ಈ ಹಳೆ ಮೈಸೂರು ಕಡೆ ಮಂದಿ ಕೆಲವು ಶಬ್ದಗಳ ಅರ್ಥ ತಿಳಿಯಲಾರದೆ ಬಳಕೆ ಮಾಡತಾರ. ಅದರಲ್ಲಿ ಒಂದು ‘ಅಡಗೂಲಜ್ಜಿ’.
ಅಂಥಾ ಒಬ್ಬೆಕಿ ಅಡಗೂಲಜ್ಜಿ ಒಂದು ಊರಾಗ ಇದ್ದಳು. ಅಕಿ ಮಕ್ಕಳು-ಮೊಮ್ಮಕ್ಕಳು-ಮರಿ ಮಕ್ಕಳು ಎಲ್ಲಾ ಅದ ಊರಿನ ಒಳಗ ಇದ್ದರು. ಎಲ್ಲರೂ ಆರಾಮ ಇದ್ದರು. ಅವರಿಗೆ ಏನಾದರೂ ರೋಗ ಬಂದಾಗ, ಸಮಸ್ಯೆ ಇದ್ದಾಗ ಈ ಅಡಗೂಲಜ್ಜಿನ್ನ ಭೇಟಿ ಆಗಿ ಪರಿಹಾರ ಕೇಳುತ್ತಾ ಇದ್ದರು. ಆ ಅಜ್ಜಿ ಅವರಿಗೆ ಮಂತ್ರ ಹಾಕಿ, ಔಷಧ, ಸಲಹೆ, ಉಪದೇಶ ಕೊಟ್ಟು ಕಳಿಸುತ್ತಾ ಇದ್ದಳು. ಅವರಿಗೆ ಗುಣ ಆಗಿ, ಖುಷಿ ಆಗಿ ಅವರು ವಾಪಸ್ ಬಂದು ಅಕಿಗೆ ಅಕ್ಕಿ-ಜೋಳ, ನವಣಿ-ಸಾವಿ, ಎಣ್ಣೆ-ಬೆಣ್ಣಿ ಕೊಟ್ಟು ಹೋಗ್ತಾ ಇದ್ದರು. ಅವಳ ಮಂತ್ರದಿಂದ ಕಮ್ಮಿ ಆತೋ, ಅಥವಾ ಅವಳ ನಲ್‌ನುಡಿಗಳಿಂದ ಕಮ್ಮಿ ಆತೋ ಅದು ಅವರಿಗೆ ಗೊತ್ತಾಗತಾ ಇರಲಿಲ್ಲ.
ಹಿಂಗ ಇದ್ದಾಗ ಒಂದು ದಿವಸ ಆ ಅಜ್ಜಿ ಮರಿಮಗ ಸಾಲಿಯಿಂದ ಮನಿಗೆ ಓಡಿಕೊಂತ ಬಂದು ಅವರ ಅವ್ವನ ಮುಂದ ಒಂದು ಸುದ್ದಿ ಹೇಳಿದನಂತ. “ಯವ್ವಾ ಯವ್ವಾ, ಇವತ್ತು ಸಾಲಿ ಒಳಗ ಓಟದ ಸ್ಪರ್ಧಾ ಇತ್ತು. ಅದರಾಗ ನನಗ ಎರಡನೇ ಬಹುಮಾನ ಬಂದೇತಿ” ಅಂತ. ಅವರ ಅವ್ವ ಬಹಳ ಖುಷಿ ಆಗಿ ಓಣಿ ಜನರಿಗೆ ಎಲ್ಲಾ ಸಕ್ಕರಿ ಹಂಚಿ ಬಂದಳು.
