ಇಸ್ರೇಲ್ ಸಶಸ್ತ್ರ ಪಡೆಗಳು ಭಾನುವಾರ (ಮಾ.23) ರಾತ್ರಿ ದಕ್ಷಿಣ ಗಾಝಾದ ಅತಿದೊಡ್ಡ ವೈದ್ಯಕೀಯ ಸೌಲಭ್ಯವಾದ ನಾಸರ್ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಹಮಾಸ್‌ನ ಉನ್ನತ ಅಧಿಕಾರಿ ಇಸ್ಮಾಯಿಲ್ ಬರ್ಹೌಮ್ ಸೇರಿದಂತೆ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದಾಳಿಯಿಂದ ಆಸ್ಪತ್ರೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.
ಇಸ್ರೇಲ್ ಸೇನೆಯು ಆಸ್ಪತ್ರೆ ಮೇಲೆ ದಾಳಿ ನಡೆಸಿರುವುದನ್ನು ದೃಢಪಡಿಸಿದ್ದು, ಅಲ್ಲಿದ್ದ ಹಮಾಸ್ ಸದಸ್ಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ತಿಳಿಸಿದೆ. ಜನನಿಬಿಡ ಪ್ರದೇಶಗಳಲ್ಲಿ ಹಮಾಸ್ ಇರುವಿಕೆಯೇ ನಾಗರಿಕರ ಸಾವುನೋವುಗಳಿಗೆ ಕಾರಣ ಎಂದು ಹೇಳಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) “ಗಾಝಾದ ನಾಸರ್ ಆಸ್ಪತ್ರೆಯ ಆವರಣದೊಳಗಿಂದ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಮುಖ ಹಮಾಸ್ ಭಯೋತ್ಪಾದಕನ ಮೇಲೆ ದಾಳಿ ನಡೆಸಲಾಗಿದೆ. ಹಮಾಸ್ ನಾಗರಿಕ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತಿದೆ ಮತ್ತು ಗಾಝಾದ ಜನಸಂಖ್ಯೆಯನ್ನು ದೊಡ್ಡ ಅಪಾಯಕ್ಕೆ ಸಿಲುಕಿಸಿದೆ. ಆಸ್ಪತ್ರೆಯನ್ನು ಆಶ್ರಯ ತಾಣವಾಗಿ ಬಳಸಿಕೊಂಡು ಅಂತಾರಾಷ್ಟ್ರೀಯ ಕಾನೂನಿನ ನೇರ ಉಲ್ಲಂಘನೆ ಮೂಲಕ ಭಯೋತ್ಪಾದಕ ದಾಳಿಗಳನ್ನು ಹಮಾಸ್ ಯೋಜಿಸುತ್ತಿದೆ” ಎಂದು ಆರೋಪಿಸಿದೆ.
⭕️A key Hamas terrorist who was operating from within the Nasser Hospital compound in Gaza was precisely struck.
The strike was conducted following an extensive intelligence-gathering process and with precise munitions in order to mitigate harm to the surrounding environment as… pic.twitter.com/C3pZqlC6NO
— Israel Defense Forces (@IDF) March 23, 2025
ಗಾಝಾದಾ ಇತರ ವೈದ್ಯಕೀಯ ಸೌಲಭ್ಯಗಳಂತೆಯೇ ನಾಸರ್ ಆಸ್ಪತ್ರೆಯೂ ಕೂಡ ಒಂದೂವರೆ ವರ್ಷದ ಇಸ್ರೇಲ್ ಸೇನೆಯ ನಿರಂತರ ಆಕ್ರಮಣದಿಂದ ಹಾನಿಗೊಳಗಾಗಿದೆ.
ಇಸ್ರೇಲಿ ಪಡೆಗಳು ಗಾಝಾದ ಅಲ್-ಮವಾಸಿಯಲ್ಲಿರುವ ಟೆಂಟ್ ಮೇಲೆ ಬಾಂಬ್ ದಾಳಿ ನಡೆಸಿ ಹಮಾಸ್‌ನ ರಾಜಕೀಯ ಬ್ಯೂರೋದ ಎರಡನೇ ಸದಸ್ಯ ಸಲಾಹ್ ಅಲ್-ಬರ್ದಾವಿಲ್ ಅವರನ್ನು ಕೊಂದ ಕೆಲವೇ ಗಂಟೆಗಳ ನಂತರ ಇಸ್ಮಾಯಿಲ್ ಬರ್ಹೌಮ್ ಹತ್ಯೆ ನಡೆದಿದೆ.
🚨 Al-Arabiya report: Hams political bureau member Ismail Barhoum killed in attack on Nasser Hospital in Khan Yunis https://t.co/TampzrvYqi pic.twitter.com/ayLLjZtWCo
— Raylan Givens (@JewishWarrior13) March 23, 2025
ಆಕ್ರಮಣದ ನಡುವೆ, ಇಸ್ರೇಲ್ ಸೇನೆ ರಫಾದಲ್ಲಿ ಧ್ವಂಸಗೊಂಡ ಟೆಲ್ ಅಲ್-ಸುಲ್ತಾನ್ ಪ್ರದೇಶದಿಂದ ಹೊರ ಹೋಗುವಂತೆ ಸಾವಿರಾರು ಪ್ಯಾಲೆಸ್ತೀನಿಯರಿಗೆ ಆದೇಶಿಸಿದೆ. ಇಲ್ಲಿಂದ ಸ್ಥಳಾಂತರಗೊಂಡ ಕುಟುಂಬಗಳು ಮುವಾಸಿಗೆ ಓಡಿ ಹೋಗಿದ್ದಾರೆ. ಮುವಾಸಿ ಕಿಕ್ಕಿರಿದ ಟೆಂಟ್ ಶಿಬಿರಗಳಿಂದ ತುಂಬಿದ ತಾತ್ಕಾಲಿಕ ಪ್ರದೇಶವಾಗಿದೆ.
ಅಕ್ಟೋಬರ್ 7, 2023ರಿಂದ ಇಸ್ರೇಲ್ ಸೇನೆ ನಿರಂತರವಾಗಿ ಗಾಝಾದ ಮೇಲೆ ನಡೆಸುತ್ತಿರುವ ದಾಳಿಯಿಂದ ಇದುವರೆಗೆ 50,021 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 113,274 ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಗಾಝಾದ ಸರ್ಕಾರಿ ಮಾಧ್ಯಮಗಳು ಸಾವಿನ ಸಂಖ್ಯೆ 61,700ಕ್ಕೂ ಹೆಚ್ಚು ಎಂದಿವೆ. ಇಸ್ರೇಲ್ ಸೇನೆ ಹೊಡೆದುರುಳಿಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಬಾಕಿಯಾಗಿರುವ ಸಾವಿರಾರು ಮಂದಿ ಪ್ಯಾಲೆಸ್ತೀನಿಯರು ಸತ್ತಿದ್ದಾರೆಂದು ಭಾವಿಸಿ ಈ ಲೆಕ್ಕ ಹಾಕಲಾಗಿದೆ.
ನಾಲ್ಕು ದೇಶಗಳ 5.32 ಲಕ್ಷ ನಾಗರಿಕರ ಗಡಿಪಾರಿಗೆ ಮುಂದಾದ ಟ್ರಂಪ್ ಆಡಳಿತ


