ಈ ಹಿಂದಿನಂತೆ ಈ ಬಾರಿಯೂ ಇಸ್ರೇಲ್ ಗಾಝಾ ಕದನ ವಿರಾಮ ಒಪ್ಪಂದವನ್ನು ಮುರಿದಿದೆ. ಅಕ್ಟೋಬರ್ 9ರಂದು ಹಮಾಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಈವರೆಗೆ (ಅ.19) ಬರೋಬ್ಬರಿ 47 ಬಾರಿ ಇಸ್ರೇಲ್ ಒಪ್ಪಂದ ಉಲ್ಲಂಘಿಸಿ ದಾಳಿ ಮಾಡಿದೆ. ಇದರಿಂದ ಈವರೆಗೆ 38 ಜನರು ಸಾವಿಗೀಡಾಗಿದ್ದು, 143 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಗಾಝಾ ಪಟ್ಟಿಯಾದ್ಯಂತ ಹಲವೆಡೆ ನಾಗರಿಕರ ಮೇಲೆ ಇಸ್ರೇಲ್ ಸೈನಿಕರು ನೇರ ಗುಂಡಿನ ದಾಳಿ ನಡೆಸಿದ್ದಾರೆ. ಕೆಲವೆಡೆ ಶೆಲ್ ದಾಳಿ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಅಮಾಯಕರ ಜನರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಹಲವು ಪ್ಯಾಲೆಸ್ತೀನಿಯರನ್ನು ಬಂಧಿಸಿದ್ದಾರೆ ಎಂದು ಗಾಝಾದ ಮಾಧ್ಯಮಗಳು ವರದಿ ಮಾಡಿವೆ.
ರಫಾ ಮತ್ತು ದಕ್ಷಿಣ ಗಾಝಾದ ಇತರೆಡೆಗಳಲ್ಲಿ ಇಸ್ರೇಲಿ ಸೇನೆ ದಾಳಿ ನಡೆಸುತ್ತಿದೆ. ಹಮಾಸ್ ಜೊತೆಗಿನ ಗುಂಡಿನ ಚಕಮಕಿ ಬಳಿಕ ಈ ದಾಳಿಗಳು ನಡೆದಿವೆ ಎಂದು ಇಸ್ರೇಲ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಹಮಾಸ್ ಗಾಝಾದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂಬ ‘ವಿಶ್ವಾಸಾರ್ಹ ವರದಿಗಳು ನಮ್ಮ ಬಳಿ ಇವೆ ಎಂದು ಅಮೆರಿಕ ಶನಿವಾರ ಹೇಳಿಕೊಂಡಿದೆ.
“ಪ್ಯಾಲೆಸ್ತೀನಿಯನ್ ನಾಗರಿಕರ ಮೇಲಿನ ಈ ಯೋಜಿತ ದಾಳಿಯು ಕದನ ವಿರಾಮ ಒಪ್ಪಂದದ ನೇರ ಮತ್ತು ಗಂಭೀರ ಉಲ್ಲಂಘನೆಯಾಗುತ್ತದೆ. ಮಧ್ಯಸ್ಥಿಕೆ ಪ್ರಯತ್ನಗಳ ಮೂಲಕ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಇದು ಹಾಳು ಮಾಡುತ್ತದೆ” ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ ಈ ಹೇಳಿಕೆಗಳನ್ನು ತಿರಸ್ಕರಿಸಿದೆ. ಅಮೆರಿಕ ಇಸ್ರೇಲ್ ಜೊತೆ ಸೇರಿಕೊಂಡು ಸುಳ್ಳು ಹೇಳುತ್ತಿದೆ. ಗಾಝಾದಲ್ಲಿ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣ, ಯುದ್ದಪರಾಧಗಳು ಮತ್ತು ಸಂಘಟಿತ ದಾಳಿ ಮುಂದುವರಿಯಲು ಬೆಂಬಲವಾಗಿ ನಿಂತಿದೆ ಎಂದು ಹಮಾಸ್ ಆರೋಪಿಸಿದೆ.
ಜಗತ್ತಿಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆ ನೀಡುವುದನ್ನು ಅಮೆರಿಕ ಕೊನೆಗೊಳಿಸಬೇಕು. ಇಸ್ರೇಲ್ ಕದನ ವಿರಾಮ ಒಪ್ಪಂದ ಮುರಿಯುತ್ತಿರುವುದನ್ನು ತಡೆಯಬೇಕು ಎಂದು ಹಮಾಸ್ ಅಮೆರಿಕಕ್ಕೆ ಆಗ್ರಹಿಸಿದೆ.