ಆ ಅಡಗೂಲಜ್ಜಿಗೆ ಸಹಿತ ಈ ಸುದ್ದಿ ಹೇಳೋನು ಅಂತ ಹೇಳಿ ಅಕಿ ಮನಿಗೆ, ಅವ್ವ-ಮಗ ಇಬ್ಬರು ಕೂಡಿಹೋದರು. ಮುತ್ತಜ್ಜಿ ಮುಂದ ಮರಿ ಮೊಮ್ಮಗ ಕುಣದು-ಕುಣದು ಸುದ್ದಿ ಹೇಳಿದ. ಮುತ್ತಜ್ಜಿ ಒಂದು ಪ್ರಶ್ನೆ ಕೇಳಿದಳು- “ಎಲ್ಲಾ ಸರಿಯೋ ತಮ್ಮಾ, ನಿನ್ನ ಸಂಗತೆ ಎಷ್ಟು ಜನ ಓಡಿದರು?” ಆ ಹುಡುಗ ಸರಳವಾಗಿ, ಯಾವುದೇ ಕಪಟವಿಲ್ಲದೆ, ಹೇಳಿದ “ನಾನು, ರಾಜಾ ಆಷ್ಟ. ನಾವು ಇಬ್ಬರು ಬಿಟ್ಟರ ಮತ್ತ ಯಾರಾರೂ ಇಲ್ಲ, ಆಯಿ” ಅಂತ. ಆ ಹುಡುಗನ ತಾಯಿಗೆ ಕಿರಿಕಿರಿ ಆತು. ಅಯ್ಯೋ ಅಷ್ಟೊಂದು ಸಕ್ಕರಿ ಲುಕ್ಸಾನು ಆತಲ್ಲ ಅಂತ ಬೇಜಾರು ಆತು.
ಸಾಲಿಯಿಂದ ಓಡೋಡಿ ಬಂದ ಆ ಹುಡುಗನ ಮುಗ್ಧ ಮಾತಿಗೆ ಅವನ ತಾಯಿ ಭಾವುಕವಾಗಿ ಪ್ರತಿಕ್ರಿಯಿಸಿದಳು. ಅದು ಮುಂದಹೋಗಿ ದೊಡ್ಡ ಕತಿ ಆತು.
ನವ ಭಾರತದ ಮಾಧ್ಯಮಗಳ ಈಗಿನ ಪರಿಸ್ಥಿತಿ ಇದೇ. ಅವರು ತಮಗೆ ಸಿಕ್ಕ ಮಾಹಿತಿಯನ್ನು ಅದರ ಪೂರಕ ಡೇಟಾ ಅಥವಾ ದತ್ತಾಂಶನ ಒರೆಗೆ ಹಚ್ಚದೆ, ಅದರ ಆಧಾರಾಂಶ ಏನು ಎನ್ನುವುದನ್ನು ನೋಡದೆ, ಅದನ್ನು ಕೇವಲ ಭಾವೋದ್ರೇಕದಿಂದ ನೋಡಿ, ದೊಡ್ಡ ಗದ್ದಲ ಮಾಡಿ ಜನರಿಗೆ ಹೆದರಿಸಿ ಸುಮ್ಮನೇ ಮನಿಯೊಳಗ ಕೂಡಿಸುವುದು, ಸಣ್ಣ ಸಣ್ಣ ವಿಷಯಕ್ಕ ಜನರನ್ನ ರೊಚ್ಚಿಗೆ ಎಬ್ಬಿಸೋದು, ಅಣ್ಣ-ತಮ್ಮನ ನಡುವೆ ಜಗಳ ಹಚ್ಚುವುದು, ಎಲ್ಲಾ ಅಸಹ್ಯ ತಂತ್ರಗಳು ಶುರು ಆಗಿ ಬಿಟ್ಟಾವು.
ಭಾರತೀಯ ವರದಿಗಾರರು ದತ್ತಾಂಶ ಉಪಯೋಗ ಮಾಡೋದಿಲ್ಲ ಅನ್ನೋದಕ್ಕೆ ಮುಖ್ಯ ಉದಾಹರಣೆಗೆ ಇವರು ಬಳಸುವ ಜಾತಿಯ ಲೆಕ್ಕಾಚಾರ. ಇದು ಮುನ್ನೆಲೆಗೆ ಬರೋದು ಚುನಾವಣೆ ಹಾಗೂ ಮುಖ್ಯಮಂತ್ರಿ ಆಯ್ಕೆ ಸಂದರ್ಭಗಳಲ್ಲಿ.
ಉದಾಹರಣೆಗೆ ರಾಜ್ಯದ ಈಗಿನ ರಾಜಕೀಯ ಪರಿಸ್ಥಿತಿ ತೊಗೋರಿ. ಎಲ್ಲರೂ ಯಡಿಯೂರಪ್ಪ ಅವರ ನಿರ್ಗಮನದ ಬಗ್ಗೆ ಮಾತಾಡುತ್ತಿದ್ದಾರೆ. ಅದರ ಹಿಂದ ಅವರ ಜಾತಿ ರಾಜಕೀಯದ ಮಾತೂ ಅದಾವು. ಯಡಿಯೂರಪ್ಪ ಅವರು ಲಿಂಗಾಯತ ಸಮಾಜದ ಅತಿ ಎತ್ತರದ ನಾಯಕ ಅನ್ನುವ ಹಿಂದೆಯೇ, ಅವರು ಎಲ್ಲಾ ಜಾತಿಯ ನಾಯಕರು ಅನ್ನುವ ಮಾತೂ ಸಹ ಬರ್ತದ. ಅದನ್ನ ನಾವು ಬೆಪ್ಪರ ಹಂಗ ಸಾಮಾಜಿಕ ಮಾಧ್ಯಮದೊಳಗ ಹಂಚಿಕೊಂಡು ಬಿಡ್ತೇವಿ.
