Homeಅಂಕಣಗಳುಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

ಬಹುಜನ ಭಾರತ: ತುಕ್ಕು ತಗುಲಿತೇ ಉಕ್ಕಿನ ರಕ್ಷಾ ಕವಚಕ್ಕೆ?

- Advertisement -
- Advertisement -

ಲೋಕಸಭಾ ಚುನಾವಣೆಗಳು ಮೂರು ವರ್ಷ ದೂರದಲ್ಲಿವೆ. ಚಂಡಪ್ರಚಂಡರ ವರ್ಚಸ್ಸಿನ ಕವಚಕ್ಕೆ ತಗುಲಿರುವ ತುಕ್ಕನ್ನು ಉಜ್ಜಿ ತೆಗೆದು, ಹೊಸ ತಂತ್ರ-ಕುತಂತ್ರಗಳ ಹೆಣೆಯಲು ಸಾಕಷ್ಟು ಕಾಲಾವಕಾಶವಿದೆ
ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಮೌನಕ್ಕೆ ಶರಣಾಗಿದ್ದ ಪ್ರಧಾನಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಜನಾಕ್ರೋಶದ ಖಡ್ಗಕ್ಕೆ ಎದುರಾಗಿ ಕಂಬನಿ ತುಂಬಿದ ಭಾವುಕತೆಯ ಗುರಾಣಿಯನ್ನು ಅಡ್ಡ ಹಿಡಿದಿದ್ದಾರೆ.

ಕೋವಿಡ್ ಮಾರಣಹೋಮ ಕೇಕೆ ಹಾಕಿ ಕೊಳ್ಳೆ ಹೊಡೆದ ಭಾರತದ ದಿಡ್ಡಿ ಬಾಗಿಲನ್ನು ಭಾವುಕತೆಯಿಂದ ಮುಚ್ಚುವ ಅವರ ಎದೆಗಾರಿಕೆ ಅಸಾಧಾರಣ. ಆದರೆ ಕಂಬನಿ ತುಂಬಿ ಗಂಟಲು ಕಟ್ಟಿದ ಸಾಂತ್ವನ, ಶ್ರದ್ಧಾಂಜಲಿ ದಿಟವೆನಿಸುವುದಿಲ್ಲ. ಸಟೆಯೇ ಹೌದು. ಈ ಕಾರಣಕ್ಕಾಗಿಯೇ ಗಾಯದ ಮೇಲೆ ಬರೆ ಎಳೆದಿವೆ. ’ಎಲೆ ದೇವಾ, ಬೆಂದ ಹುಣ್ಣಿಗೆ ಬೇಗೆಯನಿಕ್ಕಲು ಬಂದೀತೇ’ ಎಂಬ ಅಕ್ಕನ ವಚನದ ಸಾಲನ್ನು ನೆನಪಿಸಿವೆ.

ಸಾಮಾನ್ಯ ಕಾಲದಲ್ಲಿ ಸರ್ವಾಂತರಿಯಾಗಿ ವಿಜೃಂಭಿಸುವ ಪ್ರಧಾನಿ ಮೋದಿಯವರು ವಾರಗಳ ಹಿಂದೆ ಕೋವಿಡ್ ನರಮೇಧದ ನಟ್ಟ ನಡುವೆ ಹಠಾತ್ತನೆ ಅಂತರ್ಧಾನರಾದರು. ದೇಶವೇ ಬೇಯುತ್ತಿದ್ದಾಗ ಅವರು ಮುಖ ತೋರಲಿಲ್ಲ, ತುಟಿ ಬಿಚ್ಚಲಿಲ್ಲ.

ಮೊದಲ ಅಲೆ ಮತ್ತು ಎರಡನೆಯ ಅಲೆಯ ನಡುವಣ ಅಂತರವನ್ನು ಪೋಲು ಮಾಡಿದರು. ಆಸ್ಪತ್ರೆಗಳು-ಆಮ್ಲಜನಕ-ಔಷಧಿಗಳು-ಲಸಿಕೆಗಳ ಆಲೋಚನೆಯನ್ನೇ ಮಾಡಲಿಲ್ಲ. ನಿಜವಾದ ನಾಯಕನ ಶಕ್ತಿ ಸಾಮರ್ಥ್ಯ ಮುನ್ನೋಟ ಯೋಜನಾಶಕ್ತಿಯ ಸತ್ವ ಪರೀಕ್ಷೆ ನಡೆಯುವುದು ಸಮರಕಾಲದಲ್ಲೇ ವಿನಾ ಶಾಂತಿಯ ದಿನಗಳಲ್ಲಿ ಅಲ್ಲ. ಈ ಪರೀಕ್ಷೆಯ ಬೆಂಕಿಗೆ ಮುಖ್ಯಮಂತ್ರಿಗಳನ್ನು ಮುಂದೆ ತಳ್ಳಿ ತಾವು ತೆರೆಮರೆಗೆ ಸರಿದುಬಿಟ್ಟರು.

ಗುಜರಾತ್ ಮಾದರಿ
Photo Courtesy: PTI

ಪವಿತ್ರನದಿಗಳಾದ ಗಂಗೆ ಯಮುನೆಯರು ಕೋವಿಡ್ ಶವವಾಹಕಗಳಾಗಿ ಹೋದವು. ಶವ ಸುಡುವ ಕಟ್ಟಿಗೆಯ ದರಗಳು ಮುಗಿಲಿಗೇರಿದವು. ವಾಹನಗಳ ಹಳೆಯ ಟೈರುಗಳ ತಂದು ಚಿತೆ ಹೊತ್ತಿಸಿ ಸುಟ್ಟ ದಾರುಣ ಉದಾಹರಣೆಗಳಿವೆ. ಸತ್ತವರ ಸಂಸ್ಕಾರಕ್ಕೆ ಹಣ ಹೊಂದಿಸಲಾಗದ ಬಂಧುಗಳು ನದೀ ನೀರಿಗೆ ಶವಗಳನ್ನು ತೇಲಿಬಿಟ್ಟರು. ಬಹುತೇಕರು ಗಂಗೆ ಮತ್ತು ಯಮುನೆಯ ನದೀ ದಂಡೆಯ ಮರಳು ತೋಡಿ ಹೂತು ಹಾಕಿದರು. ಕಣ್ಣು ಹರಿದಷ್ಟು ದೂರ ಹರಡಿ ಹಬ್ಬಿದ ಈ ಮರಳ ಸಮಾಧಿಗಳನ್ನು ನಾಯಿಗಳು ತೋಡಿ ಶವಗಳನ್ನು ಕಿತ್ತು ತಿಂದವು. ಉತ್ತರ ಭಾರತದಲ್ಲಿ ಸುರಿದ ಅಕಾಲದ ಮಳೆಯು ಮರಳನ್ನು ಕೊಚ್ಚಿ ಹಾಕಿದ ನಂತರ ಗೋಚರವಾದ ಶವಗಳನ್ನೂ ನಾಯಿಗಳು ಕಿತ್ತು ಜಗಿಯತೊಡಗಿದಾಗ, ನಗರಸಭೆಗಳು ಪೌರಕಾರ್ಮಿಕರನ್ನು ಕರೆತಂದು ಪುನಃ ಮರಳನ್ನು ಎಳೆದು ಮುಚ್ಚಿಸಿದವು. ದಿಕ್ಕಿಲ್ಲದ ಶವಗಳನ್ನು ಆಸ್ಪತ್ರೆಗಳು, ಆಂಬುಲೆನ್ಸ್‌ನವರು ನೀರುಪಾಲು ಮಾಡಿದರು. ಹಿಂದೀ ಪತ್ರಿಕೆಯೊಂದು ತನ್ನ 26 ವರದಿಗಾರರನ್ನು ನಿಯುಕ್ತಿ ಮಾಡಿ ನಡೆಸಿದ ತನಿಖಾ ವರದಿಯಲ್ಲಿ ಗಂಗೆಯುದ್ದಕ್ಕೆ ಎರಡು ಸಾವಿರ ಶವಗಳು ಪತ್ತೆಯಾದವು. ಜೀವಿಸಿರುವವರಿಗೆ
ಆಸ್ಪತ್ರೆಯಲ್ಲಿ ಜಾಗವಿಲ್ಲ, ಸತ್ತವರಿಗೆ ಸ್ಮಶಾನದಲ್ಲಿ ಸಂಸ್ಕಾರವಿಲ್ಲ ಎಂಬ ದುಸ್ಥಿತಿ. ದಿನನಿತ್ಯ ಹಗಲಿರುಳು ಉರಿದ ಸಹಸ್ರಾರು ಚಿತೆಗಳಿಗೆ ಲೆಕ್ಕವಿಲ್ಲ. ತಬ್ಬಲಿಗಳಾದ ಮಕ್ಕಳ ನೆತ್ತಿಯ ಮೇಲಿನ ಹೆತ್ತವರ ನೆರಳು ಎಲ್ಲ ಕಾಲಕ್ಕೂ ಸರಿದುಹೋಯಿತು.

