‘ಸಂವಿಧಾನವನ್ನು ಸಹಿಸಲಾಗದ ಮನುವಾದಿಗಳು ಸಂವಿಧಾನ ಬದಲಿಸುವುದೇ ತಮ್ಮ ಕರ್ತವ್ಯ ಎಂದರು; ಸಂವಿಧಾನ ಸುಟ್ಟರು. ಇಂತಹ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವುದು ಅತ್ಯಗತ್ಯ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಹೇಳಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿ, “ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ; ಬಾಬಾಸಾಹೇಬರು ಈ ಸಂವಿಧಾನ ನೀಡಿದ್ದರಿಂದ ನಾವೆಲ್ಲರೂ ಇಂದು ಒಳ್ಳೆ ಬಟ್ಟೆ ಹಾಕಿದ್ದೇವೆ, ಒಂದಷ್ಟು ಓದಿಕೊಂಡು ಒಳ್ಳೆ ಬದುಕು ಮಾಡುತ್ತಿದ್ದೇವೆ. ನಮ್ಮ ತಾತ ಮುತ್ತಾತರ ಕಾಲಕ್ಕೆ ಹೋಲಿಸಿದರೆ ಇಂದು ನಾವು ಬಹಳಷ್ಟು ಬದಲಾಗಿದ್ದೇವೆ. ಎಲ್ಲ ಜಾತಿಗಳ ಬಡವರು ಹಿಂದೆ ಹೇಗಿದ್ದರು? ಈಗ ಹೇಗಿದ್ದೇವೆ ಎಂದು ನೋಡಿದರೆ, ಸಂವಿಧಾನದ ಕಾರಣಕ್ಕೆ ಸಾಕಷ್ಟು ಬದಲಾವಣೆ ಆಗಿದೆ. ಸಂವಿಧಾನದಲ್ಲಿರುವ ಎಲ್ಲ ಆಶಯಗಳೂ ಈಡೇರಿದರೆ ಇನ್ನೂ ಎಷ್ಟೆಲ್ಲ ಬದಲಾಗಬಹುದು ಯೋಚಿಸಿ” ಎಂದರು.
“ಸಂವಿಧಾನವನ್ನು ಸಹಿಸಲಾಗದ ಮನುವಾದಿಗಳು ಸಂವಿಧಾನ ಬದಲಿಸುವುದೇ ತಮ್ಮ ಕರ್ತವ್ಯ ಎಂದು ಸಂವಿಧಾನ ಸುಟ್ಟರು, ಇಂತಹ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವುದು ಅತ್ಯಗತ್ಯ ಎಂದು ಹೇಳುತ್ತೇನೆ” ಎಂದು ಪ್ರತಿಪಾದಿಸಿದರು.
“ಇಲ್ಲಿ ಎಲ್ಲ ಸಂಘಟನೆಗಳೂ ಇದ್ದೇವೆ. ಆದರೆ, ಬಿಡಿಬಿಡಿ ಹೋರಾಟಮಾಡುತ್ತಿದ್ದೇವೆ. ತ್ಯಾಗಿಯವರು (ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರು) ಒಂದು ಮಾತು ಹೇಳುತ್ತಿದ್ದರು, ‘ನಾವು ಆ ಕಾಲದಲ್ಲಿ ಜನ ಎದ್ದೇಳಿ ಎನ್ನುತ್ತಿದ್ದೆವು, ಈಗ ಜನ ಎದ್ದು ದಿಕ್ಕಾಪಾಲಾಗಿ ಹೋಗುತ್ತಿದ್ದಾರೆ’ ಎನ್ನುತ್ತಿದ್ದರು. ಈಗ ಬಹುಶಃ ನಮ್ಮ ಸಂಘಟನೆಗಳ ಪರಿಸ್ಥಿತಿಯೂ ಅದೇ ಆಗಿದೆ, ನಾವೆಲ್ಲ ಒಂದೇ ದಿಕ್ಕಿನಲ್ಲಿ ಸಾಗುವುದಾದರೆ ಬಹುಶಃ ನಮ್ಮ ಆಶಯ ಈಡೇರಬಹುದು. ಆ ನಿಟ್ಟಿನಲ್ಲಿ, ಸಂವಿಧಾನ ಸಂರಕ್ಷಣಾ ಪಡೆಯನ್ನು ಕಟ್ಟುವ ಕೆಲಸವನ್ನು ದಸಂಸ ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಹೇಳಿದರು.
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ


