Homeನ್ಯಾಯ ಪಥಮದ್ದುಂಟೆ ರಾಜಕೀಯ ಧ್ರುವೀಕರಣಕ್ಕೆ?

ಮದ್ದುಂಟೆ ರಾಜಕೀಯ ಧ್ರುವೀಕರಣಕ್ಕೆ?

- Advertisement -
- Advertisement -

ಜಗತ್ತಿನ ಹಲವು ಪ್ರಜಾಪ್ರಭುತ್ವಗಳಿಗೆ ಮಾರಕವಾಗಿ ಪರಿಣಮಿಸಿರುವ ರಾಜಕೀಯ ಧ್ರುವೀಕರಣದ ಬಗ್ಗೆ ಹಲವು ವಲಯಗಳಲ್ಲಿ ಇಂದು ಮುಖ್ಯ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಎರಡು ಪ್ರಧಾನ ಪಕ್ಷಗಳ ಪ್ರಜಾಪ್ರಭುತ್ವವಾದ ಯುಎಸ್‌ಎನಲ್ಲಿ ಮಾತ್ರ ಒಂದು ಕಾಲದಲ್ಲಿ ಹೆಚ್ಚು ಸಮಸ್ಯಾತ್ಮಕವಾಗಿ ಕಂಡಿದ್ದ ಈ ಪೊಲಿಟಿಕಲ್ ಪೋಲರೈಸೇಷನ್ ಇಂದು ಯೂರೋಪ್ ಮತ್ತು ಏಷಿಯಾದ ಹಲವು ರಾಷ್ಟ್ರಗಳಲ್ಲಿ ಹೆಮ್ಮರವಾಗಿ ಬೆಳೆದು ಪ್ರಜಾಪ್ರಭುತ್ವವನ್ನೆ ಅಣಕಿಸುತ್ತಿದೆ ಮತ್ತು ಅಲುಗಾಡಿಸುತ್ತಿದೆ. ಈ ಧ್ರುವೀಕರಣ ಹೆಚ್ಚಿರುವ ದೇಶಗಳಲ್ಲಿ ತೀವ್ರ ಸಂಪ್ರದಾಯವಾದಿ ಅಥವಾ ಬಲಪಂಥೀಯ ಪಾಪ್ಯುಲಿಸ್ಟ್ ನಾಯಕರು ತಲೆ ಎತ್ತುತ್ತಿರುವುದು; ಮತ್ತು ಸರ್ವಾಧಿಕಾರಿ ಧೋರಣೆಯ ನಾಯಕತ್ವವನ್ನು ತಮ್ಮದಾಗಿಸಿಕೊಂಡು, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಹೀನಗೊಳಿಸುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ.

ಬಹಳಷ್ಟು ರಾಷ್ಟ್ರಗಳಲ್ಲಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇನು ಬುಡಮೇಲು ಮಾಡದೆ, ಆಯಾ ಸಂವಿಧಾನಗಳನ್ನು ’ಅತಿ ಜಾಣ್ಮೆಯಲ್ಲಿ ಬಳಸಿಕೊಳ್ಳುವ ಮೂಲಕವೋ ಅಥವಾ ತಿರುಚುವ ಮೂಲಕವೋ ಅಂತಹ ಅಧಿಕಾರವನ್ನು ಸ್ಥಾಪಿಸುತ್ತಿರುವುದು ಈ ಸಮಸ್ಯೆಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದಂತಹ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದೆ.

