ದಕ್ಷಿಣ ಲೆಬನಾನ್‌ನಲ್ಲಿ ಶನಿವಾರ (ಮಾ.28) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಮೂವರು ಪತ್ರಕರ್ತರು ಮತ್ತು ಒಂಬತ್ತು ಅರೆವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಜೆಝೈನ್ ರಸ್ತೆಯಲ್ಲಿ ಪತ್ರಕರ್ತರ ಸ್ಪಷ್ಟ ಗುರುತುಗಳಿದ್ದ ಮಾಧ್ಯಮ ವಾಹನದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಮಯಾದೀನ್ ವಾಹಿನಿಯ ಫಾತಿಮಾ ಫ್ತೂನಿ, ಆಕೆಯ ಸಹೋದರ ಹಾಗೂ ಸಹೋದ್ಯೋಗಿ ಮೊಹಮ್ಮದ್, ಮತ್ತು ಅಲ್-ಮನಾರ್ ವಾಹಿನಿಯ ಅಲಿ ಶುವೈಬ್ ಅವರು ಸಾವಿಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.
ಪತ್ರಕರ್ತರಿದ್ದ ವಾಹನದ ಮೇಲೆ ನಾಲ್ಕು ನಿಖರ ಕ್ಷಿಪಣಿಗಳು (precision missiles) ಅಪ್ಪಳಿಸಿವೆ ಎಂದು ಅಲ್ ಮಯಾದೀನ್ ಮಾಧ್ಯಮ ಸಂಸ್ಥೆ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಪತ್ರಕರ್ತರ ಮೇಲಿನ ಈ ದಾಳಿಯಲ್ಲಿ ಇತರ ಹಲವಾರು ಪತ್ರಕರ್ತರು ಗಾಯಗೊಂಡಿದ್ದಾರೆ. ಅಲ್ಲದೆ, ಸ್ಥಳಕ್ಕೆ ಧಾವಿಸಿದ ಆಂಬ್ಯುಲೆನ್ಸ್‌ಗಳನ್ನೂ ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಈ ವೇಳೆ ಓರ್ವ ಅರೆ ವೈದ್ಯಕೀಯ ಸಿಬ್ಬಂದಿ (ತುರ್ತು ಚಿಕಿತ್ಸಾ ಸಹಾಯಕ) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಲೆಬನಾನ್‌ನಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ನಡೆದ ಐದು ಪ್ರತ್ಯೇಕ ದಾಳಿಗಳಲ್ಲಿ ಶನಿವಾರ ಇತರ ಎಂಟು ಅರೆ ವೈದ್ಯಕೀಯ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇಸ್ರೇಲ್ ಮಿಲಿಟರಿ ಪತ್ರಕರ್ತರನ್ನು ಕೊಂದ ದಾಳಿಯನ್ನು ಒಪ್ಪಿಕೊಂಡಿದೆ. ಪತ್ರಕರ್ತ ಅಲಿ ಶುವೈಬ್ ಹಿಜ್ಬುಲ್ಲಾ ಗುಪ್ತಚರ ಘಟಕದ ಭಾಗವಾಗಿದ್ದರು ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಸೈನಿಕರ ಚಲನವಲನಗಳನ್ನು ಪತ್ತೆಹಚ್ಚುತ್ತಿದ್ದರು ಎಂದು ಅದು ಪ್ರತಿಪಾದಿಸಿದೆ. ಅಷ್ಟೇ ಅಲ್ಲದೆ, ಅವರು ಹಿಜ್ಬುಲ್ಲಾದ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಎಂದು ಕೂಡ ಆರೋಪಿಸಿದೆ.
ಅಲಿ ಶುವೈಬ್ ಅವರ ಉದ್ಯೋಗದಾತ ಸಂಸ್ಥೆಯಾದ ಅಲ್-ಮನಾರ್, ಶುವೈಬ್ ಅವರನ್ನು ತಮ್ಮ ಅತ್ಯಂತ ಪ್ರಮುಖ ಯುದ್ಧ ವರದಿಗಾರರಲ್ಲಿ ಒಬ್ಬರೆಂದು ಬಣ್ಣಿಸಿದೆ. ಅವರು ದಶಕಗಳಿಂದ ಲೆಬನಾನ್ ಮೇಲೆ ನಡೆದ ಇಸ್ರೇಲಿ ದಾಳಿಗಳ ಬಗ್ಗೆ ವರದಿ ಮಾಡುತ್ತಿದ್ದರು ಎಂದು ಸಂಸ್ಥೆ ತಿಳಿಸಿದೆ.
ಗಾಝಾದಲ್ಲಿ 270ಕ್ಕೂ ಹೆಚ್ಚು ಪತ್ರಕರ್ತರನ್ನು ಕೊಂದಿರುವ ಇಸ್ರೇಲ್, ತಾನು ಗುರಿಯಾಗಿಸುವ ವರದಿಗಾರರು ಸಶಸ್ತ್ರ ಗುಂಪುಗಳ ಸದಸ್ಯರು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಯಾವುದೇ ಸಾರ್ವಜನಿಕ ಸಾಕ್ಷ್ಯವನ್ನು ನೀಡದೆ ಪದೇ ಪದೇ ಆರೋಪಿಸುತ್ತಿದೆ.
ಇಸ್ರೇಲ್‌ನ ಈ ಆರೋಪಗಳನ್ನು ಶನಿವಾರ ತಮ್ಮ ಸಿಬ್ಬಂದಿಯನ್ನು ಕಳೆದುಕೊಂಡ ಎರಡೂ ಮಾಧ್ಯಮ ಸಂಸ್ಥೆಗಳು ಒಪ್ಪಿಲ್ಲ.
ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು, ತಮ್ಮ ವೃತ್ತಿಪರ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ನಾಗರಿಕರನ್ನು ಗುರಿಯಾಗಿಸುವ ಮೂಲಕ ಇಸ್ರೇಲ್ ಮತ್ತೊಮ್ಮೆ “ಅಂತಾರಾಷ್ಟ್ರೀಯ ಕಾನೂನಿನ ಅತ್ಯಂತ ಮೂಲಭೂತ ನಿಯಮಗಳನ್ನು” ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಪತ್ರಕರ್ತರಿಗೆ ಸಶಸ್ತ್ರ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ರಕ್ಷಣೆ ನೀಡುವ ಎಲ್ಲಾ ನಿಯಮಗಳು ಮತ್ತು ಒಪ್ಪಂದಗಳನ್ನು ಉಲ್ಲಂಘಿಸುವ ಇಸ್ರೇಲ್‌ನ ಈ ಕೃತ್ಯ ಒಂದು ಬಹಿರಂಗ ಅಪರಾಧ ಎಂದಿದ್ದಾರೆ.
ಪ್ರಧಾನ ಮಂತ್ರಿ ನವಾಫ್ ಸಲಾಮ್ ಅವರು ಈ ದಾಳಿಯನ್ನು “ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಘೋರ ಉಲ್ಲಂಘನೆ” ಎಂದು ಖಂಡಿಸಿದ್ದಾರೆ.


