ನಾವು ಈ ವರ್ಷದ ಜುಲೈ ತಿಂಗಳಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿ ಇತರ ಬಿಜೆಪಿ ಮುಖಂಡರನ್ನು ರಹಸ್ಯವಾಗಿ ಭೇಟಿಯಾಗಿದ್ದು ನಿಜ. ಸಿಂಘು ಗಡಿಯಲ್ಲಿನಲ್ಲಿ ಧರಣಿ ನಿಲ್ಲಿಸಲು 10 ಲಕ್ಷ ರೂ ಮತ್ತು ಕುದುರೆಗಳ ಆಮಿಷವೊಡ್ಡಿದ್ದರು ಎಂದು ನಿಹಾಂಗ್ ಬಾಬಾ ಅಮನ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಅಕ್ಟೋಬರ್ 15 ರಂದು ಸಿಂಘು ಗಡಿಯಲ್ಲಿ ನಿಹಾಂಗ್‌ಗಳಿಂದ ದಲಿತ ಲಖ್ಬೀರ್ ಸಿಂಗ್ ಬರ್ಬರ ಕೊಲೆಯಾದ ನಂತರ ಇದರಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಅದಕ್ಕೆ ಇಂಬು ಕೊಡುವಂತೆ ನಿಹಾಂಗ್ ಮುಖ್ಯಸ್ಥ ಅಮನ್ ಸಿಂಗ್ ಹೇಳಿಕೆ ನೀಡಿದ್ದಾರೆ.
“ನಾವು ನಾಲ್ಕು ಬೇಡಿಕೆಗಳನ್ನು ಕೇಂದ್ರ ಸಚಿವರ ಮುಂದಿಟ್ಟಿದ್ದೆವು. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು, ಎಂಎಸ್‌ಪಿ ಖಾತ್ರಿ ನೀಡಬೇಕು, 2015ರ ಧರ್ಮಗ್ರಂಥ ಅಪವಿತ್ರಗೊಳಿಸಿರುವ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ನಿಹಾಂಗ್‌ಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯಬೇಕು ಎಂಬುದು ನಮ್ಮ ಬೇಡಿಯಾಗಿತ್ತು. ಇವುಗಳನ್ನು ಈಡೇರಿಸಿದರೆ ನಾವು ಧರಣಿಯನ್ನು ಅಂತ್ಯಗೊಳಿಸುತ್ತೇವೆ ಎಂದು ಹೇಳಿ ಹಣದ ಆಮಿಷವನ್ನು ತಿರಸ್ಕರಿಸಿದ್ದೇವು. ಈ ಕುರಿತು ನಾವು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೂ ಕೂಡ ಪತ್ರ ಬರೆದಿದ್ದೇವೆ” ಎಂದು ಅಮನ್ ಸಿಂಗ್ ಹೇಳಿದ್ದಾರೆ.
ಅವರು ನಿಮ್ಮ ರೈತರ ಜೊತೆ ಸಹ ಮಾತನಾಡಿದ್ದಾರ? ಎಂಬ ಪ್ರಶ್ನೆಗೆ ಅವರು, “ಸಚಿವರು ರೈತರ ಜೊತೆ ಮಾತನಾಡುವ ಅಗತ್ಯವಿರಲಿಲ್ಲ. ಏಕೆಂದರೆ ಅವರನ್ನು ಭೇಟಿಯಾಗಲು ನಾನೊಬ್ಬನೇ ಹೋಗಿರಲಿಲ್ಲ, ನನ್ನೊಡೆನ 10 ಜನ ರೈತರಿದ್ದರು” ಎಂದು ಉತ್ತರಿಸಿದ್ದಾರೆ.
ಲಖ್ಬೀರ್ ಸಿಂಗ್ ಕೊಲೆ ಪ್ರಕರಣದಲ್ಲಿ ಇದುವರೆಗೂ 4 ಜನ ನಿಹಾಂಗ್‌ಗಳ ಬಂಧನವಾಗಿದೆ. ಲಖ್ಬೀರ್ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಬಂದುದ್ದೇಕೆ, ಅವರನ್ನು ಕರೆ ತಂದವರು ಯಾರು? ಆತ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ್ದಕ್ಕೆ ಸಾಕ್ಷಿ ಏನು? ಆತನನ್ನು ಪೊಲೀಸರಿಗೆ ಏಕೆ ಒಪ್ಪಿಸಲಿಲ್ಲ ಎಂಬ ಪ್ರಶ್ನೆಗಳಿಗೆ ನಿಹಾಂಗ್‌ಗಳು ಇನ್ನು ಉತ್ತರಿಸಿಲ್ಲ. ಈ ಸಂದರ್ಭದಲ್ಲಿ ಬಾಬಾ ಅಮನ್ ಸಿಂಗ್ ಕೇಂದ್ರ ಸಚಿವರನ್ನು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮುಂದುವರೆದು ಮಾತನಾಡಿರುವ ಅಮನ್ ಸಿಂಗ್, “ಇದೇ ಅಕ್ಟೋಬರ್ 27 ರಂದು ನವದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೇವೆ. ಆ ನಂತರ ನಾವು ಧರಣಿ ಮುಂದುವರೆಸಬೇಕೆ ಅಥವಾ ಅಂತ್ಯಗೊಳಿಸಬೇಕು ಎಂದು ನಿರ್ಧರಿಸುತ್ತೇವೆ. ಸಂಗತ್ ಹೊರಡಿ ಎಂದರೆ ನಾವು ಹೊರಡುತ್ತೇವೆ ಎಂದು ಹೇಳಿದ್ದಾರೆ. ನಮಗೆ ನಮ್ಮ ಧರ್ಮಕ್ಕಾಗಿ ಹೋರಾಡುವುದು ಮೊದಲ ಆಯ್ಕೆ, ಎರಡನೇಯದು ರೈತರ ವಿಚಾರ ಎಂದು ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿಯ ಬಂಗಲೆಯಲ್ಲಿ ಅಂದಿನ ರಹಸ್ಯ ಸಭೆ ನಡೆದಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೈಲಾಶ್ ಚೌಧರಿಯ ಜೊತೆಗೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ, ವಜಾಗೊಂಡಿರುವ ಪೊಲೀಸ್ ಅಧಿಕಾರಿ ಗುರ್ಮೀತ್ ‘ಪಿಂಕಿ‘ ಮತ್ತು ಬಿಜೆಪಿ ಕಿಸಾನ್ ಮೋರ್ಚಾದ ಸುಖ್ಮೀಂದರ್ ಪಾಲ್ ಸಿಂಗ್ ಗ್ರೇವಾಲ್ ಸಹ ಸಭೆಯಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ನಿಹಾಂಗ್ ಗುಂಪು ಮತ್ತು ಬಿಜೆಪಿ ನಾಯಕರ ನಡುವಿನ ಈ ರಹಸ್ಯ ಭೇಟಿಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ


