನೆಗೆ 5,015 ಕೋಟಿ ರೂ., ಯುವನಿಧಿ ಯೋಜನೆಗೆ 650 ಕೋಟಿ ರೂ., ಮತ್ತು ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ನೀಡಿದೆ. ಹಾಗಾಗಿ, ಇಲ್ಲಿ ಕೇಂದ್ರದ ಅನುದಾನದ ಅವಶ್ಯಕತೆ ಇಲ್ಲ. ನಿವೃತ್ತಿ ವೇತನದಲ್ಲಿ ಕೇಂದ್ರದ ಸರ್ಕಾರದ ಪಾಲು ರೂ. 550 ಕೋಟಿ ಇದೆ.


ಬರಗಾಲ ಪರಿಹಾರ ಬಿಡುಗಡೆ ಕೋರಿ ಸುಪ್ರೀಂ ಮೊರೆ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು ಒಂದೆಡೆಯಾದರೆ, ಮತ್ತೊಂದೆಡೆ ಬರ ಪರಿಹಾರ ಬಂದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಕುರಿತು ಮಾರ್ಚ್ 23ರಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, “ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಾಲ್ಕು ಬಾರಿ ಮೌಲ್ಯಮಾಪನ ಮಾಡಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 3 ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಬರೆದಿದ್ದೇವೆ. ಆದರೂ, ಇದುವರೆ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಬಂದು ಬರ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಈ ವರದಿ ಕೊಟ್ಟ ಒಂದು ತಿಂಗಳಲ್ಲಿ ರಾಜ್ಯಕ್ಕೆ ಬರ ಪರಿಹಾರ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ ಎಂದಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ದೆಹಲಿಗೆ ಹೋದರೂ, ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಬಳಿಕ ನಾನೇ ಡಿಸೆಂಬರ್ 20ರಂದು ಕೃಷ್ಣಬೈರೇಗೌಡ ಜೊತೆ ಮತ್ತೆ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಆದರೂ, ನಮಗೆ ಪರಿಹಾರ ಕೊಡಲಿಲ್ಲ. ಬಳಿಕ ನಾನು ಬೆಂಗಳೂರಿನಲ್ಲೇ ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದೆ. ಆದರೂ ಪರಿಹಾರ ಸಿಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬರ ಪರಿಹಾರದ ವಿಷಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಿಕ್ಕಾಟದ ಕುರಿತು ಫೆ. 7ರಂದು ಪ್ರಜಾವಾಣಿ ಪತ್ರಿಕೆಯು “ಆಳ- ಅಗಲ ; ಬರ ಪರಿಹಾರದ ಹೊಣೆ ನಮ್ಮದಲ್ಲ ರಾಜ್ಯ ಸರ್ಕಾರದ್ದು ಎನ್ನುತ್ತದೆ ಕೇಂದ್ರ” ಎಂಬ ಶೀರ್ಷಿಕೆಯಲ್ಲಿ ವಿಸ್ಕೃತ ಲೇಖನವೊಂದನ್ನು ಪ್ರಕಟಿಸಿದೆ.
ಈ ಲೇಖನದಲ್ಲಿ “ಕೇಂದ್ರ ಸರ್ಕಾರದ್ದೇ ನಿಯಮಗಳ ಪ್ರಕಾರ ರೈತರಿಗೆ ಪರಿಹಾರ ಮತ್ತು ಇತರ ಪರಿಹಾರ ಕಾರ್ಯಗಳಿಗೆ ರೂ. 18,171 ಕೋಟಿ ನೆರವು ನೀಡಿ ಎಂದು ರಾಜ್ಯ ಸರ್ಕಾರ ಕೇಳಿದೆ. 2023–24ನೇ ಸಾಲಿನ ಎಸ್‌ಡಿಆರ್‌ಎಫ್ ನಿಧಿಯಲ್ಲಿ ರೂ. 929 ಕೋಟಿಯಷ್ಟಿದೆ. ಈ ಹಣವನ್ನು ಬೆಳೆ ಪರಿಹಾರಕ್ಕೆ ಒದಗಿಸಲೂ ಸಾಧ್ಯವಿಲ್ಲ, ಕುಡಿಯುವ ನೀರು, ಕೊಳವೆ ಬಾವಿ, ಮೇವು–ಗೋಶಾಲೆಗಳ ಸ್ಥಾಪನೆಗೆ ಒದಗಿಸಲೂ ಸಾಲುವುದಿಲ್ಲ. ಹೀಗಾಗಿಯೇ ಎನ್‌ಡಿಆರ್‌ಎಫ್ ನಿಧಿಯಿಂದ ಹೆಚ್ಚಿನ ನೆರವು ಒದಗಿಸಿ ಎಂದು ರಾಜ್ಯ ಸರ್ಕಾರವು ಕೇಳುತ್ತಿದೆ” ಎನ್ನಲಾಗಿದೆ.

“ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ಅಡಿಯಲ್ಲಿ ನಿಧಿಯನ್ನು ತೆಗೆದಿರಿಸುತ್ತದೆ. ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿಯೇ ಒಂದು ಭಾಗವನ್ನು ಎನ್‌ಡಿಆರ್‌ಎಫ್‌ಗೆಂದು ಮೀಸಲಿರಿಸಲಾಗುತ್ತದೆ. ಹಣಕಾಸು ಆಯೋಗವು ನಿಗದಿ ಮಾಡಿದ ಪ್ರಮಾಣದಲ್ಲಿ ಎನ್‌ಡಿಆರ್‌ಎಫ್ ನಿಧಿಯ ಸ್ವಲ್ಪ ಪ್ರಮಾಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತದೆ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ 2023–24ನೇ ಸಾಲಿನಲ್ಲಿ ₹929 ಕೋಟಿಯನ್ನು ಈ ನಿಧಿ ಅಡಿ ಒದಗಿಸಬೇಕು ಎಂದು ಹೇಳಿತ್ತು. ಅದರಲ್ಲಿ ತನ್ನ ಪಾಲಿನ ₹697.60 ಕೋಟಿಯನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ.” ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ತೆರಿಗೆ ಪಾಲು, ಎನ್‌ಡಿಆರ್‌ಎಫ್ ಅಡಿ ಬರ ಪರಿಹಾರ ಸೇರಿ ಕೇಂದ್ರದಿಂದ ಎಷ್ಟು ಹಣ ಬರಲು ಬಾಕಿ ಇದೆ ಎಂಬ ಮಾಹಿತಿಯನ್ನು ಅಂಕಿ ಅಂಶಗಳ ಸಹಿತ ವಿವರಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾವು ಎಲ್ಲಾ ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆಯೇ ಹೊರತು. ಈ ಕುರಿತು ಸ್ಪಷ್ಟವಾದ ದಾಖಲೆ ನೀಡಿಲ್ಲ.
ಇದನ್ನೂ ಓದಿ : Fact Check : ಏಪ್ರಿಲ್ 1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಾಗಲಿದೆ ಎನ್ನುವುದು ಸುಳ್ಳು