ಯೂರೋಪಿನ ರಾಷ್ಟ್ರಗಳಲ್ಲಿ ಒಂದಾದ ಹಂಗರಿಯ ಪ್ರಧಾನಿ ವಿಕ್ಟೋರ್ ಓರ್ಬಾನ್ ಅಂತಹ ’ಸರ್ವಶಕ್ತ’ ನಾಯಕರಲ್ಲಿ ಅಗ್ರಸಾಲಿನಲ್ಲಿ ನಿಲ್ಲುತ್ತಾನೆ. 2010ರಿಂದ ನಿರಂತರವಾಗಿ ಅಧಿಕಾರದಲ್ಲಿರುವಂತೆ ನೋಡಿಕೊಳ್ಳಲು ರಾಜಕೀಯ ಧ್ರುವೀಕರಣವನ್ನು ಇನ್ನಿಲ್ಲದೆ ಬಳಸಿಕೊಂಡವನೀತ; ಕೋರ್ಟ್‌ಗಳಿಂದ ಹಿಡಿದು ಯಾವುದೇ ಪ್ರಜಾಪ್ರಭುತ್ವ ಸಂಸ್ಥೆ ತನ್ನ ಅಧಿಕಾರ ಮತ್ತು ನೀತಿಗಳನ್ನು ಟೀಕಿಸಿದರೆ ಅವುಗಳನ್ನು ಡಿಲೆಜಿಟಮೈಸ್ ಮಾಡುವ ಅಸ್ತ್ರಗಳನ್ನು ಸದಾ ಬಗಲಲ್ಲಿ ಇರಿಸಿಕೊಂಡವನು; ತನ್ನನ್ನು ವಿರೋಧಿಸಿದ ಸರ್ಕಾರೇತರ ಸಂಸ್ಥೆಗಳ ಮೇಲೆ ಅಧಿಕಾರ ದುರ್ಬಳಕೆ ಮಾಡಿ ಅವುಗಳನ್ನು ಬಾಯಿ ಮುಚ್ಚಿಸಿದವನು; ಹೀಗೆ ಇಂದು ಓರ್ಬಾನ್ ಅಮೆರಿಕದ ಟ್ರಂಪ್ ಅಭಿಮಾನಿಗಳು ಕೂಡ ಎದುರುನೋಡುವ ಮುಖಂಡನಾಗಿ ಬೆಳೆದುನಿಂತಿದ್ದಾನೆ.

ಜನರನ್ನು ಪೋಲರೈಸ್ ಮಾಡಲು ಓರ್ಬಾನ್ ಬಳಸಿಕೊಂಡದ್ದು ಎಂದಿನಂತೆ ಬಲಪಂಥೀಯ ನಾಯಕರು ಸೆನ್ಸೇಷನಲೈಸ್ ಮಾಡುವಂತಹ ಸಂಗತಿಗಳನ್ನೇ! ಯುರೋಪಿನ ಇತರ ದೇಶಗಳಿಗೆ ಹೋಲಿಸಿದರೆ ಹಂಗರಿಗೆ ವಲಸೆ ಬರುವವರ ಸಂಖ್ಯೆ ಅತಿ ಕಡಿಮೆ ಪ್ರಮಾಣದಲ್ಲಿದ್ದರೂ, ವಲಸೆ ವಿರೋಧಿ ನೀತಿಯನ್ನು ಮುಂದುಮಾಡಿದ; ಸಿರಿಯಾದಲ್ಲಿ ನಡೆದ ಯುದ್ಧದಿಂದ ನಿರಾಶ್ರಿತರಾಗಿ ಬಂದಿದ್ದ ಅಲ್ಪಸಂಖ್ಯೆಯ ಜನಸಮೂಹದ ಮೇಲೆ ದಮನಕಾರಿ ನೀತಿಗಳ ಪ್ರಹಾರ ಮಾಡಿದ. ಇಸ್ಲಾಮಫೋಬಿಯಾವನ್ನು ಉಪಯೋಗಿಸಿಕೊಂಡ.

