ಗಾಝಾ, ಲೆಬನಾನ್ ಬಳಿಕ ಇಸ್ರೇಲ್ ಆಕ್ರಮಣ ಯೆಮನ್‌ಗೆ ವಿಸ್ತರಣೆಗೊಂಡಿದೆ. ಲೆಬನಾನ್‌ನಲ್ಲಿ ನೆಲ ಕಾರ್ಯಾಚರಣೆ (Ground Operation)ಗೆ ಸಜ್ಜಾಗಿರುವ ಇಸ್ರೇಲ್ ಸೇನೆ, ಯೆಮನ್‌ನ ವಿದ್ಯುತ್ ಸ್ಥಾವರ ಮತ್ತು ಬಂದರನ್ನು ಗುರಿಯಾಗಿಸಿ ದಾಳಿ ನಡೆಸಿದೆ.
ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್ ಸೇನೆ ಲೆಬನಾನ್‌ನ ರಾಜಧಾನಿ ಬೈರುತ್‌ನ ಕೋಲಾ ಪ್ರದೇಶದ ಮೇಲೆ ಬಾಂಬ್ ದಾಳಿ ಮಾಡಿದೆ. ಇದು ಲೆಬನಾನ್‌ನ ರಾಜಧಾನಿ ಮೇಲಿನ ಮೊದಲ ದಾಳಿಯಾಗಿದೆ. ಇದಕ್ಕೂ ಮುನ್ನ ಬೈರುತ್‌ನ ಹೊರವಲಯದ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಿತ್ತು.
ಕಳೆದ 24 ಗಂಟೆಯಲ್ಲಿ ಇಸ್ರೇಲ್ ದಾಳಿಗಳಿಂದ 105 ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ. ವರದಿಗಳ ಪ್ರಕಾರ, ಇಸ್ರೇಲ್ ಸೇನೆಯ ಜೆಟ್ ವಿಮಾನಗಳು ದೇಶದಾದ್ಯಂತ ವಿವಿದೆಡೆ ತಡೆರಹಿತ ಬಾಂಬ್ ದಾಳಿಯನ್ನು ಮುಂದುವರೆಸಿವೆ.
ಕಳೆದ ಎರಡು ದಿನಗಳಲ್ಲಿ ಹೆಜ್ಬುಲ್ಲಾದ ಪರಮೋನ್ನತ ನಾಯಕ ಹಸ್ಸನ್ ನಸ್ರಲ್ಲಾ, ಹೆಜ್ಬುಲ್ಲಾದ ಸೌತ್ ಫ್ರಂಟ್‌ನ ಕಮಾಂಡರ್ ಅಲಿ ಕರ್ಕಿ, ನಸ್ರಲ್ಲಾ ಅವರ ಭದ್ರತಾ ಘಟಕದ ಮುಖ್ಯಸ್ಥ ಇಬ್ರಾಹಿಂ ಹುಸೇನ್ ಜಾಜಿನಿ, ನಸ್ರಲ್ಲಾ ಅವರ ದೀರ್ಘಾವಧಿಯ ವಿಶ್ವಾಸಾರ್ಹ ಜೊತೆಗಾರ ಮತ್ತು ಹೆಜ್ಬುಲ್ಲಾ ಚಟುವಟಿಕೆಗಳ ಸಲಹೆಗಾರ ಸಮೀರ್ ತೌಫಿಕ್ ದಿಬ್, ಹೆಜ್ಬುಲ್ಲಾದ ಫೋರ್ಸ್-ಬಿಲ್ಡ್ ಅಪ್ ಮುಖ್ಯಸ್ಥ ಅಬೇದ್ ಅಲ್-ಅಮೀರ್ ಮುಹಮ್ಮದ್ ಸಬ್ಲಿನಿ, ಹೆಜ್ಬುಲ್ಲಾದ ಫೈರ್‌ಪವರ್ ಅನ್ನು ಸಂಘಟಿಸುವ ಜವಾಬ್ದಾರಿ ಹೊತ್ತಿದ್ದ ಅಲಿ ನಾಫ್ ಅಯೌಬ್ ಅವರನ್ನು ಇಸ್ರೇಲ್ ಹತ್ಯೆ ಮಾಡಿದೆ.
ಇಸ್ರೇಲಿ ಪಡೆಗಳು ಮಿಲಿಟರಿ ಉಪಕರಣಗಳು ಮತ್ತು ವಾಹನಗಳೊಂದಿಗೆ ಲೆಬನಾನ್‌ನ ಗಡಿಯ ಸಮೀಪದಲ್ಲಿ ಜಮಾಯಿಸಿದೆ. ಇದರಿಂದ ಸಂಭಾವ್ಯ ನೆಲ ಆಕ್ರಮಣದ ಆತಂಕ ಹೆಚ್ಚಾಗಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದಂತೆ ಸುಮಾರು 30 ಸಾವಿರ ಜನರು ಸಿರಿಯಾದತ್ತ ಪಲಾಯನ ಮಾಡಿದ್ದಾರೆ ಎಂದು ಸೆಪ್ಟೆಂಬರ್ 27ರಂದು ಅಲ್-ಜಝೀರಾ ವರದಿ ಮಾಡಿತ್ತು. ಆ ಸಂಖ್ಯೆ ಈಗ ಹೆಚ್ಚಾಗಿರಬಹುದು.
ಈ ನಡುವೆ ಇಸ್ರೇಲ್ ಗಾಝಾ ಪಟ್ಟಿಯಾದ್ಯಂತ ತನ್ನ ದಾಳಿಯನ್ನು ಮುಂದುವರೆಸಿದೆ, ಇತ್ತೀಚಿನ ಕೊನೆಯ ದಾಳಿಯಲ್ಲಿ ಕನಿಷ್ಠ 28 ಜನರನ್ನು ಹತ್ಯೆ ಮಾಡಿದೆ.
ಇಸ್ರೇಲಿ ವಾಯುಪಡೆಯು ಯೆಮೆನ್‌ನ ಬಂದರು ನಗರಗಳಾದ ಹುದೈದ ಮತ್ತು ರಾಸ್ ಇಸಾದಲ್ಲಿನ ವಿದ್ಯುತ್ ಸ್ಥಾವರ ಮತ್ತು ಬಂದರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 7ರಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಿಂದ ಇದುವರೆಗೆ 41,595 ಜನರು ಸಾವನ್ನಪ್ಪಿದ್ದಾರೆ ಮತ್ತು 96,251 ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಗರದ ಮೇಲೆ ಅಕ್ಟೋಬರ್ 7,2023ರಂದು ಹಮಾಸ್ ನಡೆಸಿದ ದಾಳಿಯಲ್ಲಿ 1,139 ಜನರು ಬಲಿಯಾಗಿದ್ದರು. 200ಕ್ಕೂ ಅಧಿಕ ಜನರನ್ನು ಹಮಾಸ್ ಒತ್ತೆಯಾಳಗಿಟ್ಟುಕೊಂಡಿತ್ತು.
ಇದನ್ನೂ ಓದಿ : ಓಶೋ ರಜನೀಶ್ ಆರಾಧನೆಯಲ್ಲಿ ಅನುಭವಿಸಿದ ಲೈಂಗಿಕ ಆಘಾತವನ್ನು ವಿವರಿಸಿದ ಯುಕೆ ಮಹಿಳೆ


