ಹಮಾಸ್ ಜೊತೆಗಿನ ಕದನ ವಿರಾಮ ಒಪ್ಪಂದಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಇಸ್ರೇಲಿ ಪಡೆಗಳು 46,788ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಂದು 110,453 ಜನರನ್ನು ಗಾಯಗೊಳಿಸಿದ 460 ದಿನಗಳಿಗೂ ಹೆಚ್ಚು ಕಾಲದ ಆಕ್ರಮಣದ ನಂತರ ಕದನ ವಿರಾಮಕ್ಕೆ ನೆತನ್ಯಾಹು ಸರ್ಕಾರ ಮುಂದಾಗಿದೆ.
ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಂಪುಟ ಸಭೆಯ ನಂತರ ಇಸ್ರೇಲ್ ಸರ್ಕಾರ ಶನಿವಾರ (ಜ.17) ಬೆಳಗಿನ ಜಾವ ಕದನ ವಿರಾಮ ಒಪ್ಪಂದವನ್ನು ಅಂಗೀಕರಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
“ಒತ್ತೆಯಾಳುನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಸರ್ಕಾರ ಅನುಮೋದಿಸಿದೆ. ಒತ್ತೆಯಾಳುಗಳ ಬಿಡುಗಡೆ ಕಾರ್ಯ ಭಾನುವಾರದಿಂದ (ಜ.19) ಜಾರಿಗೆ ಬರಲಿದೆ ಎಂದು” ನೆತನ್ಯಾಹು ಕಚೇರಿ ಹೇಳಿದೆ.
ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಸಂಪುಟದ ಕೆಲವರು ತೀವ್ರವಾಗಿ ವಿರೋಧಿಸಿದರು. ಆದರೂ, ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರ್ಕಾರದ 24 ಮಂದಿ ಸಚಿವರು ಒಪ್ಪಂದದ ಪರ ಮತ ಚಲಾಯಿಸಿದ್ದಾರೆ. ಎಂಟು ಮಂದಿ ವಿರುದ್ದ ಮತ ಹಾಕಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇಸ್ರೇಲಿ ಭದ್ರತಾ ಸಂಪುಟವು ಶುಕ್ರವಾರ (ಜ.16) ಕದನ ವಿರಾಮ ಒಪ್ಪಂದದ ಪರವಾಗಿ ಮತ ಚಲಾಯಿಸಿದೆ.
ಕದನ ವಿರಾಮ ಒಪ್ಪಂದದ ಮೊದಲ ಹಂತವಾಗಿ ಗಾಝಾದಲ್ಲಿ ಒತ್ತೆಯಾಳುಗಳಾಗಿರುವ ಕೆಲವು ಇಸ್ರೇಲ್ ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಲಿದೆ. ಇಸ್ರೇಲ್ ಕೂಡ ಗಾಝಾದಿಂದ ಬಂಧಿಸಿ ಕರೆದೊಯ್ದಿರುವ ಕೆಲ ಪ್ಯಾಲೆಸ್ತೀನ್ ನಾಗರಿಕರನ್ನು ಬಿಡುಗಡೆ ಮಾಡಲಿದೆ.
ಮೊದಲ ಹಂತ ಯಶಸ್ವಿಯಾದರೆ, ಹಮಾಸ್ ಇನ್ನಷ್ಟು ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಬಂಧಿತ ಪ್ಯಾಲೆಸ್ತೀನಿಯರನ್ನು ಬಿಡುಗಡೆ ಮಾಡಲಿದೆ.
ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ಹಂತವಾಗಿ ಇಸ್ರೇಲ್ ಸೇನೆಯು ಸಂಪೂರ್ಣವಾಗಿ ಯುದ್ಧ ನಿಲ್ಲಿಸಿ ಗಾಝಾ ಪ್ರದೇಶದಿಂದ ಹಿಂದಿರುಗಲಿದೆ. ಉತ್ತರ ಗಾಝಾದ ನಾಗರಿಕರು ನಿರಾಶ್ರಿತರ ಶಿಬಿರಗಳಿಂದ ತಮ್ಮ ಮೂಲ ಸ್ಥಳಗಳಿಗೆ ವಾಪಾಸಾಗಲಿದ್ದಾರೆ. ಮಾನವೀಯ ನೆರವು ಹೆಚ್ಚಾಗಲಿದೆ ಮತ್ತು ಗಾಝಾದ ಮರು ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ.
ವರದಿಗಳ ಪ್ರಕಾರ, ಇಸ್ರೇಲ್ ಸಚಿವ ಸಂಪುಟ ಕದನ ವಿರಾಮ ಒಪ್ಪಂದಕ್ಕೆ ಅನುಮೋದನೆ ನೀಡಿದ ಬಳಿಕ, ಒಪ್ಪಂದದ ಮೊದಲ ಹಂತವಾಗಿ ಬಿಡುಗಡೆ ಮಾಡಲಿರುವ 737 ಪ್ಯಾಲೆಸ್ತೀನಿಯರ ಪಟ್ಟಿ ಪ್ರಕಟಿಸಿದೆ. ಆ ಪಟ್ಟಿಯಂತೆ ಭಾರತೀಯ ಕಾಲಮಾನ ಭಾನುವಾರ ಸಂಜೆ 4 ಗಂಟೆಗೆ (14:00 GMT)ಬಂಧಿತರು ಬಿಡುಗಡೆಯಾಗಲಿದ್ದಾರೆ.
ರಷ್ಯಾ ಸೇನೆಯಲ್ಲಿ ದುಡಿಯುತ್ತಿದ್ದ 12 ಭಾರತೀಯರು ಸಾವು, 16 ಮಂದಿ ನಾಪತ್ತೆ : ವಿದೇಶಾಂಗ ಸಚಿವಾಲಯ