ಯಾವ ಜಾತಿಯವರು ಕರ್ನಾಟಕದಲ್ಲಿ ಎಷ್ಟು ಸಂಖ್ಯೆಯಲ್ಲಿ ಅದಾರು ಅನ್ನೋದರ ಬಗ್ಗೆ ಯಾರಿಗೂ ಖಾತ್ರಿ ಇಲ್ಲ. ಆದರ ಕೆಲವು ಮಾಧ್ಯಮ ಮಿತ್ರರು ರಾಜ್ಯದ ಜಾತಿಗಣತಿ ತಮ್ಮ ಕಣ್ಣ ಮುಂದೆಯೇ ನಡೆದಿದೆ ಅನ್ನೋ ಹಂಗ ಸುದ್ದಿ ಮಾಡತಾರ. ಯಡಿಯೂರಪ್ಪ ನಿರ್ಗಮನದ ಸುದ್ದಿ ಆರಂಭ ಆದಾಗ ಟಿವಿ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತರೊಬ್ಬರು ಕರ್ನಾಟಕದ ಜನಸಂಖ್ಯೆಯಲ್ಲಿ ಲಿಂಗಾಯತರು 27 ಶೇಕಡಾ ಇದ್ದಾರೆ. ಅವರು ತಿರುಗಿ ಬಿದ್ದರೆ ಯಾವ ಪಕ್ಷವೂ ಉಳಿಯೋದಿಲ್ಲ. ಅವರ ಬೆಂಬಲ ಇಲ್ಲದೆ ಯಾವದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ ಅಂತ ಅಂದ್ರು.
ಅವರು ಹಂಗ ಹೇಳಿ ಅರ್ಧ ತಾಸು ಆಗಿಲ್ಲ, ಅಷ್ಟರಾಗ ಎಲ್ಲಾ ಚಾನೆಲ್‌ಗಳಲ್ಲಿ ಲಿಂಗಾಯತರು 27 ಶೇಕಡಾ ಇದ್ದಾರೆ ಅಂತ ಸುದ್ದಿ ಬರಲಿಕ್ಕೆ ಶುರು ಆತು. ಈ ಮಾಹಿತಿಯ ಆಧಾರ ಏನು ಅಂತ ಆ ಚಾನೆಲ್‌ನಲ್ಲಿನ ಹರಟೆಕೋರರು ಕೇಳಲಿಲ್ಲ. ಇವರು ಹೇಳಲಿಲ್ಲ. ಪಾಪ ನಮ್ಮ ಘನ ರಾಜ್ಯದ ಬಡಪಾಯಿ ಪ್ರೇಕ್ಷಕರು ಎಂದಿನಂತೆ ಇದನ್ನೇ ಅಂತಿಮ ಸತ್ಯ ಅಂತ ತಿಳಿದು ಮುಂದಕ್ಕೆ ಹೋದರು.
ಇಡೀ ದೇಶದಲ್ಲಿ ಕೊನೆಯ ಬಾರಿಗೆ ಜಾತಿ ಗಣತಿ ಆಗಿದ್ದು 1930ರಲ್ಲಿ. ಅಂದಿಗೂ ಇಂದಿಗೂ ಬಹಳ ಸಾಮಾಜಿಕ ಬದಲಾವಣೆ ಆಗಿಬಿಟ್ಟಾವು. ರಾಜ್ಯಗಳ ಗಡಿ ಬದಲು ಆಗಿ, ಕೆಲವು ಜಾತಿ ಹೆಚ್ಚು ಬೆಳದು, ಕೆಲವು ಕಮ್ಮಿ ಬೆಳದು, ಕೆಲವು ಹೆಸರು ಬದಲಾವಣೆ ಆಗಿ, ಇನ್ನು ಕೆಲವು ಇತರ ಜಾತಿಗಳ ಒಳಗ ಸೇರಿಕೊಂಡು ಹಿಂಗ ಏನೇನೋ ಆಗಿಬಿಟ್ಟಾವು.
