ತೆಲುಗು ಸ್ಟಾರ್ ನಟ ವಿಕ್ಟರಿ ವೆಂಕಟೇಶ್, ಸಹೋದರ ನಿರ್ಮಾಪಕ ಸುರೇಶ್ ಬಾಬು, ಮತ್ತೊಬ್ಬ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಅವರ ಮನೆ ಮತ್ತು ಸಂಸ್ಥೆಗಳ ಕಚೇರಿ ಮೇಲೆ ಐಟಿ ತಂಡ ದಿಢೀರ್ ದಾಳಿ ನಡೆಸಿದೆ. ಬುಧವಾರ ಬೆಳೆಗ್ಗೆಯಿಂದ ಸಂಜೆಯವರೆಗೆ ಐಟಿ ಶೋಧ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಟ ನಾನಿ ಹಾಗೂ ಟಿ.ಆರ್.ಎಸ್ ಪಕ್ಷದ ಕೂಕ್ಕಟ್‌ಪಲ್ಲಿ ಶಾಸಕ ಮಾಧವರಂ ಕೃಷ್ಣರಾವು ಮನೆಗಳಲ್ಲಿಯೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಐಟಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ಬಂಜಾರಾ ಹಿಲ್ಸ್, ಜೂಬ್ಲಿ ಹಿಲ್ಸ್ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ನಟ ವೆಂಕಟೇಶ್ ಕುಟುಂಬದ ರಾಮನಾಯ್ಡು ಸ್ಡುಡೀಯೋದಲ್ಲಿ ಆದಾಯ ತೆರಿಗೆಯ ಲೇವಾದೇವಿಯನ್ನು ಪರೀಶೀಲಿಸಿದ್ದಾರೆ. ಸುರೇಶ್ ಪ್ರೊಡಕ್ಷನ್ಸ್, ದಗ್ಗುಬಾಟಿ ಫಾರಂಹೌಸ್ ಅಂಡ್ ಎಸ್ಟೇಟ್ ಪ್ರೈವೇಟ್ ಲಿ., ರಾಜೇಶ್ವರಿ ಫಾರ್ಮ್ ಹೌಸ್ ಅಂಡ್ ಎಸ್ಟೇಟ್ ಪ್ರೈವೇಟ್ ಲಿ., ಸ್ಪಿರಿಟ್ ಮೀಡಿಯಾ ಪ್ರೈವೇಟ್ ಲಿ., ಸುರೇಶ್ ಯಾಡ್ಸ್ ಸೇರಿದಂತೆ ಹಲವು ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶಾಸಕ ಮಾಧವರಂ ಕೃಷ್ಣರಾವ್ ಅವರಿಗೆ ಸೇರಿರುವ ‘ಪ್ರಣಿತ್ ಹೋಮ್ಸ್ ‘ ಸಂಸ್ಥೆಯ ಲೆಕ್ಕಪತ್ರಗಳನ್ನು ಪರಿಶೀಲನೇ ಮಾಡಿದ್ದಾರೆ.

ಇತ್ತೀಚೆಗೆ ಚೆನ್ನೈನ ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮದ ಮೇಲೆಯೂ ಸಹ ದಾಳಿ ನಡೆದಿತ್ತು. ತೆರಿಗೆ ವಂಚನೆಯ ಕುರಿತು ಆಶ್ರಮದ ಆಸ್ತಿಗಳ ಮೇಲಿನ ತನಿಖೆ ಮುಂದುವರೆದಿದೆ. ಈ ತನಿಖೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಕಲ್ಕಿ ಆಶ್ರಮದ ಮೇಲೂ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಕಚೇರಿಯ ಮುಖ್ಯ ದಾಖಲೆಗಳನ್ನು ವಶಪಡಿಸಿಕೊಂಡು ಚೆನ್ನೈಗೆ ತೆಗೆದುಕೊಂಡು ಹೋಗಿದ್ದಾರೆ.

ತೆಲುಗು ಸಿನೆಮಾ ಬೃಹತ್ ಉದ್ಯಮದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳು ಇದ್ದಾರೆ. ಹಾಲಿವುಡ್‌ನಷ್ಟೇ ಬಜೆಟ್ ಹೂಡಿ, ಸಿನೆಮಾ ತೆಗೆಯುವ ಸಾಮರ್ಥ್ಯವಿರುವ ಸಾಕಷ್ಟು ಸಂಸ್ಥೆಗಳು ಇವೆ. ಆದರೆ ಈ ಬಾರಿ ನಡೆದಿರುವ ಐಟಿ ದಾಳಿ ಕೆಲವೇ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ. ಈ ದಾಳಿಯ ಹಿಂದೆ ಸಚಿವರೊಬ್ಬರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ಅಧಿಕಾರಿಗಳು ಎಲ್ಲಾ ತೆರಿಗೆ ವಂಚಕ ತಿಮಿಂಗಿಲುಗಳನ್ನು ಒಂದೇ ರೀತಿ ನೋಡುತ್ತಿಲ್ಲ. ಆಡಳಿತ ಪಕ್ಷ ಎಲ್ಲರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಐಟಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.


