Homeಕರೋನಾ ತಲ್ಲಣಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

- Advertisement -
- Advertisement -

‘ಮೋದಿಯ ನಾಯಕತ್ವ ಮತ್ತು ಆಡಳಿತ ಶೈಲಿಯೇ ಕೋವಿಡ್ ಉಲ್ಬಣಕ್ಕೆ ಕಾರಣ. ಮೋದಿ ಒಬ್ಬ ‘ಮೆಗಾಲೊಮ್ಯಾನಿಯಾಕ್’ (ತಾನೇ ಶಕ್ತಿವಂತ, ತಾನೆ ಬುದ್ಧಿವಂತ ಎಂಬ ಹುಸಿ ಪ್ರತಿಷ್ಠೆಯ ಮನುಷ್ಯ) ಎಂದು ಭಾವಿಸಿದ್ದಾರೆ…….

ಎರಡು ದಿನದ ಹಿಂದೆ, ಕೋವಿಡ್ ಕುರಿತಂತೆ ಎನ್‌ಡಿಟಿವಿ ಮತ್ತು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಇತಿಹಾಸಕಾರ ಮತ್ತು ರಾಜಕೀಯ ಚಿಂತಹ ರಾಮಚಂದ್ರ ಗುಹಾ ಹೀಗೆ ವಿಶ್ಲೇಷಣೆ ಮಾಡಿದ್ದಾರೆ.

ರಾಜಕೀಯ ವಿಶ್ಲೇಷಕ ಝೈನಬ್ ಸಿಕಂದರ್, ಮೊದಲ ಅಲೆ ತಣ್ಣಗಾದ ನಂತರ ಅದು ತಮ್ಮದೇ ಯಶಸ್ಸು ಎಂಬಂತೆ ಬೀಗಿದ ಮೋದಿ ಸರ್ಕಾರ, ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದರೂ, ಚುನಾವಣೆ ಗೆಲ್ಲುವುದೇ ಮುಖ್ಯ ಎಂಬಂತೆ ಉಡಾಫೆ ಮಾಡಿದ್ದೇ 2ನೆ ಅಲೆ ತೀವ್ರವಾಗಲು ಕಾರಣ ಎಂದು ದಿ ಪ್ರಿಂಟ್‌ನಲ್ಲಿ ಬರೆದಿದ್ದಾರೆ.

ರಾಮಚಂದ್ರ ಗುಹಾ ಪ್ರಕಾರ, ಮೋದಿ ಯಾವ ತಜ್ಞರ ಅಭಿಪ್ರಾಯಕ್ಕೂ ಬೆಲೆ ಕೊಡುವುದಿಲ್ಲ. ಅವರು ನೇಮಿಸಿಕೊಂಡ ತಜ್ಞರಲ್ಲಿ ಬಹುಪಾಲು ಜನ ಮೋದಿಯವರ ಮನದಾಳದ ಇಂಗಿತವನ್ನೇ ಸಲಹೆ ಮಾಡುತ್ತಾರೆ, ಮೋದಿ ಖುಷಿಗೊಳ್ಳುತ್ತಾರೆ. ಹೀಗಾಗಿ ಹೊರಗಿನ ಮತ್ತು ಸ್ವತಂತ್ರ ತಜ್ಞರು ಮುಂದಿನ ಅಪಾಯದ ಬಗ್ಗೆ ನವೆಂಬರ್‌ನಿಂದಲೇ ಎಚ್ಚರಿಕೆ ನೀಡುತ್ತಿದ್ದರೂ ಮೋದಿಯವರು ಅದನ್ನು ಕೇರ್ ಮಾಡಲಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ದೆಹಲಿ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತೀವ್ರವಾದ ಮೊದಲ ಅಲೆಗೆ ತತ್ತರಿಸಿ, ಎರಡನೇ ಅಲೆ ಪ್ರವೇಶ ಮಾಡುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದವು. ಇದ್ದುದರಲ್ಲಿ ಕೇರಳ ಮತ್ತು ನಂತರದಲ್ಲಿ ದೆಹಲಿ, ಮಹಾರಾಷ್ಟ್ರ ಸರ್ಕಾರಗಳು ತಮ್ಮ ರಾಜ್ಯಕ್ಕೆ ಕಾಡಿದ್ದ ಮೊದಲ ಅಲೆಯನ್ನು ಒಂದು ಹಂತಕ್ಕೆ ತರುವಲ್ಲಿ ಶ್ರಮ ವಹಿಸಿದ್ದವು.