ನಡುವೆ ಗೋಮೂತ್ರ ಸೇವನೆಯಿಂದ, ಗೋವಿನ ಸೆಗಣಿಯ ಲೇಪನದಿಂದ ಕೋವಿಡ್ ವೈರಾಣು ನಾಶವಾಗುತ್ತದೆಂಬ ಪ್ರಚಾರದ ಆರ್ಭಟ ನಡೆದಿದೆ. ಸಂಸದೆಯೂ ಆದ ಸಾಧ್ವಿ ಪ್ರಜ್ಞಾ ಸಿಂಗ್ ಈ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಬೀದಿ ಬೀದಿಗಳಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕಿ, ಶಂಖಘೋಷ ಮಾಡಿ ಕೊರೊನಾ ಓಡಿಸುವ ಅವಿವೇಕವೂ ಜರುಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಶಾಖೆಗಳು ಅಂಧಶ್ರದ್ಧೆಗೆ ಕುಮ್ಮಕ್ಕು ನೀಡಿವೆ. ನಿತ್ಯ ಗೋಮೂತ್ರ ಸೇವನೆಯಿಂದಾಗಿ ತಮ್ಮನ್ನು ಕೊರೊನಾ ಬಾಧಿಸಿಲ್ಲ ಎಂಬ ಸಾಧ್ವಿ ಪ್ರಜ್ಞಾ ಅವರು ನಿನ್ನೆ ಹಠಾತ್ತನೆ ಉಸಿರಾಟದ ತೊಂದರೆಯನ್ನು ಎದುರಿಸಿದರು. ಅವರನ್ನು ವಿಮಾನ ಆಂಬುಲೆನ್ಸ್‌ನಿಂದ ಸುರಕ್ಷಿತ ಆಸ್ಪತ್ರೆಗೆ ತಲುಪಿಸಲಾಯಿತು. ಅಂಧಶ್ರದ್ಧೆಗಳ ಕುರಿತು ಪ್ರಧಾನಿ ಚಕಾರ ಎತ್ತಲಿಲ್ಲ. ಈ ಎಲ್ಲ ಎಣೆಯಿಲ್ಲದ ದುಃಖ ದುರಂತದಲ್ಲಿ ಪ್ರಧಾನಿಯವರ ಕಂಚಿನ ಕಂಠ ಬಹುತೇಕ ಅಡಗಿಹೋಗಿತ್ತು.

ಕೋವಿಡ್ ಸಾವುನೋವಿನ ಸೂತಕದ ನಡುವೆ 20 ಸಾವಿರ ಕೋಟಿ ರುಪಾಯಿ ವೆಚ್ಚದ ಹೊಸ ಸಂಸತ್ ಭವನ ಮತ್ತು ಪ್ರಧಾನಿ ನಿವಾಸವನ್ನು ಹೊಂದಿರುವ ಸೆಂಟ್ರಲ್ ವಿಸ್ತಾ ನಿರ್ಮಾಣ ಅಬಾಧಿತವಾಗಿ ನಡೆದಿದೆ. ಈ ಯೋಜನೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದಾರೆ ಪ್ರಧಾನಿಯವರು. ಮಾರಣಹೋಮದ ನಡುವೆ ನಡೆಯುವ ಮೋಜಿನ ಮೇಜವಾನಿಯಷ್ಟೇ ವಿಕೃತ ಕೃತ್ಯವಿದು. ನೊಂದು ಸತ್ತು ಸಂಸ್ಕಾರವನ್ನೂ ಕಾಣದೆ ನೀರುಪಾಲು ನಾಯಿ ನರಿ ಪಾಲಾದ ಕಳೇಬರಗಳ ಅಡಿಪಾಯದ ಮೇಲೆ ಮೈ ತಳೆಯುವ ಈ ಸೌಧಗಳ ಗೋಡೆ ಮಾಡುಗಳು ನೋವು ನರಳಾಟವನ್ನು ಪಿಸುಗುಡುವುದಿಲ್ಲವೇ? ಅಂತಹ ಸುಖಾಸೀನಗಳ ಮೇಲೆ ಕುಳಿತು ಜನಚಿಂತನೆ ಮಾಡುವುದು ಸಾಧ್ಯವೇ? ಅಂತಹ ಮಹಲಿನ ಹಂಸತೂಲಿಕಾ ತಲ್ಪದಲ್ಲಿ ಪ್ರಧಾನಿಯಾದ ವ್ಯಕ್ತಿ ದಿಂಬಿಗೆ ತಲೆಯಾನಿಸಿ ನಿದ್ರಿಸುವುದು ಸಾಧುವೇ?

