Homeಮುಖಪುಟಬೆಲೆ ಕಟ್ಟಲಾಗದ ಗೃಹಿಣಿಯರ ಮನೆ ಕೆಲಸಕ್ಕೆ ಇನ್ನಾದರೂ ಸಿಗಬಹುದೇ ಮನ್ನಣೆ?

ಬೆಲೆ ಕಟ್ಟಲಾಗದ ಗೃಹಿಣಿಯರ ಮನೆ ಕೆಲಸಕ್ಕೆ ಇನ್ನಾದರೂ ಸಿಗಬಹುದೇ ಮನ್ನಣೆ?

- Advertisement -
- Advertisement -

ಸಂದರ್ಭ-1: “ನನ್ನ ಹೆಸರಿನಲ್ಲೇ ಒಂದು ಬ್ಯಾಂಕ್ ಅಕೌಂಟ್ ಇರುವಾಗ ಮತ್ತೆ ನಿನ್ನ ಹೆಸರಿನಲ್ಲೂ ಇನ್ನೊಂದು ಅಕೌಂಟ್ ಏಕೆ ಬೇಕು?”

ಸಂದರ್ಭ-2: “ನಿನ್ನ ದುಡ್ಡು ಅಂದರೆ ಅದ್ಯಾವುದು, ಹೇಗೆ ಬಂತು ನಿನ್ನ ಹತ್ತಿರ. ನಾನು ನಿನಗೆ ಕೊಟ್ಟಿದ್ದೇ ತಾನೇ ಮತ್ತೆ ಅದ್ಹೇಗೆ ನಿನ್ನ ದುಡ್ಡು ಆಗುವುದಕ್ಕೆ ಸಾಧ್ಯ?”

ಬಹುಶಃ ಭಾರತದ ಲಕ್ಷಾಂತರ ಮನೆಗಳಲ್ಲಿ ಗೃಹಿಣಿಯರು ತಮ್ಮ ಗಂಡಂದಿರಿಂದ ಕೇಳುತ್ತಲೇ ಬಂದಿರುವ ಮಾತುಗಳು ಇವು. ಹೌಸ್ ವೈಫ್, ಹೋಮ್‌ಮೇಕರ್, ಬ್ರೆಡ್‌ಮೇಕರ್ ಈ ಪದಗಳು ಕೇಳಲು ಅಥವಾ ಹೇಳಲು ಸ್ವಲ್ಪ ಆಕರ್ಷಕ ಎನಿಸಿದರೂ ಗೃಹಿಣಿಯಾದವಳು ಮಾಡುವ ಮನೆಕೆಲಸ ಮಾತ್ರ ಇತರರಿಗೆ ಅನಾಕರ್ಷಕ. ಅವಳ ಮನೆಕೆಲಸಕ್ಕೆ ಸೇವೆ ಎನ್ನುವುದರ ಹೊರತಾಗಿ ಬೇರೆ ಹೆಸರು ಇಲ್ಲ, ಹುದ್ದೆಯೂ ಇಲ್ಲ, ಪದನಾಮವೂ ಇಲ್ಲ. ಯಾವುದೇ ಸಂಬಳ ತೆಗೆದುಕೊಳ್ಳದೇ ನೀವು ಎಷ್ಟು ಕಾಲ ಕೆಲಸ ಮಾಡಬಲ್ಲಿರಿ ಎಂದು ಯಾರನ್ನಾದರೂ ಕೇಳಿದರೆ ಅವರ ಉತ್ತರ ಏನಿರಬಹುದು? ಊಹಿಸುವುದು ಅಸಾಧ್ಯವೇನಲ್ಲ, ಒಂದು ವಾರ ಮಾಡಿದರೆ ಹೆಚ್ಚು. ಈಗ ಗೃಹಿಣಿಯರು ಜೀವನಪರ್ಯಂತ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಮನೆಗೆಲಸವನ್ನು ಏನೆಂದು ಕರೆಯಬೇಕು? ಉಚಿತವಾಗಿ ದೊರೆಯುವುದಕ್ಕೆ ಬೆಲೆ ಇರುವುದಿಲ್ಲ ಎಂಬ ಮಾತಿನ ಅರ್ಥ ಇದೇ ಇರಬೇಕು!