ಆದರೆ ಎರಡನೆ ಅಲೆ ಜೋರಾದಾಗ ಅವು ಸಹಾಯಕ್ಕೆ ಮನವಿ ಮಾಡುತ್ತಿದ್ದರೆ, ಮೋದಿಯವರು ಬಂಗಾಳ ಮತ್ತು ಇತರ ಚುನಾವಣೆಗಳಲ್ಲಿ ನಿರತರಾಗಿದ್ದರು. ಈ ಮೂರು ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬ ಕ್ಷುಲ್ಲಕ ರಾಜಕೀಯ ಅಂಶ ಅವರ ತಲೆಯಲ್ಲಿ ಇದ್ದೇ ಇದೆ. ಅದಿರಲಿ, ಅವರ ಗುಜರಾತ್ ಮತ್ತು ಉತ್ತರಪ್ರದೇಶ ಸರ್ಕಾರಗಳು ತೀವ್ರ ಕೋವಿಡ್ ಹಾನಿ ಅನುಭವಿಸಿಯೂ ಅಂಕಿಅಂಶ ಮುಚ್ಚಿಡುತ್ತ 2ನೆ ಅಲೆ ತೀವ್ರಗೊಳ್ಳಲು ಕಾರಣವಾದ ಮೇಲೂ ಆ ರಾಜ್ಯಗಳಿಗೆ ಕೇಂದ್ರ ಯಾವ ಸಂದೇಶ ಅಥವಾ ಎಚ್ಚರಿಕೆಯನ್ನು ನೀಡಲಿಲ್ಲ.

ಕರ್ನಾಟಕದ ಸರ್ಕಾರದ್ದು ಇನ್ನೊಂದು ಸಮಸ್ಯೆ. ಇದು ಉತ್ತರಪ್ರದೇಶ ಅಥವಾ ಗುಜರಾತಿನಂತೆ ಕೋವಿಡ್ ಸಾವಿನ, ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಿಲ್ಲ. ಆದರೆ ಮೋದಿಯವರಂತೆಯೇ ಈ ಸರ್ಕಾರ ಕೂಡ ತಜ್ಞರ ಮಾತನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಮೀಡಿಯಾ ಮುಂದೆ ಹೇಳುವ ಯೋಜನೆಗಳು ರಚನಾತ್ಮಕ ಎನಿಸುತ್ತವೆ, ಆದರೆ ಅವೆಂದೂ ಜಾರಿಗೆ ಬರಲಿಲ್ಲ. ಇಲ್ಲೂ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇದ್ದರೂ ರಾಜ್ಯ ಸರ್ಕಾರ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಡುತ್ತ ಬಂದಿದೆ.

ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ಆಕ್ಸಿಜನ್ ಕೊರತೆ, ಲಸಿಕೆ ಕೊರತೆ, ರೆಮ್‌ಡಿಸಿವಿಯರ್ ಕೊರತೆ ಬಗ್ಗೆ ರಾಜ್ಯದ ಪ್ರತಿನಿಧಿ ತಿಳಿಸಿದರು. ಆದರೆ ಈ ಸರ್ಕಾರದ ಸಚಿವರ‍್ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಇಲ್ಲ. ಹಾಗೆಯೇ ನಮ್ಮ ಸಂಸದರ‍್ಯಾರೂ ಕೂಡ ರಾಜ್ಯಕ್ಕೆ ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿ ಎಂಬ ಒಂದೇ ಒಂದು ಬೇಡಿಕೆಯನ್ನೂ ಇವತ್ತಿಗೂ ಇಟ್ಟಿಲ್ಲ!