ಆದರ ಕಾಲಕಾಲಕ್ಕೆ ಹಿಂದುಳಿದ ವರ್ಗಗಳ ಆಯೋಗ ನೇಮಕ ಮಾಡಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಒಂದು. ಇಲ್ಲಿಯವರೆಗೆ ನಾಲ್ಕು ಆಯೋಗ ನೇಮಕ ಆಗಿವೆ. ತಮಗೆ ತಿಳಿದ ರೀತಿಯಲ್ಲಿ ಜಾತಿಗಣತಿ ಮಾಡಿವೆ. ನಾಗನಗೌಡ ಆಯೋಗ, ಎಲ್.ಜಿ. ಹಾವನೂರ್, ವೆಂಕಟಸ್ವಾಮಿ ಹಾಗೂ ಚಿನ್ನಪ್ಪ ರೆಡ್ಡಿ ಆಯೋಗಗಳು ರಾಜ್ಯದ ವಿವಿಧ ಜಾತಿಗಳ ಶೇಕಡಾವಾರು ಪ್ರಮಾಣವನ್ನು ಪ್ರಕಟ ಮಾಡಿವೆ.
ಈ ನಾಲ್ಕರ ಸರಾಸರಿ ಅಂಕೆಗಳನ್ನು ನೋಡಿದಾಗ ಈ ಮಾಹಿತಿ ಸಿಗುತ್ತದೆ.
ಅವುಗಳ ಪ್ರಕಾರ ರಾಜ್ಯದಲ್ಲಿ ಅತಿದೊಡ್ಡ ಜಾತಿಸಮೂಹ ಅಂದರೆ ಹಿಂದುಳಿದ ಜಾತಿಗಳು – ಸುಮಾರು 35 ಶೇಕಡಾ.
ನಂತರ ಶೇಕಡಾವಾರು ಲೆಕ್ಕದಲ್ಲಿ ಪರಿಶಿಷ್ಟ ಜಾತಿ ಸುಮಾರು ಶೇ.15.
ಪರಿಶಿಷ್ಟ ಪಂಗಡ ಸುಮಾರು ಶೇ.3, ಮುಸ್ಲಿಮರು ಸುಮಾರು ಶೇ.11, ಕ್ರಿಶ್ಚಿಯನ್ನರು ಸುಮಾರು ಶೇ.2.
ಬ್ರಾಹ್ಮಣರು ಸುಮಾರು ಶೇ.4, ಕುರುಬರು ಸುಮಾರು ಶೇ.5, ಒಕ್ಕಲಿಗರು ಸುಮಾರು ಶೇ.11.86 ಹಾಗೂ ಲಿಂಗಾಯತರು ಸುಮಾರು 15.61 ಶೇಕಡಾ.
ಕರ್ನಾಟಕದ ಇತಿಹಾಸದಲ್ಲಿ ಜಾತಿಗಣತಿಯ ಯಶಸ್ವಿ ಪ್ರಯತ್ನಗಳು ಇಷ್ಟ. ಸಿದ್ದರಾಮಯ್ಯ ಅವರು ಮಾಡಿಸಿದ ಗಣತಿ ಹಳ್ಳಿಯ ಹಾವಾಡಿಗನ ಬುಟ್ಟಿಯ ಜಾದೂನಾಗ ಸರ್ಪದಂತೆ ಆಗಿಬಿಟ್ಟೆದ. ಅದು ಹಿಂಗ ಐತಿ, ಹಂಗ ಐತಿ ಅನ್ನುವ ಮಾತುಗಳೇ ಬಹಳ ಆದವು. ಆದರೆ ಆ ಹಾವು ಹೊರಗೆ ಬರಲೇ ಇಲ್ಲ.
ಟಿವಿ-ಪತ್ರಿಕೆಗಳಲ್ಲಿ ರಾಜ್ಯದಲ್ಲಿ ಈ ಜಾತಿಯವರು ಇಷ್ಟು ಅಂತ ಖಡಾಖಂಡಿತವಾಗಿ ಹೇಳುವ ಪೊಲಿಟಿಕಲ್ ಪಂಡಿತರು ರಾಜ್ಯದ ಈ ನಾಲ್ಕು ಆಯೋಗಗಳ ಹೆಸರು ಸಹಿತ ಉಚ್ಚರಿಸುವುದಿಲ್ಲ. ಆ ಆಯೋಗಗಳ ಬಗ್ಗೆ ಕೆಲವರಿಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ಜಾತಿಗಣತಿ ಬಗ್ಗೆ ಇರುವ ಸರಕಾರಿ ದಾಖಲೆಗಳು ಇವು ನಾಲ್ಕು ಮಾತ್ರ ಅನ್ನೋದನ್ನ ನಾವು ಮರೆಯಲಿಕ್ಕೆ ಸಾಧ್ಯ ಇಲ್ಲ.