ತನ್ನದು ಕ್ರಿಶ್ಚಿಯನ್ ಸಾಂಪ್ರದಾಯಿಕ ದೇಶವೆಂದು ಸಾರಿ, ಗೇ ಹಕ್ಕುಗಳ ವಿರುದ್ಧ ಸಮರ ಸಾರಿದ. ಗೇ ಹಕ್ಕುಗಳನ್ನು ಮಾನ್ಯ ಮಾಡಿದ ಸಂಸ್ಥೆಗಳು ಮತ್ತು ಕೋರ್ಟ್‌ಗಳನ್ನೇ ಗೇಲಿ ಮಾಡಿದ. ಎಲ್ಲ ದೇಶಗಳ ಬಲಪಂಥೀಯರ ವರಸೆಯಂತೆ ಹಂಗರಿ ಅಲ್ಲಿನ ನಾಗರಿಕರಿಗೆ ಮಾತ್ರ ಸೇರಿದ್ದು ಎಂದು ದೊಡ್ಡಗಂಟಲಲ್ಲಿ ಪ್ರತಿಪಾದಿಸುವುದನ್ನು ಮುಂದುವರಿಸಿದ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು, ಅಕೆಡೆಮಿಕ್ ಅಧ್ಯಯನಗಳನ್ನು ನಿಸ್ತೇಜಗೊಳಿಸಿ, ಎಲ್ಲಾ ಚುನಾವಣೆಗಳಲ್ಲಿ ತನ್ನ ಬಲಪಂಥೀಯ ಫಿಡೆಸ್ ಪಕ್ಷವೇ ಗೆಲ್ಲುವಂತಹ ವಾತಾವರಣ ನಿರ್ಮಿಸಿಕೊಂಡಿರುವುದಕ್ಕೆ ಓರ್ಬಾನ್ ಇಂದು ಜಗತ್ತಿನ ಹಲವು ಸಂಪ್ರದಾಯವಾದಿ ಪಕ್ಷಗಳು ಎದುರು ನೋಡುವ ಮುಖಂಡನಾಗಿ ಬೆಳೆದಿದ್ದಾನೆ. ಇಂದು ಹಂಗರಿಯನ್ನು ಸಂಪ್ರದಾಯವಾದಿ ರಾಷ್ಟ್ರವಾಗಷ್ಟೇ ಅಲ್ಲ ಇಲ್ಲಿಬರಲ್ ದೇಶ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮುಖಂಡನೀತ!

ಈ ಪೋಲರೈಸೇಷನ್ ಯುರೋಪಿನಾದ್ಯಂತ ಒಂದೇ ರೀತಿಯಾಗಿ ಬೆಳೆದಿದೆಯೇ ಎಂದರೆ ಉತ್ತರ ಏಕರೂಪವಾದುದೇನಲ್ಲ. ಉದಾಹರಣೆಗೆ ಜರ್ಮನಿಯನ್ನೇ ತೆಗೆದುಕೊಂಡರೆ, ಅಲ್ಲಿ ಈ ಹಿಂದೆ ಚಾನ್ಸಲರ್ ಆಗಿದ್ದ ಅಂಗೆಲಾ ಮೆರ್ಕೆಲ್ ಅವರು ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಎಂಬ ಸಂಪ್ರದಾಯವಾದಿ ಪಕ್ಷಕ್ಕೆ ಸೇರಿದವರಾಗಿದ್ದರೂ ವಲಸೆಯ ಬಗ್ಗೆ ಉದಾರ ನೀತಿಯನ್ನು ಹೊಂದಿದ್ದರು. ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ಒದಗಿಸುವ ನೀತಿಗೆ ಕಾರಣರಾಗಿದ್ದರು. ಇದು ಅಮೆರಿಕ ಸಂಪ್ರದಾಯವಾದಿ ರಿಪಬ್ಲಿಕನ್ನರ ಧ್ಯೇಯಕ್ಕೆ ವಿರುದ್ಧವಾಗಿದ್ದು ಮೆರ್ಕೆಲ್ ಅವರನ್ನು ದೂಷಿಸುವಂತೆ ಮಾಡಿತ್ತು.

ಜರ್ಮನಿಯಲ್ಲಿ ಈ ಧ್ರುವೀಕರಣ ಕಡಿಮೆ ಪ್ರಮಾಣದಲ್ಲಿ ಇರುವುದಕ್ಕೆ ನಾಜಿ ಆಡಳಿತದ ಟ್ರಾಮಾವೂ ಕಾರಣವಿರಬಹುದು ಮತ್ತು ಅಂತಹ ಧ್ರುವೀಕರಣಕ್ಕೆ ಇಳಿಯುವ ಮುಖಂಡನನ್ನು ಜನರು ಒಪ್ಪಲು ನಿರಾಕರಿಸಬಹುದು ಎಂಬಂತಹ ಅಧ್ಯಯನಗಳು ನಡೆಯುತ್ತಲೇ ಇವೆ. ಜರ್ಮನಿ ಒಂದು ಕಡೆಗಾದರೆ, ಯುರೋಪಿಯನ್ ಯೂನಿಯನ್‌ನಿಂದ ಹೊರಬರುವ ಜನಾಭಿಮತ ಬ್ರೆಕ್ಸಿಟ್‌ನಲ್ಲಿ ಇದೇ ಧ್ರುವೀಕರಣದ ಮೊರೆಹೋಗಿ ಜನಪ್ರಿಯರಾಗಿದ್ದ ಯುಕೆಯ ಬೋರಿಸ್ ಜಾನ್ಸನ್, ಕೋವಿಡ್ ನಿಯಂತ್ರಣದಲ್ಲಿ ವಿಫಲರಾಗಿದ್ದರಿಂದ ಆ ಜನಪ್ರಿಯತೆ ಕುಸಿದುಬಿದ್ದಿತ್ತು.