ಯಾವುದೇ ಒಬ್ಬ ಗೃಹಿಣಿಯ ಕೆಲಸ, ಮನೆಗೆಲಸ ಎಷ್ಟೇ ಸಾರ್ಥಕತೆ ಪಡೆದಿದ್ದರೂ ಅರ್ಥಪೂರ್ಣ ಕೊಡುಗೆಯನ್ನು ಕುಟುಂಬಕ್ಕೆ ನೀಡುತ್ತಿದ್ದರೂ ಅದರಲ್ಲಿ ಏನೋ ಕೀಳರಿಮೆ ಅಥವಾ ಕೊರತೆ ಕಂಡುಬರುವ ಹಾಗೆ ನಮ್ಮ ಸಮಾಜ ಗೃಹಿಣಿಯರನ್ನು ನಡೆಸಿಕೊಳ್ಳುತ್ತದೆ. ನಿವೃತ್ತರಿಗೆ, ವೃದ್ಧರಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅಂಗವಿಕಲರಿಗೆ ಪಿಂಚಣಿ ಅಥವಾ ಮಾಸಿಕ ಭತ್ಯೆ ಇರುವಂತೆ ಮನೆಕೆಲಸ ಮಾಡುವ ಗೃಹಿಣಿಯರಿಗೂ ಮಾಸಿಕ ಭತ್ಯೆ ಬರುವುದು ಬೇಡವೇ, ವೇತನ ಬೇಡವೇ!

ಹೀಗೊಂದು ಚರ್ಚೆಯನ್ನು ಈಗ ಹುಟ್ಟುಹಾಕಿದ್ದು ಕಮಲಹಾಸನ್ ಅವರ ’ಮಕ್ಕಳ ನೀಧಿ ಮಯಮ್ ಎಂಬ ಪಕ್ಷದ ಚುನಾವಣಾ ಪ್ರಣಾಳಿಕೆ. ಮಕ್ಕಳಿಗೂ ಪಾಕೆಟ್ ಮನಿ ಕೊಡಲಾಗುತ್ತದೆ. ಆದರೆ ಗೃಹಿಣಿಗೆ? ಅಕ್ಕಿ ಬೇಳೆ ಡಬ್ಬದಲ್ಲಿ ಮುಚ್ಚಿಟ್ಟಿದ್ದು, ಗಂಡನ ಜೇಬಿನಿಂದ ತೆಗೆದುಕೊಂಡಿದ್ದು ಅಥವಾ ಖರ್ಚೆಲ್ಲಾ ಕಳೆದು ಉಳಿಸಿದ್ದು. ಇದನ್ನೂ ತನ್ನ ಅಗತ್ಯ, ಇಚ್ಛೆಗೆ ತಕ್ಕಂತೆ ಬಳಸುವ ಅವಕಾಶ ಆಕೆಗೆ ಇರುತ್ತದೆಯೇ?

ಒಬ್ಬ ಗೃಹಿಣಿಯ ಶ್ರಮ ಸೇವೆ ತ್ಯಾಗಗಳಿಗೆ ಬೆಲೆ ಕಟ್ಟಲಾಗದು, ಕಟ್ಟಬಾರದು ಎಂಬುದು ಒಂದು ವಾದವಾದರೆ ಆರ್ಥಿಕ ಸ್ವಾವಲಂಬನೆಗೆ ನಾಂದಿ ಹಾಡುವಲ್ಲಿ ಅಡಿಪಾಯ ಹಾಕುವಲ್ಲಿ ಈ ಯೋಜನೆ ಸಹಾಯಕ ಆಗುತ್ತದೆ ಎಂಬುದು ಮತ್ತೊಂದು ವಾದ.