ಅಂದರೆ ಇಲ್ಲಿ ಮೋದಿ ಮತ್ತು ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು, ಕಳೆದ 4 ತಿಂಗಳಿಂದ ‘ಎಲ್ಲವೂ ಸರಿಯಾಗಿದೆ’ ಎಂಬ ಹುಸಿ ಸಂತೃಪ್ತಿಕರ ಭಾವವನ್ನು ವ್ಯಕ್ತಪಡಿಸುತ್ತ ಜನರನ್ನೂ ದಾರಿ ತಪ್ಪಿಸುತ್ತ ಬಂದವು. ತೊಂದರೆಯಲ್ಲಿದ್ದ ಬಿಜೆಪಿಯೇತರ ರಾಜ್ಯಗಳ ಬೇಡಿಕೆಗಳನ್ನು ಕೇಂದ್ರ ನಿರ್ಲಕ್ಷಿಸುತ್ತ ಬಂದಿತು. ಈಗಲೂ ಅದಕ್ಕೆ ಬಂಗಾಳ ಚುನಾವಣೆಯೇ ಮುಖ್ಯವಾಗಿದೆ. ದೆಹಲಿ ಹೈಕೋರ್ಟ್ ಸತತ ಎರಡು ದಿನಗಳ ಕಾಲ ತರಾಟೆಗೆ ತೆಗೆದುಕೊಂಡ ನಂತರವೂ ಕೇಂದ್ರ ಸರ್ಕಾರಕ್ಕೆ ಅದು ಅವಮಾನ ಅನಿಸಿಯೇ ಇಲ್ಲ ಎಂಬಂತೆ ಕಾಣುತ್ತಿದೆ.

ಝೂನಬ್ ಸಿಕಂದರ್ ಬರೆಯುತ್ತಾರೆ, ‘ಚಪ್ಪಾಳೆಯಿಂದ ಮೋದಿ ಕುರುಡರಾದರು. ಅವರದೇ ಅಭಿಮಾನಿಗಳ ಪ್ರಶಂಸೆಗಳಿಂದ ಉಬ್ಬಿ ಹೋದರು. ಜಾಗತಿಕ ಪ್ರಶಂಸೆಯನ್ನು ಮೋದಿ ಎಷ್ಟು ಪ್ರೀತಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರು ಎಲ್ಲಿಗೆ ಹೋದರೂ ಅದನ್ನು ಪ್ರಭಾವಲಯದಂತೆ ಧರಿಸುತ್ತಾರೆ, ಅವರು ಭಾರತವಲ್ಲ, ನಿಜವಾದ ವಿಶ್ವ ಗುರು ಎಂದು ಮತದಾರರಿಗೆ ಮನವರಿಕೆ ಮಾಡಲು ಬಯಸುತ್ತಾರೆ. ಸಮುಂದರ್ ಪೆ ಚರ್ಚಾ ಫೋಟೋ-ಶೂಟ್‌ಗಾಗಿ ವಿಶ್ವ ನಾಯಕರನ್ನು ತಬ್ಬಿಕೊಂಡು ಅವರೊಂದಿಗೆ ಬೀಚ್‌ನಲ್ಲಿ ನಡೆಯುವಾಗ ಇಂತಹ ವಿಶ್ವಗುರು ಭ್ರಮೆಯಲ್ಲಿ ಅವರು ಇರುತ್ತಾರೆ. ಅವರ ಈ ನಡವಳಿಕೆಯೇ ಇವತ್ತಿನ ಈ ಬಿಕ್ಕಟ್ಟಿನ ಮೂಲವಾಗಿದೆ…..

ಆದ್ದರಿಂದ, ಹೊಸ ರೂಪಾಂತರವು ಭಾರತಕ್ಕೆ ಬಂದಿದೆ ಮತ್ತು ‘ಇಂಡಿಯನ್’ ರೂಪಾಂತರದ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದನ್ನು ಮೋದಿ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿದ್ದರ ಪರಿಣಾಮವೇ ಇವತ್ತಿನ ದುರಂತಕ್ಕೆ ಕಾರಣ….’

