ಕೊರೊನಾ ಸಾಂಕ್ರಾಮಿಕ ರೋಗವು ಭಾರತದ ಅತಿ ಶ್ರೀಮಂತರು ಮತ್ತು ಕೋಟ್ಯಾಂತರ ಕಾರ್ಮಿಕರ ನಡುವಿನ ಆದಾಯದ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶದ ಬಹುಸಂಖ್ಯಾತ ಜನರು ಧೀರ್ಘಕಾಲದ ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಲಾಭ/ಆದಾಯವಿಲ್ಲದ ಜನರು ಮೂಲಭೂತ ಸೌಕರ್ಯಗಳಾದ ಆರೋಗ್ಯವನ್ನು ಪಡೆಯಲೂ ಸಹ ಎಣಗಾಡುತ್ತಿದ್ದಾರೆ ಎಂದು ಆಕ್ಸ್‌ಫಾಂ (Oxfam) ವರದಿಯಲ್ಲಿ ತಿಳಿಸಿದೆ.
ಸೋಮವಾರ, ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ವರದಿ ಮಂಡಿಸಿರುವ ಆಕ್ಸ್‌ಫಾಂ, “ಲಾಕ್‌ಡೌನ್ ಸಮಯದಲ್ಲಿ ದೇಶದ ಬಿಲಿಯನೇರ್‌ಗಳ ಸಂಪತ್ತು ಅಂದಾಜು ಶೇ.35 ರಷ್ಟು ಹೆಚ್ಚಾಗಿದೆ. ಆದರೆ, ಶೇ. 84 ರಷ್ಟು ಕುಟುಂಬಗಳು ವಿವಿಧ ರೀತಿಯ ನಷ್ಟವನ್ನು ಅನುಭವಿಸುತ್ತಿವೆ. ಅಲ್ಲದೆ, 2020ರ ಏಪ್ರಿಲ್ ತಿಂಗಳಿನಲ್ಲಿ ಪ್ರತಿ ಗಂಟೆಗೆ 1.7 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ” ಎಂದು ವರದಿಯಲ್ಲಿ ಹೇಳಿದೆ.
ಮಾರ್ಚ್ 2020 ರಿಂದ ಲಾಕ್‌ಡೌನ್ ಜಾರಿಗೊಳಿಸಿದ ನಂತರ, ಭಾರತದ ಅಗ್ರ 100 ಬಿಲಿಯನೇರ್‌ಗಳಿಗೆ ದೊರೆಕಿರುವ ಲಾಭದ ಪ್ರಮಾಣವು 138 ಮಿಲಿಯನ್ ಬಡ ಜನರಿಗೆ ತಲಾ 94,045 ರೂ ಚೆಕ್ ನೀಡುವಷ್ಟು ಹೆಚ್ಚಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಕರಾಳತೆ ಹೆಚ್ಚಿನ ರೈತರಿಗೆ ಅರ್ಥವಾದರೆ ಬೆಂಕಿ ಹೊತ್ತಿಕೊಳ್ಳುತ್ತದೆ: ರಾಹುಲ್
“ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಂದು ಗಂಟೆಯಲ್ಲಿ ಮುಖೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ) ಗಳಿಸಿದ ಆದಾಯವನ್ನು ಒಬ್ಬ ಕೌಶಲ್ಯರಹಿತ ಕೆಲಸಗಾರನು ಗಳಿಸಲು 10,000 ವರ್ಷಗಳು ಬೇಕಾಗುತ್ತವೆ. ಅಲ್ಲದೆ, ಅಂಬಾನಿ ಒಂದು ಸೆಕೆಂಡ್‌ನಲ್ಲಿ ಸಂಪಾದಿಸಿದ್ದನ್ನು ಈ ಕೆಲಸಗಾರ ಸಂಪಾದಿಸಲು ಮೂರು ವರ್ಷಗಳು ಬೇಕಾಗುತ್ತವೆ ಎಂದು ವರದಿ ಹೇಳಿದೆ.
ಆಗಸ್ಟ್ ತಿಂಗಳಿನಲ್ಲಿ ಅಂಬಾನಿಯನ್ನು ವಿಶ್ವದ ನಾಲ್ಕನೇ ದೊಡ್ಡ ಶ್ರೀಮಂತ ವ್ಯಕ್ತಿ ಎಂದು ಘೋಷಿಸಲಾಗಿತ್ತು. ಇದೇ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು, ಹಣ, ಆಹಾರ ಮತ್ತು ಆಶ್ರಯವಿಲ್ಲದೆ ಎಣಗಾಡಿದ್ದಾರೆ. ಸಾವಿರಾರು ಕಿಲೋಮೀಟರ್‌ಗಳ ಪ್ರಯಾಣವನ್ನು ಪುರುಷರು, ಮಹಿಳೆಯರು ಮತ್ತು ಮಕ್ಕಳು ನಡೆದುಕೊಂಡೇ ಕ್ರಮಿಸಿದ ದುರಂತ ದೃಶ್ಯಗಳು, ಸಾವಿರಾರು ಸಾವುಗಳು ದೇಶದ ಪ್ರಜ್ಞೆಯನ್ನು ಕಲಕಿದವು. ಆದರೆ, ಈ ಸಾವುಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಘೋಷಿಸಿತ್ತು!
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಂದು ಗಂಟೆಗೆ ₹ 90 ಕೋಟಿ ಗಳಿಸಿದರು. ಅದೇ ಸಮಯದಲ್ಲಿ ದೇಶದ ಸುಮಾರು 24% ಜನರು ತಿಂಗಳಿಗೆ 3,000 ರೂ.ಗಳಿಗಿಂತ ಕಡಿಮೆ ಆದಾಯವನ್ನು ಗಳಿಸಿದ್ದಾರೆ ಎಂದು ವರದಿ ಹೇಳಿದೆ.
ದೇಶದಲ್ಲಿ ಹೇರಲಾದ ಲಾಕ್‌ಡೌನ್‌ನ ಪರಿಣಾಮವು ಸ್ಪಷ್ಟವಾಗುತ್ತಿದ್ದಂತೆ, ಸರ್ಕಾರವು ಸುಮಾರು 20 ಲಕ್ಷ ಕೋಟಿ ಮೌಲ್ಯದ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿತು. ಪ್ರಧಾನಿ ನರೇಂದ್ರ ಮೋದಿ ಇದನ್ನು ಅವರ “ಆತ್ಮ-ನಿರ್ಭಾರ ಭಾರತ್ (ಸ್ವಾವಲಂಭಿ ಭಾರತ)” ದೂರದೃಷ್ಟಿಯ ಮೂಲಾಧಾರವೆಂದು ಶ್ಲಾಘಿಸಿದರು. ಆದರೆ, ಇದರ ಉಪಯೋಗವಾಗಿರುವುದು ಮಾತ್ರ ಕಾಣುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಯೋಗೇಂದ್ರ ಯಾದವ್ ಸೇರಿ 20 ರೈತ ಮುಖಂಡರಿಗೆ ನೋಟಿಸ್ ನೀಡಿದ ದೆಹಲಿ ಪೊಲೀಸ್
ಅದೇ ವರದಿಯಲ್ಲಿರುವ ಜಾಗತಿಕ ಆವೃತ್ತಿಯು ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿಶ್ವದಾದ್ಯಂತ ಆದಾಯದ ಅಸಮಾನತೆಗಳಲ್ಲಿನ ಅಂತರವನ್ನು ವಿವರಿಸಿದೆ ಎಂದು ದಿ ಹಿಂದು ವರದಿ ಮಾಡಿದೆ.
ಇಂತಹ ಅಸಮಾನತೆಗಳನ್ನು ಪರಿಹರಿಸಲು ಆಕ್ಸ್‌ಫ್ಯಾಮ್ ಭಾರತ ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದೆ. ಅದರಲ್ಲಿ ಮುಖ್ಯವಾಗಿ, ತಕ್ಷಣವೇ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು ಮತ್ತು ಇದನ್ನು ತಕ್ಷವೇ ಜಾರಿಗೆ ತರಬೇಕು ಎಂದು ಸೂಚಿಸಿದೆ.
50 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸುವವರ ಮೇಲೆ 2% ಹೆಚ್ಚುವರಿ ತೆರಿಗೆ ಶುಲ್ಕ ವಿಧಿಸಬೇಕು ಮತ್ತು ಸಾಂಕ್ರಾಮಿಕ ಸಮಯದಲ್ಲಿ windfall ಲಾಭಗಳಿಸುವ ಕಂಪನಿಗಳ ಮೇಲೆ ತಾತ್ಕಾಲಿಕ ತೆರಿಗೆಯನ್ನು ಜಾರಿಗೆ ತರಬೇಕು ಎಂದು ಅದು ಸರ್ಕಾರಕ್ಕೆ ಸೂಚಿಸಿದೆ.
“ಇದು ಉತ್ತಮ ಭವಿಷ್ಯವನ್ನು ನಿರ್ಮಿಸಲು ಭಾರತ ಸರ್ಕಾರವು ನಿರ್ದಿಷ್ಟ ಮತ್ತು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ. ಹೆಚ್ಚು ನಾಗರಿಕರು ಸಮಾನ ಮತ್ತು ನ್ಯಾಯಯುತ ಭವಿಷ್ಯವನ್ನು ಬಯಸುತ್ತಾರೆ” ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಉದ್ಧವ್ ಠಾಕ್ರೆ



Gif from BJP
Gif from BJP it’s a real fact