“ಅಮೆರಿಕ ಮತ್ತು ಇಸ್ರೇಲ್ ಹೇಳುತ್ತಿರುವುದೆಲ್ಲ ಸುಳ್ಳು. ಗಾಝಾದಲ್ಲಿ ಗ್ರೌಂಡ್ ರಿಯಾಲಿಟಿ ಬೇರೆಯೇ ಇದೆ. ಇಸ್ರೇಲ್ ಮತ್ತು ಅಮೆರಿಕದವರು ಜಂಟಿಯಾಗಿ ಗಾಝಾದ ಕ್ರಿಮಿನಲ್ ಗ್ಯಾಂಗ್‌ಗಳಿಗೆ ಹಣಕಾಸು ಸೇರಿದಂತೆ ಎಲ್ಲಾ ನೆರವುಗಳನ್ನು ನೀಡುತ್ತಿದ್ದಾರೆ. ಅವರನ್ನು ಶಸ್ತ್ರ ಸಜ್ಜಗೊಳಿಸಿ ಪ್ಯಾಲೆಸ್ತೀನಿಯರ ಮೇಲೆ ದಾಳಿ ನಡೆಸಲು ಪ್ರೇರೇಪಿಸುತ್ತಿದ್ದಾರೆ. ಈ ಗುಂಪುಗಳು ನೆರವು ಟ್ರಕ್‌ಗಳನ್ನು ಲೂಟಿ ಮಾಡುತ್ತಿವೆ. ಅಮಾಯಕರ ಜನರ ಮೇಲೆ ದಾಳಿ ಮಾಡುತ್ತಿವೆ. ಈ ವಿಚಾರವನ್ನು ಆ ಗುಂಪುಗಳು ವಿಡಿಯೋ ಮೂಲಕ ಒಪ್ಪಿಕೊಂಡಿವೆ. ಕೆಲವೆಡೆ ಇಸ್ರೇಲ್ ನೇರವಾಗಿ ನಾಗರಿಕ ಮೇಲೆ ದಾಳಿ ಮಾಡುತ್ತಿವೆ. ಒಟ್ಟಿನಲ್ಲಿ ಪರಿಸ್ಥಿತಿ ಶೋಚಣೀಯವಾಗಿದೆ” ಎಂದು ಹಮಾಸ್ ಹೇಳಿಕೊಂಡಿದೆ.
ಮುಂದುವರಿದ ಇಸ್ರೇಲ್ ಆಕ್ರಮಣ
ದೊಡ್ಡ ಮಟ್ಟದ ಕದನ ವಿರಾಮ ಉಲ್ಲಂಘನೆ ಎಂಬಂತೆ, ಶುಕ್ರವಾರ ಗಾಝಾದಲ್ಲಿ ಭೀಕರ ದಾಳಿ ನಡೆಸಿದ ಇಸ್ರೇಲ್, ಏಳು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಹನ್ನೊಂದು ಜನರನ್ನು ಹತ್ಯೆ ಮಾಡಿದೆ. ಸ್ಥಳಾಂತರಗೊಂಡ ಕುಟುಂಬವು ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಇಸ್ರೇಲಿ ಸೇನೆಯು ಗುರಿಯಾಗಿಸಿಕೊಂಡು ಡಿಕ್ಕಿ ಹೊಡೆದಿದೆ. ಗಾಝಾದ ನಾಗರಿಕ ರಕ್ಷಣಾ ಇಲಾಖೆಯ ಪ್ರಕಾರ, ಗಾಝಾ ನಗರದ ಜೈಟೌನ್ ಸಮೀಪ ಈ ದಾಳಿ ನಡೆದಿದೆ.
ಈ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಇಸ್ರೇಲ್, ಪ್ಯಾಲೆಸ್ತೀನಿಯರ ವಾಹನವು ‘ಹಳದಿ ರೇಖೆ’ಯನ್ನು ದಾಟಿ, ಇಸ್ರೇಲ್ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ಪ್ರವೇಶಿಸಿತ್ತು ಎಂದು ಹೇಳಿಕೊಂಡಿದೆ.
“ನೆಲದ ಮೇಲೆ ನಿಜವಾದ ಭೌತಿಕ ಗುರುತುಗಳು ಇಲ್ಲದ ಕಾರಣ ಮೃತ ಕುಟುಂಬಕ್ಕೆ ಹಳದಿ ಮತ್ತು ಕೆಂಪು ರೇಖೆಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು” ಎಂದು ಗಾಝಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ಹೇಳಿದ್ದಾರೆ.