ರಾಮಚಂದ್ರ ಗುಹಾ ಪ್ರಕಾರ, ಹಿಂದೆಲ್ಲ ಸರ್ಕಾರಗಳು ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳನ್ನು ಪ್ರಮುಖ ಸ್ಥಾನಕ್ಕೆ ನೇಮಿಸುತ್ತಿದ್ದವು. ಅಲ್ಲಿ ಪಕ್ಷನಿಷ್ಠೆ ಅಥವಾ ವ್ಯಕ್ತಿನಿಷ್ಠೆ ನೋಡುತ್ತಿರಲಿಲ್ಲ. ಆದರೆ 2014ರ ನಂತರ ಮೋದಿಯವರು ಗುಜರಾತಿ ಅಧಿಕಾರಿಗಳನ್ನು ದೆಹಲಿಗೆ ಕರೆ ತಂದರು. ಇವರೆಲ್ಲ ವ್ಯಕ್ತಿಪೂಜೆಯ ಆರಾಧಕರು, ಪಿಎಂಒ ಕೂಡ ಅಂತಹವರಿಂದಲೇ ತುಂಬಿತು… ಹೀಗಾಗಿ ಅಲ್ಲಿ ತಜ್ಞತೆಗೆ, ಆಡಳಿತ ದಕ್ಷತೆಗೆ ಅವಕಾಶವೇ ಇಲ್ಲವಾಯಿತು’ ಎನ್ನುತ್ತಾರೆ.

ವಾಷಿಂಗ್ಟನನ್ ಪೋಸ್ಟ್ ಮತ್ತು ದಿ ಗಾರ್ಡಿಯನ್ ಈ ಎರಡು ದಿನಗಳಲ್ಲಿ ಪ್ರಕಟಿಸಿದ ಲೇಖನಗಳಲ್ಲಿ ಭಾರತದಲ್ಲಿನ 2ನೆ ಉಲ್ಬಣಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಟೈಟಲ್ಲಿನಲ್ಲಿಯೇ ಸಾರಿವೆ.

ಇವತ್ತು ಬಂಗಾಳದಲ್ಲಿ 6ನೆ ಹಂತದ ಮತದಾನ ಆರಂಭವಾದ ಕೂಡಲೇ ಮೊದಿ ಟ್ವೀಟ್ ಮಾಡಿ, ಎಲ್ಲರೂ ಮತ ಚಲಾಯಿಸಿ ಎನ್ನುತ್ತ ತಮ್ಮ ಸಣ್ಣ ಬುದ್ಧಿ ಪ್ರದರ್ಶಿಸಿದ್ದಾರೆ. ಅವರ ಮೂಗಿನಡಿಯೇ ಜನ ಆಮ್ಲಜನಕ ಅಂದರೆ O2 ಕೊರತೆಯಿಂದ ಸಾಯುವಾಗ ಅವರು ಟ್ವೀಟಿನಲ್ಲಿ ಓಟಿನ ಬೇಟೆಯಾಡುತ್ತಿದ್ದರು. ಈ ಒಂದು ಅಂಶವೇ ಸಾಕು ಅವರ ಹುಚ್ಚು ಶೈಲಿಯ, ಒಣ ಧಿಮಾಕಿನ ಆಡಳಿತ ಶೈಲಿಗೆ ಅಲ್ಲವೇ?

ಒಂದೆಡೆ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವಾಗ ಬಂಗಾಳದ ಅಸ್ಸನೋಲ್‌ನಲ್ಲಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಾರೆ. ಇಷ್ಟೊಂದು ಜನಸಂದಣಿ ನಾನು ನೋಡಿಯೇ ಇಲ್ಲ ಎಂದು ಉದ್ಘರಿಸುತ್ತಾರೆ. ಅಲ್ಲದೇ ನಾಳೆ ಬಂಗಾಳದಲ್ಲಿ ಮತ್ತೆ ಮೋದಿಯವರ ರ‍್ಯಾಲಿಗಳಿವೆ. ಅಲ್ಲಿ ಅಪಾರ ಜನಸಂದಣಿ ಸೇರುತ್ತದೆ ಅಥವಾ ಸೇರಿಸುತ್ತಾರೆ. ಹಾಗಾದರೆ ಮೊನ್ನೆ ಮಂಗಳವಾರ 8.45ಕ್ಕೆ ಅವರು ಹೇಳಿದ್ದೇನು? ಈ ಆಷಾಢಭೂತಿತನವೇ ಇವತ್ತಿನ ಕೋವಿಡ್ ದುರಂತದ ಮೂಲ ಅಲ್ಲವೇ?

  • ಪಿ.ಕೆ ಮಲ್ಲನಗೌಡರ್

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...