ಗಂಡಸು ಮನೆಯಿಂದ ಹೊರಗೆ ದುಡಿಯುವ ಪರಿಕಲ್ಪನೆಯನ್ನು ಆದಿಮಾನವ ಕೃಷಿ ಆರಂಭಿಸಿದ ಕಾಲಕ್ಕೆ ಹೋಗಿ ನೋಡಿದರೆ, ಬಹುಶಃ ಆಗಿನಿಂದಲೂ ದುಡಿದು ತಂದು ಹಾಕುವುದು ಅವನು, ಮತ್ತು ತಂದು ಹಾಕಿದ್ದನ್ನು ಬೇಯಿಸುವುದು ಅವಳು ಎಂಬ ಕಾರ್ಯವಿಭಜನೆಯು ಕಾಲಚಕ್ರ ಉರುಳಿದಂತೆ ಗಂಡು ಯಜಮಾನನ ಸ್ಥಾನ ಪಡೆದುಕೊಳ್ಳುವಂತೆ ಮಾಡಿತು. ಅಷ್ಟೇ ಅಲ್ಲ ಲಿಂಗತಾರತಮ್ಯ ಎಲ್ಲಿ ಮೊಳೆಯಿತು ಎಂದು ಅದರ ಬೇರುಗಳನ್ನು ತಡಕುತ್ತಾ ಹೋದಾಗ ಎದುರಾಗುವ ಜೈವಿಕ ಭಿನ್ನತೆಯಷ್ಟೇ ಮೂಲಭೂತವಾಗಿ ಈ ‘ಸಂಪಾದನೆ’ ಎಂಬ ಆರ್ಥಿಕ ಅಂಶವೂ ಮುಖ್ಯವಾಗಿ ಕಾಣುತ್ತದೆ.

ಹೆಣ್ಣಿನ ಸೇವೆ-ತ್ಯಾಗಗಳನ್ನು ಬೆಲೆ ಕಟ್ಟಲು ಆಗದು ಎಂದು ಅಟ್ಟಕ್ಕೆ ಏರಿಸಿ, ಆಕೆಯನ್ನು ಪರಾವಲಂಬಿ ಜೀವಿಯಾಗಿ ಬದುಕುವಂತೆ ಪುರುಷಪ್ರಧಾನ ವ್ಯವಸ್ಥೆ ಮಾಡಿದೆ. ಇನ್ನು ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ಸಂಪಾದನೆ ಇಲ್ಲದವರಿಗೆ ಅಧಿಕಾರವಿಲ್ಲ, ಅವರ ಮಾತಿಗೆ ಬೆಲೆಯೂ ಇಲ್ಲ! ಹಾಗಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವ ಯಾವುದೇ ಪ್ರತಿಫಲಗಳಿಲ್ಲದೆ ದುಡಿಯುವ ಗೃಹಿಣಿಯ ಪಾತ್ರಕ್ಕೆ ಇರುವ ಬೆಲೆಯೆಷ್ಟು? ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರ ಸ್ತ್ರೀಪರವಾದ ಈ ಆಲೋಚನೆ ನಿಜಕ್ಕೂ ಸ್ವಾಗತಾರ್ಹವಾಗಿ ಕಾಣಿಸುತ್ತದೆ.

ಇದೇನು ಹೊಸ ಆಲೋಚನೆಯಲ್ಲ. 1972 ರಲ್ಲಿ ಸೆಲ್ಮಾ ಜೇಮ್ಸ್ ಅವರು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ರಾಷ್ಟ್ರೀಯ ಮಹಿಳಾ ವಿಮೋಚನಾ ಸಮಾವೇಶದಲ್ಲಿ ಮನೆಕೆಲಸಕ್ಕಾಗಿ ವೇತನದ ಬೇಡಿಕೆಯನ್ನು ಮೊದಲು ಮಂಡಿಸಿದರು. ಅಮೆರಿಕದ ಬರಹಗಾರ್ತಿ ಮತ್ತು ದಿ ಇಂಟರ್ನ್ಯಾಷನಲ್ ವೇಜಸ್ ಫಾರ್ ಹೌಸ್ ವರ್ಕ್ ಅಭಿಯಾನದ ಪ್ರಚಾರಕಿ, ಸೆಲ್ಮಾ ಜೇಮ್ಸ್ ವೇತನ ಸೇರಿದಂತೆ ಸಮಾಜದಲ್ಲಿ ಮಹಿಳೆಯರ ಪಾತ್ರಕ್ಕೆ ಮಾನ್ಯತೆ ಪಡೆಯುವ ದೀರ್ಘ ಹೋರಾಟದಲ್ಲಿ ತೊಡಗಿದ್ದಾರೆ. ಅವರ ಪ್ರಕಾರ ಗೃಹಿಣಿಯರಿಗೆ ವೇತನ ನೀಡುವುದು ಬಡತನ ಮತ್ತು ಮನೆಯ ಒಳಹೊರಗಿನ ಅತಿಯಾದ ಕೆಲಸದ ಬಿಕ್ಕಟ್ಟಿಗೆ ಏಕೈಕ ಪರಿಹಾರವಾಗಿದೆ. “ಬಡತನ ಮತ್ತು ಆರ್ಥಿಕ ಅವಲಂಬನೆಯು ಗೃಹಿಣಿಯರನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ, ಸಾಮಾನ್ಯವಾಗಿ ಆರೈಕೆ ಮಾಡುವವರು ಮತ್ತು ಪುರುಷರ ಸೇವಕರಾಗಿ ಸಾಂಸ್ಥೀಕರಣಗೊಳಿಸಿದೆ” ಎಂಬುದು ಅವರ ಅಭಿಪ್ರಾಯ.