ಒಂದು ಸರ್ವೇ ಪ್ರಕಾರ ಬೋರಿಸ್ ಜಾನ್ಸನ್ ಅವರನ್ನು ಅಪೇಕ್ಷಿಸುವ ಪ್ರಮಾಣ ಏಪ್ರಿಲ್ 2020ಕ್ಕೆ +29% ಇದ್ದರೆ, ಕೊರೊನಾ ನಂತರದಲ್ಲಿ ಅದು -52%ಗೆ ಕುಸಿದಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್‌ನ ಒಂದು ವರದಿ ದಾಖಲಿಸುತ್ತದೆ. ಅದನ್ನು ಡಿಪೋಲರೈಸೇಶನ್ ಎಂದು ಕೂಡ ಬಣ್ಣಿಸುತ್ತದೆ. ಜರ್ಮನಿಯಲ್ಲಿ ಕಳೆದ ವರ್ಷ ಸೋಷಿಯಲಿಸ್ಟ್ ಧೋರಣೆಯ ಓಲಾಫ್ ಶೋಲ್ಜ್ ಅಧಿಕಾರಕ್ಕೆ ಬಂದು ಲಿಂಗ ಸಮಾನತೆಯ ಸಂಪುಟ ರಚಿಸಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು. ಬೋರಿಸ್ ಜಾನ್ಸನ್ ಈಗ ಯುಕೆಯ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪ್ರಧಾನಿಯ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಧಾನಿಯಾಗಲಿರುವ ಮತ್ತೊಬ್ಬ ಕನ್ಸರ್ವೆಟಿವ್ ಮುಖಂಡ ಜನರನ್ನು ಪೋಲರೈಸ್ ಮಾಡುವುದರಲ್ಲಿ ಬೋರಿಸ್ ಜಾನ್ಸನ್ ಗಿಂತಲೂ ತೀವ್ರವಾಗಿರುತ್ತಾರೋ ಇಲ್ಲವೆ ಮೆದುವಾಗಿರುತ್ತಾರೋ ಕಾದು ನೋಡಬೇಕಿದೆ.

Photo Courtesy: Business today

ಅಲ್ಲದೆ ಹಲವು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಈ ಪೋಲರೈಸ್ ಮಾಡುವ ಪಾಪ್ಯುಲಿಸ್ಟ್ ಬಲಪಂಥೀಯ ನಾಯಕರನ್ನು ಸೋಲಿಸಿ, ಎಲ್ಲರನ್ನು ಒಳಗೊಳ್ಳುವ ಭರವಸೆ ನೀಡುತ್ತಿದ್ದ, ಮಾನವ ಹಕ್ಕುಗಳ, ಪರಿಸರ ಕಾಳಜಿ-ಕ್ಲೈಮೇಟ್ ಚೇಂಜ್ ಬಗ್ಗೆ ಧ್ವನಿಯೆತ್ತುತ್ತಿದ್ದ, ಅಲ್ಪಸಂಖ್ಯಾತರು ಹಾಗೂ ನಿರಾಶ್ರಿತರ ಪರವಾದ ನೀತಿಗಳನ್ನು ಪ್ರತಿಪಾದಿಸುತ್ತಿದ್ದ ನಾಯಕರು, ಪಕ್ಷಗಳು ಅಧಿಕಾರಕ್ಕೆ ಬರುತ್ತಿವೆ.