ಪಶ್ಚಿಮದ ಪತ್ರಿಕೋದ್ಯಮ ಹಾಗೂ ಭಾರತೀಯ ಪತ್ರಿಕೋದ್ಯಮದ ಮುಖ್ಯ ವ್ಯತ್ಯಾಸ ಏನು ಅನ್ನೋದನ್ನ ಕ್ರೀಡಾ ಪತ್ರಿಕೋದ್ಯಮದ ಪಿತಾಮಹ ರಾಜನ್ ಬಾಲಾ ಅತ್ಯಂತ ರಸವತ್ತಾಗಿ ವರ್ಣಿಸುತ್ತಿದ್ದರು. ಯೂರೋಪಿನ ವರದಿಗಾರರು ತಮ್ಮ ಸುದ್ದಿಗಳನ್ನು ಸರಳ ಭಾಷೆಯಲ್ಲಿ, ಓದುಗರ ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ಭಾರತೀಯ ಸುದ್ದಿಗಾರರು ತಮ್ಮ ವರದಿಗಳನ್ನು ಯುನಿವರ್ಸಿಟಿ ಸೆಮಿನಾರುಗಳ ಒಣ ಭಾಷಣಗಳಂತೆ, ಯಾರಿಗೂ ಅರ್ಥವಾಗದ ಅಕೆಡೆಮಿಕ್ ಸಂಶೋಧನೆಗಳಂತೆ ಬರೆಯುತ್ತಾರೆ. ಒಬ್ಬ ಯುರೋಪಿಯನ್ ವರದಿಗಾರನನ್ನು ಹೊಸ ಮಾಲ್ ಒಂದರ ಉದ್ಘಾಟನೆಗೆ ಕಳಿಸಿದರೆ ಅವನು “ಇದು ಎಷ್ಟು ದೊಡ್ಡದು ಎಂದರೆ ಇದು ಮೂರು ಫುಟ್‌ಬಾಲ್ ಸ್ಟೇಡಿಯಂಗಳಷ್ಟು ದೊಡ್ಡದು” ಅಂತ ಬರೆಯುತ್ತಾನೆ. ಆದರೆ ಭಾರತೀಯ ವರದಿಗಾರನನ್ನು ಹೊಸ ಫುಟ್‌ಬಾಲ್ ಮೈದಾನದ ಬಗ್ಗೆ ಬರೆಯಲು ಹೇಳಿದರೆ ಅದು 76,900 ಸ್ಕ್ವೇರ್ ಫೂಟು ಅಂತ ಹೇಳಿ ಕೈ ತೊಳೆದುಕೊಳ್ಳುತ್ತಾನೆ” ಅಂತ ಹೇಳಿ ನಗುತ್ತಿದ್ದರು.
ಈಗಿನ ಕಾಲದಲ್ಲಿ ದತ್ತಾಂಶ ಆಧಾರಿತ ಮಾಧ್ಯಮ ಹಾಗೂ ಮೌಲ್ಯ ಆಧಾರಿತ ರಾಜಕಾರಣ ಎರಡೂ ಅಪರೂಪ ಆಗುತ್ತಿವೆ. ಪೆಗಸಸ್ ಶ್ವೇತಾಶ್ವದ ದೆಸೆಯಿಂದ ನಮ್ಮ ಖಾಸಗಿ ಜೀವನದ ದತ್ತಾಂಶ ಎಲ್ಲ ಆಳುವವರ ಕೈಯಲ್ಲಿ ಐತಿ. ಅದರ ಆಧಾರದ ಮೇಲೆ ಪೊಲೀಸು ಕೇಸು ಕೂಡ ಆಗಲಿಕ್ಕೆ ಹತ್ತಿಬಿಟ್ಟಾವು. ಆದರ ಅದರ ಆಧಾರದ ಮೇಲೆ ಜನಕಲ್ಯಾಣ ಆಗಿಲ್ಲ.