2007ರಲ್ಲಿ ಗೃಹಿಣಿಯರಿಗೆ ಸಂಬಳ ನೀಡಿದ ಮೊದಲ ದೇಶ ವೆನೆಜುವೆಲಾ. ಅಂದಿನ ಅಧ್ಯಕ್ಷ ಹ್ಯೂಗೋ ಚಾವೆಜ್ ಇದನ್ನು ಸಂವಿಧಾನದ 88ನೇ ಪರಿಚ್ಛೇದದ ಅಡಿಯಲ್ಲಿ ಘೋಷಿಸಿದರು. ಮೊದಲ ಹಂತದಲ್ಲಿ 100,000 ಮಹಿಳೆಯರಿಗೆ ಕನಿಷ್ಠ ವೇತನದ 80% ನೀಡಲಾಯಿತು, ಆ ಸಮಯದಲ್ಲಿ ಅದು ತಿಂಗಳಿಗೆ 180 ಡಾಲರ್‌ಗೆ ಸಮನಾಗಿತ್ತು. ಮುಂದಿನ ಹಂತದಲ್ಲಿ, ನಾಲ್ಕು ತಿಂಗಳ ನಂತರ ಇನ್ನೂ ಒಂದು ಲಕ್ಷ ಗೃಹಿಣಿಯರನ್ನು ಈ ಯೋಜನೆಯಲ್ಲಿ ಒಳಗೊಳ್ಳಲಾಯಿತು. ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಈ ಕಾರ್ಯವನ್ನು ಅನೇಕ ಯುರೋಪಿಯನ್ ರಾಷ್ಟ್ರಗಳು ಇಂದು ಅನುಸರಿಸುತ್ತಿವೆ.

ಇನ್ನು ಭಾರತದ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ, ಯುಪಿಎ-2 ಸರ್ಕಾರದ ಅವಧಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದ ಕೃಷ್ಣ ತಿರಥ್ ಅವರು 2012ರಲ್ಲಿ ಗೃಹಿಣಿಯರ ಆರ್ಥಿಕ ಸ್ವಾವಲಂಬನೆಗಾಗಿ ತಮ್ಮ ಪತಿ ವೇತನದ ನಿರ್ದಿಷ್ಟ ಪ್ರಮಾಣವನ್ನು ಹೆಂಡತಿಯರಿಗೆ ನೀಡುವ ಕಾನೂನು ತರಲು ಒತ್ತಾಯಿಸಿದ್ದರು. ಈ ಸಂಬಂಧವಾಗಿ ಸಚಿವಾಲಯಗಳು ಸಮೀಕ್ಷೆಯನ್ನು ನಡೆಸಿ ಯೋಜನೆ ಜಾರಿಗೆ ಪೂರಕವಾದ ಅಂಕಿ ಅಂಶಗಳನ್ನು ಒದಗಿಸಿದ್ದವು.

