ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಬಲಪಂಥೀಯ ಸರ್ಕಾರದ ನ್ಯಾಯಾಂಗ ಸುಧಾರಣಾ ಕಾನೂನನ್ನುಅಲ್ಲಿನ ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ವಿವಾದಾತ್ಮಕ ಕಾನೂನು ನ್ಯಾಯಾಲಯದ ಕೆಲವೊಂದು ಅಧಿಕಾರಗಳನ್ನು ಮೊಟಕೊಗೊಳಿಸುವ ಆತಂಕ ಇತ್ತು. ಇದರ ವಿರುದ್ಧ ದೇಶದಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು.
ಒಟ್ಟು 15 ನ್ಯಾಯಮೂರ್ತಿಗಳ ಪೈಕಿ 8 ಮಂದಿ ಜುಲೈನಲ್ಲಿ ಸಂಸತ್ತು ಅಂಗೀಕರಿಸಿದ ತಿದ್ದುಪಡಿ ಕಾನೂನಿನ ವಿರುದ್ಧ ತೀರ್ಪು ನೀಡಿದ್ದಾರೆ. ವಿವಾದಾತ್ಮಕ ಕಾನೂನು ಸಂವಿಧಾನ ಬಾಹಿರ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ಪ್ರಜಾಪ್ರಭುತ್ವ ರಾಷ್ಟ್ರ ವ್ಯವಸ್ಥೆಯ ಮೂಲ ತತ್ವಕ್ಕೆ ನೆತನ್ಯಾಹು ಸರ್ಕಾರದ ಕಾನೂನಿಂದ ತೀವ್ರ ಹಾನಿಯಾಗಲಿದೆ ಎಂದು ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
ಸರ್ಕಾರ ಮತ್ತು ಅದರ ಸಚಿವರ ನಿರ್ಧಾರಗಳನ್ನು ರದ್ದುಗೊಳಿಸುವ ಸುಪ್ರೀಂ ಕೋರ್ಟ್‌ನ ಕೆಲವೊಂದು ಅಧಿಕಾರಗಳನ್ನು ಮೊಟಕುಗೊಳಿಸುವ ಅಧಿಕಾರವನ್ನು ಹೊಸ ಕಾನೂನು ಹೊಂದಿತ್ತು. ಸೂಕ್ತವಲ್ಲ ಎಂದು ಕೋರ್ಟ್ ಕಂಡುಕೊಂಡ ನಿರ್ಧಾರಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಸರ್ಕಾರಕ್ಕೆ ಈ ಕಾನೂನು ನೀಡಿತ್ತು.
ಕಾನೂನು ಸುಧಾರಣಾ ತಿದ್ದುಪಡಿ ಪ್ರಧಾನಿ ನೆತನ್ಯಾಹು ಮತ್ತು ಅವರ ಧಾರ್ಮಿಕ, ಬಲಪಂಥೀಯ ರಾಷ್ಟ್ರೀಯವಾದಿ ಮೈತ್ರಿಕೂಟದ ಪ್ರಸ್ತಾವಿತ ವಿಸ್ತಾರವಾದ ನ್ಯಾಯಾಂಗ ಬದಲಾವಣೆಗಳ ಭಾಗವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿಗೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ವಿಪಕ್ಷಗಳು ಸಂತಸ ವ್ಯಕ್ತಪಡಿಸಿವೆ.
ವಿವಾದಿತ ಕಾನೂನು ಜುಲೈ ತಿಂಗಳಲ್ಲಿ ಸಂಸತ್‌ನಲ್ಲಿ ಅಂಗೀಕಾರಗೊಂಡ ಬಳಿಕ ಇಸ್ರೇಲ್‌ನಾದ್ಯಂತ ಹಲವು ಪ್ರತಿಭಟನೆಗಳು ನಡೆದಿತ್ತು. ಕಾನೂನು ವಿರೋಧಿಸಿ ವಾರಕ್ಕೊಂದು ಜಾತಾ ಆಯೋಜಿಸಲಾಗುತ್ತಿತ್ತು. ಕೊನೆಗೂ ಹೋರಾಟಗಾರಿಗೆ ನ್ಯಾಯಾಲಯದಲ್ಲಿ ಗೆಲುವು ದೊರೆತಿದೆ.
ಇದನ್ನೂ ಓದಿ: ಜಪಾನ್‌ನಲ್ಲಿ ಸರಣಿ ಭೂಕಂಪ: 10ಕ್ಕೂ ಅಧಿಕ ಮಂದಿ ಸಾವು