ಇತ್ತ ಗಾಝಾ ಪಟ್ಟಿಯಲ್ಲಿ ಮಾತ್ರವಲ್ಲದೆ, ಇಸ್ರೇಲಿ ಸೇನೆಯು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಹಿಂಸಾತ್ಮಕ ದಾಳಿಗಳನ್ನು ತೀವ್ರಗೊಳಿಸಿದೆ. ಅನೇಕ ಪ್ಯಾಲೆಸ್ತೀನಿಯರು ಕೊಂದು ಅವರ ಆಸ್ತಿಗಳನ್ನು ಧ್ವಂಸಗೊಳಿಸುತ್ತಿದೆ. ಭಾನುವಾರ ನಬ್ಲಸ್ ಬಳಿಯ ಅಲ್-ಐನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ 42 ವರ್ಷದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಹೆಬ್ರಾನ್‌ನ ದಕ್ಷಿಣದಲ್ಲಿರುವ ಅಲ್-ರಿಹಿಯಾ ಪಟ್ಟಣದಲ್ಲಿ ಇಸ್ರೇಲಿ ಸೇನೆ 11 ವರ್ಷದ ಬಾಲಕ ಮೊಹಮ್ಮದ್ ಹಲ್ಲಾಕ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಕದನ ವಿರಾಮ ಜಾರಿಗೆ ಬಂದ ನಂತರ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ತೀವ್ರ ಆಕ್ರಮಣ ನಡೆಸುತ್ತಿದೆ.
ಈ ನಡುವೆ, ಗಾಝಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿಯನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗುವುದು ಎಂದು ಇಸ್ರೇಲ್ ಶನಿವಾರ ಹೇಳಿದೆ. ಇಸ್ರೇಲ್‌ನ ನಿರಂತರ ದಿಗ್ಬಂಧನದಿಂದ ಸಂಕಷ್ಟ ಎದುರಿಸುತ್ತಿದ್ದ ಪ್ಯಾಲೆಸ್ತೀನಿಯರಿಗೆ ಹೆಚ್ಚು ಅಗತ್ಯವಿರುವ ಮಾನವೀಯ ನೆರವು ತಲುಪಿಸಲು ಉಳಿದಿದ್ದ ಜಾಗ ಇದೊಂದೆ ಆಗಿತ್ತು.
ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಮುಂದಿನ ಸೂಚನೆವರೆಗೆ ರಫಾ ಕ್ರಾಸಿಂಗ್ ಅನ್ನು ಮುಚ್ಚುವಂತೆ ನಿರ್ದೇಶಿಸಿದ್ದಾರೆ. ಒತ್ತೆಯಾಳುಗಳು ಮತ್ತು ಮೃತರ ದೇಹಗಳನ್ನು ಹಿಂದಿರುಗಿಸುವ ಮತ್ತು ಒಪ್ಪಿದ ನಿಯಮಗಳನ್ನು ಜಾರಿಗೆ ತರುವ ತನ್ನ ಜವಾಬ್ದಾರಿಗಳನ್ನು ಹಮಾಸ್ ಹೇಗೆ ಪೂರೈಸುತ್ತದೆ ಎಂಬುದರ ಆಧಾರದ ಮೇಲೆ ಗಡಿ ತೆರೆಯುವಿಕೆ ನಿಂತಿದೆ ಎಂದು ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಒಟ್ಟು 28 ಒತ್ತೆಯಾಳುಗಳ ಮೃತದೇಹಗಳ ಪೈಕಿ 12 ಮೃತದೇಹಗಳನ್ನು ಹಮಾಸ್ ಇಸ್ರೇಲ್‌ಗೆ ಹಸ್ತಾಂತರಿಸಿದೆ. ಇನ್ನುಳಿದವು ಇಸ್ರೇಲ್ ಧ್ವಂಸಗೊಳಿಸಿದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇವೆ. ಅವುಗಳನ್ನು ಮೇಲೆತ್ತಲು ವಿಶೇಷ ಉಪಕರಣಗಳು ಅಥವಾ ಯಂತ್ರಗಳು ಬೇಕು ಎಂದು ಹಮಾಸ್ ಶನಿವಾರ ಹೇಳಿದೆ.
ಇಸ್ರೇಲ್ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ನಿರಂತರ ಆಕ್ರಮಣದಿಂದ ಗಾಝಾದಲ್ಲಿ ಸಾವಿಗೀಡಾದ ಪ್ಯಾಲೆಸ್ತೀನಿಯರ ಸಂಖ್ಯೆ 68 ಸಾವಿರ ದಾಟಿದೆ. ಇನ್ನೂ ಸುಮಾರು 10 ಸಾವಿರ ಜನರ ಮೃತದೇಹಗಳು ಅವಶೇಷಗಳಡಿ ಇರಬಹುದು ಎಂದು ಅಂದಾಜಿಸಲಾಗಿದೆ. ಗಾಯಾಳುಗಳ ಸಂಖ್ಯೆ 1,70,000 ಸಾವಿರ ದಾಟಿದೆ.
ಗಾಝಾ ಕದನ ವಿರಾಮ ಜಾರಿಯಾದರೂ ಆಕ್ರಮಣ ಮುಂದುವರಿಸಿದ ಇಸ್ರೇಲ್ : ಪ್ಯಾಲೆಸ್ತೀನಿಯರ ಹತ್ಯೆ, ಬಂಧನ