ಪಾತ್ರೆ ತೊಳೆಯುವುದಕ್ಕೊ, ಮನೆ ಸ್ವಚ್ಛ ಮಾಡುವುದಕ್ಕೊ, ಹೊರಗಿನಿಂದ ಯಾರನ್ನೇ ಕರೆಸಿ ಕೆಲಸ ಮಾಡಿಸಿದರೂ, ಅವರಿಗೆ ಹಣ ತೆರಲೇಬೇಕು. ಅವರ ಕೆಲಸ ತೃಪ್ತಿ ಕೊಡಲಿ, ಬಿಡಲಿ, ಹಣ ಕೊಡಬೇಕು. ಆದರೆ ಮನೆಯ ಎಲ್ಲರ ಇಷ್ಟಾನಿಷ್ಟಗಳನ್ನು ಸಂತೃಪ್ತಿಯಾಗುವಂತೆ ದುಡಿಯುವ ಮನೆಯ ಗೃಹಿಣಿಗೆ ಈ ಗೌರವ ಏಕಿರಬಾರದು ಎಂಬ ಚರ್ಚೆಗೆ ಸಮೀಕ್ಷೆ ಕಾರಣವಾಗಿತ್ತು.

PC : Scroll.in

ಹೀಗೆ ಗೃಹಿಣಿಯರಿಗೆ ಮಾಸಿಕ ಭತ್ಯೆ ಕೊಡುವುದರಿಂದ ಆರ್ಥಿಕ ಸ್ವಾವಲಂಬನೆ ಉಂಟಾಗುವುದೇ ಎಂದು ಅಥವಾ ಆರ್ಥಿಕ ಸ್ವಾತಂತ್ರ್ಯ ಲಭಿಸಿಬಿಡುವುದೇ ಎಂದು ಪ್ರಶ್ನೆ ಮೂಡಬಹುದು ಅಥವಾ ಅದನ್ನು ಗಂಡನೊ, ಮಕ್ಕಳೋ ಆಕೆಯಿಂದ ಕಸಿದುಕೊಂಡು ಬಳಸಿಕೊಳ್ಳಬಹುದಲ್ಲ ಎಂದು ಕೂಡ ವಾದಿಸಬಹುದು. ತನ್ನೆಲ್ಲಾ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಿ ತನ್ನದೇ ಆದ ಆರ್ಥಿಕ ಸ್ವಾವಲಂಬನೆಯ ಬಗ್ಗೆ ಆಲೋಚಿಸುವ ಮಧ್ಯಮ, ಕೆಳಮಧ್ಯಮ ವರ್ಗದ ಮಹಿಳೆಯರಿಗೆ ಇದೊಂದು ಭದ್ರ ಅಡಿಪಾಯ ಹಾಕಬಲ್ಲ ಆಲೋಚನೆ. ಈ ಯೋಜನೆ ಪ್ರತಿಯೊಬ್ಬ ಗಂಡನ ಮರ್ಜಿಯಲ್ಲೇ ಬದುಕುವ ಹೆಣ್ಣಿನಲ್ಲಿ ಆತ್ಮವಿಶ್ವಾಸ, ಸುರಕ್ಷಾಭಾವ ಮೂಡಿಸುವುದಾದರೆ ಏಕೆ ಬೇಡ ಎನ್ನಬೇಕು?

ಆದರೆ ಇದನ್ನು ನಿಗದಿಪಡಿಸುವುದು ಹೇಗೆ? ಅವಶ್ಯಕತೆ ಇರುವವರನ್ನು ಗುರುತಿಸುವುದು ಹೇಗೆ? ಶ್ರೀಮಂತ ಕುಟುಂಬಕ್ಕೆ ಸೇರಿದವರು ಅಥವಾ ಶ್ರೀಮಂತ ಗಂಡನನ್ನು ಉಳ್ಳವರು ಇದಕ್ಕೆ ಅರ್ಹರೇ ಎಂಬುದು ಚರ್ಚೆಯ ವಿಷಯವೇ ಆಗಿದೆ. ಆದರೆ ಇಂತಹ ತೊಡಕುಗಳನ್ನು ಎದುರಿಸಿರುವುದು ಇದೊಂದೇ ಯೋಜನೆಯಲ್ಲಿ ಅಲ್ಲ. ಪಡಿತರ ಚೀಟಿ ವಿತರಣೆ ಮತ್ತು ಮೀಸಲಾತಿ ನಿಗದಿಪಡಿಸುವಂತಹ ಸಂದರ್ಭಗಳಲ್ಲಿಯೂ ಇಂತಹುದೇ ಸನ್ನಿವೇಶಗಳನ್ನು ಎದುರಿಸಿದ್ದೇವೆ. ಹೀಗಾಗಿ ಚರ್ಚೆಯ ನಂತರ ಜಾರಿಗೊಳಿಸುವುದು ಉತ್ತಮ.

