ಕರ್ನಾಟಕ ಮತ್ತು ನೆರೆ ರಾಜ್ಯಗಳ ಅಚ್ಚ ಕನ್ನಡ ಪ್ರದೇಶಗಳ ನಡುವಿನ ಭೌತಿಕ ಗಡಿಗಳು ಇದ್ದಂತೆ ಇದ್ದರೂ ಸಾಂಸ್ಕೃತಿಕವಾಗಿ ಹೇರಲಾಗುತ್ತಿರುವ ಗಡಿಗಳನ್ನು ಅಪ್ರಸ್ತುತವಾಗಿಸುವುದು ಸಾಧ್ಯವಿದೆ. ಇಂತಹ ಪ್ರದೇಶಗಳೊಂದಿಗೆ ಕರ್ನಾಟಕದ ಭಾವನಾತ್ಮಕ ಸಂಬಂಧದ ವಿಸ್ತರಣೆಗೆ ಇದು ಸಕಾಲವಾಗಿದ್ದು, ರಾಜ್ಯ ಸರ್ಕಾರವು ಅಖಂಡ ಕರ್ನಾಟಕದ ಭಾಗವಾಗಿದ್ದ ಎಲ್ಲ ಪ್ರದೇಶಗಳೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದುವಲ್ಲಿ ವಿಶೇಷ ಕ್ರಿಯಾ ಯೋಜನೆಯನ್ನೇ ರೂಪಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಕಾಸರಗೋಡಿನಿಂದ ಬೆಂಗಳೂರಿಗೆ ಆಗಮಿಸಿದ್ದ ಗಣ್ಯರ ನಿಯೋಗವನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ ಅವರು, ಕರ್ನಾಟಕ ರಾಜ್ಯವು ಇದೇ ಮೊದಲ ಬಾರಿಗೆ ಗಡಿ ಭಾಗಗಳ ಸಮಸ್ಯೆಗಳನ್ನು ಅವಲೋಕಿಸಿ ಶಾಶ್ವತ ಪರಿಹಾರವನ್ನು ಕಲ್ಪಿಸುವ ಸಂಬಂಧ ಗಡಿ ಉಸ್ತುವಾರಿ ಸಚಿವರನ್ನೇ ನೇಮಿಸಿದ್ದು, ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ ಎಂದರು. ಗಡಿ ಉಸ್ತುವಾರಿ ಸಚಿವರು ಕೇವಲ ಗಡಿ ಭಾಗಗಳನ್ನು ಮಾತ್ರ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಗ್ರಹಿಸದೆ ಕಾಸರಗೋಡು, ಸಾಂಗ್ಲಿ, ಸೊಲ್ಲಾಪುರದಂತಹ ಅಚ್ಚ ಕನ್ನಡ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರ ಸಮಗ್ರ ಹಿತಕ್ಕೆ ಮುಂದಾದಲ್ಲಿ ಅಖಂಡ ಕರ್ನಾಟಕ ತನ್ನ ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದ ಅವರು, ರಾಜ್ಯ ಸರ್ಕಾರವು ಇದನ್ನು ಕೇವಲ ಪರಿಹಾರ ಕಾಣದ ಗಡಿ ಸಮಸ್ಯೆ ಎಂದು ಭಾವಿಸಬಾರದೆಂದರು.
ಕಾಸರಗೋಡಿನ ಕನ್ನಡಿಗರು ಕನ್ನಡಕ್ಕೆ ಮತ್ತು ಕರ್ನಾಟಕ ಸಂಸ್ಕೃತಿಗೆ ದುಡಿದ ಗಡಿನಾಡು ಪ್ರತಿಭೆಗಳಿಗೆ ಸೂಕ್ತ ಪ್ರಶಸ್ತಿ ನೀಡಬೇಕು, ಕಾಸರಗೋಡಿನ ಸಾಂಸ್ಕೃತಿಕ ಸ್ಮಾರಕಗಳ ನಿರ್ಮಾಣ ಮತ್ತು ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು, ಕಾಸರಗೋಡಿನಲ್ಲಿ ಕನ್ನಡ ಚಲನಚಿತ್ರಗಳು ನಿಯತವಾಗಿ ಪ್ರದರ್ಶನವಾಗಬೇಕು, ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅನುದಾನ ನೀಡಬೇಕು, ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಕರ್ನಾಟಕದ ವಿದ್ಯಾರ್ಥಿಗಳಂತೆಯೇ ಸಮಾನವಾಗಿ ಪರಿಗಣಿಸಬೇಕೆಂಬ ಹಲವು ಅಂಶಗಳುಳ್ಳ ಮನವಿಯನ್ನು ಕಾಸರಗೋಡಿನ ನಿಯೋಗವು ತಮಗೆ ಸಲ್ಲಿಸಿದ್ದು, ಇದನ್ನು ಮುಖ್ಯಮಂತ್ರಿಗಳಿಗೆ, ಗಡಿ ಸಚಿವರಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಸಲ್ಲಿಸಿ ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಹಣ ಮೀಸಲಿಡಲು ಆಗ್ರಹಿಸಲಾಗುವುದು ಎಂದು ಬಿಳಿಮಲೆ ಭರವಸೆ ನೀಡಿದರು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶಿವರಾಜ್ ತಂಗಡಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಮತ್ತು ಮಾನ್ಯ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳನ್ನು ಬಿಳಿಮಲೆಯವರ ನೇತೃತ್ವದಲ್ಲಿ ಭೇಟಿ ಮಾಡಿದ ನಿಯೋಗ ಕಾಸರಗೋಡಿನ ಕನ್ನಡಿಗರ ಬೇಡಿಕೆಗಳನ್ನು ಪರಿಗಣಿಸಲು ಮನವಿ ಮಾಡಿತು.
ನಿಯೋಗದಲ್ಲಿ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಣ್ಣ ಬೇವಿನಮರದ, ಕೇರಳ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೌರವ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕಾಸರಗೋಡಿನ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರಮೀಳ ಮಾಧವ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