ಸರಕಾರದ ಟೀಕಾಕಾರರು ಬೆಳಿಗ್ಗೆ ಎದ್ದು ಎಲ್ಲಿಗೆ ವಾಕಿಂಗ್ ಹೋದರು, ಯಾರನ್ನ ಭೇಟಿ ಆದರು, ಏನು ತಿಂಡಿ ತಿಂದರು, ಯಾವ ರೋಗಕ್ಕೆ ಯಾವ ಗುಳಿಗಿ ತೊಗೊಂಡರು, ಯಾವ ಪುಸ್ತಕ ಓದಿದರು, ಇವೆಲ್ಲವೂ ಸರಕಾರದ ಹತ್ತಿರ ಮಾಹಿತಿ ಐತಿ. ಈ ಸಾಕ್ಷಿ ಬಳಸಿ ಪೊಲೀಸು, ಸಿಬಿಐ, ಎನ್‌ಐಎ, ಈಡಿ ಕೇಸು ತಯಾರು ಆಗತಾವು. ಸಾಕ್ಷಿ ಕಮ್ಮಿ ಬಿದ್ದರೆ ಪೊಲೀಸರ ಮೊಬೈಲ್‌ನಿಂದ ನಿಮ್ಮ ಫೋನಿಗೆ- ಕಂಪ್ಯೂಟರ್‌ಗೆ ಈಮೇಲು ಕಳಿಸಿ ರೆಡಿಮೇಡ್ ಸಾಕ್ಷಿ ತಯಾರು ಆಗ್ತೇತಿ. ಆದರ ಯಾರಿಗೆ ಆಸ್ಪತ್ರೆ ಹಾಸಿಗೆ ಬೇಕು, ಯಾರಿಗೆ ಆಕ್ಸಿಜನ್ ಬೇಕು, ರೆಮೆಡಿಸಿವರ ಇಂಜಕ್ಷನ್ ಬೇಕು, ಯಾರು ಔಷಧಿ ಸಿಗಲಾರದೆ ಸತ್ತರು, ಯಾರಿಗೆ ಸ್ಮಶಾನದಾಗ ಜಾಗ ಬೇಕು, ಇತ್ಯಾದಿ ಮಾಹಿತಿ ಮಾತ್ರ ಇಲ್ಲ. ಜನರಿಗೆ ಬೇಕಾದ ಅನುಕೂಲ ಕೊಡಿಸುವ ವ್ಯವಸ್ಥಾನೂ ಇಲ್ಲ. ಸರಕಾರಕ್ಕೆ ತಾವಾಗಿಯೇ ತಿಳಿದು ಮಾಡುವ ಮೇಲು ಬುದ್ದಿ ಇಲ್ಲ. ಜನ ಕೇಳಿದಾಗ ಮಾಡುವ ಸೌಜನ್ಯ ಸಹಿತ ಕಂಡುಬಂದಿಲ್ಲ.
ಪೆಗಸಸ್ ಅನ್ನುವ ಶ್ವೇತಾಶ್ವ ಗ್ರೀಕ್ ಪುರಾಣದ ಕತಿ. ಅದನ್ನು ಏರಿ ಮೆರಿತಾ ಇರುವವರು ಒಂದು ವಿಷಯ ತಿಳಿದುಕೊಳ್ಳಬೇಕು. ಪೌರಾಣಿಕ ಪೆಗಸಸ್‌ನನ್ನು ಏರಿ ಯುದ್ಧ ಗೆದ್ದವರು ಕೆಲವರು. ಆದರ ಅದು ತನ್ನನ್ನು ಏರಿದವರನ್ನು ಒಂದು ದಿನ ನಿರ್ದಾಕ್ಷಿಣ್ಯವಾಗಿ ಕೆಡವಿಹಾಕಿತು. ಇದನ್ನು ಕುದುರೆ ಏರಿದವರು, ಏರುವವರನ್ನು ನೋಡಿದವರು ಇಬ್ಬರು ನೆನಪು ಇಟ್ಟುಕೊಳ್ಳಬೇಕು.



‘ಡೆಟಾಖೋಲಿ – ಡೇಟಾ ಆಧಾರಿತ ಮಾದ್ಯಮ’, ಚಿಂತನೆಗೆ ಒಳಪಡಿಸುವ ಅಂತರಂಗವನ್ನುಳ್ಳ ಅತ್ಯುತ್ತಮ ಲೇಖನ! ಭಾರತದಲ್ಲಿ ಪೆಗಾಸಿಸ್ ಅನ್ನು ಒಳಿತಿಗೆ ಬದಲು ವಿನಾಶಕ್ಕೆ ಉಪಯೋಗಿಸಲಾಗುತ್ತದೆ ಎಂಬುದು ವಿಷಾದನೀಯ!