ಈ ವಿಚಾರವನ್ನು ಕೇವಲ ಚುನಾವಣಾ ಪ್ರಣಾಳಿಕೆಯ ಒಂದು ಭಾಗ ಅಥವಾ ಆ ಪಕ್ಷದ ಗಿಮಿಕ್ ಎಂದುಕೊಂಡು ಹಾಗೇ ಪಕ್ಕಕ್ಕೆ ಸರಿಸಿಬಿಟ್ಟರೆ ತಪ್ಪಾಗುತ್ತದೆ. ಎಂಟಪ್ರೈಸ್ ಎಕಾನಮಿ, ಎಂಟಪ್ರೈಸ್ ಪಾಲಿಟಿಕ್ಸ್‌ನ ದೃಷ್ಟಿಯಿಂದ ಇದನ್ನು ನೋಡಬೇಕು. ಜಪಾನ್, ಸಿಂಗಾಪುರ್ ಮುಂತಾದ ದೇಶಗಳಲ್ಲಿ ಇರುವ ಆರ್ಥಿಕ ಸಮೃದ್ಧಿಯ ಉದಾಹರಣೆಯನ್ನು ಕಮಲ್ ಹಾಸನ್ ಅವರೇ ಕೊಟ್ಟಿದ್ದಾರೆ.

ಈ ಯೋಜನೆ ಕೇವಲ ಮನೆಕೆಲಸ ಮಾಡುವ ಗೃಹಿಣಿಯರ ಶ್ರಮವನ್ನು ಗೌರವಿಸಿ ಬೆಲೆ ನೀಡುವ ಕೆಲಸವಷ್ಟೇ ಆಗದೆ, ಅವರು ಕೂಡ ಸಣ್ಣಪುಟ್ಟ ಉದ್ದಿಮೆಗಳನ್ನು ಪ್ರಾರಂಭಿಸಿ ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವಲ್ಲಿ ಸಹಾಯಕವಾಗಬಹುದು. ಇದರ ಮುಂದಿನ ಹಂತದಲ್ಲಿ ಗೃಹಿಣಿಯರೂ ಸಣ್ಣಪುಟ್ಟ ವ್ಯಾಪಾರ ವಹಿವಾಟು ಆರಂಭಿಸಿದಾಗ ಮನೆಕೆಲಸವನ್ನು ಮನೆಯವರೆಲ್ಲರೂ ಸಮವಾಗಿ ಹಂಚಿಕೊಳ್ಳುವಂತಹ ಸಂದರ್ಭ ಭವಿಷ್ಯದಲ್ಲಿ ಸೃಷ್ಟಿಯಾದರೂ ಆಗಬಹುದು. ಆಗ ಖಂಡಿತ ಗೃಹಿಣಿಯರ ಸ್ಥಾನ ಮತ್ತು ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ.

ಭಾರತದ ಸಂವಿಧಾನದ ಆರ್ಟಿಕಲ್ 19(1)(ಜಿ) ಯಾವುದೇ ವೃತ್ತಿಯನ್ನು ನಡೆಸಲು ಅಥವಾ ಯಾವುದೇ ಉದ್ಯೋಗ, ವ್ಯಾಪಾರ ಅಥವಾ ವ್ಯವಹಾರವನ್ನು ನಡೆಸುವ ಹಕ್ಕನ್ನು ಎಲ್ಲಾ ನಾಗರಿಕರಿಗೆ ಒದಗಿಸುತ್ತದೆ. ಆರ್ಟಿಕಲ್ 19 (6), ನಾಗರಿಕರ ಈ ಹಕ್ಕಿನ ಮೇಲೆ ರಾಜ್ಯವು ವಿಧಿಸಬಹುದಾದ ನಿರ್ಬಂಧದ ಸ್ವರೂಪವನ್ನು ವಿವರಿಸುತ್ತದೆ.

ಭಾರತದ ಆರ್ಥಿಕತೆಯು ಬೆಳೆಯುತ್ತಿದೆ, ಹೆಚ್ಚುತ್ತಿರುವ ಜಿಡಿಪಿ ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯು 2050ರ ವೇಳೆಗೆ 800 ದಶಲಕ್ಷಕ್ಕೂ ಹೆಚ್ಚಿಗೆ ಏರುವ ನಿರೀಕ್ಷೆಯಿದೆ.