ಚಿಲಿಯಲ್ಲಿ ಅಧ್ಯಕ್ಷರಾಗಿ ಮಿಲೇನಿಯಲ್ ಗೇಬ್ರಿಯಲ್ ಬೋರಿಕ್ ಅಧಿಕಾರ ಸ್ವೀಕರಿಸಿದ್ದು ತುಸು ಹಳೆಯ ಉದಾಹರಣೆಯಾದರೆ, ಕೊಲಂಬಿಯಾದಲ್ಲಿ ಪ್ರಧಾನಿಯಾಗಿ ಗುಸ್ತಾವೋ ಪೆಟ್ರೋ ಪ್ರಧಾನಿಯಾಗಿದ್ದು ತಾಜಾ ಉದಾಹರಣೆ. ಬ್ರೆಜಿಲ್‌ನಲ್ಲಿ ಕೂಡ ಬಲಪಂಥೀಯ ಬೋಲ್ಸೋನಾರೋನ ಜನಪ್ರಿಯತೆ ಕೊರೊನಾ ನಂತರದಲ್ಲಿ ತೀವ್ರವಾಗಿ ಕುಸಿದಿದ್ದು ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆಗಳಿವೆ ಎಂಬ ವರದಿಗಳಿವೆ. ಅಂದರೆ ಒಂದು ಕಾಲದಲ್ಲಿ ಪ್ರತಿಗಾಮಿ ಮುಖಂಡರಿಗೆ ಸಹಾಯ ಮಾಡಿದ್ದ ಧ್ರುವೀಕರಣ, ನಂತರದಲ್ಲಿ ಬದಲಾಗುತ್ತಿರುವ ದೇಶಗಳೂ ಇವೆ, ಅದು ತೀವ್ರವಾಗುತ್ತಿರುವ ಅಮೆರಿಕ (ಟ್ರಂಪ್ ಕಳೆದ ಅವಧಿಗೆ ಸೋತರೂ ಆತನ ಜನಪ್ರಿಯತೆ ತಗ್ಗಿಲ್ಲ ಎನ್ನುತ್ತವೆ ಹಲವು ಸರ್ವೇಗಳು), ಹಂಗರಿಯಂತಹ ದೇಶಗಳೂ ನಮ್ಮ ಕಣ್ಣಮುಂದಿವೆ.

ಈ ನಿಟ್ಟಿನಲ್ಲಿ ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬರುವುದಕ್ಕಾಗಿ ಪ್ರಾರಂಭವಾದ ಪೋಲರೈಸೇಷನ್ ಪ್ರಾಜೆಕ್ಟ್‌ಅನ್ನು ನೋಡುವುದು ಹೇಗೆ? ಅದನ್ನು ಇಲ್ಲಿ ಮೆಟ್ಟಿನಿಲ್ಲುವುದು ಸುಲಭವಲ್ಲದಿರುವುದೇಕೆ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡರೆ ದೊಡ್ಡ ವಿಫಲತೆ ಕಾಣಿಸುವುದು ನಮ್ಮ ವಿರೋಧ ಪಕ್ಷಗಳಲ್ಲಿ ಮತ್ತು ಮಾಧ್ಯಮಗಳ ಸ್ಪೇಸ್‌ನಲ್ಲಿ. ಇದ್ದುದರಲ್ಲಿ ಆಶಾದಾಯಕತೆ ಕಾಣಿಸುವುದು ನಾಗರಿಕ ಸಮಾಜ ಸ್ವಲ್ಪವಾದರೂ ಎಚ್ಚೆತ್ತುಕೊಂಡಿರುವ ಬಗೆಯಲ್ಲಿ.