ಸಂವೇದನೆಗಳು ಸತ್ತು ಹೋದಂತೆ ನಡೆದುಕೊಂಡಿರುವವರು ಏಕಾಏಕಿ ಮಿಡಿಯುವ ಕಂಬನಿ ಕೃತ್ರಿಮ ಅಲ್ಲವೆಂದು ನಂಬುವುದಾದರೂ ಹೇಗೆ?

ಸಾವು ಸಂಕಟಗಳ ನಡುವಿನಿಂದ ಮೋದಿ ಆಡಳಿತದ ವಿರುದ್ಧ ಜನಾಕ್ರೋಶ ಸಿಡಿದಿರುವುದು ಸಹಜ ಬೆಳವಣಿಗೆ. ಉತ್ತುಂಗದಲ್ಲಿದ್ದ ಅವರ ಜನಪ್ರಿಯತೆಯ ಉಕ್ಕಿನ ಕವಚಕ್ಕೆ ತುಕ್ಕು ತಗುಲತೊಡಗಿದೆ. ಪಕ್ಷ ಪರಿವಾರದಲ್ಲಿ ಗಾಬರಿಯ ಗಂಟೆ ಮೊಳಗಿದೆ. ಹಾನಿಯನ್ನು ತಡೆಯುವ ಬಗೆಯೆಂತು ಎಂಬ ಕುರಿತು ಚಿಂತನೆ ನಡೆದಿದೆ. ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗೆ ವರ್ಷವೂ ಉಳಿದಿಲ್ಲ. ಯೋಗಿ ಆದಿತ್ಯನಾಥರಿಗೆ ಹೋಲಿಸಿದರೆ ನರೇಂದ್ರ ಮೋದಿಯವರು ಅದೃಷ್ಟವಂತರು. ಮುಂದಿನ ಲೋಕಸಭಾ ಚುನಾವಣೆಗಳು ಮೂರು ವರ್ಷ ದೂರದಲ್ಲಿವೆ. ಅಷ್ಟರೊಳಗೆ ವರ್ಚಸ್ಸಿನ ಕವಚಕ್ಕೆ ತಗುಲಿರುವ ತುಕ್ಕನ್ನು ಉಜ್ಜಿ ತೆಗೆದು, ಹೊಸ ತಂತ್ರಗಳ ಹೆಣೆಯಲು ಸಾಕಷ್ಟು ಕಾಲಾವಕಾಶ ಉಂಟು.

ಅಳುವ ದೃಶ್ಯ ಮನುಷ್ಯನನ್ನು ವಿನಮ್ರವಾಗಿಸುತ್ತದೆ, ಮಾನವೀಯಗೊಳಿಸುತ್ತದೆ. ಅನುಕಂಪ-ಸಹಾನುಭೂತಿಯನ್ನು ಹುಟ್ಟಿಸುತ್ತದೆ. ಕಣ್ಣೀರಿಡುವ ವ್ಯಕ್ತಿಯು ಸರ್ವಶಕ್ತನೇನೂ ಅಲ್ಲ, ಬದಲಾಗಿ ಮನುಷ್ಯ ಮಾತ್ರನೇ ಎಂಬ ಅನುಕಂಪ ಹುಟ್ಟಿಸುತ್ತದೆ. ಆತ ತಪ್ಪು ಮಾಡಿರಲಾರ, ಮಾಡಿದ್ದರೂ ಪರವಾಗಿಲ್ಲ, ಕಣ್ಣೀರು ಅವನ ಪಶ್ಚಾತ್ತಾಪವೇ ಇದ್ದೀತು ಎಂಬ ಭಾವನೆಯನ್ನು ಹುಟ್ಟಿಸಿಬಿಡುತ್ತದೆ.