ಈ ಬೆಳವಣಿಗೆಯ ಹೊರತಾಗಿಯೂ, 2020ರಲ್ಲಿರುವಂತೆ 76.0% ಪುರುಷರಿಗೆ ಹೋಲಿಸಿದರೆ, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಅಂದರೆ 20.3% ರಷ್ಟು ಮಾತ್ರ ಕಾರ್ಮಿಕ ವರ್ಗದಲ್ಲಿ ಭಾಗವಹಿಸುತ್ತಾರೆ. ಪುರುಷರು ಒಂದು ದಿನಕ್ಕೆ 31 ನಿಮಿಷ ಮನೆಕೆಲಸ ಮಾಡಿದರೆ ಮಹಿಳೆಯರು ದಿನಕ್ಕೆ 297 ನಿಮಿಷ ಮನೆಕೆಲಸ ಮಾಡುತ್ತಾರೆ.

ಅಡ್ಡೇಟಿನ ಮೇಲೆ ಗುಡ್ಡೇಟು

ಈ ಪರಿಕಲ್ಪನೆಯ ಬಗ್ಗೆ ಚಾಲ್ತಿಯಲ್ಲಿರುವ ಮತ್ತೊಂದು ಅಡ್ಡ ಮಾತೆಂದರೆ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಂಡಿರುವ ಗೃಹಿಣಿಯರಿಗೂ ಅಂತಹ ಸ್ಥಿತಿವಂತರಿಗೂ ಈ ಮಾಸಿಕ ಭತ್ಯೆಯನ್ನು ಕೊಡಬೇಕೆ ಎಂಬುದು. ಈ ಪರಿಕಲ್ಪನೆಯನ್ನು ಬಹಳಷ್ಟು ಜನ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡದೆ ಇಂತಹ ತೀರ್ಮಾನಗಳಿಗೆ, ಅಭಿಪ್ರಾಯಗಳಿಗೆ ತಲುಪುತ್ತಿದ್ದಾರೆ. ಇಲ್ಲಿ ಗೃಹಿಣಿಯರಿಗೆ ಸಂಬಳ ಕೊಟ್ಟು ಅವರನ್ನು ಉದ್ಯೋಗಿ ಅಥವಾ ಎಂಪ್ಲಾಯಿಗಳಾಗಿ ನೋಡಬೇಕು ಎಂದಿಲ್ಲ. ಬಹಳಷ್ಟು ಮಧ್ಯಮವರ್ಗದ ಕುಟುಂಬಗಳಲ್ಲಿ ಈ ಗೃಹಿಣಿಯರು ತಮ್ಮ ಗಂಡನ ಮೇಲೆ, ಗಂಡನ ಸಂಪಾದನೆಯ ಮೇಲೆ ಸಂಪೂರ್ಣ ಅವಲಂಬಿತರಾಗಿರುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಅವಲಂಬಿತರಾಗಿಯೇ ಉಳಿದಿರುವಂತೆ ಮಾಡಿರಲಾಗುತ್ತದೆ, ನೋಡಿಕೊಳ್ಳಲಾಗುತ್ತದೆ ಮತ್ತು ಆ ಗಂಡಂದಿರು ಕೂಡ ತಾವು ಸಂಪಾದಿಸಿದ ಹಣವನ್ನು ತನಗೆ ಬೇಕಾದಂತೆ ಖರ್ಚುಮಾಡುವ ಸ್ವಾತಂತ್ರ್ಯ ತನಗಿದೆ ಎಂದೇ ಭಾವಿಸಿರುತ್ತಾನೆ. ಕುಡಿತ, ಹವ್ಯಾಸ, ಮೋಜು, ಜೂಜು ಇತ್ಯಾದಿಗಳಿಗೂ ವ್ಯರ್ಥವಾಗುತ್ತಿರುತ್ತದೆ. ಅದೇ ತನ್ನ ಹೆಂಡತಿ ಹಣ ಕೇಳಿದಾಗ ಮಾತ್ರ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಕೊಡಲೂ ಹಿಂದೆಮುಂದೆ ನೋಡುತ್ತಾನೆ ಅಥವಾ ಪ್ರತಿಯೊಂದಕ್ಕೂ ಲೆಕ್ಕ ಕೇಳುತ್ತಾನೆ. ಇದು ಮನೆಯ ಹೊರಗೆ ದುಡಿದು ಸಂಪಾದಿಸಿ ಇಡೀ ಸಂಬಳವನ್ನು ತಂದು ಗಂಡನ ಕೈಗೆ ಕೊಡುವ ಹೆಂಡತಿಯಂದಿರ ಸಂಕಟವೂ ಆಗಿದೆ. ಆದರೆ ಇವು ಈಗ ನಾವು ಚರ್ಚಿಸುತ್ತಿರುವ, ಚರ್ಚಿಸಬೇಕಾದ ವಿಚಾರದ ಪರಿಧಿಯೊಳಗೆ ಬರದಂತೆ ನೋಡಿಕೊಂಡರೆ ಉತ್ತಮ. ಅಥವಾ ಮನೆಯಲ್ಲಿಯೇ ಉಳಿದರೂ ಮಾಸಿಕ ಭತ್ಯೆ ಸಿಗುವುದಾದರೆ ಹೊರಗೆ ಏಕೆ ದುಡಿಯಬೇಕು ಎಂಬ ಲಕ್ಸುರಿ ಇರುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ವಿಚಾರವನ್ನು ಚರ್ಚಿಸುವುದಕ್ಕಿಂತ, ವ್ಯಂಗ್ಯ ಮಾಡುವುದಕ್ಕಿಂತ ಅಂತಹವರನ್ನು ಚರ್ಚೆಯ ಚೌಕಟ್ಟಿನ ಹೊರಗಿಟ್ಟು ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ ನಡೆಯಾಗುತ್ತದೆ. ಒಂದೋ ಎರಡೋ ರಾಜ್ಯಗಳಲ್ಲಿ ಇವು ಅನುಷ್ಠಾನಕ್ಕೆ ಬಂದರೂ ಅದರ ಯಶಸ್ಸು ಹಲವು ರಾಜ್ಯಗಳಿಗೆ ವಿಸ್ತರಿಸುವುದು ಅಸಂಭವವೇನಲ್ಲ.