ತುಸು ಹಿಂದಕ್ಕೆ ಹೋಗಿ ನೋಡೋಣ; ಪೋಲರೈಸೇಷನ್ ಪ್ರಾಜೆಕ್ಟ್‌ನ ಪ್ರಾರಂಭಿಕ ಹಂತದಲ್ಲಿ ಗುರಿಯಾಗಿಸಿಕೊಂಡಿದ್ದ ಒಂದು ಮುಖ್ಯ ಅಂಶ ನೆಹರೂ, ಗಾಂಧಿ ಮುಂತಾದ ನಾಯಕರ ಬಗ್ಗೆ ಸುಳ್ಳುಸಂಗತಿಗಳನ್ನು ಬಿಂಬಿಸುವುದರಿಂದ. ಫೇಕ್ ಸುದ್ದಿಯ ವ್ಯವಸ್ಥಿತ ಜಾಲದೊಂದಿಗೆ ಹೆಣೆಯಲಾದ ಕಥೆಗಳಲ್ಲಿ ಜನಸಮೂಹದ ಒಂದು ಪಾಲು ಬೇಸ್ತುಬಿತ್ತು. ನೆಹರೂ ಮತ್ತು ಗಾಂಧಿಯವರ ಸಾಧನೆಯನ್ನು ಗುರುತಿಸುವವರನ್ನು, ಅವರ ಕೆಲಸಗಳನ್ನು ಶ್ಲಾಘಿಸುವವರನ್ನೂ ದ್ವೇಷಿಸುವ ಹಂತಕ್ಕೆ ಸಮಾಜವನ್ನು ಧ್ರುವೀಕರಿಸಲಾಗಿತ್ತು. ಇದನ್ನು ಮೆಟ್ಟಿನಿಂತದ್ದು ನಾಗರಿಕ ಸಮಾಜದ ಪ್ರಾಜ್ಞರೇ. ಕಾಂಗ್ರೆಸ್ ಪಕ್ಷ ತಮ್ಮ ನಾಯಕ ನೆಹರೂರವರ ಬಗ್ಗೆ ಹರಡಿದ್ದ ಸುಳ್ಳು ಪ್ರಚಾರವನ್ನು ನಿವಾರಿಸಲು ಯಾವ ಹೇಳಿಕೊಳ್ಳುವಂತ ಯೋಜನೆಗಳನ್ನೂ ಹಾಕಿಕೊಳ್ಳಲಿಲ್ಲ. ಕೊನೇಪಕ್ಷ ತಮ್ಮ ಪಕ್ಷದ ಕಾರ್ಯಕರ್ತರಿಗಾದರೂ ನೆಹರೂ, ಗಾಂಧಿ ಮುಂತಾದ ದೇಶ ಕಟ್ಟಿದ ಮುಖಂಡರ ಪ್ರಾಮುಖ್ಯತೆಯನ್ನು ಪರಿಚಯಿಸುವ ತ್ರಾಸವನ್ನೂ ತೆಗೆದುಕೊಂಡಂತೆ ಕಾಣಲಿಲ್ಲ.

ಇನ್ನು ಮುಸ್ಲಿಂ ಸಮುದಾಯವನ್ನು ರಾಕ್ಷಸೀಕರಿಸುವ ಸಂಘ ಪರಿವಾರದ ಕೃತ್ರಿಮ ಯೋಜನೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಧ್ರುವೀಕರಿಸಿತು. ಇದಕ್ಕೆ ಮುಸ್ಲಿಂ ಸಮುದಾಯ ತಾಳ್ಮೆಯಿಂದ ಉತ್ತರಿಸಿದ್ದೇ ಆ ಧ್ರುವೀಕರಣವನ್ನು ತುಸು ತಗ್ಗಿಸಲು ಸಾಧ್ಯವಾಗಿದೆಯೇ ಹೊರತು, ವಿರೋಧ ಪಕ್ಷಗಳು ಆ ಸಮುದಾಯದ ವಿರುದ್ಧ ಹರಡುತ್ತಿರುವ ಅಪಪ್ರಚಾರಕ್ಕೆ ಎದುರಾಗಿ ಗಟ್ಟಿಯಾಗಿ ನಿಂತ ನಿದರ್ಶನಗಳು ಕಡಿಮೆ. ರಾಜಸ್ಥಾನದ ಟೇಲರ್ ಕೊಲೆಯನ್ನು ಇತ್ತೀಚಿನ ಉದಾಹರಣೆಯಾಗಿ ನೋಡಿದರೆ, ಅದರ ಸುತ್ತ ನಡೆಸಲಾದ ಕೋಮು ಧ್ರುವೀಕರಣ ಅಸಹ್ಯಕರವಾಗಿತ್ತು. ಕೊಲೆಯಲ್ಲಿ ಕುತಂತ್ರ ನಡೆದಿರಬಹುದು ಎಂಬ ಆರೋಪಗಳ ನಡುವೆಯೂ ಬಹುಸಂಖ್ಯಾತರು ರಕ್ತಕ್ಕಾಗಿ ಹವಣಿಸಿದ್ದನ್ನು ವಿರೋಧ ಪಕ್ಷಗಳು ದಿಟ್ಟವಾಗಿ ಎದುರಿಸಬೇಕಿತ್ತು.

ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಆದ ಸರಣಿ ಕೊಲೆಗಳನ್ನೂ (ಮಸೂದ್, ಪ್ರವೀಣ್ ಮತ್ತು ಪಾಝಿಲ್) ಸಂಘ ಪರಿವಾರ ತನ್ನ ಎಂದಿನ ಕೋಮು ಧ್ರುವೀಕರಣಕ್ಕೆ ಬಳಸಿಕೊಂಡಿತು. ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಬಿಜೆಪಿ ಪಕ್ಷದ ಮುಖಂಡರು ಕೇವಲ ಪ್ರವೀಣ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಉಳಿದ ಸಂತ್ರಸ್ತರನ್ನು ಬೇಕೆಂತಲೇ ಕಡೆಗಣಿಸಿ ಪಕ್ಷಪಾತ ಧೋರಣೆಯನ್ನು ಮುಂದುವರೆಸಿದರು. ವಿರೋಧ ಪಕ್ಷಗಳ ಕೆಲವು ಮುಖಂಡರು ಎಲ್ಲಾ ಸಂತ್ರಸ್ತರ ಮನೆಗೆ ಭೇಟಿ ನೀಡಿದರೂ, ಅದರಲ್ಲಿ ಅಗತ್ಯವಾಗಿದ್ದಷ್ಟು ಕನ್ವಿಕ್ಷನ್ ಕಾಣಿಸಲಿಲ್ಲ ಎಂದೇ ಹೇಳಬೇಕು. ಜಾತ್ಯತೀತ ಮತ್ತು ಸಮಾನತೆಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟ ಪಕ್ಷಗಳು ಈ ಧ್ರುವೀಕರಣವನ್ನು ಗಟ್ಟಿಯಾಗಿ ಎದುರಿಸುವುದನ್ನು ಕರಗತ ಮಾಡಿಕೊಳ್ಳಬೇಕಿದೆ.

ಜೆಎನ್‌ಯು, ಸಿಎಎ, ರೈತ ಹೋರಾಟ, ಹಿಜಾಬ್, ಜುಬೇರ್ ಹೀಗೆ ಪಟ್ಟಿಮಾಡಬಹುದಾದ ಅಸಂಖ್ಯಾತ ಪ್ರಕರಣಗಳಲ್ಲಿ ನಾಗರಿಕ ಸಮಾಜ ನಿಧಾನಕ್ಕೆ ಎಚ್ಚೆತ್ತುಕೊಳ್ಳುತ್ತಿರುವುದು ಕಾಣುತ್ತಿದೆಯಾದರೂ, ಇದಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುತ್ವಕ್ಕೆ ಹಾಗೂ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿಕೊಂಡಿರುವುದರಿಂದ ಇಲ್ಲಿ ಡಿಪೋಲರೈಸೇಶನ್ ವೇಗ ಪಡೆದುಕೊಳ್ಳುತ್ತಿಲ್ಲ.

ಜುಬೇರ್ ಪ್ರಕರಣದಲ್ಲಾಗಲೀ, ನೂಪುರ್ ಶರ್ಮಾ ಪ್ರಕರಣದಲ್ಲಾಗಲೀ ಸುಪ್ರೀಂ ಕೋರ್ಟ್ ಮಾಡಿದ ಅಬ್ಸರ್ವೇಶನ್‌ಗಳನ್ನು, ಕೊಟ್ಟ ತೀರ್ಪನ್ನು ಸಂಘ ಪರಿವಾರದ ಕೆಲವು ಫ್ರಿಂಜ್ ಎಲಿಮೆಂಟ್‌ಗಳು ಗೇಲಿಮಾಡುತ್ತಾ, ಶರಿಯಾ ಕೋರ್ಟ್ ಎಂದು ಜರಿದು ಅವಮಾನಿಸುತ್ತಿದ್ದಾಗ ಮುಖ್ಯವಾಹಿನಿ ಮಾಧ್ಯಮಗಳಿಂದ ಮೂಡಬೇಕಿದ್ದ ತಿಳಿವಳಿಕೆ ಮಾಯವಾಗಿತ್ತು! ಯುಕೆಯಲ್ಲಿ ಬೋರಿಸ್ ಜಾನ್ಸನ್ ವಿರುದ್ಧ ಒಂದು ಮಟ್ಟದ ಜನಾಭಿಪ್ರಾಯಕ್ಕೆ ಕಾರಣವಾದದ್ದು ಅಲ್ಲಿನ ಮಾಧ್ಯಮ ಬಿಬಿಸಿಯನ್ನು (ಪ್ರಭುತ್ವದ ಸಂಸ್ಥೆಯಾದರೂ) ಹೆಚ್ಚು ಜನ ಅನುಸರಿಸುವುದಕ್ಕೆ ಹಾಗೂ ಆ ಮಾಧ್ಯಮ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವುದಕ್ಕೆ ಎನ್ನಲಾಗಿದೆ.

