ಮತೀಯ ಗೂಂಡಾಗಿರಿ ಸಮರ್ಥನೆ: ಸಿಎಂ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ | Naanu Gauri

ಮಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮತೀಯ ಗೂಂಡಾಗಿರಿಯನ್ನು ಬೆಂಬಲಿಸಿ ಮಾತನಾಡಿದ್ದರು. ಮುಖ್ಯಮಂತ್ರಿ ತಮ್ಮ ಹೇಳಿಕೆಯನ್ನು ವಾಪಾಸು ಪಡೆಯುವಂತೆ ಆಗ್ರಹಿಸಿ, ಅವರ ವಿರುದ್ದ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸಲಿವೆ. ಇದನ್ನು ಬೆಂಬಲಿಸಿ ರಾಜ್ಯದ ಇತರ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ನಡೆಯಲಿದೆ.

“ಜಾತಿ, ಧರ್ಮದ ಹೆಸರಿನಲ್ಲಿ ಮತೀಯ ಗುಂಪುಗಳು ನಡೆಸುತ್ತಿರುವ ಗೂಂಡಾಗಿರಿ, ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಕೊಲೆಯಾದ ದಲಿತ, ಅಲ್ಪಸಂಖ್ಯಾತರ ಕುಟುಂಬಗಳಿಗೆ ನ್ಯಾಯ ಸಿಗಬೇಕು” ಎಂದು ಸಂಘಟನೆಗಳ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಬೊಮ್ಮಾಯಿ ‘ಕೇಶವ ಕೃಪಾ’ದ ಗುಲಾಮ: ಮಾವಳ್ಳಿ ಶಂಕರ್‌ ಆಕ್ರೋಶ

ಅಕ್ಟೋಬರ್‌ 13 ರ ಬುಧವಾರಂದು, ಕರಾವಳಿಯ ಪ್ರವಾಸದಲ್ಲಿದ್ದ ಸಿಎಂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಮತೀಯ ಗೂಂಡಾಗಿರಿಯನ್ನು ಸಮರ್ಥನೆ ಮಾಡಿಕೊಂಡಿದ್ದರು.

ಅವರು, “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕವಾಗಿಯೂ ಸಾಮರಸ್ಯ ಕಾಪಾಡಲು ನಾವೆಲ್ಲರೂ ಕ್ರಮ ಕೈಗೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು” ಎಂದು ಹೇಳಿದ್ದರು.

ಸಮಾಜದ ಭಾವೆನೆಗಳಿಗೆ ಧಕ್ಕೆಯಾಗದಂತೆ ಅವರು ಕೂಡ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಇದೊಂದು ಸಮಾಜಿಕವಾಗಿರುವ ಪ್ರಶ್ನೆ ಇದೆ. ಸಮಾಜದಲ್ಲಿ ಮೊರಾಲಿಟಿ ಇರಬೇಕು. ನೈತಿಕತೆ ಇಲ್ಲದೇ ನಾವು ಬದಕಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದರು. ಜೊತೆಗೆ, ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇವತ್ತು ನಾವು ನಮ್ಮೆಲ್ಲಾ ಸಂಬಂಧಗಳು, ಶಾಂತಿ ಸುವ್ಯವಸ್ಥೇ ಇರುವುದು ನಮ್ಮ ಮೇಲೆ ನಾವು ನಿಯಂತ್ರಣವಿರುವುದರಿಂದ, ನೈತಿಕತೆಯಿಂದ. ನೈತಿಕತೆ ಇಲ್ಲದಾಗ ಎಲ್ಲಾ ಥರದ ಘಟನೆಗಳು ನಡೆಯುತ್ತವೆ ಎಂದಿದ್ದರು.

ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ

ಅವರ ಹೇಳಿಕೆಯನ್ನು ವಿರೋಧಿಸಿರುವ ವಕೀಲರ ಸಂಘಟನೆಯಾದ ‘ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಶನ್ ಫಾಸ್ ಜಸ್ಟೀಸ್’, ಸಿಎಂ ಹೇಳಿಕೆಯನ್ನು ವಾಪಾಸು ಪಡೆಯಬೇಕು ಎಂದು ಭಾನುವಾರ ಕಾನೂನು ನೋಟಿಸ್ ಕಳುಹಿಸಿದೆ.

“ಮತೀಯ ಗೂಂಡಾಗಿರಿ ಸಮರ್ಥಿಸಿ ಹೇಳಿಕೆ ನೀಡುವ ಮೂಲಕ ತಾವು ತೆಗೆದುಕೊಂಡಿರುವ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದೀರಿ. ಕೋಮು ಹಿಂಸಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಹೇಳಿಕೆಗಳು ಆಘಾತಕಾರಿಯಾಗಿವೆ ಮತ್ತು ಸಾಂವಿಧಾನಿಕ ಪ್ರತಿಜ್ಞೆಯನ್ನು ಉಲ್ಲಂಘಿಸಿವೆ. ಹಾಗಾಗಿ ಹೇಳಿಕೆಯನ್ನು ಹಿಂಪಡೆಯಿರಿ” ಎಂದು ನೋಟಿಸ್‌ನಲ್ಲಿ ಅದು ಉಲ್ಲೇಖಿಸಿತ್ತು.

ಇದನ್ನೂ ಓದಿ: ಮತೀಯ ಗೂಂಡಾಗಿರಿ ಸಮರ್ಥನೆ ಹೇಳಿಕೆ ಹಿಂಪಡೆಯಿರಿ: ಸಿಎಂ ಬೊಮ್ಮಾಯಿಗೆ ನೋಟೀಸ್

LEAVE A REPLY

Please enter your comment!
Please enter your name here