ಈಗ ಪಂಜಾಬ್ ಸರ್ಕಾರ ಮಹಿಳೆಯರಿಗೆ ಏಪ್ರಿಲ್ ಒಂದನೇ ತಾರೀಖಿನಿಂದ ಸರ್ಕಾರಿ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿದೆ. ಈ ಹಿಂದೆ 2019ರಲ್ಲಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರಿಗಾಗಿ ಇದೇ ರೀತಿಯ ಯೋಜನೆಯನ್ನು ಘೋಷಿಸಿತ್ತು.

ಸಾಂಪ್ರದಾಯಿಕ ಅರ್ಥಶಾಸ್ತ್ರದ ಪ್ರಕಾರ ಅವರು ಮಾಡುವ ಕೆಲಸಕ್ಕೆ ಯಾರಾದರೂ ಸಂಬಳ ಪಡೆಯದಿದ್ದರೆ, ಜಿಡಿಪಿ ಕಡಿಮೆಯಾಗುತ್ತದೆ ಏಕೆಂದರೆ ಆ ವ್ಯಕ್ತಿಯು “ಕೆಲಸ” ಮಾಡುತ್ತಿಲ್ಲ ಎಂದು ಅರ್ಥ ಬರುತ್ತದೆ. ಸಂಬಳವಿಲ್ಲದೆ ಕೆಲಸ ಮಾಡಲು ಜನ ಸಿದ್ಧರಿದ್ದಾರೆ ಎನ್ನುವುದಾದರೆ ಗೃಹಿಣಿಯರಿಗೆ ಸಂಬಳ ಕೊಡುವುದು ಬೇಕಾಗಿಲ್ಲ ಎಂಬ ಮಾತನ್ನೂ ಒಪ್ಪಬಹುದು.

ಕಾವ್ಯಶ್ರೀ. ಎಚ್

ಡಾ. ಕಾವ್ಯಶ್ರೀ. ಎಚ್
ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾವ್ಯಶ್ರೀ ಅವರು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಬರಹಗಾರ್ತಿ. ಸ್ತ್ರೀವಾದಿ ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...