ಆಗಸ್ಟ್‌ನಲ್ಲಿ ಭಾರತ್ ಜೋಡ್ ಯಾತ್ರೆಯನ್ನು ಆಯೋಜಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಇದನ್ನು ಅಭಿನಂದಿಸೋಣ. ಆದರೆ ಕರ್ನಾಟಕದಲ್ಲಿ ’ಗೆಲ್ಲುವ ಕನಸಿ’ನಲ್ಲೇ ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಒಳಜಗಳವನ್ನು ನೋಡಿದರೆ, ಸಂಘ ಪರಿವಾರ ಮತ್ತು ಬಲಪಂಥೀಯ ಬಿಜೆಪಿ ಪಕ್ಷ ತನ್ನ ಪೋಲರೈಸೇಷನ್ ಯೋಜನೆ ಯಶಸ್ಸು ಕಾಣದೆಯೂ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಹುಟ್ಟುಹಾಕುತ್ತಿದೆ. ಮತ್ತೊಂದೆಡೆ ಪ್ರಾದೇಶಿಕ ಪಕ್ಷಗಳು ನಿಧಾನಕ್ಕೆ ನೆಲಕಚ್ಚುತ್ತಿವೆ. ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಕೂಡ ಸಂಘಪರಿವಾರದ ಧ್ರುವೀಕರಣ ಯೋಜನೆಗೆ ಬ್ರೇಕ್ ಹಾಕಲು ಸಹಕಾರವಾದೀತು.

ಸ್ಪೇನ್ ದೇಶದಲ್ಲಿ, ಕ್ಯಾಟಲಾನ್ ಬಂಡುಕೋರರನ್ನು ಜೈಲಿಗೆ ತಳ್ಳಿದ್ದ ಸರ್ಕಾರ ಅವರಿಗೆ ಈಗ ರಿಲ್ಯಾಕ್ಸೇಶನ್ ನೀಡುವ ಮಾತನಾಡುತ್ತಿದೆ. ತನ್ನ ನೀತಿಗಳಿಗೆ ಕ್ಯಾಟಲಾನ್ ಸ್ವಾತಂತ್ರ್ಯ ಬಯಸುವ ಪಕ್ಷಗಳ ಬೆಂಬಲ ಬೇಕಿರುವುದರಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲೂ ಕೂಡ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಅಧಿಕಾರ ಹಿಡಿಯುವ ಸಾಧ್ಯತೆ ಕ್ಷೀಣಿಸಿದಾಗ ಎಂಥ ಬಲಶಾಲಿ-ಸರ್ವಶಕ್ತ ನಾಯಕನೂ ಬಗ್ಗಲೇಬೇಕಾಗುತ್ತದೆ.

ಈ ನೆಲೆಯಲ್ಲಿ ನಾಗರಿಕ ಸಮಾಜ ಎಚ್ಚೆತ್ತುಕ್ಕೊಳ್ಳುತ್ತಿರುವುದನ್ನು ಗುರುತಿಸಿ ವಿರೋಧ ಪಕ್ಷಗಳು ಹಾಗೂ ಸಣ್ಣ ಪ್ರಾದೇಶಿಕ ಪಕ್ಷಗಳು ಸಂಘಪರಿವಾರದ ಈ ಪೋಲರೈಸೇಷನ್ ಪ್ರಾಜೆಕ್ಟ್ ವಿರುದ್ಧ ದಿಟ್ಟ ಧ್ವನಿ ತಳೆಯುವುದು, ಅದಕ್ಕಾಗಿ ಸಂಘಟಿತರಾಗಿ ಒಗ್ಗೂಡುವುದು, ಆ ಪಕ್ಷಗಳ ಹಿತದೃಷ್ಟಿಯಿಂದಲೂ ಮತ್ತು ದೇಶದ ಸಮಸ್ತ
ನಾಗರಿಕರ ಹಿತದೃಷ್ಟಿಯಿಂದಲೂ ಅಗತ್ಯವಾದದ್ದು.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...