ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ‘ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ’ United Nations Relief and Works Agency for Palestine Refugees (UNRWA)ಯನ್ನು ಇಸ್ರೇಲ್ ಭೂಪ್ರದೇಶ ಮತ್ತು ಇಸ್ರೇಲ್ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನಿಷೇಧಿಸುವ ಎರಡು ವಿವಾದಾತ್ಮಕ ಮಸೂದೆಗಳನ್ನು ಇಸ್ರೇಲ್ ಸಂಸತ್ತು ಸೋಮವಾರ (ಅ.28) ಅಂಗೀಕರಿಸಿದೆ.
ಇದರಿಂದ ಗಾಝಾದಲ್ಲಿ ನಿರಾಶ್ರಿತರಿಗೆ ನೀಡಲಾಗುತ್ತಿರುವ ನೆರವಿನ ಮೇಲೆ ಪರಿಣಾಮ ಬೀರಲಿದೆ. ಗಾಝಾದ ಜನತೆ ಈಗಾಗಲೇ ನರಕ ಅನುಭವಿಸುತ್ತಿದ್ದು, ಮಾನವೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳಬಹುದು ಎಂದು ಮಾಧ್ಯಮ ವರದಿಗಳು ಅಭಿಪ್ರಾಯಪಟ್ಟಿವೆ.
ನಿಷೇಧವು ಮುಂದಿನ 90 ದಿನಗಳಲ್ಲಿ ಜಾರಿಗೆ ಬರಲಿದೆ. ಇದು ಆಕ್ರಮಿತ ಪೂರ್ವ ಜೆರುಸಲೆಮ್ ಸೇರಿದಂತೆ ವೆಸ್ಟ್ ಬ್ಯಾಂಕ್‌ನ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ UNRWA ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ. ಈ ಮೂಲಕ 1949ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿಗದಿಪಡಿಸಿದ ಗುರಿ ತಲುಪಲು ಅಡಚಣೆಯಾಗಲಿದೆ.
UNRWA ಗಾಝಾದಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡು ಕೈಚೆಲ್ಲಿ ಕುಳಿತಿರುವ ಜನರಿಗೆ ಮಾನವೀಯ ಸಹಾಯವನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿದೆ. ಕಳೆದು ಒಂದು ವರ್ಷದಿಂದ ಗಾಝಾದಲ್ಲಿ ನಿರಂತರವಾಗಿ ಮಾರಣಹೋಮ ನಡೆಸುತ್ತಿರುವ ಇಸ್ರೇಲ್, ಆರಂಭದಿಂದಲೂ UNRWA ಮೇಲೆ ಕಣ್ಣಿಟ್ಟಿದೆ. ಅದರ ನೂರಾರು ಸ್ವಯಂ ಸೇವಕರನ್ನು ಇದುವರೆಗೆ ಕೊಂದು ಹಾಕಿದೆ.
UNRWAಗೆ ಸಂಬಂಧಿಸಿದಂತೆ ಒಟ್ಟು ಎರಡು ಮಸೂದೆಗಳನ್ನು ಇಸ್ರೇಲ್ ಸಂಸತ್ ಅಂಗೀಕರಿಸಿದೆ. ಈ ಪೈಕಿ ಮೊದಲನೆಯದ್ದು ಇಸ್ರೇಲ್ ಭೂ ಪ್ರದೇಶ ಮತ್ತು ಅದರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ
UNRWA ಚಟುವಟಿಕೆಗಳನ್ನು ನಿಷೇಧಿಸುವುದು. ಮತ್ತೊಂದು UNRWA ಅನ್ನು ‘ಭಯೋತ್ಪಾದಕ ಗುಂಪು’ ಎಂದು ಘೋಷಿಸಿ, ಅದರೊಂದಿಗೆ ಇಸ್ರೇಲ್ ಏಜೆನ್ಸಿಗಳು ಯಾವುದೇ ಸಂಪರ್ಕ ಇಟ್ಟುಕೊಳ್ಳುವುದನ್ನು ನಿಷೇಧಿಸುವುದು.
ಇದನ್ನೂ ಓದಿ : ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಎಕ್ಸ್ ಖಾತೆ ಅಮಾನತು


