ಹಮಾಸ್ ಬಂಡುಕೋರರ ವಿರುದ್ದ ನಡೆಸಿದ್ದೇವೆ ಎಂದು ಹೇಳಿ, ಇಸ್ರೇಲ್ ಸೇನೆ ಮೇ ತಿಂಗಳಲ್ಲಿ ಗಾಝಾ ಮೇಲೆ ನಡೆಸಿದ 11 ದಿನಗಳ ದಾಳಿಯು ಸ್ಪಷ್ಟವಾಗಿ ಯುದ್ದಾಪರಾಧ ಕೃತ್ಯಗಳಿಗೆ ಹೋಲುತ್ತದೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’(ಎಚ್‌ಆರ್‌ಡಬ್ಲ್ಯೂ) ಮಂಗಳವಾರ ಆರೋಪಿಸಿದೆ.
ಮೂರು ಇಸ್ರೇಲಿ ವೈಮಾನಿಕ ದಾಳಿಯ ತನಿಖೆ ನಡೆಸಿದ ಎಚ್‌ಆರ್‌ಡಬ್ಲ್ಯೂ ತನ್ನ ತೀರ್ಮಾನಗಳನ್ನು ಹೊರಡಿಸಿದ್ದು, ಈ ದಾಳಿಯಿಂದಾಗಿ 62 ಪ್ಯಾಲೆಸ್ತೀನಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅದು ಹೇಳಿದೆ. ಈ ದಾಳಿಯು ಯಾವುದೇ ಸ್ಪಷ್ಟ ಮಿಲಿಟರಿ ಗುರಿಗಳಿಲ್ಲದೆ ನಡೆಸಲಾಗಿದೆ ಎಂದು ಅದು ಹೇಳಿದೆ.
ಇಸ್ರೇಲಿ ಜನ ವಸತಿ ಕೇಂದ್ರಗಳ ಮೇಲೆ 4,000 ಕ್ಕೂ ಹೆಚ್ಚು ಗೊತ್ತುಗುರಿಯಿಲ್ಲದ ರಾಕೆಟ್‌ಗಳು ಮತ್ತು ಮೋರ್ಟರ್‌ಗಳನ್ನು ಉಡಾಯಿಸುವ ಮೂಲಕ ಪ್ಯಾಲೆಸ್ತೀನಿ ಬಂಡುಕೋರರು ಕೂಡಾ ಯುದ್ಧಾಪರಾಧಗಳನ್ನು ಮಾಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಈ ದಾಳಿಗಳು ನಾಗರಿಕರ ವಿರುದ್ಧ ಉದ್ದೇಶಪೂರ್ವಕ ಅಥವಾ ವಿವೇಚನೆಯಿಲ್ಲದ ದಾಳಿಯ ನಿಷೇಧವನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಪ್ಯಾಲೆಸ್ತೀನಿಗಳನ್ನು ಅಕ್ರಮ ಸ್ಥಳಾಂತರ ಮಾಡುವ ಇಸ್ರೇಲ್‌ನ ನಡೆ ಹಿಂಸಾಚಾರ ಹೆಚ್ಚಿಸುತ್ತದೆ: ಯುರೋಪಿಯನ್ ಯುನಿಯನ್
ಅದಾಗ್ಯೂ ಈ ವರದಿಯು ಇಸ್ರೇಲ್ ಮಾಡಿದ ಕ್ರಮಗಳನ್ನು ಕೇಂದ್ರವಾಗಿಟ್ಟು ಮಾಡಲಾಗಿದ್ದು, ಆಗಸ್ಟ್‌ನಲ್ಲಿ ಹಮಾಸ್ ಮತ್ತು ಇತರ ಪ್ಯಾಲೆಸ್ತೀನಿಯನ್ ಬಂಡುಕೋರರ ಗುಂಪುಗಳ ಕ್ರಮಗಳ ಬಗ್ಗೆ ಪ್ರತ್ಯೇಕ ವರದಿಯನ್ನು ನೀಡುವುದಾಗಿ ಎಚ್ಆರ್‌ಡಬ್ಲ್ಯೂ ಹೇಳಿದೆ.
“ಇಸ್ರೇಲಿ ಪಡೆಗಳು ಮೇ ತಿಂಗಳಲ್ಲಿ ಗಾಝಾದಲ್ಲಿ ದಾಳಿ ನಡೆಸಿದವು, ಅದು ಯಾವುದೇ ಮಿಲಿಟರಿ ಗುರಿಯಿಲ್ಲದೆ ಇಡೀ ಕುಟುಂಬಗಳನ್ನು ಧ್ವಂಸಮಾಡಿತು” ಎಂದು ಎಚ್‌ಆರ್‌ಡಬ್ಲ್ಯೂನ ನಿರ್ದೇಶಕ ಗೆರ್‍ರಿ ಸಿಂಪ್ಸನ್ ಹೇಳಿದ್ದಾರೆ. ಇಸ್ರೇಲ್‌ಗೆ ಆಪಾದಿತ ಯುದ್ಧಾಪರಾಧಗಳನ್ನು ಗಂಭೀರವಾಗಿ ತನಿಖೆ ಮಾಡಲು ಮನಸ್ಸಿಲ್ಲ ಎಂದು ಅವರು ಹೇಳಿದ್ದಾರೆ.
ದಾಳಿಯು ಮಿಲಿಟರಿ ಗುರಿಗಳನ್ನು ಗುರಿಯಾಗಿರಿಸಿಕೊಂಡು ಮಾಡಿದ್ದು, ನಾಗರಿಕರಿಗೆ ಹಾನಿಯಾಗದಂತೆ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದು ಇಸ್ರೇಲಿ ಸೈನ್ಯವು ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ನಾಗರಿಕರ ಸಾವುನೋವುಗಳಿಗೆ ಹಮಾಸ್ ಕಾರಣ ಎಂದು ಅದು ಆರೋಪಿಸಿದೆ.
ಮೇ 10 ರಂದು ಇಸ್ರೇಲ್ ತನ್ನ ಸೈನ್ಯವನ್ನು ಅಲ್-ಅಕ್ಸಾ ಮಸೀದಿ ಕಾಂಪೌಂಡ್ ಒಳಗೆ ಜಮಾಯಿಸಿದ ನಂತರ ಸಂಘರ್ಷವು ಭುಗಿಲೆದ್ದಿತ್ತು. ಜೊತೆಗೆ ಹತ್ತಾರು ಪ್ಯಾಲೆಸ್ತೀನ್ ಕುಟುಂಬಗಳನ್ನು ಅಕ್ರಮವಾಗಿ ಅವರ ಮನೆಯಿಂದ ಹೊರಹಾಕುವ ಬೆದರಿಕೆ ಹಾಕಲಾಯಿತು. ಇಸ್ರೇಲ್‌ನ ಹೊರಹಾಕುವಿಕೆಯ ವಿರುದ್ಧ ಪ್ಯಾಲೆಸ್ತೀನಿಯನ್ ಪ್ರತಿಭಟನೆಗಳ ಬೆಂಬಲವಾಗಿ ಹಮಾಸ್ ಜೆರುಸಲೆಮ್ ಕಡೆಗೆ ರಾಕೆಟ್ ಹಾರಿಸಿತ್ತು.
ಇದನ್ನೂ ಓದಿ: ಇಸ್ರೇಲ್ ಪರವಾದ ಭಾರತದ ನಿಲುವು; ಪ್ಯಾಲಿಸ್ತೇನ್ ವಿಷಾದದ ಪತ್ರ