ಕಣ್ಣೀರು ಹಾಕಿ ಅದಕ್ಷ ಆಡಳಿತವನ್ನು ಅಸಾಮರ್ಥ್ಯವನ್ನು ಮುಚ್ಚಿಡುವುದು ಸಾಧ್ಯವಿಲ್ಲ. ವಚನಭಂಗ, ಮೋಹಭಂಗವನ್ನು ಅದುಮಿಡುವುದು ಸುಲಭವಲ್ಲ. ಕುಸಿಯತೊಡಗಿರುವ ಜನತಂತ್ರ, ಜನಸಮುದಾಯಗಳ ವಿಶ್ವಾಸ, ಕವಿಯುತ್ತಿರುವ ನಿರುದ್ಯೋಗ, ಹದಗೆಟ್ಟಿರುವ ಅರ್ಥಸ್ಥಿತಿ, ದ್ರುವೀಕರಣ ರಾಜಕಾರಣದಿಂದಾಗಿ ತಲೆಯೆತ್ತುತ್ತಿರುವ ಆರ್ಥಿಕ-ಸಾಮಾಜಿಕ ಘರ್ಷಣೆಗಳ ಕುರೂಪವನ್ನು ಅಡಗಿಸುವುದು ದುಸ್ಸಾಧ್ಯವೇ ಸರಿ. ಸಾವುನೋವುಗಳಿಗೆ ಹನಿಗೂಡದ ಕಣ್ಣುಗಳು ವರ್ಚಸ್ಸಿನ ಹಾನಿಗೆ, ಗತವೈಭವಕ್ಕೆ ಮರುಜೀವ ನೀಡುವುದಕ್ಕೆ ರಾಜಕೀಯ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಕಂಬನಿ ತುಂಬುವುದು ಜನದ್ರೋಹ.

ಹೊಟ್ಟೆ ಬಟ್ಟೆಗೆ ಬಡಿದಾಡುವ ನಿತ್ಯ ಯಾತನೆಯ ಲೌಕಿಕ ವಾಸ್ತವಕ್ಕೆ ಜನಸಮೂಹಗಳನ್ನು ತುಸುಕಾಲ ಜೋಮುಗಟ್ಟಿಸಬಹುದು. ಕಡು ಭಾವುಕತೆಯ ಅರಿವಳಿಕೆ ಮದ್ದು ನೀಡಿ ಹುಸಿ ಆವರಣದಲ್ಲಿ ಕೆಲ ಕಾಲ ಬಂಧಿಸಲು ಬಂದೀತು. ಆದರೆ ಅರಿವಳಿಕೆಯ ಮದ್ದಿನ ಪ್ರಭಾವ ಕಾಯಂ ಅಲ್ಲ. ಹೀಗಾಗಿ ಮೈಮರೆವು ಚಿರಾಯು ಅಲ್ಲ.


ಇದನ್ನೂ ಓದಿ: ಲ್ಯುಟಿನ್ಸ್ ದೆಹಲಿಯ ಐಶಾರಾಮದ ಬಗ್ಗೆ ಗೇಲಿ; ಸಾವಿನ ಸರಣಿಯ ಮಧ್ಯೆ 20 ಸಾವಿರ ಕೋಟಿ ಮಹಲು

ಇದನ್ನೂ ಓದಿ: ದೆಹಲಿ ವಾಸ್ತು- ಹಿನ್ನೋಟ; ಭವ್ಯ ಕಟ್ಟಡವೊಂದಕ್ಕೆ ಪರಂಪರೆಯ ನೆಲಸಮ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬರಹ ಅರ್ಥಪೂರ್ಣವಾಗಿದೆ. ಬಹುಜನ ಅಪ್ಪಟ ದೇಶ ಭಕ್ತರು ಶಾಶ್ಕವತವಾದ ಗಟ್ಟಿಮುಟ್ಟಾದ ತಳಪಾಯದ ಮೇಲೆ ಕಟ್ಟಿದ್ದ ಏಕತೆ, ಭಾವೈಕ್ಯತೆಯ ಭಾರತ ದೇಶವನ್ನು ಬಿಜೆಪಿ ನೇತೃತ್ವದ ಮನೆಯಾಳ ಮೋದಿ ಬುಡ ಸಹಿತ ಕೇವಲ ೭ ವರ್ಷಗಳಲ್ಲೇ ನೆಲಸಮ ಮಾಡಿ ಸೆಂಟ್ರಲ್ ವಿಸ್ತಾ ಹೆಸರಿನ ಸೂತಕದ ಸೌಧ ನಿರ್ಮಾಣ ಮಾಡುತ್ತಿದ್ದಾರೆ. ಜಗತ್ತಿನಲ್ಲೇ ಅತ್ಯಂತ ದುರ್ಬಲ ಪ್ರಧಾನಿ ಎಂಬ ಕುಖ್ಯಾತಿಯನ್ನು ಮೋದಿ ಪಡೆದುಕೊಳ್ಳುವ ಮೂಲಕ ದೇಶದ ಮಾನ ಮರ್ಯಾದೆಯನ್ನು ಹಾಳು ಮಾಡಿದರು.

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...