ಇಸ್ರೇಲ್ ಸೇನಾ ದಾಳಿಯು ಬೈರುತ್‌ನ ದಕ್ಷಿಣ ಉಪನಗರಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಲೆಬನಾನಿನ ಅಧಿಕೃತ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
“ಇಸ್ರೇಲಿ ವಿಮಾನವು ದಕ್ಷಿಣದ ಉಪನಗರಗಳನ್ನು ದಾಳಿಗೆ ಗುರಿಯಾಗಿಸಿದೆ” ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಎರಫ್‌ಪಿ ಛಾಯಾಗ್ರಾಹಕರೊಬ್ಬರು ಈ ಪ್ರದೇಶದಿಂದ ಹೆಚ್ಚಿನ ಹೊಗೆ ಏರುತ್ತಿರುವುದನ್ನು ಕಂಡಿರುವುದಾಗು ವರದಿ ಮಾಡಿದ್ದಾರೆ.
ಸಂಯಮಕ್ಕೆ ಕರೆ ನೀಡಿದ ಭಾರತ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯ ಹೊಸ ಉಲ್ಬಣಕ್ಕೆ ಭಾರತವು ತನ್ನ ಮೊದಲ ಪ್ರತಿಕ್ರಿಯೆಯಾಗಿ, ಉಭಯ ಪಕ್ಷಗಳು ಸಂಯಮ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದೆ. “ಸಂಘರ್ಷವು ವಿಶಾಲವಾದ ಪ್ರಾದೇಶಿಕ ಆಯಾಮವನ್ನು ತೆಗೆದುಕೊಳ್ಳಬಾರದು” ಎಂದು ಹೇಳಿದೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಉಗ್ರಗಾಮಿ ಸಂಘಟನೆಯ ಇತರ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್ ಮೇಲೆ ಸುಮಾರು 200 ಕ್ಷಿಪಣಿಗಳನ್ನು ಹಾರಿಸಿದ ಒಂದು ದಿನದ ಬಳಿಕ ಭಾರತದ ಸಲಹೆ ಬಂದಿವೆ.
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಸಂವಾದ ಮತ್ತು ರಾಜತಾಂತ್ರಿಕತೆ” ಮೂಲಕ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಕರೆ ನೀಡಿದೆ.
“ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಪರಿಸ್ಥಿತಿಯು ಉಲ್ಬಣಗೊಳ್ಳುತ್ತಿರುವ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ಸಂಬಂಧಪಟ್ಟ ಎಲ್ಲರಿಂದ ಸಂಯಮ ಮತ್ತು ನಾಗರಿಕರ ರಕ್ಷಣೆಗಾಗಿ ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ.
“ಘರ್ಷಣೆಯು ವಿಶಾಲವಾದ ಪ್ರಾದೇಶಿಕ ಆಯಾಮವನ್ನು ತೆಗೆದುಕೊಳ್ಳದಿರುವುದು ಮುಖ್ಯವಾಗಿದೆ. ಎಲ್ಲ ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಕೇಂದ್ರ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ; ‘ಪ್ಯಾಲೆಸ್ತೀನ್ ಮಕ್ಕಳಿಗಾಗಿ’: ಅಮೆರಿಕ ಬೆಂಬಲಿತ ಪ್ರಶಸ್ತಿ ತಿರಸ್ಕರಿಸಿದ ಆದಿವಾಸಿ ಕವಿ ಜೆಸಿಂತಾ ಕೆರ್ಕಟ್ಟಾ


